ಹೊಲಗಳು ಕೊಯ್ಲಿಗೆ ಸಿದ್ಧವಾಗಿವೆ
1. ಯಾವ ಪ್ರಾಮುಖ್ಯ ಕೆಲಸ ಜಾರಿಯಲ್ಲಿದೆ?
1 ಸಮಾರ್ಯದ ಸ್ತ್ರೀಯೊಬ್ಬಳಿಗೆ ಸಾಕ್ಷಿಕೊಟ್ಟ ಬಳಿಕ ಯೇಸು ತನ್ನ ಶಿಷ್ಯರಿಗೆ, “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಕೊಯ್ಲಿಗೆ ಸಿದ್ಧವಾಗಿವೆ” ಎಂದು ಹೇಳಿದನು. (ಯೋಹಾ. 4:35, 36) ಒಂದು ಆಧ್ಯಾತ್ಮಿಕ ಕೊಯ್ಲು ಜಾರಿಯಲ್ಲಿತ್ತು. ಇದು ಲೋಕವ್ಯಾಪಕವಾಗಿ ನಡೆಸಲ್ಪಡುವುದನ್ನು ಯೇಸು ಮುಂಗಾಣ ಶಕ್ತನಾದನು. ಯೇಸು ತನ್ನ ಸ್ವರ್ಗೀಯ ಸ್ಥಾನದಿಂದ ಈ ಕೊಯ್ಲಿನ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾನೆ. (ಮತ್ತಾ. 28:19, 20) ಈ ಕೆಲಸ ಅದರ ಸಮಾಪ್ತಿಯ ಕಡೆಗೆ ಸಾಗುತ್ತಿರುವಾಗ ಇನ್ನಷ್ಟು ತೀವ್ರಗೊಳ್ಳುತ್ತಿದೆ ಎಂಬುದಕ್ಕೆ ಯಾವ ಸೂಚನೆಗಳಿವೆ?
2. ಲೋಕವ್ಯಾಪಕವಾಗಿ ಕೊಯ್ಲಿನ ಕೆಲಸ ತ್ವರಿತಗೊಳ್ಳುತ್ತಿದೆ ಎಂಬುದನ್ನು ಯಾವ ವಿಕಸನಗಳು ಸೂಚಿಸುತ್ತವೆ?
2 ಭೂವ್ಯಾಪಕ ಕೊಯ್ಲು: 2009ರ ಸೇವಾ ವರ್ಷದಲ್ಲಿ ಲೋಕವ್ಯಾಪಕ ಪ್ರಚಾರಕರ ಸಂಖ್ಯೆಯಲ್ಲಿ 3.2 ಪ್ರತಿಶತ ಹೆಚ್ಚಳ ಕಂಡುಬಂತು. ಸಾರುವ ಕೆಲಸ ನಿಷೇಧಿಸಲ್ಪಟ್ಟಿರುವ ದೇಶಗಳಲ್ಲೂ 14 ಪ್ರತಿಶತ ಅಭಿವೃದ್ಧಿ ಕಂಡುಬಂದಿದೆ. ಮಾಸಿಕವಾಗಿ ವರದಿಮಾಡಲಾದ ಮನೆ ಬೈಬಲ್ ಅಧ್ಯಯನಗಳ ಸಂಖ್ಯೆ 76,19,000ವನ್ನು ದಾಟಿತು. ಇದು ಪ್ರಚಾರಕರ ಉಚ್ಛಾಂಕಕ್ಕಿಂತ ಹೆಚ್ಚು ಮತ್ತು ಕಳೆದ ವರ್ಷ ವರದಿಮಾಡಲಾದ ಅಧ್ಯಯನ ಸಂಖ್ಯೆಗಿಂತ ಐದು ಲಕ್ಷದಷ್ಟು ಹೆಚ್ಚು. ಅನೇಕ ಕಡೆಗಳಲ್ಲಿ ಈ ಕೆಲಸ ತೀವ್ರಗತಿಯಿಂದ ಸಾಗುತ್ತಿರುವಾಗ ತರಬೇತಿ ಪಡೆದ ಪಯನೀಯರರ ಅಗತ್ಯ ಹೆಚ್ಚುತ್ತಿದೆ. ಅನೇಕ ದೇಶಗಳಲ್ಲಿ ವಿದೇಶೀ ಭಾಷೆಯ ಕ್ಷೇತ್ರಗಳಲ್ಲಿ ಒಳ್ಳೇ ಫಲಿತಾಂಶಗಳು ಸಿಗುತ್ತಿವೆ. ಕೊಯ್ಲಿನ ಸಮಾಪ್ತಿಯ ಸಮಯದಲ್ಲಿ ಯೆಹೋವನು ಈ ಕೆಲಸವನ್ನು ತ್ವರಿತಗೊಳಿಸುತ್ತಿದ್ದಾನೆಂಬುದು ಇದರಿಂದ ಸುವ್ಯಕ್ತ. (ಯೆಶಾ. 60:22) ನಿಮಗೆ ನಿಮ್ಮ “ಹೊಲಗಳ” ವಿಷಯದಲ್ಲಿ ಸಕಾರಾತ್ಮಕ ನೋಟವಿದೆಯೊ?
3. ತಮ್ಮ ಸ್ಥಳೀಯ ಕೊಯ್ಲಿನ ವಿಷಯದಲ್ಲಿ ಕೆಲವರು ಯಾವ ತೀರ್ಮಾನಕ್ಕೆ ಬರಬಹುದು?
3 ನಿಮ್ಮ ಸ್ಥಳೀಯ ಕೊಯ್ಲು: “ನಮ್ಮ ಟೆರಿಟೊರಿ ಅಷ್ಟು ಒಳ್ಳೇದಿಲ್ಲ” ಎಂದು ಕೆಲವರು ಹೇಳಬಹುದು. ಕೆಲವು ಟೆರಿಟೊರಿಗಳು ಬೇರೆ ಟೆರಿಟೊರಿಗಳಷ್ಟು ಫಲಪ್ರದವಾಗಿ ತೋರುವುದಿಲ್ಲ ಅಥವಾ ಮುಂಚೆ ಇದ್ದಷ್ಟು ಪ್ರತಿಫಲ ಅವುಗಳಲ್ಲಿ ಸಿಗುವಂತೆ ತೋರುವುದಿಲ್ಲ ನಿಜ. ಆದ್ದರಿಂದ ಅಂಥ ಕ್ಷೇತ್ರಗಳಲ್ಲಿ ಕೊಯ್ಲಿನ ಕೆಲಸ ಹೆಚ್ಚಿನಾಂಶ ಮುಗಿದಿದೆ, ಇನ್ನೇನಿದ್ದರೂ ಹಕ್ಕಲಾಯ್ದರೆ ಸಾಕು ಎಂದು ಕೆಲವು ಸಾಕ್ಷಿಗಳು ನೆನಸಬಹುದು. ಆದರೆ ಇದು ಸತ್ಯವೊ?
4. ನಮ್ಮ ಶುಶ್ರೂಷೆಯ ಕಡೆಗೆ ನಾವು ಯಾವ ಯೋಗ್ಯ ನೋಟವನ್ನಿಡಬೇಕು? ಏಕೆ?
4 ಆರಂಭದಿಂದ ಅಂತ್ಯದ ತನಕ ಕೊಯ್ಲಿನ ಕೆಲಸ ಭರಾಟೆಯಿಂದ ಸಾಗುತ್ತದೆ. ಯೇಸುವಿನ ಈ ಮಾತುಗಳಲ್ಲಿರುವ ತುರ್ತುಪ್ರಜ್ಞೆಯನ್ನು ಗಮನಿಸಿ: “ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.” (ಮತ್ತಾ. 9:37, 38) ಎಲ್ಲಿ ಮತ್ತು ಯಾವಾಗ ಫಸಲನ್ನು ಬೆಳೆಯುವಂತೆ ಮಾಡಬೇಕು ಎಂಬುದನ್ನು ಕೊಯ್ಲಿನ ಯಜಮಾನನಾದ ಯೆಹೋವನು ನೋಡಿಕೊಳ್ಳುತ್ತಾನೆ. (ಯೋಹಾ. 6:44; 1 ಕೊರಿಂ. 3:6-8) ಹಾಗಾದರೆ ನಮ್ಮ ಕೆಲಸ ಏನು? “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ” ಎಂದು ಬೈಬಲ್ ಉತ್ತರಿಸುತ್ತದೆ. (ಪ್ರಸಂ. 11:4-6) ಹೌದು, ಕೊಯ್ಲಿನ ಕೆಲಸ ಉತ್ತುಂಗಕ್ಕೇರಿರುವ ಸಮಯದಲ್ಲಿ ನಾವು ಕೈಕಟ್ಟಿ ಕೂತಿರುವುದಿಲ್ಲ.
5. ಪ್ರತಿಫಲದಾಯಕವಾಗಿ ತೋರದ ಟೆರಿಟೊರಿಗಳಲ್ಲೂ ಹುರುಪಿನಿಂದ ಸಾರುತ್ತಿರಬೇಕು ಏಕೆ?
5 ಕೊಯ್ಲಿನಲ್ಲಿ ನಿರತರಾಗಿರಿ: ನಮ್ಮ ಟೆರಿಟೊರಿ ಆಗಿಂದಾಗ್ಗೆ ಆವರಿಸಲ್ಪಟ್ಟಿರುವುದಾದರೂ ಪ್ರತಿಕ್ರಿಯೆ ಸಿಗದಿರಬಹುದು. ಆದರೂ ಈ ಕೆಲಸವನ್ನು ಹುರುಪಿನಿಂದಲೂ ತುರ್ತುಪ್ರಜ್ಞೆಯಿಂದಲೂ ಮಾಡಲು ಸಕಾರಣವಿದೆ. (2 ತಿಮೊ. 4:2) ಲೋಕದ ದೃಶ್ಯದಲ್ಲಿ ದಂಗುಬಡಿಯುವಂಥ ಘಟನೆಗಳು ಸಂಭವಿಸುವಾಗ ಜನರ ಮನೋಭಾವ ಬದಲಾಗುತ್ತದೆ ಮತ್ತು ಅವರು ಭವಿಷ್ಯದ ಬಗ್ಗೆ ಹೆಚ್ಚು ಗಂಭೀರವಾಗಿ ಚಿಂತಿಸಲು ಆರಂಭಿಸುತ್ತಾರೆ. ಯೌವನಸ್ಥರು ಪ್ರಾಯಸ್ಥರಾಗುವಾಗ ಭದ್ರತೆ, ಮನಶ್ಶಾಂತಿಗಾಗಿ ಹುಡುಕಬಹುದು. ನಾವು ಪಟ್ಟುಬಿಡದೆ ಮಾಡುವ ಸೇವೆ ಕೆಲವರ ಮೇಲೆ ಒಳ್ಳೇ ಪ್ರಭಾವ ಬೀರಬಹುದು. ಹೌದು, ಈ ಹಿಂದೆ ನಮಗೆ ಕಿವಿಗೊಟ್ಟಿಲ್ಲದ ಜನರು ಮುಂದೊಂದು ದಿವಸ ಕಿವಿಗೊಡಬಹುದು. ನಮ್ಮ ಸಂದೇಶವನ್ನು ಬೇಕುಬೇಕೆಂದೇ ನಿರಾಕರಿಸುವವರನ್ನು ಸಹ ಎಚ್ಚರಿಸಬೇಕು. ಆದರೆ ನಮ್ಮ ಟೆರಿಟೊರಿಯಲ್ಲಿರುವ ಅನೇಕರು ಸುವಾರ್ತೆಗೆ ಕಿವಿಗೊಡದಿರುವುದು ಮಾತ್ರವಲ್ಲ ಅದನ್ನು ದ್ವೇಷಿಸುವುದಾದರೆ ಹೆಚ್ಚಿನ ಜಾಗ್ರತೆ ವಹಿಸತಕ್ಕದ್ದು.—ಯೆಹೆ. 2:4, 5; 3:19.
6. ನಮ್ಮ ಟೆರಿಟೊರಿಯಲ್ಲಿ ಸಾರುವುದು ಪಂಥಾಹ್ವಾನವಾಗಿರುವಲ್ಲಿ ಹುರುಪನ್ನು ಕಾಪಾಡಿಕೊಳ್ಳಲು ಯಾವುದು ಸಹಾಯಮಾಡುವುದು?
6 ನಮ್ಮ ಟೆರಿಟೊರಿಯಲ್ಲಿ ಸಾರುವುದು ಪಂಥಾಹ್ವಾನವಾಗಿರುವಲ್ಲಿ ಹುರುಪನ್ನು ಕಾಪಾಡಿಕೊಳ್ಳಲು ಯಾವುದು ಸಹಾಯಮಾಡಬಲ್ಲದು? ನಾವು ಮನೆ-ಮನೆ ಸೇವೆಯನ್ನು ಮಾಡುವುದರೊಂದಿಗೆ ಶುಶ್ರೂಷೆಯ ಇತರ ವಿಧಾನಗಳಲ್ಲೂ ತೊಡಗಬಹುದು. ವ್ಯಾಪಾರ ಕ್ಷೇತ್ರದ ಸೇವೆ ಅಥವಾ ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಒಳಗೂಡಬಹುದು. ಅಥವಾ ಬೇರೆ ಬೇರೆ ನಿರೂಪಣೆಗಳನ್ನು ಕೊಡುವ ಮೂಲಕ ಹೊಸತನದೊಂದಿಗೆ ಮನೆಯವರನ್ನು ಸಮೀಪಿಸಬಹುದು. ‘ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವವಿರುವ’ ವ್ಯಕ್ತಿಗಳಿಗಾಗಿ ಹುಡುಕುವ ಮೂಲಕ ನಾವು ಸಮಯೋಚಿತ ಜಾಣ್ಮೆ ಮತ್ತು ವಿವೇಚನೆಯನ್ನು ತೋರಿಸಬಲ್ಲೆವು. (ಅ. ಕಾ. 13:48) ನಾವು ನಮ್ಮ ಕಾಲತಖ್ತೆಯನ್ನು ಬದಲಾಯಿಸಿಕೊಂಡು ಸಾಯಂಕಾಲದ ಹೊತ್ತಿನಲ್ಲಿ ಅಥವಾ ಜನರು ಮನೆಯಲ್ಲಿರಬಹುದಾದ ಬೇರೆ ಸಮಯದಲ್ಲಿ ಸೇವೆಗೆ ಹೋಗಬಹುದು. ಪ್ರಾಯಶಃ ಒಂದು ಹೊಸ ಭಾಷೆಯನ್ನು ಕಲಿಯುವ ಮೂಲಕ ಸುವಾರ್ತೆಯನ್ನು ಹೆಚ್ಚು ಜನರಿಗೆ ಸಾರಲು ಪ್ರಯತ್ನಿಸಬಹುದು. ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸುವ ಮೂಲಕ ನಮ್ಮ ಶುಶ್ರೂಷೆಯನ್ನು ವಿಸ್ತರಿಸಬಹುದು. ಇಲ್ಲವೆ ಕೆಲವೇ ಕೊಯ್ಲಿನ ಕೆಲಸಗಾರರಿರುವಲ್ಲಿಗೆ ಸ್ಥಳಾಂತರಿಸಬಹುದು. ನಮಗೆ ಕೊಯ್ಲಿನ ವಿಷಯದಲ್ಲಿ ಯೋಗ್ಯ ಮನೋಭಾವವಿದ್ದರೆ ಸಾಕು, ಈ ಪ್ರಾಮುಖ್ಯ ಕೆಲಸದಲ್ಲಿ ನಮ್ಮಿಂದಾದಷ್ಟು ಉತ್ತಮ ಸೇವೆಯನ್ನು ಮಾಡಲು ಶ್ರಮಿಸುವೆವು.
7. ಒಟ್ಟುಗೂಡಿಸುವ ಕೆಲಸವನ್ನು ನಾವು ಎಷ್ಟರ ತನಕ ಮಾಡುತ್ತಿರಬೇಕು?
7 ರೈತರಿಗೆ ತಮ್ಮ ಬೆಳೆಯನ್ನು ಕೂಡಿಸಿಕೊಳ್ಳಲು ಇಂತಿಷ್ಟೇ ಸಮಯ ಅಂತಿರುತ್ತದೆ. ಆದ್ದರಿಂದ ಕೆಲಸ ಮುಗಿಯುವ ತನಕ ಅವರು ವಿಶ್ರಮಿಸುವುದಿಲ್ಲ ಅಥವಾ ನಿಧಾನಿಸುವುದಿಲ್ಲ. ಆಧ್ಯಾತ್ಮಿಕ ಕೊಯ್ಲಿನ ವಿಷಯದಲ್ಲೂ ನಮಗೆ ಇದೇ ತುರ್ತುಪ್ರಜ್ಞೆ ಇರತಕ್ಕದ್ದು. ಈ ಒಟ್ಟುಗೂಡಿಸುವ ಕೆಲಸವನ್ನು ನಾವು ಎಷ್ಟರ ತನಕ ಮಾಡಬೇಕು? “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಆದ್ಯಂತ, “ಅಂತ್ಯ” ಬರುವ ತನಕ. (ಮತ್ತಾ. 24:14; 28:20) ಯೆಹೋವನ ಪ್ರಪ್ರಧಾನ ಶುಶ್ರೂಷಕನಂತೆ ನಮಗೆ ಒಪ್ಪಿಸಲ್ಪಟ್ಟಿರುವ ಕೆಲಸವನ್ನು ನಾವು ಮಾಡಿಮುಗಿಸಲು ಬಯಸುತ್ತೇವೆ. (ಯೋಹಾ. 4:34; 17:4) ಆದ್ದರಿಂದ ಅಂತ್ಯ ಬರುವ ವರೆಗೆ ನಮ್ಮ ಶುಶ್ರೂಷೆಯನ್ನು ಹುರುಪು, ಆನಂದ ಮತ್ತು ಸಕಾರಾತ್ಮಕ ಮನೋಭಾವದೊಂದಿಗೆ ಮಾಡುತ್ತಾ ಇರೋಣ. (ಮತ್ತಾ. 24:13) ಕೊಯ್ಲು ಮುಗಿದಿಲ್ಲ!
[ಪುಟ 2ರಲ್ಲಿರುವ ಸಂಕ್ಷಿಪ್ತ ವಿವರಣೆ]
ಆರಂಭದಿಂದ ಅಂತ್ಯದ ತನಕ ಕೊಯ್ಲಿನ ಕೆಲಸ ಭರಾಟೆಯಿಂದ ಸಾಗುತ್ತದೆ