ಒಬ್ಬ ಸಂಬಂಧಿಕನು ಬಹಿಷ್ಕರಿಸಲ್ಪಟ್ಟಿರುವಾಗ ಕ್ರೈಸ್ತ ನಿಷ್ಠೆಯನ್ನು ತೋರಿಸಿರಿ
1. ಯಾವ ಸನ್ನಿವೇಶವು ಒಬ್ಬ ಕ್ರೈಸ್ತನ ನಿಷ್ಠೆಯನ್ನು ಪರೀಕ್ಷಿಸಬಹುದು?
1 ಕುಟುಂಬ ಸದಸ್ಯರ ಮಧ್ಯೆಯಿರುವ ಬಂಧವು ತುಂಬ ಪ್ರಬಲವಾಗಿರಬಲ್ಲದು. ವಿವಾಹ ಸಂಗಾತಿಯೋ, ಒಬ್ಬ ಮಗನೋ ಮಗಳೋ, ಹೆತ್ತವರಲ್ಲಿ ಒಬ್ಬರೋ ಅಥವಾ ಮತ್ತೊಬ್ಬ ಆಪ್ತ ಸಂಬಂಧಿಕನೋ ಬಹಿಷ್ಕರಿಸಲ್ಪಟ್ಟಾಗ ಅಥವಾ ಸಭೆಯಿಂದ ತನ್ನನ್ನೇ ಬೇರ್ಪಡಿಸಿಕೊಂಡಿರುವಾಗ, ಇದು ಒಬ್ಬ ಕ್ರೈಸ್ತನ ಮುಂದೆ ಒಂದು ಪರೀಕ್ಷೆಯನ್ನು ತರುತ್ತದೆ. (ಮತ್ತಾ. 10:37) ನಿಷ್ಠಾವಂತ ಕ್ರೈಸ್ತರು ಇಂತಹ ಸಂಬಂಧಿಕನೊಂದಿಗೆ ಹೇಗೆ ವರ್ತಿಸಬೇಕು? ಆ ವ್ಯಕ್ತಿಯು ನಿಮ್ಮ ಮನೆಯಲ್ಲೇ ಜೀವಿಸುತ್ತಿರುವುದಾದರೆ, ಅವನೊಂದಿಗೆ ಭಿನ್ನವಾದ ರೀತಿಯಲ್ಲಿ ನಡೆದುಕೊಳ್ಳಬೇಕೋ? ಮೊದಲಾಗಿ, ಈ ವಿಷಯದ ಬಗ್ಗೆ ಬೈಬಲು ಏನು ಹೇಳುತ್ತದೆ ಎಂಬುದನ್ನು ನಾವು ಪರಿಶೀಲಿಸೋಣ. ಮತ್ತು ಅದರ ಮೂಲತತ್ತ್ವಗಳು ಬಹಿಷ್ಕರಿಸಲ್ಪಟ್ಟಿರುವವರಿಗೂ ತಮ್ಮನ್ನೇ ಬೇರ್ಪಡಿಸಿಕೊಂಡಿರುವವರಿಗೂ ಸಮನಾಗಿ ಅನ್ವಯವಾಗುತ್ತವೆ.
2. ಬೈಬಲಿಗನುಸಾರ, ಸಭೆಯಿಂದ ಬಹಿಷ್ಕರಿಸಲ್ಪಟ್ಟವರೊಂದಿಗೆ ಕ್ರೈಸ್ತರು ಹೇಗೆ ವರ್ತಿಸಬೇಕು?
2 ಬಹಿಷ್ಕೃತರೊಂದಿಗೆ ವರ್ತಿಸಬೇಕಾದ ವಿಧ: ದೇವರ ವಾಕ್ಯವು, ಕ್ರೈಸ್ತರು ಸಭೆಯಿಂದ ಬಹಿಷ್ಕೃತರಾಗಿರುವವರ ಜೊತೆ ಒಡನಾಟವನ್ನು ಅಥವಾ ಸಾಹಚರ್ಯವನ್ನು ಇಟ್ಟುಕೊಳ್ಳಬಾರದು ಎಂದು ಆಜ್ಞಾಪಿಸುತ್ತದೆ: “ಕ್ರೈಸ್ತಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಬೈಯುವವನಾದರೂ ಕುಡಿಕನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟಮಾಡಲೂ ಬಾರದು . . . ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” (1 ಕೊರಿಂ. 5:11, 13) ಮತ್ತಾಯ 18:17 ರಲ್ಲಿ (NW) ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳೂ ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತವೆ: “[ಬಹಿಷ್ಕೃತನು] ನಿನಗೆ ಅನ್ಯಜನಾಂಗಗಳವನಂತೆಯೂ ಸುಂಕ ವಸೂಲಿಗಾರನಂತೆಯೂ ಇರಲಿ.” ಆ ದಿನದ ಯೆಹೂದ್ಯರು ಅನ್ಯಜನಾಂಗದವರಿಗಾಗಿ ಯಾವುದೇ ಭಾತೃಭಾವವನ್ನು ಇಟ್ಟುಕೊಳ್ಳುತ್ತಿರಲಿಲ್ಲ ಮತ್ತು ಅವರು ಸುಂಕ ವಸೂಲಿಗಾರರನ್ನು ಸಮಾಜದಿಂದ ಬಹಿಷ್ಕೃತರೋಪಾದಿ ದೂರವಿಟ್ಟಿದ್ದರೆಂಬುದು ಯೇಸುವಿನ ಕೇಳುಗರಿಗೆ ಚೆನ್ನಾಗಿ ತಿಳಿದಿತ್ತು. ಹೀಗೆ ಯೇಸು ತನ್ನ ಹಿಂಬಾಲಕರಿಗೆ, ಬಹಿಷ್ಕೃತರೊಂದಿಗೆ ಸಹವಾಸಿಸಬಾರದು ಎಂದು ಉಪದೇಶಿಸಿದನು.—ಫೆಬ್ರವರಿ 1, 1982ರ ಕಾವಲಿನಬುರುಜುವಿನ 18-20ನೆಯ ಪುಟಗಳನ್ನು ನೋಡಿರಿ.
3, 4. ಬಹಿಷ್ಕರಿಸಲ್ಪಟ್ಟವರೊಂದಿಗೆ ಮತ್ತು ತಮ್ಮನ್ನು ಬೇರ್ಪಡಿಸಿಕೊಂಡವರೊಂದಿಗೆ ಯಾವ ರೀತಿಯ ಒಡನಾಟವು ನಿಷೇಧಿಸಲ್ಪಟ್ಟಿದೆ?
3 ಇದರರ್ಥ, ಸಭೆಯಿಂದ ಬಹಿಷ್ಕರಿಸಲ್ಪಟ್ಟಿರುವ ಯಾರೊಟ್ಟಿಗೂ ನಿಷ್ಠಾವಂತ ಕ್ರೈಸ್ತರು ಆತ್ಮಿಕ ಒಡನಾಟವನ್ನು ಮಾಡುವುದಿಲ್ಲ ಎಂದಾಗಿದೆ. ಆದರೆ ಇದರಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿದೆ. “ಅಂಥವನ ಸಂಗಡ ಊಟಮಾಡಲೂ ಬಾರದು” ಎಂದು ದೇವರ ವಾಕ್ಯವು ಹೇಳುತ್ತದೆ. (1 ಕೊರಿಂ. 5:11) ಆದುದರಿಂದ ನಾವು ಬಹಿಷ್ಕೃತ ವ್ಯಕ್ತಿಯೊಂದಿಗೆ ಸಾಮಾಜಿಕ ಒಡನಾಟವನ್ನೂ ತ್ಯಜಿಸುತ್ತೇವೆ. ಇದು ಅವನೊಂದಿಗೆ ಪಿಕ್ನಿಕ್ಗೆ, ಪಾರ್ಟಿಗೆ, ಚೆಂಡಾಟಕ್ಕೆ ಹೋಗುವುದನ್ನು, ಅಥವಾ ಮಾರುಕಟ್ಟೆಗೆ ಇಲ್ಲವೆ ಚಿತ್ರಮಂದಿರಕ್ಕೆ ಹೋಗುವುದನ್ನು ಅಥವಾ ಒಂದು ಊಟಕ್ಕಾಗಿ ಮನೆಯಲ್ಲಿಯೇ ಆಗಲಿ ರೆಸ್ಟರಾಂಟ್ನಲ್ಲೇ ಆಗಲಿ ಅವನೊಂದಿಗೆ ಕುಳಿತುಕೊಳ್ಳುವುದನ್ನು ಅನಪೇಕ್ಷಿತವಾಗಿಸುತ್ತದೆ.
4 ಬಹಿಷ್ಕರಿಸಲ್ಪಟ್ಟಿರುವಂಥ ಒಬ್ಬ ವ್ಯಕ್ತಿಯೊಂದಿಗೆ ಮಾತಾಡುವುದರ ಕುರಿತಾಗಿ ಏನು? ಬೈಬಲು ಸಾಧ್ಯವಿರುವ ಪ್ರತಿಯೊಂದು ಸನ್ನಿವೇಶದ ಕುರಿತು ಮಾತಾಡುವುದಿಲ್ಲವಾದರೂ, 2 ಯೋಹಾನ 10ನೆಯ ವಚನವು, ಇದರ ಬಗ್ಗೆ ಯೆಹೋವನ ನೋಟವನ್ನು ಪಡೆದುಕೊಳ್ಳಲು ಸಹಾಯಮಾಡುತ್ತದೆ: “ಈ ಉಪದೇಶಕ್ಕೆ ಒಪ್ಪದಿರುವ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ, ಅವನಿಗೆ ಶುಭವಾಗಲಿ ಎಂದು ಹೇಳಬೇಡಿರಿ.” ಇದರ ಕುರಿತು ಹೇಳಿಕೆ ನೀಡುತ್ತಾ, ಫೆಬ್ರವರಿ 1, 1982ರ ಕಾವಲಿನಬುರುಜು ಪತ್ರಿಕೆಯು ಪುಟ 14ರಲ್ಲಿ ಹೀಗೆ ಹೇಳುತ್ತದೆ: “ಒಬ್ಬನಿಗೆ ಕೇವಲ ‘ಹಲ್ಲೋ’ ಎಂದು ಹೇಳುವುದೇ ಸಂಭಾಷಣೆಗೂ, ಪ್ರಾಯಶಃ ಮಿತ್ರತ್ವಕ್ಕೂ ನಡಿಸುವ ಪ್ರಥಮ ಹೆಜ್ಜೆಯಾಗ ಸಾಧ್ಯವಿದೆಯೆಂದು ನಮಗೆಲ್ಲರಿಗೂ ತಿಳಿದಿದೆ. ಬಹಿಷ್ಕೃತನೊಂದಿಗೆ ಇಂಥ ಪ್ರಥಮ ಹೆಜ್ಜೆಯನ್ನು ತಕ್ಕೊಳ್ಳಲು ನಾವು ಇಷ್ಟಪಟ್ಟೇವೋ?”
5. ಬಹಿಷ್ಕರಿಸಲ್ಪಟ್ಟಾಗ ಒಬ್ಬ ವ್ಯಕ್ತಿಯು ಏನನ್ನು ಕಳೆದುಕೊಳ್ಳುತ್ತಾನೆ?
5 ವಾಸ್ತವದಲ್ಲಿ, ಪರಿಸ್ಥಿತಿಯು ಕಾವಲಿನಬುರುಜು ಪತ್ರಿಕೆಯ ಅದೇ ಸಂಚಿಕೆಯ 20ನೆಯ ಪುಟದಲ್ಲಿ ಹೇಳುವಂತೆಯೇ ಇದೆ: “ಒಬ್ಬ ಕ್ರೈಸ್ತನು ಪಾಪದ ವಶವಾಗುವಂತೆ ತನ್ನನ್ನು ಬಿಟ್ಟುಕೊಟ್ಟು ಬಹಿಷ್ಕಾರ ಹೊಂದುವಲ್ಲಿ ಅನೇಕ ವಿಷಯಗಳನ್ನು ಕಳೆದುಕೊಳ್ಳುತ್ತಾನೆಂಬುದು ಸತ್ಯ. ಇವು ಯಾವುವೆಂದರೆ, ದೇವರೊಂದಿಗೆ ತನಗಿದ್ದ ಒಪ್ಪಲ್ಪಟ್ಟ ಸ್ಥಾನ, . . . ಮತ್ತು ತನ್ನ ಕ್ರೈಸ್ತ ಸಂಬಂಧಿಕರೊಂದಿಗೆ ತನಗಿದ್ದ ಹೆಚ್ಚಿನ ಸಹವಾಸದ ಸಮೇತ ಇತರ ಸಹೋದರರ ಸವಿ ಸಹವಾಸ.”
6. ಒಬ್ಬ ಕ್ರೈಸ್ತನು ತನ್ನ ಮನೆಯಲ್ಲೇ ಜೀವಿಸುತ್ತಿರುವ ಬಹಿಷ್ಕೃತ ಸಂಬಂಧಿಕನೊಂದಿಗೆ ಎಲ್ಲಾ ಸಹವಾಸವನ್ನು ನಿಲ್ಲಿಸಬೇಕು ಎಂದು ಅಪೇಕ್ಷಿಸಲಾಗುತ್ತದೋ? ವಿವರಿಸಿ.
6 ಒಂದೇ ಮನೆಯಲ್ಲಿ ಜೀವಿಸುವ ಸದಸ್ಯರೊಂದಿಗೆ: ಇದರ ಅರ್ಥ ಬಹಿಷ್ಕರಿಸಲ್ಪಟ್ಟಿರುವ ಕುಟುಂಬ ಸದಸ್ಯನೊಂದಿಗೆ ಒಂದೇ ಮನೆವಾರ್ತೆಯಲ್ಲಿ ಜೀವಿಸುತ್ತಿರುವ ಕ್ರೈಸ್ತರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿರುವಾಗ, ಆ ವ್ಯಕ್ತಿಯೊಂದಿಗೆ ಮಾತಾಡಬಾರದು, ಊಟಮಾಡಬಾರದು ಮತ್ತು ಸಹವಾಸಿಸಬಾರದು ಎಂದೊ? ಫೆಬ್ರವರಿ 1, 1992ರ ಕಾವಲಿನಬುರುಜು ಪತ್ರಿಕೆಯು ಪುಟ 22ರ ಪಾದಟಿಪ್ಪಣಿಯಲ್ಲಿ, “ಒಬ್ಬ ಕ್ರೈಸ್ತನ ಮನೆವಾರ್ತೆಯಲ್ಲಿ ಬಹಿಷ್ಕೃತ ಸಂಬಂಧಿಕನೊಬ್ಬನು ಇರುವುದಾದರೆ, ಆ ವ್ಯಕ್ತಿಯು ಸಾಮಾನ್ಯವಾಗಿ ಇನ್ನೂ, ಮನೆಯ ದಿನ-ದಿನದ ವ್ಯವಹಾರಗಳ ಮತ್ತು ಚಟುವಟಿಕೆಗಳ ಭಾಗವಾಗಿರುವನು” ಎಂದು ಹೇಳುತ್ತದೆ. ಆದುದರಿಂದ, ಊಟದ ಸಮಯದಲ್ಲಿ ಅಥವಾ ಮನೆವಾರ್ತೆಯ ಇತರ ಚಟುವಟಿಕೆಗಳಲ್ಲಿ, ಬಹಿಷ್ಕರಿಸಲ್ಪಟ್ಟಿರುವ ಕುಟುಂಬದ ಸದಸ್ಯನು ಎಷ್ಟರ ಮಟ್ಟಿಗೆ ಒಳಗೂಡಿಸಲ್ಪಡುವನು ಎಂಬುದನ್ನು ನಿರ್ಣಯಿಸುವುದು ಕುಟುಂಬದ ಸದಸ್ಯರಿಗೆ ಬಿಡಲ್ಪಟ್ಟ ವಿಷಯವಾಗಿದೆ. ಆದರೂ, ಅವರು ತಾವು ಸಹವಾಸಮಾಡುತ್ತಿರುವ ಸಹೋದರರಿಗೆ, ಬಹಿಷ್ಕಾರವಾಗುವುದಕ್ಕೆ ಮುಂಚೆ ವಿಷಯಗಳು ಹೇಗಿದ್ದವೊ ಹಾಗೆಯೇ ಈಗಲೂ ಮುಂದುವರಿಯುತ್ತಾ ಇವೆ ಎಂಬ ಅಭಿಪ್ರಾಯವನ್ನು ಕೊಡಲು ಬಯಸುವುದಿಲ್ಲ.
7. ಕುಟುಂಬದ ಸದಸ್ಯನೊಬ್ಬನು ಬಹಿಷ್ಕರಿಸಲ್ಪಟ್ಟಿರುವಾಗ ಮನೆಯಲ್ಲಿನ ಆತ್ಮಿಕ ಒಡನಾಟವು ಹೇಗೆ ಬದಲಾಗುತ್ತದೆ?
7 ಆದರೂ, ಫೆಬ್ರವರಿ 1, 1982ರ ಕಾವಲಿನಬುರುಜು ಪತ್ರಿಕೆಯು 17ನೆಯ ಪುಟದಲ್ಲಿ, ಬಹಿಷ್ಕರಿಸಲ್ಪಟ್ಟಿರುವ ಅಥವಾ ಬೇರ್ಪಡಿಸಲ್ಪಟ್ಟಿರುವ ವ್ಯಕ್ತಿಯ ಕುರಿತು ಹೀಗೆ ಸೂಚಿಸುತ್ತದೆ: “ಮೊದಲಿನ ಆತ್ಮಿಕ ಸಂಬಂಧವು ಈಗ ಪೂರ್ಣವಾಗಿ ಕತ್ತರಿಸಲ್ಪಟ್ಟಿರುತ್ತದೆ. ಅವನ ಸಂಬಂಧಿಕರ ವಿಷಯದಲ್ಲಿ ಮತ್ತು ಅವನ ಅತಿ ಸಮೀಪದ ಕುಟುಂಬ ವೃತ್ತದ ಸಂಬಂಧದಲ್ಲಿಯೂ ಇದು ನಿಜವೇ. . . . ಅಂದರೆ, ಅಷ್ಟರ ತನಕ ಮನೆಯಲ್ಲಿದ್ದ ಆತ್ಮಿಕ ಸಹವಾಸದಲ್ಲಿ ಈಗ ಬದಲಾವಣೆಯಾಗುತ್ತದೆಂದು ಅರ್ಥ. ಉದಾಹರಣೆಗೆ, ಗಂಡನು ಬಹಿಷ್ಕೃತನಾಗಿದ್ದರೆ, ಅವನು ಕುಟುಂಬ ಬೈಬಲ್ ಅಭ್ಯಾಸವನ್ನು ನಡಿಸುವಾಗ ಅಥವಾ ಬೈಬಲ್ ಓದುವುದರಲ್ಲಿ ಮತ್ತು ಪ್ರಾರ್ಥನೆಯಲ್ಲಿ ನಾಯಕತ್ವ ವಹಿಸುವಲ್ಲಿ ಅವನ ಹೆಂಡತಿ ಮಕ್ಕಳು ಹಾಯಾಗಿ ನೆಮ್ಮದಿಯಿಂದಿರರು. ಅವನು ಪ್ರಾರ್ಥನೆ ಮಾಡಲಪೇಕ್ಷಿಸುವುದಾದರೆ—ಉದಾಹರಣೆಗೆ, ಊಟದ ಸಮಯದಲ್ಲಿ—ತನ್ನ ಸ್ವಂತ ಮನೆಯಲ್ಲಿ ಅವನಿಗೆ ಹಾಗೆ ಮಾಡುವ ಹಕ್ಕಿದೆ. ಆಗ ಅವರು ದೇವರಿಗೆ ತಮ್ಮ ಸ್ವಂತ ಪ್ರಾರ್ಥನೆಯನ್ನು ಮೌನವಾಗಿ ಮಾಡಬಹುದು. (ಜ್ಞಾನೋ. 28:9; ಕೀರ್ತ. 119:145, 146) ಆದರೆ ಕುಟುಂಬವು ಕೂಡಿ ಬೈಬಲನ್ನು ಅಥವಾ ಬೈಬಲ್ ಅಧ್ಯಯನ ಮಾಡುವಾಗ ಈ ಬಹಿಷ್ಕೃತನು ಹಾಜರಿರಲು ಮನಸ್ಸು ಮಾಡುವುದಾದರೆ ಆಗೇನು? ಅವನು ತನ್ನ ಧಾರ್ಮಿಕ ವಿಚಾರಗಳನ್ನು ಕಲಿಸಲು ಅಥವಾ ಅವುಗಳಲ್ಲಿ ಪಾಲಿಗನಾಗಲು ಪ್ರಯತ್ನಿಸದಿರುವಲ್ಲಿ ಅವನು ಹಾಜರಿರುವಂತೆ ಬಿಡಬಹುದು.”
8. ಮನೆಯಲ್ಲಿ ಜೀವಿಸುತ್ತಿರುವ ಬಹಿಷ್ಕರಿಸಲ್ಪಟ್ಟಿರುವ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನ ವಿಷಯದಲ್ಲಿ ಕ್ರೈಸ್ತ ಹೆತ್ತವರಿಗೆ ಯಾವ ಜವಾಬ್ದಾರಿಯಿದೆ?
8 ಮನೆಯಲ್ಲಿ ಜೀವಿಸುತ್ತಿರುವ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕನು ಬಹಿಷ್ಕರಿಸಲ್ಪಡುವುದಾದರೆ, ಕ್ರೈಸ್ತ ಹೆತ್ತವರು ಇನ್ನೂ ಅವನ ಪಾಲನೆಪೋಷಣೆಗಾಗಿ ಜವಾಬ್ದಾರರಾಗಿದ್ದಾರೆ. ನವೆಂಬರ್ 15, 1988ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯು ಅದರ 20ನೆಯ ಪುಟದಲ್ಲಿ ಹೀಗೆ ತಿಳಿಸುತ್ತದೆ: “ಅವರು ಅವನಿಗೆ ಆಹಾರ, ಬಟ್ಟೆ, ಮತ್ತು ಆಶ್ರಯ ಒದಗಿಸುವುದನ್ನು ಮುಂದುವರಿಸುವಂತೆಯೇ, ದೇವರ ವಾಕ್ಯಕ್ಕನುಸಾರವಾಗಿ ಅವನಿಗೆ ಉಪದೇಶಿಸಿ ಶಿಸ್ತಿಗೊಳಪಡಿಸಬೇಕು. (ಜ್ಞಾನೋಕ್ತಿ 6:20-22; 29:17) ಆದ್ದರಿಂದ, ಅವನು ಬಹಿಷ್ಕರಿಸಲ್ಪಟ್ಟಿರುವುದಾದರೂ, ಪ್ರೀತಿಯ ಹೆತ್ತವರು ಅವನೊಂದಿಗೆ ಒಂದು ಮನೆ ಬೈಬಲ್ ಅಧ್ಯಯನವನ್ನು ಏರ್ಪಡಿಸಬಹುದು. ಪ್ರಾಯಶಃ ಅವರು ಅವನೊಬ್ಬನೊಂದಿಗೆ ಏಕಾಂತವಾಗಿ ಅಧ್ಯಯನ ಮಾಡುವುದರಿಂದ ಅವನು ಹೆಚ್ಚು ತಿದ್ದುಪಾಟಿನ ಪ್ರಯೋಜನವನ್ನು ಪಡೆದಾನು. ಅಥವಾ ಅವನು ಕುಟುಂಬ ಅಧ್ಯಯನ ಏರ್ಪಾಡಿನ ಭಾಗವಾಗಿ ಮುಂದುವರಿಯಬಹುದು ಎಂದವರು ತೀರ್ಮಾನಿಸಬಹುದು.”—ಅಕ್ಟೋಬರ್ 1, 2001ರ ಕಾವಲಿನಬುರುಜುವಿನ 16-17ನೆಯ ಪುಟಗಳನ್ನೂ ನೋಡಿರಿ.
9. ಒಬ್ಬ ಕ್ರೈಸ್ತನು ಮನೆಯ ಹೊರಗೆ ಜೀವಿಸುತ್ತಿರುವ ಒಬ್ಬ ಬಹಿಷ್ಕೃತ ಸಂಬಂಧಿಕನೊಂದಿಗೆ ಎಷ್ಟರ ಮಟ್ಟಿಗೆ ಸಂಪರ್ಕವನ್ನು ಇಟ್ಟುಕೊಳ್ಳಬೇಕು?
9 ಮನೆವಾರ್ತೆಯ ಭಾಗವಾಗಿರದಂಥ ಸಂಬಂಧಿಕರು: “ಬಹಿಷ್ಕರಿಸಲ್ಪಟ್ಟಿರುವ ಅಥವಾ ಸ್ವತಃ ಬೇರ್ಪಡಿಸಿಕೊಂಡಿರುವ ಸಂಬಂಧಿಕನು ಸಮೀಪದ ಕುಟುಂಬ ವೃತ್ತದಿಂದ ಮತ್ತು ಮನೆಯಿಂದ ಹೊರಗೆ ಜೀವಿಸುತ್ತಿರುವುದಾದರೆ ಪರಿಸ್ಥಿತಿಯು ಭಿನ್ನವಾಗಿರುತ್ತದೆ,” ಎಂದು ಏಪ್ರಿಲ್ 15, 1988ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯು 28ನೆಯ ಪುಟದಲ್ಲಿ ತಿಳಿಸುತ್ತದೆ. “ಆ ಸಂಬಂಧಿಕನೊಂದಿಗೆ ಹೆಚ್ಚುಕಡಿಮೆ ಯಾವುದೇ ಸಂಪರ್ಕವಿಲ್ಲದೆ ಇರಸಾಧ್ಯವಿರಬಹುದು. ಸಂಪರ್ಕವನ್ನು ಅವಶ್ಯಪಡಿಸುವಂಥ ಕೆಲವು ಕೌಟುಂಬಿಕ ವಿಚಾರಗಳಿರಬಹುದಾದರೂ, ಖಂಡಿತವಾಗಿಯೂ ಅದನ್ನು ಮಿತ ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು.” ಇದು ಪಶ್ಚಾತ್ತಾಪಪಡದೆ ಪಾಪಮಾಡಿರುವಂಥ ಒಬ್ಬ ದೋಷಾಪರಾಧಿಯಾದ “ಯಾವನೊಂದಿಗೂ ಬೆರೆಯುವುದನ್ನು ನಿಲ್ಲಿಸಿರಿ” ಎಂಬ ದೈವಿಕ ಆಜ್ಞೆಗೆ ವಿಧೇಯತೆಯಲ್ಲಿದೆ. (1 ಕೊರಿಂ. 5:11, NW) ನಿಷ್ಠಾವಂತ ಕ್ರೈಸ್ತರು ಇಂತಹ ಒಬ್ಬ ಸಂಬಂಧಿಕನೊಂದಿಗೆ ಅನಾವಶ್ಯಕವಾದ ಸಹವಾಸದಿಂದ ದೂರವಿರಲು ಪ್ರಯತ್ನಿಸಬೇಕು. ಮತ್ತು ಅಂಥವನೊಂದಿಗಿನ ವ್ಯವಹಾರಗಳನ್ನೂ ತುಂಬ ಮಿತವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು.—ಫೆಬ್ರವರಿ 1, 1982ರ ಕಾವಲಿನಬುರುಜುವಿನ 18-19ನೆಯ ಪುಟಗಳನ್ನೂ ನೋಡಿರಿ.
10, 11. ಒಬ್ಬ ಬಹಿಷ್ಕೃತ ಸಂಬಂಧಿಕನನ್ನು ಪುನಃ ಮನೆಗೆ ಹಿಂದೆ ಬಂದು ಜೀವಿಸುವಂತೆ ಅನುಮತಿಸುವ ಮೊದಲು ಒಬ್ಬ ಕ್ರೈಸ್ತನು ಏನನ್ನು ಪರಿಗಣಿಸಬೇಕು?
10 ಏಳಬಹುದಾದ ಮತ್ತೊಂದು ಸನ್ನಿವೇಶವನ್ನು ಆ ಕಾವಲಿನಬುರುಜು ಸಂಬೋಧಿಸುತ್ತದೆ: “ಮನೆಯಲ್ಲಿ ಜೀವಿಸದಿರುವ ಮಗನು ಅಥವಾ ಹೆತ್ತವರಂಥ ಆಪ್ತ ಸಂಬಂಧಿಕರು ಬಹಿಷ್ಕೃತರಾಗಿ ಪುನಃ ಮನೆಗೆ ಹಿಂದೆ ಬಂದು ಜೀವಿಸಲು ಬಯಸುವುದಾದರೆ ಆಗೇನು? ಪರಿಸ್ಥಿತಿಗೆ ಹೊಂದಿಕೊಂಡು ಕುಟುಂಬವು ಇದರ ವಿಷಯ ನಿರ್ಣಯಿಸಬಹುದು. ಉದಾಹರಣೆಗೆ, ಬಹಿಷ್ಕೃತ ತಂದೆಯು ರೋಗಿಯಾಗಿದ್ದು ತನ್ನನ್ನು ಆರ್ಥಿಕ ಮತ್ತು ಶಾರೀರಿಕ ರೀತಿಯಲ್ಲಿ ನೋಡಿಕೊಳ್ಳ ಸಾಧ್ಯವಿಲ್ಲದವನಾಗಿರಬಹುದು. ಆಗ ಕ್ರೈಸ್ತ ಮಕ್ಕಳಿಗೆ ಅವನಿಗೆ ಸಹಾಯ ಮಾಡುವ ಶಾಸ್ತ್ರಬದ್ಧ ಮತ್ತು ನೈತಿಕ ಜವಾಬ್ದಾರಿಯಿದೆ. (1 ತಿಮೊ. 5:8) . . . ಹೀಗೆ ಮಾಡಲ್ಪಡುವ ವ್ಯವಸ್ಥೆಯು ಹೆತ್ತವರ ನಿಜಾವಶ್ಯಕತೆ, ಮನೋಭಾವ ಮತ್ತು ಕುಟುಂಬದ ಯಜಮಾನನು ಕುಟುಂಬದ ಆತ್ಮಿಕ ಹಿತದ ಕಡೆಗೆ ಕೊಡುವ ಲಕ್ಷ್ಯ—ಈ ವಿಷಯಗಳ ಮೇಲೆ ಹೊಂದಿಕೊಳ್ಳಬಹುದು.”—ಫೆಬ್ರವರಿ 1, 1982ರ ಕಾವಲಿನಬುರುಜುವಿನ 18ನೆಯ ಪುಟವನ್ನು ನೋಡಿರಿ.
11 ಒಂದು ಮಗುವಿನ ವಿಷಯದಲ್ಲಿ ಅದೇ ಲೇಖನವು ಮುಂದುವರಿಸುವುದು: “ಹಲವು ಸಲ, ಶಾರೀರಿಕವಾಗಿ ಅಥವಾ ಮನೋವಿಕಾರದಿಂದ ಅಸ್ವಸ್ಥರಾಗಿರುವ ಬಹಿಷ್ಕೃತ ಮಕ್ಕಳನ್ನು ಕ್ರೈಸ್ತ ಹೆತ್ತವರು ಕೆಲವು ಕಾಲಕ್ಕಾಗಿ ಮನೆಯೊಳಗೆ ತಕ್ಕೊಂಡಿದ್ದಾರೆ. ಆದರೆ ಪ್ರತಿಯೊಂದು ಸಂದರ್ಭದಲ್ಲಿ ಆಯಾ ಪರಿಸ್ಥಿತಿಯನ್ನು ಹೆತ್ತವರು ತೂಗಿ ನೋಡಸಾಧ್ಯವಿದೆ. ಬಹಿಷ್ಕೃತ ಮಗನು ಒಬ್ಬನಾಗಿಯೇ ಜೀವಿಸುತ್ತಿದ್ದನೋ ಮತ್ತು ಈಗ ಹಾಗೆ ಜೀವಿಸಲು ಅಶಕ್ತನೋ? ಅಥವಾ, ಪ್ರಧಾನವಾಗಿ ಹೆತ್ತವರ ಮನೆಯಲ್ಲಿ ಸುಲಭ ಜೀವನವಿರುವುದರಿಂದ ಈಗ ಹಿಂದೆ ಬರಲಪೇಕ್ಷಿಸುತ್ತಾನೋ? ಅವನ ನೈತಿಕತೆ ಮತ್ತು ಮನೋಭಾವ ಹೇಗಿದೆ? ಅವನು ಮನೆಯೊಳಗೆ ‘ಹುಳಿ’ಯನ್ನು ತಕ್ಕೊಂಡು ಬಂದಾನೋ?—ಗಲಾ. 5:9.”
12. ಬಹಿಷ್ಕರಿಸುವ ಏರ್ಪಾಡಿನ ಕೆಲವು ಪ್ರಯೋಜನಗಳಾವುವು?
12 ಯೆಹೋವನಿಗೆ ನಿಷ್ಠರಾಗಿರುವುದರಿಂದ ಬರುವ ಪ್ರಯೋಜನಗಳು: ಬಹಿಷ್ಕರಿಸುವ, ಮತ್ತು ಪಶ್ಚಾತ್ತಾಪಪಡದಂಥ ತಪ್ಪಿತಸ್ಥರನ್ನು ದೂರವಿಡುವ ಶಾಸ್ತ್ರೀಯ ಏರ್ಪಾಡಿನೊಂದಿಗೆ ಸಹಕರಿಸುವುದು ಪ್ರಯೋಜನಕರವಾಗಿದೆ. ಅದು ಸಭೆಯ ಶುದ್ಧತೆಯನ್ನು ಕಾಪಾಡುತ್ತದೆ ಮತ್ತು ನಾವು ಬೈಬಲಿನ ಉಚ್ಚ ನೈತಿಕ ಮಟ್ಟಗಳನ್ನು ಎತ್ತಿಹಿಡಿಯುವವರಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. (1 ಪೇತ್ರ 1:14-16) ಅದು ನಮ್ಮನ್ನು ಕೆಟ್ಟ ಪ್ರಭಾವಗಳಿಂದ ಸಂರಕ್ಷಿಸುತ್ತದೆ. (ಗಲಾ. 5:7-9) ಇದು ತಾನು ಪಡೆದುಕೊಂಡ ಶಿಸ್ತಿನಿಂದ ಪೂರ್ಣವಾದ ರೀತಿಯಲ್ಲಿ ಪ್ರಯೋಜನವನ್ನು ಹೊಂದಲು ತಪ್ಪಿತಸ್ಥನಿಗೆ ಅವಕಾಶಮಾಡಿಕೊಡುತ್ತದೆ, ಮತ್ತು ಇದು ಅವನು “ನೀತಿಯೆಂಬ ಫಲವನ್ನು” ಕೊಡಲು ಅವನಿಗೆ ಸಹಾಯಮಾಡಬಲ್ಲದು.—ಇಬ್ರಿ. 12:11.
13. ಒಂದು ಕುಟುಂಬವು ಯಾವ ಹೊಂದಾಣಿಕೆಯನ್ನು ಮಾಡಿತು, ಮತ್ತು ಯಾವ ಫಲಿತಾಂಶದೊಂದಿಗೆ?
13 ಒಂದು ಸರ್ಕಿಟ್ ಸಮ್ಮೇಳನದಲ್ಲಿ ಒಂದು ಭಾಷಣವನ್ನು ಕೇಳಿಸಿಕೊಂಡ ಬಳಿಕ, ಒಬ್ಬ ಸಹೋದರನು ಮತ್ತು ಅವನ ಅವಳಿ ಸಹೋದರಿಯು, ಕಳೆದ ಆರು ವರ್ಷಗಳಿಂದ ಬಹಿಷ್ಕರಿಸಲ್ಪಟ್ಟಿದ್ದ ಮತ್ತು ಬೇರೆಡೆ ಜೀವಿಸುತ್ತಿದ್ದ ತಮ್ಮ ತಾಯಿಯೊಂದಿಗೆ ತಾವು ವರ್ತಿಸುವ ರೀತಿಯಲ್ಲಿ ಹೊಂದಾಣಿಕೆಗಳನ್ನು ಮಾಡಬೇಕಾಗಿದೆ ಎಂಬುದನ್ನು ಮನಗಂಡರು. ಸಮ್ಮೇಳನವಾದ ಕೂಡಲೇ, ಆ ಸಹೋದರನು ತನ್ನ ತಾಯಿಗೆ ಫೋನ್ ಮಾಡಿದನು, ಮತ್ತು ತಾವು ಅವಳನ್ನು ತುಂಬ ಪ್ರೀತಿಸುತ್ತೇವೆಂಬ ಆಶ್ವಾಸನೆಯನ್ನು ಅವಳಿಗೆ ಕೊಟ್ಟ ಬಳಿಕ, ಸಂಪರ್ಕವನ್ನು ಅಗತ್ಯಪಡಿಸುವಂಥ ಪ್ರಾಮುಖ್ಯವಾದ ಕೌಟುಂಬಿಕ ವಿಷಯಗಳು ಇಲ್ಲದ ಹೊರತು ತಾವೆಂದಿಗೂ ಅವಳೊಂದಿಗೆ ಮಾತಾಡಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಿದನು. ಇದಾದ ಸ್ವಲ್ಪದರಲ್ಲೇ, ಅವನ ತಾಯಿಯು ಕೂಟಗಳಿಗೆ ಹಾಜರಾಗಲು ಆರಂಭಿಸಿದಳು ಮತ್ತು ಕಾಲಕ್ರಮೇಣ ಪುನಃಸ್ಥಾಪಿಸಲ್ಪಟ್ಟಳು. ಮತ್ತು ಅವಳ ಅವಿಶ್ವಾಸಿ ಗಂಡನು ಕೂಡ ಅಧ್ಯಯನ ಮಾಡಲಾರಂಭಿಸಿದನು ಮತ್ತು ಕಾಲಾನಂತರ ದೀಕ್ಷಾಸ್ನಾನವನ್ನು ಪಡೆದುಕೊಂಡನು.
14. ಬಹಿಷ್ಕರಿಸುವ ಏರ್ಪಾಡನ್ನು ನಾವು ನಿಷ್ಠೆಯಿಂದ ಬೆಂಬಲಿಸಬೇಕು ಏಕೆ?
14 ಶಾಸ್ತ್ರವಚನಗಳಲ್ಲಿ ಕೊಡಲ್ಪಟ್ಟಿರುವ ಬಹಿಷ್ಕರಿಸುವ ಏರ್ಪಾಡನ್ನು ನಿಷ್ಠೆಯಿಂದ ಎತ್ತಿಹಿಡಿಯುವುದು, ಯೆಹೋವನಿಗಾಗಿರುವ ನಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತದೆ ಮತ್ತು ಆತನನ್ನು ದೂರುವವನಿಗೆ ಒಂದು ಉತ್ತರವನ್ನು ಒದಗಿಸುತ್ತದೆ. (ಜ್ಞಾನೋ. 27:11) ಪ್ರತಿಯಾಗಿ, ನಾವು ಯೆಹೋವನ ಆಶೀರ್ವಾದದ ಆಶ್ವಾಸನೆಯನ್ನು ಹೊಂದಿರಸಾಧ್ಯವಿದೆ. ರಾಜ ದಾವೀದನು ಯೆಹೋವನ ಕುರಿತಾಗಿ ಬರೆದುದು: “ಆತನ ವಿಧಿಗಳ ವಿಷಯದಲ್ಲಿ ಹೇಳುವುದಾದರೆ, ನಾನು ಅವುಗಳನ್ನು ಬಿಟ್ಟು ತೊಲಗೆನು. ನೀನು ನಿಷ್ಠೆಯುಳ್ಳವನೊಂದಿಗೆ ನಿಷ್ಠೆಯಿಂದಲೇ ವರ್ತಿಸುತ್ತೀ.”—2 ಸಮು. 22:23, 26, NW.