ನಿಮ್ಮನ್ನು ಒಳಗೊಂಡಿರುವ ಕುದುರೇ ದಂಡಿನ ಆಕ್ರಮಣ
1, 2. ಪ್ರಕಟನೆ 9:13-19ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನಾತ್ಮಕ ದರ್ಶನದ ನೆರವೇರಿಕೆಯಲ್ಲಿ ಇಂದು ದೇವರ ಸೇವಕರು ಹೇಗೆ ಒಳಗೂಡಿದ್ದಾರೆ?
1 ‘ಆರನೆಯ ದೇವದೂತನು ತುತೂರಿಯನ್ನೂದಿದನು.’ ಅದನ್ನು ಹಿಂಬಾಲಿಸುತ್ತಾ, ‘ಇಪ್ಪತ್ತುಕೋಟಿ’ ಸಂಖ್ಯೆಯ ‘ಕುದುರೇ ದಂಡಿನವರು’ ಗುಡುಗಿನೋಪಾದಿಯಲ್ಲಿ ಆರ್ಭಟಿಸಿದರು. ಇದು ಯಾವುದೇ ಸಾಧಾರಣ ಮಿಲಿಟರಿ ಪಡೆಯಲ್ಲ. “ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು.” ಅವುಗಳ ಬಾಯಿಂದ ಬೆಂಕಿ, ಹೊಗೆ, ಮತ್ತು ಗಂಧಕಗಳು ಹೊರಟವು, ಮತ್ತು ಅವುಗಳ “ಬಾಲಗಳು . . . ಸರ್ಪಗಳ ಹಾಗೆ ಇದ್ದವು.” ಈ ಸಾಂಕೇತಿಕ ಕುದುರೇ ದಂಡಿನ ಆಕ್ರಮಣದ ಪರಿಣಾಮವು ಧ್ವಂಸಕಾರಕವಾಗಿತ್ತು. (ಪ್ರಕ. 9:13-19) ಈ ಗಮನಾರ್ಹವಾದ ಪ್ರವಾದನಾತ್ಮಕ ದರ್ಶನದಲ್ಲಿ ನೀವು ಹೇಗೆ ಒಳಗೂಡಿದ್ದೀರಿ ಎಂಬುದು ನಿಮಗೆ ಗೊತ್ತೋ?
2 ಅಭಿಷಿಕ್ತ ಉಳಿಕೆಯವರು ಮತ್ತು ಅವರ ಸಂಗಡಿಗರಾದ ಬೇರೆ ಕುರಿಗಳು, ಐಕ್ಯದಿಂದ ದೇವರ ನ್ಯಾಯತೀರ್ಪುಗಳನ್ನು ಪ್ರಕಟಪಡಿಸುತ್ತಾರೆ. ಇದರ ಫಲಿತಾಂಶವಾಗಿ ಕ್ರೈಸ್ತಪ್ರಪಂಚದ ಆಧ್ಯಾತ್ಮಿಕ ಮೃತ ಸ್ಥಿತಿಯು ಸಂಪೂರ್ಣವಾಗಿ ಬಯಲಿಗೆಳೆಯಲ್ಪಡುತ್ತದೆ. ದೇವರ ಸೇವಕರ ಶುಶ್ರೂಷೆಯು ಏಕೆ ಇಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಎತ್ತಿತೋರಿಸುವ ಪ್ರವಾದನಾತ್ಮಕ ದರ್ಶನದ ಎರಡು ಅಂಶಗಳನ್ನು ಮಾತ್ರ ನಾವು ಪರಿಶೀಲಿಸೋಣ.
3. ದೇವರ ಸಂದೇಶವನ್ನು ಪರಿಣಾಮಕಾರಿಯಾಗಿ ಮಾತನಾಡಲು ನೀವು ಯಾವ ತರಬೇತಿಯನ್ನು ಪಡೆದುಕೊಂಡಿದ್ದೀರಿ?
3 ದೇವರ ಸಂದೇಶವನ್ನು ಪ್ರಕಟಪಡಿಸಲು ಶಿಕ್ಷಿತರು ಮತ್ತು ಸುಸಜ್ಜಿತರು: ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಇತರ ಸಭಾ ಕೂಟಗಳ ಮೂಲಕ, ದೇವರ ಶುಶ್ರೂಷಕರು ದೇವರ ಸಂದೇಶವನ್ನು ಅಧಿಕಾರದೊಂದಿಗೆ ಮಾತನಾಡುವಂತೆ ತರಬೇತುಗೊಳಿಸಲ್ಪಡುತ್ತಾರೆ. ಅವರು ಯೇಸು ಮತ್ತು ಅವನ ಶಿಷ್ಯರ ಅನುಕರಣೆಯಲ್ಲಿ, ಅರ್ಹರಾದ ವ್ಯಕ್ತಿಗಳಿಗಾಗಿ ಹುಡುಕುತ್ತಾ ಎಲ್ಲೆಲ್ಲಾ ಜನರು ಕಂಡುಬರುತ್ತಾರೋ ಅಲ್ಲೆಲ್ಲಾ ಸಾರುತ್ತಾ ಹೋಗುತ್ತಾರೆ. (ಮತ್ತಾ. 10:11; ಮಾರ್ಕ 1:16; ಲೂಕ 4:15; ಅ. ಕೃ. 20:18-20) ಈ ರೀತಿಯ ಬೈಬಲ್ ಆಧಾರಿತ ಸಾರುವಿಕೆಯು ಎಷ್ಟು ಪರಿಣಾಮಕಾರಿಯಾಗಿ ಪರಿಣಮಿಸಿದೆ!
4. ತಮ್ಮ ಕೆಲಸವನ್ನು ಪೂರೈಸಲಿಕ್ಕಾಗಿ ಅನೇಕ ಪ್ರಚಾರಕರಿಗೆ ಯಾವ ಸಾಧನವು ಲಭ್ಯವಿದೆ?
4 ದೈವಿಕ ಸಾರುವ ನೇಮಕವನ್ನು ಪೂರೈಸುವುದರಲ್ಲಿ ಕ್ರೈಸ್ತ ಶುಶ್ರೂಷಕರಿಂದ ದಶಲಕ್ಷಾಂತರ ಬೈಬಲ್ಗಳು, ಪುಸ್ತಕಗಳು, ಬ್ರೋಷರ್ಗಳು, ಮತ್ತು ಪತ್ರಿಕೆಗಳು ವಿತರಿಸಲ್ಪಟ್ಟಿವೆ. ಈ ಪ್ರಕಾಶನಗಳನ್ನು ಸುಮಾರು 400 ಭಾಷೆಗಳಲ್ಲಿ ಒದಗಿಸಲಾಗಿದೆ, ಇವು ವೈವಿಧ್ಯವಾದ ವಿಷಯವಸ್ತುಗಳನ್ನು ಆವರಿಸುತ್ತವೆ ಮತ್ತು ವಿಭಿನ್ನ ಜನರನ್ನು ಆಕರ್ಷಿಸುವ ವಿಧಾನಗಳನ್ನು ಉಪಯೋಗಿಸುತ್ತವೆ. ನೀವು ಈ ಉಪಕರಣಗಳ ಪರಿಣಾಮಕಾರಿ ಉಪಯೋಗವನ್ನು ಮಾಡುತ್ತಿದ್ದೀರೋ?
5, 6. ಯೆಹೋವನ ಜನರಿಗೆ ಸ್ವರ್ಗೀಯ ಬೆಂಬಲವಿದೆ ಎಂಬುದನ್ನು ಯಾವುದು ಸೂಚಿಸುತ್ತದೆ?
5 ಸ್ವರ್ಗೀಯ ಮಾರ್ಗದರ್ಶನ ಮತ್ತು ಬೆಂಬಲ: ಆ ಪ್ರವಾದನಾತ್ಮಕ ದರ್ಶನವು, ಸಾಂಕೇತಿಕ ಕುದುರೇ ದಂಡಿನಿಂದ ಪ್ರತಿನಿಧಿಸಲ್ಪಟ್ಟಿರುವ ಚಟುವಟಿಕೆಗೆ ದೈವಿಕ ಬೆಂಬಲವಿದೆ ಎಂಬುದನ್ನೂ ಸ್ಪಷ್ಟಪಡಿಸುತ್ತದೆ. (ಪ್ರಕ. 9:13-15) ಭೌಗೋಳಿಕ ಸಾರುವ ಕೆಲಸವು, ಮಾನವ ವಿವೇಕದಿಂದಲೋ ಬಲದಿಂದಲೋ ಅಲ್ಲ, ಬದಲಿಗೆ ದೇವರ ಆತ್ಮದಿಂದಲೇ ಸಾಧಿಸಲ್ಪಡುತ್ತದೆ. (ಜೆಕ. 4:6) ಈ ಕೆಲಸವನ್ನು ಮಾರ್ಗದರ್ಶಿಸುವಂತೆ ಯೆಹೋವನು ದೇವದೂತರನ್ನು ಉಪಯೋಗಿಸುತ್ತಾನೆ. (ಪ್ರಕ. 14:6) ಹೀಗೆ, ಯೆಹೋವನು ತನ್ನ ಕಡೆಗೆ ನಮ್ರರನ್ನು ಸೆಳೆಯಲಿಕ್ಕಾಗಿ, ತನ್ನ ಮಾನವ ಸಾಕ್ಷಿಗಳ ಪ್ರಯತ್ನಗಳೊಂದಿಗೆ ಸ್ವರ್ಗೀಯ ಬೆಂಬಲವನ್ನು ಕೊಡುತ್ತಾನೆ.—ಯೋಹಾ. 6:45, 65.
6 ದೇವರ ಸಂದೇಶವನ್ನು ಪ್ರಕಟಪಡಿಸಲು ಶಿಕ್ಷಿತರೂ ಸುಸಜ್ಜಿತರೂ ಆಗಿರುವ ಮತ್ತು ದೇವದೂತರ ಮಾರ್ಗದರ್ಶನದ ಕೆಳಗೆ ಕೆಲಸಮಾಡುತ್ತಿರುವ ಯೆಹೋವನ ಜನರು ಪ್ರತಿಭಟಿಸಲಾಗದ ಒಂದು ಪಡೆಯಂತಿದ್ದಾರೆ. ಈ ಪುಳಕಿತಗೊಳಿಸುವ ಪ್ರವಾದನಾತ್ಮಕ ದರ್ಶನವನ್ನು ನೆರವೇರಿಸುವುದರಲ್ಲಿ ನಾವು ನಮ್ಮ ಪಾತ್ರವನ್ನು ನಿರ್ವಹಿಸುವುದನ್ನು ಮುಂದುವರಿಸೋಣ.