ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಹಬಕ್ಕೂಕ
1. ನಮ್ಮನ್ನು ಪ್ರವಾದಿಯಾದ ಹಬಕ್ಕೂಕನಿಗೆ ಏಕೆ ಹೋಲಿಸಬಹದು?
1 ಲೋಕದಲ್ಲಿ ಹೆಚ್ಚುತ್ತಿರುವ ಕಷ್ಟಗಳನ್ನು ನೋಡುವಾಗ, ನಮಗೂ ಹಬಕ್ಕೂಕನಂತೆ ಅನಿಸಬಹುದು. ಅವನು, “ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ?” ಎಂದು ಯೆಹೋವನನ್ನು ಪ್ರಶ್ನಿಸಿದ್ದನು. (ಹಬ. 1:3; 2 ತಿಮೊ. 3:1, 13) ಹಬಕ್ಕೂಕನು ತಿಳಿಸಿದ ವಿಷಯ ಮತ್ತು ಆತನ ನಂಬಿಗಸ್ತ ಮಾದರಿಯ ಕುರಿತು ನಾವು ಧ್ಯಾನಿಸಬೇಕು. ಆಗ ಯೆಹೋವನ ನ್ಯಾಯತೀರ್ಪಿನ ದಿನಕ್ಕಾಗಿ ಎದುರು ನೋಡುತ್ತಿರುವ ನಮಗೆ ಕಷ್ಟದ ಮಧ್ಯದಲ್ಲೂ ತಾಳಿಕೊಳ್ಳಲು ಸಹಾಯ ಸಿಗುತ್ತದೆ.—2 ಪೇತ್ರ 3:7.
2. ನಂಬಿಕೆಯಿಂದ ಜೀವಿಸುತ್ತಿದ್ದೇವೆಂದು ನಾವು ಹೇಗೆ ತೋರಿಸಬಹುದು?
2 ನಂಬಿಕೆಯಿಂದ ಜೀವಿಸಿ: ಹಬಕ್ಕೂಕನು ತನಗಿದ್ದ ಕಷ್ಟಗಳ ಬಗ್ಗೆಯೇ ಯೋಚಿಸುತ್ತಾ ಕೊರಗುವ ಬದಲಿಗೆ, ಆಧ್ಯಾತ್ಮಿಕವಾಗಿ ಎಚ್ಚರವಾಗಿದ್ದು, ದೇವರ ಕೆಲಸಗಳಲ್ಲಿ ಮಗ್ನನಾಗಿದ್ದನು. (ಹಬ. 2:1) ಯೆಹೋವನು ಈ ಪ್ರವಾದಿಗೆ ತನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವುದು ಮತ್ತು ‘ನೀತಿವಂತನು ನಂಬಿಕೆಯಿಂದಲೇ ಬದುಕುವನು’ ಎಂದು ಭರವಸೆ ನೀಡಿದನು. (ಹಬ. 2:2-4) ಇದರಿಂದ ಕಡೇ ದಿವಸಗಳ ಅಂಚಿನಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೇನು ಪಾಠ? ಅಂತ್ಯ ಯಾವಾಗ ಬರುತ್ತದೆಂದು ತಿಳಿದುಕೊಳ್ಳುವುದಕ್ಕಿಂತ ಬಂದೇ ಬರುತ್ತದೆಂದು ದೃಢನಂಬಿಕೆಯಿಂದ ಇರುವುದು ಬಹಳ ಪ್ರಾಮುಖ್ಯ. ನಾವು ಯಾವಾಗಲೂ ಎಚ್ಚರಿಕೆಯಿಂದಿರುವಂತೆ ಮತ್ತು ಸಾರುವ ಕೆಲಸಕ್ಕೆ ಮೊದಲ ಸ್ಥಾನ ಕೊಡುವಂತೆ ನಂಬಿಕೆ ನಮ್ಮನ್ನು ಪ್ರಚೋದಿಸುತ್ತದೆ.—ಇಬ್ರಿ. 10:38, 39.
3. ಯೆಹೋವನ ಸೇವೆಯಲ್ಲಿ ನಾವು ಏಕೆ ಆನಂದವನ್ನು ಕಾಪಾಡಿಕೊಳ್ಳಬೇಕು?
3 ಯೆಹೋವನಲ್ಲಿ ಆನಂದಿಸಿ: ಮಾಗೋಗಿನ ಗೋಗನು ನಮ್ಮ ಮೇಲೆ ದಾಳಿ ಮಾಡುವಾಗ ನಮ್ಮ ನಂಬಿಕೆ ಪರೀಕ್ಷಿಸಲ್ಪಡುತ್ತದೆ. (ಯೆಹೆ. 38:2, 10-12) ಆ ದಾಳಿಯ ಸಮಯಾವಧಿ ಬಹಳ ಕಷ್ಟಕರವಾಗಿರುತ್ತದೆ. ಆಹಾರದ ಅಭಾವ ಬರಬಹುದು, ಆಸ್ತಿಯನ್ನೆಲ್ಲಾ ಕಳೆದುಕೊಳ್ಳಬಹುದು. ಜೀವನ ಸ್ಥಿತಿ ಬಹಳಷ್ಟು ಹದಗೆಡಬಹುದು. ಆ ದಾಳಿಯನ್ನು ಎದುರಿಸಿ ಗೆಲ್ಲುವವರಿಗೆ ಸಹ ಈ ಕಷ್ಟಗಳು ತಪ್ಪಿದ್ದಲ್ಲ. ಅಂಥ ಕಷ್ಟಗಳು ಎದುರಾದಾಗ ನಾವದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ? ತನಗೆ ಕಷ್ಟಗಳು ಬರುತ್ತವೆಂದು ಹಬಕ್ಕೂಕನಿಗೆ ಗೊತ್ತಿತ್ತು. ಆದ್ದರಿಂದ ಅವನು ದೇವರ ಸೇವೆಯಲ್ಲಿ ಆನಂದವನ್ನು ಕಾಪಾಡಿಕೊಳ್ಳಲು ದೃಢ ಮನಸ್ಸು ಮಾಡಿದ್ದನು. (ಹಬ. 3:16-19) ಭವಿಷ್ಯತ್ತಿನಲ್ಲಿ ಎದುರಾಗುವ ಕಷ್ಟಗಳನ್ನು ತಾಳಿಕೊಳ್ಳಲು “ಯೆಹೋವನ ಆನಂದ” ನಮಗೂ ಸಹಾಯ ಮಾಡುತ್ತದೆ.—ನೆಹೆ. 8:10; ಇಬ್ರಿ. 12:2.
4. ಈಗ ಮತ್ತು ಭವಿಷ್ಯದಲ್ಲಿ ಯಾವ ಆನಂದ ನಮಗಿದೆ?
4 ನ್ಯಾಯತೀರ್ಪಿನ ದಿನದಲ್ಲಿ ಯಾರನ್ನೆಲ್ಲಾ ಯೆಹೋವನು ಸಂರಕ್ಷಿಸುತ್ತಾನೋ ಅವರೆಲ್ಲಾ ಆತನಿಗೆ ಇಷ್ಟವಾಗುವಂತೆ ಜೀವಿಸಲು ಕಲಿಯುತ್ತಾರೆ. (ಹಬ. 2:14) ಪುನರುತ್ಥಾನವಾಗಿ ಬರುವವರು ಸಹ ಯೆಹೋವನ ಬಗ್ಗೆ ಕಲಿತುಕೊಳ್ಳುತ್ತಾರೆ. ಯೆಹೋವನ ಮತ್ತು ಆತನ ಅದ್ಭುತ ಕೆಲಸಗಳ ಕುರಿತು ತಿಳಿಸಲಿಕ್ಕಾಗಿ ಸದಾವಕಾಶಗಳು ನಮಗೆ ಈಗಲೂ ಸಿಗುತ್ತವೆ. ಆ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸಿಕೊಳ್ಳೋಣ.—ಕೀರ್ತ. 34:1; 71:17.