ನೀವು ‘ಒಂದು ನೋಟವಾಗಿದ್ದೀರಿ’!
1 ಅಪೊಸ್ತಲ ಪೌಲನು ಬರೆದುದು: “ನಾವು ದೇವದೂತರಿಗೂ ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲ ನೋಟವಾದೆವು.” (1 ಕೊರಿಂ. 4:9) ಇದರ ಅರ್ಥವೇನು, ಮತ್ತು ಇಂದು ನಮ್ಮ ಶುಶ್ರೂಷೆಯಲ್ಲಿ ಇದು ನಮ್ಮ ಮೇಲೆ ಯಾವ ಪ್ರಭಾವ ಬೀರಬೇಕು?
2 ಕೊರಿಂಥದ ಒಬ್ಬ ವ್ಯಕ್ತಿಗೆ, “ನೋಟ” ಎಂಬ ಈ ಅಭಿವ್ಯಕ್ತಿಯು, ರೋಮಿನ ಕತ್ತಿಮಲ್ಲರ ಸ್ಪರ್ಧೆಯ ಅಂತಿಮ ಘಟನೆಯನ್ನು ಮನಸ್ಸಿಗೆ ತಂದಿರಬಹುದು. ಈ ಸಂದರ್ಭದಲ್ಲಿ, ಮರಣದಂಡನೆಗೆ ಗುರಿಯಾದ ಜನರನ್ನು ಕ್ರೂರವಾದ ರೀತಿಯಲ್ಲಿ ವಧಿಸುವ ಮೊದಲು, ಸಾವಿರಾರು ಮಂದಿ ಪ್ರೇಕ್ಷಕರ ಎದುರಿನಲ್ಲಿ ಮೆರವಣಿಗೆ ಮಾಡಿಸಲಾಗುತ್ತಿತ್ತು. ತದ್ರೀತಿಯಲ್ಲಿ, ಮನುಷ್ಯರು ಮತ್ತು ದೇವದೂತರಿಂದ ಕೂಡಿರುವ ಪ್ರೇಕ್ಷಕರ ಒಂದು ದೊಡ್ಡ ಗುಂಪು, ರಾಜ್ಯದ ಕುರಿತು ಸಾಕ್ಷಿ ಕೊಟ್ಟದ್ದಕ್ಕಾಗಿ ಪ್ರಥಮ ಶತಮಾನದ ಕ್ರೈಸ್ತರು ಅನುಭವಿಸಿದ ಕಷ್ಟಗಳನ್ನು ಗಮನಿಸಿತು. (ಇಬ್ರಿ. 10:32, 33) ಅವರು ಕಾಪಾಡಿಕೊಂಡ ಸಮಗ್ರತೆಯು, ಅನೇಕ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿತು. ಮತ್ತು ಆಧುನಿಕ ದಿನದ ಅಖಾಡದಲ್ಲಿ ನಮ್ಮ ತಾಳ್ಮೆಯು ಸಹ ಅದೇ ರೀತಿಯಲ್ಲಿ ಪ್ರಭಾವ ಬೀರುತ್ತಿದೆ. ನಾವು ಯಾರಿಗೆ ಒಂದು ನೋಟವಾಗಿದ್ದೇವೆ?
3 ಜಗತ್ತಿಗೆ ಮತ್ತು ಮನುಷ್ಯರಿಗೆ: ಕೆಲವೊಮ್ಮೆ ವಾರ್ತಾಮಾಧ್ಯಮಗಳು ಯೆಹೋವನ ಜನರ ಚಟುವಟಿಕೆಗಳ ಕುರಿತಾದ ವರದಿಗಳನ್ನು ಪ್ರಕಟಿಸುತ್ತವೆ. ನಮ್ಮ ಕೆಲಸಕ್ಕೆ ಸಂಬಂಧಿಸಿದ ವಾಸ್ತವಿಕ ಮತ್ತು ಸತ್ಯ ವಿಚಾರಗಳ ಕುರಿತಾದ ಒಳ್ಳೆಯ ವರದಿಗಳನ್ನು ನಾವು ಗಣ್ಯಮಾಡುತ್ತೇವೆ. ಆದರೆ ಅದೇ ಸಮಯದಲ್ಲಿ, ನಮ್ಮ ನಿಂದಕರು ಆಗಿಂದಾಗ್ಗೆ ಕೆಟ್ಟ ವರದಿಗಳನ್ನು ಹಬ್ಬಿಸುವುದನ್ನು ಸಹ ನಾವು ನಿರೀಕ್ಷಿಸುತ್ತೇವೆ. ಹಾಗಿದ್ದರೂ, “ಕೀರ್ತಿ ಅಪಕೀರ್ತಿಗಳ” ನಡುವೆಯೂ ನಾವು ನಮ್ಮನ್ನು ದೇವರ ಶುಶ್ರೂಷಕರೋಪಾದಿ ಯೋಗ್ಯವಾಗಿ ನಡೆಸಿಕೊಳ್ಳುವವರಾಗಿರಬೇಕು. (2 ಕೊರಿಂ. 6:4, 8) ಆಗ, ನಾವು ಯೇಸು ಕ್ರಿಸ್ತನ ನಿಜ ಶಿಷ್ಯರಾಗಿದ್ದೇವೆ ಎಂಬುದು ಪ್ರಾಮಾಣಿಕ ಹೃದಯದ ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತದೆ.
4 ದೇವದೂತರಿಗೆ: ಆತ್ಮ ಜೀವಿಗಳು ಸಹ ನಮ್ಮನ್ನು ಗಮನಿಸುತ್ತವೆ. ಪಿಶಾಚನು ಮತ್ತು ಅವನ ದೆವ್ವಗಳು ನಮ್ಮನ್ನು ಗಮನಿಸುತ್ತವಾದರೂ, ‘ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವ’ ಕೆಲಸವನ್ನು ನಿಲ್ಲಿಸಲು ಅವರು “ಮಹಾ ರೌದ್ರ”ದಿಂದ ಪ್ರಯತ್ನಿಸುತ್ತಿದ್ದಾರೆ. (ಪ್ರಕ. 12:9, 12, 17) ದೇವರ ನಂಬಿಗಸ್ತ ದೇವದೂತರು ನಮ್ಮನ್ನು ಗಮನಿಸುತ್ತಾರೆ ಮತ್ತು ಒಬ್ಬ ಪಾಪಿಯು ಪಶ್ಚಾತ್ತಾಪಪಡುವಾಗ ಸಹ ಅವರು ತುಂಬ ಸಂತೋಷಪಡುತ್ತಾರೆ. (ಲೂಕ 15:10) ದೇವದೂತರು ನಮ್ಮ ಶುಶ್ರೂಷೆಯನ್ನು, ಭೂಮಿಯಲ್ಲಿ ಇಂದು ನಡೆಸಲ್ಪಡುತ್ತಿರುವ ಅತ್ಯಂತ ಜರೂರಿಯ ಹಾಗೂ ತುಂಬ ಪ್ರಯೋಜನದಾಯಕ ಕೆಲಸವಾಗಿ ಪರಿಗಣಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ನಮ್ಮನ್ನು ಇನ್ನಷ್ಟು ಬಲಪಡಿಸಬೇಕು!—ಪ್ರಕ. 14:6, 7.
5 ನೀವು ವಿರೋಧವನ್ನು ಎದುರಿಸುವಾಗ ಅಥವಾ ನಿಮ್ಮ ಶುಶ್ರೂಷೆಗೆ ಪ್ರತಿಫಲ ಸಿಗುತ್ತಿಲ್ಲ ಎಂದು ನೀವು ನೆನಸುವಾಗ, ನೀವು ಸಾರ್ವತ್ರಿಕ ಗಮನದ ಕೇಂದ್ರಬಿಂದುವಾಗಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿರಿ. ನಿಮ್ಮ ನಂಬಿಗಸ್ತ ತಾಳ್ಮೆಯೇ ನಿಮ್ಮ ಸಮಗ್ರತೆಯನ್ನು ಪ್ರಕಟಪಡಿಸುತ್ತದೆ. ಕಾಲಕ್ರಮೇಣ, ನಿಮ್ಮ ‘ನಂಬಿಕೆಯ ಶ್ರೇಷ್ಠ ಹೋರಾಟವು’ ನಿಮ್ಮನ್ನು ‘ನಿತ್ಯಜೀವವನ್ನು ಹಿಡಿದುಕೊಳ್ಳಲು’ ಶಕ್ತರನ್ನಾಗಿ ಮಾಡುವುದು.—1 ತಿಮೊ. 6:12.