“ನೀವು ಒಳ್ಳೇ ಪಯನೀಯರ್ ಆಗಬಲ್ಲಿರಿ!”
1. ಪಯನೀಯರ್ ಸೇವೆಯ ಬಗ್ಗೆ ಒಬ್ಬ ಸಹೋದರಿ ಏನು ಹೇಳಿದಳು?
1 “ಪಯನೀಯರ್ ಸೇವೆಯು ಯೆಹೋವನೊಂದಿಗೆ ಆಪ್ತತೆಯನ್ನು ಕಾಪಾಡಿಕೊಳ್ಳಲು ನನಗೆ ಸಹಾಯಮಾಡುತ್ತದೆ. ಈ ಸೇವೆಯನ್ನು, ಯೆಹೋವನು ಮತ್ತು ಆತನ ಮಗನು ನಮಗಾಗಿ ಮಾಡಿರುವ ವಿಷಯಗಳಿಗಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಅಪೂರ್ವ ಅವಕಾಶವಾಗಿ ಪರಿಗಣಿಸುತ್ತೇನೆ. ಜೀವನದಲ್ಲಿ ಸಂತೋಷ-ಸಂತೃಪ್ತಿಯನ್ನು ಕಂಡುಕೊಳ್ಳಲು ಇದು ನನಗೆ ಸಹಾಯಮಾಡುತ್ತದೆ” ಎಂದು ಮೇರಿ ಎಂಬಾಕೆ ಹೇಳುತ್ತಾಳೆ. ಈಕೆ 42 ವರ್ಷಗಳಿಂದ ಭಾರತದ ವಿವಿಧ ಭಾಗಗಳಲ್ಲಿ ಸಾಕ್ಷಿನೀಡುತ್ತಿರುವ ನಿಸ್ವಾರ್ಥ ಪಯನೀಯರ್. ಪಯನೀಯರ್ ಸೇವೆಯಿಂದ ಲಭಿಸುವ ಫಲದಾಯಕ ಜೀವನವನ್ನು ಮನಸ್ಸಿನಲ್ಲಿಟ್ಟು ಯಾರಾದರೊಬ್ಬರು ನಿಮಗೆ, “ನೀವು ಒಳ್ಳೇ ಪಯನೀಯರ್ ಆಗಬಲ್ಲಿರಿ” ಎಂದು ಹೇಳಿರಬಹುದು.
2. ಆಧ್ಯಾತ್ಮಿಕ ಚಟುವಟಿಕೆಗಳಿಂದ ನಿಜವಾದ ಸಂತೃಪ್ತಿ ಹೇಗೆ ಲಭಿಸುತ್ತದೆಂದು ವಿವರಿಸಿ.
2 ಸಂತೃಪ್ತಿಕರವಾದ ಜೀವನ ಮಾರ್ಗ: ನಮ್ಮ ಆದರ್ಶ ವ್ಯಕ್ತಿಯಾದ ಯೇಸುವಿಗೆ ತನ್ನ ತಂದೆಯ ಚಿತ್ತವನ್ನು ಮಾಡುವುದರಲ್ಲಿ ನಿಜವಾದ ಚೈತನ್ಯ ಸಿಕ್ಕಿತು. (ಯೋಹಾ. 4:34) ಇದನ್ನು ಅವನು ಅನುಭವಿಸಿದ್ದರಿಂದಲೇ, ಯೆಹೋವನ ಆರಾಧನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಜವಾದ ಸಂತೃಪ್ತಿ ಸಿಗುತ್ತದೆಂದು ಅವನು ತನ್ನ ಶಿಷ್ಯರಿಗೆ ಬೋಧಿಸಿದನು. ನಾವು ಜೀವನದಲ್ಲಿ ಯೆಹೋವನು ಒಪ್ಪುವಂಥ ಕೆಲಸಗಳನ್ನೇ ಮಾಡುವಾಗ ನಮಗೆ ಸಂತೃಪ್ತಿ ಲಭಿಸುತ್ತದೆ. ಇದರೊಂದಿಗೆ ನಮ್ಮ ಸಮಯ, ಶಕ್ತಿ ಹಾಗೂ ಸಂಪನ್ಮೂಲಗಳನ್ನು ಹೆಚ್ಚೆಚ್ಚು ಬಳಸುತ್ತಾ ಇತರರಿಗೆ ಸಹಾಯಮಾಡುವಾಗ ನಮ್ಮ ಸಂತೋಷವು ಹೆಚ್ಚುವುದು.—ಅ. ಕಾ. 20:31, 35.
3. ಶುಶ್ರೂಷೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಯಾವ ಆನಂದ ಸಿಗುವುದು?
3 ಪಯನೀಯರ್ ಸೇವೆಮಾಡುವ ಮೂಲಕ ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತೇವೆ. ಆಗ ಬೈಬಲ್ ಅಧ್ಯಯನಗಳನ್ನು ಪ್ರಾರಂಭಿಸಿ, ನಡೆಸುವುದರಿಂದ ಸಿಗುವ ಆನಂದವನ್ನು ಅನುಭವಿಸುವ ಅವಕಾಶಗಳೂ ಹೆಚ್ಚುತ್ತವೆ. ಅಲ್ಲದೆ ಶುಶ್ರೂಷೆಯಲ್ಲಿ ನಮ್ಮ ಅನುಭವ ಹಾಗೂ ಕೌಶಲ ಹೆಚ್ಚಾದಂತೆ, ಯಾವ ಟೆರಿಟೊರಿಯ ಜನರು ಉದಾಸೀನರೆಂದು ನಮಗೆ ಅನಿಸುತ್ತಿತ್ತೊ ಅದೇ ಟೆರಿಟೊರಿ ನಮಗೀಗ ತುಂಬ ಫಲದಾಯಕವೆಂದು ಗೊತ್ತಾಗುತ್ತದೆ. ಒಂದು ವರ್ಷದ ವರೆಗೆ ಪಯನೀಯರ್ ಸೇವೆಮಾಡಿದ ನಂತರ ಪಯನೀಯರ್ ಸೇವಾ ಶಾಲೆಗೆ ಹಾಜರಾಗುವ ಅವಕಾಶವಿದೆ. ಅಲ್ಲಿ ಹೇರಳವಾಗಿ ಸಿಗುವ ಶಿಕ್ಷಣವನ್ನು ಪಯನೀಯರರು ಬಳಸಿಕೊಳ್ಳಬಹುದು. (2 ತಿಮೊ. 2:15) ನಾವು ಪಟ್ಟುಬಿಡದೆ ಸಾರುವ ಮೂಲಕ, ಮುಂದೊಂದು ದಿನ ಫಲವನ್ನು ನೀಡುವಂಥ ಸತ್ಯದ ಬೀಜಗಳನ್ನು ಬಿತ್ತುತ್ತಿರುತ್ತೇವೆ.—ಪ್ರಸಂ. 11:6.
4. ಐಹಿಕ ಶಿಕ್ಷಣವನ್ನು ಮುಗಿಸಲಿಕ್ಕಿರುವ ಯುವ ಜನರು ಏನನ್ನು ಪರಿಗಣಿಸಬೇಕು?
4 ಯುವ ಜನರು: ನೀವೀಗ ಮೂಲ ಶಿಕ್ಷಣವನ್ನು ಮುಗಿಸುತ್ತಿರುವಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೀರೊ? ಇಲ್ಲಿಯ ವರೆಗೆ ದಿನನಿತ್ಯದ ನಿಮ್ಮ ಶೆಡ್ಯೂಲ್ನಲ್ಲಿ ಶಾಲೆಯ ಕೆಲಸಗಳೇ ಹೆಚ್ಚಿರುತ್ತಿದ್ದವು. ಆದರೆ ಶಿಕ್ಷಣವು ಮುಗಿದ ಮೇಲೆ ಆ ಸಮಯವನ್ನು ಹೇಗೆ ಬಳಸುವಿರಿ? ನಿಮ್ಮ ಯೌವನದ ಶಕ್ತಿಯನ್ನೆಲ್ಲ ಐಹಿಕ ಉದ್ಯೋಗದಲ್ಲೇ ವ್ಯಯಿಸುವುದಕ್ಕಿಂತ, ರೆಗ್ಯುಲರ್ ಪಯನೀಯರ್ ಸೇವೆಯನ್ನು ಮಾಡುವುದರ ಬಗ್ಗೆ ಏಕೆ ಪ್ರಾರ್ಥನಾಪೂರ್ವಕವಾಗಿ ಯೋಚಿಸಬಾರದು? ಈ ಸೇವೆಯ ಮೂಲಕ ನೀವು ಕಲಿಯಬಹುದಾದ ಕೌಶಲಗಳು ಅಂದರೆ ವಿಭಿನ್ನ ಹಿನ್ನೆಲೆಯ ಜನರಿಗೆ ಸಾಕ್ಷಿನೀಡುವ, ವೈಯಕ್ತಿಕ ಅಡೆತಡೆಗಳನ್ನು ಜಯಿಸುವ, ಸ್ವಶಿಸ್ತನ್ನು ಬೆಳೆಸಿಕೊಳ್ಳುವ ಮತ್ತು ಬೋಧಿಸುವ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ಕೌಶಲಗಳು ಜೀವಮಾನವಿಡೀ ನಿಮಗೆ ಸಹಾಯಮಾಡುವವು.
5. ಹೆತ್ತವರು ಹಾಗೂ ಸಭೆಯವರು ಪಯನೀಯರ್ ಸೇವೆಯನ್ನು ಹೇಗೆ ಪ್ರೋತ್ಸಾಹಿಸಸಾಧ್ಯವಿದೆ?
5 ಹೆತ್ತವರೇ, ನಿಮ್ಮ ಮಕ್ಕಳು ಪೂರ್ಣ ಸಮಯದ ಸೇವೆಯ ಗುರಿಯನ್ನಿಟ್ಟು ಅದನ್ನು ಮುಟ್ಟಲು ಸಹಾಯಮಾಡುತ್ತಿದ್ದೀರೊ? ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಪ್ರಥಮವಾಗಿಡಲು ನಿಮ್ಮ ಮಾತು ಹಾಗೂ ಒಳ್ಳೇ ಮಾದರಿಯ ಮೂಲಕ ಅವರಿಗೆ ತುಂಬ ಸಹಾಯಮಾಡಬಹುದು. (ಮತ್ತಾ. 6:33) ಸಂಜಯ್ ಎಂಬವನು ಮೂಲ ಶಿಕ್ಷಣವನ್ನು ಮುಗಿಸಿದ ಕೂಡಲೇ ಪಯನೀಯರ್ ಸೇವೆಯನ್ನು ಪ್ರಾರಂಭಿಸಿದನು. ಅವನು ಜ್ಞಾಪಿಸಿಕೊಳ್ಳುವುದು: “ಪಯನೀಯರ್ ಸೇವೆಯೇ ಜೀವನದ ಅತ್ಯಂತ ಸಂತೃಪ್ತಿಕರವಾದ ಮಾರ್ಗ ಎಂದು ನನ್ನ ಹೆತ್ತವರು ಹೇಳುತ್ತಿದ್ದರು.” ಸಭೆಯಲ್ಲಿರುವ ಎಲ್ಲರೂ ತಮ್ಮ ಮಾತು ಹಾಗೂ ಬೆಂಬಲದ ಮೂಲಕ ಪಯನೀಯರ್ ಸೇವೆಯನ್ನು ಪ್ರೋತ್ಸಾಹಿಸಸಾಧ್ಯವಿದೆ. ಸ್ಪೇನ್ನ ಜೋಸ್ ಎಂಬವನು ಹೇಳಿದ್ದು: “ಪಯನೀಯರ್ ಸೇವೆಯೇ ಯುವ ಜನರಿಗಾಗಿರುವ ಅತ್ಯುತ್ತಮ ಕೆಲಸವೆಂಬ ಅಭಿಪ್ರಾಯ ನನ್ನ ಸಭೆಯವರಿಗಿತ್ತು. ಅವರ ಹೇಳಿಕೆಗಳು ಹಾಗೂ ಪಯನೀಯರ್ ಸೇವೆಗಾಗಿರುವ ಗಣ್ಯತೆಯ ಜೊತೆಗೆ ಅವರು ಕೊಟ್ಟ ಪ್ರಾಯೋಗಿಕ ಸಹಾಯದಿಂದಾಗಿ ನನಗೆ ಆ ಸೇವೆಯನ್ನು ಆರಂಭಿಸಲು ಸುಲಭವಾಯಿತು.”
6. ಪಯನೀಯರ್ ಸೇವೆಮಾಡುವ ಮನಸ್ಸು ನಮಗೆ ಸದ್ಯಕ್ಕೆ ಇಲ್ಲದಿದ್ದರೆ ಏನು ಮಾಡಸಾಧ್ಯವಿದೆ?
6 ಅಡೆತಡೆಗಳನ್ನು ಜಯಿಸಿರಿ: ‘ನನಗೆ ಪಯನೀಯರ್ ಸೇವೆ ಮಾಡುವ ಆಸೆಯಿಲ್ಲ’ ಎಂದು ಕೆಲವರಿಗೆ ಮೊದಮೊದಲು ಅನಿಸಬಹುದು. ನಿಮಗೂ ಹಾಗನಿಸುವಲ್ಲಿ ಅದನ್ನು ಯೆಹೋವನಿಗೆ ಹೇಳಿ. ‘ಪಯನೀಯರ್ ಸೇವೆ ನನ್ನಿಂದಾಗುವುದೊ ಏನೋ ಗೊತ್ತಿಲ್ಲ; ಆದರೆ ನಿನ್ನನ್ನು ಸಂತೋಷಪಡಿಸುವ ಈ ಸೇವೆಯನ್ನು ಮಾಡಲಿಚ್ಛಿಸುತ್ತೇನೆ’ ಎಂದು ಆತನಿಗೆ ಪ್ರಾರ್ಥಿಸಬಹುದು. (ಕೀರ್ತ. 62:8; ಜ್ಞಾನೋ. 23:26) ಅನಂತರ, ಮಾರ್ಗದರ್ಶನಕ್ಕಾಗಿ ಆತನ ವಾಕ್ಯ ಹಾಗೂ ಸಂಘಟನೆಯ ನೆರವು ಪಡೆಯಿರಿ. ರೆಗ್ಯುಲರ್ ಪಯನೀಯರರಲ್ಲಿ ಅನೇಕರು ಮೊದಲು ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿ ಪಯನೀಯರ್ ಸೇವೆಯನ್ನು “ಸವಿದು” ನೋಡಿದರು. ಇದರಿಂದ ಅವರಿಗೆ ಸಿಕ್ಕಿದ ಆನಂದ ಪೂರ್ಣ ಸಮಯದ ಸೇವೆಯನ್ನು ಆರಂಭಿಸುವಂತೆ ಮಾಡಿತು.—ಕೀರ್ತ. 34:8.
7. ತಿಂಗಳಿಗೆ 70 ತಾಸುಗಳ ಗುರಿ ಮುಟ್ಟಲು ಆಗುವುದೊ ಎಂಬ ಸಂದೇಹವನ್ನು ನಾವು ಹೇಗೆ ನಿವಾರಿಸಬಹುದು?
7 ‘ತಿಂಗಳಿಗೆ 70 ತಾಸುಗಳ ಗುರಿ ಮುಟ್ಟಲು ನನ್ನಿಂದ ಆಗುವುದೊ ಇಲ್ಲವೊ’ ಎಂಬ ಸಂದೇಹ ನಿಮಗಿರುವಲ್ಲಿ ಆಗೇನು? ಹಾಗಿರುವಲ್ಲಿ, ನಿಮ್ಮಂಥದ್ದೇ ಪರಿಸ್ಥಿತಿಗಳಿರುವ ಪಯನೀಯರರ ಜೊತೆ ಏಕೆ ಮಾತಾಡಬಾರದು? (ಜ್ಞಾನೋ. 15:22) ಅನಂತರ ಪ್ರಾಯೋಗಿಕವಾದ ಹಲವಾರು ಶೆಡ್ಯೂಲ್ಗಳನ್ನು ತಯಾರಿಸಿರಿ. ಹೀಗೆ ಮಾಡುವಲ್ಲಿ, ಅನಾವಶ್ಯಕವಾದ ಚಟುವಟಿಕೆಗಳಿಂದ ಶುಶ್ರೂಷೆಗಾಗಿ ಸಮಯವನ್ನು ಖರೀದಿಸುವುದು ನೀವು ನೆನಸಿದಕ್ಕಿಂತ ಸುಲಭವೆಂದು ಗೊತ್ತಾಗುವುದು.—ಎಫೆ. 5:15, 16.
8. ನಾವು ಆಗಿಂದಾಗ್ಗೆ ನಮ್ಮ ಪರಿಸ್ಥಿತಿಗಳನ್ನು ಏಕೆ ಮರುಪರಿಶೀಲಿಸಬೇಕು?
8 ನಿಮ್ಮ ಪರಿಸ್ಥಿತಿಗಳನ್ನು ಮರುಪರಿಶೀಲಿಸಿ: ವೈಯಕ್ತಿಕ ಪರಿಸ್ಥಿತಿಗಳು ಹೆಚ್ಚಾಗಿ ಬದಲಾಗುತ್ತವೆ. ಆದುದರಿಂದ ನಿಮ್ಮ ಪರಿಸ್ಥಿತಿಯನ್ನು ಆಗಿಂದಾಗ್ಗೆ ಮರುಪರಿಶೀಲಿಸುವುದು ಉತ್ತಮ. ಉದಾಹರಣೆಗೆ, ನೀವು ಉದ್ಯೋಗದಿಂದ ನಿವೃತ್ತರಾಗಲಿದ್ದೀರೊ? ಪಯನೀಯರ್ ಸೇವೆಮಾಡಲು ತನ್ನ ಕೆಲಸ ಬಿಟ್ಟ ಕೃಷ್ಣನ್ ಎಂಬವನು ಹೇಳಿದ್ದು: “ನನ್ನ ಈ ನಿರ್ಧಾರದಿಂದ ನನ್ನ ಪತ್ನಿಯೊಂದಿಗೆ ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸಲು ಸಾಧ್ಯವಾಯಿತು. ಮಾತ್ರವಲ್ಲದೆ, ಅಗತ್ಯವಿದ್ದಲ್ಲಿಗೆ ಹೋಗಿ ಸೇವೆಮಾಡುವ ಅವಕಾಶವನ್ನೂ ನೀಡಿತು. ಆಧ್ಯಾತ್ಮಿಕವಾಗಿ ಇಷ್ಟೊಂದು ಪ್ರತಿಫಲವನ್ನು ಕೊಡುವಂಥ ಅಥವಾ ನಮಗೆ ಇಷ್ಟೊಂದು ಆನಂದವನ್ನು ತರಸಾಧ್ಯವಿರುವ ಬೇರಾವ ಕೆಲಸವನ್ನೂ ನಾನು ಕಂಡಿಲ್ಲ.”
9. ದಂಪತಿಗಳು ಏನನ್ನು ಪರಿಗಣಿಸಬೇಕು?
9 ಕೆಲವು ದಂಪತಿಗಳು ತಮ್ಮ ಪರಿಸ್ಥಿತಿಯನ್ನು ಜಾಗರೂಕವಾಗಿ ಪರಿಶೀಲಿಸಿದ ನಂತರ, ತಾವಿಬ್ಬರೂ ಪೂರ್ಣ ಸಮಯದ ಉದ್ಯೋಗಕ್ಕೆ ಹೋಗುವ ಅಗತ್ಯವಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿ ಇಡೀ ಕುಟುಂಬದ ಜೀವನಶೈಲಿಯನ್ನು ಸರಳಗೊಳಿಸಬೇಕಾಗುತ್ತದೆ ನಿಜ. ಆದರೆ ಆ ತ್ಯಾಗ ಸಾರ್ಥಕ. ಜಾನ್ ಎಂಬವನ ಪತ್ನಿ ಶುಶ್ರೂಷೆಯನ್ನು ವಿಸ್ತರಿಸಲು ಇತ್ತೀಚೆಗೆ ತನ್ನ ಪೂರ್ಣ ಸಮಯದ ಉದ್ಯೋಗವನ್ನು ಬಿಟ್ಟಳು. ಅವನು ಹೇಳಿದ್ದು: “ನನ್ನ ಹೆಂಡತಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಮಗ್ನಳಾಗಿದ್ದಾಳೆ ಎಂಬ ನೆಮ್ಮದಿ ನನಗಿದೆ.”
10. ಪಯನೀಯರ್ ಸೇವೆಮಾಡುವ ಬಗ್ಗೆ ಯೋಚಿಸಲು ಕ್ರೈಸ್ತರನ್ನು ಯಾವುದು ಪ್ರಚೋದಿಸುತ್ತದೆ?
10 ಪ್ರೀತಿ ಮತ್ತು ನಂಬಿಕೆಯ ರುಜುವಾತು: ನಾವು ಮಾಡಸಾಧ್ಯವಿರುವ ಕೆಲಸಗಳಲ್ಲೇ ಸಾರುವ ಕೆಲಸವನ್ನು ಯೆಹೋವನು ಅತೀ ಪ್ರಾಮುಖ್ಯ ಕೆಲಸವನ್ನಾಗಿ ಮಾಡಿದ್ದಾನೆ. ಈ ಹಳೇ ವ್ಯವಸ್ಥೆ ಬೇಗನೆ ನಾಶವಾಗಲಿದೆ; ಯೆಹೋವನ ಹೆಸರಿನಲ್ಲಿ ಕೋರುವವರು ಮಾತ್ರ ರಕ್ಷಿಸಲ್ಪಡುವರು. (ರೋಮ. 10:13) ಆತನಿಗಾಗಿರುವ ನಮ್ಮ ತುಂಬುಹೃದಯದ ಪ್ರೀತಿ ಮತ್ತು ಆತನು ನಮಗಾಗಿ ಏನೇನು ಮಾಡಿದ್ದಾನೊ ಅದಕ್ಕಾಗಿರುವ ಕೃತಜ್ಞತೆಯು, ಹುರುಪಿನಿಂದ ಸಾರುವಂತೆ ಆತನ ಮಗನು ಕೊಟ್ಟಿರುವ ಆಜ್ಞೆಗೆ ವಿಧೇಯರಾಗಲು ನಮ್ಮನ್ನು ಪ್ರಚೋದಿಸುವುದು. (ಮತ್ತಾ. 28:19, 20; 1 ಯೋಹಾ. 5:3) ಇದರೊಂದಿಗೆ, ನಾವು ನಿಜವಾಗಿಯೂ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬ ನಂಬಿಕೆಯು, ಲೋಕವನ್ನು ಪೂರ್ಣವಾಗಿ ಅನುಭೋಗಿಸುವುದಕ್ಕೆ ಬದಲಾಗಿ ಇನ್ನೂ ಸಮಯವಿರುವಾಗ ಶುಶ್ರೂಷೆಯಲ್ಲಿ ನಮ್ಮಿಂದಾದದ್ದೆಲ್ಲವನ್ನೂ ಮಾಡುವಂತೆ ಪ್ರೇರಿಸುತ್ತದೆ.—1 ಕೊರಿಂ. 7:29-31.
11. ನಾವು ಒಳ್ಳೇ ಪಯನೀಯರ್ ಆಗಬಲ್ಲೆವು ಎಂದು ಯಾರಾದರೂ ಹೇಳುವಲ್ಲಿ ಅದು ಏನನ್ನು ಸೂಚಿಸುತ್ತದೆ?
11 ರೆಗ್ಯುಲರ್ ಪಯನೀಯರ್ ಸೇವೆಯೆಂದರೆ ಸಾರುವಿಕೆಯಲ್ಲಿ ಕೇವಲ ಹೆಚ್ಚು ತಾಸುಗಳನ್ನು ಕಳೆಯುವುದಷ್ಟೇ ಅಲ್ಲ; ಅದು ಯೆಹೋವನಿಗೆ ನಮ್ಮ ಭಕ್ತಿಯನ್ನು ವ್ಯಕ್ತಪಡಿಸುವ ಒಂದು ವಿಧವಾಗಿದೆ. ಆದ್ದರಿಂದ ನೀವು ಒಳ್ಳೇ ಪಯನೀಯರ್ ಆಗಬಲ್ಲಿರಿ ಎಂದು ಯಾರಾದರೂ ನಿಮಗೆ ಹೇಳುವಲ್ಲಿ ಅದು ಅವರಿಗೆ ನಿಮ್ಮ ಮೇಲಿರುವ ವಿಶ್ವಾಸವನ್ನು ಸೂಚಿಸುತ್ತದೆ. ಸಂತೃಪ್ತಿಕರವಾದ ಈ ಸೇವೆಯಲ್ಲಿ ಈಗಾಗಲೇ ತೊಡಗಿರುವವರೊಂದಿಗೆ ಸೇರಿಕೊಳ್ಳಲು ಪ್ರಾರ್ಥನಾಪೂರ್ವಕವಾಗಿ ಯೋಚಿಸಿ.
[ಪುಟ 2ರಲ್ಲಿರುವ ಸಂಕ್ಷಿಪ್ತ ವಿವರಣೆ]
ಹೆತ್ತವರೇ, ನಿಮ್ಮ ಮಕ್ಕಳು ಪೂರ್ಣ ಸಮಯದ ಸೇವೆಯ ಗುರಿಯನ್ನಿಟ್ಟು ಅದನ್ನು ಮುಟ್ಟಲು ಸಹಾಯ ಮಾಡುತ್ತಿದ್ದೀರೊ?
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಾವು ಮಾಡಸಾಧ್ಯವಿರುವ ಕೆಲಸಗಳಲ್ಲೇ ಸಾರುವ ಕೆಲಸವನ್ನು ಯೆಹೋವನು ಅತೀ ಪ್ರಾಮುಖ್ಯ ಕೆಲಸವನ್ನಾಗಿ ಮಾಡಿದ್ದಾನೆ.