‘ನಂಬಿಕೆಯ ವಾಕ್ಯಗಳಿಂದ’ ಪೋಷಿಸಲ್ಪಡುವುದು
1 ದೈವಭಕ್ತಿಯ ಜೀವನವನ್ನು ಬೆನ್ನಟ್ಟುವುದು ನಮ್ಮಿಂದ ಶತಪ್ರಯತ್ನವನ್ನು ಕೇಳಿಕೊಳ್ಳುತ್ತದೆ. (1 ತಿಮೊ. 4:7-10) ನಮ್ಮ ಸ್ವಂತ ಶಕ್ತಿಯಿಂದ ನಾವು ಇಂಥ ಮಾರ್ಗವನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿರುವಾಗ ಬೇಗನೆ ಬಳಲಿಹೋಗುವೆವು ಮತ್ತು ಮುಗ್ಗರಿಸಿ ಬೀಳುವೆವು. (ಯೆಶಾ. 40:29-31) ನಾವು ಯೆಹೋವನಿಂದ ಶಕ್ತಿಯನ್ನು ಪಡೆದುಕೊಳ್ಳಬಲ್ಲ ಒಂದು ವಿಧವು, ‘ನಂಬಿಕೆಯ ವಾಕ್ಯಗಳಲ್ಲಿ ಅಭ್ಯಾಸಹೊಂದುವ’ ಅಥವಾ ಅವುಗಳಿಂದ ಪೋಷಿಸಲ್ಪಡುವ ಮೂಲಕವೇ.—1 ತಿಮೊ. 4:6.
2 ಸತ್ವಭರಿತ ಆಧ್ಯಾತ್ಮಿಕ ಆಹಾರ: ತನ್ನ ವಾಕ್ಯ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಯೆಹೋವನು ಸತ್ವಭರಿತ ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತಾನೆ. (ಮತ್ತಾ. 24:45) ಇದರಿಂದ ಪ್ರಯೋಜನ ಹೊಂದಲಿಕ್ಕಾಗಿ ನಾವೇನನ್ನು ಮಾಡಬೇಕಾಗಿದೆಯೋ ಅದನ್ನು ಮಾಡುತ್ತಿದ್ದೇವೋ? ನಾವು ಬೈಬಲನ್ನು ದಿನಂಪ್ರತಿ ಓದುತ್ತೇವೋ? ವೈಯಕ್ತಿಕ ಅಧ್ಯಯನ ಮತ್ತು ಧ್ಯಾನಕ್ಕಾಗಿ ನಾವು ಒಂದು ನಿಶ್ಚಿತ ಸಮಯವನ್ನು ಬದಿಗಿರಿಸಿದ್ದೇವೋ? (ಕೀರ್ತ. 1:2, 3) ಇಂತಹ ಆರೋಗ್ಯಕರ ಆಧ್ಯಾತ್ಮಿಕ ಆಹಾರಪಥ್ಯವು ನಮ್ಮಲ್ಲಿ ನವಚೈತನ್ಯವನ್ನು ತುಂಬಿಸಿ ಸೈತಾನನ ಲೋಕದಿಂದ ಬರುವ ದುರ್ಬಲಗೊಳಿಸುವ ಪ್ರಭಾವಗಳಿಂದ ನಮ್ಮನ್ನು ರಕ್ಷಿಸುತ್ತದೆ. (1 ಯೋಹಾ. 5:19) ನಾವು ನಮ್ಮ ಮನಸ್ಸನ್ನು ಹಿತಕರವಾದ ವಿಷಯಗಳಿಂದ ತುಂಬಿಸಿ ಅವನ್ನು ನಮ್ಮ ಜೀವಿತದಲ್ಲಿ ಅನ್ವಯಿಸುವುದಾದರೆ ಯೆಹೋವನು ನಮ್ಮೊಂದಿಗಿರುವನು.—ಫಿಲಿ. 4:8, 9.
3 ಯೆಹೋವನು ಸಭಾ ಕೂಟಗಳ ಮೂಲಕವಾಗಿಯೂ ನಮ್ಮನ್ನು ಬಲಪಡಿಸುತ್ತಾನೆ. (ಇಬ್ರಿ. 10:24, 25) ಇಂತಹ ಒಕ್ಕೂಟಗಳಲ್ಲಿ ನಾವು ಕಂಡುಕೊಳ್ಳುವ ಆಧ್ಯಾತ್ಮಿಕ ಉಪದೇಶ ಮತ್ತು ಹಿತಕರ ಸಹವಾಸವು ಪರೀಕ್ಷೆಗಳ ಎದುರಿನಲ್ಲಿ ದೃಢವಾಗಿ ನಿಲ್ಲುವಂತೆ ನಮ್ಮನ್ನು ಬಲಪಡಿಸುತ್ತದೆ. (1 ಪೇತ್ರ 5:9, 10) ಒಬ್ಬ ಕ್ರೈಸ್ತ ಯುವತಿಯು ಹೇಳಿದ್ದು: “ನಾನು ಇಡೀ ದಿನ ಶಾಲೆಯಲ್ಲಿರುತ್ತೇನೆ, ಮತ್ತು ಇದರಿಂದ ನಾನು ಬಳಲಿಹೋಗುತ್ತೇನೆ. ಆದರೆ ಕೂಟಗಳು, ಮರುಭೂಮಿಯಲ್ಲಿ ಓಅಸಿಸ್ನಂತಿರುತ್ತವೆ. ಮುಂದಿನ ದಿನವನ್ನು ಶಾಲೆಯಲ್ಲಿ ಕಳೆಯಲು ನಾನು ಆಗ ಚೈತನ್ಯ ಪಡೆಯುತ್ತೇನೆ.” ಕೂಟಗಳಿಗೆ ಹಾಜರಾಗಲು ನಾವು ಮಾಡುವ ಎಲ್ಲ ಪ್ರಯತ್ನಕ್ಕಾಗಿ ನಾವೆಷ್ಟು ಆಶೀರ್ವದಿಸಲ್ಪಡುತ್ತೇವೆ!
4 ಸತ್ಯವನ್ನು ಪ್ರಕಟಪಡಿಸುವುದು: ಇತರರಿಗೆ ಸಾರುವುದು ಯೇಸುವಿಗೆ ಆಹಾರದಂತಿತ್ತು. ಅದು ಅವನಲ್ಲಿ ಶಕ್ತಿಯನ್ನು ತುಂಬಿಸುತ್ತಿತ್ತು. (ಯೋಹಾ. 4:32-34) ತದ್ರೀತಿಯಲ್ಲಿ, ನಾವು ದೇವರ ಅದ್ಭುತಕರ ವಾಗ್ದಾನಗಳ ಕುರಿತು ಇತರರೊಂದಿಗೆ ಮಾತಾಡುವಾಗ ನಮ್ಮಲ್ಲಿಯೂ ನವಚೈತನ್ಯವು ತುಂಬಿಸಲ್ಪಡುತ್ತದೆ. ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗಿ ಉಳಿಯುವುದು ಸಹ, ಶೀಘ್ರವೇ ಬರಲಿರುವ ರಾಜ್ಯ ಮತ್ತು ಅದರ ಆಶೀರ್ವಾದಗಳ ಮೇಲೆ ನಮ್ಮ ಹೃದಮನಗಳನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ. ಇದು ನಮ್ಮಲ್ಲಿ ನಿಜವಾಗಿಯೂ ಚೈತನ್ಯವನ್ನು ತುಂಬಿಸುತ್ತದೆ.—ಮತ್ತಾ. 11:28-30.
5 ಯೆಹೋವನು ಇಂದು ತನ್ನ ಜನರಿಗೆ ಒದಗಿಸುತ್ತಿರುವ ಸತ್ವಭರಿತ ಆಧ್ಯಾತ್ಮಿಕ ಪೋಷಣೆಯಿಂದ ಪ್ರಯೋಜನ ಹೊಂದುತ್ತಿರುವ ನಾವು ಎಷ್ಟು ಆಶೀರ್ವದಿಸಲ್ಪಟ್ಟಿದ್ದೇವೆ! ನಾವು ಆತನನ್ನು ಸಂಕೀರ್ತಿಸುತ್ತಾ ಸದಾ ಹರ್ಷಧ್ವನಿಗೈಯೋಣ.—ಯೆಶಾ. 65:13, 14.