ದೀನರಿಗೆ ದೇವರ ಮಾರ್ಗದಲ್ಲಿ ನಡೆಯಲು ಕಲಿಸಿರಿ
1. ಶಿಷ್ಯರನ್ನಾಗಿ ಮಾಡುವುದರಲ್ಲಿ ಏನು ಒಳಗೂಡಿದೆ?
1 ‘ಆ ಮಾರ್ಗಕ್ಕೆ’ ಸೇರಿದವರು ಎಂದು ಕ್ರಿಸ್ತನ ಪ್ರಥಮ ಶತಮಾನದ ಶಿಷ್ಯರ ಕುರಿತು ಮಾತಾಡಲಾಗುತ್ತಿತ್ತು. (ಅ. ಕೃ. 9:2) ನಿಜ ಕ್ರೈಸ್ತತ್ವದಲ್ಲಿ ಒಬ್ಬ ವ್ಯಕ್ತಿಯ ಇಡೀ ಜೀವನಮಾರ್ಗವೇ ಒಳಗೂಡಿದೆ. (ಜ್ಞಾನೋ. 3:5, 6) ಆದುದರಿಂದ, ಬೈಬಲ್ ಅಧ್ಯಯನಗಳನ್ನು ನಡೆಸುವಾಗ ನಾವು ಬೈಬಲ್ ಬೋಧನೆಯ ಕುರಿತು ನಿಷ್ಕೃಷ್ಟ ಜ್ಞಾನವನ್ನು ಕೊಡುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುವ ಅಗತ್ಯವಿದೆ. ಯೆಹೋವನ ಮಾರ್ಗದಲ್ಲಿ ನಡೆಯಲು ಸಹ ನಾವು ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಬೇಕು.—ಕೀರ್ತ. 25:8, 9.
2. ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವಂತೆ ಒಬ್ಬ ಬೈಬಲ್ ವಿದ್ಯಾರ್ಥಿಯನ್ನು ಯಾವುದು ಪ್ರೇರೇಪಿಸಸಾಧ್ಯವಿದೆ?
2 ಯೆಹೋವನ ಮತ್ತು ಯೇಸುವಿನ ಕಡೆಗೆ ಪ್ರೀತಿ: ಅಪರಿಪೂರ್ಣ ಮಾನವರಿಗೆ ತಮ್ಮ ಆಲೋಚನೆ, ಮನೋಭಾವಗಳು ಮತ್ತು ನಡೆನುಡಿಯನ್ನು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ತರುವುದು ನಿಜವಾಗಿಯೂ ಕಷ್ಟಕರವಾಗಿರುತ್ತದೆ. (ರೋಮಾ. 7:21-23; ಎಫೆ. 4:22-24) ಹಾಗಿದ್ದರೂ, ಇದನ್ನು ಮಾಡುವಂತೆ ದೇವರ ಮತ್ತು ಆತನ ಮಗನ ಕಡೆಗಿನ ಪ್ರೀತಿಯು ದೀನರನ್ನು ಪ್ರೇರಿಸುತ್ತದೆ. (ಯೋಹಾ. 14:15; 1 ಯೋಹಾ. 5:3) ಈ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ನಾವು ಹೇಗೆ ಸಹಾಯಮಾಡಸಾಧ್ಯವಿದೆ?
3. ಯೆಹೋವನ ಮತ್ತು ಯೇಸುವಿನ ಕಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನಾವು ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಬಲ್ಲೆವು?
3 ಯೆಹೋವನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳುವಂತೆ ನಿಮ್ಮ ವಿದ್ಯಾರ್ಥಿಗೆ ಸಹಾಯಮಾಡಿರಿ. ಒಬ್ಬ ಸಹೋದರನು ವಿವರಿಸಿದ್ದು: “ಜನರು ತಮಗೆ ತಿಳಿಯದಿರುವ ಒಬ್ಬ ವ್ಯಕ್ತಿಯನ್ನು ಪ್ರೀತಿಸಲಾರರು. ಆದುದರಿಂದ ಅಧ್ಯಯನದ ಆರಂಭದಿಂದಲೇ ನಾನು ವಿದ್ಯಾರ್ಥಿಗಳಿಗೆ ಬೈಬಲಿನಿಂದ ದೇವರ ಹೆಸರನ್ನು ತಿಳಿಸುತ್ತೇನೆ ಮತ್ತು ಯೆಹೋವನ ಗುಣಗಳನ್ನು ಒತ್ತಿಹೇಳಲಿಕ್ಕಾಗಿ ಸಂದರ್ಭಗಳನ್ನು ಹುಡುಕುತ್ತೇನೆ.” ಹೌದು, ಇದನ್ನು ಮಾಡುವ ಒಂದು ಉತ್ತಮ ವಿಧವು ಯೇಸುವಿನ ಮಾದರಿಯನ್ನು ಒತ್ತಿಹೇಳುವ ಮೂಲಕವೇ ಆಗಿದೆ. (ಯೋಹಾ. 1:14; 14:9) ಇದರೊಂದಿಗೆ, ದೇವರ ಮತ್ತು ಆತನ ಮಗನ ಅದ್ಭುತಕರ ಗುಣಗಳ ಬಗ್ಗೆ ಧ್ಯಾನಿಸುವಂತೆ ವಿದ್ಯಾರ್ಥಿಗೆ ಸಹಾಯಮಾಡಲು ಬೈಬಲ್ ಬೋಧಿಸುತ್ತದೆ ಪುಸ್ತಕದ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿರುವ ಪುನರ್ವಿಮರ್ಶೆಯ ಚೌಕವನ್ನು ಸದುಪಯೋಗಿಸಿರಿ.
4. (ಎ) ಅನೇಕ ವಿದ್ಯಾರ್ಥಿಗಳು ಸಾರುವ ಕೆಲಸವನ್ನು ಏಕೆ ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತಾರೆ? (ಬಿ) ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸಲು ಆರಂಭಿಸುವಂತೆ ನಮ್ಮ ವಿದ್ಯಾರ್ಥಿಗಳಿಗೆ ನಾವು ಹೇಗೆ ಸಹಾಯಮಾಡಸಾಧ್ಯವಿದೆ?
4 ಮಾದರಿಯ ಮೂಲಕ ಕಲಿಸಿರಿ: ಶಿಕ್ಷಕರೂ ಮಾರ್ಗದರ್ಶಕರೂ ಆಗಿರುವ ನಾವು, ದೇವರ ಮಾರ್ಗದಲ್ಲಿ ನಡೆಯುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ನಮ್ಮ ಕ್ರಿಯೆಗಳ ಮೂಲಕ ಇತರರಿಗೆ ತೋರಿಸಿಕೊಡುತ್ತೇವೆ. (1 ಕೊರಿಂ. 11:1) ಉದಾಹರಣೆಗೆ, ಬೈಬಲ್ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ತಮ್ಮ ನಂಬಿಕೆಗಳ ಬಗ್ಗೆ ಅಪರಿಚಿತರಿಗೆ ಹೇಳುವ ರೂಢಿ ಇರುವುದಿಲ್ಲ. ಆದುದರಿಂದ, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗವಹಿಸಲು ಅಗತ್ಯವಾಗಿರುವ ಪ್ರೀತಿ, ನಂಬಿಕೆ ಹಾಗೂ ಧೈರ್ಯವನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡಲು ನಮಗೆ ತಾಳ್ಮೆ ಮತ್ತು ಜಾಣ್ಮೆ ಅವಶ್ಯ. (2 ಕೊರಿಂ. 4:13; 1 ಥೆಸ. 2:2) ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಲು ನಮಗಿರುವ ಇಚ್ಛೆಯು, ಅವರು ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸಲು ಆರಂಭಿಸುವಾಗ ಅವರ ಪಕ್ಕದಲ್ಲಿರುವಂತೆ ನಮ್ಮನ್ನು ಪ್ರಚೋದಿಸುವುದು.
5. ದೇವರ ಆಜ್ಞೆಗಳನ್ನು ಪಾಲಿಸುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ಬೈಬಲ್ ವಿದ್ಯಾರ್ಥಿಗಳು ಗ್ರಹಿಸಲು ಒಂದು ಉತ್ತಮ ಮಾದರಿಯು ಹೇಗೆ ಸಹಾಯಮಾಡುತ್ತದೆ?
5 ನಿಮ್ಮ ಮಾದರಿಯು ಕ್ರೈಸ್ತ ಜೀವನದ ಇತರ ಪ್ರಾಮುಖ್ಯ ಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳಿಗೆ ಪಾಠಗಳನ್ನು ಕಲಿಸಸಾಧ್ಯವಿದೆ. ನೀವು ಅಸ್ವಸ್ಥರನ್ನು ಭೇಟಿಮಾಡುವಾಗ ಅಥವಾ ಕ್ರೈಸ್ತ ಕೂಟಗಳಲ್ಲಿ ಇತರರನ್ನು ಹೃತ್ಪೂರ್ವಕವಾಗಿ ವಂದಿಸುವಾಗ ಪ್ರೀತಿಯು ಕಾರ್ಯರೂಪದಲ್ಲಿರುವುದನ್ನು ಅವರು ನೋಡುವರು. (ಯೋಹಾ. 15:12) ರಾಜ್ಯ ಸಭಾಗೃಹವನ್ನು ಶುಚಿಗೊಳಿಸುವುದರಲ್ಲಿ ಭಾಗವಹಿಸುವಾಗ ಇಲ್ಲವೆ ಇತರರಿಗೆ ಸಹಾಯಮಾಡುವಾಗ, ಸೇವೆಮಾಡುವ ವಿಧವನ್ನು ನೀವು ಅವರಿಗೆ ಕಲಿಸುತ್ತೀರಿ. (ಯೋಹಾ. 13:12-15) ನೀವು ಒಂದು ಸರಳ ಜೀವನಶೈಲಿಯನ್ನು ನಡೆಸುವುದನ್ನು ಅವರು ಗಮನಿಸುವಾಗ, ‘ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುವುದರ’ ಅರ್ಥವನ್ನು ಅವರು ಮನಗಾಣುತ್ತಾರೆ.—ಮತ್ತಾ. 6:33.
6. ಯೆಹೋವನನ್ನು ಸೇವಿಸುವಂತೆ ದೀನರಿಗೆ ಸಹಾಯಮಾಡುವುದರ ಫಲಿತಾಂಶ ಏನಾಗಿರುತ್ತದೆ?
6 ಇತರರಿಗೆ ದೇವರ ವಾಕ್ಯದಿಂದ ಕಲಿಸುವ ಮತ್ತು ಅವರನ್ನು ಶಿಷ್ಯರನ್ನಾಗಿ ಮಾಡುವ ಕೆಲಸವು ಬಹಳಷ್ಟು ಪ್ರಯತ್ನವನ್ನು ಅಗತ್ಯಪಡಿಸುತ್ತದೆ. ಆದರೆ, ದೀನರು ‘ಸತ್ಯವನ್ನನುಸರಿಸುತ್ತಾ ನಡೆಯುವದನ್ನು’ ನೋಡುವುದು ಎಷ್ಟು ಆನಂದದಾಯಕವಾಗಿದೆ!—3 ಯೋಹಾ. 4.