ಸಾಧ್ಯವಾದದ್ದೆಲ್ಲವನ್ನು ಯೆಹೋವನಿಂದ ಕಲಿಯುತ್ತಿದ್ದೀರೊ?
1. ಶಿಕ್ಷಣದ ವಿಷಯದಲ್ಲಿ ಯೆಹೋವನ ಅನಿಸಿಕೆಯೇನು?
1 ನಾವು ಕಲಿಯಬೇಕೆಂಬುದೇ ನಮ್ಮ ಮಹೋನ್ನತ “ಬೋಧಕ”ನಾದ ಯೆಹೋವನ ಅಪೇಕ್ಷೆ. (ಯೆಶಾ. 30:20) ಆತನು ಕಲಿಸಲಾರಂಭಿಸಿದ್ದು ತನ್ನ ಜ್ಯೇಷ್ಠಪುತ್ರನನ್ನು ಸೃಷ್ಟಿಸಿದ ಬಳಿಕವೇ. (ಯೋಹಾ. 8:28) ಆದಾಮನ ದಂಗೆಯ ನಂತರವೂ ಯೆಹೋವನು ತನ್ನ ಕಲಿಸುವಿಕೆಯನ್ನು ನಿಲ್ಲಿಸಲಿಲ್ಲ. ಅಪರಿಪೂರ್ಣ ಮಾನವರಿಗೆ ಪ್ರೀತಿಪೂರ್ವಕ ಶಿಕ್ಷಣವನ್ನು ಆತನು ನೀಡುತ್ತಾ ಬಂದನು.—ಯೆಶಾ. 48:17, 18; 2 ತಿಮೊ. 3:14, 15.
2. ಯಾವ ಶೈಕ್ಷಣಿಕ ಕಾರ್ಯಾಚರಣೆ ಇಂದು ನಡಿಯುತ್ತಾ ಇದೆ?
2 ಇತಿಹಾಸದಲ್ಲೇ ಅತಿ ಮಹತ್ತಾದ ಶೈಕ್ಷಣಿಕ ಕಾರ್ಯಾಚರಣೆಯನ್ನು ಇಂದು ಯೆಹೋವನು ನಿರ್ದೇಶಿಸುತ್ತಿದ್ದಾನೆ. ಯೆಶಾಯನು ಪ್ರವಾದಿಸಿದಂತೆ ಭೂಸುತ್ತಲೂ ಲಕ್ಷಾಂತರ ಮಂದಿ ಸಾಂಕೇತಿಕವಾದ ‘ಯೆಹೋವನ ಮಂದಿರದ ಬೆಟ್ಟಕ್ಕೆ’ ಪ್ರವಾಹಗಳಂತೆ ಹರಿದು ಬರುತ್ತಿದ್ದಾರೆ. (ಯೆಶಾ. 2:2) ಅವರು ಅಲ್ಲಿಗೆ ಬರುತ್ತಿರುವುದೇಕೆ? ದೇವರ ಮಾರ್ಗಗಳ ವಿಷಯವಾಗಿ ಕಲಿಯಲಿಕ್ಕಾಗಿ; ಹೌದು, ಯೆಹೋವನಿಂದ ಬೋಧಿಸಲ್ಪಡಲಿಕ್ಕಾಗಿ! (ಯೆಶಾ. 2:3) 2010ರ ಸೇವಾ ವರ್ಷದಲ್ಲಿ ಯೆಹೋವನ ಸಾಕ್ಷಿಗಳು ಬೈಬಲ್ ಸತ್ಯವನ್ನು ಜನರಿಗೆ ಬೋಧಿಸುವುದರಲ್ಲಿ ಮತ್ತು ಸಾಕ್ಷಿನೀಡುವುದರಲ್ಲಿ 1.6 ಶತಕೋಟಿಗಿಂತಲೂ ಹೆಚ್ಚು ತಾಸುಗಳನ್ನು ಕಳೆದರು. ಅದಲ್ಲದೆ ಭೂಮ್ಯಾದ್ಯಂತ ಇರುವ 1,05,000ಕ್ಕೂ ಮಿಕ್ಕಿದ ಸಭೆಗಳಲ್ಲಿ ಪ್ರತಿವಾರ ಆಧ್ಯಾತ್ಮಿಕ ಶಿಕ್ಷಣವು ನೀಡಲ್ಪಡುತ್ತಾ ಇದೆ. ಅಷ್ಟುಮಾತ್ರವಲ್ಲ, ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ವರ್ಗವು 500ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಶೈಕ್ಷಣಿಕ ಕ್ರೈಸ್ತ ಪ್ರಕಾಶನಗಳನ್ನು ಉತ್ಪಾದಿಸುತ್ತಿದೆ.
3. ಯೆಹೋವನು ಒದಗಿಸುವ ಶಿಕ್ಷಣದಿಂದ ನೀವು ವೈಯಕ್ತಿಕವಾಗಿ ಹೇಗೆ ಪ್ರಯೋಜನ ಪಡೆದಿದ್ದೀರಿ?
3 ಪೂರ್ಣ ಪ್ರಯೋಜನ ಪಡೆಯಿರಿ: ದೈವಿಕ ಶಿಕ್ಷಣದಿಂದ ನಾವೆಷ್ಟು ಪ್ರಯೋಜನ ಹೊಂದಿದ್ದೇವೆ! ದೇವರಿಗೊಂದು ಹೆಸರಿದೆಯೆಂದೂ ಆತನು ನಮ್ಮ ಕಾಳಜಿ ವಹಿಸುತ್ತಾನೆಂದೂ ನಾವು ಕಲಿತಿದ್ದೇವೆ. (ಕೀರ್ತ. 83:18; 1 ಪೇತ್ರ 5:6, 7) ‘ಜನರು ಕಷ್ಟಾನುಭವಿಸುವುದು, ಸಾಯುವುದು ಏಕೆ? ನಿಜ ಸಂತೋಷವನ್ನು ಹೇಗೆ ಕಂಡುಕೊಳ್ಳಬಲ್ಲೆ? ಜೀವನದ ಉದ್ದೇಶವೇನು?’ ಮುಂತಾದ ಜೀವನದ ಕೆಲವು ಅತಿ ಮಹತ್ವದ ಪ್ರಶ್ನೆಗಳಿಗೆ ಉತ್ತರಗಳನ್ನೂ ಕಲಿತಿದ್ದೇವೆ. ಅಲ್ಲದೆ, ‘ನಮ್ಮ ಮಾರ್ಗದಲ್ಲೆಲ್ಲಾ ಸಫಲರಾಗುವಂತೆ’ ಯೆಹೋವನು ನಮಗೆ ನೈತಿಕ ಮಾರ್ಗದರ್ಶನವನ್ನೂ ಕೊಟ್ಟಿದ್ದಾನೆ.—ಯೆಹೋ. 1:8.
4. ದೇವರ ಸೇವಕರಿಗೆ ಲಭ್ಯವಿರುವ ಕೆಲವು ಶೈಕ್ಷಣಿಕ ಅವಕಾಶಗಳು ಯಾವುವು? ಸಾಧ್ಯವಾದದ್ದೆಲ್ಲವನ್ನು ನಾವು ಯೆಹೋವನಿಂದ ಕಲಿಯಬೇಕು ಏಕೆ?
4 ಅದಲ್ಲದೆ, ತನ್ನ ಹಲವಾರು ಸೇವಕರು ತಮ್ಮ ಸೇವೆಯನ್ನು ವಿಸ್ತರಿಸಲು ಸಹಾಯಕ್ಕಾಗಿ ವಿಶೇಷ ಶಿಕ್ಷಣವನ್ನು ಯೆಹೋವನು ಲಭ್ಯಗೊಳಿಸುತ್ತಾನೆ. ಕೆಲವರಿಗೆ ಲಭ್ಯವಿರುವ ಅವಕಾಶಗಳ ಪಟ್ಟಿ ಪುಟ 4-6ರಲ್ಲಿದೆ. ಪಟ್ಟಿಮಾಡಲಾದ ತರಬೇತಿಯನ್ನು ಪಡೆಯಲು ಒಂದುವೇಳೆ ನಮ್ಮ ಪರಿಸ್ಥಿತಿಗಳು ತಡೆದರೂ ಈವಾಗಲೇ ದೊರೆಯುತ್ತಿರುವ ದೈವಿಕ ಶಿಕ್ಷಣದ ಪೂರ್ಣ ಪ್ರಯೋಜನ ಪಡೆಯುತ್ತಿದ್ದೇವೊ? ಲೋಕದ ಉನ್ನತ ಶಿಕ್ಷಣವನ್ನು ಬೆನ್ನಟ್ಟಲು ಶಾಲಾ ಅಧ್ಯಾಪಕರಿಂದ ಮತ್ತು ಇತರರಿಂದ ಪ್ರೇರಿಸಲ್ಪಡುವ ನಮ್ಮ ಯುವಜನರಿಗೆ ಆಧ್ಯಾತ್ಮಿಕ ಗುರಿಗಳನ್ನಿಡಲು ಉತ್ತೇಜನ ಕೊಡುತ್ತೇವೊ? ಅತ್ಯುತ್ಕೃಷ್ಟ ಶಿಕ್ಷಣವಾದ ದೈವಿಕ ಶಿಕ್ಷಣವನ್ನು ಗುರಿಯಾಗಿ ಇಡುವಂತೆ ಪ್ರೋತ್ಸಾಹಿಸುತ್ತೇವೋ? ಸಾಧ್ಯವಾದದ್ದೆಲ್ಲವನ್ನು ಯೆಹೋವನಿಂದ ಕಲಿಯುವುದರಿಂದ, ಈಗಲೂ ಸಂತೋಷದ ಜೀವನವನ್ನು ಹಾಗೂ ಅನಂತಕಾಲದ ಭವಿಷ್ಯವನ್ನು ಆನಂದಿಸಲು ನಮಗೆ ಸಹಾಯವಾಗುವುದು.—ಕೀರ್ತ. 119:105; ಯೋಹಾ. 17:3.
ಯೆಹೋವನ ಸಂಘಟನೆಯಿಂದ ಲಭ್ಯವಿರುವ ಕೆಲವು ಶೈಕ್ಷಣಿಕ ಅವಕಾಶಗಳು
ಅಕ್ಷರಜ್ಞಾನ ಕ್ಲಾಸುಗಳು
• ಉದ್ದೇಶ: ಜನರಿಗೆ ಓದುಬರಹ ಕಲಿಸುವುದು. ಇದರಿಂದ ಅವರು ತಮ್ಮ ವೈಯಕ್ತಿಕ ಬೈಬಲ್ ಅಧ್ಯಯನ ಮಾಡಲು ಮತ್ತು ಇತರರಿಗೆ ಸತ್ಯ ಕಲಿಸಲು ಸಾಧ್ಯವಾಗುವುದು.
• ಅವಧಿ: ಅಗತ್ಯಕ್ಕನುಸಾರ.
• ಸ್ಥಳ: ಸ್ಥಳೀಯ ರಾಜ್ಯ ಸಭಾಗೃಹ.
• ಯಾರೆಲ್ಲ ಹಾಜರಾಗಬಹುದು?: ಎಲ್ಲ ಪ್ರಚಾರಕರು ಮತ್ತು ಆಸಕ್ತ ಜನರು.
• ಅರ್ಜಿಹಾಕುವುದು ಹೇಗೆ?: ಸಭಾ ಹಿರಿಯರು ಸ್ಥಳೀಯ ಅಗತ್ಯಕ್ಕನುಸಾರ ಅಕ್ಷರಜ್ಞಾನ ಕ್ಲಾಸುಗಳನ್ನು ಸಂಘಟಿಸುತ್ತಾರೆ. ಪ್ರಯೋಜನ ಪಡೆಯಬಲ್ಲ ಎಲ್ಲರು ಹಾಜರಾಗುವಂತೆ ಉತ್ತೇಜನ ಕೊಡುತ್ತಾರೆ.
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ
• ಉದ್ದೇಶ: ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಸಾರಲು ಮತ್ತು ಕಲಿಸಲು ಪ್ರಚಾರಕರಿಗೆ ತರಬೇತಿ ಕೊಡುವುದು.
• ಅವಧಿ: ನಿರಂತರ.
• ಸ್ಥಳ: ಸ್ಥಳೀಯ ರಾಜ್ಯ ಸಭಾಗೃಹ.
• ಯಾರೆಲ್ಲ ದಾಖಲಾಗಬಹುದು?: ಎಲ್ಲ ಪ್ರಚಾರಕರು. ಸಭೆಯೊಂದಿಗೆ ಸಕ್ರಿಯ ಸಹವಾಸ ಮಾಡುವವರು ಸಹ. ಇವರು ಬೈಬಲಿನ ಬೋಧನೆಗಳನ್ನು ಒಪ್ಪಿಕೊಂಡು ಕ್ರೈಸ್ತ ಮೂಲತತ್ವಗಳಿಗೆ ಹೊಂದಿಕೆಯಲ್ಲಿ ಜೀವಿಸುವವರಾಗಿರಬೇಕು.
• ಅರ್ಜಿಹಾಕುವುದು ಹೇಗೆ?: ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೇಲ್ವಿಚಾರಕರೊಂದಿಗೆ ಮಾತಾಡಿ.
ಪರಭಾಷಾ ಕ್ಲಾಸುಗಳು
• ಉದ್ದೇಶ: ಇನ್ನೊಂದು ಭಾಷೆಯಲ್ಲಿ ಸುವಾರ್ತೆ ಸಾರುವುದು ಹೇಗೆಂದು ಪ್ರಚಾರಕರಿಗೆ ಕಲಿಸುವುದು.
• ಅವಧಿ: ನಾಲ್ಕು ಅಥವಾ ಐದು ತಿಂಗಳು. ಈ ಕ್ಲಾಸುಗಳು ಸಾಮಾನ್ಯವಾಗಿ ಶನಿವಾರ ಬೆಳಿಗ್ಗೆ ಒಂದೆರಡು ತಾಸುಗಳ ತನಕ ನಡೆಯುತ್ತವೆ.
• ಸ್ಧಳ: ಸಾಮಾನ್ಯವಾಗಿ ಸಮೀಪದ ರಾಜ್ಯ ಸಭಾಗೃಹದಲ್ಲಿ.
• ಯಾರೆಲ್ಲ ದಾಖಲಾಗಬಹುದು?: ಪರ-ಭಾಷೆಯಲ್ಲಿ ಸುವಾರ್ತೆ ಸಾರಲು ಬಯಸುವ, ಸಭೆಯಲ್ಲಿ ಒಳ್ಳೇ ನಿಲುವಿರುವ ಪ್ರಚಾರಕರು.
• ಅರ್ಜಿಹಾಕುವುದು ಹೇಗೆ?: ಈ ಕ್ಲಾಸುಗಳನ್ನು ಬ್ರಾಂಚ್ ಆಫೀಸು ಅಗತ್ಯಕ್ಕನುಸಾರ ಏರ್ಪಡಿಸುತ್ತದೆ.
ರಾಜ್ಯ ಸಭಾಗೃಹ ನಿರ್ಮಾಣ
• ಉದ್ದೇಶ: ರಾಜ್ಯ ಸಭಾಗೃಹಗಳನ್ನು ಕಟ್ಟುವುದು ಮತ್ತು ನವೀಕರಿಸುವುದು. ಇದೊಂದು ಶಾಲೆ ಅಲ್ಲ ಆದರೆ ಸ್ವಯಂಸೇವಕರಿಗೆ ನಿರ್ಮಾಣ ಕೆಲಸ ಮಾಡಲು ಬೇಕಾದ ವಿವಿಧ ಕೌಶಲಗಳನ್ನು ಈ ಏರ್ಪಾಡಿನ ಮೂಲಕ ಕಲಿಸಲಾಗುತ್ತದೆ.
• ಅವಧಿ: ಸ್ವಯಂಸೇವಕನ ಪರಿಸ್ಥಿತಿಗನುಸಾರ.
• ಸ್ಥಳ: ರೀಜನಲ್ ಬಿಲ್ಡಿಂಗ್ ಕಮಿಟಿಯಿಂದ ನೇಮಿತವಾದ ಪ್ರದೇಶದೊಳಗೆ ಎಲ್ಲಿಯಾದರೂ. ವಿಪತ್ತಿನಿಂದ ಬಾಧಿತವಾದ ದೂರದ ಸ್ಥಳವೊಂದಕ್ಕೆ ಹೋಗಿ ಪರಿಹಾರ ಕೆಲಸಕ್ಕೆ ನೆರವಾಗಲು ಕೆಲವು ಸ್ವಯಂಸೇವಕರು ಆಮಂತ್ರಿಸಲ್ಪಡಬಹುದು.
• ಅರ್ಹತೆಗಳು: ಸಹೋದರ ಸಹೋದರಿಯರು ದೀಕ್ಷಾಸ್ನಾನ ಪಡೆದವರಾಗಿರಬೇಕು ಮತ್ತು ಹಿರಿಯರ ಮಂಡಲಿಯ ಒಪ್ಪಿಗೆ ಪಡೆದವರಾಗಿರಬೇಕು. ಅವರು ವಿಶೇಷ ಕೌಶಲವುಳ್ಳವರು ಇಲ್ಲವೆ ವಿಶೇಷ ಕೌಶಲವಿಲ್ಲದವರು ಆಗಿರಬಹುದು.
• ಅರ್ಜಿಹಾಕುವುದು ಹೇಗೆ?: ಸ್ಥಳೀಯ ಹಿರಿಯರಿಂದ ಸಿಗುವ ಕಿಂಗ್ಡಮ್ ಹಾಲ್ ವಾಲಂಟಿಯರ್ ವರ್ಕರ್ ಕ್ವೆಶ್ಚನೆರ್ (ಎಸ್-82) ಫಾರ್ಮನ್ನು ತುಂಬಿಸಿರಿ.
ಪಯನೀಯರ್ ಸೇವಾ ಶಾಲೆ
• ಉದ್ದೇಶ: ‘ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಲು’ ಪಯನೀಯರರಿಗೆ ಸಹಾಯಮಾಡುವುದು.—2 ತಿಮೊ. 4:5.
• ಅವಧಿ: ಎರಡು ವಾರ.
• ಸ್ಥಳ: ಬ್ರಾಂಚ್ ಆಫೀಸು ನಿರ್ಣಯಿಸುತ್ತದೆ; ಸಾಮಾನ್ಯವಾಗಿ ಸಮೀಪದ ರಾಜ್ಯ ಸಭಾಗೃಹದಲ್ಲಿ.
• ಅರ್ಹತೆಗಳು: ಕಡಿಮೆಪಕ್ಷ ಒಂದು ವರ್ಷದಿಂದ ರೆಗ್ಯುಲರ್ ಪಯನೀಯರ್ ಆಗಿರುವವರು.
• ದಾಖಲಾಗುವುದು ಹೇಗೆ?: ಅರ್ಹ ಪಯನೀಯರರ ಹೆಸರನ್ನು ಸೇರಿಸಲಾಗುತ್ತದೆ ಮತ್ತು ಅವರ ಸರ್ಕಿಟ್ ಮೇಲ್ವಿಚಾರಕರು ಅವರಿಗದನ್ನು ತಿಳಿಸುತ್ತಾರೆ.
ಬೆತೆಲಿನ ಹೊಸ ಸದಸ್ಯರಿಗಾಗಿ ಶಾಲೆ
• ಉದ್ದೇಶ: ಹೊಸದಾಗಿ ಬೆತೆಲ್ ಸೇರಿದವರು ತಮ್ಮ ಈ ಸೇವೆಯಲ್ಲಿ ಯಶಸ್ವಿಗಳಾಗುವಂತೆ ಸಹಾಯ ಮಾಡಲು ಈ ಶಾಲೆಯನ್ನು ರಚಿಸಲಾಗಿದೆ.
• ಅವಧಿ: ವಾರಕ್ಕೆ ಒಂದು ತಾಸು, ಹದಿನಾರು ವಾರಗಳ ತನಕ.
• ಸ್ಥಳ: ಬೆತೆಲಿನಲ್ಲಿ.
• ಅರ್ಹತೆಗಳು: ಬೆತೆಲ್ ಕುಟುಂಬದ ಖಾಯಂ ಸದಸ್ಯರು ಇಲ್ಲವೇ ದೀರ್ಘಾವಧಿಯ (1 ವರ್ಷ ಅಥವಾ ಹೆಚ್ಚು ಸಮಯದ) ತಾತ್ಕಾಲಿಕ ಸ್ವಯಂಸೇವಕರು ಆಗಿರಬೇಕು.
• ದಾಖಲಾಗುವುದು ಹೇಗೆ?: ಬೆತೆಲ್ ಕುಟುಂಬದ ಅರ್ಹ ಸದಸ್ಯರ ಹೆಸರನ್ನು ಸೇರಿಸಲಾಗುತ್ತದೆ.
ರಾಜ್ಯ ಶುಶ್ರೂಷಾ ಶಾಲೆ
• ಉದ್ದೇಶ: ಹಿರಿಯರು ಮತ್ತು ಶುಶ್ರೂಷಾ ಸೇವಕರು ಮೇಲ್ವಿಚಾರಣೆ ಮತ್ತು ಸಂಘಟನಾ ಜವಾಬ್ದಾರಿಗಳನ್ನು ನೋಡಿಕೊಳ್ಳಲಿಕ್ಕಾಗುವಂತೆ ತರಬೇತು ಕೊಡುವುದೇ. (ಅ.ಕಾ. 20:28) ಈ ಶಾಲೆ ಆಡಳಿತ ಮಂಡಲಿಯ ನಿರ್ಣಯಕ್ಕನುಸಾರ ಕೆಲವು ವರ್ಷಗಳಿಗೊಮ್ಮೆ ನಡಿಸಲ್ಪಡುತ್ತದೆ.
• ಅವಧಿ: ಇತ್ತೀಚಿನ ವರ್ಷಗಳಲ್ಲಿ ಹಿರಿಯರಿಗೆ ಒಂದೂವರೆ ದಿನ ಮತ್ತು ಶುಶ್ರೂಷಾ ಸೇವಕರಿಗೆ ಒಂದು ದಿನ.
• ಸ್ಥಳ: ಸಾಮಾನ್ಯವಾಗಿ ಸಮೀಪದ ರಾಜ್ಯ ಸಭಾಗೃಹ ಅಥವಾ ಸಮ್ಮೇಳನ ಸಭಾಗೃಹದಲ್ಲಿ.
• ಅರ್ಹತೆಗಳು: ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಿರಬೇಕು.
• ದಾಖಲಾಗುವುದು ಹೇಗೆ?: ಅರ್ಹ ಹಿರಿಯರು ಮತ್ತು ಶುಶ್ರೂಷಾ ಸೇವಕರನ್ನು ಸರ್ಕಿಟ್ ಮೇಲ್ವಿಚಾರಕರು ಆಮಂತ್ರಿಸುತ್ತಾರೆ.
ಸಭಾ ಹಿರಿಯರಿಗಾಗಿ ಶಾಲೆa
• ಉದ್ದೇಶ: ಹಿರಿಯರಿಗೆ ಸಭೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಸಹಾಯಮಾಡುವುದು.
• ಅವಧಿ: ಐದು ದಿನ.
• ಸ್ಥಳ: ಬ್ರಾಂಚ್ ಆಫೀಸು ನಿರ್ಣಯಿಸುತ್ತದೆ; ಸಾಮಾನ್ಯವಾಗಿ ಸಮೀಪದ ರಾಜ್ಯ ಸಭಾಗೃಹ ಅಥವಾ ಸಮ್ಮೇಳನ ಸಭಾಗೃಹದಲ್ಲಿ.
• ಅರ್ಹತೆಗಳು: ಹಿರಿಯರಾಗಿರಬೇಕು.
• ದಾಖಲಾಗುವುದು ಹೇಗೆ?: ಅರ್ಹ ಹಿರಿಯರನ್ನು ಬ್ರಾಂಚ್ ಆಫೀಸು ಆಮಂತ್ರಿಸುತ್ತದೆ.
ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರಿಗಾಗಿ ಶಾಲೆb
• ಉದ್ದೇಶ: ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರು ಸಭೆಗಳ ಸೇವೆ ಮಾಡುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಲು ಮತ್ತು ‘ಮಾತಾಡುವುದರಲ್ಲಿಯೂ ಬೋಧಿಸುವುದರಲ್ಲಿಯೂ ಶ್ರಮಪಟ್ಟು ಕೆಲಸಮಾಡಲು’ ಹಾಗೂ ತಮ್ಮ ವಶದಲ್ಲಿರುವವರನ್ನು ಪರಿಪಾಲಿಸುವಂತೆ ಶಕ್ತಗೊಳಿಸುವುದೇ.—1 ತಿಮೊ. 5:17; 1 ಪೇತ್ರ 5:2, 3.
• ಅವಧಿ: ಎರಡು ತಿಂಗಳು.
• ಸ್ಥಳ: ಬ್ರಾಂಚ್ ಆಫೀಸು ನಿರ್ಣಯಿಸುತ್ತದೆ.
• ಅರ್ಹತೆಗಳು: ಸರ್ಕಿಟ್ ಅಥವಾ ಡಿಸ್ಟ್ರಿಕ್ಟ್ ಮೇಲ್ವಿಚಾರಕರಾಗಿರಬೇಕು.
• ದಾಖಲಾಗುವುದು ಹೇಗೆ?: ಅರ್ಹ ಸಂಚರಣ ಮೇಲ್ವಿಚಾರಕರನ್ನೂ ಅವರ ಪತ್ನಿಯರನ್ನೂ ಬ್ರಾಂಚ್ ಆಫೀಸು ಆಮಂತ್ರಿಸುತ್ತದೆ.
ಅವಿವಾಹಿತ ಸಹೋದರರಿಗಾಗಿ ಬೈಬಲ್ ಶಾಲೆc
• ಉದ್ದೇಶ: ಅವಿವಾಹಿತ ಹಿರಿಯರನ್ನು ಮತ್ತು ಶುಶ್ರೂಷಾ ಸೇವಕರನ್ನು ಅಧಿಕ ಜವಾಬ್ದಾರಿಗಳಿಗಾಗಿ ತಯಾರಿಸುವುದು. ಹೆಚ್ಚಿನ ಪದವೀಧರರನ್ನು ಅವರ ಸ್ವದೇಶದಲ್ಲೇ ಅಗತ್ಯವಿರುವಲ್ಲಿಗೆ ನೇಮಿಸಲಾಗುವುದು. ತಾವು ಇನ್ನೊಂದು ದೇಶಕ್ಕೂ ಹೋಗಿ ಸೇವೆಮಾಡಬಲ್ಲೆವು ಎಂದು ಬ್ರಾಂಚ್ ಆಫೀಸಿಗೆ ತಿಳಿಸುವವರಲ್ಲಿ ಕೆಲವರಿಗೆ ಇನ್ನೊಂದು ದೇಶಕ್ಕೆ ನೇಮಕ ಸಿಗಲೂಬಹುದು.
• ಅವಧಿ: ಎರಡು ತಿಂಗಳು.
• ಸ್ಥಳ: ಬ್ರಾಂಚ್ ಆಫೀಸು ನಿರ್ಣಯಿಸುತ್ತದೆ; ಸಾಮಾನ್ಯವಾಗಿ ಸಮ್ಮೇಳನ ಸಭಾಗೃಹ ಇಲ್ಲವೆ ರಾಜ್ಯ ಸಭಾಗೃಹದಲ್ಲಿ.
• ಅರ್ಹತೆಗಳು: 23-62 ವರ್ಷಗಳ ನಡುವಣ ವಯಸ್ಸಿನ ಅವಿವಾಹಿತ ಸಹೋದರರು. ಇವರು ಆರೋಗ್ಯವಂತರೂ, ಎಲ್ಲಿ ಅಗತ್ಯವಿದೆಯೋ ಅಲ್ಲಿ ಹೋಗಿ ಸಹೋದರರ ಸೇವೆ ಹಾಗೂ ಸಾರುವ ಕೆಲಸ ಮಾಡಲು ಮನಸ್ಸುಳ್ಳವರೂ ಆಗಿರಬೇಕು. (ಮಾರ್ಕ 10:29, 30) ಇವರು ಕಡಿಮೆಪಕ್ಷ ಎರಡು ವರ್ಷ ನಿರಂತರ ಶುಶ್ರೂಷಾ ಸೇವಕರು ಇಲ್ಲವೆ ಹಿರಿಯರಾಗಿ ಸೇವೆಮಾಡಿದವರಾಗಿರಬೇಕು.
• ಅರ್ಜಿಹಾಕುವುದು ಹೇಗೆ?: ಈ ಶಾಲೆ ನಿಮ್ಮ ಬ್ರಾಂಚ್ ಟೆರಿಟೊರಿಯಲ್ಲಿ ನಡೆಯುತ್ತಿರುವಲ್ಲಿ, ದಾಖಲಾಗಲು ಇಷ್ಟವುಳ್ಳವರಿಗಾಗಿ ಸರ್ಕಿಟ್ ಸಮ್ಮೇಳನದಲ್ಲಿ ಒಂದು ಕೂಟವಿರುವುದು. ಈ ಕೂಟದಲ್ಲಿ ಅಧಿಕ ಮಾಹಿತಿಯನ್ನು ಕೊಡಲಾಗುವುದು.
ಕ್ರೈಸ್ತ ದಂಪತಿಗಳಿಗಾಗಿ ಬೈಬಲ್ ಶಾಲೆd
• ಉದ್ದೇಶ: ಯೆಹೋವನಿಂದ ಮತ್ತು ಆತನ ಸಂಘಟನೆಯಿಂದ ಹೆಚ್ಚು ಪೂರ್ಣವಾಗಿ ಬಳಸಲ್ಪಡುವಂತೆ ದಂಪತಿಗಳಿಗೆ ವಿಶೇಷ ತರಬೇತಿ ನೀಡುವುದೇ. ಹೆಚ್ಚಿನ ಪದವೀಧರರನ್ನು ಸ್ವದೇಶದಲ್ಲೇ ಅಗತ್ಯವಿರುವ ಸ್ಥಳಗಳಿಗೆ ನೇಮಿಸಲಾಗುವುದು. ಇನ್ನೊಂದು ದೇಶಕ್ಕೂ ಹೋಗಿ ಸೇವೆಮಾಡಬಲ್ಲೆವು ಎಂದು ಬ್ರಾಂಚ್ ಆಫೀಸಿಗೆ ತಿಳಿಸುವವರಲ್ಲಿ ಕೆಲವರಿಗೆ ಇನ್ನೊಂದು ದೇಶಕ್ಕೆ ನೇಮಕ ಸಿಗಲೂಬಹುದು.
• ಅವಧಿ: ಎರಡು ತಿಂಗಳು.
• ಸ್ಥಳ: ಮೊದಲ ಕೆಲವು ಕ್ಲಾಸುಗಳು ಸದ್ಯಕ್ಕೆ ಅಮೆರಿಕದ ನ್ಯೂಯಾರ್ಕ್ ಪ್ಯಾಟರ್ಸನ್ನಲ್ಲಿರುವ ವಾಚ್ಟವರ್ ಎಜ್ಯುಕೇಷನಲ್ ಸೆಂಟರ್ನಲ್ಲಿ ನಡಿಯುತ್ತಿವೆ. ಮುಂದೆ ಈ ಶಾಲೆಯನ್ನು ಬ್ರಾಂಚ್ ಆಫೀಸು ನಿರ್ಣಯಿಸುವ ಸ್ಥಳಗಳಲ್ಲಿ ಸಾಮಾನ್ಯವಾಗಿ ಒಂದು ಸಮ್ಮೇಳನ ಸಭಾಗೃಹ ಅಥವಾ ರಾಜ್ಯ ಸಭಾಗೃಹದಲ್ಲಿ ನಡಿಸಲಾಗುವದು.
• ಅರ್ಹತೆಗಳು: 25-50ರ ನಡುವಣ ವಯಸ್ಸಿನ ಆರೋಗ್ಯವಂತ ದಂಪತಿಗಳು. ಇವರು ಎಲ್ಲಿ ಅಗತ್ಯವಿದೆಯೋ ಅಲ್ಲಿ ಹೋಗಿ ಸೇವೆಮಾಡುವ ಪರಿಸ್ಥಿತಿಗಳುಳ್ಳವರಾಗಿರಬೇಕು ಮತ್ತು “ಇಗೋ ನಾನಿದ್ದೇನೆ, ನನ್ನನ್ನು ಕಳುಹಿಸು” ಎಂಬ ಮನೋಭಾವದವರಾಗಿರಬೇಕು. (ಯೆಶಾ. 6:8) ಅಲ್ಲದೆ, ಅವರ ಮದುವೆಯಾಗಿ ಕಡಿಮೆಯೆಂದರೆ ಎರಡು ವರ್ಷಗಳಾಗಿರಬೇಕು ಮತ್ತು ಸದ್ಯ ಕಡಿಮೆಪಕ್ಷ ಎರಡು ವರ್ಷಗಳಿಂದ ನಿರಂತರ ಪೂರ್ಣಸಮಯದ ಸೇವೆಯಲ್ಲಿದ್ದವರಾಗಿರಬೇಕು.
• ಅರ್ಜಿಹಾಕುವುದು ಹೇಗೆ?: ಈ ಶಾಲೆ ನಿಮ್ಮ ಬ್ರಾಂಚ್ ಟೆರಿಟೊರಿಯಲ್ಲಿ ನಡೆಯುವಲ್ಲಿ, ದಾಖಲಾಗಲು ಇಷ್ಟವಿರುವವರಿಗಾಗಿ ವಿಶೇಷ ಸಮ್ಮೇಳನ ದಿನದಲ್ಲಿ ಒಂದು ಕೂಟವಿರುವುದು. ಈ ಕೂಟದಲ್ಲಿ ಅಧಿಕ ಮಾಹಿತಿಯನ್ನು ನೀಡಲಾಗುವುದು.
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್
• ಉದ್ದೇಶ: ಪಯನೀಯರರಿಗೂ ಇತರ ಪೂರ್ಣಸಮಯದ ಸೇವಕರಿಗೂ ಮಿಷನೆರಿ ಸೇವೆಗಾಗಿ ತರಬೇತಿ ಕೊಡುವುದು.
• ಅವಧಿ: ಐದು ತಿಂಗಳು.
• ಸ್ಥಳ: ವಾಚ್ಟವರ್ ಎಜ್ಯುಕೇಷನಲ್ ಸೆಂಟರ್, ಪ್ಯಾಟರ್ಸನ್, ನ್ಯೂಯಾರ್ಕ್ ಯು.ಎಸ್.ಎ.
• ಅರ್ಹತೆಗಳು: ದೀಕ್ಷಾಸ್ನಾನವಾಗಿ ಮೂರು ವರ್ಷಗಳಾಗಿರುವ ದಂಪತಿ. ತಮ್ಮ ಮೊದಲ ಅರ್ಜಿ ನೀಡುವಾಗ 21-38 ವರ್ಷಗಳ ನಡುವಣ ವಯಸ್ಸಿನವರಾಗಿರಬೇಕು. ಅವರಿಗೆ ಇಂಗ್ಲಿಷ್ ಮಾತಾಡಲು ಗೊತ್ತಿರಬೇಕು. ಅವರಿಗೆ ಮದುವೆಯಾಗಿ ಕಡಿಮೆಪಕ್ಷ ಎರಡು ವರ್ಷವಾಗಿರಬೇಕು. ಸದ್ಯ ಕಡಿಮೆಪಕ್ಷ ಎರಡು ವರ್ಷಗಳಿಂದ ನಿರಂತರ ಪೂರ್ಣಸಮಯ ಸೇವೆಯಲ್ಲಿರಬೇಕು. ಅರ್ಜಿದಾರರು ಆರೋಗ್ಯವಂತರಾಗಿರಬೇಕು. ಪರದೇಶದಲ್ಲಿ ಸೇವೆಮಾಡುತ್ತಿರುವ ಪಯನೀಯರರು (ಮಿಷನೆರಿ ಸ್ಥಾನದಲ್ಲಿರುವವರು ಸಹ); ಸಂಚರಣ ಮೇಲ್ವಿಚಾರಕರು; ಬೆತೆಲ್ ಕುಟುಂಬ ಸದಸ್ಯರು; ಶುಶ್ರೂಷಾ ತರಬೇತಿ ಶಾಲೆ, ಅವಿವಾಹಿತ ಸಹೋದರರಿಗಾಗಿ ಬೈಬಲ್ ಶಾಲೆ, ಕ್ರೈಸ್ತ ದಂಪತಿಗಳಿಗಾಗಿ ಬೈಬಲ್ ಶಾಲೆಗೆ ಹೋಗಿರುವವರು ಸಹ ಅರ್ಹತೆಯುಳ್ಳವರಾಗಿದ್ದರೆ ಅರ್ಜಿಹಾಕಬಹುದು.
• ಅರ್ಜಿಹಾಕುವುದು ಹೇಗೆ?: ಆಯ್ದ ಬ್ರಾಂಚುಗಳಲ್ಲಿ, ಈ ಶಾಲೆಗೆ ಹಾಜರಾಗಲು ಇಷ್ಟವುಳ್ಳವರಿಗಾಗಿ ಒಂದು ಕೂಟವನ್ನು ಜಿಲ್ಲಾ ಅಧಿವೇಶನದಲ್ಲಿ ನಡಿಸಲಾಗುತ್ತದೆ. ಈ ಕೂಟದ ಸಮಯದಲ್ಲಿ ಅಧಿಕ ಮಾಹಿತಿಯನ್ನು ಒದಗಿಸಲಾಗುತ್ತದೆ. ನಿಮ್ಮ ದೇಶದ ಅಧಿವೇಶನದಲ್ಲಿ ಈ ಕೂಟ ನಡೆಯದಿದ್ದಲ್ಲಿ ಮತ್ತು ನಿಮಗೆ ಅರ್ಜಿಹಾಕಲು ಮನಸ್ಸಿದ್ದಲ್ಲಿ, ಅಧಿಕ ಮಾಹಿತಿಗಾಗಿ ನಿಮ್ಮ ಬ್ರಾಂಚ್ ಆಫೀಸಿಗೆ ಬರೆಯಿರಿ.
ಬ್ರಾಂಚ್ ಕಮಿಟಿ ಸದಸ್ಯರು ಮತ್ತು ಅವರ ಪತ್ನಿಯರಿಗಾಗಿ ಶಾಲೆ
• ಉದ್ದೇಶ: ಬ್ರಾಂಚ್ ಕಮಿಟಿಗಳಲ್ಲಿ ಸೇವೆಮಾಡುವವರು ಬೆತೆಲ್ ಮನೆಗಳ ಇನ್ನಷ್ಟು ಉತ್ತಮ ಮೇಲ್ವಿಚಾರಣೆಮಾಡಲು, ಸಭೆಗಳಿಗೆ ಸಂಬಂಧಿಸಿದ ಸೇವಾ ವಿಷಯಗಳಿಗೆ ಗಮನಕೊಡಲು, ತಮ್ಮ ಟೆರಿಟೊರಿಗಳಲ್ಲಿರುವ ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ಗಳ ಮೇಲ್ವಿಚಾರಣೆಮಾಡಲು, ಸಾಹಿತ್ಯದ ಭಾಷಾಂತರ, ಮುದ್ರಣ, ಶಿಪ್ಪಿಂಗ್ ಕೆಲಸ ಹಾಗೂ ವಿವಿಧ ಇಲಾಖೆಗಳ ಮೇಲ್ವಿಚಾರಣೆಯ ಕೆಲಸವನ್ನು ಚೆನ್ನಾಗಿ ಮಾಡುವಂತೆ ಸಹಾಯನೀಡುವುದು.—ಲೂಕ 12:48ಬಿ.
• ಅವಧಿ: ಎರಡು ತಿಂಗಳು.
• ಸ್ಥಳ: ವಾಚ್ಟವರ್ ಎಜ್ಯುಕೇಷನಲ್ ಸೆಂಟರ್, ಪ್ಯಾಟರ್ಸನ್, ನ್ಯೂಯಾರ್ಕ್ ಯು.ಎಸ್.ಎ.
• ಅರ್ಹತೆಗಳು: ಬ್ರಾಂಚ್ ಕಮಿಟಿ ಅಥವಾ ಕಂಟ್ರಿ ಕಮಿಟಿಯ ಸದಸ್ಯರು ಅಥವಾ ಅಂಥ ನೇಮಕ ಪಡೆಯಲಿರುವವರು.
• ದಾಖಲಾಗುವುದು ಹೇಗೆ?: ಅರ್ಹ ಸಹೋದರರನ್ನೂ ಅವರ ಪತ್ನಿಯರನ್ನೂ ಆಡಳಿತ ಮಂಡಲಿ ಆಮಂತ್ರಿಸುತ್ತದೆ.
[ಪಾದಟಿಪ್ಪಣಿ]
a ಸದ್ಯ ಈ ಶಾಲೆ ಪ್ರತಿಯೊಂದು ದೇಶದಲ್ಲಿ ನಡೆಯುತ್ತಿಲ್ಲ.
b ಸದ್ಯ ಈ ಶಾಲೆ ಪ್ರತಿಯೊಂದು ದೇಶದಲ್ಲಿ ನಡೆಯುತ್ತಿಲ್ಲ.
c ಸದ್ಯ ಈ ಶಾಲೆ ಪ್ರತಿಯೊಂದು ದೇಶದಲ್ಲಿ ನಡೆಯುತ್ತಿಲ್ಲ.
d ಸದ್ಯ ಈ ಶಾಲೆ ಪ್ರತಿಯೊಂದು ದೇಶದಲ್ಲಿ ನಡೆಯುತ್ತಿಲ್ಲ.