ನಿಮ್ಮ ವಿದ್ಯಾರ್ಥಿಯ ಹೃದಯವನ್ನು ತಲಪಿರಿ
1 ಯೇಸು ಸ್ವರ್ಗಕ್ಕೆ ಏರಿಹೋಗುವ ಮುನ್ನ, ತಾನು ಆಜ್ಞಾಪಿಸಿದ್ದನ್ನೆಲ್ಲ “ಪಾಲಿಸಲು” ಇತರರಿಗೆ ಕಲಿಸುವಂತೆ ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 28:19, 20, NW) ಒಬ್ಬ ವ್ಯಕ್ತಿಯು ಯೇಸುವಿನ ಆಜ್ಞೆಗಳನ್ನು ‘ಪಾಲಿಸಬೇಕಾದರೆ,’ ಕೊಡಲ್ಪಡುವ ಮಾಹಿತಿಯು ಅವನ ಹೃದಯವನ್ನು ಮುಟ್ಟಬೇಕು. (ಕೀರ್ತ. 119:112) ನೀವು ಬೈಬಲನ್ನು ಅಭ್ಯಾಸಿಸುತ್ತಿರುವ ಒಬ್ಬ ವ್ಯಕ್ತಿಯ ಹೃದಯವನ್ನು ಹೇಗೆ ಪ್ರಚೋದಿಸಬಲ್ಲಿರಿ?
2 ಯೆಹೋವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿರಿ: ಶಿಷ್ಯರನ್ನು ಮಾಡುವುದು ದೇವರ ಕೆಲಸವಾಗಿದೆ. ಯಶಸ್ಸಿಗಾಗಿ, ನಮ್ಮ ಸಾಮರ್ಥ್ಯಗಳಲ್ಲ ಬದಲಾಗಿ ಆತನ ಆಶೀರ್ವಾದವು ಅತ್ಯಾವಶ್ಯಕವಾಗಿದೆ. (ಅ. ಕೃ. 16:14; 1 ಕೊರಿಂ. 3:7) ಆದುದರಿಂದ, ಇತರರಿಗೆ ಸತ್ಯವನ್ನು ಕಲಿಸುವುದರಲ್ಲಿ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸುವುದು ಆವಶ್ಯಕ.—ಯೆಶಾ. 50:4.
3 ವಿದ್ಯಾರ್ಥಿಯು ಏನನ್ನು ನಂಬುತ್ತಾನೆ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳಿ: ಜನರು ಏನನ್ನು ನಂಬುತ್ತಾರೆ ಮತ್ತು ಏಕೆ ಅದನ್ನು ನಂಬುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು, ಅವರ ಹೃದಯವನ್ನು ಮುಟ್ಟಲು ಏನನ್ನು ಹೇಳಬೇಕು ಎಂಬುದರ ಕುರಿತಾದ ಒಳನೋಟವನ್ನು ನಮಗೆ ಕೊಡುವುದು. ಒಂದು ನಿರ್ದಿಷ್ಟವಾದ ಬೋಧನೆಯು ಒಬ್ಬ ವಿದ್ಯಾರ್ಥಿಗೆ ಏಕೆ ಆಕರ್ಷಕವಾಗಿತ್ತು? ಅದು ನಂಬತಕ್ಕದ್ದಾಗಿದೆ ಎಂದು ಅವನಿಗೆ ಹೇಗೆ ಮನದಟ್ಟಾಯಿತು? ಇಂತಹ ಅರಿವು ನಾವು ವಿವೇಚನೆಯಿಂದ ಮಾತಾಡುವುದರಲ್ಲಿ ನಮಗೆ ಸಹಾಯಮಾಡುವುದು.—ಅ. ಕೃ. 17:22, 23.
4 ನ್ಯಾಯಬದ್ಧವಾದ, ಶಾಸ್ತ್ರೀಯ ತರ್ಕವನ್ನು ಬೆಳೆಸಿ: ಸತ್ಯವು ವಿದ್ಯಾರ್ಥಿಗೆ ಅರ್ಥಭರಿತವಾಗಿರಬೇಕು. (ಅ. ಕೃ. 17:24-31) ನಮ್ಮ ನಿರೀಕ್ಷೆಗೆ ನ್ಯಾಯಸಮ್ಮತವಾದ ಕಾರಣವನ್ನು ನಾವು ಕೊಡಬೇಕು. (1 ಪೇತ್ರ 3:15) ಆದರೂ, ಇದನ್ನು ಯಾವಾಗಲೂ ಕರುಣೆಯಿಂದ, ತಾಳ್ಮೆಯಿಂದ ಮಾಡಿರಿ.
5 ದೃಷ್ಟಾಂತಗಳ ಮೂಲಕ ಇದನ್ನು ಸ್ಪಷ್ಟಪಡಿಸಿರಿ: ದೃಷ್ಟಾಂತಗಳು, ವಿದ್ಯಾರ್ಥಿಯು ಅರ್ಥವನ್ನು ಗ್ರಹಿಸುವಂತೆ ಸಹಾಯಮಾಡುವುದು ಮಾತ್ರವಲ್ಲದೆ, ಅವು ಭಾವನೆಗಳನ್ನೂ ಕೆರಳಿಸುತ್ತವೆ. ಅವು ಮನಸ್ಸು ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತವೆ. ಯೇಸು ಅವುಗಳನ್ನು ಅನೇಕಾವರ್ತಿ ಉಪಯೋಗಿಸಿದನು. (ಮಾರ್ಕ 4:33, 34) ಹಾಗಿದ್ದರೂ, ದೃಷ್ಟಾಂತವು ಪರಿಣಾಮಕಾರಿಯಾಗಿರಬೇಕಾದರೆ, ಅದು ಚರ್ಚಿಸಲ್ಪಡುತ್ತಿರುವ ವಿಷಯಕ್ಕೆ ಹೊಂದಿಕೆಯಲ್ಲಿರಬೇಕು ಮತ್ತು ವಿದ್ಯಾರ್ಥಿಯ ಜೀವನಕ್ಕೆ ಅನ್ವಯಿಸುವಂಥದ್ದಾಗಿರಬೇಕು.
6 ಸತ್ಯವನ್ನು ಅಂಗೀಕರಿಸುವುದರ ಪ್ರಯೋಜನಗಳನ್ನು ತೋರಿಸಿ: ಜನರು ತಾವು ಕಲಿಯುತ್ತಿರುವ ವಿಷಯಗಳನ್ನು ಅನ್ವಯಿಸುವುದರಿಂದ ಸಿಗುವ ಪ್ರಯೋಜನಗಳ ಕುರಿತು ತಿಳಿದುಕೊಳ್ಳಲು ಬಯಸುತ್ತಾರೆ. 2 ತಿಮೊಥೆಯ 3:14-17ರಲ್ಲಿರುವ ಪೌಲನ ಮಾತುಗಳ ವಿವೇಕವನ್ನು ನಿಮ್ಮ ವಿದ್ಯಾರ್ಥಿಯು ಗ್ರಹಿಸುವಂತೆ ಸಹಾಯಮಾಡಿ.
7 ಕೆಲವರು ನಿಮ್ಮ ಬೋಧನೆಗೆ ಪ್ರತಿಕ್ರಿಯಿಸದಿದ್ದರೆ ನಿರಾಶರಾಗಬೇಡಿ. ಎಲ್ಲಾ ಹೃದಯಗಳು ನಿಮ್ಮ ಸಂದೇಶವನ್ನು ಸ್ವೀಕರಿಸುವವುಗಳಾಗಿರುವುದಿಲ್ಲ. (ಮತ್ತಾ. 13:15) ಆದರೂ, ಕೆಲವು ವ್ಯಕ್ತಿಗಳು ವಿಶ್ವಾಸಿಗಳಾಗುತ್ತಾರೆ. (ಅ. ಕೃ. 17:32-34) ಸುವಾರ್ತೆಯನ್ನು ಮನಸ್ಸಿಗೆ ನಾಟಿಸಲಿಕ್ಕಾಗಿ ನೀವು ಮಾಡುವ ಪ್ರಯತ್ನಗಳು ಇನ್ನೂ ಹೆಚ್ಚಿನವರು ಸುವಾರ್ತೆಯನ್ನು ಅಂಗೀಕರಿಸಿ, ಯೇಸು ಆಜ್ಞಾಪಿಸಿದ ವಿಷಯಗಳನ್ನು ‘ಪಾಲಿಸುವಂತೆ’ ಸಹಾಯಮಾಡಲಿ.