ಯೆಹೋವನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದು
1. ಒಬ್ಬ ಸಹೋದರಿಯು ತನ್ನ ಆತ್ಮಿಕ ನಿಯತಕ್ರಮದ ಕುರಿತು ಏನನ್ನು ಗ್ರಹಿಸಿಕೊಂಡಳು?
1 “ನಾನು ಕೇವಲ ಕೂಟಗಳಿಗೆ ಹೋಗುತ್ತಾ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳತ್ತಾ ಕಳೆದ ಸುಮಾರು 20 ವರ್ಷಗಳಿಂದ ಸತ್ಯದಲ್ಲಿರುವುದೇನೋ ನಿಜ” ಎಂದು ಒಬ್ಬ ಕ್ರೈಸ್ತ ಸಹೋದರಿಯು ಒಪ್ಪಿಕೊಳ್ಳುತ್ತಾಳೆ. ಆದರೂ, ಅವಳು ಹೀಗೆ ಮುಂದುವರಿಸುತ್ತಾಳೆ: “ಈ ವಿಷಯಗಳು ಪ್ರಾಮುಖ್ಯವಾಗಿವೆಯಾದರೂ, ಕಷ್ಟಗಳು ಎದುರಾಗುವಾಗ ಕೇವಲ ಇವುಗಳು ಮಾತ್ರ ನನ್ನನ್ನು ಕಾಪಾಡಸಾಧ್ಯವಿಲ್ಲ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. . . . ನಾನು ನನ್ನ ಆಲೋಚನೆಯನ್ನು ಸರಿಪಡಿಸಬೇಕು ಮತ್ತು ಅರ್ಥಭರಿತವಾದ ಒಂದು ಅಧ್ಯಯನ ಕಾರ್ಯಕ್ರಮವನ್ನು ಆರಂಭಿಸಬೇಕು ಎಂಬುದನ್ನು ಈಗ ನಾನು ಅರ್ಥಮಾಡಿಕೊಂಡಿದ್ದೇನೆ. ಇದರಿಂದ ನಾನು ನಿಜವಾಗಿಯೂ ಯೆಹೋವನ ಬಗ್ಗೆ ತಿಳಿದುಕೊಳ್ಳಸಾಧ್ಯವಿದೆ ಮತ್ತು ಆತನನ್ನು ಪ್ರೀತಿಸಸಾಧ್ಯವಿದೆ ಹಾಗೂ ಆತನ ಮಗನು ನಮಗೆ ಏನನ್ನು ಕೊಟ್ಟಿದ್ದಾನೋ ಅದಕ್ಕಾಗಿ ಗಣ್ಯತೆಯನ್ನು ತೋರಿಸಸಾಧ್ಯವಿದೆ.”
2. ಯೆಹೋವನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆ?
2 ಯೆಹೋವನೊಂದಿಗೆ ನಿಕಟವಾದ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವುರಲ್ಲಿ ಪ್ರಯತ್ನವು ಅಗತ್ಯವಾಗಿದೆ. ಇದರಲ್ಲಿ ಕೇವಲ ಕ್ರೈಸ್ತ ಚಟುವಟಿಕೆಯ ಒಂದು ನಿಯತಕ್ರಮವನ್ನು ಹಿಂಬಾಲಿಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ನಾವು ಯೆಹೋವನೊಂದಿಗೆ ಕ್ರಮವಾಗಿ ಸಂವಾದಿಸಲು ತಪ್ಪುವುದಾದರೆ, ಆತನು ನಮಗೆ, ಸಂಪರ್ಕ ಕಳೆದುಕೊಂಡಿರುವ ಒಂದುಕಾಲದ ಸ್ನೇಹಿತನಂತೆ ಆಗಿಬಿಡುವನು. (ಪ್ರಕ. 2:4) ಯೆಹೋವನೊಂದಿಗೆ ಆಪ್ತತೆ ಬೆಳೆಸಿಕೊಳ್ಳಲು ವೈಯಕ್ತಿಕ ಬೈಬಲ್ ಅಧ್ಯಯನ ಮತ್ತು ಪ್ರಾರ್ಥನೆಯು ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ನಾವು ಪರಿಗಣಿಸೋಣ.—ಕೀರ್ತ. 25:14.
3. ದೇವರ ಸಮೀಪಕ್ಕೆ ಬರುವಂತೆ ಯಾವ ರೀತಿಯ ವೈಯಕ್ತಿಕ ಅಧ್ಯಯನವು ನಮಗೆ ಸಹಾಯಮಾಡುವುದು?
3 ಪ್ರಾರ್ಥನೆ ಮತ್ತು ಮನನವು ಅಗತ್ಯ: ಹೃದಯವನ್ನು ಪೋಷಿಸುವ ವೈಯಕ್ತಿಕ ಅಧ್ಯಯನದಲ್ಲಿ, ಅಧ್ಯಯನ ವಿಷಯಭಾಗದಲ್ಲಿ ಮುಖ್ಯ ಅಂಶಗಳಿಗೆ ಅಡಿಗೆರೆ ಹಾಕಿ ಉಲ್ಲೇಖಿಸಲ್ಪಟ್ಟಿರುವ ಶಾಸ್ತ್ರವಚನಗಳನ್ನು ತೆರೆದುನೋಡುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ವೈಯಕ್ತಿಕ ಅಧ್ಯಯನವೆಂಬುದು, ಯೆಹೋವನ ಮಾರ್ಗಗಳು, ಮಟ್ಟಗಳು, ಮತ್ತು ವ್ಯಕ್ತಿತ್ವದ ಕುರಿತು ಆ ಮಾಹಿತಿಯು ಏನನ್ನು ತಿಳಿಯಪಡಿಸುತ್ತದೆ ಎಂದು ಧ್ಯಾನಿಸುವುದೇ ಆಗಿದೆ. (ವಿಮೋ. 33:13) ಆತ್ಮಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು, ನಮ್ಮ ಭಾವನೆಗಳನ್ನು ಸ್ಪರ್ಶಿಸುತ್ತದೆ ಮತ್ತು ನಮ್ಮ ಸ್ವಂತ ಜೀವನಗಳ ಕುರಿತು ಯೋಚಿಸುವಂತೆ ಪ್ರೇರಿಸುತ್ತದೆ. (ಕೀರ್ತ. 119:35, 111) ಯೆಹೋವನ ಸಮೀಪಕ್ಕೆ ಬರಬೇಕು ಎಂಬ ಹೇತುವಿನೊಂದಿಗೆ ವೈಯಕ್ತಿಕ ಅಧ್ಯಯನವು ಮಾಡಲ್ಪಡಬೇಕು. (ಯಾಕೋ. 4:8) ಗಂಭೀರವಾದ ಅಧ್ಯಯನವು ಸಮಯ ಮತ್ತು ಸೂಕ್ತವಾದ ಸನ್ನಿವೇಶವನ್ನು ಕೇಳಿಕೊಳ್ಳುತ್ತದೆ, ಮತ್ತು ಕ್ರಮವಾಗಿ ಅಧ್ಯಯನ ಮಾಡಬೇಕಾದರೆ ಶಿಸ್ತು ಅಗತ್ಯ. (ದಾನಿ. 6:10) ನಿಮ್ಮ ಜೀವನವು ಒಂದುವೇಳೆ ತುಂಬ ಕಾರ್ಯನಿರತವಾಗಿರುವುದಾರೂ, ಯೆಹೋವನ ಅದ್ಭುತಕರ ಗುಣಗಳ ಕುರಿತು ಮನನ ಮಾಡಲು ನೀವು ಪ್ರತಿದಿನ ಸಮಯವನ್ನು ಬದಿಗಿರಿಸುತ್ತೀರೋ?—ಕೀರ್ತ. 119:147, 148; 143:5.
4. ವೈಯಕ್ತಿಕ ಅಧ್ಯಯನದಲ್ಲಿ ತೊಡಗುವದಕ್ಕೆ ಮುಂಚೆ ಪ್ರಾರ್ಥಿಸುವುದು ಹೇಗೆ ಯೆಹೋವನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವುದು?
4 ಅರ್ಥಗರ್ಭಿತ ವೈಯಕ್ತಿಕ ಅಧ್ಯಯನದಲ್ಲಿ ಹೃತ್ಪೂರ್ವಕ ಪ್ರಾರ್ಥನೆಯು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಭಾವನೆಗಳನ್ನು ಕೆರಳಿಸಿ “[ದೇವರಿಗೆ] ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಭಯದಿಂದಲೂ” ಅರ್ಪಿಸುವಂತೆ ನಮ್ಮನ್ನು ಪ್ರೇರಿಸಲು ನಮಗೆ ದೇವರಾತ್ಮದ ಅಗತ್ಯವಿದೆ. (ಇಬ್ರಿ. 12:28) ಆದುದರಿಂದ, ನಾವು ಪ್ರತಿಯೊಂದು ಅಧ್ಯಯನ ಅವಧಿಯನ್ನು ಯೆಹೋವನ ಬಳಿ ಆತನ ಆತ್ಮಕ್ಕಾಗಿ ಬೇಡುತ್ತಾ ಆರಂಭಿಸಬೇಕು. (ಮತ್ತಾ. 5:3) ನಾವು ಶಾಸ್ತ್ರಗಳ ಕುರಿತು ಪರ್ಯಾಲೋಚಿಸುವಾಗ ಮತ್ತು ಯೆಹೋವನ ಸಂಸ್ಥೆಯಿಂದ ಒದಗಿಸಲ್ಪಡುವ ಅಧ್ಯಯನ ಸಹಾಯಕಗಳನ್ನು ಉಪಯೋಗಿಸುವಾಗ, ನಮ್ಮ ಹೃದಯವನ್ನು ಯೆಹೋವನ ಮುಂದೆ ಬಿಚ್ಚಿಡುತ್ತೇವೆ. (ಕೀರ್ತ. 62:8) ಈ ರೀತಿಯಲ್ಲಿ ಅಧ್ಯಯನವನ್ನು ಕೈಗೊಳ್ಳುವುದು ನಮ್ಮ ಆರಾಧನೆಯ ಒಂದು ಅಭಿವ್ಯಕ್ತಿ, ಮತ್ತು ಹೀಗೆ ಯೆಹೋವನಿಗಾಗಿರುವ ನಮ್ಮ ಭಕ್ತಿಯನ್ನು ನಾವು ವ್ಯಕ್ತಪಡಿಸುತ್ತೇವೆ ಹಾಗೂ ಆತನೊಂದಿಗಿನ ನಮ್ಮ ಅಂಟಿಕೆಯನ್ನು ಬಲಗೊಳಿಸುತ್ತೇವೆ.—ಯೂದ 20, 21.
5. ನಾವು ಪ್ರತಿದಿನ ದೇವರ ವಾಕ್ಯದ ಕುರಿತು ಮನನ ಮಾಡುವುದು ಏಕೆ ಪ್ರಾಮುಖ್ಯವಾಗಿದೆ?
5 ಯಾವುದೇ ಸಂಬಂಧದ ವಿಷಯದಲ್ಲಿ ಸತ್ಯವಾಗಿರುವಂತೆಯೇ, ಯೆಹೋವನೊಂದಿಗಿನ ನಮ್ಮ ಸಂಬಂಧವು ನಮ್ಮ ಜೀವಮಾನವಿಡೀ ಬೆಳೆಯುತ್ತಾ ಇರಬೇಕಾದರೆ ಅದನ್ನು ನಾವು ಸದಾ ಪೋಷಿಸುತ್ತಾ ಇರಬೇಕು. ಆದುದರಿಂದ, ನಾವು ದೇವರಿಗೆ ಸಮೀಪವಾಗುವುದಾದರೆ ಆತನು ನಮ್ಮ ಸಮೀಪಕ್ಕೆ ಬರುವನು ಎಂಬುದನ್ನು ತಿಳಿದವರಾಗಿ ಪ್ರತಿದಿನ ದೇವರ ಸಮೀಪಕ್ಕೆ ಬರಲು ಸಮಯವನ್ನು ಬದಿಗಿರಿಸೋಣ.—ಕೀರ್ತ. 1:2, 3; ಎಫೆ. 5:15, 16.