ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಮೀಕ
1. ಮೀಕನ ಮನಸ್ಸಲ್ಲಿ ಯಾವ ಪ್ರಶ್ನೆ ಎದ್ದಿರಬಹುದು? ಅವನ ಸಾರುವ ಕೆಲಸ ವ್ಯರ್ಥವಾಗಲಿಲ್ಲ ಹೇಗೆ?
1 ‘ಈ ಭ್ರಷ್ಟ ವ್ಯವಸ್ಥೆ ಯಾವಾಗ ಅಂತ್ಯವಾಗುತ್ತದೊ?’ ಇಸ್ರಾಯೇಲ್ ಮತ್ತು ಯೆಹೂದದ ರಾಜ್ಯಗಳಿಗೆ ಯೆಹೋವನು ನುಡಿದ ನ್ಯಾಯತೀರ್ಪಿನ ಸಂದೇಶವನ್ನು ಸಾರುತ್ತಿದ್ದಾಗ ಪ್ರವಾದಿ ಮೀಕನ ಮನಸ್ಸಲ್ಲೂ ಈ ಪ್ರಶ್ನೆ ಮೂಡಿರಬಹುದು. ಆದರೂ ಅವನ ಸಾರುವ ಕೆಲಸ ವ್ಯರ್ಥವಾಗಲಿಲ್ಲ. ಯೆಹೋವನು ನುಡಿದ ಮಾತು ಅವನು ಬದುಕಿದ್ದಾಗಲೇ ಕ್ರಿ.ಪೂ. 740ರಲ್ಲಿ ಸಮಾರ್ಯದವರ ವಿರುದ್ಧ ನೆರವೇರಿತು. (ಮೀಕ 1:6, 7) ನಂತರ ಕ್ರಿ.ಪೂ. 607ರಲ್ಲಿ ಯೆರೂಸಲೇಮ್ ನಾಶವಾಯಿತು. (ಮೀಕ 3:12) ನಮ್ಮ ದಿನಗಳಲ್ಲೂ ಯೆಹೋವನು ತರುವ ನ್ಯಾಯತೀರ್ಪನ್ನು ಕಾಯುತ್ತಿರುವ ನಾವು ಮೀಕನನ್ನು ಹೇಗೆ ಅನುಕರಿಸಬಹುದು?
2. ಯೆಹೋವನ ದಿನಕ್ಕಾಗಿ ಕಾಯುತ್ತಿರುವ ನಾವು ಹೇಗೆ ಮತ್ತು ಏಕೆ ತಾಳ್ಮೆ ತೋರಿಸಬೇಕು?
2 ತಾಳ್ಮೆಯಿಂದಿರಿ: ಮೀಕನು ಬರೆದದ್ದು: “ನಾನಂತು ಯೆಹೋವನನ್ನು ಎದುರುನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು.” (ಮೀಕ 7:7) ಅಂದರೆ ಮೀಕನು ಅಂತ್ಯಕ್ಕಾಗಿ ಕಾಯುತ್ತಾ ಸುಮ್ಮನೆ ಕೂರಲಿಲ್ಲ. ಯೆಹೋವನ ಪ್ರವಾದಿಯಾಗಿ ಕೆಲಸ ಮಾಡುತ್ತಾ ಕಾರ್ಯಮಗ್ನನಾಗಿದ್ದನು. ಯೆಹೋವನ ದಿನಕ್ಕಾಗಿ ಕಾಯುತ್ತಿರುವ ನಾವೂ ‘ಪವಿತ್ರ ನಡತೆ ಮತ್ತು ದೇವಭಕ್ತಿಯ ಕ್ರಿಯೆಗಳಲ್ಲಿ’ ತೊಡಗಿರಬೇಕು. (2 ಪೇತ್ರ 3:11, 12) ಯೆಹೋವನ ತಾಳ್ಮೆ ಜನರಿಗೆ ಪಶ್ಚಾತ್ತಾಪಪಡಲು ಸಮಯ ಕೊಡುತ್ತಿದೆ. (2 ಪೇತ್ರ 3:9) ಆದ್ದರಿಂದ ತಾಳ್ಮೆ ತೋರಿಸುವುದರಲ್ಲಿ ಪ್ರವಾದಿಗಳ ಮಾದರಿಯನ್ನು ಅನುಸರಿಸಬೇಕೆಂಬ ದೈವಿಕ ಬುದ್ಧಿವಾದವನ್ನು ಪಾಲಿಸೋಣ.—ಯಾಕೋ. 5:10.
3. ಯೆಹೋವನ ಪವಿತ್ರಾತ್ಮಕ್ಕಾಗಿ ನಾವೇಕೆ ಬೇಡಬೇಕು?
3 ಯೆಹೋವನ ಬಲದ ಮೇಲೆ ಆತುಕೊಳ್ಳಿ: ಮೀಕನ ನೇಮಕ ಕಷ್ಟಕರವಾಗಿದ್ದರೂ ಅದನ್ನು ಪೂರೈಸಲು ಬೇಕಾದ ಬಲವನ್ನು ಯೆಹೋವನಿಂದ ಪಡೆದನು. (ಮೀಕ 3:8) ನಮಗೂ ಆತನ ಬಲದ ಅಗತ್ಯವಿರುವುದರಿಂದ ಅದಕ್ಕಾಗಿ ಕೇಳಿಕೊಳ್ಳುವಂತೆ ದೇವರ ವಾಕ್ಯ ಪ್ರೋತ್ಸಾಹಿಸುತ್ತದೆ. ದೇವಪ್ರಭುತ್ವಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುವವರು ದಣಿದಾಗ ದೇವರು ಉದಾರವಾಗಿ ಅವರಿಗೆ ಬಲವನ್ನು ದಯಪಾಲಿಸುತ್ತಾನೆ. (ಕೀರ್ತ. 84:5, 7; ಯೆಶಾ. 40:28-31) ನಿಮ್ಮ ಬದುಕಲ್ಲಿ ಇಂದಿನ ವರೆಗೂ ಸಲ್ಲಿಸಿರುವ ಪವಿತ್ರ ಸೇವೆಯಲ್ಲಿ ಇದನ್ನು ವೈಯಕ್ತಿಕವಾಗಿ ಅನುಭವಿಸಿದ್ದೀರಾ? ಯೆಹೋವನ ಶಕ್ತಿಶಾಲಿ ಪವಿತ್ರಾತ್ಮದ ಸಹಾಯಕ್ಕಾಗಿ ಯಾವಾಗಲೂ ಬೇಡಿಕೊಳ್ಳುತ್ತೀರಾ?—ಲೂಕ 11:13.
4. ಮೀಕನ ಜೀವನ ಕ್ರಮ ಇಂದು ನಮಗೆ ಉತ್ಕೃಷ್ಟ ಮಾದರಿ ಹೇಗೆ?
4 ಮೀಕನು ಜೀವನದಾದ್ಯಂತ ದೇವರ ಚಿತ್ತವನ್ನು ಮಾಡುವುದಕ್ಕೆ ಆದ್ಯತೆ ಕೊಟ್ಟನು. ತನ್ನ ಸುತ್ತಮುತ್ತ ನೈತಿಕತೆ ಕೀಳ್ಮಟ್ಟಕ್ಕೆ ಇಳಿದಿದ್ದರೂ ನಂಬಿಗಸ್ತನಾಗಿ ಉಳಿಯುವ ದೃಢ ತೀರ್ಮಾನ ಮಾಡಿದ್ದನು. ನಮ್ಮ ಸಮಗ್ರತೆ ಸಹ ದಿನಾಲೂ ಪರೀಕ್ಷೆಗೊಳಗಾಗುತ್ತದೆ. ಆದ್ದರಿಂದ “ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು” ಎಂಬ ನಮ್ಮ ಸಂಕಲ್ಪವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳೋಣ.—ಮೀಕ 4:5.