ನಿಮ್ಮ ಟೆರಿಟೊರಿಯಲ್ಲಿ ಕಿವುಡರನ್ನು ಕಂಡುಹಿಡಿಯಲು ಎಚ್ಚರವಾಗಿರ್ರಿ
1 ಯೆಹೋವನು ಈ ಆಮಂತ್ರಣವನ್ನು ನೀಡುತ್ತಿದ್ದಾನೆ: “ಬಾ . . . ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕ. 22:17) ಈ ಕರೆಗೆ ಪ್ರತಿಕ್ರಿಯಿಸುತ್ತಿರುವವರಲ್ಲಿ ಬೆಳೆಯುತ್ತಿರುವ ಸಂಖ್ಯೆಯ ಕಿವುಡರೂ ಸೇರಿದ್ದಾರೆ. ಫಲಿತಾಂಶವಾಗಿ, ಕಳೆದ 13 ವರ್ಷಗಳಲ್ಲಿ, ಸಂಕೇತ ಭಾಷೆಯ 27 ಸಭೆಗಳು ಮತ್ತು 43 ಗುಂಪುಗಳು ಅಮೆರಿಕದ ಬ್ರಾಂಚ್ನಲ್ಲಿ ರಚಿಸಲ್ಪಟ್ಟಿವೆ.
2 ಲೋಕವ್ಯಾಪಕವಾಗಿ ಅನೇಕ ದೇಶಗಳಲ್ಲಿ, ಸಂಕೇತ ಭಾಷೆಯ ಸಭೆಗಳು ಮತ್ತು ಗುಂಪುಗಳು ತಮ್ಮ ಸಾರುವ ಎಲ್ಲಾ ಪ್ರಯತ್ನಗಳನ್ನು, ಕಿವುಡರ ಹಾಗೂ ಕೇಳಿಸಿಕೊಳ್ಳುವುದರಲ್ಲಿ ದುರ್ಬಲರಾದ ಜನರನ್ನು ತಮ್ಮ ನೇಮಿತ ಟೆರಿಟೊರಿಯಲ್ಲಿ ಸಂಪರ್ಕಿಸುವುದರಲ್ಲೇ ಕೇಂದ್ರೀಕರಿಸುತ್ತಿವೆ ಮತ್ತು ಮಹತ್ತರವಾದ ಯಶಸ್ಸನ್ನು ಪಡೆದುಕೊಳ್ಳುತ್ತಿವೆ. ಭಾರತದಲ್ಲಿ, ಇನ್ನೂ ಸಂಪರ್ಕಿಸಲ್ಪಡಬೇಕಾದ ಹಾಗೂ ಸಾಕ್ಷಿನೀಡಲ್ಪಡಬೇಕಾದ ಅನೇಕ ಕಿವುಡ ವ್ಯಕ್ತಿಗಳಿದ್ದಾರೆ. ದೇಶದಾದ್ಯಂತ ಕೇಳಿಸಿಕೊಳ್ಳುವ ದುರ್ಬಲತೆಯಿರುವ ಲಕ್ಷಾಂತರ ಜನರು ಇರುವುದರಿಂದ, ಈ ಅದ್ವಿತೀಯ ಕ್ಷೇತ್ರವನ್ನು ಬೆಳೆಸುವುದರ ಮತ್ತು ಅಭಿವೃದ್ಧಿಗೊಳಿಸುವುದರ ದೊಡ್ಡ ಸಾಧ್ಯತೆ ಖಂಡಿತವಾಗಿಯೂ ಇದೆ!
3 ನೀವು ಹೇಗೆ ಸಹಾಯಮಾಡಬಲ್ಲಿರಿ? ಸಾರ್ವಜನಿಕ ಸ್ಥಳಗಳಲ್ಲಿರುವಾಗ, ಜನರು ಸಂಕೇತ ಭಾಷೆಯನ್ನು ಉಪಯೋಗಿಸುತ್ತಿರುವುದನ್ನು ನೀವು ಗಮನಿಸಿದ್ದೀರೋ? ನೀವು ಕೆಲಸಮಾಡುವಲ್ಲಿಯೋ ಅಥವಾ ಶಾಲೆಯಲ್ಲೋ, ಕುಟುಂಬದಲ್ಲಿ ಒಬ್ಬ ಕಿವುಡ ಸದಸ್ಯನಿರುವ ವ್ಯಕ್ತಿಯ ಕುರಿತು ನಿಮಗೆ ಗೊತ್ತಿದೆಯೋ? ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಪೂರೈಸುತ್ತಿರುವಾಗ ಕಿವುಡ ವ್ಯಕ್ತಿಗಳನ್ನು ಕಂಡುಹಿಡಿಯಲು ಎಚ್ಚರವಾಗಿರ್ರಿ. ಆದರೆ ಅವರಿಗೆ ರಾಜ್ಯದ ಕುರಿತಾಗಿ ಸಾಕ್ಷಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು ನೀವು ಏನು ಮಾಡಬಲ್ಲಿರಿ?
4 ಸಾಕ್ಷಿಯನ್ನು ಕೊಡುವುದು: ಒಬ್ಬ ಪಯನೀಯರ್ ಸಹೋದರಿಯು ತನ್ನ ಟೆರಿಟೊರಿಯಲ್ಲಿದ್ದ ಹಲವಾರು ಕಿವುಡರನ್ನು ಭೇಟಿಯಾದಳು. ಒಂದು ದಿನ ತನ್ನ ನೆರೆಹೊರೆಯಲ್ಲಿದ್ದ ಸೂಪರ್ಮಾರ್ಕೆಟ್ನಲ್ಲಿ ಅವಳು ಷಾಪಿಂಗ್ ಮಾಡುತ್ತಿರುವಾಗ, ಒಂದು ಪದಾರ್ಥವನ್ನು ಕಂಡುಹಿಡಿಯಲು ತನಗೆ ಸಹಾಯಮಾಡುವಂತೆ ಕೋರುತ್ತಾ, ಯುವಪ್ರಾಯದ ಒಬ್ಬ ಕಿವುಡ ಸ್ತ್ರೀಯು ಒಂದು ವಾಕ್ಯವನ್ನು ಬರೆದು ತೋರಿಸಿದಳು. ಅದನ್ನು ಕಂಡುಹಿಡಿಯಲು ಅವಳಿಗೆ ಸಹಕರಿಸಿದ ನಂತರ, ಆ ಪಯನೀಯರಳು ತನ್ನ ಕ್ಷೇತ್ರದಲ್ಲಿದ್ದ ಕಿವುಡರಿಗೆ ಸಹಾಯಮಾಡುವುದಕ್ಕಾಗಿ ಸಂಕೇತ ಭಾಷೆಯನ್ನು ಕಲಿತುಕೊಳ್ಳಲು ತನಗಿರುವ ಆಶೆಯನ್ನು ಒಂದು ವಾಕ್ಯದಲ್ಲಿ ಬರೆದು ವ್ಯಕ್ತಪಡಿಸಿದಳು. ನಂತರ ಆ ಕಿವುಡ ಸ್ತ್ರೀ ಬರೆದು ಕೇಳಿದ್ದು, “ನೀವು ಕಿವುಡರಿಗೆ ಸಹಾಯಮಾಡಲು ಏಕೆ ಬಯಸುತ್ತೀರಿ?” ಪ್ರತ್ಯುತ್ತರವಾಗಿ ಸಹೋದರಿ ಬರೆದದ್ದು: “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದೇನೆ, ಮತ್ತು ಕಿವುಡರು ಬೈಬಲನ್ನು ಅರ್ಥಮಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡಲು ನಾನು ಬಯಸುತ್ತೇನೆ. ನೀವು ನನಗೆ ಸಂಕೇತ ಭಾಷೆಯನ್ನು ಕಲಿಸಿದರೆ, ನಾನು ನಿಮಗೆ ಬೈಬಲನ್ನು ಕಲಿಸಲು ಸಂತೋಷಿಸುವೆ.” ಆ ಸಹೋದರಿ ಹೇಳುವುದು: “ಅವಳು ‘ಆಗಲಿ’ ಎಂದು ಹೇಳಿದಾಗ ನನಗಾದ ಸಂತೋಷವನ್ನು ನೀವು ಊಹಿಸಲೂ ಸಾಧ್ಯವಿಲ್ಲ.” ಆರು ವಾರಗಳ ವರೆಗೆ ಪ್ರತಿ ಸಾಯಂಕಾಲ ಸಹೋದರಿಯು ಆ ಸ್ತ್ರೀಯ ಮನೆಗೆ ಹೋದಳು. ಅವಳು ಸಂಕೇತ ಭಾಷೆಯನ್ನು ಕಲಿತಳು, ಮತ್ತು ಆ ಕಿವುಡ ಸ್ತ್ರೀ ಸತ್ಯವನ್ನು ಕಲಿತು ದೀಕ್ಷಾಸ್ನಾನ ಪಡೆದುಕೊಂಡಳು!
5 ನಿಮ್ಮ ಸಮುದಾಯದಲ್ಲಿರುವ ಕಿವುಡ ಜನರಿಗೆ ಆತ್ಮಿಕ ನೆರವನ್ನು ನೀಡಸಾಧ್ಯವಿರುವವರು ನಿಮ್ಮ ಸಭೆಯಲ್ಲಿ ಯಾರೂ ಇಲ್ಲವಾದರೆ ಆಗೇನು? ನೀವು ಹೇಗೆ ಸಹಾಯಮಾಡಬಲ್ಲಿರಿ? ಒಂದು ಪುನರ್ಭೇಟಿಯನ್ನು ಮಾಡಿ, ಆ ಮನೆವಾರ್ತೆಯಲ್ಲಿ ಕೇಳಿಸಿಕೊಳ್ಳಲು ಶಕ್ತರಾಗಿರುವ ಸದಸ್ಯರೊಂದಿಗೆ ನೀವೇಕೆ ಮಾತಾಡಬಾರದು? ಸ್ಥಳಿಕವಾಗಿ ಅವರು ಯಾವ ಸಂಕೇತ ಭಾಷೆಯನ್ನು ಉಪಯೋಗಿಸುತ್ತಾರೆ ಎಂಬುದನ್ನು ಕಂಡುಹಿಡಿಯಿರಿ. ಕೆಲವು ಪ್ರಚಾರಕರು ಕಿವುಡರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲಪಲಿಕ್ಕಾಗಿ ಸ್ಥಳಿಕ ಸಂಕೇತ ಭಾಷೆಯನ್ನೂ ಕಲಿತಿದ್ದಾರೆ. (ಅ. ಕೃ. 16:9, 10) ಯೆಹೋವನ ಆಶೀರ್ವಾದದೊಂದಿಗೆ ಮತ್ತು ನಮ್ಮ ಮನಃಪೂರ್ವಕ ಪ್ರಯತ್ನಗಳೊಂದಿಗೆ ಅನೇಕ ಸಕಾರಾತ್ಮಕ ಪರಿಣಾಮಗಳು ಸಿಗುವವು.
6 ನಿಮ್ಮ ಕ್ಷೇತ್ರದಲ್ಲಿರುವ ಕಿವುಡ ಜನರನ್ನು ಕಂಡುಹಿಡಿಯಲು ಎಚ್ಚರವಾಗಿರುವ ಮೂಲಕ, ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳುವ ಅವಕಾಶವನ್ನು ನೀವು ಅವರಿಗೆ ಒದಗಿಸಬಲ್ಲಿರಿ.—ಮತ್ತಾ. 10:11.