ಯೆಹೋವನನ್ನು ಪ್ರೀತಿಸಲು ಇತರರಿಗೆ ಕಲಿಸಿರಿ
1. ಯಾವುದು ಕೆಲವರನ್ನು ಯೆಹೋವನೆಡೆಗೆ ಸೆಳೆಯುತ್ತದೆ?
1 ನೀವು ಮೊದಲ ಬಾರಿ ಯೆಹೋವನ ಕುರಿತು ಕೇಳಿಸಿಕೊಂಡ ಸಮಯವನ್ನು ಸ್ವಲ್ಪ ನೆನಪಿಸಿಕೊಳ್ಳಿ. ಯಾವುದು ನಿಮ್ಮನ್ನು ಆಗ ಯೆಹೋವನ ಹತ್ತಿರಕ್ಕೆ ಸೆಳೆಯಿತು? ಯೆಹೋವನ ಅಪೂರ್ವ ಗುಣಗಳ ಕುರಿತು, ಅದರಲ್ಲೂ ಆತನ ಅನುಕಂಪ ಮತ್ತು ಪ್ರೀತಿಯ ಕುರಿತು ಕಲಿತಾಗ ತಾವು ಸೃಷ್ಟಿಕರ್ತನ ಕಡೆಗೆ ಸೆಳೆಯಲ್ಪಟ್ಟೆವು ಎಂದು ಅನೇಕ ಪ್ರಾಮಾಣಿಕ ಹೃದಯದ ವ್ಯಕ್ತಿಗಳು ನಿಮಗೆ ಹೇಳುವರು.—1 ಯೋಹಾ. 4:8.
2, 3. ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಬೈಬಲ್ ವಿದ್ಯಾರ್ಥಿಗಳಿಗೆ ನೆರವಾಗಲಿಕ್ಕಾಗಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನಾವು ಹೇಗೆ ಉಪಯೋಗಿಸಬಹುದು?
2 “ಈತನೇ ನಮ್ಮ ದೇವರು”: ಬೈಬಲ್ ಬೋಧಿಸುತ್ತದೆ ಪುಸ್ತಕವು ಯೆಹೋವನ ಪ್ರೀತಿಯನ್ನು ಒತ್ತಿಹೇಳುತ್ತದೆ ಮತ್ತು ಆತನೊಂದಿಗೆ ಆಪ್ತ ಸಂಬಂಧವನ್ನಿಡುವುದರ ಮಹತ್ವದ ಕುರಿತು ಸ್ಫುಟವಾಗಿ ತಿಳಿಸುತ್ತದೆ. ದೇವರೆಡೆಗೆ ಗಾಢವಾದ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಇತರರಿಗೆ ಕಲಿಸಲಿಕ್ಕಾಗಿ ನಾವು ಈ ಪುಸ್ತಕವನ್ನು ಹೇಗೆ ಉಪಯೋಗಿಸಸಾಧ್ಯವಿದೆ? ಒಂದು ಹೊಸ ವಿಷಯದ ಬಗ್ಗೆ ತಿಳಿಸುವಾಗ, ವಿದ್ಯಾರ್ಥಿಯು ಯೋಚಿಸಲು ಸ್ಫೂರ್ತಿ ನೀಡುವಂತಹ ಪ್ರಶ್ನೆಗಳನ್ನು ನಾವು ಕೇಳಬಹುದು. ಉದಾಹರಣೆಗೆ, “ಈ ಸತ್ಯ ಸಂಗತಿಯು ಯೆಹೋವನ ವ್ಯಕ್ತಿತ್ವದ ಕುರಿತು ಏನನ್ನು ತಿಳಿಸುತ್ತದೆ?” ಅಥವಾ “ಎಲ್ಲರೂ ಬಯಸುವ ಅತ್ಯುತ್ತಮ ತಂದೆ ಯೆಹೋವನಾಗಿದ್ದಾನೆ ಎಂಬುದನ್ನು ಈ ಅಂಶವು ಹೇಗೆ ತೋರಿಸುತ್ತದೆ?” ಈ ರೀತಿಯಲ್ಲಿ ಕಲಿಸುವುದು ವಿದ್ಯಾರ್ಥಿಗಳು ಯೆಹೋವನೊಂದಿಗೆ ಒಂದು ಜೀವನಪರ್ಯಂತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ನೆರವಾಗುವುದು.
3 ಜೀವವುಳ್ಳ ಒಬ್ಬನೇ ಸತ್ಯದೇವರ ಜ್ಞಾನವನ್ನು ಪಡೆದುಕೊಳ್ಳುವುದು ಎಂತಹ ಸುಯೋಗವೆಂಬುದನ್ನು ಗ್ರಹಿಸಲು ನಾವು ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡುವಾಗ “ಈತನೇ ನಮ್ಮ ದೇವರು” ಎಂಬ ಯೆಶಾಯನ ಮಾತುಗಳನ್ನು ಅವರು ಒಪ್ಪಿಕೊಳ್ಳುವರು. (ಯೆಶಾ. 25:9) ದೇವರ ವಾಕ್ಯವನ್ನು ವಿವರಿಸುವಾಗ, ಯೇಸು ಕ್ರಿಸ್ತನ ಆಳಿಕೆಯ ಕೆಳಗಿನ ಭವ್ಯ ಸರಕಾರದ ಮೂಲಕ ನೆರೆವೇರುವ ಯೆಹೋವನ ಉದ್ದೇಶದಿಂದಾಗಿ ಮಾನವ ಕುಲವು ಹೇಗೆ ಆಶೀರ್ವದಿಸಲ್ಪಡುವುದೆಂದು ನಾವು ಒತ್ತಿಹೇಳಬೇಕು.—ಯೆಶಾ. 9:6, 7.
4, 5. ಯೆಹೋವನನ್ನು ಪ್ರೀತಿಸುವುದರ ಅರ್ಥವೇನು?
4 ಯೆಹೋವನ ಮೇಲಿರುವ ಪ್ರೀತಿಯ ಪುರಾವೆ: ಯೆಹೋವನನ್ನು ಪೂರ್ಣ ಹೃದಯ, ಪ್ರಾಣ ಮತ್ತು ಮನಸ್ಸಿನಿಂದ ಪ್ರೀತಿಸುವುದೆಂದರೆ ಆತನೆಡೆಗೆ ಗಾಢವಾದ ಭಾವನೆಗಳನ್ನು ಹೊಂದಿರುವುದಷ್ಟೇ ಅಲ್ಲವೆಂದು ನಮಗೆ ಗೊತ್ತಿದೆ. ನಾವು ಆತನ ಆಲೋಚನಾರೀತಿಗೆ ನಮ್ಮನ್ನು ಹೊಂದಿಸಿಕೊಂಡು, ಅದಕ್ಕೆ ಅಂಟಿಕೊಳ್ಳಬೇಕು. (ಕೀರ್ತ. 97:10) ದೇವರ ಆಜ್ಞೆಗಳಿಗೆ ವಿಧೇಯರಾಗುವ ಮೂಲಕ ಮತ್ತು ಪರೀಕ್ಷೆ ವಿರೋಧದ ಸಮಯದಲ್ಲೂ “ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿ” ಇರುವ ಮೂಲಕ ಆತನ ಮೇಲಿನ ಪ್ರೀತಿಯನ್ನು ನಾವು ತೋರಿಸಿಕೊಡುತ್ತೇವೆ.—2 ಪೇತ್ರ 3:11; 2 ಯೋಹಾ. 6.
5 ದೇವರ ಮೇಲೆ ನಮಗಿರುವ ಪ್ರೀತಿಯ ಕಾರಣದಿಂದ ನಾವು ಆತನ ಚಿತ್ತವನ್ನು ಮಾಡುವುದು ಸಂತೋಷವನ್ನು ತರುತ್ತದೆ. (ಕೀರ್ತ. 40:8) ದೇವರ ನಿಯಮಗಳೆಲ್ಲವೂ ಆತನ ಸೇವಕರ ಚಿರಕಾಲದ ಒಳಿತಿಗಾಗಿಯೇ ಕೊಡಲ್ಪಟ್ಟಿವೆ ಎಂಬುದನ್ನು ಬೈಬಲ್ ವಿದ್ಯಾರ್ಥಿಯು ಅರ್ಥಮಾಡಿಕೊಳ್ಳಬೇಕು. (ಧರ್ಮೋ. 10:12, 13) ಯೆಹೋವನ ಮಾರ್ಗದರ್ಶನಕ್ಕನುಗುಣವಾಗಿ ಜೀವಿಸುವ ಮೂಲಕ ವ್ಯಕ್ತಿಯೊಬ್ಬನು ಆತನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸುತ್ತಾನೆ. ಯೆಹೋವನ ನೀತಿಮಾರ್ಗದಲ್ಲಿ ನಡೆಯುವುದು ಒಬ್ಬನನ್ನು ದುಃಖನೋವುಗಳಿಂದ ಸಂರಕ್ಷಿಸುತ್ತದೆಂಬುದನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗೆ ನೆರವಾಗಿರಿ.
6. ಯೆಹೋವನನ್ನು ಪ್ರೀತಿಸುವುದರಿಂದ ಒಬ್ಬನಿಗೆ ಸಿಗುವ ಆಶೀರ್ವಾದಗಳೇನು?
6 ದೇವರನ್ನು ಪ್ರೀತಿಸುವವರಿಗೆ ಆಶೀರ್ವಾದಗಳು: ತನ್ನನ್ನು ಪ್ರೀತಿಸುವ ನಮ್ರ ಜನರಿಗೆ ಯೆಹೋವನು ಕಾಳಜಿ ತೋರಿಸುತ್ತಾನೆ. ಮಾತ್ರವಲ್ಲ, ಅವರಿಗೆ “ದೇವರ ಅಗಾಧವಾದ ವಿಷಯಗಳನ್ನು” ತಿಳಿಯಪಡಿಸುತ್ತಾನೆ. (1 ಕೊರಿಂ. 2:9, 10) ಯೆಹೋವನ ಉದ್ದೇಶಗಳ ಕುರಿತ ಅಂಥ ಜ್ಞಾನದಿಂದಾಗಿ ಅವರು ಭವಿಷ್ಯತ್ತಿನ ಸ್ಪಷ್ಟ ಚಿತ್ರಣವನ್ನು ಹಾಗೂ ಅಚಲವಾದ ನಿರೀಕ್ಷೆಯನ್ನು ಹೊಂದಿರುತ್ತಾರೆ. (ಯೆರೆ. 29:11) ಯೆಹೋವನನ್ನು ಪ್ರೀತಿಸುವವರು ಆತನ ಅಸಾಧಾರಣವಾದ ದಯೆಗೆ ಪಾತ್ರರಾಗುತ್ತಾರೆ. (ವಿಮೋ. 20:6) ದೇವರ ಮಹಾ ಪ್ರೀತಿಯಿಂದಾಗಿ ಅವರು ನಿತ್ಯಜೀವದ ನಿರೀಕ್ಷೆಯನ್ನು ಮಾನ್ಯಮಾಡುತ್ತಾರೆ.—ಯೋಹಾ. 3:16.
7. ಯೆಹೋವನನ್ನು ಪ್ರೀತಿಸುವಂತೆ ಇತರರಿಗೆ ಕಲಿಸುವ ಕುರಿತು ನಿಮಗೆ ಹೇಗನಿಸುತ್ತದೆ?
7 ನಮ್ಮ ಸ್ವರ್ಗೀಯ ಪಿತನ ಕುರಿತು ನಾವು ಎಷ್ಟು ಹೆಚ್ಚು ಕಲಿಯುತ್ತೇವೋ ಅಷ್ಟು ಹೆಚ್ಚು ಅದರ ಕುರಿತು ಇತರರಿಗೆ ತಿಳಿಸಬೇಕು. (ಮತ್ತಾ. 13:52) ಯೆಹೋವನನ್ನು ಪ್ರೀತಿಸುವಂತೆ ಇತರರಿಗೆ ಕಲಿಸುವುದು ಅದರಲ್ಲೂ ನಮ್ಮ ಮಕ್ಕಳಿಗೆ ಕಲಿಸುವುದು ಬೆಲೆ ಕಟ್ಟಲಾಗದ ಗೌರವವಾಗಿದೆ! (ಧರ್ಮೋ. 6:5-7) ನಾವು ‘ಯೆಹೋವನ ಮಹೋಪಕಾರವನ್ನು’ ಅನುಭವಿಸುವಾಗ ನಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೆ ಸೇರಿ ಆತನನ್ನು ಸದಾ ಹೊಗಳಿ ಕೊಂಡಾಡುತ್ತಾ ಇರೋಣ.—ಕೀರ್ತ. 145:7.