ಯೆಹೋವನ ಒಳ್ಳೇತನವನ್ನು ಅನುಕರಿಸಿರಿ
1 ಒಂದು ಸುಂದರವಾದ ಸೂರ್ಯಾಸ್ತಮಾನವನ್ನು ಅಥವಾ ಒಂದು ಸ್ವಾದಿಷ್ಟಕರವಾದ ಊಟವನ್ನು ಆನಂದಿಸಿದ ನಂತರ, ಎಲ್ಲಾ ಒಳ್ಳೇತನದ ಮೂಲನಾಗಿರುವ ಯೆಹೋವನಿಗೆ ಉಪಕಾರ ಹೇಳುವಂತೆ ನಾವು ಪ್ರೇರಿಸಲ್ಪಡುವುದಿಲ್ಲವೋ? ಆತನ ಒಳ್ಳೇತನವು, ನಾವು ಆತನನ್ನು ಅನುಕರಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ. (ಕೀರ್ತ. 119:66, 68; ಎಫೆ. 5:1, NW) ನಾವು ಯಾವ ರೀತಿಯಲ್ಲಿ ಒಳ್ಳೇತನವೆಂಬ ಗುಣವನ್ನು ವ್ಯಕ್ತಪಡಿಸಬಲ್ಲೆವು?
2 ಅವಿಶ್ವಾಸಿಗಳ ಕಡೆಗೆ: ಯೆಹೋವನ ಒಳ್ಳೇತನವನ್ನು ಅನುಕರಿಸಸಾಧ್ಯವಿರುವ ಒಂದು ವಿಧವು, ನಂಬಿಕೆಯಲ್ಲಿ ಇಲ್ಲದವರ ಕಡೆಗೆ ನೈಜವಾದ ಚಿಂತನೆಯನ್ನು ತೋರಿಸುವ ಮೂಲಕವೇ ಆಗಿದೆ. (ಗಲಾ. 6:10) ಒಳ್ಳೇತನವನ್ನು ವ್ಯಾವಹಾರಿಕ ವಿಧಗಳಲ್ಲಿ ತೋರಿಸುವುದು, ಅವರು ಯೆಹೋವನ ಸಾಕ್ಷಿಗಳನ್ನು ಹೇಗೆ ವೀಕ್ಷಿಸುತ್ತಾರೋ ಅದರ ಮೇಲೆ ಮತ್ತು ನಾವು ಸಾರುವ ಸಂದೇಶದ ಮೇಲೆ ಪ್ರಭಾವವನ್ನು ಬೀರುತ್ತದೆ.
3 ಉದಾಹರಣೆಗೆ, ಸ್ಥಳಿಕ ಆಸ್ಪತ್ರೆಯ ಹೊರರೋಗಿಗಳ ಚಿಕಿತ್ಸಾಲಯದಲ್ಲಿ ವೈದ್ಯರನ್ನು ಭೇಟಿಯಾಗಲು ಕಾಯುತ್ತಿರುವಾಗ, ಒಬ್ಬ ಯುವ ಪಯನೀಯರ್ ಸಹೋದರನು ಸಾಲಿನಲ್ಲಿ ತನ್ನ ನಂತರ ನಿಂತಿದ್ದ ಒಬ್ಬಾಕೆ ವೃದ್ಧ ಸ್ತ್ರೀಯು ಬೇರೆಲ್ಲರಿಗಿಂತಲೂ ತುಂಬ ಅಸ್ವಸ್ಥರಾಗಿದ್ದದ್ದನ್ನು ಗಮನಿಸಿದನು. ವೈದ್ಯರನ್ನು ಭೇಟಿಯಾಗಲು ಅವನ ಸರದಿಯು ಬಂದಾಗ, ಅವನು ಆ ಸ್ತ್ರೀಯನ್ನು ಒಳಗೆ ಹೋಗಲು ಅನುಮತಿಸಿದನು. ಸಮಯಾನಂತರ, ಅವನು ಆಕೆಯನ್ನು ಒಂದು ಮಾರುಕಟ್ಟೆಯಲ್ಲಿ ಪುನಃ ಭೇಟಿಯಾದನು ಮತ್ತು ಆಕೆಗೆ ಅವನನ್ನು ನೋಡಿ ಬಹಳ ಸಂತೋಷವಾಯಿತು. ಈ ಮುಂಚೆ ಆಕೆ ಸುವಾರ್ತೆಗೆ ಕಿವಿಗೊಡುತ್ತಿರಲಿಲ್ಲವಾದರೂ, ಯೆಹೋವನ ಸಾಕ್ಷಿಗಳು ನಿಜವಾಗಿಯೂ ತಮ್ಮ ನೆರೆಯವರನ್ನು ಪ್ರೀತಿಸುತ್ತಾರೆ ಎಂಬುದು ನನಗೆ ಈಗ ತಿಳಿದಿದೆ ಎಂಬುದಾಗಿ ಆಕೆ ತಿಳಿಸಿದಳು. ಒಂದು ಕ್ರಮವಾದ ಬೈಬಲ್ ಅಧ್ಯಯನವು ಅವಳೊಂದಿಗೆ ಆರಂಭಿಸಲ್ಪಟ್ಟಿತು.
4 ನಮ್ಮ ಸಹೋದರರ ಕಡೆಗೆ: ನಮ್ಮ ಜೊತೆ ವಿಶ್ವಾಸಿಗಳಿಗೆ ಸಹಾಯಮಾಡಲು ನಮ್ಮನ್ನೇ ನೀಡಿಕೊಳ್ಳುವಾಗಲೂ ನಾವು ಯೆಹೋವನ ಒಳ್ಳೇತನವನ್ನು ಅನುಕರಿಸುತ್ತೇವೆ. ವಿಪತ್ಕಾಲಗಳಲ್ಲಿ, ನಮ್ಮ ಸಹೋದರರ ನೆರವಿಗೆ ಬರುವವರಲ್ಲಿ ನಾವು ಮೊದಲಿಗರಾಗಿರುತ್ತೇವೆ. ಕೂಟಗಳಿಗೆ ಹಾಜರಾಗಲು ವಾಹನ ಸೌಕರ್ಯದ ಅಗತ್ಯವಿರುವವರಿಗೆ ಸಹಾಯಮಾಡುವಾಗ, ಅಸ್ವಸ್ಥರನ್ನು ಭೇಟಿಮಾಡುವಾಗ, ಮತ್ತು ಸಭೆಯಲ್ಲಿ ನಮಗೆ ಸರಿಯಾಗಿ ಪರಿಚಯವಿಲ್ಲದವರಿಗೆ ನಮ್ಮ ವಾತ್ಸಲ್ಯವನ್ನು ವಿಸ್ತರಿಸುವಾಗ, ನಾವು ಇದೇ ರೀತಿಯ ಆತ್ಮವನ್ನು ತೋರಿಸುತ್ತೇವೆ.—2 ಕೊರಿಂ. 6:11-13; ಇಬ್ರಿ. 13:16.
5 ಯೆಹೋವನು ತನ್ನ ಒಳ್ಳೇತನವನ್ನು ತೋರಿಸುವ ಇನ್ನೊಂದು ವಿಧವು, ‘ಕ್ಷಮಿಸಲು ಸಿದ್ಧನಿರುವ’ ಮೂಲಕವೇ ಆಗಿದೆ. (ಕೀರ್ತ. 86:5, NW) ಆತನನ್ನು ಅನುಕರಿಸುತ್ತಾ, ಇತರರನ್ನು ಕ್ಷಮಿಸುವ ಮೂಲಕ ನಾವು ಒಳ್ಳೇತನದ ಕಡೆಗಿನ ನಮ್ಮ ಪ್ರೀತಿಯನ್ನು ತೋರಿಸಸಾಧ್ಯವಿದೆ. (ಎಫೆ. 4:32) ಇದು, ಜೊತೆ ವಿಶ್ವಾಸಿಗಳೊಂದಿಗಿನ ನಮ್ಮ ಸಹವಾಸವನ್ನು ‘ಒಳ್ಳೇದೂ, ರಮ್ಯವಾದದ್ದೂ’ ಆಗಿ ಮಾಡಲು ಸಹಾಯಮಾಡುತ್ತದೆ.—ಕೀರ್ತ. 133:1-3.
6 ಯೆಹೋವನ ಒಳ್ಳೇತನವು, ಆತನ ಸ್ತುತಿಯಲ್ಲಿ ನಾವು ತುಂಬಿತುಳುಕುವಂತೆ ಮತ್ತು ಆನಂದದಿಂದ ಪ್ರಜ್ವಲಿಸುವಂತೆ ಮಾಡಲಿ. ಅಷ್ಟುಮಾತ್ರವಲ್ಲದೆ, ನಮ್ಮ ಎಲ್ಲಾ ಕೃತ್ಯಗಳಲ್ಲಿ ನಾವು ಆತನ ಒಳ್ಳೇತನವನ್ನು ಅನುಕರಿಸಲು ಪ್ರಯತ್ನಿಸುವಂತೆ ಅದು ನಮ್ಮನ್ನು ಪ್ರೇರಿಸಲಿ.—ಕೀರ್ತ. 145:7; ಯೆರೆ. 31:12.