ಐಶ್ವರ್ಯ ನಿಮ್ಮದಾಗಬಲ್ಲದು!
1. ರೆಗ್ಯುಲರ್ ಪಯನೀಯರ್ ಸೇವೆ ಮಾಡುವುದರ ಕುರಿತು ನೀವೇಕೆ ಯೋಚಿಸಬೇಕು?
1 ಜೀವನ ಹೆಚ್ಚು ಸಾರ್ಥಕ ಹಾಗೂ ಆನಂದಕರವಾಗಬೇಕೆಂದು ಆಶಿಸುತ್ತೀರೋ? ಇತರರಿಗೆ ನೆರವು ನೀಡುವಾಗ ನಿಮಗೆ ಸಂತೋಷ ಹಾಗೂ ತೃಪ್ತಿ ಸಿಗುತ್ತದೋ? ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಇಚ್ಛಿಸುತ್ತೀರೋ? ಈ ಪ್ರಶ್ನೆಗಳಲ್ಲಿ ಕಡಿಮೆಪಕ್ಷ ಒಂದಕ್ಕಾದರೂ ನಿಮ್ಮ ಉತ್ತರ ಹೌದೆಂದಿರುವಲ್ಲಿ ರೆಗ್ಯುಲರ್ ಪಯನೀಯರ್ ಸೇವೆ ಮಾಡುವುದರ ಬಗ್ಗೆ ನೀವು ಯೋಚಿಸಬಹುದು. ಹಾಗಿದ್ದರೂ, ಕುಟುಂಬದ ಹಾಗೂ ಇತರ ಶಾಸ್ತ್ರಾಧಾರಿತ ಜವಾಬ್ದಾರಿಗಳು, ಅನಾರೋಗ್ಯ ಮತ್ತು ದೈಹಿಕ ನ್ಯೂನತೆಗಳನ್ನು ಕಡೆಗಣಿಸಲಾಗುವುದಿಲ್ಲ.
2. ರೆಗ್ಯುಲರ್ ಪಯನೀಯರರಿಗೆ ಸಿಗುವ ಆಧ್ಯಾತ್ಮಿಕ ಐಶ್ವರ್ಯದ ಬಗ್ಗೆ ತಿಳಿಸಿರಿ.
2 ಸೊಲೊಮೋನನ ಪ್ರೇರಿತ ಬರಹದಲ್ಲಿ ಯೆಹೋವನ ಆಶೀರ್ವಾದದಿಂದ ಭೌತಿಕ ಐಶ್ವರ್ಯ ಲಭಿಸುತ್ತದೆ ಎಂದು ತಿಳಿಸಲಾಗಿದೆ. (ಜ್ಞಾನೋ. 10:22) ಆದರೆ ಇಂದು ಯೆಹೋವನ ಆಶೀರ್ವಾದವು ಮುಖ್ಯವಾಗಿ ಆಧ್ಯಾತ್ಮಿಕ ಐಶ್ವರ್ಯವನ್ನು ತರುತ್ತದೆ. ರೆಗ್ಯುಲರ್ ಪಯನೀಯರರಿಗೆ ಇಂಥ ಐಶ್ವರ್ಯ ಸಮೃದ್ಧವಾಗಿ ದೊರಕುತ್ತದೆ. ದೃಷ್ಟಾಂತಕ್ಕೆ, ಅವರು ಕೇವಲ ವೈಯಕ್ತಿಕ ಕೆಲಸಗಳಲ್ಲೇ ಸಮಯ ಕಳೆಯದೆ ‘ಅದನ್ನು ಬೆಲೆಯುಳ್ಳದ್ದಾಗಿ ಉಪಯೋಗಿಸುವ’ ಮೂಲಕ, ಕೊಡುವುದರಿಂದ ಸಿಗುವ ಸಂತೋಷವನ್ನು ಸವಿಯುತ್ತಾರೆ. (ಕೊಲೊ. 4:5; ಅ. ಕೃ. 20:35) ಅವರು ಪ್ರೀತಿಯಿಂದ ಮಾಡುವ ಸಕಲ ಪ್ರಯಾಸವನ್ನು ಯೆಹೋವನು ಗಮನಿಸುತ್ತಾನೆ ಮತ್ತು ಮೆಚ್ಚುತ್ತಾನೆ. ಅವರು ‘ಪರಲೋಕದಲ್ಲಿ ಮಾಡಿರುವ’ ಇಂಥ ‘ಗಂಟಿನ’ ಮೌಲ್ಯವು ಎಂದಿಗೂ ಕಡಿಮೆಯಾಗದು. (ಮತ್ತಾ. 6:20; ಇಬ್ರಿ. 6:10) ಅಲ್ಲದೆ ಪಯನೀಯರರು ತಮ್ಮ ‘ಕಣ್ಣನ್ನು ನೆಟ್ಟಗೆ’ ಅಥವಾ ಸರಳವಾಗಿಟ್ಟು, ತಮ್ಮ ಅಗತ್ಯಗಳನ್ನು ಯೆಹೋವನು ನೀಗಿಸುವನೆಂಬ ಭರವಸೆಯನ್ನಿಡುವಾಗ ಆತನೊಂದಿಗಿನ ಅವರ ಸಂಬಂಧ ಇನ್ನಷ್ಟು ಬಲವಾಗುತ್ತದೆ.—ಮತ್ತಾ. 6:22, 25, 32; ಇಬ್ರಿ. 13:5, 6.
3. ಆಧ್ಯಾತ್ಮಿಕ ಐಶ್ವರ್ಯದ ಬೆನ್ನಟ್ಟುವಿಕೆ ಮತ್ತು ಭೌತಿಕ ಐಶ್ವರ್ಯದ ಬೆನ್ನಟ್ಟುವಿಕೆಯ ನಡುವಿನ ವ್ಯತ್ಯಾಸ ತಿಳಿಸಿ.
3 ಭೌತಿಕ ಐಶ್ವರ್ಯದ ಹಿಂದೆಬೀಳುವುದು ‘ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಿಗೆ’ ನಡೆಸುತ್ತದೆ. (1 ತಿಮೊ. 6:9, 10; ಯಾಕೋ. 5:1-3) ಆದರೆ ಯೆಹೋವನ ಆಶೀರ್ವಾದಗಳ ವಿಷಯದಲ್ಲಾದರೋ ಹೀಗಾಗಲು ಸಾಧ್ಯವೇ ಇಲ್ಲ. ರೆಗ್ಯುಲರ್ ಪಯನೀಯರರು ಅಧಿಕಾಂಶ ಸಮಯವನ್ನು ಶುಶ್ರೂಷೆಯಲ್ಲಿ ಕಳೆಯುವಾಗ, ತಮ್ಮ ಆಧ್ಯಾತ್ಮಿಕ ಸಮತೋಲನ ಕಾಪಾಡಿಕೊಳ್ಳಲು ಮತ್ತು ಹೆಚ್ಚು ಉತ್ತಮ ಕಾರ್ಯಗಳ ಮೇಲೆ ಗಮನ ಕೇಂದ್ರೀಕರಿಸಲು ಶಕ್ತರಾಗುತ್ತಾರೆ. (ಫಿಲಿ. 1:10) ಒಬ್ಬ ಸಹೋದರನು ಪಯನೀಯರನಾಗುವ ಸಲುವಾಗಿ, ಹೆಚ್ಚಿನ ಸಮಯವನ್ನು ಕಬಳಿಸುತ್ತಿದ್ದ ಇಂಜಿನೀಯರಿಂಗ್ ವೃತ್ತಿಯನ್ನು ಬಿಟ್ಟುಬಿಟ್ಟನು. ಅವನಂದದ್ದು: “ನನ್ನ ಉದ್ಯೋಗದಿಂದ ನನಗೆ ತುಂಬ ಮಾನಸಿಕ ಒತ್ತಡವಿರುತ್ತಿತ್ತು. ಆದರೆ ಈಗ ಪಯನೀಯರ್ ಸೇವೆಮಾಡುವಾಗ ಅಂಥ ಒತ್ತಡವೇ ಇಲ್ಲ. ಜನರಿಗೆ ಸತ್ಯ ಕಲಿಸುವ ಮೂಲಕ ಅವರಿಗೆ ಸಹಾಯ ಮಾಡುವ ಅವಕಾಶ ನನಗೆ ಸಿಕ್ಕಿದೆ. ಸತ್ಯಕ್ಕೆ ಪ್ರತಿಕ್ರಿಯೆ ತೋರಿಸುವವರಿಗೆ ನೆರವಾಗುವುದು ಹೆಚ್ಚು ಸಾರ್ಥಕವೂ ಆಸಕ್ತಿಕರವೂ ಆಗಿದೆ.”
4. ಇತರರಿಗೆ ಆಶೀರ್ವಾದಗಳನ್ನು ತರುವ ರೆಗ್ಯುಲರ್ ಪಯನೀಯರರು ಸ್ವತಃ ಹೇಗೆ ಆಶೀರ್ವಾದ ಪಡೆಯುತ್ತಾರೆ?
4 ಇತರರಿಗೆ ಆಶೀರ್ವಾದಗಳು: ಇಂದು ಪ್ರತಿಯೊಬ್ಬರು ‘ಕಠಿನಕಾಲಗಳನ್ನು’ ಅನುಭವಿಸುತ್ತಿದ್ದಾರೆ. (2 ತಿಮೊ. 3:1) ಎಲ್ಲೆಡೆಯೂ ಜನರಿಗೆ ನಿರೀಕ್ಷೆಯ ಅಗತ್ಯ ಬಹಳಷ್ಟಿದೆ. ಹತಾಶೆಯಿಂದ ಬಾಡಿರುವ ಜನರ ಮುಖಗಳು ಸಂತೋಷದಿಂದ ಅರಳುವುದನ್ನು ನೋಡುವಾಗ ರಾಜ್ಯ ಘೋಷಕರು ಹರ್ಷಿಸುತ್ತಾರೆ. ಹಾಗಾದರೆ ಇಂಥ ಸಂತೋಷವು, ಜೀವರಕ್ಷಕ ಕೆಲಸದಲ್ಲಿ ಪ್ರತಿ ವರ್ಷ 800ಕ್ಕಿಂತ ಹೆಚ್ಚು ತಾಸುಗಳನ್ನು ಕಳೆಯುವ ರೆಗ್ಯುಲರ್ ಪಯನೀಯರರಲ್ಲಿ ಎಷ್ಟು ಅಧಿಕವಾಗಿರಬೇಕು!—1 ತಿಮೊ. 4:16.
5, 6. ರೆಗ್ಯುಲರ್ ಪಯನೀಯರರಾಗಲು ನಿಮಗೆ ಯಾವುದು ಸಹಾಯ ಮಾಡುವುದು?
5 ರೆಗ್ಯುಲರ್ ಪಯನೀಯರರಾಗುವ ಕುರಿತು ನೀವು ಗಂಭೀರವಾಗಿ ಯೋಚಿಸಿದ್ದೀರಾ? ಇದು, ಪ್ರಮುಖವಲ್ಲದ ಚಟುವಟಿಕೆಗಳಲ್ಲಿ “ಕಾಲವನ್ನು ಸುಮ್ಮನೆ ಕಳಕೊಳ್ಳದೆ” ಇರುವುದನ್ನು ಅವಶ್ಯಪಡಿಸೀತು. (ಎಫೆ. 5:15, 16) ಅನೇಕರು ಇದನ್ನು ಮಾಡಿದ್ದಾರೆ ಮತ್ತು ತಮ್ಮ ಜೀವನವನ್ನು ಸರಳೀಕರಿಸಿದ್ದಾರೆ. ಇದರಿಂದಾಗಿ ಅವರು ತಮ್ಮ ಉದ್ಯೋಗದಲ್ಲಿ ಕಳೆಯುವ ಸಮಯವನ್ನು ಕಡಿಮೆಗೊಳಿಸಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಶಕ್ತರಾಗಿದ್ದಾರೆ. ಅವರೊಂದಿಗೆ ಜೊತೆಗೂಡಲು ನೀವು ಸಹ ನಿಮ್ಮ ಕೆಲಸಕಾರ್ಯಗಳನ್ನು ಹೊಂದಿಸಿಕೊಳ್ಳಬಲ್ಲಿರಾ?
6 ಪ್ರಾಯೋಗಿಕ ಕಾಲತಖ್ತೆಯನ್ನು ತಯಾರಿಸಿ ಕಾರ್ಯರೂಪಕ್ಕೆ ಹಾಕಲು ಬೇಕಾದ ಜ್ಞಾನ ಇಲ್ಲವೇ ವಿವೇಕವನ್ನು ಕೊಡಲು ಯೆಹೋವನಿಗೆ ಪ್ರಾರ್ಥಿಸಿರಿ. (ಯಾಕೋ. 1:5) ನಿಮ್ಮ ಸೇವೆಗೆ ಪ್ರತಿಯಾಗಿ ನೀವು ಎಂಥ ಆಶೀರ್ವಾದಗಳನ್ನು ನಿರೀಕ್ಷಿಸಬಲ್ಲಿರಿ? ತುಂಬಿತುಳುಕುವ ಆಧ್ಯಾತ್ಮಿಕ ಐಶ್ವರ್ಯ! ಅಲ್ಲದೆ ಯೆಹೋವನು ನಿಮ್ಮ ಭೌತಿಕ ಆವಶ್ಯಕತೆಗಳನ್ನೂ ಪೂರೈಸುವನು. (ಮತ್ತಾ. 6:33) ಈ ರೀತಿಯಲ್ಲಿ ಯೆಹೋವನನ್ನು ಪರೀಕ್ಷಿಸಿ ನೋಡುವವರು “ಸ್ಥಳಹಿಡಿಯಲಾಗದಷ್ಟು ಸುವರವನ್ನು” ಪಡೆಯುವರು.—ಮಲಾ. 3:10.