ದೇವರನ್ನು ಆರಾಧಿಸಿರಿ ಪುಸ್ತಕವನ್ನು ಅಧ್ಯಯನ ಮಾಡುವುದು
ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಎಂಬ ಪುಸ್ತಕವು, ಹೊಸಬರೊಂದಿಗೆ ಜ್ಞಾನ ಪುಸ್ತಕದ ಅಧ್ಯಯನವನ್ನು ಮುಗಿಸಿದ ತರುವಾಯ ಅಧ್ಯಯನಮಾಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ. ಸಭಾ ಪುಸ್ತಕ ಅಧ್ಯಯನದಲ್ಲಿ ಈ ಪ್ರಕಾಶನವನ್ನು ಪರಿಗಣಿಸುವುದು, ಶುಶ್ರೂಷೆಯಲ್ಲಿ ಈ ಸಾಧನವನ್ನು ಉಪಯೋಗಿಸಲು ನಮ್ಮನ್ನು ಸನ್ನದ್ಧಗೊಳಿಸುವುದು ಮತ್ತು ಯೆಹೋವನಿಗಾಗಿ ಹಾಗೂ ಆತನ ಸಂಸ್ಥೆಗಾಗಿರುವ ನಮ್ಮ ಪ್ರೀತಿ ಮತ್ತು ಗಣ್ಯತೆಯನ್ನು ಹೆಚ್ಚಿಸುವುದು. ದೇವರನ್ನು ಆರಾಧಿಸಿರಿ ಪುಸ್ತಕದ ಅಧ್ಯಯನದಿಂದ ನಾವು ಹೇಗೆ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?
ಅಧ್ಯಯನವನ್ನು ನಡೆಸುವುದು: ಪ್ರತಿ ವಾರ ನಾವು ಒಂದು ಇಡೀ ಅಧ್ಯಾಯವನ್ನು ಪರಿಗಣಿಸಲಿರುವುದರಿಂದ, ಪುಸ್ತಕ ಅಧ್ಯಯನ ಮೇಲ್ವಿಚಾರಕರು ಸಮಯವನ್ನು ವಿವೇಕಯುತವಾಗಿ ಪಾಲುಮಾಡುವುದು ಆವಶ್ಯಕವಾಗಿರುವುದು. ಆರಂಭದ ಪ್ಯಾರಗ್ರಾಫ್ಗಳಿಗಾಗಿ ಹೆಚ್ಚು ಸಮಯವನ್ನು ವ್ಯಯಿಸದೆ ಮುಂದೆ ಸಾಗಲು ಅವರು ತೀರ್ಮಾನಿಸಬಹುದು. ಏಕೆಂದರೆ ಹೆಚ್ಚು ಪ್ರಾಮುಖ್ಯವುಳ್ಳ ವಿಷಯಗಳು ಸಾಮಾನ್ಯವಾಗಿ ಅಧ್ಯಾಯದ ನಂತರದ ಭಾಗದಲ್ಲಿ ಬರುತ್ತವಾದ್ದರಿಂದ ಅವುಗಳಿಗಾಗಿ ಹೆಚ್ಚು ಸಮಯವನ್ನು ಬದಿಗಿರಿಸಬಹುದು. ಪ್ರತಿಯೊಂದು ಅಧ್ಯಯನದ ಅಂತ್ಯದಲ್ಲಿ ಪುನರ್ವಿಮರ್ಶೆಯ ಚೌಕವನ್ನು ಸಂಕ್ಷಿಪ್ತವಾಗಿ ಚರ್ಚಿಸುವುದು, ಮುಖ್ಯ ಅಂಶಗಳನ್ನು ಹಾಜರಿರುವವರು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಸಹಾಯಮಾಡುವುದು.
ಮಾರ್ಜಿನ್ನಿಂದ ಸ್ವಲ್ಪ ತಳ್ಳಿ ಕೊಡಲ್ಪಟ್ಟಿರುವ ಪ್ರಶ್ನೆಗಳು ದೇವರನ್ನು ಆರಾಧಿಸಿರಿ ಪುಸ್ತಕದ ಸುಮಾರು ಅರ್ಧಾಂಶ ಅಧ್ಯಾಯಗಳಲ್ಲಿ ಕಂಡುಬರುತ್ತವೆ. 48-9 ಪುಟಗಳಲ್ಲಿ ಅದರ ಒಂದು ಉದಾಹರಣೆಯನ್ನು ಕಂಡುಕೊಳ್ಳಬಹುದು. ಈ ಪ್ರಶ್ನೆಗಳನ್ನು ಪ್ಯಾರಗ್ರಾಫ್ನೊಟ್ಟಿಗೆ ಓದುವ ಆವಶ್ಯಕತೆಯಿರುವುದಿಲ್ಲ. ಇವುಗಳನ್ನು ಪುಸ್ತಕ ಅಧ್ಯಯನ ಗುಂಪಿನೊಂದಿಗೆ ಪರಿಗಣಿಸುತ್ತಿರುವಾಗ, ಸಮಯ ಅನುಮತಿಸಿದಂತೆ ಮೇಲ್ವಿಚಾರಕನು ಉದ್ಧರಿಸಲ್ಪಟ್ಟಿರುವ ಶಾಸ್ತ್ರವಚನಗಳನ್ನು ಓದಿಸಬೇಕು ಮತ್ತು ಚರ್ಚಿಸಬೇಕು.
ಮುನ್ತಯಾರಿ: ಅಧ್ಯಯನಕ್ಕಾಗಿ ಒಳ್ಳೆಯ ತಯಾರಿಯನ್ನು ಮಾಡುವುದರಲ್ಲಿ ಉತ್ತರಗಳಿಗೆ ಅಡಿಗೆರೆ ಹಾಕುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಉದ್ಧೃತ ಶಾಸ್ತ್ರವಚನಗಳ ಕುರಿತು ಪ್ರಾರ್ಥನಾಪೂರ್ವಕವಾಗಿ ಮನನಮಾಡುವುದು, ನಮ್ಮ ಹೇಳಿಕೆಗಳನ್ನು ಮಾತ್ರವಲ್ಲದೆ, ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳಲು ನಮಗೆ ಸಹಾಯಮಾಡುವುದು. (ಎಜ್ರ 7:10, NW) ಧಾರಾಳವಾದ ಹೇಳಿಕೆಗಳನ್ನು ನೀಡುವ ಮೂಲಕ, ಆದರೆ ಅದೇ ಸಮಯದಲ್ಲಿ ಬೇರೆಯವರಿಗೂ ಅವಕಾಶವನ್ನು ನೀಡುವ ಮೂಲಕ ನಾವು ಪ್ರೋತ್ಸಾಹ ವಿನಿಮಯಕ್ಕೆ ನೆರವು ನೀಡಬಲ್ಲೆವು.—ರೋಮಾ. 1:11, 12.
ದೇವರನ್ನು ಆರಾಧಿಸಿರಿ ಪುಸ್ತಕವನ್ನು ಅಧ್ಯಯನಮಾಡುವುದು, ಯೆಹೋವನ ಸಮೀಪಕ್ಕೆ ಬರಲು ನಮಗೆ ಸಹಾಯಮಾಡುವುದು ಮತ್ತು ಆತನನ್ನು ಆರಾಧಿಸುವುದರಲ್ಲಿ ಸಹೃದಯಿಗಳು ನಮ್ಮನ್ನು ಸೇರಿಕೊಳ್ಳುವಂತೆ ಸಹಾಯಮಾಡಲು ನಮ್ಮನ್ನು ಸನ್ನದ್ಧಗೊಳಿಸುವುದು. (ಕೀರ್ತ. 95:6; ಯಾಕೋ. 4:8) ಈ ಉತ್ತಮವಾದ ಆತ್ಮಿಕ ಒದಗಿಸುವಿಕೆಯಿಂದ ನಾವೆಲ್ಲರೂ ಪೂರ್ಣ ಪ್ರಯೋಜನವನ್ನು ಪಡೆಯುವಂತಾಗಲಿ.