ಮನೆ-ಮನೆ ಸೇವೆಯಲ್ಲಿ ಒಳ್ಳೇ ಸಹಾಯಕರಾಗಿರಿ
1. ಶುಶ್ರೂಷೆಯಲ್ಲಿ ಜೊತೆಗಾರನೊಂದಿಗೆ ಕೆಲಸಮಾಡುವುದರಿಂದ ಯಾವ ಪ್ರಯೋಜನಗಳಿವೆ?
1 ಒಂದು ಸಂದರ್ಭದಲ್ಲಿ ಯೇಸು 70 ಮಂದಿ ಶಿಷ್ಯರನ್ನು ಸಾರಲು ಕಳುಹಿಸಿದನು. ಅವನು ಅವರನ್ನು “ಇಬ್ಬಿಬ್ಬರನ್ನಾಗಿ ಕಳುಹಿಸಿದನು.” (ಲೂಕ 10:1) ಅವನ ಶಿಷ್ಯರು ಸಾರುವಾಗ ಒಬ್ಬರಿಗೊಬ್ಬರು ಸಹಾಯಮಾಡುವಂತೆಯೂ ಉತ್ತೇಜಿಸುವಂತೆಯೂ ಈ ಏರ್ಪಾಡು ನೆರವಾಯಿತು. ಶುಶ್ರೂಷೆಯಲ್ಲಿ ಇನ್ನೊಬ್ಬ ಪ್ರಚಾರಕನೊಂದಿಗೆ ಜೊತೆಗೂಡುವಾಗ ನಾವು ಹೇಗೆ ಅವರಿಗೆ ನೆರವಾಗಬಹುದು?
2. ನಮ್ಮ ಜೊತೆಗಾರನು ತನ್ನ ನಿರೂಪಣೆಯನ್ನು ಕೊಡುವಾಗ ನಾವು ಹೇಗೆ ಮತ್ತು ಏಕೆ ಕಿವಿಗೊಟ್ಟು ಕೇಳಬೇಕು?
2 ಕಿವಿಗೊಡುವ ಮೂಲಕ: ನಿಮ್ಮ ಜೊತೆಗಾರನು ತನ್ನ ನಿರೂಪಣೆಯನ್ನು ನೀಡುವಾಗ ಕಿವಿಗೊಟ್ಟು ಕೇಳಿರಿ. (ಯಾಕೋ. 1:19) ಅವನು ವಚನವೊಂದನ್ನು ಓದುವಲ್ಲಿ ನಿಮ್ಮ ಬೈಬಲಿನಲ್ಲಿ ಅದನ್ನು ಹಿಂಬಾಲಿಸಿ. ನಿಮ್ಮ ಜೊತೆಗಾರನೋ ಮನೆಯವನೋ ಮಾತಾಡುವಾಗ ಅವರನ್ನೇ ನೋಡಿರಿ. ಸಂಭಾಷಣೆಯನ್ನು ನೀವು ಗಮನಕೊಟ್ಟು ಕೇಳುವಲ್ಲಿ ಮನೆಯವನೂ ಹಾಗೆ ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಾನು. ಅದೇ ಸಮಯದಲ್ಲಿ, ಸಮಸ್ಯೆ ಏಳಬಹುದಾದ ಟೆರಿಟೊರಿಯಲ್ಲಿ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಮೇಲೆ ಒಂದು ಕಣ್ಣಿಡುವುದು ಒಳ್ಳೇದು. ಆಗ ನಮ್ಮ ಕೆಲಸವನ್ನು ವಿರೋಧಿಸುವ ಯಾರಾದರೂ ಗುಂಪು ಕೂಡಿಸುತ್ತಿರುವಲ್ಲಿ ನಿಮ್ಮ ಜೊತೆಗಾರನಿಗೆ ನೀವು ಎಚ್ಚರಿಸಸಾಧ್ಯವಾಗಿ ನೀವಿಬ್ಬರೂ ಕೂಡಲೆ ಕ್ಷೇತ್ರವನ್ನು ಬಿಟ್ಟುಹೋಗಶಕ್ತರು.
3. ನಾವು ಯಾವಾಗ ಮಾತಾಡುವಂತೆ ನಮ್ಮ ಜೊತೆಗಾರನು ಅಪೇಕ್ಷಿಸಬಹುದು?
3 ಯಾವಾಗ ಮಾತಾಡಬೇಕೆಂಬುದನ್ನು ವಿವೇಚಿಸಿ ತಿಳಿದುಕೊಳ್ಳುವ ಮೂಲಕ: ನಮ್ಮ ಜೊತೆಗಾರನು ನಿರೂಪಣೆಯನ್ನು ನೀಡುವಾಗ ಅವನು ನೇತೃತ್ವ ವಹಿಸುವಂತೆ ಬಿಡುವ ಮೂಲಕ ನಾವು ಅವನನ್ನು ಘನಪಡಿಸುತ್ತೇವೆ. (ರೋಮ. 12:10) ನಡುವೆ ಬಾಯಿಹಾಕಿ ಮಾತಾಡುವುದನ್ನು ವರ್ಜಿಸಬೇಕು. ತಾನು ಹೇಳ ಬಯಸಿದ್ದನ್ನು ಅವನು ಮರೆತುಬಿಟ್ಟಲ್ಲಿ ಅಥವಾ ಮನೆಯವನು ಆಕ್ಷೇಪ ಇಲ್ಲವೆ ಪ್ರಶ್ನೆಯನ್ನು ಎಬ್ಬಿಸಿದಾಗ ಅವನು ನಮ್ಮ ಸಹಾಯವನ್ನು ವಿನಂತಿಸಿದಲ್ಲಿ ಮಾತ್ರ ಅವನ ಹೇಳಿಕೆಗಳಿಗೆ ಏನಾದರೂ ಕೂಡಿಸಲು ನಾವು ಪ್ರಯತ್ನಿಸಬೇಕು. ಆದರೆ ಹೊಸ ವಿಷಯವನ್ನು ಮುಂತರಬಾರದು. (ಜ್ಞಾನೋ. 16:23; ಪ್ರಸಂ. 3:1, 7) ನಾವು ಮಾತಾಡುವಲ್ಲಿ ನಮ್ಮ ಮಾತುಗಳು ಅವನು ಕೊಡುತ್ತಿರುವ ಸಾಕ್ಷಿಗೆ ಸಹಾಯಕಾರಿಯಾಗಿರಬೇಕು.—1 ಕೊರಿಂ. 14:8.
4. ಶುಶ್ರೂಷೆಯಲ್ಲಿ ನಮ್ಮ ಆನಂದ ಮತ್ತು ಯಶಸ್ಸಿಗೆ ಯಾವುದು ನೆರವಾಗುವುದು?
4 ಎಪ್ಪತ್ತು ಮಂದಿ ಶಿಷ್ಯರು ಜೊತೆಜೊತೆಯಾಗಿ ಸಾರುವ ಕೆಲಸವನ್ನು ಮಾಡಿ ಮುಗಿಸಿದಾಗ ‘ಆನಂದದಿಂದ ಹಿಂದಿರುಗಿದರು.’ (ಲೂಕ 10:17) ಮನೆಬಾಗಿಲಲ್ಲಿ ನಾವು ಯಾರ ಜೊತೆಗಾರರಾಗಿದ್ದೇವೋ ಅವರ ನಿರೂಪಣೆಗೆ ಕಿವಿಗೊಡುವಾಗ ಮತ್ತು ಸ್ವತಃ ನಾವು ಯಾವಾಗ ಮಾತಾಡಬಹುದು ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳುವಾಗ ಶುಶ್ರೂಷೆಯಲ್ಲಿ ನಮಗೂ ಆನಂದ ಮತ್ತು ಯಶಸ್ಸು ಲಭಿಸುವುದು.