ದೇವರ ವಾಕ್ಯವು ಸತ್ಯವಾಗಿದೆ
1. ಬೈಬಲಿನಲ್ಲಿ ಯಾವ ಪ್ರಾಮುಖ್ಯ ಮಾಹಿತಿಯು ಅಡಕವಾಗಿದೆ?
1 “ನಿನ್ನ ವಾಕ್ಯದ ಸಾರಾಂಶವು ಸತ್ಯವೇ” ಎಂದು ಕೀರ್ತನೆಗಾರನು ಬರೆದನು. (ಕೀರ್ತ. 119:160) ಯೆಹೋವನು ತನ್ನ ಪ್ರೇರಿತ ವಾಕ್ಯದ ಮೂಲಕ, ಜೀವಿತದ ಅತಿ ಪ್ರಾಮುಖ್ಯ ಪ್ರಶ್ನೆಗಳಿಗೆ ಸಂತೃಪ್ತಿಕರವಾದ ಉತ್ತರಗಳನ್ನು ಕೊಡುತ್ತಾನೆ. ತೊಂದರೆಯಲ್ಲಿರುವವರಿಗೆ ಆತನು ಸಾಂತ್ವನ ಹಾಗೂ ನಿರೀಕ್ಷೆಯನ್ನು ನೀಡುತ್ತಾನೆ. ಮತ್ತು ನಾವು ಆತನಿಗೆ ಹೇಗೆ ಸಮೀಪವಾಗಸಾಧ್ಯವಿದೆ ಎಂಬುದನ್ನು ಆತನು ತೋರಿಸುತ್ತಾನೆ. ಒಬ್ಬ ಕೃತಜ್ಞ ಸ್ತ್ರೀಯು ಹೇಳಿದ್ದು: “ಬೈಬಲಿನಿಂದ ಸತ್ಯವನ್ನು ಕಲಿತುಕೊಳ್ಳುವುದು, ತುಂಬಾ ಅಂಧಕಾರದ ಹಾಗೂ ಮಂಕಾದ ಸ್ಥಳವನ್ನು ಬಿಟ್ಟು, ಸ್ಪಷ್ಟವಾದ, ಪ್ರಕಾಶಮಾನವಾದ ಹಾಗೂ ಹಿತಕರವಾದ ಕೋಣೆಯನ್ನು ಪ್ರವೇಶಿಸುವಂತಿದೆ.” ಅವಕಾಶ ಸಿಗುವಾಗಲೆಲ್ಲಾ ನೀವು ದೇವರ ವಾಕ್ಯದ ಸತ್ಯದ ಕುರಿತು ಇತರರಿಗೆ ತಿಳಿಸಲು ಪ್ರಯತ್ನಿಸುತ್ತೀರೋ?
2. ಬೈಬಲು ಜನರ ಜೀವಿತಗಳನ್ನು ಹೇಗೆ ಉತ್ತಮಗೊಳಿಸುತ್ತದೆ?
2 ಬೈಬಲಿಗಿರುವ ಪರಿವರ್ತನಾ ಶಕ್ತಿ ಮತ್ತು ಲೋಕವ್ಯಾಪಕ ಆಕರ್ಷಣೆ: ಬೈಬಲ್ ಸತ್ಯಕ್ಕೆ ಜನರ ಜೀವಿತಗಳನ್ನು ಪ್ರಭಾವಿಸುವ ಮತ್ತು ಪರಿವರ್ತಿಸುವ ಶಕ್ತಿಯಿದೆ. (ಇಬ್ರಿ. 4:12) ರೋಜಾ ಎಂಬ ಹೆಸರಿನ ಯುವತಿಯೊಬ್ಬಳು, ವೇಶ್ಯಾವೃತ್ತಿಯಲ್ಲಿ ಹಾಗೂ ಮದ್ಯಪಾನ ಮತ್ತು ಅಮಲೌಷಧದ ದುರುಪಯೋಗದಲ್ಲಿ ಒಳಗೂಡಿದ್ದಳು. ಅವಳು ಹೇಳುವುದು: “ಒಂದು ದಿನ, ನಾನು ಹತಾಶೆಯ ತಟ್ಟತಳದಲ್ಲಿದ್ದಾಗ, ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಬೈಬಲ್ ನಮಗೆ ಹೇಗೆ ಸಹಾಯಮಾಡಬಲ್ಲದೆಂದು, ಒಬ್ಬ ಸಾಕ್ಷಿ ದಂಪತಿಗಳು ನನ್ನೊಂದಿಗೆ ಮಾತಾಡಿದರು. ದೇವರ ವಾಕ್ಯದ ಅಭ್ಯಾಸವನ್ನು ನಾನು ಆರಂಭಿಸಿದೆ, ಅದನ್ನು ಆಕರ್ಷಕವಾಗಿ ಕಂಡುಕೊಂಡೆ. ಒಂದು ತಿಂಗಳಿನೊಳಗೆ, ಜೀವನದಲ್ಲಿ ಸಂಪೂರ್ಣವಾದೊಂದು ಹೊಸ ಆರಂಭವನ್ನು ಮಾಡುವ ಬಲ ನನಗಿತ್ತು. ಜೀವನದಲ್ಲಿ ನನಗೀಗ ಒಂದು ಉದ್ದೇಶವಿದ್ದ ಕಾರಣ, ನನಗೆ ಇನ್ನು ಮುಂದೆ ಮದ್ಯಪಾನ ಯಾ ಅಮಲೌಷಧಗಳ ಆಸರೆ ಬೇಕಾಗಿರಲಿಲ್ಲ. ನಾನು ಯೆಹೋವನ ಸ್ನೇಹಿತೆಯಾಗಲು ಬಹಳಷ್ಟು ಬಯಸಿದ್ದರಿಂದ, ಆತನ ಮಟ್ಟಗಳನುಸಾರ ಜೀವಿಸಲು ನಾನು ನಿರ್ಧರಿಸಿದೆ. ದೇವರ ವಾಕ್ಯದ ಪ್ರಾಯೋಗಿಕ ವಿವೇಕ ಇರದಿದ್ದರೆ, ಇಷ್ಟರೊಳಗೆ ನಾನು ಆತ್ಮಹತ್ಯೆಯನ್ನು ಮಾಡಿಕೊಂಡಿರುತ್ತಿದ್ದೆ ಎಂಬುದು ನಿಶ್ಚಯ.”—ಕೀರ್ತ. 119:92.
3. ಇತರರೊಂದಿಗೆ ಬೈಬಲ್ ಸಂದೇಶವನ್ನು ಹಂಚಿಕೊಳ್ಳಲು ನಾವು ಹಿಂಜರಿಯಬಾರದೇಕೆ?
3 ಇಂದಿರುವ ಅಧಿಕಾಂಶ ಪುಸ್ತಕಗಳಿಗೆ ಅಸದೃಶವಾಗಿ ಬೈಬಲು ‘ಎಲ್ಲಾ ಜನಾಂಗ ಕುಲ ಪ್ರಜೆಗಳ ಮತ್ತು ಭಾಷೆಗಳ’ ಜನರನ್ನು ಆಕರ್ಷಿಸುತ್ತದೆ. (ಪ್ರಕ. 7:9) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊ. 2:4) ಆದುದರಿಂದ, ಒಬ್ಬ ವ್ಯಕ್ತಿಯ ಹಿನ್ನೆಲೆಯ ಕಾರಣದಿಂದ ಮಾತ್ರ ಅವನು ಸುವಾರ್ತೆಯನ್ನು ಸ್ವೀಕರಿಸುವವನಲ್ಲ ಎಂದು ನಾವೆಂದಿಗೂ ಮುಂಚಿತವಾಗಿಯೇ ಕಲ್ಪಿಸಿಕೊಳ್ಳಬಾರದು. ಅದಕ್ಕೆ ಬದಲಾಗಿ, ರಾಜ್ಯದ ಸಂದೇಶವನ್ನು ಎಲ್ಲರೊಂದಿಗೂ ಹಂಚಿಕೊಳ್ಳಿರಿ ಮತ್ತು ಸಾಧ್ಯವಿರುವಾಗೆಲ್ಲಾ ನೇರವಾಗಿ ಬೈಬಲಿನಿಂದ ತೆಗೆದ ಮಾಹಿತಿಯನ್ನು ಉಪಯೋಗಿಸಿರಿ.
4. ಸಾಕ್ಷಿಯನ್ನು ನೀಡುವಾಗ ನಾವು ಬೈಬಲನ್ನು ಹೇಗೆ ಉಪಯೋಗಿಸಸಾಧ್ಯವಿದೆ?
4 ಶಾಸ್ತ್ರವಚನಗಳನ್ನು ಒತ್ತಿಹೇಳಿರಿ: ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸಲು ಅನೇಕ ಸದವಕಾಶಗಳಿರುತ್ತವೆ. ಪತ್ರಿಕೆಗಳನ್ನು ನೀಡುತ್ತಿರುವಾಗ, ಸೂಚಿತ ನಿರೂಪಣೆಯಲ್ಲಿ ಕಂಡುಬರುವ ಶಾಸ್ತ್ರವಚನವನ್ನು ಒಳಗೂಡಿಸಲು ಪ್ರಯತ್ನಿಸಿರಿ. ಪ್ರತಿಯೊಂದು ತಿಂಗಳಿಗಾಗಿ ಸೂಚಿಸಲ್ಪಟ್ಟಿರುವ ಸಾಹಿತ್ಯವನ್ನು ಉಪಯೋಗಿಸುತ್ತಿರುವಾಗ, ಜಾಗರೂಕತೆಯಿಂದ ಆಯ್ಕೆಮಾಡಿದಂಥ ಒಂದು ಶಾಸ್ತ್ರವಚನದ ಓದುವಿಕೆಯನ್ನು ತಮ್ಮ ಪೀಠಿಕೆಯಲ್ಲಿ ಒಳಗೂಡಿಸುವುದು ಪರಿಣಾಮಕಾರಿಯಾಗಿದೆ ಎಂದು ಕೆಲವರು ಕಂಡುಕೊಂಡಿದ್ದಾರೆ. ಪುನರ್ಭೇಟಿಗಳನ್ನು ಮಾಡುವಾಗ, ಪ್ರತಿ ಬಾರಿ ಒಂದು ಅಥವಾ ಹೆಚ್ಚು ಬೈಬಲ್ ವಚನಗಳನ್ನು ತೋರಿಸುವ ಮೂಲಕ ಮನೆಯವನು ಪ್ರಗತಿಪರವಾಗಿ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಿರಿ. ಒಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿರುವಾಗ, ಚರ್ಚೆಯನ್ನು ಪ್ರಮುಖ ಶಾಸ್ತ್ರವಚನಗಳ ಮೇಲೆ ಕೇಂದ್ರೀಕರಿಸಿರಿ. ಔಪಚಾರಿಕ ಶುಶ್ರೂಷೆಯಲ್ಲಿ ಭಾಗವಹಿಸದಿರುವ ಸಂದರ್ಭಗಳಲ್ಲಿ, ಅನೌಪಚಾರಿಕವಾಗಿ ಸಾಕ್ಷಿನೀಡುವ ಅವಕಾಶಗಳು ಸಿಗುವಾಗ ಉಪಯೋಗಿಸಲು ಸಾಧ್ಯವಾಗುವಂತೆ ಬೈಬಲನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಂಡಿರಿ.—2 ತಿಮೊ. 2:15.
5. ನಮ್ಮ ಶುಶ್ರೂಷೆಯಲ್ಲಿ ನಾವು ಬೈಬಲನ್ನು ಉಪಯೋಗಿಸಲು ಪ್ರಯತ್ನಿಸಬೇಕು ಏಕೆ?
5 ನಮ್ಮ ಶುಶ್ರೂಷೆಯಲ್ಲಿ ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ ಬೈಬಲನ್ನು ಉಪಯೋಗಿಸುವ ಮೂಲಕ, ದೇವರ ವಾಕ್ಯದ ಸತ್ಯದ ಪ್ರಚೋದನಾತ್ಮಕ ಶಕ್ತಿಯಿಂದ ಪ್ರಯೋಜನ ಪಡೆಯುವಂತೆ ನಾವು ಇತರರಿಗೆ ಸಹಾಯಮಾಡೋಣ.—1 ಥೆಸ. 2:13.