ಯೆಹೋವನ ಪ್ರೀತಿಪೂರ್ವಕ ದಯೆಗಾಗಿ ಆತನಿಗೆ ಕೃತಜ್ಞತೆ ಸಲ್ಲಿಸಿರಿ
ಮಾರ್ಚ್ 24ರಂದು ಕ್ರಿಸ್ತನ ಮರಣವು ಸ್ಮರಿಸಲ್ಪಡುವುದು
1. ಯೆಹೋವನು ನಮಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿರುವುದು ಹೇಗೆ?
1 “ಅವರು ಯೆಹೋವನ [ಪ್ರೀತಿಪೂರ್ವಕ ದಯೆಗೋಸ್ಕರವೂ] ಆತನು ಮಾನವರಿಗಾಗಿ ನಡಿಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ,” ಅಥವಾ ಆತನಿಗೆ ಕೃತಜ್ಞತೆ ಸಲ್ಲಿಸಲಿ ಎಂದು ಕೀರ್ತನೆಗಾರನು ಉದ್ಗರಿಸಿದನು. (ಕೀರ್ತ. 107:8) ಯೆಹೋವನ ಪ್ರೀತಿಪೂರ್ವಕ ದಯೆಯು, ಆತನಿಗೆ ಜನರ ಕಡೆಗಿರುವ ಕೋಮಲ ಪರಿಗಣನೆಗಿಂತಲೂ ಹೆಚ್ಚಿನದ್ದಾಗಿದೆ. ಇದನ್ನು ಈ ಪ್ರೇರಿತ ಸ್ತೋತ್ರದಲ್ಲಿ ಸ್ಪಷ್ಟಪಡಿಸಲಾಗಿದೆ: “ಯೆಹೋವನೇ . . . ನಿನ್ನ [ಪ್ರೀತಿಪೂರ್ವಕ ದಯೆಯು] ನನಗೆ ಆಧಾರವಾಯಿತು.” (ಕೀರ್ತ. 94:18) ನಮಗಾಗಿ ತನ್ನ ಏಕಜಾತ ಪುತ್ರನನ್ನು ಕೊಡುವ ಮೂಲಕ ಯೆಹೋವನು ಎಂತಹ ಅಸಾಧಾರಣವಾದ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು!—1 ಯೋಹಾ. 4:9, 10.
2. ನಾವು ಯೆಹೋವನಿಗೆ ನಮ್ಮ ಕೃತಜ್ಞತೆಯನ್ನು ಹೇಗೆ ತೋರಿಸಸಾಧ್ಯವಿದೆ?
2 ಕ್ರಿಸ್ತನ ಮರಣದ ಜ್ಞಾಪಕಾಚರಣೆಯು ಹತ್ತರಿಸುತ್ತಿರುವಾಗ, ‘[ಪ್ರೀತಿಪೂರ್ವಕ ದಯೆಯ] ದೇವರಿಗೆ’ ನಾವು ಹೇಗೆ ಕೃತಜ್ಞತೆ ಸಲ್ಲಿಸಬಲ್ಲೆವು? (ಕೀರ್ತ. 59:17) ಭೂಮಿಯ ಮೇಲಿನ ಯೇಸುವಿನ ಅಂತಿಮ ದಿನಗಳ ಕುರಿತು ಧ್ಯಾನಿಸಲು ನಾವೆಲ್ಲರೂ ಸಮಯವನ್ನು ಬದಿಗಿರಿಸಲು ಬಯಸುವೆವು. (ಕೀರ್ತ. 143:5) ಜ್ಞಾಪಕಾಚಾರಣೆಗೆಂದು, ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2005ರಲ್ಲಿ ಶೆಡ್ಯೂಲ್ಮಾಡಲ್ಪಟ್ಟಿರುವ ವಿಶೇಷ ಬೈಬಲ್ ವಾಚನವನ್ನು ಮಾಡುವುದು ಸಹ ಪ್ರಯೋಜನದಾಯಕವಾಗಿರುವುದು ಮತ್ತು ಸಾಧ್ಯವಿದ್ದಲ್ಲಿ ಇತರ ಬೈಬಲಾಧಾರಿತ ಪ್ರಕಾಶನಗಳೊಂದಿಗೆ ಅತ್ಯಂತ ಮಹಾನ್ ಪುರುಷ ಪುಸ್ತಕದಲ್ಲಿನ 112-16ನೇ ಅಧ್ಯಾಯಗಳನ್ನು ಓದಬಹುದು ಹಾಗೂ ಸಂಶೋಧನೆಮಾಡಬಹುದು. ನೀವು ಓದುವ ಭಾಗಗಳ ಕುರಿತು ಮೆಲುಕುಹಾಕಿರಿ, ಮತ್ತು ಅವುಗಳಲ್ಲಿ ಆಸಕ್ತರಾಗಿರಿ. (1 ತಿಮೊ. 4:15) ದೇವರ ವಾಕ್ಯದ ಪ್ರಾರ್ಥನಾಪೂರ್ವಕ ಅಧ್ಯಯನವು ನಮ್ಮ ಹೃದಯವನ್ನು ಪೋಷಿಸಿ ಬಲಪಡಿಸುವುದು ಮಾತ್ರವಲ್ಲದೆ, ಯೆಹೋವನಿಗಾಗಿರುವ ನಮ್ಮ ಪ್ರೀತಿಯನ್ನೂ ವ್ಯಕ್ತಪಡಿಸುತ್ತದೆ.—ಮತ್ತಾ. 22:37.
3, 4. (ಎ) ಲೈಬಿರೀಯದ ನಮ್ಮ ಸಹೋದರರ ಮನೋಭಾವವನ್ನು ನಾವು ಹೇಗೆ ಅನುಕರಿಸಬಲ್ಲೆವು? (ಬಿ) ನೀವು ಜ್ಞಾಪಕಾಚರಣೆಗೆ ಯಾರನ್ನು ಆಮಂತ್ರಿಸಲು ಯೋಜಿಸುತ್ತೀರಿ?
3 ದೇವರಿಗೆ ಕೃತಜ್ಞತೆ ಸಲ್ಲಿಸುವಂತೆ ಇತರರನ್ನು ಪ್ರೇರಿಸಿರಿ: ಕಳೆದ ವರ್ಷ, ಲೋಕವ್ಯಾಪಕವಾಗಿ 1,67,60,607 ಮಂದಿ ಜ್ಞಾಪಕಾಚರಣೆಗೆ ಹಾಜರಾದರು. ಲೈಬಿರೀಯದಲ್ಲಿರುವ ಒಂದು ಹಳ್ಳಿಯಲ್ಲಿ, ಸಹೋದರರು ಪಟ್ಟಣದ ಮುಖ್ಯಸ್ಥನಿಗೆ ಒಂದು ಪತ್ರವನ್ನು ಬರೆದು, ಅವನ ಪಟ್ಟಣದಲ್ಲಿ ತಾವು ಕರ್ತನ ಸಂಧ್ಯಾ ಭೋಜನವನ್ನು ಆಚರಿಸಲು ಬಯಸುತ್ತೇವೆ ಎಂದು ತಿಳಿಸಿದರು. ಇದಕ್ಕಾಗಿ ಸ್ಥಳಿಕ ಫುಟ್ಬಾಲ್ ಮೈದಾನವನ್ನು ಉಪಯೋಗಿಸಿಕೊಳ್ಳುವಂತೆ ಆ ಮುಖ್ಯಸ್ಥನು ಅನುಮತಿಕೊಟ್ಟನು ಮತ್ತು ಇದರ ಕುರಿತು ಆ ಇಡೀ ಕ್ಷೇತ್ರದಲ್ಲಿ ಒಂದು ಪ್ರಕಟನೆಯನ್ನು ಹೊರಡಿಸಿ, ಈ ಸಂದರ್ಭಕ್ಕೆ ಹಾಜರಾಗುವಂತೆ ಜನರಿಗೆ ಆಮಂತ್ರಣವನ್ನು ಕೊಟ್ಟನು. ಆ ಹಳ್ಳಿಯಲ್ಲಿ ಕೇವಲ ಐದು ಪ್ರಚಾರಕರು ಇದ್ದರೂ, ಜ್ಞಾಪಕಾಚರಣೆಯ ಹಾಜರಿಯು 636 ಆಗಿತ್ತು!
4 ತದ್ರೀತಿಯಲ್ಲಿ, ನಾವು ಸಹ ಜ್ಞಾಪಕಾಚರಣೆಯ ಸಮಾರಂಭಕ್ಕೆ ನಮ್ಮೊಂದಿಗೆ ಕೂಡಿಕೊಳ್ಳುವಂತೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸಹಾಯಮಾಡಲು ಬಯಸುತ್ತೇವೆ. ನೀವು ಆಮಂತ್ರಿಸಲು ಬಯಸುವವರ ಒಂದು ಪಟ್ಟಿಯನ್ನು ಏಕೆ ಮಾಡಬಾರದು? ನಾವು ಮುದ್ರಿತ ಜ್ಞಾಪಕಾಚರಣೆಯ ಕರಪತ್ರಗಳನ್ನು ಸಹ ಉಪಯೋಗಿಸಬಹುದು. ಆಚರಣೆಯ ಸಮಯ ಮತ್ತು ಸ್ಥಳವನ್ನು ಕರಪತ್ರದಲ್ಲಿ ಟೈಪ್ ಮಾಡಿರಿ ಅಥವಾ ನೀಟಾಗಿ ಬರೆಯಿರಿ, ಮತ್ತು ನೀವು ಆಮಂತ್ರಿಸುವ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಪ್ರತಿಯನ್ನು ಕೊಡಿರಿ. ಮಾರ್ಚ್ 24 ಹತ್ತಿರ ಬರುತ್ತಿರುವಾಗ, ಎಲ್ಲರಿಗೂ ಒಂದು ಮರುಜ್ಞಾಪನವನ್ನು ಕೊಡಿರಿ ಮತ್ತು ಯಾವುದೇ ಏರ್ಪಾಡುಗಳನ್ನು ಮಾಡಲಿಕ್ಕಿರುವುದಾದರೆ ಅದರ ಕುರಿತು ಚರ್ಚಿಸಿರಿ.
5. ಬೈಬಲ್ ವಿದ್ಯಾರ್ಥಿಗಳು ಹಾಜರಾಗುವಂತೆ ನಾವು ಹೇಗೆ ಪ್ರೋತ್ಸಾಹಿಸಬಲ್ಲೆವು?
5 ಇನ್ನೂ ಕೂಟಗಳಿಗೆ ಹಾಜರಾಗಿ ಅದರಿಂದ ಪ್ರಯೋಜನವನ್ನು ಹೊಂದದಿರುವ ಬೈಬಲ್ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಅತಿ ಹೆಚ್ಚಿನ ಪ್ರಯೋಜನವನ್ನು ಹೊಂದುವಂತೆ ನಾವು ಅವರಿಗೆ ಹೇಗೆ ಸಹಾಯಮಾಡಬಲ್ಲೆವು? ಪ್ರತಿಯೊಂದು ಅಧ್ಯಯನದ ಸಮಯದಲ್ಲಿ ಜ್ಞಾಪಕಾಚರಣೆಯ ಪ್ರಮುಖತೆಗಾಗಿ ಗಣ್ಯತೆಯನ್ನು ಹೆಚ್ಚಿಸಲು ಕೆಲವು ನಿಮಿಷಗಳನ್ನು ಬದಿಗಿರಿಸಿರಿ. ನೀವು ಅತ್ಯುತ್ತಮವಾದ ವಿಷಯಭಾಗಗಳನ್ನು ಮಾರ್ಚ್ 15, 2004ರ ಕಾವಲಿನಬುರುಜುವಿನ 3-7ನೇ ಪುಟಗಳಲ್ಲಿ, ಮತ್ತು ತರ್ಕಿಸು (ಇಂಗ್ಲಿಷ್) ಪುಸ್ತಕದ 266-9ನೇ ಪುಟಗಳಲ್ಲಿ ಕಂಡುಕೊಳ್ಳಬಹುದು.
6. ಜ್ಞಾಪಕಾಚರಣೆಗೆ ಬಂದಿರುವಾಗ, ಸಂದರ್ಶಕರನ್ನು ಸ್ವಾಗತಿಸುವುದು ಏಕೆ ಪ್ರಾಮುಖ್ಯ?
6 ಸಂದರ್ಶಕರನ್ನು ಸ್ವಾಗತಿಸಿರಿ: ಜ್ಞಾಪಕಾಚರಣೆಯ ಸಮಯದಲ್ಲಿ, ಸಂದರ್ಶಕರನ್ನು ಸಮೀಪಿಸಿ ಅವರನ್ನು ಸ್ವಾಗತಿಸಿರಿ. (ರೋಮಾ. 12:13) ನೀವು ಯಾರನ್ನು ಆಮಂತ್ರಿಸಿದ್ದೀರೊ ಅವರೊಂದಿಗೆ ಕುಳಿತುಕೊಳ್ಳಲು ಏರ್ಪಾಡುಮಾಡಿರಿ, ಮತ್ತು ಅವರ ಬಳಿ ಒಂದು ಬೈಬಲ್ ಹಾಗೂ ಗೀತೆಪುಸ್ತಕ ಇರುವಂತೆ ನೋಡಿಕೊಳ್ಳಿ. ವಿಶೇಷವಾಗಿ, ಹಾಜರಾಗಲು ಪ್ರಯತ್ನವನ್ನು ಮಾಡಿರುವ ಯಾವುದೇ ನಿಷ್ಕ್ರಿಯ ಸಹೋದರ ಸಹೋದರಿಯರನ್ನು ಹಾರ್ದಿಕವಾಗಿ ಸ್ವಾಗತಿಸಲು ನಾವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬೇಕು. ನಮ್ಮ ಪ್ರೀತಿಭರಿತ ಕಾಳಜಿಯು ಅವರು ಸಭೆಯೊಂದಿಗೆ ಕ್ರಮವಾಗಿ ಸಹವಾಸಮಾಡುವುದನ್ನು ಪುನಃ ಆರಂಭಿಸುವಂತೆ ಸಹಾಯಮಾಡಬಹುದು. (ಲೂಕ 15:3-7) ಈ ಅತಿ ಪವಿತ್ರವಾದ ಸಂದರ್ಭದಲ್ಲಿ, ಯೆಹೋವನ ‘ಆಶ್ಚರ್ಯಕರವಾದ’ ಪ್ರೀತಿಪೂರ್ವಕ ದಯೆಗಾಗಿ ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲು ನಮ್ಮನ್ನು ಜೊತೆಗೂಡುವಂತೆ ಇತರರನ್ನು ಪ್ರೋತ್ಸಾಹಿಸುವುದರಲ್ಲಿ ನಮ್ಮಿಂದಾದುದೆಲ್ಲವನ್ನೂ ಮಾಡೋಣ.—ಕೀರ್ತ. 31:21.