ಯೆಹೋವನು ಬಲವನ್ನು ನೀಡುತ್ತಾನೆ
1 ಅಪೊಸ್ತಲ ಪೌಲನ ಕುರಿತು ನಿಮ್ಮ ಅಭಿಪ್ರಾಯವೇನಾಗಿದೆ? ಅಪೊಸ್ತಲ ಕೃತ್ಯಗಳ ಪುಸ್ತಕವನ್ನು ಓದುವಾಗ, ಯೆಹೋವನ ಸೇವೆಯಲ್ಲಿ ಅವನು ಮಾಡಿದ ದುಡಿಮೆಯನ್ನು ನಾವು ಗಣ್ಯಮಾಡುತ್ತೇವೆ. ಇದೆಲ್ಲವನ್ನು ಪೌಲನು ಹೇಗೆ ಮಾಡಿದನು? ಅವನು ಹೇಳಿದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿ. 4:13) ಯೆಹೋವನು ಒದಗಿಸುವ ಬಲದಿಂದ ನಾವೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹೇಗೆ? ನಾವು ನವಚೈತನ್ಯವನ್ನು ಪಡೆದುಕೊಳ್ಳಲು ಹಾಗೂ ಆತ್ಮಿಕವಾಗಿ ಬಲಗೊಳಿಸಲ್ಪಡಲು ಆತನು ನೀಡುವ ಆರು ಒದಗಿಸುವಿಕೆಗಳ ಪ್ರಯೋಜನವನ್ನು ತೆಗೆದುಕೊಳ್ಳುವುದರ ಮೂಲಕವೇ.
2 ದೇವರ ವಾಕ್ಯ: ನಮ್ಮ ಶಾರೀರಿಕ ಶಕ್ತಿಯನ್ನು ಕಾಪಾಡಿಕೊಂಡುಹೋಗಲು ನಾವು ಹೇಗೆ ಆಹಾರವನ್ನು ಸೇವಿಸಬೇಕೋ ಹಾಗೆಯೇ ಆತ್ಮಿಕವಾಗಿ ಜೀವಂತರಾಗಿ ಉಳಿಯಲು ಸಹ ನಾವು ನಮ್ಮನ್ನು ದೇವರ ವಾಕ್ಯದಿಂದ ಪೋಷಿಸಿಕೊಳ್ಳಬೇಕು. (ಮತ್ತಾ. 4:4) ನಮ್ಮನ್ನು ಪೋಷಿಸಲು ಬೇಕಾದ ಬಲವನ್ನು ಬೈಬಲು ಒದಗಿಸುತ್ತದೆ. ಸತ್ಯಕ್ಕಾಗಿರುವ ನಮ್ಮ ಹುರುಪು ಹಾಗೂ ಉತ್ಸಾಹವನ್ನು ಕಾಪಾಡಿಕೊಂಡುಹೋಗಲು, ಸಾಧ್ಯವಿರುವಲ್ಲಿ ಪ್ರತಿದಿನ, ಅರ್ಥಭರಿತ ವೈಯಕ್ತಿಕ ಅಧ್ಯಯನ ಹಾಗೂ ಮನನಮಾಡುವುದು ಆವಶ್ಯಕವಾಗಿದೆ.—ಕೀರ್ತ. 1:2, 3.
3 ಪ್ರಾರ್ಥನೆ: ಯೆಹೋವನ ಹತ್ತಿರಕ್ಕೆ ಬರುವುದು ಪ್ರಾಮುಖ್ಯವಾದದ್ದಾಗಿದೆ. ಅದರಲ್ಲೂ ವಿಶೇಷವಾದ ಸಹಾಯವು ಅಗತ್ಯವಿರುವ ಸಮಯದಲ್ಲಿ ಇದು ಇನ್ನೂ ಅತ್ಯಾವಶ್ಯಕವಾಗಿದೆ. ಪ್ರಾರ್ಥನೆಯ ಮೂಲಕ ತನಗೆ ಬೇಡಿಕೊಳ್ಳುವವರೆಲ್ಲರಿಗೂ ಆತನು ತನ್ನ ಪವಿತ್ರಾತ್ಮದ ಮೂಲಕವಾಗಿ ಶಕ್ತಿತುಂಬಿಸುವ ಬಲವನ್ನು ಒದಗಿಸುತ್ತಾನೆ. (ಲೂಕ 11:13; ಎಫೆ. 3:16) “ಪ್ರಾರ್ಥನೆಯಲ್ಲಿ ಪಟ್ಟುಹಿಡಿಯಿರಿ” ಎಂದು ಬೈಬಲ್ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ರೋಮಾ. 12:12, NW) ನೀವು ಹಾಗೆಯೇ ಮಾಡುತ್ತೀರೋ?
4 ಸಭೆ: ಸಭೆಯಲ್ಲಿ ನಡೆಯುವ ಕೂಟಗಳ ಮೂಲಕವಾಗಿ ಮತ್ತು ಅಲ್ಲಿ ನಮ್ಮ ಸಹೋದರ ಸಹೋದರಿಯರೊಂದಿಗೆ ಅನುಭವಿಸುವ ಪ್ರೀತಿಯ ಸಹವಾಸದಿಂದಲೂ ನಾವು ಶಕ್ತಿ ಮತ್ತು ಪ್ರೋತ್ಸಾಹನೆಯನ್ನು ಪಡೆದುಕೊಳ್ಳಬಹುದು. (ಇಬ್ರಿ. 10:24, 25) ನಾವು ಕಳವಳಗೊಂಡಿರುವಾಗ ಇವು ನಮ್ಮನ್ನು ಉತ್ತೇಜಿಸುತ್ತವೆ ಹಾಗೂ ಪ್ರೀತಿಯಿಂದ ನಮ್ಮನ್ನು ಬೆಂಬಲಿಸುತ್ತವೆ.—ಜ್ಞಾನೋ. 17:17; ಪ್ರಸಂ. 4:10.
5 ಕ್ಷೇತ್ರ ಸೇವೆ: ಸೇವೆಯಲ್ಲಿ ನಾವು ಕ್ರಮವಾಗಿ ಪಾಲ್ಗೊಳ್ಳುವುದರ ಮೂಲಕವಾಗಿ ರಾಜ್ಯ ಹಾಗೂ ಅದರ ಆಶೀರ್ವಾದಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದು. ಬೇರೆಯವರು ಯೆಹೋವನ ಕುರಿತು ಕಲಿಯಲು ಸಹಾಯ ಮಾಡುವಾಗ ನಮ್ಮಲ್ಲಿ ಚೈತನ್ಯತುಂಬುತ್ತದೆ. (ಅ. ಕೃ. 20:35) ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಆ ಸ್ಥಳಗಳಲ್ಲಿ ಪೂರ್ಣ ಸಮಯದ ಸೇವಕರಾಗಿ ಸೇವೆ ಮಾಡಲು ನಮ್ಮೆಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದರೂ ನಾವು ನಮ್ಮ ಶುಶ್ರೂಷೆಯ ಬೇರೆ ವಿಧಾನಗಳಲ್ಲಿ ಒಂದು ಅರ್ಥಭರಿತವಾದ ಭಾಗವನ್ನು ವಹಿಸಬಹುದು.—ಇಬ್ರಿ. 6:10-12.
6 ಕ್ರೈಸ್ತ ಮೇಲ್ವಿಚಾರಕರು: ಹಿರಿಯರು ಕೊಡುವ ಉತ್ತೇಜನ ಹಾಗೂ ನೆರವಿನಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ. ತಮ್ಮ ಆರೈಕೆಯಲ್ಲಿ ಒಪ್ಪಿಸಲ್ಪಟ್ಟಿರುವ ದೇವರ ಮಂದೆಯನ್ನು ಕಾಯಲಿಕ್ಕಾಗಿ ಯೆಹೋವನು ಅವರನ್ನು ನೇಮಿಸಿದ್ದಾನೆ. (1 ಪೇತ್ರ 5:2) ಪೌಲನು ತನ್ನ ದಿನಗಳಲ್ಲಿ ಮಾಡಿದಂತೆಯೇ ಇಂದು ಸಂಚರಣ ಮೇಲ್ವಿಚಾರಕರು ತಾವು ಸೇವೆಸಲ್ಲಿಸುತ್ತಿರುವ ಸಭೆಗಳನ್ನು ಹುರಿದುಂಬಿಸುತ್ತಾರೆ.—ರೋಮಾ. 1:11, 12.
7 ನಂಬಿಗಸ್ತರ ಮಾದರಿಗಳು: ಪ್ರಾಚೀನ ಹಾಗೂ ಆಧುನಿಕ ನಂಬಿಗಸ್ತ ಜೊತೆಕೆಲಸಗಾರರ ಸಕಾರಾತ್ಮಕ ಮಾದರಿಗಳು ನಮ್ಮನ್ನು ಪುನರ್ಚೇತನಗೊಳಿಸುತ್ತವೆ. (ಇಬ್ರಿ. 12:1) ನಿಮಗೆ ನವಚೈತನ್ಯದ ಅಗತ್ಯವಿರುವಾಗ, ನಮ್ಮ ಪತ್ರಿಕೆಗಳಲ್ಲಿ ಕಂಡುಬರುವ ಹುರಿದುಂಬಿಸುವ ಒಂದು ಜೀವನ ಕಥೆಯನ್ನೋ, ವರ್ಷ ಪುಸ್ತಕದಲ್ಲಿರುವ (ಇಂಗ್ಲಿಷ್) ನಂಬಿಕೆಯನ್ನು ಕಟ್ಟುವಂಥ ಒಂದು ವರದಿಯನ್ನೋ ಅಥವಾ ಘೋಷಕರು (ಇಂಗ್ಲಿಷ್) ಪುಸ್ತಕದಲ್ಲಿರುವ ಯೆಹೋವನ ಸಾಕ್ಷಿಗಳ ಆಧುನಿಕದಿನದ ಇತಿಹಾಸದ ಉದ್ರೇಕಕಾರಿ ವೃತ್ತಾಂತಗಳನ್ನು ಯಾಕೆ ಓದಿ ನೋಡಬಾರದು?
8 ಈಗ 90ರ ಪ್ರಾಯದಲ್ಲಿರುವ ಒಬ್ಬ ಸಹೋದರರು, ಬಾಲಕರಾಗಿದ್ದಾಗಲೇ ಸತ್ಯವನ್ನು ಸ್ವೀಕರಿಸಿದರು. ಅವರು ಯುವಕರಾಗಿದ್ದಾಗಲೇ ಅವರ ನಂಬಿಕೆ ಶೋಧನೆಗೊಳಗಾಯಿತು. ಮೊದಲನೆಯದಾಗಿ, ಸಭೆಯಲ್ಲಿ ಸಕ್ರಿಯ ಸದಸ್ಯರಾಗಿದ್ದ ಕೆಲವರು ಯೆಹೋವನ ಸಂಸ್ಥೆಯನ್ನು ಬಿಟ್ಟುಹೋದರು. ಎರಡನೆಯದಾಗಿ, ಈ ಸಹೋದರರಿಗೆ ಮನೆಯಿಂದ ಮನೆಯ ಸಾಕ್ಷಿಕಾರ್ಯವನ್ನು ಮಾಡುವುದು ತುಂಬ ಕಷ್ಟಕರವಾಗಿತ್ತು. ಹಾಗಿದ್ದರೂ, ಅವರು ಯಾವಾಗಲೂ ಯೆಹೋವನ ಮೇಲೆ ಆತುಕೊಂಡಿದ್ದರು. ಸ್ವಲ್ಪಸಮಯದೊಳಗೆ ಅವರು ಸೇವೆಯಲ್ಲಿ ಸಂತೋಷದಿಂದ ಭಾಗವಹಿಸಲಾರಂಭಿಸಿದರು. ಮತ್ತು ಇಂದು ಅವರ ಆರೋಗ್ಯವು ಹದಗೆಡುತ್ತಾ ಇದ್ದರೂ, ಅವರು ಈಗಲೂ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿದ್ದು ಬ್ರೂಕ್ಲಿನ್ ಬೆತೆಲ್ ಕುಟುಂಬದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಯೆಹೋವನ ಸಂಸ್ಥೆಗೆ ಅಂಟಿಕೊಂಡು ಇದ್ದದ್ದಕ್ಕಾಗಿ ಅವರಿಗೆ ಸ್ವಲ್ಪವೂ ವಿಷಾದವಿಲ್ಲ.
9 ಬ್ರಿಟನ್ ಬೆತೆಲ್ ಕುಟುಂಬದ ಸದಸ್ಯರಾಗಿರುವ ಒಬ್ಬ ಸಹೋದರಿಯು, 13 ವರ್ಷ ಪ್ರಾಯದವರಾಗಿದ್ದಾಗ ದೀಕ್ಷಾಸ್ನಾನ ಪಡೆದುಕೊಂಡರು. ಮುಂದಿನ ವರ್ಷ ತನ್ನ ಅಣ್ಣನೊಂದಿಗೆ ಅವರು ಪಯನೀಯರ್ ಸೇವೆಯನ್ನು ಪ್ರಾರಂಭಿಸಿದರು. ಮರುವರ್ಷ, ಈ ಸಹೋದರಿಯ ತಂದೆ ಎರಡನೆಯ ಲೋಕ ಯುದ್ಧದಲ್ಲಿ ತಾಟಸ್ಥ್ಯವನ್ನು ಕಾಪಾಡಿಕೊಂಡಿದ್ದ ಕಾರಣ ಸೆರೆಯಲ್ಲಿ ಹಾಕಲ್ಪಟ್ಟರು. ಆದರೂ, ಈ ಸಹೋದರಿ ಬಲಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳುತ್ತಾ, ನಿಜ ದೇವರ ಸೇವೆಮಾಡುವುದನ್ನು ಮುಂದುವರಿಸಿದರು. ಸಮಯಾನಂತರ ಅವರು ಒಬ್ಬ ನಂಬಿಗಸ್ತ ಸಹೋದರರನ್ನು ಮದುವೆಮಾಡಿಕೊಂಡರು. ನಂತರ ಇಬ್ಬರೂ ಸೇರಿ ಯೆಹೋವನ ಚಿತ್ತವನ್ನು ಮಾಡುತ್ತಾ ಬಂದರು. 35 ವರ್ಷಗಳ ವರೆಗೆ ದಾಂಪತ್ಯ ಜೀವನವನ್ನು ನಡೆಸಿದ ನಂತರ ಅವರ ಗಂಡ ಒಮ್ಮಿಂದೊಮ್ಮೆಲೇ ಸತ್ತುಹೋದರು. ಆ ಸಮಯದಲ್ಲೂ ಅವರು ಯೆಹೋವನಿಂದ ಬಲವನ್ನು ಪಡೆದುಕೊಂಡರು. ಮತ್ತು ಇಂದಿನ ತನಕ ಅವರು ಯೆಹೋವನ ಸೇವೆಯಲ್ಲಿ ಮುಂದುವರಿಯುತ್ತಾ, ಆತನ ಭೌತಿಕ ಕುಟುಂಬದ ಒಬ್ಬ ಸದಸ್ಯರೋಪಾದಿ ಸದಾಕಾಲಕ್ಕೂ ಸೇವೆಸಲ್ಲಿಸಲು ಮುನ್ನೋಡುತ್ತಿದ್ದಾರೆ.
10 ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಬೆಂಬಲಿಸುತ್ತಾನೆ ಮತ್ತು ಚೈತನ್ಯಗೊಳಿಸುತ್ತಾನೆ. ಆತನು “ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ.” ಈ ಮೂಲದಿಂದ ಬರುವ ಅಪರಿಮಿತ ಬಲವನ್ನು ನಾವು, ಈ ಮೇಲೆ ತಿಳಿಸಲ್ಪಟ್ಟಿರುವ ಎಲ್ಲ ಆರು ಒದಗಿಸುವಿಕೆಗಳ ಪ್ರಯೋಜನವನ್ನು ತೆಗೆದುಕೊಳ್ಳುವ ಮೂಲಕ ಪಡೆದುಕೊಳ್ಳಬಹುದು. ಜ್ಞಾಪಕದಲ್ಲಿಟ್ಟುಕೊಳ್ಳಿ: “ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು. . . . ಓಡಿ ದಣಿಯರು, ನಡೆದು ಬಳಲರು.” (ಯೆಶಾ. 40:29-31) ಪೌಲನು ಬಲಕ್ಕಾಗಿ ಸಂಪೂರ್ಣವಾಗಿ ಯೆಹೋವನ ಮೇಲೆ ಆತುಕೊಂಡಿದ್ದನು. ನಾವೂ ಹಾಗೆಯೇ ಮಾಡಬೇಕು.