ಹೊಸ ಶಿಷ್ಯರನ್ನು ಮಾಡುವುದರಲ್ಲಿ ಎಲ್ಲರೂ ಭಾಗವಹಿಸಬಲ್ಲರು
1 ಕೇವಲ ಒಬ್ಬ ಪ್ರಚಾರಕನ ಪ್ರಯತ್ನಗಳಿಂದ ವ್ಯಕ್ತಿಯೊಬ್ಬನು ಹೊಸ ಶಿಷ್ಯನಾಗುವುದಿಲ್ಲ. ಬೈಬಲ್ ವಿದ್ಯಾರ್ಥಿಗಳು ಆಧ್ಯಾತ್ಮಿಕವಾಗಿ ಬೆಳೆಯುವಂತೆ ಸಹಾಯ ಮಾಡಲು ಯೆಹೋವನು ತನ್ನೆಲ್ಲ ‘ಜೊತೆಕೆಲಸದವರನ್ನು’ ಉಪಯೋಗಿಸಬಲ್ಲನು. (1 ಕೊರಿಂ. 3:6-9) ಕ್ರೈಸ್ತ ಕೂಟಗಳಲ್ಲಿ ನಮ್ಮ ಹೃತ್ಪೂರ್ವಕ ಹೇಳಿಕೆಗಳಿಂದ ಮಾತ್ರವಲ್ಲ ನಮ್ಮ ಒಳ್ಳೇ ನಡತೆಯಿಂದಲೂ ನಾವು ಹೊಸಬರಿಗೆ ವೈಯಕ್ತಿಕ ಸಹಾಯ ನೀಡುತ್ತೇವೆ. ಇದು ದೇವರಾತ್ಮವು ನಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆ ಎಂಬುದಕ್ಕೆ ಗಮನಾರ್ಹ ಸಾಕ್ಷ್ಯವಾಗಿದೆ. (ಯೋಹಾ. 13:35; ಗಲಾ. 5:22, 23; ಎಫೆ. 4:22, 23) ಹೊಸಬರಿಗೆ ಸಹಾಯ ಮಾಡಲು ಹೆಚ್ಚೇನನ್ನು ಮಾಡಸಾಧ್ಯವಿದೆ?
2 ಸಭೆಯಾಗಿ: ಹೊಸದಾಗಿ ಕೂಟಗಳಿಗೆ ಹಾಜರಾಗುವವರನ್ನು ಹಾರ್ದಿಕವಾಗಿ ವಂದಿಸಲು ಮುಂದಾಗುವ ಮೂಲಕ ಮತ್ತು ಕೂಟಗಳ ಮುಂಚೆ ಹಾಗೂ ಅನಂತರ ಅವರೊಂದಿಗೆ ಮಾತಾಡುವ ಮೂಲಕ ನಾವೆಲ್ಲರು ಅವರಲ್ಲಿ ಆಸಕ್ತಿಯನ್ನು ತೋರಿಸಸಾಧ್ಯವಿದೆ. ಒಬ್ಬ ವ್ಯಕ್ತಿ ಪ್ರಥಮ ಬಾರಿ ಸಭೆಗೆ ಭೇಟಿನೀಡಿದ ಕುರಿತು ನೆನಪಿಸಿದ್ದು: “ಬಾಲ್ಯದಿಂದಲೂ ನಾನು ಹಾಜರಾದ ಚರ್ಚಿನಲ್ಲಿ ಅನೇಕರನ್ನು ಭೇಟಿಯಾಗುತ್ತಿದ್ದೆ. ಆದರೆ ಅಪರಿಚಿತರಾಗಿದ್ದರೂ ನಿಜ ಪ್ರೀತಿಯುಳ್ಳ ಜನರನ್ನು ಒಂದೇ ದಿನದಲ್ಲಿ ನಾನು ಭೇಟಿಯಾದದ್ದು ಈ ಸಭೆಯಲ್ಲಿಯೇ. ನಾನು ಸತ್ಯವನ್ನು ಅಂದೇ ಕಂಡುಕೊಂಡಿದ್ದೆ ಎಂಬುದು ಸುವ್ಯಕ್ತ.” ಕೂಟಕ್ಕೆ ಪ್ರಥಮವಾಗಿ ಹಾಜರಾದ ಏಳು ತಿಂಗಳ ಬಳಿಕ ಅವನು ದೀಕ್ಷಾಸ್ನಾನ ಪಡೆದುಕೊಂಡನು.
3 ಬೈಬಲ್ ವಿದ್ಯಾರ್ಥಿಯೊಬ್ಬನು ಆಧ್ಯಾತ್ಮಿಕ ಪ್ರಗತಿಮಾಡುವಾಗ ಅವನನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿರಿ. ಅವನು ವಿರೋಧವನ್ನು ತಾಳಿಕೊಳ್ಳುತ್ತಿದ್ದಾನೊ? ಅವನು ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದಾನೊ? ಕೂಟಗಳಲ್ಲಿ ಉತ್ತರ ಕೊಡಲು ಅವನು ಧೈರ್ಯ ತೆಗೆದುಕೊಂಡಿದ್ದಾನೊ? ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಅವನು ತನ್ನ ಹೆಸರನ್ನು ಕೊಟ್ಟಿದ್ದಾನೊ ಅಥವಾ ಶುಶ್ರೂಷೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದಾನೊ? ಅವನು ಮಾಡಿರುವ ಪ್ರಗತಿಗಾಗಿ ಅವನನ್ನು ಶ್ಲಾಘಿಸಿರಿ. ಅದು ಅವನನ್ನು ಚೇತನಗೊಳಿಸಿ ಪ್ರೋತ್ಸಾಹಿಸುತ್ತದೆ.—ಜ್ಞಾನೋ. 25:11.
4 ಬೈಬಲ್ ಅಧ್ಯಯನ ನಡೆಸುವವರಾಗಿ: ಕೆಲವು ಪ್ರಚಾರಕರು ತಮ್ಮ ಬೈಬಲ್ ಅಧ್ಯಯನಕ್ಕೆ ಇತರ ಪ್ರಚಾರಕರನ್ನು ಕರೆದೊಯ್ಯುತ್ತಾರೆ. ಹೀಗೆ ಸಭೆಯ ವೈಯಕ್ತಿಕ ಸದಸ್ಯರೊಂದಿಗೆ ತಮ್ಮ ಬೈಬಲ್ ವಿದ್ಯಾರ್ಥಿಗಳು ಪರಿಚಿತರಾಗಲು ಅವರು ಸಹಾಯ ಮಾಡಿದ್ದಾರೆ. ಆದಷ್ಟು ಬೇಗ ಬೈಬಲ್ ವಿದ್ಯಾರ್ಥಿಯನ್ನು ಸಭಾ ಕೂಟಗಳಿಗೆ ಆಮಂತ್ರಿಸಿರಿ. ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದಾಗ ಅವನನ್ನು ಇತರರಿಗೆ ತಪ್ಪದೆ ಪರಿಚಯ ಮಾಡಿಕೊಡಿ. ಧೂಮಪಾನದಂಥ ದುಶ್ಚಟವನ್ನು ಬಿಟ್ಟುಬಿಡಲು ಅವನು ಹೆಣಗಾಡುತ್ತಿದ್ದಾನೊ? ಅವನು ಮಾಡುವ ಅಧ್ಯಯನದ ಕುರಿತು ಅವನ ಕುಟುಂಬದಲ್ಲಿ ಯಾರಾದರೂ ಆಕ್ಷೇಪಿಸುತ್ತಾರೊ? ತದ್ರೀತಿಯ ಪಂಥಾಹ್ವಾನವನ್ನು ಎದುರಿಸಿ ಜಯಿಸಿದ ಒಬ್ಬ ಪ್ರಚಾರಕನೊಂದಿಗೆ ಮಾತಾಡುವುದರಿಂದ ಅವನು ಪ್ರಯೋಜನ ಪಡೆಯಬಹುದು.—1 ಪೇತ್ರ 5:9.
5 ಹೊಸಬರಿಗೆ ಸಭೆಯಿಂದ ಆಧ್ಯಾತ್ಮಿಕ ಬೆಂಬಲದ ಅಗತ್ಯವಿದೆ. ಅವರಲ್ಲಿ ಯಥಾರ್ಥವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ ಅವರು ಪ್ರಗತಿಮಾಡುವಂತೆ ಎಲ್ಲರು ನೆರವು ನೀಡಬಲ್ಲರು.