ಯೆಹೋವನನ್ನು ಘನಪಡಿಸಲು ಇತರರಿಗೆ ಸಹಾಯಮಾಡುವುದು
1 ಭೂವ್ಯಾಪಕವಾಗಿ ಜನರಿಗೆ ಅತಿ ಮುಖ್ಯವಾದ ಒಂದು ಸಂದೇಶವು ಘೋಷಿಸಲ್ಪಡುತ್ತಾ ಇದೆ: “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರಮಾಡಿರಿ.” (ಪ್ರಕ. 14:6, 7) ಆ ಘೋಷಣೆಯಲ್ಲಿ ಪಾಲ್ಗೊಳ್ಳುವುದು ನಮ್ಮ ಸುಯೋಗವಾಗಿದೆ. ಯೆಹೋವನಿಗೆ ಭಯಪಡಲು ಮತ್ತು ಆತನನ್ನು ಆರಾಧಿಸಲು ಜನರು ಆತನ ಕುರಿತು ಏನನ್ನು ತಿಳಿದುಕೊಳ್ಳಬೇಕಾಗಿದೆ?
2 ಆತನ ಹೆಸರು: ಜನರು, ಇಂದು ಆರಾಧಿಸಲ್ಪಡುವ ಇತರ ಅನೇಕ ಸುಳ್ಳು ದೇವರುಗಳಿಂದ ಒಬ್ಬನೇ ಸತ್ಯ ದೇವರನ್ನು ಆತನ ಹೆಸರಿನ ಮೂಲಕ ಪ್ರತ್ಯೇಕಿಸಿ ನೋಡಲು ಶಕ್ತರಾಗಿರಬೇಕು. (ಧರ್ಮೋ. 4:35; 1 ಕೊರಿಂ. 8:5, 6) ವಾಸ್ತವದಲ್ಲಿ, ಬೈಬಲ್ ಬರಹಗಾರರು ಯೆಹೋವನ ಪ್ರಖ್ಯಾತ ಹೆಸರನ್ನು 7,000ಕ್ಕಿಂತ ಹೆಚ್ಚು ಬಾರಿ ಉಪಯೋಗಿಸಿದರು. ದೇವರ ಹೆಸರನ್ನು ಯಾವಾಗ ಪರಿಚಯಿಸಬೇಕು ಎಂಬ ವಿಷಯದಲ್ಲಿ ನಾವು ಯೋಗ್ಯವಾದ ವಿವೇಚನೆಯನ್ನು ಉಪಯೋಗಿಸಬೇಕು ಎಂಬುದು ನಿಜ, ಆದರೆ ಅದನ್ನು ನಾವು ಎಂದೂ ಮುಚ್ಚಿಡಬಾರದು ಇಲ್ಲವೆ ಅದನ್ನು ಉಪಯೋಗಿಸಲು ಹಿಂಜರಿಯಬಾರದು. ಎಲ್ಲಾ ಮನುಷ್ಯರು ತನ್ನ ಹೆಸರನ್ನು ತಿಳಿದುಕೊಳ್ಳಬೇಕೆಂಬುದು ದೇವರ ಚಿತ್ತವಾಗಿದೆ.—ಕೀರ್ತ. 83:18.
3 ಆತನ ವ್ಯಕ್ತಿತ್ವ: ಯೆಹೋವನನ್ನು ಘನಪಡಿಸಲು, ಆತನು ಯಾವ ರೀತಿಯ ದೇವರಾಗಿದ್ದಾನೆ ಎಂಬುದನ್ನು ಜನರು ಅರಿತುಕೊಳ್ಳಬೇಕು. ನಾವು ಅವರಿಗೆ ಆತನ ಎದ್ದುಕಾಣುವ ಪ್ರೀತಿ, ಅತ್ಯುತ್ಕೃಷ್ಟವಾದ ವಿವೇಕ, ಸಂಪೂರ್ಣ ನ್ಯಾಯ, ಮತ್ತು ಸರ್ವಶಕ್ತಿಯ ಜೊತೆಗೆ ಆತನ ಕರುಣೆ, ಪ್ರೀತಿಪೂರ್ವಕ ದಯೆ, ಮತ್ತು ಇತರ ಅದ್ಭುತಕರ ಗುಣಗಳನ್ನು ಪರಿಚಯಿಸಬೇಕು. (ವಿಮೋ. 34:6, 7) ಮತ್ತು ಅವರು, ತಮ್ಮ ಜೀವನಗಳು ಯೆಹೋವನ ಅನುಗ್ರಹವನ್ನು ಪಡೆದುಕೊಂಡಿರುವುದರ ಮೇಲೆಯೇ ಆತುಕೊಂಡಿವೆ ಎಂಬುದನ್ನು ಗ್ರಹಿಸುವವರಾಗಿ, ಆತನ ಬಗ್ಗೆ ಪೂಜ್ಯಭಾವನೆಯನ್ನು, ಹಿತಕರವಾದ ದೇವಭಯವನ್ನು ಹೊಂದಲೂ ಕಲಿತುಕೊಳ್ಳಬೇಕು.—ಕೀರ್ತ. 89:7.
4 ದೇವರ ಹತ್ತಿರಕ್ಕೆ ಬರುವುದು: ದೇವರ ಆಗಮಿಸುತ್ತಿರುವ ನ್ಯಾಯತೀರ್ಪಿನಿಂದ ರಕ್ಷಿಸಲ್ಪಡಲಿಕ್ಕಾಗಿ, ಜನರು ನಂಬಿಕೆಯಿಂದ ಯೆಹೋವನ ಬಳಿ ವಿಜ್ಞಾಪನೆಮಾಡಬೇಕು. (ರೋಮಾ. 10:13, 14; 2 ಥೆಸ. 1:8) ಇದರಲ್ಲಿ, ಕೇವಲ ದೇವರ ಹೆಸರು ಮತ್ತು ಆತನ ಗುಣಗಳ ಜ್ಞಾನವನ್ನು ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಜನರು ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸೆಯಿಡುತ್ತಾ, ಆತನೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ನಾವು ಅವರಿಗೆ ಸಹಾಯಮಾಡಬೇಕು. (ಜ್ಞಾನೋ. 3:5, 6) ಅವರು ತಾವು ಕಲಿತುಕೊಳ್ಳುತ್ತಿರುವುದನ್ನು ಅನ್ವಯಿಸುವಾಗ, ಹೃತ್ಪೂರ್ವಕ ಪ್ರಾರ್ಥನೆಯಲ್ಲಿ ದೇವರ ಕಡೆಗೆ ತಿರುಗುವಾಗ, ಮತ್ತು ತಮ್ಮ ಜೀವಿತಗಳಲ್ಲಿ ಆತನ ಸಹಾಯಹಸ್ತವನ್ನು ಅನುಭವಿಸುವಾಗ, ಅವರ ನಂಬಿಕೆಯು ಬೆಳೆಯುವುದು ಮತ್ತು ಅವರು ಯೆಹೋವನ ಹತ್ತಿರಕ್ಕೆ ಬರುವಂತೆ ಸಹಾಯಮಾಡುವುದು.—ಕೀರ್ತ. 34:8.
5 ಆದುದರಿಂದ ನಾವು ದೇವರ ಹೆಸರನ್ನು ಹುರುಪಿನಿಂದ ಪ್ರಕಟಿಸುತ್ತಾ, ಇತರರು ಆತನಲ್ಲಿ ಪೂರ್ಣ ಭರವಸೆಯನ್ನು ಇಡುವಂತೆ ಮತ್ತು ಆತನಿಗೆ ಭಯಪಡುವಂತೆ ಅವರಿಗೆ ಸಹಾಯಮಾಡೋಣ. ಮುಂದೆ ಇನ್ನೂ ಹೆಚ್ಚಿನವರು ಯೆಹೋವನ ಕುರಿತು ಅರಿತುಕೊಳ್ಳಲಿಕ್ಕಾಗಿ ಮತ್ತು ಆತನನ್ನು ತಮ್ಮ ‘ರಕ್ಷಣೆಯ ದೇವರಾಗಿ’ ಘನಪಡಿಸಲಿಕ್ಕಾಗಿ ಅವರಿಗೆ ಸಹಾಯಮಾಡಲು ನಾವು ಶಕ್ತರಾಗಬಹುದು.—ಕೀರ್ತ. 25:5.