ಸತತವಾಗಿ ಬದಲಾಗುತ್ತಿರುವ ಒಂದು ಲೋಕದಲ್ಲಿ ಸಾರುವುದು
1 ವಿಷಯಗಳು ಅದೆಷ್ಟು ಶೀಘ್ರವಾಗಿ ಬದಲಾಗುತ್ತವಲ್ಲವೇ! ದಿನಬೆಳಗಾಗುವುದರೊಳಗೆ ಒಂದು ನೈಸರ್ಗಿಕ ವಿಪತ್ತು, ಆರ್ಥಿಕ ಬಿಕ್ಕಟ್ಟು, ರಾಜಕೀಯ ಗೊಂದಲ, ಅಥವಾ ಹೆಚ್ಚು ವ್ಯಾಪಕವಾಗಿ ಹಬ್ಬಿಕೊಂಡಿರುವ ಒಂದು ದುರಂತವು ಜನರ ಮನೆಮಾತಾಗಬಹುದು. ಆದರೂ, ಅಷ್ಟೇ ಶೀಘ್ರವಾಗಿ, ಜನರು ತಮ್ಮ ಗಮನವನ್ನು ಬೇರೆ ಕಡೆ ತಿರುಗಿಸಬಹುದು. (ಅ. ಕೃ. 17:21; 1 ಕೊರಿಂ. 7:31) ಸತತವಾಗಿ ಬದಲಾಗುತ್ತಿರುವ ಈ ಲೋಕದಲ್ಲಿ, ಜನರೊಂದಿಗೆ ರಾಜ್ಯದ ಸಂದೇಶವನ್ನು ಹಂಚಿಕೊಳ್ಳಲು ಸಾಧ್ಯವಾಗುವಂತೆ ನಾವು ಅವರ ಗಮನವನ್ನು ಹೇಗೆ ಸೆರೆಹಿಡಿಯಬಲ್ಲೆವು?
2 ಇತರರ ಚಿಂತೆಗಳನ್ನು ಗ್ರಹಿಸಿರಿ: ಜನರ ಗಮನವನ್ನು ಸೆರೆಹಿಡಿಯುವ ಒಂದು ವಿಧಾನವು, ಪ್ರಚಲಿತ ಘಟನೆಗಳ ಕುರಿತು ಸೂಚಿಸಿ ಮಾತಾಡುವುದೇ ಆಗಿದೆ. ಯೇಸು ಒಂದು ಸಂದರ್ಭದಲ್ಲಿ, ತನ್ನ ಕೇಳುಗರು ದೇವರೊಂದಿಗಿನ ತಮ್ಮ ನಿಲುವಿನ ಕುರಿತು ಗಂಭೀರವಾಗಿ ಯೋಚಿಸುವಂತೆ ಉತ್ತೇಜಿಸಲಿಕ್ಕಾಗಿ, ಅವರ ಮನಸ್ಸಿನಲ್ಲಿದ್ದ ಇತ್ತೀಚೆಗೆ ನಡೆದಿದ್ದ ದುರಂತಗಳನ್ನು ಸೂಚಿಸಿದನು. (ಲೂಕ 13:1-5) ತದ್ರೀತಿಯಲ್ಲಿ, ಸುವಾರ್ತೆಯನ್ನು ಪ್ರಸ್ತುತಪಡಿಸುತ್ತಿರುವಾಗ, ನಮ್ಮ ಟೆರಿಟೊರಿಯಲ್ಲಿರುವವರ ಜೀವಿತಗಳನ್ನು ಸ್ಪರ್ಶಿಸುವಂಥ ಒಂದು ಪ್ರಚಲಿತ ವಾರ್ತಾ ವಿಚಾರವನ್ನು ಅಥವಾ ಸ್ಥಳಿಕ ಚರ್ಚಾ ವಿಷಯವನ್ನು ಸೂಚಿಸಿ ಮಾತಾಡುವುದು ಒಳ್ಳೆಯದಾಗಿರುವುದು. ಆದರೂ, ಇಂತಹ ವಿಚಾರಗಳನ್ನು ಚರ್ಚಿಸುವಾಗ, ರಾಜಕೀಯ ಅಥವಾ ಸಾಮಾಜಿಕ ವಿವಾದಗಳಲ್ಲಿ ನಾವು ಯಾವುದೇ ರೀತಿಯಲ್ಲಿ ಪಕ್ಷವಹಿಸದಂತೆ ಜಾಗ್ರತೆ ವಹಿಸಬೇಕು.—ಯೋಹಾ. 17:16.
3 ಸದ್ಯಕ್ಕೆ ಜನರು ಯಾವುದರ ಕುರಿತು ಯೋಚಿಸುತ್ತಿದ್ದಾರೆ ಎಂದು ನಾವು ಹೇಗೆ ಹೇಳಸಾಧ್ಯವಿದೆ? ಪ್ರಾಯಶಃ ಅತ್ಯುತ್ತಮವಾದ ವಿಧವು, ಕೇವಲ ಒಂದು ಪ್ರಶ್ನೆಯನ್ನು ಕೇಳಿ ನಂತರ ಕಿವಿಗೊಡುವುದಾಗಿದೆ. (ಮತ್ತಾ. 12:34) ಜನರಲ್ಲಿನ ಆಸಕ್ತಿಯು, ನಾವು ಇತರರ ದೃಷ್ಟಿಕೋನವನ್ನು ಗುರುತಿಸುವಂತೆ ಮತ್ತು ಜಾಣ್ಮೆಯಿಂದ ಹೆಚ್ಚಿನ ವಿಚಾರಗಳನ್ನು ಕೇಳಿತಿಳಿದುಕೊಳ್ಳುವಂತೆ ನಮ್ಮನ್ನು ಪ್ರೇರಿಸುವುದು. ಮನೆಯವನು ತತ್ಕ್ಷಣವೇ ನೀಡುವ ಒಂದು ಹೇಳಿಕೆಯು, ಆ ಕ್ಷೇತ್ರದಲ್ಲಿ ಹೆಚ್ಚಿನವರ ಚಿಂತಾ ವಿಷಯವು ಅದೇ ಆಗಿದೆ ಎಂಬುದನ್ನು ತಿಳಿಯಪಡಿಸುವುದು ಮತ್ತು ಒಂದು ಸಾಕ್ಷಿಯನ್ನು ಕೊಡುವಂತೆ ಮಾರ್ಗವನ್ನು ತೆರೆಯುವುದು.
4 ಒಂದು ನಿರೂಪಣೆಯನ್ನು ತಯಾರಿಸುವುದು: ಸತತವಾಗಿ ಬದಲಾಗುತ್ತಿರುವ ಒಂದು ಲೋಕದಲ್ಲಿ ಕ್ಷೇತ್ರ ಸೇವೆಗಾಗಿ ತಯಾರಿಸಲು, ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯನ್ನು ನಾವು ಉಪಯೋಗಿಸಬಲ್ಲೆವು. ನಮ್ಮ ನಿರೂಪಣೆಯಲ್ಲಿ ಪ್ರಚಲಿತ ಘಟನೆಗಳನ್ನು ಹೇಗೆ ಒಳಸೇರಿಸುವುದು ಎಂಬುದರ ಸಹಾಯಕರ ಸಲಹೆಗಳನ್ನು ಅದರ 3ನೇ ಪುಟದಲ್ಲಿ, “ಪಾತಕ/ಸುರಕ್ಷೆ” ಮತ್ತು “ಪ್ರಚಲಿತ ಘಟನೆಗಳು” ಎಂಬ ಶೀರ್ಷಿಕೆಗಳಡಿ ಪಟ್ಟಿಮಾಡಲಾಗಿದೆ. ತದ್ರೀತಿಯ ಮಾಹಿತಿಯನ್ನು 2000 ಇಸವಿಯ ಅಕ್ಟೋಬರ್ ತಿಂಗಳ ನಮ್ಮ ರಾಜ್ಯದ ಸೇವೆಯ 7ನೇ ಪುಟದಲ್ಲಿ ಕಂಡುಕೊಳ್ಳಬಹುದು. ನಿಮ್ಮ ನಿರೂಪಣೆಯನ್ನು ತಯಾರಿಸುತ್ತಿರುವಾಗ, ಸೂಕ್ತವಾದ ಒಂದು ಶಾಸ್ತ್ರವಚನವನ್ನು ಒಳಗೂಡಿಸಲು ಮರೆಯದಿರಿ.
5 ನಮ್ಮ ಟೆರಿಟೊರಿಯಲ್ಲಿರುವವರ ಸತತವಾಗಿ ಬದಲಾಗುತ್ತಿರುವ ಚಿಂತೆಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತಾ, ನಮ್ಮ ಸುವಾರ್ತೆಯ ಪ್ರಸ್ತುತಪಡಿಸುವಿಕೆಯನ್ನು ಅದಕ್ಕನುಸಾರ ಹೊಂದಿಸಿಕೊಳ್ಳಬೇಕು. ಈ ರೀತಿಯಲ್ಲಿ, ಜನರ ಮನಸ್ಸನ್ನು ಸ್ಪರ್ಶಿಸುವಂಥ ಒಂದು ವಿಷಯವನ್ನು ನಾವು ಅವರೊಂದಿಗೆ ಮಾತಾಡುತ್ತೇವೆ. ಹೀಗೆ ನಾವು, ಯಾರು ತನ್ನ ಗುಣಗಳಲ್ಲಿ ಮತ್ತು ಮಟ್ಟಗಳಲ್ಲಿ ಎಂದೂ ಬದಲಾಗುವುದಿಲ್ಲವೋ ಆತನ ಕುರಿತು ತಿಳಿದುಕೊಳ್ಳುವಂತೆ ಹೆಚ್ಚು ಮಂದಿಗೆ ಸಹಾಯಮಾಡುತ್ತೇವೆ.—ಯಾಕೋ. 1:17.