ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/11 ಪು. 3-6
  • ಕುಟುಂಬಗಳಿಗಾಗಿ ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಟುಂಬಗಳಿಗಾಗಿ ಸಹಾಯ
  • 2011 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಕುಟುಂಬ ಆರಾಧನೆ​—⁠ಇನ್ನಷ್ಟು ಆನಂದದಾಯಕವಾಗಿ ಮಾಡಬಲ್ಲಿರೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಕ್ರೈಸ್ತ ಕುಟುಂಬಗಳೇ, “ಸಿದ್ಧರಾಗಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಒಂದು ಕುಟುಂಬದೋಪಾದಿ ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಿಸಿರಿ
    ಕಾವಲಿನಬುರುಜು—1999
  • ಕುಟುಂಬಗಳೇ, ದೇವರ ಸಭೆಯ ಭಾಗದೋಪಾದಿ ಆತನನ್ನು ಸ್ತುತಿಸಿರಿ
    ಕಾವಲಿನಬುರುಜು—1999
ಇನ್ನಷ್ಟು
2011 ನಮ್ಮ ರಾಜ್ಯದ ಸೇವೆ
km 1/11 ಪು. 3-6

ಕುಟುಂಬಗಳಿಗಾಗಿ ಸಹಾಯ

1. ವಾರದ ಸಬ್ಬತ್‌ ದಿನ ಇಸ್ರಾಯೇಲ್‌ ಕುಟುಂಬಗಳಿಗೆ ಹೇಗೆ ಪ್ರಯೋಜನಕರವಾಗಿತ್ತು?

1 ಸಬ್ಬತ್‌ ಆಚರಣೆಯು ಯೆಹೋವನ ಒಂದು ಪ್ರೀತಿಪರ ಒದಗಿಸುವಿಕೆ. ಅದು ಕುಟುಂಬಗಳಿಗೆ ಪ್ರಯೋಜನಕರವಾಗಿತ್ತು. ಆ ದಿನ ಇಸ್ರಾಯೇಲ್ಯರು ತಮ್ಮ ದಿನನಿತ್ಯದ ಕೆಲಸಗಳಿಂದ ವಿಶ್ರಮಿಸಿಕೊಳ್ಳುತ್ತಿದ್ದರು. ಯೆಹೋವನ ಒಳ್ಳೇತನ ಹಾಗೂ ಆತನೊಂದಿಗೆ ಸುಸಂಬಂಧ ಇಡುವುದರ ಕುರಿತು ಪರ್ಯಾಲೋಚಿಸಲು ಅವರಿಗೆ ಆಗ ಸಮಯ ಸಿಗುತ್ತಿತ್ತು. ಹೆತ್ತವರು ಈ ಸಂದರ್ಭವನ್ನು ಸದುಪಯೋಗಿಸಿ ತಮ್ಮ ಮಕ್ಕಳ ಹೃದಯದಲ್ಲಿ ಧರ್ಮಶಾಸ್ತ್ರವನ್ನು ಬೇರೂರಿಸಸಾಧ್ಯವಿತ್ತು. (ಧರ್ಮೋ. 6:6, 7) ಯೆಹೋವನ ಜನರು ತಮ್ಮ ಆಧ್ಯಾತ್ಮಿಕತೆಗೆ ಗಮನಕೊಡುವಂತೆ ಸಬ್ಬತ್‌ ದಿನವು ಪ್ರತಿವಾರ ಸಮಯವನ್ನು ಒದಗಿಸಿತ್ತು.

2. ಸಬ್ಬತ್‌ ಯೆಹೋವನ ಕುರಿತು ನಮಗೇನನ್ನು ಕಲಿಸುತ್ತದೆ?

2 ಇಂದು ಕುಟುಂಬಗಳು ಸಬ್ಬತ್‌ ಆಚರಿಸುವಂತೆ ಯೆಹೋವನು ಅವಶ್ಯಪಡಿಸುವುದಿಲ್ಲ ನಿಶ್ಚಯ. ಆದರೂ ಆ ಸಬ್ಬತ್‌ ನಿಯಮ ನಮ್ಮ ದೇವರ ಕುರಿತು ನಮಗೆ ಏನನ್ನೋ ಕಲಿಸುತ್ತದೆ. ಆತನು ಯಾವಾಗಲೂ ತನ್ನ ಜನರ ಆಧ್ಯಾತ್ಮಿಕ ಕ್ಷೇಮದಲ್ಲಿ ಗಾಢವಾಗಿ ಆಸಕ್ತನಾಗಿದ್ದಾನೆ. (ಯೆಶಾ. 48:17, 18) ಇಂದು ಯೆಹೋವನು ಈ ಪ್ರೀತಿಪರ ಆಸಕ್ತಿಯನ್ನು ತೋರಿಸುವ ಒಂದು ವಿಧಾನ ಕುಟುಂಬ ಆರಾಧನೆಯ ಸಂಜೆಯ ಮೂಲಕವೇ.

3. ಕುಟುಂಬ ಆರಾಧನೆಯ ಸಂಜೆಯ ಉದ್ದೇಶವೇನು?

3 ಕುಟುಂಬ ಆರಾಧನೆಯ ಸಂಜೆಯ ಉದ್ದೇಶವೇನು? 2009 ಜನವರಿಯಿಂದ ಆರಂಭಿಸಿ ಸಭಾ ಪುಸ್ತಕ ಅಧ್ಯಯನವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟದ ಸಂಜೆಯಂದೇ ನಡೆಯತೊಡಗಿತು. ಈ ಬದಲಾವಣೆಗೆ ಒಂದು ಕಾರಣ, ಕುಟುಂಬಗಳಿಗೆ ತಮ್ಮ ಆಧ್ಯಾತ್ಮಿಕತೆಯನ್ನು ಬಲಪಡಿಸುವ ಸಂದರ್ಭ ಕೊಡುವುದೇ ಆಗಿದೆ. ಕುಟುಂಬವು ಪ್ರತಿವಾರ ಒಂದು ನಿರ್ದಿಷ್ಟ ಸಂಜೆ ಕುಟುಂಬ ಆರಾಧನೆಗಾಗಿ ಸಮಯವನ್ನು ನಿಗದಿಪಡಿಸಬೇಕಿತ್ತು. ಪ್ರಾಯೋಗಿಕವಾಗಿದ್ದರೆ, ಈ ಮುಂಚೆ ಪುಸ್ತಕ ಅಧ್ಯಯನ ನಡೆಸಲಾಗುತ್ತಿದ್ದ ರಾತ್ರಿಗೆ ತಮ್ಮ ಕುಟುಂಬ ಅಧ್ಯಯನವನ್ನು ಬದಲಾಯಿಸುವಂತೆ ಪ್ರತಿ ಕುಟುಂಬವನ್ನು ಪ್ರೋತ್ಸಾಹಿಸಲಾಯಿತು. ಈ ಸಮಯವನ್ನು ಅವರು ಕುಟುಂಬದ ಅಗತ್ಯಗಳಿಗೆ ಅನುಗುಣವಾಗಿರುವ ಬೈಬಲ್‌ ಚರ್ಚೆ ಹಾಗೂ ಅಧ್ಯಯನವನ್ನು ಅವಸರವಿಲ್ಲದೇ ಮಾಡಲು ಬಳಸಬೇಕಿತ್ತು.

4. ಕುಟುಂಬವು ತಮ್ಮ ಚರ್ಚೆಯನ್ನು ಒಂದೇ ತಾಸಿಗೆ ಸೀಮಿತಗೊಳಿಸಬೇಕೋ? ವಿವರಿಸಿ.

4 ಸಭಾ ಪುಸ್ತಕ ಅಧ್ಯಯನವನ್ನು ಹಾಜರಾಗಲಿಕ್ಕಾಗಿ ಸಿದ್ಧತೆ, ಪ್ರಯಾಣ ಮುಂತಾದವುಗಳಿಗಾಗಿ ಸಮಯ ಬೇಕಾಗುತ್ತಿತ್ತು. ಬರೇ ಒಂದು ತಾಸಿನ ಆ ಕೂಟಕ್ಕೆ ಹಾಜರಾಗಲು ನಮ್ಮಲ್ಲಿ ಅನೇಕರಿಗೆ ಇಡೀ ಸಾಯಂಕಾಲವನ್ನೇ ವ್ಯಯಿಸಬೇಕಾಗಿತ್ತು. ಕೂಟಗಳ ಶೆಡ್ಯೂಲ್‌ನಲ್ಲಾಗಿರುವ ಈ ಬದಲಾವಣೆಯಿಂದ ಯೆಹೋವನನ್ನು ಕುಟುಂಬವಾಗಿ ಆರಾಧಿಸಲಿಕ್ಕಾಗಿ ಈಗ ನಮಗೆ ಒಂದು ಇಡೀ ಸಂಜೆ ಸಿಕ್ಕಿದೆ. ಆದ್ದರಿಂದ ನಾವು ಕುಟುಂಬ ಆರಾಧನೆಯನ್ನು ಒಂದೇ ತಾಸಿಗೆ ಸೀಮಿತಗೊಳಿಸಬೇಕಾಗಿಲ್ಲ. ಬದಲಾಗಿ ನಮ್ಮ ಕುಟುಂಬದ ಅಗತ್ಯಗಳ ಮತ್ತು ಇತಿಮಿತಿಗಳ ಕುರಿತು ಯೋಚಿಸಿ ಅದಕ್ಕನುಸಾರ ಬೇಕಾದಷ್ಟು ಸಮಯವನ್ನು ಯೋಜಿಸುವುದು ಒಳ್ಳೇದು.

5. ಕುಟುಂಬವು ಇಡೀ ಸಂಜೆಯನ್ನು ಚರ್ಚೆಯಲ್ಲೇ ಕಳೆಯಬೇಕೋ? ವಿವರಿಸಿ.

5 ಕುಟುಂಬ ಇಡೀ ಸಂಜೆಯನ್ನು ಚರ್ಚೆಯಲ್ಲೇ ಕಳೆಯಬೇಕೋ? ದಂಪತಿಗಳು ಮತ್ತು ಮಕ್ಕಳಿರುವ ಕುಟುಂಬಗಳು ಬೈಬಲ್‌ ಆಧಾರಿತ ವಿಷಯಗಳನ್ನು ಒಟ್ಟಿಗೆ ಚರ್ಚಿಸುವಾಗ ಪರಸ್ಪರರಿಗೆ ಪ್ರೋತ್ಸಾಹ ಸಿಗುತ್ತದೆ ನಿಜ. (ರೋಮ. 1:12) ಅಲ್ಲದೆ ಕುಟುಂಬ ಸದಸ್ಯರು ಹೆಚ್ಚು ಆಪ್ತರೂ ಆಗುತ್ತಾರೆ. ಹೀಗಿರುವುದರಿಂದ, ಬೈಬಲ್‌ ಆಧರಿತ ಚರ್ಚೆಗಳು ಕುಟುಂಬ ಆರಾಧನೆಯ ಪ್ರಧಾನ ಭಾಗವಾಗಿರಬೇಕು. ಇದರ ಜೊತೆಗೆ ಪ್ರತಿಯೊಬ್ಬ ಕುಟುಂಬ ಸದಸ್ಯನು ವೈಯಕ್ತಿಕ ಅಧ್ಯಯನವನ್ನೂ ಮಾಡಬಹುದು. ಉದಾಹರಣೆಗೆ ಗುಂಪು ಚರ್ಚೆಯ ಬಳಿಕ, ಕುಟುಂಬದವರೆಲ್ಲರೂ ಒಟ್ಟಿಗೆ ಇದ್ದುಕೊಂಡೇ ತಮ್ಮತಮ್ಮ ಅಧ್ಯಯನ ಮುಂದುವರಿಸುತ್ತಾ ಕೂಟಗಳ ತಯಾರಿಯನ್ನು ಪೂರ್ಣಗೊಳಿಸಬಹುದು ಇಲ್ಲವೆ ಪತ್ರಿಕೆಗಳನ್ನು ಓದಬಹುದು. ಕೆಲವು ಕುಟುಂಬಗಳು ಆ ಇಡೀ ಸಾಯಂಕಾಲ ಟಿವಿ ಆನ್‌ ಮಾಡುವುದೇ ಇಲ್ಲ.

6. ಚರ್ಚೆಯನ್ನು ಹೇಗೆ ನಡೆಸಬಹುದು?

6 ಚರ್ಚೆಯನ್ನು ಹೇಗೆ ನಡೆಸಬಹುದು? ಅದಕ್ಕಾಗಿ ಯಾವಾಗಲೂ ಪ್ರಶ್ನೋತ್ತರ ವಿಧಾನವನ್ನೇ ಬಳಸಬೇಕಾಗಿಲ್ಲ. ಕುಟುಂಬ ಆರಾಧನೆಯ ಸಂಜೆಗೆ ಕಳೆತರಲು ಮತ್ತು ಸ್ವಾರಸ್ಯಕರವನ್ನಾಗಿ ಮಾಡಲು ಅನೇಕ ಕುಟುಂಬಗಳಲ್ಲಿ ನಮ್ಮ ವಾರ ಮಧ್ಯದ ಕೂಟದಂಥ ಕಾರ್ಯಕ್ರಮವಿದೆ. ಅಂದರೆ, ಅವರ ಚರ್ಚೆಯನ್ನು ಹಲವಾರು ಭಾಗಗಳಾಗಿ ವಿಭಾಗಿಸಿ ಅವುಗಳನ್ನು ಭಿನ್ನ ಭಿನ್ನ ವಿಧಗಳಲ್ಲಿ ನಿರ್ವಹಿಸುತ್ತಾರೆ. ಉದಾಹರಣೆಗೆ, ಅವರು ಜೊತೆಯಾಗಿ ಬೈಬಲ್‌ ಓದುತ್ತಾರೆ, ಕೂಟಗಳ ಯಾವುದಾದರೊಂದು ಭಾಗಕ್ಕಾಗಿ ತಯಾರಿಸುತ್ತಾರೆ ಮತ್ತು ಶುಶ್ರೂಷೆಗಾಗಿ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ನಡೆಸುತ್ತಾರೆ. ಪುಟ 6ರಲ್ಲಿ ಕೆಲವೊಂದು ಸಲಹೆಗಳಿವೆ.

7. ಯಾವ ರೀತಿಯ ಪರಿಸರವಿರುವಂತೆ ಹೆತ್ತವರು ನೋಡಿಕೊಳ್ಳಬೇಕು?

7 ಯಾವ ರೀತಿಯ ಪರಿಸರವಿರುವಂತೆ ಹೆತ್ತವರು ನೋಡಿಕೊಳ್ಳಬೇಕು? ಪ್ರೀತಿಭರಿತವಾದ, ಹಾಯಾದ ಪರಿಸರವಿದ್ದಲ್ಲಿ ನಿಮ್ಮ ಕುಟುಂಬ ವಿಷಯಗಳನ್ನು ಚೆನ್ನಾಗಿ ಕಲಿಯುವುದು. ಹವಾಮಾನ ಒಳ್ಳೇದಿದ್ದರೆ ನೀವು ಕೆಲವೊಮ್ಮೆ ಮನೆಯ ಹೊರಗೂ ಅಧ್ಯಯನ ನಡೆಸಬಹುದು. ಅಗತ್ಯವಿದ್ದಾಗಲೆಲ್ಲ ಮಧ್ಯಮಧ್ಯ ತುಸು ವಿರಾಮವನ್ನೂ ತೆಗೆದುಕೊಳ್ಳಿ. ಕೆಲವು ಕುಟುಂಬಗಳಲ್ಲಿ ಚರ್ಚೆಯ ನಂತರ ಉಪಾಹಾರ ನೀಡಲಾಗುತ್ತದೆ. ಕುಟುಂಬ ಆರಾಧನೆಯಲ್ಲಿ ಹೆತ್ತವರು ಮಕ್ಕಳನ್ನು ಗದರಿಸುವುದಿಲ್ಲ ಇಲ್ಲವೆ ಶಿಕ್ಷಿಸುವುದಿಲ್ಲವಾದರೂ ಒಂದುವೇಳೆ ಕುಟುಂಬದಲ್ಲಿ ಯಾವುದೋ ಪ್ರವೃತ್ತಿ ಇಲ್ಲವೆ ಸಮಸ್ಯೆ ಇದೆಯೆಂದು ಗಮನಕ್ಕೆ ಬಂದರೆ ಅದನ್ನು ನಿಭಾಯಿಸಲು ಅವರು ಸ್ವಲ್ಪ ಸಮಯ ಕೊಡಬೇಕಾದೀತು. ಆದರೆ, ವೈಯಕ್ತಿಕವಾದ ನಾಜೂಕಾದ ವಿಷಯಗಳಿರುವಲ್ಲಿ ಮಕ್ಕಳನ್ನು ಒಡಹುಟ್ಟಿದವರ ಮುಂದೆ ಪೇಚಾಟಕ್ಕೊಳಪಡಿಸಬೇಡಿ. ವಾರದ ಬೇರಾವುದೋ ಸಮಯದಲ್ಲಿ ಅವರು ಒಬ್ಬರೇ ಇರುವಾಗ ಅದನ್ನು ಚರ್ಚಿಸಿರಿ. ಕುಟುಂಬ ಆರಾಧನೆಯ ಸಂಜೆಯು ನೀರಸವೂ, ಗೆಲವಿಲ್ಲದ್ದೂ ಆಗಿರಬಾರದು ಬದಲಾಗಿ ನಾವು ಆರಾಧಿಸುವ ಸಂತೋಷದ ದೇವರನ್ನು ಪ್ರತಿಬಿಂಬಿಸಬೇಕು.—1 ತಿಮೊ. 1:11.

8, 9. ಕುಟುಂಬದ ತಲೆಗಳು ಯಾವ ತಯಾರಿ ನಡೆಸಬೇಕು?

8 ಕುಟುಂಬ ತಲೆಯು ಹೇಗೆ ತಯಾರಿ ಮಾಡಬೇಕು? ಕುಟುಂಬದ ತಲೆ ಪ್ರತಿ ವಾರದ ಕುಟುಂಬ ಆರಾಧನೆಗಾಗಿ ಮುಂಚೆಯೇ ತಯಾರಿಸಿದರೆ ಎಲ್ಲರಿಗೆ ಅತಿ ಹೆಚ್ಚು ಪ್ರಯೋಜನವಾಗುವುದು. ಏನನ್ನು ಚರ್ಚಿಸಬೇಕು ಮತ್ತು ಹೇಗೆ ಚರ್ಚಿಸಿದರೆ ಉತ್ತಮ ಎಂಬುದನ್ನು ಅವನು ನಿರ್ಧರಿಸತಕ್ಕದ್ದು. (ಜ್ಞಾನೋ. 21:5) ಈ ವಿಷಯದಲ್ಲಿ ಅವನು ಹೆಂಡತಿಯೊಂದಿಗೆ ಮಾತಾಡುವುದು ಒಳ್ಳೇದು. (ಜ್ಞಾನೋ. 15:22) ಕುಟುಂಬದ ತಲೆಗಳೇ, ಆಗಾಗ್ಗೆ ನಿಮ್ಮ ಮಕ್ಕಳಿಂದಲೂ ಸಲಹೆಗಳನ್ನು ಪಡೆಯಬಾರದೇಕೆ? ಹಾಗೆ ಮಾಡಿದರೆ ಅವರಿಗೆ ಯಾವ ವಿಷಯಗಳಲ್ಲಿ ಆಸಕ್ತಿಯಿದೆ, ಯಾವ್ಯಾವ ಚಿಂತೆಗಳಿವೆ ಎಂಬುದರ ಬಗ್ಗೆ ನಿಮಗೆ ಸಹಾಯಕಾರಿ ಮಾಹಿತಿ ಸಿಗುವುದು.

9 ಕುಟುಂಬದ ತಲೆ ಹೆಚ್ಚಾಗಿ ತಯಾರಿಮಾಡಲು ತುಂಬ ಸಮಯ ಕಳೆಯಬೇಕಾಗಿರುವುದಿಲ್ಲ. ಪ್ರತಿ ವಾರ ಚರ್ಚೆಯ ಒಂದು ನಿರ್ದಿಷ್ಟ ವಿಧಾನವಿರುತ್ತದೆ. ಹೀಗಿರುವುದರಿಂದ ಅವನು ಪ್ರತಿ ಸಲ ಹೊಸ ಹೊಸ ಕಾರ್ಯಕ್ರಮಗಳನ್ನು ತಯಾರಿಸಬೇಕೆಂದಿಲ್ಲ. ಪ್ರತಿ ವಾರ ಅಧ್ಯಯನ ಕೊನೆಗೊಂಡ ಬಳಿಕ ಕುಟುಂಬದ ಆಧ್ಯಾತ್ಮಿಕ ಅಗತ್ಯಗಳು ಅವನ ಮನಸ್ಸಿನಲ್ಲಿ ತಾಜಾ ಇರುವಾಗಲೇ ಅವನು ಮುಂದಿನ ವಾರಕ್ಕಾಗಿ ತಯಾರಿಸುವುದು ಉಪಯುಕ್ತವಾಗಿರಬಹುದು. ಕೆಲವು ಕುಟುಂಬ ತಲೆಗಳು ಚಿಕ್ಕ ಕಾರ್ಯಸೂಚಿಯನ್ನು ತಯಾರಿಸಿ, ಕುಟುಂಬದವರೆಲ್ಲರಿಗೂ ಕಾಣುವಂಥ ಸ್ಥಳದಲ್ಲಿ ಉದಾಹರಣೆಗೆ, ಫ್ರಿಜ್‌ ಬಾಗಲಿಗೆ ಅಂಟಿಸುತ್ತಾರೆ. ಇದರಿಂದ ಎಲ್ಲರಲ್ಲೂ ಒಂದು ರೀತಿಯ ಸಂಭ್ರಮ, ಕುತೂಹಲ ಉಂಟಾಗುತ್ತದೆ ಮಾತ್ರವಲ್ಲ ಅಗತ್ಯವಿರುವಲ್ಲಿ ತಯಾರಿ ಮಾಡಲು ಸಮಯವೂ ಸಿಗುತ್ತದೆ.

10. ಒಂಟಿಯಾಗಿರುವವರು ಕುಟುಂಬ ಆರಾಧನೆಯ ಸಂಜೆಯಂದು ಏನು ಮಾಡಬಹುದು?

10 ನಾನು ಒಂಟಿಯಾಗಿದ್ದರೆ ಏನು ಮಾಡುವುದು? ಒಂಟಿಯಾಗಿ ವಾಸಿಸುತ್ತಿರುವವರು ಇಲ್ಲವೆ ಸತ್ಯದಲ್ಲಿ ಒಬ್ಬರೇ ಇರುವವರು ಕುಟುಂಬ ಆರಾಧನೆಯ ಸಂಜೆಯಂದು ವೈಯಕ್ತಿಕ ಅಧ್ಯಯನ ಮಾಡಬಹುದು. ಉತ್ತಮವಾದ ವೈಯಕ್ತಿಕ ಅಧ್ಯಯನ-ಕಾರ್ಯಕ್ರಮದಲ್ಲಿ ಬೈಬಲ್‌ ವಾಚನ, ಕೂಟಗಳಿಗಾಗಿ ತಯಾರಿ ಹಾಗೂ ಕಾವಲಿನಬುರುಜು, ಎಚ್ಚರ! ಪತ್ರಿಕೆಗಳ ವಾಚನ ಇದ್ದೇ ಇರುತ್ತದೆ. ಕೆಲವು ಪ್ರಚಾರಕರು ಇದಕ್ಕೆ ಹೆಚ್ಚನ್ನು ಸೇರಿಸುತ್ತಾರೆ. ಒಂದು ವೈಯಕ್ತಿಕ ಅಧ್ಯಯನ ಪ್ರಾಜೆಕ್ಟನ್ನು ಅಂದರೆ ಒಂದು ವಿಷಯದ ಬಗ್ಗೆ ಸಂಶೋಧನೆಯನ್ನು ಕೈಗೆತ್ತುತ್ತಾರೆ. ಕೆಲವೊಮ್ಮೆ ಅವರು ಇನ್ನೊಬ್ಬ ಪ್ರಚಾರಕರನ್ನೊ ಕುಟುಂಬವನ್ನೊ ತಮ್ಮ ಜೊತೆ ಒಂದು ಉತ್ತೇಜನದಾಯಕ ಬೈಬಲಾಧರಿತ ಚರ್ಚೆಗಾಗಿ ಸೇರುವಂತೆ ಆಮಂತ್ರಿಸಲೂಬಹುದು.

11, 12. ಕ್ರಮವಾಗಿ ಕುಟುಂಬ ಆರಾಧನೆಯನ್ನು ನಡೆಸುವುದರ ಕೆಲವು ಪ್ರಯೋಜನಗಳಾವುವು?

11 ಕುಟುಂಬ ಆರಾಧನೆಯನ್ನು ಕ್ರಮವಾಗಿ ನಡೆಸುವುದರ ಪ್ರಯೋಜನಗಳೇನು? ಸತ್ಯಾರಾಧನೆಯಲ್ಲಿ ಹೃತ್ಪೂರ್ವಕವಾಗಿ ಪಾಲ್ಗೊಳ್ಳುವವರು ಯೆಹೋವನಿಗೆ ಹೆಚ್ಚೆಚ್ಚು ಆಪ್ತರಾಗುತ್ತಾರೆ. ಅಷ್ಟುಮಾತ್ರವಲ್ಲದೆ ಜೊತೆ ಸೇರಿ ಆರಾಧನೆ ಮಾಡುವಂಥ ಕುಟುಂಬಗಳ ಬಂಧಗಳೂ ಬಲಗೊಳ್ಳುತ್ತವೆ. ಒಂದು ದಂಪತಿ ತಮಗೆ ಸಿಕ್ಕಿರುವ ಆಶೀರ್ವಾದಗಳ ಕುರಿತು ಬರೆಯುತ್ತಾ ಹೀಗಂದರು: “ನಾವಿಬ್ಬರೂ ಪಯನೀಯರರು. ನಮಗೆ ಮಕ್ಕಳಿಲ್ಲ. ಆದರೂ ಕುಟುಂಬ ಆರಾಧನೆಯ ಸಂಜೆಗಾಗಿ ಕಾತುರದಿಂದ ಕಾಯುತ್ತೇವೆ. ನಾವು ಅಧ್ಯಯನಕ್ಕಾಗಿ ನಿಗದಿಪಡಿಸಿರುವ ದಿನದಂದು ಬೆಳಗ್ಗೆ ಎದ್ದ ಕೂಡಲೇ ‘ಇವತ್ತು ಸಂಜೆ ಏನು ವಿಶೇಷ ಹೇಳಿ ನೋಡುವಾ? ನಮ್ಮ ಕುಟುಂಬ ಆರಾಧನೆ!’ ಎಂದು ಸಂಭ್ರಮದಿಂದ ಒಬ್ಬರಿಗೊಬ್ಬರು ಹೇಳುತ್ತೇವೆ. ನಾವಿಬ್ಬರೂ ಹೆಚ್ಚು ಆಪ್ತರಾಗುತ್ತಿದ್ದೇವೆ ಮಾತ್ರವಲ್ಲ ನಮ್ಮ ಸ್ವರ್ಗೀಯ ತಂದೆಯೊಟ್ಟಿಗೂ ಇನ್ನಷ್ಟು ಆಪ್ತರಾಗುತ್ತಿದ್ದೇವೆಂದು ನಮಗೆ ಭಾಸವಾಗುತ್ತಿದೆ.”

12 ತುಂಬ ಬ್ಯುಸಿ ಆಗಿರುವ ಕುಟುಂಬಗಳಿಗೂ ಈ ಏರ್ಪಾಡಿನಿಂದಾಗಿ ಕುಟುಂಬ ಅಧ್ಯಯನ ಮಾಡಲು ಸುಲಭವಾಗಿದೆ. ಇಬ್ಬರು ಗಂಡುಮಕ್ಕಳಿರುವ ಒಬ್ಬ ಒಂಟಿ ತಾಯಿಯ ಮಾತನ್ನು ಕೇಳೋಣ. ಆಕೆ ಕುಟುಂಬವನ್ನೂ ಪೋಷಿಸುತ್ತಾಳೆ, ರೆಗ್ಯುಲರ್‌ ಪಯನೀಯರ್‌ ಸೇವೆಯನ್ನೂ ಮಾಡುತ್ತಾಳೆ. ಆಕೆ ಬರೆದದ್ದು: “ಹಿಂದೆಲ್ಲ ನಮ್ಮ ಕುಟುಂಬ ಅಧ್ಯಯನಕ್ಕೆ ತುಂಬ ಪೆಟ್ಟುಬೀಳುತ್ತಿತ್ತು. ನನಗೆ ತುಂಬ ಸುಸ್ತಾಗುತ್ತಿದ್ದ ಕಾರಣ ಅದು ಆಗೊಮ್ಮೆ ಈಗೊಮ್ಮೆ ನಡೆಯುತ್ತಿತ್ತು. ಅಧ್ಯಯನಕ್ಕಾಗಿ ಸಮಯ ಹೊಂದಿಸಿಕೊಳ್ಳಲು ನನಗೆ ತುಂಬ ಕಷ್ಟವಾಗುತ್ತಿತ್ತು. ಆದರೆ ಈಗ ನಾವು ಕ್ರಮವಾಗಿ ಕುಟುಂಬ ಅಧ್ಯಯನವನ್ನು ನಡೆಸಲು ಸಾಧ್ಯವಾಗುತ್ತಿದೆ. ಪ್ರಯೋಜನಗಳನ್ನೂ ಪಡೆಯುತ್ತಿದ್ದೇವೆ. ಈ ಕುಟುಂಬ ಆರಾಧನೆಯ ಸಂಜೆಗಾಗಿ ನಿಮಗೆ ತುಂಬ, ತುಂಬ ಧನ್ಯವಾದ ಹೇಳಲಿಕ್ಕೆಂದೇ ಈ ಪತ್ರ ಬರೆಯುತ್ತಿದ್ದೇನೆ.”

13. ಈ ಏರ್ಪಾಡಿನಿಂದ ನಿಮ್ಮ ಕುಟುಂಬಕ್ಕೆ ಪ್ರಯೋಜನ ಆಗಬೇಕಾದರೆ ಏನು ಮಾಡಬೇಕು?

13 ಸಬ್ಬತ್‌ ದಿನದಂತೆಯೇ ಕುಟುಂಬ ಆರಾಧನೆಯ ಸಂಜೆಯೂ ನಮ್ಮ ಸ್ವರ್ಗೀಯ ತಂದೆಯ ಒಂದು ವರದಾನ. ಇದರಿಂದ ಕುಟುಂಬಗಳಿಗೆ ಸಹಾಯ ಆಗಬಲ್ಲದು. (ಯಾಕೋ. 1:17) ಇಸ್ರಾಯೇಲ್ಯ ಕುಟುಂಬಗಳು ಸಬ್ಬತ್‌ ದಿನವನ್ನು ಉತ್ತಮವಾಗಿ ಬಳಸಿದ್ದಲ್ಲಿ ಮಾತ್ರ ಅವರಿಗೆ ಆಧ್ಯಾತ್ಮಿಕವಾಗಿ ಪ್ರಯೋಜನವಾಗಸಾಧ್ಯವಿತ್ತು. ಅದೇ ರೀತಿಯಲ್ಲಿ ಕುಟುಂಬ ಆರಾಧನೆಗಾಗಿ ಕೊಡಲಾಗಿರುವ ಸಂಜೆಯನ್ನು ಚೆನ್ನಾಗಿ ಬಳಸಿಕೊಂಡರೆ ಮಾತ್ರ ನಮ್ಮ ಕುಟುಂಬಕ್ಕೆ ಪ್ರಯೋಜನವಾಗುವುದು. (2 ಕೊರಿಂ. 9:6; ಗಲಾ. 6:7, 8; ಕೊಲೊ. 3:23, 24) ಈ ಏರ್ಪಾಡನ್ನು ಸದುಪಯೋಗಿಸುವ ಮೂಲಕ ನಿಮ್ಮ ಕುಟುಂಬವು ಕೀರ್ತನೆಗಾರನಂತೆಯೇ ‘ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದಾಗಿದೆ; ಯೆಹೋವ ದೇವರಲ್ಲಿ ನನ್ನ ಭರವಸೆಯನ್ನು ಇಟ್ಟಿದ್ದೇನೆ’ ಎಂದು ಹೇಳಬಹುದು.—ಕೀರ್ತ. 73:28, NIBV.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕುಟುಂಬ ಆರಾಧನೆಯ ಸಂಜೆಯು ನೀರಸವೂ, ಗೆಲವಿಲ್ಲದ್ದೂ ಆಗಿರಬಾರದು ಬದಲಾಗಿ ನಾವು ಆರಾಧಿಸುವ ಸಂತೋಷದ ದೇವರನ್ನು ಪ್ರತಿಬಿಂಬಿಸಬೇಕು

[ಪುಟ 6ರಲ್ಲಿರುವ ಚೌಕ]

ಜೋಪಾನವಾಗಿಡಿ

ಕುಟುಂಬ ಆರಾಧನೆಯ ಸಂಜೆಗಾಗಿ ಕೆಲವು ಉಪಾಯಗಳು

ಬೈಬಲ್‌:

• ವಾರದ ಬೈಬಲ್‌ ವಾಚನದ ಒಂದು ಭಾಗವನ್ನು ಜೊತೆಯಾಗಿ ಓದಿ. ಕೆಲವೊಂದು ಬೈಬಲ್‌ ವೃತ್ತಾಂತಗಳನ್ನು ಈ ಶೈಲಿಯಲ್ಲಿ ಓದಬಹುದು: ಒಬ್ಬರು ಕಥಾನಿರೂಪಣೆಯನ್ನು, ಉಳಿದವರು ವಿವಿಧ ವ್ಯಕ್ತಿಗಳ ಸಂಭಾಷಣಾ ಭಾಗಗಳನ್ನು ಓದಬಹುದು.

• ಬೈಬಲ್‌ ವಾಚನದ ಒಂದು ಭಾಗವನ್ನು ಅಭಿನಯಿಸಿ.

• ವಾರದ ಬೈಬಲ್‌ ವಾಚನ ಮಾಡಿ ಆ ಅಧ್ಯಾಯಗಳ ಬಗ್ಗೆ ಅವರಿಗೆದ್ದ ಒಂದೆರಡು ಪ್ರಶ್ನೆಗಳನ್ನು ಬರೆದು ತರುವ ನೇಮಕವನ್ನು ಕುಟುಂಬದ ಪ್ರತಿಯೊಬ್ಬರಿಗೂ ಮುಂದಾಗಿಯೇ ಕೊಡಿ. ಆಮೇಲೆ ಕುಟುಂಬವಾಗಿ ಎಲ್ಲ ಪ್ರಶ್ನೆಗಳ ಉತ್ತರಗಳಿಗಾಗಿ ಸಂಶೋಧನೆಮಾಡಿ.

• ಒಂದು ಚಿಕ್ಕ ಕಾರ್ಡ್‌ನ ಒಂದು ಬದಿಯಲ್ಲಿ ಬರೀ ಬೈಬಲ್‌ ವಚನ, ಅದರ ಇನ್ನೊಂದು ಬದಿಯಲ್ಲಿ ಆ ವಚನದ ವಾಕ್ಯಗಳನ್ನು ಪ್ರತಿ ವಾರ ಬರೆದಿಡಿ. ಅದನ್ನು ಬಾಯಿಪಾಠ ಮಾಡಲು ಮತ್ತು ವಿವರಿಸಲು ಪ್ರಯತ್ನಿಸಿ. ಹೀಗೆ ನೀವು ತಯಾರಿಸಿದ ಕಾರ್ಡುಗಳ ಸಂಗ್ರಹ ಮಾಡಿ, ಅವುಗಳಲ್ಲಿ ಎಷ್ಟೊಂದು ವಚನಗಳು ನಿಮಗೆ ನೆನಪಿದೆಯೆಂದು ಪ್ರತಿ ವಾರ ಪುನರವಲೋಕಿಸಿ.

• ಬೈಬಲ್‌ ವಾಚನದ ರೆಕಾರ್ಡಿಂಗ್‌ ಆಲಿಸುತ್ತಾ, ನಿಮ್ಮ ನಿಮ್ಮ ಬೈಬಲ್‌ಗಳಲ್ಲಿ ಅನುಸರಿಸಿ.

ಕೂಟಗಳು:

• ಕೂಟಗಳ ಯಾವುದಾದರೊಂದು ಭಾಗಕ್ಕಾಗಿ ಜೊತೆಗೂಡಿ ತಯಾರಿಸಿ.

• ಮುಂದಿನ ವಾರದ ರಾಜ್ಯ ಗೀತೆಗಳನ್ನು ಪ್ರ್ಯಾಕ್ಟಿಸ್‌ ಮಾಡಿ.

• ಕುಟುಂಬದಲ್ಲಿ ಯಾರಿಗಾದರೂ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಷಣವಿದ್ದರೆ ಇಲ್ಲವೆ ಸೇವಾ ಕೂಟದಲ್ಲಿ ಪ್ರತ್ಯಕ್ಷಾಭಿನಯವಿದ್ದರೆ ಅದನ್ನು ಹೇಗೆ ಸಾದರಪಡಿಸುವುದು ಎಂಬುದರ ಬಗ್ಗೆ ಚರ್ಚಿಸಿರಿ ಇಲ್ಲವೆ ಕುಟುಂಬದ ಮುಂದೆ ರಿಹರ್ಸ್‌ ಮಾಡಿ.

ಕುಟುಂಬದ ಅಗತ್ಯಗಳು:

• ಯುವ ಜನರ ಪ್ರಶ್ನೆಗಳು ಇಲ್ಲವೆ ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್‌) ಪುಸ್ತಕದಿಂದ ಮಾಹಿತಿ ಚರ್ಚಿಸಿರಿ.

• ಶಾಲೆಯಲ್ಲಿ ಏಳಬಹುದಾದ ಒಂದು ಸನ್ನಿವೇಶವನ್ನು ಹೇಗೆ ನಿರ್ವಹಿಸುವುದೆಂದು ಪ್ರ್ಯಾಕ್ಟಿಸ್‌ ಸೆಷನ್‌ ಮಾಡಿ.

• ಮಕ್ಕಳು ಹೆತ್ತವರಂತೆ ಅಭಿನಯಿಸಲಿ. ಅವರು ಮುಂಚೆಯೇ ಒಂದು ವಿಷಯದ ಬಗ್ಗೆ ಸಂಶೋಧನೆ ಮಾಡಿ, ಮಕ್ಕಳಂತೆ ಅಭಿನಯಿಸುತ್ತಿರುವ ತಮ್ಮ ಹೆತ್ತವರಿಗೆ ಆ ವಿಷಯದ ಬಗ್ಗೆ ಮನವೊಪ್ಪಿಸಲಿಕ್ಕಾಗಿ ಕಾರಣಗಳನ್ನು ಕೊಟ್ಟು ವಿವರಿಸಲಿ.

ಶುಶ್ರೂಷೆ:

• ವಾರಾಂತ್ಯಕ್ಕಾಗಿ ನಿರೂಪಣೆಗಳನ್ನು ತಯಾರಿಸಲು ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ಮಾಡಿ.

• ಜ್ಞಾಪಕಾಚರಣೆಯ ಅವಧಿಯಲ್ಲಿ ಇಲ್ಲವೆ ರಜಾಕಾಲದಲ್ಲಿ ಶುಶ್ರೂಷೆಯನ್ನು ಹೆಚ್ಚಿಸಲು ಕುಟುಂಬವು ಇಡಬಹುದಾದ ಪ್ರಾಯೋಗಿಕ ಗುರಿಗಳ ಕುರಿತು ಚರ್ಚಿಸಿರಿ.

• ಶುಶ್ರೂಷೆಯಲ್ಲಿ ಏಳಬಹುದಾದ ಭಿನ್ನಭಿನ್ನ ಪ್ರಶ್ನೆಗಳನ್ನು ಉತ್ತರಿಸುವುದು ಹೇಗೆಂದು ಸಂಶೋಧನೆಮಾಡಲು ಪ್ರತಿ ಕುಟುಂಬ ಸದಸ್ಯನಿಗೆ ಕೆಲವು ನಿಮಿಷ ಕೊಟ್ಟು, ಆಮೇಲೆ ಪ್ರ್ಯಾಕ್ಟಿಸ್‌ ಸೆಷನ್‌ ಮಾಡಿ.

ಹೆಚ್ಚಿನ ಸಲಹೆಗಳು:

• ಇತ್ತೀಚಿನ ಪತ್ರಿಕೆಗಳಿಂದ ಒಂದು ಲೇಖನವನ್ನು ಜೊತೆಯಾಗಿ ಓದಿ.

• ಕುಟುಂಬದ ಸದಸ್ಯರಲ್ಲಿ ಪ್ರತಿಯೊಬ್ಬರೂ ಇತ್ತೀಚಿನ ಪತ್ರಿಕೆಗಳಿಂದ ಅವರವರಿಗೆ ಇಷ್ಟವಾಗುವ ಯಾವುದೇ ಲೇಖನವನ್ನು ಓದಿಬರುವಂತೆ ಹೇಳಿ. ಅವರು ಆಮೇಲೆ ಲೇಖನದ ಬಗ್ಗೆ ವಿವರವಾಗಿ ತಿಳಿಸಲಿ.

• ಆಗಾಗ್ಗೆ ನಿಮ್ಮ ಕುಟುಂಬ ಆರಾಧನೆಯಲ್ಲಿ ಸೇರುವಂತೆ ಒಬ್ಬ ಪ್ರಚಾರಕನನ್ನೊ ದಂಪತಿಯನ್ನೊ ಆಮಂತ್ರಿಸಿರಿ. ಅವರ ಇಂಟರ್‌ವ್ಯೂ ಅನ್ನೂ ಮಾಡಬಹುದು.

• ನಮ್ಮ ವಿಡಿಯೋಗಳಲ್ಲಿ ಯಾವುದಾದರೊಂದನ್ನು ನೋಡಿ, ಚರ್ಚಿಸಿ.

• ಎಚ್ಚರ! ಪತ್ರಿಕೆಯಿಂದ “ಯುವಜನರ ಪ್ರಶ್ನೆ” ಲೇಖನವನ್ನು ಜೊತೆಯಾಗಿ ಚರ್ಚಿಸಿ.

• ಕಾವಲಿನಬುರುಜು ಪತ್ರಿಕೆಯ “ನಿಮ್ಮ ಮಕ್ಕಳಿಗೆ ಕಲಿಸಿರಿ” ಅಥವಾ “ಯುವಜನರಿಗಾಗಿ” ಲೇಖನವನ್ನು ಜೊತೆಯಾಗಿ ಚರ್ಚಿಸಿ.

• ನಮ್ಮ ಪತ್ರಿಕೆಗಳಿಂದ ಅನುಭವಗಳನ್ನು ಇಲ್ಲವೆ ಕಳೆದ ಜಿಲ್ಲಾ ಅಧಿವೇಶನದಲ್ಲಿ ಬಿಡುಗಡೆಯಾದ ಪ್ರಕಾಶನದ ಒಂದು ಭಾಗವನ್ನು ಓದಿ ಚರ್ಚಿಸಿ.

• ಅಧಿವೇಶನ ಇಲ್ಲವೆ ಸಮ್ಮೇಳನಕ್ಕೆ ಹಾಜರಾಗಿ ಬಂದ ನಂತರ ಮುಖ್ಯಾಂಶಗಳನ್ನು ಚರ್ಚಿಸಿರಿ.

• ಯೆಹೋವನ ಸೃಷ್ಟಿಕಾರ್ಯಗಳನ್ನು ನೇರವಾಗಿ ಗಮನಿಸಿ, ಅದು ಯೆಹೋವನ ಬಗ್ಗೆ ನಮಗೇನನ್ನು ಕಲಿಸುತ್ತದೆಂದು ಚರ್ಚಿಸಿರಿ.

• ಒಂದು ಪ್ರತಿಕೃತಿಯನ್ನೊ, ಭೂಪಟವನ್ನೋ, ನಕ್ಷೆಯನ್ನೋ ಒಟ್ಟಾಗಿ ತಯಾರಿಸುವ ಪ್ರಾಜೆಕ್ಟ್‌ ಅನ್ನು ಕೈಗೆತ್ತಿಕೊಳ್ಳಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ