ಮನಮುರಿದವರಿಗೆ ಸಾಂತ್ವನ
1 ಇಡೀ ಮಾನವ ಇತಿಹಾಸದಲ್ಲಿ ಸಾಂತ್ವನ ನೀಡುವ ಅಗತ್ಯವು ಇಂದಿರುವಷ್ಟು ಹಿಂದೆಂದೂ ಇರಲಿಲ್ಲ. ಆದುದರಿಂದಲೇ, ನಮ್ಮ ಅರಸನಾದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾ ನಾವು ಸಹ ‘ಮನಮುರಿದವರನ್ನು ಕಟ್ಟಿ ವಾಸಿಮಾಡಲು’ ಶ್ರಮಿಸುತ್ತೇವೆ.—ಯೆಶಾ. 61:1.
2 ಸಾಂತ್ವನ ನೀಡುವ ಪರಿ: ನಾವು ಕ್ಷೇತ್ರಸೇವೆಯಲ್ಲಿ ಭೇಟಿಮಾಡುವ ಜನರಿಗೆ ಸಾಂತ್ವನ ನೀಡಬೇಕಾದರೆ ನಮ್ಮ ನಿರೂಪಣೆಯು ಉತ್ತೇಜನದಾಯಕವಾಗಿರಬೇಕು. ಅದೇವೇಳೆ ನಾವು ಸಮತೂಕವನ್ನು ಕಾಪಾಡಿಕೊಳ್ಳಬೇಕು. ಲೋಕದಲ್ಲಿನ ದುಷ್ಟತನ ಹಾಗೂ ಸುಳ್ಳು ಬೋಧನೆಗಳ ಕುರಿತ ಚರ್ಚೆಯನ್ನು ನಾವು ಸೀಮಿತವಾಗಿಡುವಾಗ, ನಮ್ಮ ಸಂಭಾಷಣೆಯಲ್ಲಿ ಬೈಬಲ್ ಸತ್ಯ ಹಾಗೂ ದೇವರ ಸಾಂತ್ವನದಾಯಕ ವಾಗ್ದಾನಗಳ ಉಜ್ವಲ ನಿರೀಕ್ಷೆಯೇ ಪ್ರಧಾನವಾಗಿರುತ್ತದೆ. ಇದರ ಅರ್ಥ ನಾವು ಹರ್ಮಗೆದೋನಿನ ಮಾತನ್ನೇ ಎತ್ತಬಾರದೆಂದಲ್ಲ. ನಮ್ಮ ನೇಮಕವು, “ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿತೀರಿಸುವ ದಿನ” ಇವೆರಡನ್ನೂ ಪ್ರಚುರಗೊಳಿಸುವುದು ಮತ್ತು ‘ದುಷ್ಟನು ತನ್ನ ದುರ್ಮಾರ್ಗವನ್ನು ಬಿಡುವಂತೆ ಎಚ್ಚರಿಸುವುದೇ’ ಆಗಿದೆ. ಹಾಗಿದ್ದರೂ, ಹರ್ಮಗೆದೋನಿನ ಕುರಿತ ಎಚ್ಚರಿಕೆಯಾಗಲಿ ಅದರಿಂದ ಬರುವ ವಿನಾಶದ ಸಂಗತಿಯಾಗಲಿ ಮುಖ್ಯ ವಿಷಯವಾದ ದೇವರ ರಾಜ್ಯದ ಸುವಾರ್ತೆಯನ್ನು ಬದಿಗೊತ್ತಬಾರದು.—ಯೆಶಾ. 61:2; ಯೆಹೆ. 3:18; ಮತ್ತಾ. 24:14.
3 ಮನೆಮನೆಯ ಸೇವೆಯಲ್ಲಿ: ಅಸ್ವಸ್ಥತೆ, ಆಪ್ತರೊಬ್ಬರ ಸಾವು, ಅನ್ಯಾಯ ಅಥವಾ ಆರ್ಥಿಕ ಸಮಸ್ಯೆಗಳಿಂದಾಗಿ ನಿರಾಶೆಗೊಂಡ ಜನರನ್ನು ನಾವು ಆಗಾಗ್ಗೆ ಭೇಟಿಯಾಗುತ್ತೇವೆ. ಕ್ರಿಸ್ತನನ್ನು ಅನುಕರಿಸುತ್ತಾ ನಾವು ಶುಶ್ರೂಷೆಯಲ್ಲಿ ಭೇಟಿಯಾಗುವ ಜನರಿಗಾಗಿ ‘ಕನಿಕರಪಟ್ಟು’ ಅವರಿಗೆ ಅನುಕಂಪ ತೋರಿಸುತ್ತೇವೆ. (ಲೂಕ 7:13; ರೋಮಾ. 12:15) ಅವರ ಸಮಸ್ಯೆಗಳಿಗೆ ಸಂಬಂಧಪಟ್ಟ ಒಂದೆರಡು ವಚನಗಳನ್ನು ಬೈಬಲಿನಿಂದ ತೋರಿಸುತ್ತೇವಾದರೂ ನಾವು ‘ಕಿವಿಗೊಡುವುದರಲ್ಲಿ ತೀವ್ರವಾಗಿದ್ದು’ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಂತೆ ಅವಕಾಶಕೊಡಬೇಕು. (ಯಾಕೋ. 1:19) ಅವರ ಮಾತುಗಳಿಗೆ ನಾವು ಮೊದಲು ಕಿವಿಗೊಟ್ಟರೆ ಸಾಂತ್ವನ ಹೇಳಲು ಸುಲಭವಾಗುತ್ತದೆ.
4 ಸಂಭಾಷಣೆ ನಡೆಯುತ್ತಿರುವಾಗ ನಾವು ಸೂಕ್ತ ಸಮಯ ನೋಡಿ, “ಉತ್ತೇಜನದಾಯಕವಾದ ಕೆಲವು ಮಾತುಗಳನ್ನು ಬೈಬಲಿನಿಂದ ನಿಮಗೆ ತೋರಿಸಲು ನಾನು ಬಯಸುವೆ” ಎಂದು ಹೇಳಬಹುದು. ಮನೆಯವನು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ನಾವು ವಿವೇಚನೆಯನ್ನು ಉಪಯೋಗಿಸುವಲ್ಲಿ ಅವನ ಒಂದೊಂದೂ ತಪ್ಪುವಿಚಾರವನ್ನು ನಾವು ತಿದ್ದಲು ಪ್ರಯತ್ನಿಸುವುದಿಲ್ಲ. ಬದಲಿಗೆ, ಅವನ ಮನಸ್ಸನ್ನು ಬಲಪಡಿಸಲಿಕ್ಕಾಗಿ ಬೈಬಲನ್ನು ಉಪಯೋಗಿಸಿ ಪ್ರೋತ್ಸಾಹ ಮತ್ತು ಸಾಂತ್ವನವನ್ನು ನೀಡುವುದೇ ನಮ್ಮ ಮುಖ್ಯ ಧ್ಯೇಯವಾಗಿರುತ್ತದೆ. ಇದರ ಕುರಿತು, ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಪುಸ್ತಕದ ಪುಟ 117-121ರಲ್ಲಿರುವ, “ಉತ್ತೇಜನ” (“Encouragement”) ಎಂಬ ಶೀರ್ಷಿಕೆಯ ಕೆಳಗಿರುವ ವಿಷಯಗಳನ್ನು ನೀವು ಓದಬಹುದು. ಅಥವಾ ಮನಗುಂದಿದವರಿಗೆ ಸಾಂತ್ವನ ಎಂಬ ಟ್ರ್ಯಾಕ್ಟನ್ನು ಮನೆಯವರಿಗೆ ಕೊಟ್ಟು ಅದರಲ್ಲಿನ ಧೈರ್ಯತುಂಬುವ ವಿಷಯವನ್ನು ಚರ್ಚಿಸಬಹುದು.
5 ಸಾಂತ್ವನ ನೀಡಲು ಅವಕಾಶಗಳಿಗಾಗಿ ಹುಡುಕಿರಿ: ನಿಮಗೆ ತಿಳಿದಿರುವ ಒಬ್ಬ ನೆರೆಯವನು, ಸಹದ್ಯೋಗಿ, ಸಹಪಾಠಿ ಅಥವಾ ಕುಟುಂಬ ಸದಸ್ಯನಿಗೆ ಸಾಂತ್ವನದ ಅಗತ್ಯವಿದೆಯೋ? ಅಂಥವರ ಮನೆಗೆ ಹೋಗಿ ಬೈಬಲ್ ನೀಡುವಂಥ ಸಾಂತ್ವನದ ಕುರಿತು ಅವರೊಂದಿಗೆ ಮಾತಾಡಲು ಏಕೆ ಪ್ರಯತ್ನಿಸಬಾರದು? ಯಾವ ವಿಷಯದ ಕುರಿತು ಅವರಿಗೆ ಸಾಂತ್ವನ ಬೇಕೆಂದು ನಿಮಗೆ ತಿಳಿದಿದ್ದರೆ ಆ ನಿರ್ದಿಷ್ಟ ಸನ್ನಿವೇಶಕ್ಕೆ ತಯಾರಿಸಿ ಹೋಗಿ. ಕೆಲವರು ಪತ್ರ ಬರೆಯುವ ಅಥವಾ ಫೋನ್ ಮಾಡುವ ಮೂಲಕ ಸಾಂತ್ವನ ನೀಡಿದ್ದಾರೆ. ನೆರೆಯವರ ಮೇಲಿರುವ ನಿಜ ಪ್ರೀತಿಯು, ನಾವು ಸಹಾನುಭೂತಿಯನ್ನು ತೋರಿಸಿ ಅಗತ್ಯವಾಗಿರುವ ಸಾಂತ್ವನವನ್ನು ಬೈಬಲಿನಿಂದ ನೀಡುವಂತೆ ನಮ್ಮನ್ನು ಪ್ರಚೋದಿಸುತ್ತದೆ.—ಲೂಕ 10:25-37.
6 ಹೌದು, ದುಃಖಿಸುತ್ತಿರುವವರನ್ನು ಸಂತೈಸುವ, ಮನಗುಂದಿದವರನ್ನು ಹುರಿದುಂಬಿಸುವ ಮತ್ತು ಜನರಲ್ಲಿ ಉಜ್ವಲ ಭವಿಷ್ಯದ ನಿರೀಕ್ಷೆಯನ್ನು ತುಂಬಿಸುವ ನೇಮಕ ನಮಗಿದೆ. ಲೋಕದ ಎಲ್ಲ ಕಡೆಗಳಲ್ಲಿರುವ ಜನರಿಗೆ ಬೇಕಾದ ಸಾಂತ್ವನವು ಇದೇ ಆಗಿದೆ. ದೇವರು ವಾಗ್ದಾನಿಸಿದ ಅನೇಕಾನೇಕ ಒಳ್ಳೇ ವಿಷಯಗಳ ಕುರಿತು ಆನಂದದಿಂದ ಮಾತಾಡುವುದು ಪ್ರಾಮಾಣಿಕ ಹೃದಯದ ಜನರಿಗೆ ಸಾಂತ್ವನ ಹಾಗೂ ನಿರೀಕ್ಷೆಯನ್ನು ಕೊಡುತ್ತದೆ. ಆದಕಾರಣ, ಮನಮುರಿದವರನ್ನು ಕಟ್ಟಿ ವಾಸಿಮಾಡಬೇಕಾದ ಅಗತ್ಯವನ್ನು ನಾವು ಸದಾ ನೆನಪಿನಲ್ಲಿಡೋಣ.