ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಯೋನ
1. ಯೋನರಲ್ಲಿ ಯಾವ ಒಳ್ಳೇ ಗುಣಗಳಿದ್ದವು?
1 ಯೋನ ಅಂದಾಕ್ಷಣ ನಿಮಗೆ ಏನು ನೆನಪಾಗುತ್ತೆ? ಕೆಲವರು ಅವರನ್ನು ಹೇಡಿ, ನಿಷ್ಕರುಣಿ ಅಂತ ಹೇಳಬಹುದು. ಆದರೆ ಅವರು ವಿನಯಶೀಲ, ಧೀರ, ತ್ಯಾಗಮಯಿಯಾಗಿದ್ದರು. ಇಂಥ ಅದ್ಭುತ ಗುಣಗಳನ್ನು ತೋರಿಸಿ ನಮಗೆ “ಮಾದರಿ” ಆಗಿರುವ ಯೋನರನ್ನು ನಾವು ಹೇಗೆಲ್ಲ ಅನುಕರಿಸಬಹುದು?—ಯಾಕೋ. 5:10.
2. ನಾವು ಕೂಡ ಹೇಗೆ ಯೋನರಂತೆ ವಿನಯಶೀಲತೆ ತೋರಿಸಬಹುದು?
2 ವಿನಯಶೀಲತೆ: ಯೆಹೋವ ದೇವರು ಯೋನರಿಗೆ ನಿನೆವೆ ಪಟ್ಟಣಕ್ಕೆ ಹೋಗುವಂತೆ ಹೇಳಿದ್ದರು. ಆದರೆ ಅಲ್ಲಿದ್ದ ಜನರು ಮಹಾಕ್ರೂರಿಗಳಾಗಿದ್ದರು. ಆ ಊರಿಗೆ “ರಕ್ತಮಯಪುರಿ” ಎಂಬ ಹೆಸರೇ ಇತ್ತು. (ನಹೂ. 3:1-3) ಹಾಗಾಗಿ ಯೋನ ಅಲ್ಲಿಗೆ ಹೋಗದೆ ವಿರುದ್ಧ ದಿಕ್ಕಿಗೆ ಓಡಿಹೋದರು. ಆಗ ಯೆಹೋವ ದೇವರು ಯೋನರನ್ನು ತಿದ್ದಿದರು. ಮತ್ತೆ ಅದೇ ಊರಿಗೆ ಹೋಗುವಂತೆ ಎರಡನೇ ಬಾರಿ ನೇಮಕ ಕೊಟ್ಟರು. ಯೋನ ವಿನಯರಾಗಿ ಸ್ವೀಕರಿಸಿದರು. (ಜ್ಞಾನೋ. 24:32; ಯೋನ 3:1-3) ಮೊದಲನೇ ಬಾರಿ ಸ್ವೀಕರಿಸದಿದ್ದರೂ ಈ ಸಲ ದೇವರು ಹೇಳಿದಂತೆ ನಡೆದರು. (ಮತ್ತಾ. 21:28-31) ನಮಗೂ ಯಾವುದಾದರೂ ತಿದ್ದುಪಾಟು ಸಿಕ್ಕಿದಾಗ ಅಥವಾ ಸವಾಲುಗಳೇ ತುಂಬಿರುವ ಒಂದು ಸೇವಾಕ್ಷೇತ್ರ ಸಿಕ್ಕಿದಾಗ ಯೋನರಂತೆ ಸುವಾರ್ತೆ ಸಾರುವ ದೃಢಮನಸ್ಸು ಮಾಡಿದ್ದೀವಾ?
3. ಸೇವೆಯಲ್ಲಿ ಯಾವಾಗ ನಿಮಗೆ ತ್ಯಾಗ ಮತ್ತು ಧೈರ್ಯದ ಅವಶ್ಯವಿದೆ?
3 ಧೈರ್ಯ ಮತ್ತು ತ್ಯಾಗ: ಯೋನ ತಾರ್ಷೀಷಿಗೆ ಓಡಿಹೋಗಲು ಹಡಗಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಆ ಹಡಗಲ್ಲಿದ್ದವರ ಪ್ರಾಣಕ್ಕೂ ಕುತ್ತು ಬಂತು. ಇದು ತಮ್ಮ ಕೆಟ್ಟ ನಿರ್ಧಾರದ ಫಲಿತಾಂಶ ಅಂತ ಅರಿವಾದಾಗ ಯೋನ ಪ್ರಾಣವನ್ನೇ ಕೊಡಲು ತಯಾರಾದರು. (ಯೋನ 1:3, 4, 12) ಅಷ್ಟೇ ಅಲ್ಲ ಎರಡನೇ ಸಲ ನೇಮಕ ಸ್ವೀಕರಿಸಿ ನಿನೆವೆಗೆ ಹೋದಾಗ ದೇವರ ನ್ಯಾಯತೀರ್ಪನ್ನು ತಿಳಿಸಲು ಸೂಕ್ತ ಜಾಗವನ್ನು ಹುಡುಕುತ್ತಾ ಪಟ್ಟಣದ ಮಧ್ಯಭಾಗಕ್ಕೆ ಹೋಗಿ ಸಾರಿದರು. ಇದು ಯೋನರ ಹೇಡಿತನವಲ್ಲ, ಧೀರತನವಾಗಿತ್ತು. (ಯೋನ 3:3, 4) ಯೋನರಿಂದ ನಮಗಿರುವ ಪಾಠ? ವಿರೋಧವಿದ್ದಾಗ ಧೈರ್ಯದಿಂದ ಸುವಾರ್ತೆ ಸಾರಬೇಕು. (ಅ. ಕಾ. 4:30, 31) ದೇವರ ಸೇವೆಗಾಗಿ ಸಮಯ, ಶಕ್ತಿಯನ್ನು ವ್ಯಯಿಸಬೇಕಾದರೆ ನಮ್ಮಲ್ಲಿ ತ್ಯಾಗ ಅನ್ನೋ ಗುಣ ಇರಲೇಬೇಕು.—ಅ. ಕಾ. 20:24.
4. ದೇವಪ್ರವಾದಿಗಳು ಇಟ್ಟಿರುವ ಮಾದರಿಯನ್ನು ನಾವು ಧ್ಯಾನ ಮಾಡಬೇಕು ಏಕೆ?
4 ದೇವಪ್ರವಾದಿಗಳ ವೃತ್ತಾಂತವನ್ನು ಓದುವಾಗ ಅವರ ಜಾಗದಲ್ಲಿ ನಿಮ್ಮನ್ನು ಚಿತ್ರಿಸಿಕೊಳ್ಳಿ. ‘ನಾನಾಗಿದ್ದರೆ ಏನು ಮಾಡುತ್ತಿದ್ದೆ? ಇಂಥ ಒಳ್ಳೇ ಗುಣಗಳನ್ನು ನನ್ನ ಜೀವನದಲ್ಲಿ ಹೇಗೆ ತೋರಿಸಬಲ್ಲೆ?’ ಅಂತ ಸ್ವಪರಿಶೀಲನೆ ಮಾಡಿಕೊಳ್ಳಿ. ಇದರಿಂದ ನಿಮಗೆ ಪ್ರಯೋಜನ ಆಗುವುದರಲ್ಲಿ ಸಂಶಯನೇ ಇಲ್ಲ. (ಇಬ್ರಿ. 6:11, 12) ನಮ್ಮ ರಾಜ್ಯ ಸೇವೆಯಲ್ಲಿ ದೇವಪ್ರವಾದಿಗಳ ಬಗ್ಗೆ ಇನ್ನೂ ಅನೇಕ ಲೇಖನಗಳು ಮೂಡಿ ಬರಲಿದೆ. ನಂಬಿಗಸ್ತ ಪ್ರವಾದಿಗಳಿಂದ ಅಮೂಲ್ಯ ಪಾಠಗಳನ್ನು ಕಲಿಯೋಣ.