ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಎಟಕಿಸಿಕೊಳ್ಳುವುದು
1ದೈವಿಕ ಮಾರ್ಗದಲ್ಲಿ ನಡೆಯುವಂತೆ ಮತ್ತು ‘ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯುತ್ತಾ ಇರುವಂತೆ’ ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿವಾದ ನೀಡಿದನು. (1 ಥೆಸ. 4:2) ನಮಗೆ ಇದು ಯಾವ ಅರ್ಥ ಹೊಂದಿದೆ? ನಾವು ಆಧ್ಯಾತ್ಮಿಕ ಚಟುವಟಿಕೆಗಳನ್ನು ಹೆಚ್ಚಿಸಲು ಅವಕಾಶಗಳನ್ನು ಹುಡುಕುತ್ತಾ ಇರಬೇಕು ಮತ್ತು ‘ನಮಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸಲು’ ಯಾವಾಗಲೂ ಪ್ರಯತ್ನಿಸುತ್ತಿರಬೇಕು ಎಂಬುದೇ.—2 ತಿಮೊ. 4:5.
2ಪ್ರಚೋದನೆ: ನಮ್ಮ ಸೃಷ್ಟಿಕರ್ತನನ್ನು ಹೆಚ್ಚು ಪೂರ್ಣವಾಗಿ ಸೇವಿಸಬೇಕೆಂಬ ಬಯಕೆಯು ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. ನಾವು ಆಧ್ಯಾತ್ಮಿಕವಾಗಿ ಬೆಳೆಯಲು ಬಯಸುತ್ತೇವೆ ಮತ್ತು ನಮ್ಮ ಶುಶ್ರೂಷೆಯನ್ನು ಉತ್ತಮಗೊಳಿಸಲು ಅವಕಾಶಗಳಿಗಾಗಿ ಹುಡುಕುತ್ತಿರುತ್ತೇವೆ. ಯೋಗ್ಯವಾದ ಪ್ರಚೋದನೆಯೊಂದಿಗೆ ಒಳ್ಳೆಯ ರೂಢಿಗಳು ದೇವಪ್ರಭುತ್ವಾತ್ಮಕ ಗುರಿಗಳನ್ನು ತಲಪುವಂತೆ ಸಹಾಯಮಾಡುತ್ತವೆ.—ಕೀರ್ತ. 1:1, 2; ಫಿಲಿ. 4:6; ಇಬ್ರಿ. 10:24, 25.
3ನಾವು ನಮ್ಮ ಶುಶ್ರೂಷೆಯನ್ನು ವಿಸ್ತರಿಸಬೇಕಾದರೆ ಕೊಡುವ ಅಂದರೆ ಸ್ವತ್ಯಾಗದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯೇಸುವಿನ ಉತ್ತಮ ಮಾದರಿಯನ್ನು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸುವ ಮೂಲಕ ಅಂಥ ಮನೋಭಾವವನ್ನು ಬೆಳೆಸಿಕೊಳ್ಳಬಲ್ಲೆವು. (ಮತ್ತಾ. 20:28) ಯೇಸು ತನ್ನ ಶುಶ್ರೂಷೆಯಾದ್ಯಂತ ಇತರರ ಸೇವೆಮಾಡುವುದರಲ್ಲಿ ಹೆಚ್ಚಿನ ಸಂತೋಷವನ್ನು ಕಂಡುಕೊಂಡನು. (ಅ. ಕೃ. 20:35) ಜನರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ ಮತ್ತು ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಸಿಗುವ ಸದವಕಾಶಗಳನ್ನು ಜಾಗರೂಕತೆಯಿಂದ ಉಪಯೋಗಿಸಿಕೊಳ್ಳುವ ಮೂಲಕ ನಾವು ಯೇಸುವನ್ನು ಅನುಕರಿಸಬಲ್ಲೆವು—ಯೆಶಾ. 6:8.
4ಹೆತ್ತವರ ಪಾತ್ರ: ಇತರರ ಸೇವೆಮಾಡುವ ಮತ್ತು ಶುಶ್ರೂಷೆಯನ್ನು ವಿಸ್ತರಿಸುವ ಬಯಕೆಯನ್ನು ಮಕ್ಕಳಲ್ಲಿ ಎಳೆಯ ಪ್ರಾಯದಲ್ಲೇ ಬೇರೂರಿಸಬೇಕು. ಕುಟುಂಬದ ಸದಸ್ಯರು ತಮ್ಮ ಶುಶ್ರೂಷೆಯನ್ನು ವಿಸ್ತರಿಸಲಿಕ್ಕಾಗಿ ಶ್ರದ್ಧೆ ವಹಿಸುವುದನ್ನು ಮತ್ತು ಸಕ್ರಿಯರಾಗಿ ಸೇವೆಯಲ್ಲಿ ಪಾಲ್ಗೊಳ್ಳುವುದನ್ನು ಎಳೆಯ ಮಕ್ಕಳು ಗಮನಿಸುತ್ತಾರೆ. ಒಬ್ಬ ಸಹೋದರನು ಚಿಕ್ಕವನಿದ್ದಾಗಲೇ ಸಭಾ ಚಟುವಟಿಕೆಗಳಲ್ಲಿ ತನ್ನ ಅಜ್ಜನೊಂದಿಗೆ ಕೆಲಸಮಾಡಿದ್ದರಿಂದ ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಪ್ರಚೋದಿಸಲ್ಪಟ್ಟನು. ಅಜ್ಜನ ಶ್ರದ್ಧೆ ಮತ್ತು ಆನಂದವು ತನ್ನ ಸಹೋದರರ ಸೇವೆಮಾಡಲು ಅವಕಾಶಗಳಿಗಾಗಿ ಹುಡುಕುವಂತೆ ಅವನನ್ನು ಪ್ರೇರಿಸಿತು. ಅವನೀಗ ಒಬ್ಬ ಶುಶ್ರೂಷಾ ಸೇವಕನಾಗಿದ್ದಾನೆ.
5ಸಹೋದರರ ಆವಶ್ಯಕತೆ: “ಸಭಾಧ್ಯಕ್ಷನ ಉದ್ಯೋಗವನ್ನು ಪಡಕೊಳ್ಳಬೇಕೆಂದಿರುವವನು ಒಳ್ಳೇ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆ.” (1 ತಿಮೊ. 3:1) ಈ ಮಾತುಗಳು ಯೆಹೋವನ ಸಂಘಟನೆಯಲ್ಲಿ ಹೆಚ್ಚಿನ ಸೇವಾ ಸುಯೋಗಗಳಿಗೆ ಎಟಕಿಸಿಕೊಳ್ಳಲು ಅರ್ಹರಾಗುವಂತೆ ಸಹೋದರರನ್ನು ಪ್ರೋತ್ಸಾಹಿಸುತ್ತವೆ. ಇದಕ್ಕೆ ವಿಶೇಷ ಕೌಶಲಗಳು ಅಥವಾ ಸಹಜ ಸಾಮರ್ಥ್ಯಗಳು ಬೇಕೆಂದೇನಿಲ್ಲ. ಹಾಗೆ ಎಟಕಿಸಿಕೊಳ್ಳುವ ಸಹೋದರನು ರಾಜ್ಯವನ್ನು ಪ್ರಥಮವಾಗಿ ಹುಡುಕುವನು ಮತ್ತು ಶುಶ್ರೂಷೆಯಲ್ಲಿ ಹುರುಪಿನಿಂದ ಪಾಲ್ಗೊಳ್ಳುವನು. (ಮತ್ತಾ. 6:33; 2 ತಿಮೊ. 4:5) ಇತರರಿಗೆ ಒಳ್ಳೆಯ ಮಾದರಿಯಾಗಿರಲು ಅವನು ಪ್ರಯಾಸಪಡುವನು.
6ಲೋಕದಾದ್ಯಂತ: ಯೆಹೋವನು ಒಟ್ಟುಗೂಡಿಸುವ ಕೆಲಸದ ವೇಗವನ್ನು ಹೆಚ್ಚಿಸುತ್ತಿದ್ದಾನೆ. (ಯೆಶಾ. 60:22) ಯೇಸುವಿನ ಮಾದರಿಯನ್ನು ಅನುಸರಿಸುವವರೆಲ್ಲರೂ ತಮ್ಮ ಶುಶ್ರೂಷೆಯಲ್ಲಿ ಇನ್ನೂ ಹೆಚ್ಚನ್ನು ತ್ವರಿತಗತಿಯಲ್ಲಿ ಮಾಡಬೇಕಾಗಿದೆ. 2006ನೇ ಸೇವಾ ವರ್ಷದ ಲೋಕವ್ಯಾಪಕ ವರದಿಯು 2,48,327 ಮಂದಿ ದೀಕ್ಷಾಸ್ನಾನ ಹೊಂದಿದರೆಂದು ತೋರಿಸುತ್ತದೆ. ಅಂದರೆ ಪ್ರತಿದಿನ ಸರಾಸರಿ 680ಕ್ಕಿಂತ ಹೆಚ್ಚು ಮಂದಿ ಹೊಸಬರು ಸೇರುತ್ತಿದ್ದಾರೆ! ಆದುದರಿಂದ ನಮ್ಮ ಶುಶ್ರೂಷೆಯನ್ನು ಇನ್ನೂ ಹೆಚ್ಚಾಗಿ ಮಾಡಲು ನಾವೆಲ್ಲರೂ ಅವಕಾಶಗಳಿಗಾಗಿ ಹುಡುಕುತ್ತಾ ಇರೋಣ.