ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
ಮುಂದಿನ ಅಂದರೆ 2008ರ ಸೇವಾ ವರ್ಷಕ್ಕಾಗಿರುವ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮದ ಮುಖ್ಯವಿಷಯ, “ನಾವು ಜೇಡಿಮಣ್ಣು—ಯೆಹೋವನು ನಮ್ಮ ಕುಂಬಾರನು” ಎಂದಾಗಿದೆ. ಅದು ಯೆಶಾಯ 64:8ರ ಮೇಲೆ ಆಧರಿತವಾಗಿದೆ. ಈ ಕಾರ್ಯಕ್ರಮದಲ್ಲಿ ಸಿಗುವ ಶಾಸ್ತ್ರಾಧಾರಿತ ಬುದ್ಧಿವಾದವು ಮಹಾ ಕುಂಬಾರನಾದ ಯೆಹೋವನ ವಿವೇಕ, ನ್ಯಾಯ, ಶಕ್ತಿ ಮತ್ತು ಪ್ರೀತಿಯ ಕಡೆಗೆ ನಮ್ಮ ಗಣ್ಯತೆಯನ್ನು ಹೆಚ್ಚಿಸುವುದು.
“ಶುಶ್ರೂಷೆಯಲ್ಲಿ ಉತ್ತಮ ಬಳಕೆಯ ಪಾತ್ರೆಗಳಾಗಿ ಸೇವೆ ಸಲ್ಲಿಸುವುದು” ಎಂಬ ಭಾಷಣವನ್ನು ಸರ್ಕಿಟ್ ಮೇಲ್ವಿಚಾರಕರು ಕೊಡುವರು. ಇದು, ಸತ್ಯವನ್ನು ತಿಳಿದುಕೊಳ್ಳುವುದರಿಂದ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಸಿಗುವ ಹೇರಳ ಆಶೀರ್ವಾದಗಳನ್ನು ಹೆಚ್ಚೆಚ್ಚು ಜನರು ಹೇಗೆ ಆನಂದಿಸುತ್ತಿದ್ದಾರೆ ಎಂಬುದನ್ನು ತೋರಿಸುವುದು. “ಧ್ಯಾನವು ನಿಮ್ಮನ್ನು ಸಂರಕ್ಷಿಸುವುದು” ಎಂಬ ಭಾಷಣವು ಯೆಹೋವನ ನೀತಿಯ ಮೂಲತತ್ತ್ವಗಳ ಕುರಿತ ಗಂಭೀರ ಆಲೋಚನೆಯು ನಮ್ಮನ್ನು ಹೇಗೆ ಸಂರಕ್ಷಿಸುತ್ತದೆ ಎಂಬುದನ್ನು ತಿಳಿಸುವುದು. “‘ಇಹಲೋಕದ ನಡವಳಿಕೆಯನ್ನು ಅನುಸರಿಸದೆ’ ಇರುವುದು” ಮತ್ತು “ಮಹಾ ಕುಂಬಾರನು ನಿಮ್ಮನ್ನು ರೂಪಿಸಲಿ” ಎಂಬ ವಿಷಯದ ಕುರಿತು ಸಂದರ್ಶಿಸುತ್ತಿರುವ ಭಾಷಣಕರ್ತನು ಮಾತಾಡುವನು. “ಯೆಹೋವನಿಗೆ ಉಪಯುಕ್ತರಾಗಿರುವ ಯುವ ಜನರು” ಹಾಗೂ “ರೂಪಿಸುವ ಪ್ರಕ್ರಿಯೆಯಲ್ಲಿ ಹೆತ್ತವರ ಪ್ರಮುಖ ಪಾತ್ರ” ಎಂಬ ಭಾಷಣಗಳಿಂದ ಹೆತ್ತವರು ಮತ್ತು ಯುವ ಜನರು ಪ್ರೋತ್ಸಾಹ ಪಡೆಯುವರು. ಪ್ರತ್ಯಕ್ಷಾಭಿನಯಗಳು ಹಾಗೂ ಇಂಟರ್ವ್ಯೂಗಳ ಮೂಲಕ ನಮ್ಮ ಸಹೋದರ ಸಹೋದರಿಯರು ಶುಶ್ರೂಷೆಯಲ್ಲಿ ಏನನ್ನು ಸಾಧಿಸುತ್ತಿದ್ದಾರೆ ಎಂಬುದನ್ನು ನೋಡಲು ಮತ್ತು ಕೇಳಲು ನಾವು ಪುಳಕಿತರಾಗುವೆವು. ದೇವರಿಗೆ ತಾವು ಮಾಡಿದ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ತೋರಿಸಲು ಇಚ್ಛಿಸುವವರು ಆದಷ್ಟು ಬೇಗನೆ ತಮ್ಮ ಅಧ್ಯಕ್ಷ ಮೇಲ್ವಿಚಾರಕನಿಗೆ ತಿಳಿಸತಕ್ಕದ್ದು. ವಿಶೇಷ ಸಮ್ಮೇಳನ ದಿನದ ವಾರದಂದು ಅಭ್ಯಾಸಮಾಡಲಿರುವ ಕಾವಲಿನಬುರುಜು ಪತ್ರಿಕೆಯ ಸಂಚಿಕೆಯನ್ನು ಮರೆಯದೆ ತನ್ನಿ.
ಮಹಾ ಕುಂಬಾರನು ಉದ್ದೇಶಿಸಿದ್ದೆಲ್ಲವನ್ನು ಸಾಧಿಸುತ್ತಾನೆ. ಆದರೆ ಆತನ ರೂಪಿಸುವಿಕೆಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಸ್ವತಃ ನಮಗೆ ಬಿಟ್ಟ ವಿಷಯವಾಗಿದೆ. ಯೆಹೋವನ ಮಟ್ಟಗಳಿಗೆ ಮತ್ತು ಪರಿಷ್ಕರಣಕ್ಕೆ ವಿವೇಕದಿಂದ ಅಧೀನರಾಗುವವರು ಕುಂಬಾರನ ಚಕ್ರಕ್ಕೆ ಹಾಕಲಾಗುವ ಜೇಡಿಮಣ್ಣಿನ ಮುದ್ದೆಯಂತೆ ಆಕಾರ ಪಡೆದು ನಯಗೊಳಿಸಲ್ಪಟ್ಟು ಉತ್ತಮ ಬಳಕೆಯ ಪಾತ್ರೆಗಳಾಗಿ ಮಾರ್ಪಡಲು ಸಾಧ್ಯವಿದೆ. ಯೆಹೋವನೊಂದಿಗೆ ಸಹಕರಿಸುವ ಮೂಲಕ ನಾವು ಆತನ ಪರಮಾಧಿಕಾರವನ್ನು ಘನತೆಗೇರಿಸುತ್ತೇವೆ ಮತ್ತು ಅನೇಕ ಆಶೀರ್ವಾದಗಳನ್ನು ಪಡೆಯುತ್ತೇವೆ.