ನಾವೆಲ್ಲರೂ ಯೆಹೋವನನ್ನು ಮತ್ತು ಆತನ ಮಗನನ್ನು ಸನ್ಮಾನಿಸೋಣ
ಏಪ್ರಿಲ್ 8ರಂದು ಜ್ಞಾಪಕಾಚರಣೆಗೆ ಹಾಜರಾಗುವವರೆಲ್ಲರೂ ಹೇಗೆ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು?
1 ಇಂದು ಯಾರಿಗೆ ವಿಶೇಷ ಸನ್ಮಾನ ಕೊಡಲಾಗುತ್ತದೆ? ಯಾರ ಸಾಧನೆಗಳನ್ನು ಲೋಕವು ದೊಡ್ಡದ್ದೆಂದು ಪರಿಗಣಿಸುತ್ತದೊ ಅಂಥವರಿಗೆ. ಹೆಚ್ಚಿನ ಸಂದರ್ಭಗಳಲ್ಲಾದರೊ, ಅವರ ಕೆಲಸಗಳು ಬೇಗನೆ ಮರೆಯಲ್ಪಡುತ್ತವೆ. ಆದರೆ ಇಡೀ ಮಾನವಕುಲಕ್ಕೆ ನಿಜವಾಗಿಯೂ ಪ್ರಯೋಜನಕಾರಿಯಾಗಿರುವ ಕೆಲಸಗಳ ಬಗ್ಗೆ ಏನು? 2001, ಏಪ್ರಿಲ್ 8ರಂದು ಸೂರ್ಯಾಸ್ತಮಾನದ ನಂತರ ನಾವು ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವಾಗ, ನಾವು ಈ ಕೆಲಸಗಳಲ್ಲಿ ಅತಿ ಶ್ರೇಷ್ಠವಾದ ಕೆಲಸಕ್ಕೆ ನಮ್ಮ ಏಕಾಗ್ರ ಗಮನವನ್ನು ಕೊಡುವೆವು.
2 ಅತಿ ಹೆಚ್ಚಿನ ಸನ್ಮಾನಕ್ಕೆ ಯಾರು ಅರ್ಹರಾಗಿದ್ದಾರೆ? ಬೈಬಲ್ ಉತ್ತರಿಸುವುದು: “ಕರ್ತನೇ (“ಯೆಹೋವನೇ,” NW), . . ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ.” (ಪ್ರಕ. 4:11) ಸೃಷ್ಟಿಕರ್ತನೋಪಾದಿ, ಯೆಹೋವನು ವಿಶ್ವದ ಪರಮಾಧಿಕಾರಿ ಪ್ರಭುವಾಗಿದ್ದಾನೆ. ಸನ್ಮಾನಿಸಲ್ಪಡಲಿಕ್ಕಾಗಿರುವ ಆತನ ಅರ್ಹತೆಯು ಎಂದಿಗೂ ಕುಗ್ಗುವುದಿಲ್ಲ!—1 ತಿಮೊ. 1:17.
3 ದೇವರ ಮಗನಾದ ಯೇಸು ಕ್ರಿಸ್ತನು ಮಾನವಕುಲಕ್ಕೆ ನಿತ್ಯ ಆಶೀರ್ವಾದಗಳನ್ನು ತರುವ ಯೋಗ್ಯ ಕೆಲಸಗಳನ್ನು ಮಾಡಿದನು. ಅವನು ತನ್ನ ತಂದೆಯನ್ನು ಪರಿಪೂರ್ಣವಾಗಿ ಅನುಸರಿಸಿದನು. (ಯೋಹಾ. 5:19) ಅವನ ಕುಂದಿಲ್ಲದ ವಿಧೇಯತೆ ಹಾಗೂ ನಂಬಿಗಸ್ತ ಸೇವೆ ಅವನನ್ನು “ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನ ಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯ”ನನ್ನಾಗಿ ಮಾಡಿತು. (ಪ್ರಕ. 5:12) ರಾಜನೋಪಾದಿ ಸಿಂಹಾಸನಾರೂಢನನ್ನಾಗಿ ಮಾಡುವ ಮೂಲಕ ಅವನ ತಂದೆ ಅವನನ್ನು ಸನ್ಮಾನಿಸಿದನು. (ಕೀರ್ತ. 2:6-8) ನಮಗಾದರೋ 2001, ಏಪ್ರಿಲ್ 8ರಂದು ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವುದರ ಮೂಲಕ ತಂದೆ ಮತ್ತು ಮಗ ಇಬ್ಬರನ್ನೂ ಸನ್ಮಾನಿಸುವ ಅವಕಾಶವಿದೆ.
4 ವಿಷಾದನೀಯ ಸಂಗತಿಯೇನೆಂದರೆ, ಯೆಹೋವನಿಗೆ ಮತ್ತು ಆತನ ಮಗನಿಗೆ ಸಲ್ಲತಕ್ಕ ಸನ್ಮಾನವನ್ನು ಇತಿಹಾಸದಲ್ಲಿ ತೀರ ಕೆಲವೇ ಜನರು ಸಲ್ಲಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ, ದೇವರ ಪ್ರಾಚೀನ ಜನರಾದ ಇಸ್ರಾಯೇಲ್ಯರು ಕೂಡ, ಯೆಹೋವನಿಗೆ ನಾಮಮಾತ್ರದ ಸೇವೆಯನ್ನು ಸಲ್ಲಿಸಿದ್ದಾರೆ. ಇದು ತುಂಬ ಅವಮರ್ಯಾದೆಯನ್ನು ವ್ಯಕ್ತಪಡಿಸಿತು. (ಮಲಾ. 1:6) ಯೆಹೋವನು ಮತ್ತು ಆತನ ಮಗನು ನಮಗಾಗಿ ಮಾಡಿರುವ ಎಲ್ಲಾ ವಿಷಯಗಳಿಗಾಗಿ, ಪ್ರೀತಿ ಹಾಗೂ ಗಣ್ಯತೆಯ ಮೇಲಾಧಾರಿಸಿದ ನಂಬಿಗಸ್ತಿಕೆಯ ವಿಧೇಯತೆಯನ್ನು ಯೋಗ್ಯ ಗೌರವ ಕೇಳಿಕೊಳ್ಳುತ್ತದೆ. ಅಂಥ ಮಾನ ಹಾಗೂ ಗೌರವವನ್ನು ಕೊಡುವುದರ ಅರ್ಥ, ದೈವಿಕ ಭಯ ಹಾಗೂ ಭಕ್ತಿಯನ್ನು ತೋರಿಸುತ್ತಾ ನಮ್ಮ ಎಲ್ಲಾ ಮಾರ್ಗಗಳಲ್ಲಿ ಯೆಹೋವ ಮತ್ತು ಯೇಸುವನ್ನು ಅಂಗೀಕರಿಸುವುದಾಗಿದೆ. ಅದನ್ನೇ ಮಾಡುವಂತೆ ಕ್ರೈಸ್ತ ಸಭೆಯು ಇತರರಿಗೆ ಕಲಿಸಲು ಮತ್ತು ಸಹಾಯಮಾಡಲು ಪ್ರಯತ್ನಿಸುತ್ತದೆ.
5 ಸನ್ಮಾನವನ್ನು ತೋರಿಸಲು ಒಂದು ವಿಶೇಷ ಸಂದರ್ಭ: ಪ್ರತಿ ವರ್ಷ ಜ್ಞಾಪಕಾಚರಣೆಯು ಯೆಹೋವನ ಜನರ ನಡುವೆ ನಡೆಯುವ ಅತಿ ಮಹತ್ವಪೂರ್ಣ ಕೂಟವಾಗಿದೆ. ಯೆಹೋವನನ್ನು ಸೇವಿಸಿ ಸನ್ಮಾನಿಸಲು ಇಚ್ಛಿಸುವ ಎಲ್ಲರೂ ಹಾಜರಿರಲೇಬೇಕು. (ಲೂಕ 22:19) ಅರುವತ್ತು ಲಕ್ಷ ಕ್ರಿಯಾಶೀಲ ಸಾಕ್ಷಿಗಳಲ್ಲದೆ, ಆಸಕ್ತ ವ್ಯಕ್ತಿಗಳು ಸೇರಿ 1 ಕೋಟಿ 14 ಲಕ್ಷಕ್ಕಿಂತಲೂ ಹೆಚ್ಚಿನ ಹಾಜರಿಯನ್ನು ನಾವು ನಿರೀಕ್ಷಿಸುತ್ತೇವೆ. ನಮ್ಮ ಸ್ವರ್ಗೀಯ ತಂದೆಯನ್ನು ಸನ್ಮಾನಿಸಲು ಎಂಥ ಒಂದು ಒಳ್ಳೇ ಅವಕಾಶ! ಈ ಆಚರಣೆಯು ಯೇಸುವಿನ ಮೇಲೆ ಕೇಂದ್ರೀಕರಿಸುವುದಾದರೂ, ಆತನ ಸಾಧನೆಗೆ ತೋರಿಸಲಾಗುವ ಸನ್ಮಾನ ಹಾಗೂ ಗೌರವ, ಅವನನ್ನು ಕಳುಹಿಸಿದ ತಂದೆಗೆ ಮಹಿಮೆಯನ್ನು ತರುತ್ತದೆ.—ಯೋಹಾ. 5:23.
6 ಈ ವಿಶೇಷ ಸಂದರ್ಭವನ್ನು ಬೆಂಬಲಿಸಲು ನಾವೇನು ಮಾಡಬಹುದು? ಹೊಸ ಆಸಕ್ತ ವ್ಯಕ್ತಿಗಳು ಪೂರ್ಣ ಪ್ರಯೋಜನವನ್ನು ಹೊಂದುವಂತೆ ನಾವು ಸಹಾಯಮಾಡಬಹುದು. ಅವರು ಹಾಜರಾಗುವಂತೆ ಪ್ರಚೋದಿಸಿರಿ ಮತ್ತು ಅವಶ್ಯವಿದ್ದಲ್ಲಿ, ಅವರು ಆ ಸ್ಥಳಕ್ಕೆ ಬಂದು ತಲಪಲು ದಯಾಪರ ಸಹಾಯವನ್ನು ಒದಗಿಸಿರಿ. ಅಲ್ಲಿ ನೀಡಲ್ಪಡುವ ಭಾಷಣದ ಉದ್ದೇಶವನ್ನು ವಿವರಿಸಿರಿ. ಅವರನ್ನು ಇತರರಿಗೆ ಪರಿಚಯಿಸಿರಿ. ಅವರು ನೋಡಿ ಕೇಳುವಂಥ ಸಂಗತಿಗಳು, ಅವರು ನಮ್ಮೊಟ್ಟಿಗೆ ಒಂದಾಗಿ ಯೆಹೋವನನ್ನು ಸನ್ಮಾನಿಸುವಂತೆ ಅವರನ್ನು ಪ್ರೇರೇಪಿಸಬಹುದು.
7 ಈ ಕಾರ್ಯಕ್ರಮವು ಬೀರಬಹುದಾದ ಪ್ರಭಾವವನ್ನು ಕಡಿಮೆ ಅಂದಾಜುಮಾಡಬೇಡಿರಿ. ಒಬ್ಬ ವಿಶ್ವವಿದ್ಯಾಲಯದ ವಿದ್ಯಾರ್ಥಿಯು ಹೀಗೆ ಪ್ರತಿಕ್ರಿಯಿಸಿದನು: “ನಾನು ಅನೇಕಬಾರಿ ನನ್ನ ಚರ್ಚ್ನಲ್ಲಿ ಪ್ರಭುಭೋಜನದ ಸಂಸ್ಕಾರವನ್ನು ಹಾಜರಾಗಿದ್ದೇನೆ, ಆದರೆ ಇದು ಪೂರ್ತಿಯಾಗಿ ಭಿನ್ನವಾಗಿದೆ. ಇದು ಬೈಬಲ್ ಹೇಳುವಂತೆಯೆ ಇರುವುದನ್ನು ನಾನು ನೋಡಬಲ್ಲೆ, ಮತ್ತು ನಿಮ್ಮ ಬಳಿ ಸತ್ಯವಿದೆ ಎಂದು ನಾನು ನೆನಸುತ್ತೇನೆ.” ಆತನು ಕೂಟಗಳಿಗೆ ಕ್ರಮವಾಗಿ ಹಾಜರಾಗಲಾರಂಭಿಸಿದನು ಮತ್ತು ಬೇಗನೆ ದೀಕ್ಷಾಸ್ನಾನವನ್ನು ಪಡೆದುಕೊಂಡನು.
8 ಹೊಸಬರು ಪ್ರಗತಿಮಾಡುವಂತೆ ಸಹಾಯಮಾಡಿರಿ: ಜ್ಞಾಪಕಾಚರಣೆಗೆ ಹಾಜರಾದ ಹೊಸಬರು ಯಾರೆಂಬುದನ್ನು ಗಮನಿಸಿ, ಅದು ಮುಗಿದ ನಂತರ ಆದಷ್ಟು ಬೇಗನೆ ಅವರನ್ನು ಭೇಟಿಮಾಡಿ, ಅವರು ಕಲಿತು ಗಮನಿಸಿದಂಥ ಹೊಸ ವಿಷಯಗಳನ್ನು ಪುನರ್ವಿಮರ್ಶಿಸಿ. ಅವರ ಬೈಬಲ್ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯಮಾಡುವ ಇತರ ಕೂಟಗಳ ಬಗ್ಗೆ ಅವರಿಗೆ ತಿಳಿಸಿರಿ. “ದೇವಜನರ ಮಧ್ಯೆ ಭದ್ರತೆಯನ್ನು ಕಂಡುಕೊಳ್ಳಿರಿ,” ಎಂಬ ಜ್ಞಾನ ಪುಸ್ತಕದ 17ನೇ ಅಧ್ಯಾಯವನ್ನು ಪುನರ್ವಿಮರ್ಶಿಸುವಲ್ಲಿ, ಸಭೆಯಿಂದ ಸಿದ್ಧವಾಗಿ ಲಭ್ಯವಿರುವ ವಿಭಿನ್ನ ಆತ್ಮಿಕ ಒದಗಿಸುವಿಕೆಗಳ ಬಗ್ಗೆ ಅದು ಅವರಿಗೆ ತಿಳಿಸುವುದು. ಯೆಹೋವನ ಜನರ ಐಕ್ಯತೆ, ಆನಂದ ಹಾಗೂ ಹುರುಪನ್ನು ಕಣ್ಣಾರೆ ನೋಡುವಂತೆ ನಮ್ಮ ಸಹೋದರರ ಇಡೀ ಬಳಗ (ಇಂಗ್ಲಿಷ್) ಎಂಬ ವಿಡಿಯೋವನ್ನು ಅವರು ವೀಕ್ಷಿಸುವಂತೆ ಏರ್ಪಾಡು ಮಾಡಿರಿ.
9 ಆಸಕ್ತ ವ್ಯಕ್ತಿಗಳು ವೈಯಕ್ತಿಕವಾಗಿ ಹೇಗೆ ಯೆಹೋವನಿಗೆ ಮಾನ ಹಾಗೂ ಗೌರವವನ್ನು ತೋರಿಸಬಹುದೆಂಬುದನ್ನು ಕಲಿಯುವುದು ಪ್ರಾಮುಖ್ಯವಾಗಿದೆ. ಹೃತ್ಪೂರ್ವಕವಾದ ಪ್ರಾರ್ಥನೆಯನ್ನು ಯೆಹೋವನು ಮೆಚ್ಚುತ್ತಾನೆ ಹಾಗೂ ಸತತವಾದ ಆತ್ಮಿಕ ಚೈತನ್ಯದ ಮೂಲವಾಗಿದೆ ಎಂಬುದನ್ನು ವಿವರಿಸಿರಿ. (1 ಯೋಹಾ. 5:14) ಅಪೇಕ್ಷಿಸು ಬ್ರೋಷರಿನ 8ರಿಂದ 12ನೆಯ ಪಾಠಗಳನ್ನು ಉಪಯೋಗಿಸಿ, ಎಂಥ ರೀತಿಯ ನಡತೆಯು ಯೆಹೋವನನ್ನು ಸನ್ಮಾನಿಸುತ್ತದೆ ಎಂಬುದನ್ನು ವಿವರಿಸಿ. ಯೆಹೋವನ ಸಾಕ್ಷಿಗಳು ಎಂಬ ಬ್ರೋಷರಿನ ಪುಟ 30-1ರಲ್ಲಿರುವ ವಿಷಯವನ್ನು ಚರ್ಚಿಸುವುದರ ಮೂಲಕ, ಹೊಸಬರು ವೈಯಕ್ತಿಕವಾಗಿ ಸಾರುವ ಕೆಲಸದಲ್ಲಿ ಭಾಗವಹಿಸಿ ಯೆಹೋವನನ್ನು ಸನ್ಮಾನಿಸುವ ಸಾಧ್ಯತೆಯ ಬಗ್ಗೆ ಯೋಚಿಸುವಂತೆ ಅವರನ್ನು ಉತ್ತೇಜಿಸಿರಿ.
10 ಯೇಸುವಿನ ಯಜ್ಞಕ್ಕಾಗಿ ಮತ್ತು ಆತನ ಶಿಷ್ಯರೋಪಾದಿ ನಮಗೆ ಕೊಡಲ್ಪಟ್ಟಿರುವ ಸುಯೋಗಕ್ಕಾಗಿ ಗಣ್ಯತೆಯನ್ನು ತೋರಿಸುವುದು, ತಂದೆಯನ್ನು ಸನ್ಮಾನಿಸುತ್ತದೆ ಮತ್ತು ಇತರರಿಗೆ ಆಶೀರ್ವಾದಗಳನ್ನು ತರುತ್ತದೆ. ಯೇಸು ವಾಗ್ದಾನಿಸಿದ್ದು: “ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ಮಾಡುವನು. (“ಘನಪಡಿಸುವನು,” NW).”—ಯೋಹಾ. 12:26.