ಯೆಹೋವನ ಅಪೂರ್ವ ಗುಣಗಳಿಗಾಗಿ ಗಣ್ಯತೆಯನ್ನು ಬೆಳೆಸಿರಿ
1 ನಮ್ಮ ಶುಶ್ರೂಷೆಯಲ್ಲಿ ನಾವು ಕೇವಲ ಬೈಬಲಿನ ಮೂಲಭೂತ ಸತ್ಯಗಳನ್ನು ಇತರರಿಗೆ ಕಲಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತೇವೆ. ಜನರು ಯೆಹೋವನನ್ನು ಒಬ್ಬ ವ್ಯಕ್ತಿಯಾಗಿ ತಿಳಿದುಕೊಳ್ಳುವಂತೆ ಮತ್ತು ಆತನ ಅಪೂರ್ವ ಗುಣಗಳಿಗಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳುವಂತೆ ನಾವು ಅವರಿಗೆ ಸಹಾಯಮಾಡುತ್ತೇವೆ. ಪ್ರಾಮಾಣಿಕಹೃದಯದ ವ್ಯಕ್ತಿಗಳು ದೇವರ ಕುರಿತಾದ ಸತ್ಯವನ್ನು ತಿಳಿದುಕೊಂಡಾಗ, ಅದು ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ; ‘ಯೆಹೋವನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಲು’ ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಅದು ಅವರನ್ನು ಪ್ರೇರೇಪಿಸುತ್ತದೆ.—ಕೊಲೊ. 1:9, 10; 3:9, 10.
2 ನಮ್ಮ ಹೊಸ ಅಧ್ಯಯನ ಸಹಾಯಕ: ಬೈಬಲ್ ಬೋಧಿಸುತ್ತದೆ ಪುಸ್ತಕವು ಆರಂಭದಿಂದಲೇ ಯೆಹೋವನ ಗುಣಗಳ ಕಡೆಗೆ ಗಮನ ಸೆಳೆಯುತ್ತದೆ. ಮೊತ್ತಮೊದಲ ಅಧ್ಯಾಯವು ಈ ಪ್ರಶ್ನೆಗಳನ್ನು ಉತ್ತರಿಸುತ್ತದೆ: ದೇವರಿಗೆ ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೊ?, ದೇವರು ಎಂಥವನು? ಮತ್ತು ದೇವರ ಸಮೀಪಕ್ಕೆ ಬರಲು ಸಾಧ್ಯವಿದೆಯೊ? ಇದುಮಾತ್ರವಲ್ಲ, ಆ ಅಧ್ಯಾಯವು ಯೆಹೋವನ ಪರಿಶುದ್ಧತೆ (ಪ್ಯಾರ. 10), ಆತನ ನ್ಯಾಯಪರತೆ, ಅನುಕಂಪ (ಪ್ಯಾರ. 11), ಆತನ ಪ್ರೀತಿ (ಪ್ಯಾರ. 13), ಆತನ ಶಕ್ತಿ (ಪ್ಯಾರ. 16), ಆತನ ಕನಿಕರ, ದಯೆ, ತಾಳ್ಮೆ, ನಿಷ್ಠೆ, ಕ್ಷಮಿಸಲು ಆತನು ಸಿದ್ಧನಾಗಿರುವ ಗುಣಗಳನ್ನು ಎತ್ತಿತೋರಿಸುತ್ತದೆ (ಪ್ಯಾರ. 19). ಸಾರಾಂಶದಲ್ಲಿ 20ನೆಯ ಪ್ಯಾರಗ್ರಾಫ್ ಹೇಳುವುದು: “ಯೆಹೋವನ ಕುರಿತು ನೀವು ಹೆಚ್ಚನ್ನು ಕಲಿತುಕೊಂಡಂತೆ ಆತನು ನಿಮಗೆ ಹೆಚ್ಚು ನೈಜನಾಗುವನು ಮಾತ್ರವಲ್ಲ, ಆತನನ್ನು ಪ್ರೀತಿಸಿ, ಆತನ ಸಮೀಪಕ್ಕೆ ಬರಲು ನಿಮಗೆ ಹೆಚ್ಚು ಕಾರಣಗಳೂ ಸಿಗುವವು.”
3 ಯೆಹೋವನ ಸಮೀಪಕ್ಕೆ ಬರುವಂತೆ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಲು ನಾವು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಹೇಗೆ ಉಪಯೋಗಿಸಸಾಧ್ಯವಿದೆ? ಆತನ ಗುಣಗಳನ್ನು ಎತ್ತಿತೋರಿಸುವ ಒಂದು ಪ್ಯಾರವನ್ನು ಪರಿಗಣಿಸಿದ ನಂತರ ನಾವು ವಿದ್ಯಾರ್ಥಿಯನ್ನು ಹೀಗೆ ಕೇಳಬಹುದು: “ಯೆಹೋವನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬುದರ ಬಗ್ಗೆ ಇದು ನಿಮಗೆ ಏನನ್ನು ಹೇಳುತ್ತದೆ?” ಅಥವಾ “ವೈಯಕ್ತಿಕವಾಗಿ ನಿಮ್ಮಲ್ಲಿ ದೇವರು ಆಸಕ್ತನಾಗಿದ್ದಾನೆಂದು ಇದು ಹೇಗೆ ತೋರಿಸುತ್ತದೆ?” ಈ ರೀತಿಯ ಪ್ರಶ್ನೆಗಳನ್ನು ಅಧ್ಯಯನದ ವೇಳೆಯಲ್ಲಿ ಆಗಾಗ್ಗೆ ಕೇಳುವ ಮೂಲಕ ನಾವು ನಮ್ಮ ವಿದ್ಯಾರ್ಥಿಗಳಿಗೆ ಅವರೇನನ್ನು ಕಲಿಯುತ್ತಿದ್ದಾರೋ ಅದರ ಕುರಿತು ಧ್ಯಾನಿಸುವಂತೆ ಕಲಿಸುತ್ತೇವೆ ಮತ್ತು ಯೆಹೋವನ ಅಪೂರ್ವ ಗುಣಗಳಿಗಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುತ್ತೇವೆ.
4 ಪುನರ್ವಿಮರ್ಶೆಯ ಚೌಕವನ್ನು ಉಪಯೋಗಿಸಿ: ಪ್ರತಿ ಅಧ್ಯಾಯದ ಕೊನೆಯಲ್ಲಿ, “ಬೈಬಲು ಹೀಗೆ ಬೋಧಿಸುತ್ತದೆ” ಚೌಕದಲ್ಲಿರುವ ಪ್ರತಿಯೊಂದು ಅಂಶದ ಮೇಲೆ ತನ್ನ ಸ್ವಂತಮಾತಿನಲ್ಲಿ ಹೇಳಿಕೆಗಳನ್ನು ನೀಡುವಂತೆ ವಿದ್ಯಾರ್ಥಿಯನ್ನು ಕೇಳಿಕೊಳ್ಳಿರಿ. ಉಲ್ಲೇಖಿಸಲಾಗಿರುವ ವಚನಗಳ ಕಡೆಗೆ ಗಮನವನ್ನು ನಿರ್ದೇಶಿಸಿರಿ. ವಿದ್ಯಾರ್ಥಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ನೀವು ಕೆಲವೊಮ್ಮೆ ಹೀಗೆ ಕೇಳಬಹುದು: “ಈ ವಿಷಯದ ಬಗ್ಗೆ ಬೈಬಲು ಏನನ್ನು ಬೋಧಿಸುತ್ತದೋ ಅದರ ಕುರಿತು ನಿಮಗೇನನಿಸುತ್ತದೆ?” ಹೀಗೆ ಮಾಡುವ ಮೂಲಕ ನೀವು ಆ ಅಧ್ಯಾಯದ ಮುಖ್ಯವಿಷಯಗಳನ್ನು ಎತ್ತಿತೋರಿಸುತ್ತೀರಿ ಮಾತ್ರವಲ್ಲ, ವಿದ್ಯಾರ್ಥಿಯು ನಿಜವಾಗಿಯೂ ಏನನ್ನು ನಂಬುತ್ತಾನೊ ಅದರ ಕುರಿತು ಅಮೂಲ್ಯ ಒಳನೋಟವನ್ನು ಪಡೆದುಕೊಳ್ಳುತ್ತೀರಿ. ಇದು, ವಿದ್ಯಾರ್ಥಿಯು ಯೆಹೋವನೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಲು ಆರಂಭಿಸುವಂತೆ ಸಹಾಯಮಾಡುವುದು.