ನಾವು ಕೋಟೆಗಳನ್ನು ಕೆಡವಿಹಾಕುತ್ತಿದ್ದೇವೆ
1 ಸೈತಾನನು ಶತಮಾನಗಳಿಂದ ಸುಳ್ಳು ಬೋಧನೆ ಮತ್ತು ವಂಚನೆಯನ್ನು ಉಪಯೋಗಿಸುತ್ತಾ ಅನೇಕ ಜನರ ಹೃದಮನಗಳಲ್ಲಿ ಮಹಾ ತಡೆಗಳನ್ನು ನಿರ್ಮಿಸಿದ್ದಾನೆ. ತ್ರಯ್ಯೆಕ, ಆತ್ಮದ ಅಮರತ್ವ ಮತ್ತು ನರಕಾಗ್ನಿಯಂಥ ತತ್ತ್ವಗಳನ್ನು ಅವನು ಹಬ್ಬಿಸಿದ್ದಾನೆ. ಸೃಷ್ಟಿಕರ್ತನ ಅಸ್ತಿತ್ವ ಮತ್ತು ಬೈಬಲಿನ ವಿಶ್ವಾಸಾರ್ಹತೆಯ ಬಗ್ಗೆ ಅವನು ಸಂದೇಹಗಳನ್ನು ಎಬ್ಬಿಸುತ್ತಾನೆ. ಸತ್ಯದ ಪ್ರಕಾಶವು ಜನರಿಗೆ ಗೋಚರಿಸದಂತೆ ಕುಲ ಮತ್ತು ರಾಷ್ಟ್ರೀಯತೆಯು ತಡೆಯಾಗಿ ನಿಂತಿದೆ. (2 ಕೊರಿಂ. 4:4) ಅಂಥ ಬಲವಾದ ಕೋಟೆಯಂತಿರುವ ನಂಬಿಕೆಗಳನ್ನು ನಾವು ಹೇಗೆ ಕೆಡವಿಹಾಕಬಲ್ಲೆವು?—2 ಕೊರಿಂ. 10:4, 5.
2 ಭಾವನೆಗಳು ಒಳಗೂಡಿವೆ: ದೀರ್ಘಕಾಲದಿಂದಿರುವ ತಮ್ಮ ನಂಬಿಕೆಗಳ ಕುರಿತು ಕೆಲವೊಮ್ಮೆ ಜನರು ತುಂಬಾ ಭಾವುಕರಾಗಿರುತ್ತಾರೆ. ಕೆಲವರು ತಮ್ಮ ಬಾಲ್ಯದಿಂದಲೇ ತಪ್ಪಾದ ನಂಬಿಕೆಗಳನ್ನು ಇಟ್ಟುಕೊಂಡಿರುತ್ತಾರೆ. ಅಂಥವರಿಗೆ ನಾವು ಸಹಾಯ ಮಾಡಬೇಕಾದರೆ, ಅವರ ದೃಷ್ಟಿಕೋನಕ್ಕೆ ಗೌರವ ತೋರಿಸುವ ರೀತಿಯಲ್ಲಿ ಮಾತಾಡಬೇಕು.—1 ಪೇತ್ರ 3:15.
3 ಅಂಥ ವ್ಯಕ್ತಿಗಳಿಗೆ ತಾವು ನಂಬುವುದನ್ನು ಮತ್ತು ಅದನ್ನು ಏಕೆ ನಂಬುತ್ತಾರೆ ಎಂಬುದನ್ನು ವಿವರಿಸಿ ಹೇಳಲು ಅವಕಾಶ ಕೊಡುವ ಮೂಲಕ ನಾವು ಅವರನ್ನು ಗೌರವಿಸಬಹುದು. (ಯಾಕೋ. 1:19) ಆತ್ಮ ಅಮರವಾಗಿದೆಯೆಂದು ಅವರು ಬಲವಾಗಿ ನಂಬುತ್ತಿರಬಹುದು. ಏಕೆಂದರೆ, ಅವರು ತಮ್ಮ ಪ್ರಿಯರನ್ನು ಮರಣದಲ್ಲಿ ಕಳೆದುಕೊಂಡಿರಬಹುದು ಮತ್ತು ಅವರನ್ನು ಪುನಃ ನೋಡಲು ತವಕಿಸುತ್ತಿರಬಹುದು. ಅಥವಾ ಅವರು ರಜಾದಿನಗಳನ್ನು ಆಚರಿಸುತ್ತಿರಬಹುದು. ಏಕೆಂದರೆ, ಅದು ಕುಟುಂಬದೊಂದಿಗಿರಲು ಅವರಿಗೆ ಅವಕಾಶ ಕೊಡುತ್ತದೆಂದು ಅವರು ಭಾವಿಸುತ್ತಾರೆ. ಅವರ ಮಾತಿಗೆ ನಾವು ಕಿವಿಗೊಡುವಾಗ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವೆವು, ಮಾತ್ರವಲ್ಲ ಅವರಿಗೆ ಅನಾವಶ್ಯಕವಾಗಿ ಸಿಟ್ಟುಬರಿಸದೆ ಪರಿಣಾಮಕಾರಿಯಾಗಿ ಮಾತಾಡಲು ಅದು ನಮಗೆ ಸಹಾಯಮಾಡುತ್ತದೆ. ಕೆಲವೊಮ್ಮೆ ನಾವು ಆ ವಿಷಯದ ಕುರಿತು ಇನ್ನೊಂದು ಸಾರಿ ಮಾತಾಡುವಂತೆ ನಿರ್ಣಯಿಸಬಹುದು.—ಜ್ಞಾನೋ. 16:23.
4 ಯೇಸುವನ್ನು ಅನುಕರಿಸಿ: ಧರ್ಮಶಾಸ್ತ್ರದಲ್ಲಿ ಪರಿಣತನಾಗಿದ್ದ ಒಬ್ಬ ಮನುಷ್ಯನ ಪ್ರಶ್ನೆಗಳಿಗೆ ಯೇಸು ಉತ್ತರ ನೀಡಿದ ರೀತಿಯು ನಮಗೆ ಉತ್ತಮ ಮಾದರಿಯಾಗಿದೆ. ಯೇಸು ಅವನಿಗೆ ನೇರವಾದ ಉತ್ತರಗಳನ್ನು ಕೊಡಲಿಲ್ಲ. ಹಾಗೇ ಕೊಟ್ಟಿದ್ದರೂ ತಾನು ಮನಸ್ಸಾರೆ ಮೆಚ್ಚಿಕೊಂಡಿದ್ದ ತನ್ನ ನಂಬಿಕೆಯಿಂದಾಗಿ ಅವನು ಅದನ್ನು ತಳ್ಳಿಬಿಡಸಾಧ್ಯವಿತ್ತು. ಆದುದರಿಂದ, ಯೇಸು ಶಾಸ್ತ್ರವಚನಗಳನ್ನು ಉಲ್ಲೇಖಿಸಿ, ಅವನ ಅಭಿಪ್ರಾಯವನ್ನು ಹೇಳುವಂತೆ ಕೇಳಿದನು ಮತ್ತು ಒಂದು ದೃಷ್ಟಾಂತವನ್ನು ಉಪಯೋಗಿಸಿ ಅವನು ಸ್ವತಃ ನಿರ್ಣಯಕ್ಕೆ ಬರುವಂತೆ ಸಹಾಯ ಮಾಡಿದನು.—ಲೂಕ 10:25-37.
5 ಜನರಲ್ಲಿರುವ ಬಲವಾದ ಧಾರ್ಮಿಕ ಸುಳ್ಳು ನಂಬಿಕೆಗಳು ದೇವರ ವಾಕ್ಯದಲ್ಲಿರುವ ಸತ್ಯಕ್ಕೆ ಎಂದೂ ಸರಿಸಾಟಿಯಾಗಲಾರವು. (ಇಬ್ರಿ. 4:12) ನಾವು ತಾಳ್ಮೆಯಿಂದ ಮತ್ತು ಜಾಣ್ಮೆಯಿಂದ ಜನರ ಹೃದಯಕ್ಕೆ ಮುಟ್ಟುವಂತಹ ರೀತಿಯಲ್ಲಿ ಮಾತಾಡುವ ಮೂಲಕ ಸುಳ್ಳು ಸಿದ್ಧಾಂತಗಳನ್ನು ತ್ಯಜಿಸುವಂತೆ ಹಾಗೂ ತಮ್ಮನ್ನು ಬಿಡುಗಡೆ ಮಾಡಬಲ್ಲ ಸತ್ಯವನ್ನು ಸ್ವೀಕರಿಸುವಂತೆ ನಾವು ಅವರಿಗೆ ಸಹಾಯ ಮಾಡಶಕ್ತರಾಗಬಹುದು.—ಯೋಹಾ. 8:32.