ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ವೈಯಕ್ತಿಕ ಆಸಕ್ತಿ ತೋರಿಸಿ
ಏಕೆ ಪ್ರಾಮುಖ್ಯ: ಯೇಸು ಪ್ರತಿಯೊಬ್ಬ ವ್ಯಕ್ತಿಯ ಕಡೆಗೆ ಪರಿಗಣನೆ ಮತ್ತು ವೈಯಕ್ತಿಕ ಆಸಕ್ತಿ ತೋರಿಸಿದನು. ಉದಾಹರಣೆಗೆ, ಒಂದು ಸಂದರ್ಭದಲ್ಲಿ ಆತನು ತಾನು ವಾಸಿ ಮಾಡಲಿದ್ದ ಕಿವುಡನು ಮುಜುಗರ ಪಟ್ಟುಕೊಳ್ಳುತ್ತಿದ್ದದ್ದನ್ನು ಗಮನಿಸಿದನು. ಆದ್ದರಿಂದ ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ವಾಸಿಮಾಡಿದನು. (ಮಾರ್ಕ 7:31-35) ತನ್ನ ಶಿಷ್ಯರಿಗೂ ಪರಿಗಣನೆ ತೋರಿಸಿದನು. ಅವರ ಇತಿಮಿತಿಗಳನ್ನು ಅರಿತು ಅವರು ಎಷ್ಟು ಅರ್ಥಮಾಡಿಕೊಳ್ಳಲು ಸಾಧ್ಯವಿತ್ತೋ ಅಷ್ಟು ಮಾತ್ರ ತಿಳಿಸಿದನು. (ಯೋಹಾ. 16:12) ಪರಲೋಕಕ್ಕೆ ಹೋದ ನಂತರ ಸಹ ಆತನು ವೈಯಕ್ತಿಕ ಆಸಕ್ತಿ ತೋರಿಸಿದನು. (2 ತಿಮೊ. 4:17) ಯೇಸುವಿನ ಹಿಂಬಾಲಕರಾಗಿರುವುದರಿಂದ ನಾವು ಸಹ ಅದನ್ನೇ ಮಾಡಬೇಕು. (1 ಪೇತ್ರ 2:21; 1 ಯೋಹಾ. 3:16, 18) ಮನೆಯವರ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಪರಿಗಣನೆ ತೋರಿಸುವುದಾದರೆ ನಾವು ಮಾಡುವ ಸೇವೆ ಇನ್ನೂ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಕೇವಲ ವಿಷಯವನ್ನು ತಿಳಿಸಿ ಪತ್ರಿಕೆ ಕೊಡುವುದಷ್ಟೇ ನಮ್ಮ ಉದ್ದೇಶ ಅಲ್ಲ, ನಮಗೆ ಅವರ ಬಗ್ಗೆ ವೈಯಕ್ತಿಕ ಆಸಕ್ತಿ ಇದೆ ಎನ್ನುವುದನ್ನು ಮನೆಯವರು ಗ್ರಹಿಸುವುದಾದರೆ ನಾವು ಹೇಳುವ ವಿಷಯಕ್ಕೆ ಕಿವಿಗೊಡುತ್ತಾರೆ.
ಹೇಗೆ ಮಾಡುವುದು:
• ಚೆನ್ನಾಗಿ ತಯಾರಿ ಮಾಡಿ. ಗಾಬರಿ ಅಥವಾ ಭಯ ಪಡಬೇಡಿ, ಮುಖದಲ್ಲಿ ನಗುವಿರಲಿ, ಸ್ನೇಹಭಾವದಿಂದ ಮಾತಾಡಿ.
• ಚೆನ್ನಾಗಿ ಗಮನಿಸಿ. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಾ ‘ಮನೆಯಲ್ಲಿ ಮಕ್ಕಳಿದ್ದಾರಾ? ತೋಟಗಾರಿಕೆಯಲ್ಲಿ ಆಸಕ್ತಿ ಇದೆಯಾ? ಸಾಕು ಪ್ರಾಣಿಗಳಿವೆಯಾ? ಯಾವ ಧಾರ್ಮಿಕ ನಂಬಿಕೆಗಳಿವೆ?’ ಎಂದು ತಿಳಿದುಕೊಳ್ಳಿ. ನಂತರ ಪೀಠಿಕೆಯನ್ನು ಅದಕ್ಕೆ ಸರಿಯಾಗಿ ಹೊಂದಿಸಿಕೊಳ್ಳಿ.
• ಮನೆಯವರ ಅಭಿಪ್ರಾಯವನ್ನು ಕೇಳಿ, ಅವರು ಮಾತಾಡುವಾಗ ಅತ್ತಿತ್ತ ನೋಡಬೇಡಿ. ಅನಾವಶ್ಯಕವಾಗಿ ಮಧ್ಯೆ ಮಾತಾಡದೆ ಅವರು ಹೇಳುವುದನ್ನು ಚೆನ್ನಾಗಿ ಕೇಳಿ. ಇದು ನೀವು ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದೀರೆಂದು ತೋರಿಸುತ್ತದೆ. ಅವರ ಅಭಿಪ್ರಾಯಕ್ಕೆ ಧನ್ಯವಾದ ತಿಳಿಸಿ, ಪ್ರಾಮಾಣಿಕವಾಗಿ ಶ್ಲಾಘಿಸಿ. ಯಾವುದೇ ಕಾರಣಕ್ಕೂ ಅವರೊಂದಿಗೆ ವಾದಿಸಬೇಡಿ.
• ಹೊಂದಾಣಿಕೆ ಮಾಡುವುದನ್ನು ಕಲಿತುಕೊಳ್ಳಿ. ಮನೆಯವರ ಸಮಸ್ಯೆ ಅಥವಾ ಚಿಂತೆಗೆ ಸರಿಯಾಗಿ ನಿಮ್ಮ ನಿರೂಪಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಬೇರೆ ಬೇರೆ ವಿಷಯಗಳ ಕುರಿತು ತಿಳಿಸುವ ಕರಪತ್ರ, ಕಿರುಹೊತ್ತಗೆ ಮತ್ತು ಪತ್ರಿಕೆಗಳು ನಮಗೆ ಲಭ್ಯವಿರುವುದರಿಂದ ಇದನ್ನು ಮಾಡುವುದು ತುಂಬ ಸುಲಭ. ನೀವು ಬಂದಾಗ ಮನೆಯವರು ಬೇರೆ ಕೆಲಸದಲ್ಲಿ ತಲ್ಲೀನರಾಗಿರುವುದಾದರೆ, ಅವರಿಗೆ ಪರಿಗಣನೆ ತೋರಿಸುತ್ತಾ ಚುಟುಕಾಗಿ ಮಾತಾಡಿ.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
• ಮನೆಯವರು ಹೇಳುವ ವಿಷಯಕ್ಕನುಸಾರವಾಗಿ ನಿರೂಪಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕುಟುಂಬ ಆರಾಧನೆಯಲ್ಲಿ ಅಭ್ಯಾಸ ಮಾಡಿ ಅಥವಾ ಕ್ಷೇತ್ರದಲ್ಲಿ ಸೇವೆ ಮಾಡುವಾಗ ಇದನ್ನು ಮಾಡಲು ಪ್ರಯತ್ನಿಸಿ.
• ಕ್ಷೇತ್ರ ಸೇವೆಗಾಗಿರುವ ಕೂಟವನ್ನು ನಿರ್ವಹಿಸುವ ಸಹೋದರನು, ವೈಯಕ್ತಿಕ ಆಸಕ್ತಿ ತೋರಿಸುವ ವಿಧಗಳ ಕುರಿತು ಕೆಲವು ವಾರ ಆ ಕೂಟದಲ್ಲಿ ಚರ್ಚಿಸಬಹುದು ಅಥವಾ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಬಹುದು.