ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 9: ಅನೌಪಚಾರಿಕವಾಗಿ ಸಾಕ್ಷಿನೀಡಲಿಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು
1 ಯೇಸುವೇ ವಾಗ್ದಾನಿತ ಮೆಸ್ಸೀಯನು ಎಂದು ಆಂದ್ರೆಯ ಮತ್ತು ಫಿಲಿಪ್ಪನಿಗೆ ತಿಳಿದುಬಂದಾಗ, ಅವರಿಗೆ ಈ ರೋಮಾಂಚಕ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳದೆ ಇರಲಾಗಲಿಲ್ಲ. (ಯೋಹಾ. 1:40-45) ಅಂತೆಯೇ ಇಂದು, ಬೈಬಲ್ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿಷಯಗಳಲ್ಲಿ ನಂಬಿಕೆಯಿಡಲು ಆರಂಭಿಸುವಾಗ ಇತರರೊಂದಿಗೆ ಅದರ ಕುರಿತು ಮಾತಾಡಲು ಪ್ರಚೋದಿತರಾಗುತ್ತಾರೆ. (2 ಕೊರಿಂ. 4:13) ಅವರು ಅನೌಪಚಾರಿಕವಾಗಿ ಸಾಕ್ಷಿನೀಡುವಂತೆ ನಾವು ಹೇಗೆ ಉತ್ತೇಜಿಸಸಾಧ್ಯವಿದೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಮಾಡುವಂತೆ ಹೇಗೆ ಅವರನ್ನು ಸಿದ್ಧಪಡಿಸಸಾಧ್ಯವಿದೆ?
2 ವಿದ್ಯಾರ್ಥಿಯು ತಾನು ಬೈಬಲಿನಿಂದ ಕಲಿತ ವಿಷಯಗಳ ಕುರಿತು ಇತರರೊಂದಿಗೆ ಮಾತಾಡಿದ್ದಾನೊ ಎಂದು ನೀವು ಅವನನ್ನು ಕೇಳಬಹುದು. ಒಂದುವೇಳೆ ಅವನು ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ತನ್ನೊಂದಿಗೆ ಅಧ್ಯಯನಕ್ಕೆ ಕುಳಿತುಕೊಳ್ಳುವಂತೆ ಆಮಂತ್ರಿಸಸಾಧ್ಯವಿದೆ. ಅವನ ಸಹೋದ್ಯೋಗಿಗಳು, ಸಹಪಾಠಿಗಳು ಅಥವಾ ಇತರ ಪರಿಚಯಸ್ಥರು ಸುವಾರ್ತೆಯಲ್ಲಿ ಆಸಕ್ತಿಯನ್ನು ತೋರಿಸಿದ್ದಾರೊ ಎಂದು ಅವನನ್ನು ಕೇಳಿರಿ. ಹೀಗೆ ಮಾಡುವ ಮೂಲಕ ಅವನು ಇತರರಿಗೆ ಸಾಕ್ಷಿನೀಡಲು ಆರಂಭಿಸಸಾಧ್ಯವಿದೆ. ವಿವೇಚನೆಯನ್ನು ಉಪಯೋಗಿಸುವ ಅಗತ್ಯವನ್ನು ಮತ್ತು ಯೆಹೋವ ದೇವರ ಹಾಗೂ ಆತನ ಉದ್ದೇಶದ ಬಗ್ಗೆ ಇತರರೊಂದಿಗೆ ಮಾತಾಡುವಾಗ ಗೌರವಪೂರ್ವಕವಾಗಿಯೂ ದಯೆಯಿಂದಲೂ ಮಾತಾಡುವ ಅಗತ್ಯವನ್ನು ಗಣ್ಯಮಾಡುವಂತೆ ಅವನಿಗೆ ಸಹಾಯಮಾಡಿರಿ.—ಕೊಲೊ. 4:6; 2 ತಿಮೊ. 2:24, 25.
3 ಅವರ ನಂಬಿಕೆಗಳನ್ನು ಹಂಚಿಕೊಳ್ಳುವುದು: ತಮ್ಮ ನಂಬಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ದೇವರ ವಾಕ್ಯವನ್ನು ಉಪಯೋಗಿಸುವಂತೆ ಬೈಬಲ್ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದು ಬಹಳ ಪ್ರಾಮುಖ್ಯ. ಅಧ್ಯಯನವು ನಡೆಯುತ್ತಿರುವಾಗ ಈ ಪ್ರಶ್ನೆಯನ್ನು ವಿದ್ಯಾರ್ಥಿಗೆ ಕೇಳಿರಿ: “ಈ ಸತ್ಯವನ್ನು ನಿಮ್ಮ ಕುಟುಂಬ ಸದಸ್ಯರಿಗೆ ವಿವರಿಸಲು ನೀವು ಬೈಬಲನ್ನು ಹೇಗೆ ಉಪಯೋಗಿಸುವಿರಿ?” ಅಥವಾ “ನಿಮ್ಮ ಸ್ನೇಹಿತರಿಗೆ ಇದನ್ನು ರುಜುಪಡಿಸಲು ನೀವು ಯಾವ ಬೈಬಲ್ ವಚನವನ್ನು ಉಪಯೋಗಿಸುವಿರಿ?” ಅವನು ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಗಮನಿಸಿ ಮತ್ತು ತನ್ನ ಬೋಧಿಸುವಿಕೆಯನ್ನು ಹೇಗೆ ಶಾಸ್ತ್ರವಚನಗಳ ಮೇಲಾಧಾರಿತವಾಗಿಡುವುದು ಎಂಬುದನ್ನು ತೋರಿಸಿಕೊಡಿ. (2 ತಿಮೊ. 2:15) ಹೀಗೆ ಮಾಡುವ ಮೂಲಕ, ಅನೌಪಚಾರಿಕವಾಗಿ ಸಾಕ್ಷಿನೀಡುವಂತೆ ನೀವು ವಿದ್ಯಾರ್ಥಿಯನ್ನು ಸಿದ್ಧಪಡಿಸುತ್ತಿದ್ದೀರಿ. ಮಾತ್ರವಲ್ಲದೆ, ಅವನು ಅರ್ಹತೆಗಳನ್ನು ತಲಪುವಾಗ ಸಭೆಯೊಂದಿಗೆ ವ್ಯವಸ್ಥಾಪಿತ ಸಾರುವ ಕೆಲಸದಲ್ಲಿ ಭಾಗವಹಿಸಲು ಸಹ ನೀವು ಅವನನ್ನು ಸಿದ್ಧಪಡಿಸುತ್ತಿದ್ದೀರಿ.
4 ವಿರೋಧವನ್ನು ಎದುರಿಸಲು ಸಹ ಬೈಬಲ್ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ವಿವೇಕಯುತವಾಗಿದೆ. (ಮತ್ತಾ. 10:36; ಲೂಕ 8:13; 2 ತಿಮೊ. 3:12) ಇತರರು ಯೆಹೋವನ ಸಾಕ್ಷಿಗಳ ಬಗ್ಗೆ ಪ್ರಶ್ನಿಸುವಾಗ ಅಥವಾ ಹೇಳಿಕೆಯನ್ನು ಮಾಡುವಾಗ, ಸಾಕ್ಷಿನೀಡುವಂತೆ ವಿದ್ಯಾರ್ಥಿಗೆ ಒಂದು ಮಾರ್ಗ ತೆರೆಯಬಹುದು. ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರ್, ಯಾವಾಗಲೂ ‘ಉತ್ತರ ಹೇಳುವದಕ್ಕೆ ಸಿದ್ಧರಾಗಿ’ ಇರಲು ಅವರನ್ನು ಸನ್ನದ್ಧಗೊಳಿಸಬಲ್ಲದು. (1 ಪೇತ್ರ 3:15) ನಮ್ಮ ಬೈಬಲ್ ಆಧಾರಿತ ನಂಬಿಕೆಗಳ ಹಾಗೂ ಚಟುವಟಿಕೆಗಳ ಕುರಿತಾಗಿ ತಿಳಿದುಕೊಳ್ಳುವ ಒಳ್ಳೇ ಹೇತುವಿನಿಂದ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಪ್ರಶ್ನೆಗಳನ್ನು ಕೇಳುವುದಾದರೆ, ಹೊಸಬರು ಈ ಬ್ರೋಷರಲ್ಲಿರುವ ನಿಷ್ಕೃಷ್ಟವಾದ ಮಾಹಿತಿಯನ್ನು ಉಪಯೋಗಿಸಿ ಅವರಿಗೆ ಸಹಾಯಮಾಡಬಲ್ಲರು.