ಹೊಚ್ಚ ಹೊಸ ಹಾಡುಗಳು!
1 ಅಕ್ಟೋಬರ್ 4, 2014ರಂದು ನಡೆದ ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ವಾರ್ಷಿಕ ಕೂಟದಲ್ಲಿ, ನಮ್ಮ ಗೀತೆ ಪುಸ್ತಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಹೊಸ ಹಾಡುಗಳನ್ನು ಸೇರಿಸಲಾಗುತ್ತದೆ ಎಂದು ಪ್ರಕಟಿಸಲಾಯಿತು. ಇದು ನಿಜಕ್ಕೂ ಸಂತೋಷದ ಸುದ್ದಿ! ಯೆಹೋವನ ಆರಾಧನೆಯಲ್ಲಿ ರಾಜ್ಯ ಗೀತೆಗಳನ್ನು ಹಾಡುವುದರ ಮಹತ್ವವನ್ನು ಅಲ್ಲಿ ಹಾಜರಾಗಿದ್ದವರೆಲ್ಲರಿಗೂ ತಿಳಿಸಲಾಯಿತು.—ಕೀರ್ತ. 96:2.
2 ‘ಗೀತೆ ಪುಸ್ತಕದಲ್ಲಿ ಯಾಕೆ ಬದಲಾವಣೆ ಮಾಡಬೇಕು?’ ಅಂತ ನೀವು ಯೋಚಿಸುತ್ತಿರಬಹುದು. ಇದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ, ಬೈಬಲಿನ ವಚನಗಳ ಅರ್ಥ ಇನ್ನೂ ಹೆಚ್ಚು ಸ್ಪಷ್ಟವಾಗುತ್ತಾ ಇರುವುದರಿಂದ ಗೀತೆಗಳಲ್ಲಿ ಆ ಅರ್ಥವನ್ನು ಸೇರಿಸಬೇಕಾಗಿದೆ. (ಜ್ಞಾನೋ. 4:18) ಎರಡನೆಯದಾಗಿ, ಗೀತೆ ಪುಸ್ತಕದಲ್ಲಿರುವ ಕೆಲವು ಪದಗಳು ಮತ್ತು ಪದಗುಚ್ಛಗಳು ಹಿಂದಿನ ನೂತನ ಲೋಕ ಭಾಷಾಂತರದ ಆವೃತ್ತಿಯಿಂದ ತೆಗೆದದ್ದಾಗಿವೆ. ಹಾಗಾಗಿ ಈಗಿನ ಹೊಸ ಬೈಬಲಿನಲ್ಲಿರುವ ಪದಗಳಿಗೆ ತಕ್ಕಂತೆ ಗೀತೆಗಳಲ್ಲೂ ಬದಲಾವಣೆ ಮಾಡಬೇಕಿದೆ. ಗೀತೆಗಳಲ್ಲಿರುವ ಪದಗಳನ್ನು ಸರಿಪಡಿಸಲು ಸಾಕಷ್ಟು ಕೆಲಸ ಮಾಡಬೇಕು. ಅಷ್ಟರೊಳಗೆ, ಹೊಸ ಹಾಡುಗಳನ್ನು ಸಹ ಪುಸ್ತಕಕ್ಕೆ ಸೇರಿಸಲಾಗುತ್ತದೆ.
3 ಹಾಗಾದರೆ, ಹೊಸ ಗೀತೆ ಪುಸ್ತಕ ನಮ್ಮ ಕೈಗೆ ಸಿಗುವವರೆಗೂ ಹೊಸ ಹಾಡುಗಳನ್ನು ಹಾಡಲು ಅವಕಾಶ ಸಿಗುವುದಿಲ್ಲವಾ? ಖಂಡಿತ ಇದೆ. ಅನೇಕ ಹೊಸ ಹಾಡುಗಳನ್ನು ನಮ್ಮ jw.org ವೆಬ್‌ಸೈಟ್‌ನಲ್ಲಿ ಮುಂದಿನ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲು ಸಂತೋಷಿಸುತ್ತೇವೆ. ಹೊಸ ಹಾಡುಗಳು ಬಿಡುಗಡೆಯಾದಾಗ ಸೇವಾಕೂಟದ ಕೊನೆಯಲ್ಲಿ ಅದನ್ನು ಹಾಡಲಾಗುತ್ತದೆ. ಶೆಡ್ಯೂಲಿನ ಕೊನೆಯಲ್ಲಿ ಅದನ್ನು “ಹೊಸ ಹಾಡು” ಎಂದು ಸೂಚಿಸಲಾಗುತ್ತದೆ.
4 ಹೊಸ ಹಾಡುಗಳನ್ನು ಕಲಿಯುವುದು ಹೇಗೆ? ಆ ಹಾಡುಗಳನ್ನು ಕಲಿಯುವುದು ಅಷ್ಟೊಂದು ಸುಲಭವಾಗಿಲ್ಲದಿರಬಹುದು. ಆದರೆ ಕೀರ್ತನೆಗಾರನಂತೆ ಸಭಾಕೂಟಗಳಲ್ಲಿ ನಾವು ‘ಎಡೆಬಿಡದೆ ಯೆಹೋವನನ್ನು ಸ್ತುತಿಸಬೇಕು.’ (ಕೀರ್ತ. 30:12) ಹಾಗಾಗಿ, ಹೊಸ ಹಾಡುಗಳನ್ನು ಕಲಿಯಲು ಈ ಮೂರು ವಿಷಯಗಳನ್ನು ಮಾಡಬೇಕು:
ನಮ್ಮ ವೆಬ್‌ಸೈಟ್‌ನಲ್ಲಿ ಹಾಕಲಾಗುವ ಹೊಸ ಹಾಡುಗಳ ಸಂಗೀತವನ್ನು ಪುನಃ ಪುನಃ ಕೇಳಿಸಿಕೊಳ್ಳಿ. ಈ ಸಂಗೀತವನ್ನು ನೀವೆಷ್ಟು ಕೇಳಿಸಿಕೊಳ್ಳುತ್ತೀರೋ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ನಿಮಗೆ ಅಷ್ಟೇ ಸುಲಭವಾಗುತ್ತದೆ.
ಹಾಡಿನಲ್ಲಿರುವ ಪದಗಳನ್ನು ಬಾಯಿಪಾಠ ಮಾಡಲು ಪ್ರಯತ್ನಿಸಿ.
ಸಂಗೀತದೊಂದಿಗೆ ಹಾಡನ್ನು ಹಾಡಿ. ಚೆನ್ನಾಗಿ ಹಾಡಲು ಬರುವವರೆಗೂ ಹಾಡುತ್ತಲೇ ಇರಿ.
ನಿಮ್ಮ ಕುಟುಂಬದವರು ಹೊಸ ಹಾಡುಗಳನ್ನು ಹಾಡಲು ಕಲಿಯುವವರೆಗೂ ನಿಮ್ಮ ಕುಟುಂಬ ಆರಾಧನೆಯಲ್ಲಿ ಅವುಗಳನ್ನು ಹಾಡುವ ಅಭ್ಯಾಸ ಮಾಡಿಕೊಳ್ಳಿ.
5 ಸೇವಾ ಕೂಟದ ಕೊನೆಯಲ್ಲಿ ಹೊಸ ಹಾಡನ್ನು ಹಾಡಬೇಕೆಂದು ಸೂಚಿಸಿರುವಾಗ ಮೊದಲಿಗೆ ಆ ಹಾಡಿನ ಸಂಗೀತವನ್ನು ಹಾಕಲಾಗುತ್ತದೆ. ಆಗ ಸಭಿಕರೆಲ್ಲರೂ ಕೇಳಿಸಿಕೊಳ್ಳಬೇಕು. ಎರಡನೆಯ ಸಲ ಸಂಗೀತವನ್ನು ಹಾಕಿದಾಗ ಎಲ್ಲರೂ ಜೊತೆ ಸೇರಿ ಹಾಡಬೇಕು.
6 ನಾವೆಲ್ಲರೂ ಕೂಟದಲ್ಲಿ ಯೆಹೋವನನ್ನು ಸ್ತುತಿಸಲು ಒಟ್ಟಾಗಿ ಧ್ವನಿಗೂಡಿಸುವಾಗ ಅದು ನಮಗೆ ಸಂತೋಷವನ್ನು ತರುತ್ತದೆ. ಹಾಗಾಗಿ, ಕೂಟಗಳಲ್ಲಿ ‘ಗೀತೆ ಹಾಡೋಣ’ ಎಂದು ಹೇಳುವಾಗ ‘ಇದು ವಿರಾಮದ ಸಮಯ’ ಎಂದು ಯೋಚಿಸಿ ಹೊರಗಡೆ ಹೋಗುವ ರೂಢಿಯನ್ನು ಮಾಡಿಕೊಳ್ಳಬೇಡಿ.
7 ನಾವು ಇನ್ನೊಂದು ರೀತಿಯಲ್ಲೂ ಸಂಗೀತಕ್ಕೆ ಗಣ್ಯತೆಯನ್ನು ತೋರಿಸಬೇಕು. ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಕಾರ್ಯಕ್ರಮ ಆರಂಭವಾಗುವ ಮುಂಚೆ ಸಂಗೀತವನ್ನು ಹಾಕಲಾಗುತ್ತದೆ. ಪ್ರತಿ ವರ್ಷಕ್ಕೆ ಎರಡು ಬಾರಿ, ಬೇರೆ ಬೇರೆ ದೇಶಗಳಿಂದ ನಮ್ಮ ಸಹೋದರ ಸಹೋದರಿಯರು ಸ್ವಂತ ಖರ್ಚು ಹಾಕಿ ನ್ಯೂಯಾರ್ಕಿನ ಪ್ಯಾಟರ್‌ಸನ್‌ಗೆ ಹೋಗಿ ಈ ಸುಮಧುರ ಸಂಗೀತವನ್ನು ನಮಗಾಗಿ ತಯಾರಿಸುತ್ತಾರೆ. ಹಾಗಾಗಿ, ಸೆಷನ್ ಅಧ್ಯಕ್ಷನು ‘ಸಂಗೀತ ಆರಂಭವಾಗುತ್ತದೆ’ ಎಂದು ಹೇಳುವಾಗ ನಾವು ನಮ್ಮ ಸ್ಥಳದಲ್ಲಿ ಕುಳಿತುಕೊಂಡು ಅದನ್ನು ಕೇಳಿಸಿಕೊಳ್ಳಬೇಕು. ಹೀಗೆ ಮಾಡಿದರೆ ಆ ಸೆಷನ್‌ನಲ್ಲಿ ಏನನ್ನು ಕಲಿಸಲಾಗುತ್ತದೋ ಅದನ್ನು ಕೇಳಿಸಿಕೊಳ್ಳಲು ನಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಲು ಸಹಾಯವಾಗುತ್ತದೆ.—ಎಜ್ರ 7:10.
8 ದೇವರ ರಾಜ್ಯದ ಆಳ್ವಿಕೆ ಪ್ರಾರಂಭವಾಗಿ 100 ವರ್ಷವಾಗಿರುವುದರ ಪ್ರಯುಕ್ತ ಒಂದು ಹೊಸ ಹಾಡನ್ನು ರಚಿಸಲಾಗಿದೆ. ಅದನ್ನು ವಾರ್ಷಿಕ ಕೂಟದಲ್ಲಿ ಹಾಡಲಾಗಿತ್ತು. ನಾವು ಸಹ ಆ ಹಾಡನ್ನು ಹಾಡಿ ನಮ್ಮ ಕೂಟವನ್ನು ಮುಗಿಸಲಿದ್ದೇವೆ. ಹಾಡಿನ ಶೀರ್ಷಿಕೆ “ದೇವರ ರಾಜ್ಯ ಬರಲಿ!”
9 ಹೊಸ ಹಾಡುಗಳು ಯೆಹೋವನಿಂದ ಬಂದಿರುವ ‘ಒಳ್ಳೆಯ ವಿಷಯಗಳು’ ಎನ್ನುವುದರಲ್ಲಿ ಸಂಶಯವೇ ಇಲ್ಲ. (ಮತ್ತಾ. 12:35ಎ) ಈ ಹೊಸ ಹಾಡುಗಳನ್ನು ಕಲಿತು ಹೃದಯದಾಳದಿಂದ ಹಾಡಿ ನಮ್ಮ ದೇವರಿಗೆ ಘನತೆ, ಮಹಿಮೆ ತರುವ ದೃಢತೀರ್ಮಾನ ಮಾಡೋಣ.—ಕೀರ್ತ. 147:1.