ಯೆಶಾಯನ ಪ್ರವಾದನೆಯ ಅಭ್ಯಾಸ ಮಾಡಲು ಸಿದ್ಧರಾಗಿರಿ!
1 “ಯೆಹೋವನು . . . ಸೈತಾನನ ಲೋಕವು ನಿಗದಿತ ಸಮಯಕ್ಕಿಂತಲೂ ಒಂದು ದಿನ ಹೆಚ್ಚು” ಉಳಿಯುವಂತೆ ಅನುಮತಿಸುವುದಿಲ್ಲ ಎಂಬುದರ “ಬಗ್ಗೆ ನಂಬಿಗಸ್ತ ಆರಾಧಕರು ಖಾತ್ರಿಯಿಂದಿರಬಲ್ಲರು.” ಎಂತಹ ಪ್ರೋತ್ಸಾಹದಾಯಕ ಹೇಳಿಕೆಯಿದು! ಇದು ಎಲ್ಲಿಂದ ಉಲ್ಲೇಖಿಸಲ್ಪಟ್ಟಿದೆ? ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I ಎಂಬ ಪುಸ್ತಕದಿಂದಲೇ. ಇಂತಹ ಹುರಿದುಂಬಿಸುವ ಮುಕ್ತಾಯಕ್ಕೆ ಬರಲು ಯೆಶಾಯನ ಪ್ರವಾದನೆಯು ನಮಗೆ ಕಾರಣವನ್ನು ನೀಡುತ್ತದೋ? ಹೌದು! ಆ ಬೈಬಲ್ ಪುಸ್ತಕದಲ್ಲಿ, ರಕ್ಷಣೆಯ ಮುಖ್ಯವಿಷಯವು ಸ್ಥಿರವಾಗಿ ಮತ್ತು ಸ್ಪಷ್ಟವಾಗಿ ಒತ್ತಿಹೇಳಲ್ಪಟ್ಟಿದೆ. (ಯೆಶಾ. 25:9) ಆದುದರಿಂದಲೇ, ಸಭಾ ಪುಸ್ತಕ ಅಭ್ಯಾಸದಲ್ಲಿ ದೇವರ ವಾಕ್ಯದ ಈ ಭಾಗವನ್ನು ಅಭ್ಯಾಸಿಸುವುದು ಹೆಚ್ಚು ಪ್ರೋತ್ಸಾಹದಾಯಕವಾಗಿರುವುದು. ಇದರಲ್ಲಿ ಆನಂದಿಸಲು ನಾವು ಪ್ರತಿ ವಾರ ಹಾಜರಿರುವೆವೋ? ನಾವೇಕೆ ಹಾಜರಿರಬೇಕು?
2 ಯೆಶಾಯ 30:20ರಲ್ಲಿ (NW), ಯೆಹೋವನು ನಮ್ಮ “ಮಹಾನ್ ಉಪದೇಶಕ”ನೆಂದು ಕರೆಯಲ್ಪಟ್ಟಿದ್ದಾನೆ. ತನ್ನ ವಾಕ್ಯದ ಪುಟಗಳ ಮೂಲಕ ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಬೈಬಲ್ ಆಧಾರಿತ ಪ್ರಕಾಶನಗಳ ಮೂಲಕ ಯೆಹೋವನು ನಮಗೆ ಉಪದೇಶಿಸುವಾಗ, ಪ್ರತಿಯೊಬ್ಬ ಕ್ರೈಸ್ತನು ಜಾಗರೂಕತೆಯಿಂದ ಕಿವಿಗೊಡಬೇಕು. (ಮತ್ತಾ. 24:45; ಯೆಶಾ. 48:17, 18) ಯೆಶಾಯನ ಪ್ರವಾದನೆ I ಎಂಬ ಪುಸ್ತಕದ ವಿಷಯದಲ್ಲಿ ಇದು ಖಂಡಿತವಾಗಿಯೂ ಸತ್ಯವಾಗಿದೆ. ಇದನ್ನು ಅಭ್ಯಾಸಿಸುವಾಗ ನೀವು ಅತ್ಯಧಿಕವಾದ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಲ್ಲಿರಿ?
3 ಭಾಗವಹಿಸಲು ಮುಂಚಿತವಾಗಿಯೇ ತಯಾರಿಸಿರಿ: ಪುಸ್ತಕ ಅಭ್ಯಾಸಕ್ಕಾಗಿ ತಯಾರಿಸಲು ಪ್ರತಿ ವಾರ ಸಾಕಷ್ಟು ಸಮಯವನ್ನು ಬದಿಗಿಡಿರಿ. ಆ ವಾರಕ್ಕಾಗಿ ನೇಮಿತವಾದ ಭಾಗದ ಪ್ರತಿಯೊಂದು ಪ್ಯಾರಗ್ರಾಫನ್ನು ಓದಿರಿ. ಪ್ರತಿಯೊಂದು ಮುದ್ರಿತ ಪ್ರಶ್ನೆಯ ಕುರಿತು ಆಲೋಚಿಸಿರಿ. ನಿಮ್ಮ ಪುಸ್ತಕದಲ್ಲಿ ಉತ್ತರಗಳನ್ನು ಗುರುತಿಸಿರಿ. ಯೆಶಾಯ ಪುಸ್ತಕದಿಂದ ತೆಗೆಯಲ್ಪಟ್ಟಿರುವ ವಚನಗಳು ದಪ್ಪಕ್ಷರಗಳಲ್ಲಿ ಮುದ್ರಿಸಲ್ಪಟ್ಟಿವೆ. ಅವುಗಳನ್ನು ಗಮನಕೊಟ್ಟು ಓದಿರಿ. ಉಲ್ಲೇಖಿಸಲ್ಪಟ್ಟಿರುವ ಇತರ ವಚನಗಳು ನೇಮಿತ ವಿಷಯಕ್ಕೆ ಹೇಗೆ ಸಂಬಂಧಿಸುತ್ತವೆ ಎಂಬುದನ್ನು ಕಂಡುಹಿಡಿಯಲಿಕ್ಕಾಗಿ ಅವುಗಳನ್ನು ತೆರೆದು ನೋಡಿ. ನೀವು ಕಲಿಯುತ್ತಿರುವ ವಿಷಯಗಳ ಕುರಿತು ಮನನಮಾಡಿ. ತದನಂತರ, ನಿಮ್ಮ ತಯಾರಿಯ ಫಲಿತಾಂಶಗಳನ್ನು ನಿಮ್ಮ ಪುಸ್ತಕ ಅಭ್ಯಾಸದ ಗುಂಪಿನೊಂದಿಗೆ ಹಂಚಿಕೊಳ್ಳಿರಿ.
4 ಹಾಜರಿರುವವರೆಲ್ಲರೂ ಬೈಬಲನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಲು ಮತ್ತು ಆವರಿಸಲ್ಪಡುತ್ತಿರುವ ವಿಷಯದ ಪ್ರಾಯೋಗಿಕ ಮೌಲ್ಯವನ್ನು ಗಣ್ಯಮಾಡಲು, ಪುಸ್ತಕ ಅಭ್ಯಾಸವನ್ನು ನಡೆಸುವ ಸಹೋದರನು ಸಹಾಯಮಾಡಬೇಕು. ಒಂದುವೇಳೆ ನಿಮಗೆ ಮೊದಲ ಹೇಳಿಕೆಯನ್ನು ಕೊಡುವ ಅವಕಾಶ ಸಿಗುವಲ್ಲಿ, ಸರಳವಾದ ಮತ್ತು ನೇರವಾದ ಉತ್ತರವನ್ನು ಕೊಡಿರಿ. ಇದನ್ನು ಆಗಲೇ ಯಾರಾದರೂ ಕೊಟ್ಟಿದ್ದರೆ, ಚರ್ಚಿಸಲ್ಪಡುತ್ತಿರುವ ಅಂಶವನ್ನು ನೀವು ಹೆಚ್ಚು ವಿವರಿಸಬಹುದು. ಒಂದು ಮುಖ್ಯ ವಚನವು ಶೀರ್ಷಿಕೆಗೆ ಹೇಗೆ ಸಂಬಂಧಿಸಿದೆಯೆಂಬುದನ್ನು ನೀವು ತೋರಿಸಬಹುದು. ನಿಮ್ಮ ಸ್ವಂತ ಮಾತುಗಳಲ್ಲಿ ಉತ್ತರ ನೀಡಲು ಪ್ರಯತ್ನಿಸಿರಿ, ಮತ್ತು ಚರ್ಚೆಯಲ್ಲಿ ಪಾಲ್ಗೊಳ್ಳುವ ಸುಖಾನುಭವದಲ್ಲಿ ಆನಂದಿಸಿರಿ.
5 ಯೆಶಾಯನ ಪುಸ್ತಕದಲ್ಲಿರುವ ಅಮೂಲ್ಯವಾದ ಸಂದೇಶವನ್ನು ನಾವು ಒಟ್ಟಿಗೆ ಸೇರಿ ಉತ್ಸುಕತೆಯಿಂದ ಪರಿಶೀಲಿಸೋಣ. ಯೆಹೋವನ ರಕ್ಷಣೆಯ ಸಂತೋಷಭರಿತ ನಿರೀಕ್ಷೆಯೊಂದಿಗೆ ನಾವು ಪ್ರತಿದಿನ ಜೀವಿಸುವಂತೆ ಇದು ಖಂಡಿತವಾಗಿಯೂ ನಮ್ಮನ್ನು ಪ್ರೋತ್ಸಾಹಿಸುವುದು!—ಯೆಶಾ. 30:18, NW.