ಆತ್ಮಿಕವಾಗಿ ನೀವು ಎಷ್ಟು ಚೆನ್ನಾಗಿ ತಿನ್ನುತ್ತೀರಿ?
1 ‘ಭೋಜನದ ಸತ್ವ ಭಕ್ಷಕನಲ್ಲಿ ವ್ಯಕ್ತ’ ಎಂದು ಜನರು ಹೇಳುವುದುಂಟು. ವಾಸ್ತವದಲ್ಲಿ, ನಮ್ಮ ತಿನ್ನುವ ಅಭ್ಯಾಸಗಳು ನಮ್ಮ ಶಾರೀರಿಕ ಶಕ್ತಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದುದರಿಂದಲೇ ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” ತದ್ರೀತಿಯಲ್ಲಿ, ನಮ್ಮ ಆತ್ಮಿಕ ತಿನ್ನುವ ಅಭ್ಯಾಸಗಳು ನಮ್ಮನ್ನು ಹಿತಕರವಾಗಿ ಇಲ್ಲವಾದರೆ ಅಹಿತಕರವಾಗಿ ಬಾಧಿಸಬಹುದು. (ಮತ್ತಾ. 4:4) ಹಾಗಿರುವುದರಿಂದ, ನೀವು ಆತ್ಮಿಕವಾಗಿ ಎಷ್ಟು ಚೆನ್ನಾಗಿ ತಿನ್ನುತ್ತೀರಿ? ನೀವು ಇಷ್ಟಪಡುವುದನ್ನು ಮಾತ್ರ ತಿನ್ನುವವರೋ? ಅವಸರವಸರವಾಗಿ ತಿನ್ನುವವರೋ? ಅಥವಾ ಕ್ರಮವಾದ, ಸಮತೂಕವುಳ್ಳ, ಮತ್ತು ಪೌಷ್ಟಿಕವಾದ ಆತ್ಮಿಕ ಭೋಜನವನ್ನು ತಿನ್ನಲಿಕ್ಕಾಗಿ ಸಮಯವನ್ನು ಕಳೆಯಲು ಸಂತೋಷಿಸುತ್ತೀರೋ?
2 ನಿಮ್ಮ ಆಹಾರಪಥ್ಯವನ್ನು ಪರಿಶೀಲಿಸಿ: ಯೆಹೋವನು, “ಹೊತ್ತುಹೊತ್ತಿಗೆ ಆಹಾರ”ವನ್ನು ಮತ್ತು “ಸಾರವತ್ತಾದ ಮೃಷ್ಟಾನ್ನ”ವನ್ನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕವಾಗಿ ಒದಗಿಸುತ್ತಾನೆ. (ಮತ್ತಾ. 24:45; ಯೆಶಾ. 25:6) ಈ ಪ್ರೀತಿಪರ ಒದಗಿಸುವಿಕೆಗಳಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಆತ್ಮಿಕವಾಗಿ ಚೆನ್ನಾಗಿ ತಿನ್ನುವುದಕ್ಕೆ ಬೇಕಾದ ಪ್ರಯತ್ನವನ್ನು ಮಾಡಬೇಕು.
3 ನೀವು ನಿಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು: ‘ನಾನು ದಿನದ ವಚನ ಮತ್ತು ಹೇಳಿಕೆಗಳನ್ನು ಪ್ರತಿನಿತ್ಯ ಓದುತ್ತೇನೋ? ನಾನು ದಿನಾಲೂ ಬೈಬಲನ್ನು ಓದಿ ಮನನಮಾಡುತ್ತೇನೋ? ಕೂಟಗಳ ತಯಾರಿಯಾಗಿ, ನೇಮಿಸಲ್ಪಟ್ಟಿರುವ ವಿಷಯವನ್ನು ನಾನು ಮುಂಚಿತವಾಗಿ ಅಧ್ಯಯನಮಾಡುತ್ತೇನೋ? ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I ಎಂಬ ಪುಸ್ತಕವನ್ನೂ ಸೇರಿಸಿ, ಇತ್ತೀಚೆಗೆ ಬಿಡುಗಡೆಮಾಡಲ್ಪಟ್ಟಿರುವ ನಮ್ಮ ಪ್ರಕಾಶನಗಳನ್ನು ನಾನು ಓದಿದ್ದೇನೋ?’
4 “ಆತ್ಮದಲ್ಲಿ ಬಡವರಾಗಿರುವವರು ಧನ್ಯರು . . . ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರಿಗೆ ತೃಪ್ತಿಯಾಗುವದು” ಎಂದು ಯೇಸು ವಾಗ್ದಾನಿಸಿದನು. (ಮತ್ತಾ. 5:3, 6) ಆದುದರಿಂದ, ನಿಮ್ಮ ಹೃದಮನಗಳನ್ನು ದೈವಿಕ ಜ್ಞಾನದಿಂದ ತುಂಬಿಸಿಕೊಳ್ಳುವ ಮೂಲಕ ಆತ್ಮಿಕವಾಗಿ ಒಳ್ಳೆಯ ರೀತಿಯಲ್ಲಿ ತಿನ್ನಿರಿ.