ಕಾವಲಿನಬುರುಜುವಿನ ರೋಮಾಂಚಕಾರಿ ಬದಲಾವಣೆಗಳು!
1 ಈ ವರ್ಷದ ಆರಂಭದಲ್ಲಿ, ಸಭೆಗಳು ಒಂದು ರೋಮಾಂಚಕಾರಿ ಪ್ರಕಟನೆಯನ್ನು ಪಡೆದುಕೊಂಡವು. ಅದು, 2008ರ ಜನವರಿಯಿಂದ ಆರಂಭಿಸಿ ಕಾವಲಿನಬುರುಜು ಎರಡು ಭಿನ್ನ ಆವೃತ್ತಿಗಳಲ್ಲಿ ಪ್ರಕಟಗೊಳ್ಳುವುದರ ಕುರಿತಾಗಿತ್ತು. ಅಂದರೆ, ಕಾವಲಿನಬುರುಜುವಿನ ಒಂದು ಆವೃತ್ತಿಯು ಸಾರ್ವಜನಿಕರಿಗಾದರೆ ಮತ್ತೊಂದು ನಮ್ಮ ಕ್ರೈಸ್ತ ಸಹೋದರರ ಬಳಗಕ್ಕಾಗಿ! ಇದರ ಕುರಿತು ನೀವು ಹೀಗೆ ಯೋಚಿಸುತ್ತಿದ್ದಿರಬಹುದು: ‘ಎರಡು ಪತ್ರಿಕೆಗಳು ಹೇಗೆ ಭಿನ್ನವಾಗಿರುವುವು? ಬೇರೆಬೇರೆ ಆವೃತ್ತಿಗಳನ್ನು ಹೊಂದಿರುವುದರ ಪ್ರಯೋಜನಗಳೇನು? ಹೊಸ ಆವೃತ್ತಿಗಳಲ್ಲಿ ನೂತನ ವೈಶಿಷ್ಟ್ಯಗಳೇನಾದರೂ ಇರುವವೋ? ವಿವಿಧ ಭಾರತೀಯ ಭಾಷೆಗಳಲ್ಲಿ ಯಾವ ಆವೃತ್ತಿಗಳಿರುವುವು?’
2 ಬದಲಾವಣೆಗಳು: ಇಂಗ್ಲಿಷ್ ಭಾಷೆಯಲ್ಲಿ, ತಿಂಗಳ ಒಂದನೇ ತಾರೀಖನ್ನು ಹೊಂದಿರುವ ಸಂಚಿಕೆಯು ಸಾರ್ವಜನಿಕರಿಗಾಗಿರುತ್ತದೆ. ಸಾರ್ವಜನಿಕರನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ಸಂಚಿಕೆಯಲ್ಲಿರುವ ಎಲ್ಲ ಲೇಖನಗಳನ್ನು ತಯಾರಿಸಲಾಗುವುದು. ತಿಂಗಳ 15ನೇ ತಾರೀಖನ್ನು ಹೊಂದಿರುವ ಸಂಚಿಕೆಯು ಅಧ್ಯಯನಕ್ಕಾಗಿರುವ ಆವೃತ್ತಿಯಾಗಿರುವುದು. ಇದನ್ನು ಕ್ಷೇತ್ರಸೇವೆಯಲ್ಲಿ ನೀಡಲಾಗುವುದಿಲ್ಲ. ಅದರಲ್ಲಿ ಒಂದು ತಿಂಗಳಿಗಾಗಿರುವ ಎಲ್ಲ ಅಧ್ಯಯನ ಲೇಖನಗಳು ಇರುತ್ತವೆ. ಮಾತ್ರವಲ್ಲ, ಸಮರ್ಪಿತ ಕ್ರೈಸ್ತರಿಗೆ ಪ್ರಯೋಜನವಾಗುವಂಥ ಇತರ ಲೇಖನಗಳೂ ಅದರಲ್ಲಿ ಇರುವವು. ಸಾರ್ವಜನಿಕರಿಗಾಗಿರುವ ಕಾವಲಿನಬುರುಜು ಆವೃತ್ತಿಯು ಸಾಕ್ಷಿಗಳಿಗೆ ಆಸಕ್ತಿದಾಯಕವಾಗಿರುವುದಾದರೂ, ಬೈಬಲನ್ನು ನಂಬುವ ಸಾಕ್ಷ್ಯೇತರರಿಗೆ ವಿಶೇಷವಾಗಿ ಆಕರ್ಷಕವಾಗಿರುವುದು. ಎಚ್ಚರ! ಪತ್ರಿಕೆಯ ಗುರಿಯಾದರೋ ಎಲ್ಲ ರೀತಿಯ ಜನರನ್ನು ತಲಪುವುದೇ ಆಗಿದೆ. ಇವರಲ್ಲಿ ಸಂದೇಹವಾದಿಗಳೂ ಕ್ರೈಸ್ತೇತರ ಧರ್ಮದವರೂ ಸೇರಿದ್ದಾರೆ.
3 ಪ್ರಯೋಜನಗಳು: ಅಧ್ಯಯನಕ್ಕಾಗಿರುವ ಆವೃತ್ತಿಯಲ್ಲಿ “ಪಯನೀಯರ್” ಎಂಬಂಥ ಪದಗಳನ್ನು ಸಾಕ್ಷ್ಯೇತರರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಬೇಕಾದ ಆವಶ್ಯಕತೆಯಿರುವುದಿಲ್ಲ. ಯೆಹೋವನ ಸಾಕ್ಷಿಗಳಿಗೆ ಮತ್ತು ಆಧ್ಯಾತ್ಮಿಕ ಪ್ರಗತಿ ಮಾಡುತ್ತಿರುವ ಬೈಬಲ್ ವಿದ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ತಯಾರಿಸಲಾಗಿರುವ ಸ್ಪಷ್ಟ ಮಾಹಿತಿಯನ್ನೂ ಈ ಆವೃತ್ತಿಯು ಹೊಂದಿರುವುದು. ಆದರೆ ಸಾರ್ವಜನಿಕರಿಗಾಗಿರುವ ಆವೃತ್ತಿಯ ಕುರಿತೇನು? ಇದರಲ್ಲಿರುವ ವಿಷಯಗಳು ಮತ್ತು ಬರವಣಿಗೆಯ ಶೈಲಿಯು ಸಾರ್ವಜನಿಕರನ್ನು ಉದ್ದೇಶಿಸುವುದರಿಂದ ಸಾಕ್ಷಿಯಲ್ಲದ ವ್ಯಕ್ತಿಯೊಬ್ಬನು ಪತ್ರಿಕೆಯ ಆರಂಭದಿಂದ ಅಂತ್ಯದವರೆಗೆ ಓದಿ ಆನಂದಿಸಶಕ್ತನಾಗಬೇಕು. ಆದರೂ, ಯೆಹೋವನ ಪ್ರತಿಯೊಬ್ಬ ಸಾಕ್ಷಿಯು ಈ ಎರಡು ಸಂಚಿಕೆಯಿಂದಲೂ ಪ್ರಯೋಜನ ಹೊಂದುವನೆಂಬುದಂತೂ ನಿಜ.
4 ನೂತನ ವೈಶಿಷ್ಟ್ಯಗಳು: ಸಾರ್ವಜನಿಕರಿಗಾಗಿರುವ ಕಾವಲಿನಬುರುಜು ಆವೃತ್ತಿಗಾಗಿ ರೋಮಾಂಚಕಾರಿಯಾದ ನೂತನ ವೈಶಿಷ್ಟ್ಯಗಳು ಯೋಜಿಸಲ್ಪಟ್ಟಿವೆ. ಅದರಲ್ಲಿ ಒಂದು ವೈಶಿಷ್ಟ್ಯವು, ಮೂಲಭೂತ ಆಧ್ಯಾತ್ಮಿಕ ಬೋಧನೆಗಳನ್ನು ತುಂಬಾ ಸರಳ ಶೈಲಿಯಲ್ಲಿ ಚರ್ಚಿಸುವುದು. ಇನ್ನೊಂದು, ಬೈಬಲ್ ಹೇಗೆ ಕುಟುಂಬಕ್ಕೆ ಸಹಾಯ ನೀಡಬಲ್ಲದು ಎಂದು ತೋರಿಸುವುದು. ಯುವಜನರಿಗಾಗಿ ಬೈಬಲ್ ಅಧ್ಯಯನದ ಯೋಜನೆಗಳನ್ನೂ ಒದಗಿಸಲಾಗುವುದು. ಇದಲ್ಲದೆ, ಪ್ರತಿ ಸಂಚಿಕೆಯು ಯೆಹೋವನ ವ್ಯಕ್ತಿತ್ವವನ್ನು ಕಲಿಸುವಂಥ ನಿರ್ದಿಷ್ಟ ಬೈಬಲ್ ವೃತ್ತಾಂತಗಳ ಸ್ವಾರಸ್ಯಕರ ಲೇಖನವೊಂದನ್ನೂ ಹೊಂದಿರುವುದು.
5 ಭಾರತೀಯ ಭಾಷೆಗಳು: ಕನ್ನಡ, ತಮಿಳು, ತೆಲುಗು, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕಾವಲಿನಬುರುಜುವಿನ ಅಧ್ಯಯನ ಆವೃತ್ತಿಯು ಮಾಸಿಕವಾಗಿಯೂ ಸಾರ್ವಜನಿಕರಿಗಾಗಿರುವ ಆವೃತ್ತಿಯು ತ್ರೈಮಾಸಿಕವಾಗಿಯೂ ಪ್ರಕಾಶಿತಗೊಳ್ಳುವುದು. ಆದರೆ, ಗುಜರಾಥಿ, ನೇಪಾಲಿ ಮತ್ತು ಮೀಸೊ ಭಾಷೆಗಳಲ್ಲಿ ಕೇವಲ ಸಂಯುಕ್ತ ಆವೃತ್ತಿಯಿರುವುದು. ಅಂದರೆ ಇದು ತಿಂಗಳ ಒಂದನೇ ತಾರೀಖನ್ನು ಹೊಂದಿದ್ದು, ಇದರಲ್ಲಿ ಅಧ್ಯಯನ ಆವೃತ್ತಿಯ ಎಲ್ಲ ಅಧ್ಯಯನ ಲೇಖನಗಳೊಂದಿಗೆ ಸಾರ್ವಜನಿಕರಿಗಾಗಿರುವ ಆವೃತ್ತಿಯಿಂದ ಕೆಲವೊಂದು ಆಯ್ದ ಲೇಖನಗಳೂ ಇರುವುವು. 2007, ಡಿಸೆಂಬರ್ 15ರ ಇಂಗ್ಲಿಷ್ ಸಂಚಿಕೆಯಿಂದ ಬಿಟ್ಟು ಹೋದ ಅಧ್ಯಯನ ಲೇಖನಗಳನ್ನು ಆಯಾ ಭಾಷೆಗಳಲ್ಲಿ ಒಂದು ಬ್ರೋಷರ್ ರೂಪದಲ್ಲಿ ಪ್ರಕಟಿಸಲಾಗುವುದು.
6 ಕಾವಲಿನಬುರುಜುವಿನ ಈ ವಿನೂತನ ಏರ್ಪಾಡನ್ನು ಯೆಹೋವನು ಆಶೀರ್ವದಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಎಚ್ಚರ! ಪತ್ರಿಕೆಯೊಂದಿಗೆ ಜೊತೆಗೂಡಿ ಈ ಪತ್ರಿಕೆಯು ಇನ್ನಷ್ಟು ಯೋಗ್ಯ ಜನರಿಗೆ ಸುವಾರ್ತೆಯನ್ನು ತಲಪಿಸುವಂತಾಗಲಿ.—ಮತ್ತಾ. 10:11.