ನಮ್ಮ ಸುಯೋಗಗಳು ನಮಗೆ ಅತ್ಯಮೂಲ್ಯವು!
1 ಯೆಹೋವನು ಮಾನವಕುಲದ ಅಸ್ತಿತ್ವದಾದ್ಯಂತ ತನ್ನ ಸೇವಕರಿಗೆ ಅನೇಕ ವಿಧದ ಸುಯೋಗಗಳನ್ನು ನೀಡಿರುತ್ತಾನೆ. ಅಂತಸ್ತು, ವಯಸ್ಸು ಮತ್ತು ಲಿಂಗಬೇಧವಿಲ್ಲದೆ ಆತನು ಅವರಿಗೆ ಸುಯೋಗಗಳನ್ನು ಕೊಟ್ಟಿರುತ್ತಾನೆ. (ಲೂಕ 1:41, 42; ಅ. ಕೃ. 7:46; ಫಿಲಿ. 1:29) ಆತನು ನಮಗೆ ಇಂದು ಯಾವ ಸುಯೋಗಗಳನ್ನು ನೀಡುತ್ತಾನೆ?
2 ನಮಗಿರುವ ಕೆಲವು ಸುಯೋಗಗಳು: ಯೆಹೋವನಿಂದ ಶಿಕ್ಷಿತರಾಗುವ ವಿಶೇಷ ಗೌರವ ನಮಗಿದೆ. (ಮತ್ತಾ. 13:11, 15) ನಮ್ಮ ಸಭಾಕೂಟಗಳ ಸಮಯದಲ್ಲಿ ನಮ್ಮ ಅಭಿವ್ಯಕ್ತಿಗಳಿಂದ ಯೆಹೋವನನ್ನು ಸ್ತುತಿಸುವುದು ನಾವು ಆನಂದಿಸುವ ಇನ್ನೊಂದು ಸುಯೋಗವಾಗಿದೆ. (ಕೀರ್ತ. 35:18) ಹೇಳಿಕೆಗಳನ್ನು ನೀಡುವ ಅವಕಾಶಗಳು ನಮಗೆ ದೊರೆಯುವಾಗ ನಾವದನ್ನು ಉತ್ಸಾಹದಿಂದ ನೀಡುತ್ತೇವೆ. ತದ್ರೀತಿ ಸಭೆಯಲ್ಲಿ ಪ್ರತಿಯೊಂದು ನೇಮಕವನ್ನು ನಾವು ಒಂದು ಗೌರವವಾಗಿ ಎಣಿಸುವುದಾದರೆ, ಅದನ್ನು ಕೈಲಾಗುವಷ್ಟು ಉತ್ತಮವಾಗಿ ನೆರವೇರಿಸುವೆವು. ರಾಜ್ಯ ಸಭಾಗೃಹವನ್ನು ಶುದ್ಧವಾಗಿಡುವ ಮತ್ತು ಒಳ್ಳೆಯ ದುರಸ್ತಿಯಲ್ಲಿಡುವ ಸುಯೋಗದಲ್ಲಿ ನಾವು ಕ್ರಮವಾಗಿ ಪಾಲ್ಗೊಳ್ಳುತ್ತೇವೋ?
3 ದೇವರು ತಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೋ ಇಲ್ಲವೊ ಎಂದು ಲಕ್ಷಾಂತರ ಜನರು ಸಂದೇಹಪಡುತ್ತಾರೆ. ನಾವಾದರೋ ವಿಶ್ವದ ಅತ್ಯಂತ ಮಹಾನ್ ವ್ಯಕ್ತಿಯಿಂದ ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುವ ಅಸದೃಶ ಸುಯೋಗವನ್ನು ಪಡೆದಿರುತ್ತೇವೆ. (ಜ್ಞಾನೋ. 15:29) ತನ್ನ ಸೇವಕರ ಪ್ರಾರ್ಥನೆಗಳಿಗೆ ಯೆಹೋವನು ವೈಯಕ್ತಿಕವಾಗಿ ಕಿವಿಗೊಡುತ್ತಾನೆ. (1 ಪೇತ್ರ 3:12) ಪ್ರಾರ್ಥನೆಯಲ್ಲಿ ಆತನನ್ನು ಎಷ್ಟು ಸಾರಿ ಗೋಚರಿಸಬಹುದು ಎಂಬುದಕ್ಕೆ ಯಾವ ನಿರ್ಬಂಧವನ್ನೂ ಆತನು ಇಡುವುದಿಲ್ಲ. “ಎಲ್ಲಾ ಸಮಯಗಳಲ್ಲಿ” ಪ್ರಾರ್ಥನೆ ಮಾಡುವ ಸಾಧ್ಯತೆ ನಮಗಿರುವುದು ಎಂಥ ಅಮೂಲ್ಯವಾದ ಕೊಡುಗೆ!—ಎಫೆ. 6:18.
4 “ದೇವರ ಜೊತೆಕೆಲಸದವರು”: ನಮಗಿರುವ ಅತ್ಯುತ್ತಮ ಸುಯೋಗಗಳಲ್ಲಿ ಒಂದು ಯಾವುದೆಂದರೆ “ದೇವರ ಜೊತೆಕೆಲಸದವ”ರಾಗಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೇ. (1 ಕೊರಿಂ. 3:9) ಸಂತೃಪ್ತಿಯನ್ನೂ ಚೈತನ್ಯವನ್ನೂ ತರುವ ಕೆಲಸವು ಅದಾಗಿದೆ. (ಯೋಹಾ. 4:34) ಈ ಕೆಲಸವನ್ನು ಪೂರೈಸಲು ಯೆಹೋವನಿಗೆ ಮಾನವರನ್ನು ಉಪಯೋಗಿಸುವ ಅಗತ್ಯವಿಲ್ಲ. ಆದರೆ ತನ್ನ ಪ್ರೀತಿಯ ಅಭಿವ್ಯಕ್ತಿಯಾಗಿ ಈ ನೇಮಕವನ್ನು ಆತನು ನಮಗೆ ಕೊಟ್ಟಿರುತ್ತಾನೆ. (ಲೂಕ 19:39, 40) ಈ ಕೆಲಸವನ್ನು ಯೆಹೋವನು ಎಲ್ಲರಿಗೆ ಕೊಡುತ್ತಾನೆಂದು ಇದರ ಅರ್ಥವಲ್ಲ. ಬದಲಿಗೆ ಈ ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವವರು ನಿರ್ದಿಷ್ಟ ಆಧ್ಯಾತ್ಮಿಕ ಅರ್ಹತೆಗಳನ್ನು ಪೂರೈಸಬೇಕು ಮತ್ತು ಕಾಪಾಡಿಕೊಳ್ಳಬೇಕು. (ಯೆಶಾ. 52:11) ಶುಶ್ರೂಷೆಯನ್ನು ನಮ್ಮ ವಾರದ ಪ್ರಾಮುಖ್ಯ ರೂಢಿಯಾಗಿ ಮಾಡಿಕೊಳ್ಳುವ ಮೂಲಕ ನಮಗೆ ಈ ಸುಯೋಗ ಅತ್ಯಮೂಲ್ಯವೆಂದು ನಾವು ತೋರಿಸುತ್ತೇವೊ?
5 ಯೆಹೋವನು ಕೊಡುವ ಸುಯೋಗಗಳು ನಮ್ಮ ಜೀವನವನ್ನು ಸಂತೃಪ್ತಿಕರವನ್ನಾಗಿ ಮಾಡುತ್ತವೆ. (ಜ್ಞಾನೋ. 10:22) ಅವುಗಳನ್ನು ಎಂದೂ ಹಗುರವೆಂದೆಣಿಸಬೇಡಿರಿ! ನಮ್ಮ ಸೇವಾ ಸುಯೋಗಗಳನ್ನು ನಿಜವಾಗಿ ಅತ್ಯಮೂಲ್ಯವಾಗಿ ಎಣಿಸುತ್ತೇವೆಂದು ತೋರಿಸುವ ಮೂಲಕ ‘ಎಲ್ಲಾ ಒಳ್ಳೇ ದಾನಗಳನ್ನೂ ಕುಂದಿಲ್ಲದ ಎಲ್ಲಾ ವರಗಳನ್ನೂ’ ಕೊಡುವಾತನಾದ ನಮ್ಮ ಸ್ವರ್ಗೀಯ ತಂದೆಯನ್ನು ನಾವು ಮೆಚ್ಚಿಸುತ್ತೇವೆ.—ಯಾಕೋ. 1:17.