ಕಡಿಮೆ ಬೆಲೆಯ ಎರಡು ನಾಣ್ಯಗಳು
ದೇವರ ರಾಜ್ಯಕ್ಕೆ ಸಂಬಂಧಪಟ್ಟ ಕೆಲಸಕಾರ್ಯಗಳಿಗೆ ನಾವು ಬೆಂಬಲ ಕೊಡುವ ಒಂದು ವಿಧ, ಭೂವ್ಯಾಪಕವಾಗಿ ನಡೆಯುತ್ತಿರುವ ಸಾರುವ ಕೆಲಸಕ್ಕೆ ಧನಸಹಾಯ ನೀಡುವುದೇ. ಆದರೆ ನಾವು ಹಣವಂತರಲ್ಲದಿದ್ದರೆ?
ಬಡ ವಿಧವೆಯೊಬ್ಬಳು ದೇವಾಲಯದ ಕಾಣಿಕೆ ಪೆಟ್ಟಿಗೆಗೆ ಕಡಿಮೆ ಮೌಲ್ಯದ ಎರಡು ನಾಣ್ಯಗಳನ್ನು ಹಾಕುತ್ತಿದ್ದದ್ದನ್ನು ಯೇಸು ಒಮ್ಮೆ ನೋಡಿದನು. ಆಕೆಗೆ ಯೆಹೋವನ ಮೇಲಿದ್ದ ಪ್ರೀತಿಯ ಕಾರಣ “ಬಡತನದಲ್ಲಿಯೂ ತನಗಿದ್ದುದನ್ನೆಲ್ಲ . . . ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು.” (ಮಾರ್ಕ 12:41-44) ಆ ಕಾಣಿಕೆ ದೇವರ ದೃಷ್ಟಿಯಲ್ಲಿ ಬಹುಮೂಲ್ಯವಾಗಿತ್ತು ಎಂಬದಕ್ಕೆ ಯೇಸು ಅದರ ಬಗ್ಗೆ ಮಾತಾಡಿದ್ದೇ ಸಾಕ್ಷಿ. ಹಾಗೆಯೇ ಒಂದನೇ ಶತಕದಲ್ಲಿದ್ದ ಕ್ರೈಸ್ತರು ಕಾಣಿಕೆ ಕೊಡುವುದನ್ನು ತಮಗಿರುವ ಸದವಕಾಶವಾಗಿ ಪರಿಗಣಿಸುತ್ತಿದ್ದರು. ಶ್ರೀಮಂತರಲ್ಲದೆ ಬಡವರು ಕೂಡ ತಮ್ಮಿಂದಾದಷ್ಟನ್ನು ಕೊಡುತ್ತಿದ್ದರು. ಅಪೊಸ್ತಲ ಪೌಲನು ಮಕೆದೋನ್ಯದ ಜನರ ಬಗ್ಗೆ ಉಲ್ಲೇಖಿಸಿದನು. ಅವರು ‘ಕಡುಬಡತನದಲ್ಲಿದ್ದರೂ ದಯೆಯಿಂದ ಕೊಡುವ ಸುಯೋಗಕ್ಕಾಗಿ ಬಹಳವಾಗಿ ಬೇಡಿಕೊಳ್ಳುತ್ತಾ ಇದ್ದರು.’—2 ಕೊರಿಂ. 8:1-4.
ನಾವು ‘ಕಡಿಮೆ ಬೆಲೆಯ ಎರಡು ನಾಣ್ಯಗಳನ್ನು’ ಮಾತ್ರ ಕಾಣಿಕೆ ಕೊಡಲು ಸಾಧ್ಯವಾದರೂ ಹನಿಹನಿಗೂಡಿದರೆ ಹಳ್ಳ ಎಂಬದನ್ನು ಮರೆಯಬಾರದು. ನಾವು ಮನಃಪೂರ್ವಕವಾಗಿ ಕೊಡುವ ಕಾಣಿಕೆಯನ್ನು ಉದಾರಭಾವದ ನಮ್ಮ ಸ್ವರ್ಗೀಯ ತಂದೆ ಮೆಚ್ಚುತ್ತಾನೆ. ಏಕೆಂದರೆ ‘ಸಂತೋಷದಿಂದ ಕೊಡುವವನನ್ನು ಆತನು ಪ್ರೀತಿಸುತ್ತಾನೆ.’—2 ಕೊರಿಂ. 9:7.