ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಅಕ್ಟೋಬರ್‌ ಪು. 8-13
  • ನಮ್ಮ ದೇವರು “ಕರುಣಾಮಯಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ದೇವರು “ಕರುಣಾಮಯಿ”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವ ಯಾಕೆ ಕರುಣೆ ತೋರಿಸ್ತಾರೆ?
  • ಶಿಸ್ತು ಕ್ರಮ ತಗೊಳ್ಳೋದು ಕರುಣೆ ಹೇಗಾಗುತ್ತೆ?
  • ನಾವೆಲ್ಲರೂ ಕರುಣೆ ತೋರಿಸೋಕೆ ಯಾವುದು ಸಹಾಯ ಮಾಡುತ್ತೆ?
  • ‘ನಿಮ್ಮ ತಂದೆಯು ಕರುಣೆಯುಳ್ಳವನಾಗಿದ್ದಾನೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಕರುಣೆಯನ್ನು ಅಭ್ಯಾಸಿಸಿರಿ—ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಕರುಣೆಯುಳ್ಳವರು ಧನ್ಯರು!
    ಯೆಹೋವನಿಗೆ ಹಾಡಿರಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಅಕ್ಟೋಬರ್‌ ಪು. 8-13

ಅಧ್ಯಯನ ಲೇಖನ 41

ನಮ್ಮ ದೇವರು “ಕರುಣಾಮಯಿ”

“ಯೆಹೋವ ಎಲ್ರಿಗೂ ಒಳ್ಳೇದನ್ನೇ ಮಾಡ್ತಾನೆ. ಆತನ ಕರುಣೆ ಆತನ ಎಲ್ಲ ಕೆಲಸಗಳಲ್ಲಿ ಎದ್ದು ಕಾಣುತ್ತೆ.”—ಕೀರ್ತ. 145:9.

ಗೀತೆ 68 ವಿನಮ್ರನ ಪ್ರಾರ್ಥನೆ

ಕಿರುನೋಟa

1. (ಎ) ಕರುಣೆ ಇರೋ ವ್ಯಕ್ತಿ ಹೇಗಿರುತ್ತಾನೆ? (ಬಿ) ಕರುಣೆ ಅನ್ನೋ ಗುಣವನ್ನ ಅರ್ಥಮಾಡಿಕೊಳ್ಳೋಕೆ ಯಾವ ಕಥೆ ನಮಗೆ ಸಹಾಯ ಮಾಡುತ್ತೆ?

ಕರುಣಾಮಯಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಯಾರು ಬರ್ತಾರೆ? ಯೇಸು ಹೇಳಿದ ಕಥೆಯಲ್ಲಿ ಬರೋ ಸಮಾರ್ಯದ ವ್ಯಕ್ತಿ ನಮ್ಮ ನೆನಪಿಗೆ ಬರಬಹುದು. ಕರುಣೆ ಇರೋ ವ್ಯಕ್ತಿಗೆ ದಯೆ, ಪ್ರೀತಿ ಮತ್ತು ಧಾರಾಳ ಮನಸ್ಸು ಇರುತ್ತೆ. ಆ ಸಮಾರ್ಯದ ವ್ಯಕ್ತಿ ಬೇರೆ ದೇಶದವನಾಗಿದ್ರೂ ದಾರಿಯಲ್ಲಿ ಬಿದ್ದಿದ್ದ ಯೆಹೂದ್ಯನಿಗೆ ‘ಕರುಣೆ ತೋರಿಸಿದ.’ ಆ ಯೆಹೂದ್ಯನನ್ನು ಕಳ್ಳರು ಲೂಟಿಮಾಡಿ, ಚೆನ್ನಾಗಿ ಹೊಡೆದು, ಅರೆಜೀವಮಾಡಿ ಬಿಟ್ಟುಹೋಗಿದ್ರು. ಅದನ್ನ ನೋಡಿದಾಗ ಆ ಸಮಾರ್ಯದವನಿಗೆ “ಅಯ್ಯೋ ಪಾಪ ಅನಿಸ್ತು.” ಅವನನ್ನ ನೋಡಿಕೊಳ್ಳೋಕೆ ಬೇಕಾದ ವ್ಯವಸ್ಥೆ ಮಾಡಿದ. (ಲೂಕ 10:29-37) ದೇವರ ಕರುಣೆ ಎಂಥದ್ದು ಅಂತ ಅರ್ಥಮಾಡಿಕೊಳ್ಳೋಕೆ ಈ ಕಥೆ ನಮಗೆ ಸಹಾಯ ಮಾಡುತ್ತೆ. ದೇವರು ನಮ್ಮನ್ನ ಪ್ರೀತಿಸುವುದರಿಂದಾನೇ ನಮಗೆ ಕರುಣೆ ತೋರಿಸ್ತಿದ್ದಾರೆ. ಅದನ್ನ ಪ್ರತಿದಿನ ಬೇರೆಬೇರೆ ವಿಧದಲ್ಲಿ ತೋರಿಸ್ತಿದ್ದಾರೆ.

2. ಯೆಹೋವ ದೇವರು ಕರುಣೆ ತೋರಿಸೋ ಇನ್ನೊಂದು ವಿಧ ಯಾವುದು?

2 ಯೆಹೋವ ದೇವರು ನಮಗೆ ಬೇರೆ ಯಾವ ವಿಧದಲ್ಲಿ ಕರುಣೆ ತೋರಿಸ್ತಾರೆ? ನಾವು ತಪ್ಪು ಮಾಡಿದಾಗ ದೇವರು ಕೆಲವೊಮ್ಮೆ ಕ್ಷಮಿಸುತ್ತಾರೆ. ಕೀರ್ತನೆಗಾರ ಹೇಳಿದ ಹಾಗೆ ದೇವರು ‘ನಮ್ಮ ಪಾಪಗಳಿಗೆ ತಕ್ಕ ಹಾಗೆ ನಮ್ಮ ಜೊತೆ ನಡಕೊಳ್ಳಲ್ಲ.’ (ಕೀರ್ತ. 103:10) ಆದ್ರೆ ಕೆಲವೊಮ್ಮೆ ನಾವು ಏನಾದ್ರೂ ದೊಡ್ಡ ತಪ್ಪು ಮಾಡಿದ್ರೆ ಯೆಹೋವ ನಮ್ಮ ಮೇಲೆ ಶಿಸ್ತು ಕ್ರಮ ತಗೊಳ್ತಾರೆ. ಇದು ಯೆಹೋವ ದೇವರು ನಮಗೆ ಕರುಣೆ ತೋರಿಸೋ ಇನ್ನೊಂದು ವಿಧ.

3. ನಾವೀಗ ಯಾವೆಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ತೀವಿ?

3 ಯೆಹೋವ ದೇವರು ಯಾಕೆ ಕರುಣೆ ತೋರಿಸ್ತಾರೆ? ಶಿಸ್ತು ಕ್ರಮ ತಗೊಳ್ಳೋದು ಕರುಣೆ ಹೇಗಾಗುತ್ತೆ? ನಾವು ಹೇಗೆ ಕರುಣೆ ತೋರಿಸಬಹುದು? ಈ ಪ್ರಶ್ನೆಗಳಿಗೆ ಬೈಬಲಿಂದ ಉತ್ತರ ತಿಳುಕೊಳ್ಳೋಣ.

ಯೆಹೋವ ಯಾಕೆ ಕರುಣೆ ತೋರಿಸ್ತಾರೆ?

4. ಯೆಹೋವ ದೇವರು ಯಾಕೆ ಕರುಣೆ ತೋರಿಸ್ತಾರೆ?

4 ದೇವರಿಗೆ ನಮ್ಮ ಮೇಲೆ ಪ್ರೀತಿ ಇರೋದರಿಂದ ಕರುಣೆ ತೋರಿಸ್ತಾರೆ. “ದೇವರು ಕರುಣಾಮಯಿ” ಅಂತ ಅಪೊಸ್ತಲ ಪೌಲ ಬೈಬಲಲ್ಲಿ ಬರೆದ. ಯೆಹೋವ ದೇವರಿಗೆ ಕರುಣೆ ಇದ್ದದರಿಂದಾನೇ ಅಭಿಷಿಕ್ತರು ಅಪರಿಪೂರ್ಣರಾಗಿದ್ರೂ ಸ್ವರ್ಗಕ್ಕೆ ಹೋಗೋ ಅವಕಾಶ ಕೊಟ್ರು ಅಂತ ಪೌಲ ಹೇಳಿದ. (ಎಫೆ. 2:4-7) ಯೆಹೋವ ದೇವರು ಅಭಿಷಿಕ್ತ ಕ್ರೈಸ್ತರಿಗೆ ಮಾತ್ರ ಅಲ್ಲ, ಎಲ್ಲರಿಗೂ ಕರುಣೆ ತೋರಿಸ್ತಾರೆ. ಅದಕ್ಕೆ ದಾವೀದ ಹೀಗೆ ಹೇಳಿದ: “ಯೆಹೋವ ಎಲ್ರಿಗೂ ಒಳ್ಳೇದನ್ನೇ ಮಾಡ್ತಾನೆ. ಆತನ ಕರುಣೆ ಆತನ ಎಲ್ಲ ಕೆಲಸಗಳಲ್ಲಿ ಎದ್ದು ಕಾಣುತ್ತೆ.” (ಕೀರ್ತ. 145:9) ನಮ್ಮ ಮೇಲೆ ಪ್ರೀತಿ ಇರೋದರಿಂದ ಕರುಣೆ ತೋರಿಸೋಕೆ ದೇವರು ಕಾರಣಗಳನ್ನು ಹುಡುಕ್ತಾ ಇರ್ತಾರೆ.

5. ಯೆಹೋವ ಕರುಣಾಮಯಿ ಅಂತ ಯೇಸುಗೆ ಹೇಗೆ ಗೊತ್ತು?

5 ಯೆಹೋವ ದೇವರಿಗೆ ಕರುಣೆ ತೋರಿಸೋದು ಇಷ್ಟ ಅಂತ ಬೇರೆ ಎಲ್ಲರಿಗಿಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಯಾಕಂದ್ರೆ ಕೋಟ್ಯಾನುಕೋಟಿ ವರ್ಷಗಳು ತಂದೆ ಮಗ ಸ್ವರ್ಗದಲ್ಲಿ ಜೊತೆಯಾಗಿ ಕಳೆದಿದ್ದಾರೆ. (ಜ್ಞಾನೋ. 8:30, 31) ಪಾಪಿಗಳಾದ ಮನುಷ್ಯರಿಗೆ ಯೆಹೋವ ಹೇಗೆಲ್ಲಾ ಕರುಣೆ ತೋರಿಸಿದ್ದಾರೆ ಅಂತ ಯೇಸು ತುಂಬ ಸಲ ನೋಡಿದ್ದಾರೆ. (ಕೀರ್ತ. 78:37-42) ಯೇಸು ಭೂಮಿಯಲ್ಲಿದ್ದಾಗ ಜನರ ಹತ್ರ ತನ್ನ ತಂದೆಯ ಆ ಸುಂದರ ಗುಣದ ಬಗ್ಗೆ ತುಂಬ ಸಲ ಮಾತಾಡಿದ್ರು.

ಮಗ ಮನೆಗೆ ವಾಪಸ್‌ ಬಂದಾಗ ಅಪ್ಪ ಅವಮಾನ ಮಾಡಲಿಲ್ಲ, ಬದಲಿಗೆ ಸೇರಿಸಿಕೊಂಡರು (ಪ್ಯಾರ 6 ನೋಡಿ)c

6. ಯೆಹೋವ ಕರುಣಾಮಯಿ ತಂದೆ ಅಂತ ಯೇಸು ಯಾವ ಕಥೆಯಿಂದ ಅರ್ಥಮಾಡಿಸಿದ್ರು?

6 ಮನೆಬಿಟ್ಟು ಹೋದ ಮಗನ ಕಥೆಯಿಂದಾನೂ ಯೆಹೋವ ಎಷ್ಟು ಕರುಣಾಮಯಿ ದೇವರು ಅಂತ ನಾವು ಕಲಿಬಹುದು. ಅವನು “ಬೇಕಾಬಿಟ್ಟಿ ಜೀವನ ಮಾಡಿ ಆಸ್ತಿಯನ್ನೆಲ್ಲ ಕಳ್ಕೊಂಡ.” (ಲೂಕ 15:13) ಆಮೇಲೆ ತನ್ನ ತಪ್ಪಿನ ಅರಿವಾಗಿ ತಗ್ಗಿಸಿಕೊಂಡು ವಾಪಸ್‌ ಮನೆಗೆ ಬಂದ. ಆಗ ತಂದೆ ಏನು ಮಾಡಿದ್ರು? “ಮಗ ಇನ್ನೂ ತುಂಬ ದೂರ ಇರುವಾಗಲೇ ಅಪ್ಪ ಅವನನ್ನ ನೋಡಿ ಕನಿಕರಪಟ್ಟು ಓಡೋಡಿ ಬಂದು ಅಪ್ಕೊಂಡು ಮುತ್ತು ಕೊಟ್ಟ.” ಮಗನಿಗೆ ಅವಮಾನ ಮಾಡಲಿಲ್ಲ. ಅವನಿಗೆ ಕರುಣೆ ತೋರಿಸಿ, ಕ್ಷಮಿಸಿ ಮತ್ತೆ ಅವನನ್ನ ಮನೆಗೆ ಸೇರಿಸಿಕೊಂಡ. ಅವನು ತುಂಬ ದೊಡ್ಡ ತಪ್ಪು ಮಾಡಿದ್ರೂ ಪಶ್ಚಾತ್ತಾಪ ಪಟ್ಟಿದ್ದರಿಂದ ಅವನನ್ನ ಕ್ಷಮಿಸಿದ. ಈ ಕಥೆಯಲ್ಲಿರೋ ಅಪ್ಪನ ತರಾನೇ ಯೆಹೋವ ದೇವರು ತುಂಬ ಕರುಣೆ ತೋರಿಸ್ತಾರೆ. ಯಾರೆಲ್ಲಾ ನಿಜವಾಗ್ಲೂ ಪಶ್ಚಾತ್ತಾಪ ಪಡ್ತಾರೋ ಅವರನ್ನ ದೇವರು ಧಾರಾಳವಾಗಿ ಕ್ಷಮಿಸುತ್ತಾರೆ.—ಲೂಕ 15:17-24.

7. ಕರುಣೆ ತೋರಿಸೋ ವಿಧದಿಂದ ಯೆಹೋವ ವಿವೇಕಿ ಅಂತ ಹೇಗೆ ಗೊತ್ತಾಗುತ್ತೆ?

7 ಯೆಹೋವ ದೇವರಿಗೆ ವಿವೇಕ ಇರೋದ್ರಿಂದ ಕರುಣೆ ತೋರಿಸ್ತಾರೆ. ಅವರು ಏನೇ ತೀರ್ಮಾನ ತಗೊಂಡ್ರೂ ಅದು ನಮ್ಮ ಒಳ್ಳೇದಕ್ಕೇ. ಅದಕ್ಕೆ “ಸ್ವರ್ಗದಿಂದ ಬರೋ ವಿವೇಕ ಯಾವಾಗ್ಲೂ ಕರುಣೆ ತೋರಿಸೋಕೆ ಮತ್ತು ಒಳ್ಳೇ ಕೆಲಸ ಮಾಡೋಕೆ ಸ್ಫೂರ್ತಿ ತುಂಬುತ್ತೆ” ಅಂತ ಬೈಬಲ್‌ ಹೇಳುತ್ತೆ. (ಯಾಕೋ. 3:17) ಪ್ರೀತಿಯ ಅಪ್ಪ-ಅಮ್ಮ ಮಕ್ಕಳಿಗೆ ಒಳ್ಳೇದಾಗಬೇಕು ಅಂತಾನೇ ಕರುಣೆ ತೋರಿಸ್ತಾರೆ. ಯೆಹೋವ ದೇವರೂ ಹಾಗೆನೇ. (ಕೀರ್ತ. 103:13; ಯೆಶಾ. 49:15) ದೇವರಿಗೆ ಕರುಣೆ ಇರೋದ್ರಿಂದಾನೇ ನಾವು ಅಪರಿಪೂರ್ಣರಾಗಿದ್ರೂ ‘ನಿಮಗೆ ಮುಂದೆ ಒಳ್ಳೇ ಭವಿಷ್ಯ ಕೊಡ್ತೀನಿ’ ಅಂತ ಮಾತುಕೊಟ್ಟಿದ್ದಾರೆ. ಯೆಹೋವ ವಿವೇಕಿ ಆಗಿರೋದ್ರಿಂದ ಸರಿಯಾದ ಕಾರಣ ಇದ್ದಾಗ ತಪ್ಪು ಮಾಡಿದವರಿಗೂ ಕರುಣೆ ತೋರಿಸ್ತಾರೆ. ಅದೇ ಸಮಯದಲ್ಲಿ ತಪ್ಪು ನಡೆದಾಗ ಅದನ್ನ ನೋಡಿನೂ ನೋಡದ ಹಾಗೆ ಇರಲ್ಲ.

8. ಪಶ್ಚಾತ್ತಾಪ ಪಡದ ವ್ಯಕ್ತಿಗೆ ಏನು ಮಾಡಬೇಕಾಗುತ್ತೆ ಮತ್ತು ಯಾಕೆ?

8 ಸಭೆಯಲ್ಲಿ ಒಬ್ಬ ವ್ಯಕ್ತಿ ಬೇಕುಬೇಕಂತ ತಪ್ಪು ಮಾಡಿದ್ರೆ ಏನು ಮಾಡಬೇಕು? “ಅವನ ಜೊತೆ ಸೇರೋದನ್ನ ಬಿಟ್ಟುಬಿಡಿ” ಅಂತ ಯೆಹೋವ ದೇವರು ಪೌಲನಿಂದ ಹೇಳಿಸಿದ್ರು. (1 ಕೊರಿಂ. 5:11) ಪಶ್ಚಾತ್ತಾಪ ಪಡದೇ ಇರುವವರನ್ನ ಸಭೆಯಿಂದ ಬಹಿಷ್ಕಾರ ಮಾಡಬೇಕು ಅನ್ನೋದು ಇದರರ್ಥ. ಹೀಗೆ ಮಾಡೋದರಿಂದ ಸಭೆಯಲ್ಲಿ ಇರುವವರನ್ನು ಕಾಪಾಡೋಕೆ ಆಗುತ್ತೆ ಮತ್ತು ಯೆಹೋವನ ನಿಯಮಗಳಿಗೆ ಬೆಲೆಕೊಟ್ಟ ಹಾಗಾಗುತ್ತೆ. ಆದ್ರೆ ಬಹಿಷ್ಕಾರ ಆದಾಗ ದೇವರು ಕರುಣೆ ತೋರಿಸಿಲ್ಲ ಅಂತ ಕೆಲವರಿಗೆ ಅನಿಸುತ್ತೆ. ಆದ್ರೆ ಅದೂ ಒಂದು ರೀತಿಯ ಕರುಣೆನೇ. ಹೇಗೆ?

ಶಿಸ್ತು ಕ್ರಮ ತಗೊಳ್ಳೋದು ಕರುಣೆ ಹೇಗಾಗುತ್ತೆ?

ಬೇರೆ ಕುರಿಗಳಿಂದ ದೂರ ಇಟ್ಟಿರೋ ಕಾಯಿಲೆ ಬಂದಿರೋ ಕುರಿಯನ್ನ ಕುರುಬ ಬಂದು ನೋಡುತ್ತಿದ್ದಾನೆ.

ಕಾಯಿಲೆ ಇರೋ ಕುರಿಯನ್ನು ಬೇರೆ ಇಟ್ರೂ ಕುರುಬ ಅದನ್ನ ಚೆನ್ನಾಗೇ ನೋಡಿಕೊಳ್ತಾನೆ (ಪ್ಯಾರ 9-11 ನೋಡಿ)

9-10. ಕರುಣೆ ಇರೋದರಿಂದಾನೇ ಬಹಿಷ್ಕಾರ ಮಾಡೋದು ಅಂತ ಇಬ್ರಿಯ 12:5, 6ರಿಂದ ಹೇಗೆ ಗೊತ್ತಾಗುತ್ತೆ? ಉದಾಹರಣೆ ಕೊಡಿ.

9 ಕೂಟಗಳಲ್ಲಿ ನಮ್ಮ ಸ್ನೇಹಿತರಲ್ಲಿ ಅಥವಾ ಸಂಬಂಧಿಕರಲ್ಲಿ ಒಬ್ಬರು “ಇನ್ನು ಮುಂದೆ ಯೆಹೋವನ ಸಾಕ್ಷಿ ಆಗಿರೋದಿಲ್ಲ” ಅನ್ನೋ ಪ್ರಕಟಣೆ ಕೇಳಿಸಿಕೊಂಡಾಗ ನಮಗೆ ತುಂಬ ಬೇಜಾರಾಗುತ್ತೆ. ಅವರನ್ನ ಬಹಿಷ್ಕಾರ ಮಾಡಬಾರದಿತ್ತು ಅಂತಾನೂ ನಮಗೆ ಅನಿಸಿಬಿಡಬಹುದು. ಆದ್ರೆ ಕರುಣೆ ಇರೋದರಿಂದಾನೇ ಹಿರಿಯರು ಬಹಿಷ್ಕಾರ ಮಾಡ್ತಾರೆ. ಅಷ್ಟೇ ಅಲ್ಲ, ಹಿರಿಯರಿಗೆ ವಿವೇಕ ಇರೋದರಿಂದ, ಆ ವ್ಯಕ್ತಿ ಮೇಲೆ ಪ್ರೀತಿ ಇರೋದರಿಂದ ಬಹಿಷ್ಕಾರ ಮಾಡ್ತಾರೆ. (ಜ್ಞಾನೋ. 13:24) ಬಹಿಷ್ಕಾರ ಮಾಡೋದರಿಂದ ತಪ್ಪು ಮಾಡಿರೋ ವ್ಯಕ್ತಿ ತಿದ್ದಿಕೊಳ್ಳೋಕೆ ಆಗುತ್ತಾ? ಆಗುತ್ತೆ. ಬಹಿಷ್ಕಾರ ಆಗಿರೋ ಎಷ್ಟೋ ಜನ ತಾವು ನಿಜವಾಗ್ಲೂ ದೊಡ್ಡ ತಪ್ಪು ಮಾಡಿದ್ದೀವಿ ಅಂತ ಅರ್ಥಮಾಡಿಕೊಂಡು ತಮ್ಮ ಮನಸ್ಸನ್ನ, ನಡತೆಯನ್ನ ಬದಲಾಯಿಸಿಕೊಂಡು ಯೆಹೋವನ ಹತ್ರ ವಾಪಸ್‌ ಬಂದಿದ್ದಾರೆ.—ಇಬ್ರಿಯ 12:5, 6 ಓದಿ.

10 ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಒಂದು ಕುರಿಗೆ ದೊಡ್ಡ ಕಾಯಿಲೆ ಬಂದಿದೆ ಅಂತ ಕುರುಬನಿಗೆ ಗೊತ್ತಾಗುತ್ತೆ. ಆಗ ಅವನು ಆ ಕುರಿಯನ್ನ ಉಳಿದ ಕುರಿಗಳಿಂದ ದೂರ ಇಡ್ತಾನೆ. ಕುರಿಗಳು ಯಾವಾಗಲೂ ಹಿಂಡಿನ ಜೊತೆ, ಬೇರೆ ಕುರಿಗಳ ಜೊತೆ ಇರೋಕೆ ಇಷ್ಟಪಡುತ್ತವೆ. ಹಾಗಾಗಿ ಹುಷಾರಿಲ್ಲದ ಕುರಿಯನ್ನ ಬೇರೆಮಾಡಿದ್ರೆ ಅದಕ್ಕೆ ಬೇಜಾರಾಗುತ್ತೆ. ಹಾಗಂತ ಕುರುಬನಿಗೆ ಕುರಿಯ ಮೇಲೆ ಕರುಣೆ ಇಲ್ಲ ಅಂತಾನಾ? ಇಲ್ಲ, ಅದು ಹಾಗಲ್ಲ. ಕಾಯಿಲೆ ಬಂದಿರೋ ಕುರಿಯನ್ನ ಬೇರೆ ಕುರಿಗಳ ಜೊತೆ ಸೇರಿಸಿಬಿಟ್ರೆ ಅವುಗಳಿಗೂ ಹುಷಾರಿಲ್ಲದೆ ಆಗುತ್ತೆ ಅಂತ ಕುರುಬನಿಗೆ ಗೊತ್ತು. ಬೇರೆ ಕುರಿಗಳನ್ನ ಕಾಪಾಡೋಕೆ ಈ ಕುರಿಯನ್ನ ಬೇರೆ ಇಡ್ತಾನೆ.—ಯಾಜಕಕಾಂಡ 13:3, 4 ಹೋಲಿಸಿ.

11. (ಎ) ಬಹಿಷ್ಕಾರ ಆಗಿರೋ ವ್ಯಕ್ತಿಯನ್ನ ಕಾಯಿಲೆ ಬಂದಿರೋ ಕುರಿಗೆ ಯಾಕೆ ಹೋಲಿಸಬಹುದು? (ಬಿ) ಬಹಿಷ್ಕಾರ ಆಗಿರೋ ವ್ಯಕ್ತಿಗೆ ಯೆಹೋವನ ಜೊತೆ ಇರೋ ಸಂಬಂಧ ಸರಿಮಾಡಿಕೊಳ್ಳೋಕೆ ಯಾವೆಲ್ಲಾ ಸಹಾಯಗಳಿವೆ?

11 ಬಹಿಷ್ಕಾರ ಆಗಿರೋ ವ್ಯಕ್ತಿ ಕಾಯಿಲೆ ಬಂದಿರೋ ಆ ಕುರಿಯ ತರ ಇರ್ತಾನೆ. ಯಾಕಂದ್ರೆ ಯೆಹೋವನ ಜೊತೆಗಿರೋ ಸಂಬಂಧ ಹಾಳಾಗಿರುತ್ತೆ. (ಯಾಕೋ. 5:14) ಅಂಟುರೋಗ ಇರೋ ವ್ಯಕ್ತಿಯಿಂದ ಆ ಕಾಯಿಲೆ ಬೇರೆಯವರಿಗೆ ಹೇಗೆ ಅಂಟುತ್ತೋ ಅದೇ ತರ ಯೆಹೋವನಿಂದ ದೂರ ಆಗಿರೋ ವ್ಯಕ್ತಿ ಜೊತೆ ಸೇರಿ ಬೇರೆಯವರು ದೇವರಿಂದ ದೂರ ಆಗಿಬಿಡಬಹುದು. ಅದಕ್ಕೆ ತಪ್ಪುಮಾಡಿರೋ ವ್ಯಕ್ತಿಯನ್ನ ಕೆಲವೊಮ್ಮೆ ಬೇರೆಯವರಿಂದ ದೂರ ಇಡಬೇಕಾಗುತ್ತೆ. ಈ ರೀತಿ ಯೆಹೋವ ತಪ್ಪುಮಾಡಿದವರ ವಿರುದ್ಧ ಶಿಸ್ತು ಕ್ರಮ ತಗೊಂಡು ನಿಯತ್ತಾಗಿ ಇರುವವರ ಮೇಲೆ ತುಂಬ ಪ್ರೀತಿ ಇದೆ ಅಂತ ತೋರಿಸಿಕೊಡ್ತಾರೆ. ಅಷ್ಟೇ ಅಲ್ಲ, ಬಹಿಷ್ಕಾರ ಮಾಡೋದರಿಂದ ತಪ್ಪುಮಾಡಿದ ವ್ಯಕ್ತಿ ಮನಸ್ಸು ಬದಲಾಯಿಸಿಕೊಂಡು ಪಶ್ಚಾತ್ತಾಪ ಪಡೋಕೂ ಸಹಾಯ ಆಗುತ್ತೆ. ಬಹಿಷ್ಕಾರ ಆಗಿರೋ ವ್ಯಕ್ತಿಗೆ ಯೆಹೋವನ ಜೊತೆ ಇರೋ ಸಂಬಂಧ ಸರಿಮಾಡಿಕೊಳ್ಳೋಕೆ ಯಾವೆಲ್ಲಾ ಸಹಾಯಗಳಿವೆ? ಅವರು ಕೂಟಗಳಿಗೆ ಬರಬಹುದು, ಅಲ್ಲಿ ಸಿಗೋ ಪುಸ್ತಕ, ಪತ್ರಿಕೆಗಳನ್ನ ತಗೊಬಹುದು. JW ಪ್ರಸಾರ ನೋಡಬಹುದು. ಅಷ್ಟೇ ಅಲ್ಲ, ಆ ವ್ಯಕ್ತಿ ಬದಲಾವಣೆ ಮಾಡೋದನ್ನ ನೋಡಿ ಹಿರಿಯರು ಅವನಿಗೆ ವೈಯಕ್ತಿಕವಾಗಿ ಸಲಹೆಗಳನ್ನ ಕೊಡ್ತಾರೆ.b

12. ಪಶ್ಚಾತ್ತಾಪ ಪಡದ ವ್ಯಕ್ತಿಗೆ ಹಿರಿಯರು ಹೇಗೆ ಪ್ರೀತಿ ಮತ್ತು ಕರುಣೆ ತೋರಿಸ್ತಾರೆ?

12 ಪಶ್ಚಾತ್ತಾಪ ಪಡದೇ ಇರುವವರನ್ನ ಮಾತ್ರ ಹಿರಿಯರು ಬಹಿಷ್ಕಾರ ಮಾಡ್ತಾರೆ. ತಪ್ಪು ಮಾಡಿದವರನ್ನ ಯೆಹೋವ ದೇವರು ‘ಸರಿಯಾದ ಪ್ರಮಾಣದಲ್ಲಿ ತಿದ್ದುತ್ತಾರೆ’ ಅನ್ನೋದನ್ನ ಹಿರಿಯರು ಮನಸ್ಸಲ್ಲಿಟ್ಟು ಚೆನ್ನಾಗಿ ಯೋಚನೆ ಮಾಡಿ ಬಹಿಷ್ಕಾರ ಮಾಡ್ತಾರೆ. (ಯೆರೆ. 30:11) ಹಿರಿಯರಿಗೆ ಸಭೆಯವರ ಮೇಲೆ ತುಂಬ ಪ್ರೀತಿ ಇರೋದರಿಂದ ಯೆಹೋವನ ಜೊತೆ ಸಭೆಯವರಿಗಿರೋ ಸಂಬಂಧ ಹಾಳಾಗದೇ ಇರೋ ತರ ನೋಡಿಕೊಳ್ತಾರೆ. ಕೆಲವೊಂದು ಸಲ ತಪ್ಪುಮಾಡಿದವನ ಮೇಲೆ ಇರೋ ಪ್ರೀತಿ ಮತ್ತು ಕರುಣೆಯಿಂದಾಗಿ ಅವನನ್ನು ಸ್ವಲ್ಪ ಸಮಯ ಸಭೆಯಿಂದ ದೂರ ಇಡ್ತಾರೆ.

13. ಕೊರಿಂಥ ಸಭೆಯಲ್ಲಿದ್ದ ಒಬ್ಬನಿಗೆ ಯಾಕೆ ಬಹಿಷ್ಕಾರ ಆಯ್ತು?

13 ಒಂದನೇ ಶತಮಾನದಲ್ಲಿ ತಪ್ಪುಮಾಡಿ ಪಶ್ಚಾತ್ತಾಪ ಪಡದ ವ್ಯಕ್ತಿಗೆ ಏನಾಯ್ತು ಅಂತ ನೋಡೋಣ. ಪೌಲನ ಸಮಯದಲ್ಲಿ ಕೊರಿಂಥ ಸಭೆಯಲ್ಲಿದ್ದ ಒಬ್ಬ ವ್ಯಕ್ತಿ ತಂದೆಯ ಹೆಂಡತಿಯನ್ನ ಇಟ್ಟುಕೊಂಡಿದ್ದ. ಇದು ತುಂಬ ನೀಚ ಕೆಲಸವಾಗಿತ್ತು. ಇಂಥ ಕೆಲಸ ಮಾಡಿದವರಿಗೆ ಯಾವ ಶಿಕ್ಷೆ ಕೊಡಬೇಕು ಅಂತ ಯೆಹೋವ ದೇವರು ಹಿಂದಿನ ಕಾಲದಲ್ಲೇ ಹೇಳಿದ್ರು. ಅದೇನಂದ್ರೆ: “ಒಬ್ಬನು ತಂದೆಯ ಹೆಂಡತಿ ಜೊತೆ ಸಂಬಂಧ ಇಟ್ಕೊಂಡ್ರೆ ಅವನು ತನ್ನ ತಂದೆಗೆ ಅವಮಾನ ಮಾಡಿದ್ದಾನೆ. ಪಾಪಮಾಡಿದ ಅವರಿಬ್ರನ್ನೂ ಸಾಯಿಸ್ಲೇಬೇಕು. ಅವ್ರ ಸಾವಿಗೆ ಅವರೇ ಕಾರಣ.” (ಯಾಜ. 20:11) ಹಾಗಂತ ಆ ವ್ಯಕ್ತಿನ ಸಾಯಿಸಬೇಕು ಅಂತ ಹೇಳೋ ಅಧಿಕಾರ ಪೌಲನಿಗೆ ಇರಲಿಲ್ಲ. ಬದಲಿಗೆ ಬಹಿಷ್ಕಾರ ಮಾಡೋಕೆ ಹೇಳಿದ. ಆ ವ್ಯಕ್ತಿಯಿಂದ ಇಡೀ ಸಭೆ ಮೇಲೆ ಕೆಟ್ಟ ಪ್ರಭಾವ ಬೀರುತ್ತಾ ಇತ್ತು. ಆ ಸಭೆಯಲ್ಲಿದ್ದ ಕೆಲವರಿಗಂತೂ ಅವನು ಮಾಡಿದ್ದು ದೊಡ್ಡ ತಪ್ಪಲ್ಲ ಅಂತ ಅನಿಸ್ತಿತ್ತು.—1 ಕೊರಿಂ. 5:1, 2, 13.

14. ಬಹಿಷ್ಕಾರ ಆದ ವ್ಯಕ್ತಿಗೆ ಪೌಲ ಹೇಗೆ ಕರುಣೆ ತೋರಿಸಿದ, ಯಾಕೆ? (2 ಕೊರಿಂಥ 2:5-8, 11)

14 ಸ್ವಲ್ಪ ಸಮಯ ಆದಮೇಲೆ ಆ ವ್ಯಕ್ತಿ ತಪ್ಪನ್ನ ತಿದ್ದಿಕೊಂಡು ಬದಲಾವಣೆ ಮಾಡಿಕೊಂಡಿದ್ದಾನೆ ಅಂತ ಪೌಲನಿಗೆ ಗೊತ್ತಾಯ್ತು. ಆ ವ್ಯಕ್ತಿ ಸಭೆಯ ಹೆಸರನ್ನ ಹಾಳುಮಾಡಿರಬಹುದು ನಿಜ, ಆದ್ರೆ ಇನ್ನೂ ಜಾಸ್ತಿ ಕಟ್ಟುನಿಟ್ಟು ಮಾಡೋದು ಬೇಡ ಅಂತ ಪೌಲನಿಗೆ ಅನಿಸ್ತು. ಅದಕ್ಕೆ ಆ ಸಭೆಯ ಹಿರಿಯರಿಗೆ “ನೀವೀಗ ಅವನನ್ನ ಮನಸಾರೆ ಕ್ಷಮಿಸಬೇಕು, ಸಮಾಧಾನ ಮಾಡಬೇಕು” ಅಂತ ಸಲಹೆಕೊಟ್ಟ. “ಇಲ್ಲಾಂದ್ರೆ ಅವನು ಇನ್ನೂ ದುಃಖದಲ್ಲಿ ಮುಳುಗಿ ಹೋಗಬಹುದು” ಅಂತ ಕಾರಣನೂ ಕೊಟ್ಟ. ಪೌಲನಿಗೆ ಪಶ್ಚಾತ್ತಾಪ ಪಟ್ಟ ಆ ವ್ಯಕ್ತಿ ಮೇಲೆ ಕರುಣೆ ಇತ್ತು. ಅದಕ್ಕೆ ಆ ವ್ಯಕ್ತಿ ತನ್ನ ತಪ್ಪಿನ ಬಗ್ಗೆನೇ ಯೋಚನೆ ಮಾಡ್ತಾ, ಕೊರಗುತ್ತಾ ಯೆಹೋವನಿಂದ ಇನ್ನೂ ದೂರ ಹೋಗಿಬಿಡಬಹುದು ಅನ್ನೋದನ್ನ ಮನಸ್ಸಲ್ಲಿಟ್ಟು ಪೌಲ ಹೀಗೆ ಹೇಳಿದ.—2 ಕೊರಿಂಥ 2:5-8, 11 ಓದಿ.

15. ಹಿರಿಯರು ಕಟ್ಟುನಿಟ್ಟಾಗಿದ್ರೂ ಹೇಗೆ ಕರುಣೆ ತೋರಿಸ್ತಾರೆ?

15 ಹಿರಿಯರು ಯೆಹೋವ ದೇವರ ತರಾನೇ ಪ್ರೀತಿ ಮತ್ತು ಕರುಣೆ ತೋರಿಸ್ತಾರೆ. ಅವರು ಅಗತ್ಯ ಬಂದಾಗ ಕಟ್ಟುನಿಟ್ಟಾಗಿ ಇರುತ್ತಾರೆ, ಅದೇ ಸಮಯದಲ್ಲಿ ಸಾಧ್ಯವಾದಷ್ಟು ಕರುಣೆಯನ್ನೂ ತೋರಿಸ್ತಾರೆ. ಒಂದುವೇಳೆ ತಪ್ಪು ಮಾಡಿದವರ ವಿರುದ್ಧ ಶಿಸ್ತು ಕ್ರಮ ತಗೊಳ್ಳದಿದ್ರೆ ಹಿರಿಯರು ಅವನಿಗೆ ಕರುಣೆ ತೋರಿಸದ ಹಾಗಾಗುತ್ತೆ. ಅವನು ಮಾಡಿದ್ದು ಸರಿ ಅಂತ ಒಪ್ಪಿಕೊಂಡ ಹಾಗೆ ಆಗಿಬಿಡುತ್ತೆ. ಹಾಗಾದ್ರೆ ಹಿರಿಯರು ಮಾತ್ರ ಕರುಣೆ ತೋರಿಸಿದ್ರೆ ಸಾಕಾ? ಇನ್ನೂ ಯಾರು ಕರುಣೆ ತೋರಿಸಬೇಕು?

ನಾವೆಲ್ಲರೂ ಕರುಣೆ ತೋರಿಸೋಕೆ ಯಾವುದು ಸಹಾಯ ಮಾಡುತ್ತೆ?

16. ಕರುಣೆ ತೋರಿಸದೇ ಇರುವವರಿಗೆ ಯೆಹೋವ ಏನು ಮಾಡ್ತಾರೆ ಅಂತ ಜ್ಞಾನೋಕ್ತಿ 21:13 ಹೇಳುತ್ತೆ?

16 ನಾವೆಲ್ಲರೂ ಯೆಹೋವ ದೇವರ ತರ ಬೇರೆಯವರಿಗೆ ಕರುಣೆ ತೋರಿಸಬೇಕು. ನಾವು ಕರುಣೆ ತೋರಿಸದೇ ಇದ್ರೆ ಯೆಹೋವ ನಮಗೆ ಕರುಣೆ ತೋರಿಸಲ್ಲ. (ಜ್ಞಾನೋಕ್ತಿ 21:13 ಓದಿ.) ದೇವರು ನಮ್ಮ ಪ್ರಾರ್ಥನೆ ಕೇಳದೇ ಇದ್ರೆ, ಕರುಣೆ ತೋರಿಸದೇ ಇದ್ರೆ ನಮಗೆ ಬೇಜಾರಾಗುತ್ತೆ ಅಲ್ವಾ? ಅದೇ ತರ ಸಹೋದರ ಸಹೋದರಿಯರು ತಮ್ಮ ನೋವನ್ನ ಹೇಳಿಕೊಳ್ಳುವಾಗ ನಾವು ಕೇಳಿಸಿಕೊಳ್ಳದೇ ಇದ್ರೆ ಅವರಿಗೂ ಬೇಜಾರಾಗುತ್ತೆ. ಅದಕ್ಕೆ ನಾವು ಯಾವಾಗಲೂ “ದೀನರ ಕೂಗಿಗೆ” ಕಿವಿಗೊಡಬೇಕು. ಅಷ್ಟೇ ಅಲ್ಲ “ದಯೆ ತೋರಿಸದ ವ್ಯಕ್ತಿಗೆ ತೀರ್ಪು ಆಗುವಾಗ ದಯೆ ಸಿಗಲ್ಲ” ಅನ್ನೋ ಮಾತನ್ನ ನೆನಪಿಡಬೇಕು. (ಯಾಕೋ. 2:13) ಒಂದಲ್ಲ ಒಂದಿನ ಬೇರೆಯವರು ನಮಗೆ ದಯೆ ತೋರಿಸಬೇಕಾದ ಪರಿಸ್ಥಿತಿ ಬಂದೇ ಬರುತ್ತೆ ಅನ್ನೋದನ್ನ ಮನಸ್ಸಲ್ಲಿಟ್ರೆ ಬೇರೆಯವರಿಗೆ ಕರುಣೆ ತೋರಿಸೋಕೆ ನಮಗೆ ಸುಲಭ ಆಗುತ್ತೆ. ಅದ್ರಲ್ಲೂ ಪಶ್ಚಾತ್ತಾಪ ಪಟ್ಟು ತಪ್ಪನ್ನ ತಿದ್ದಿಕೊಂಡು ಸಭೆಗೆ ವಾಪಸ್‌ ಬಂದಿರುವವರಿಗೆ ಕರುಣೆ ತೋರಿಸಲೇಬೇಕು.

17. ದಾವೀದ ಹೇಗೆ ಕರುಣೆ ತೋರಿಸಿದ?

17 ಕಟ್ಟುನಿಟ್ಟಾಗಿರದೆ ಕರುಣೆ ತೋರಿಸೋದು ಹೇಗಂತ ಬೈಬಲ್‌ ಉದಾಹರಣೆಗಳಿಂದ ಕಲಿಬಹುದು. ರಾಜ ದಾವೀದ ತುಂಬ ಸಲ ಬೇರೆಯವರಿಗೆ ಕರುಣೆ ತೋರಿಸಿದ್ದಾನೆ. ಸೌಲ ದಾವೀದನನ್ನ ಕೊಲ್ಲಬೇಕು ಅಂತ ಅವನ ಹಿಂದೆ ಬಿದ್ದಿದ್ರೂ ದಾವೀದ ‘ಇವನು ದೇವರು ನೇಮಿಸಿರೋ ರಾಜ’ ಅಂತ ಅವನಿಗೆ ಕರುಣೆ ತೋರಿಸಿದ. ಸೇಡು ತೀರಿಸೋಕೆ ಹೋಗಲಿಲ್ಲ.—1ಸಮು. 24:9-12, 18, 19.

18-19. ಯಾವ ಎರಡು ಸಂದರ್ಭಗಳಲ್ಲಿ ದಾವೀದ ಕರುಣೆ ತೋರಿಸಲಿಲ್ಲ?

18 ಆದ್ರೆ ದಾವೀದ ಕರುಣೆ ತೋರಿಸದೆ ಇದ್ದ ಸಂದರ್ಭಗಳೂ ಇದ್ದವು. ಉದಾಹರಣೆಗೆ ನಾಬಾಲ ಒಬ್ಬ ಮೂರ್ಖ ವ್ಯಕ್ತಿಯಾಗಿದ್ದ. ಅವನು ದಾವೀದನನ್ನ ಅವಮಾನ ಮಾಡಿದ. ತನಗೆ ಮತ್ತು ತನ್ನ ಸೇವಕರಿಗೆ ಆಹಾರ ಕೊಡಿ ಅಂತ ದಾವೀದ ಕೇಳಿದಾಗ ಕೊಡಲಿಲ್ಲ. ಇದರಿಂದ ದಾವೀದನಿಗೆ ಸಿಟ್ಟುಬಂತು ಮತ್ತು ಅವನು ನಾಬಾಲ ಮತ್ತು ಅವನ ಮನೆಯಲ್ಲಿರೋ ಗಂಡಸರನ್ನ ಕೊಲ್ಲೋಕೆ ಹೊರಟ. ಆದ್ರೆ ನಾಬಾಲನ ಹೆಂಡತಿ ಬುದ್ಧಿವಂತೆ ಆಗಿದ್ದಳು. ಅವಳು ತಾಳ್ಮೆ ಮತ್ತು ಬುದ್ಧಿವಂತಿಕೆ ಉಪಯೋಗಿಸುತ್ತಾ ಬೇಗನೆ ಬೇಕಾದ ಆಹಾರ ತಂದುಕೊಟ್ಟಳು. ಹೀಗೆ ನಾಬಾಲ ಮತ್ತು ಅವನ ಕುಟುಂಬವನ್ನ ದಾವೀದ ಕೊಲ್ಲದೆ ಬಿಟ್ಟುಬಿಟ್ಟ.—1 ಸಮು. 25:9-22, 32-35.

19 ಇನ್ನೊಂದು ಸಲ ಏನಾಯ್ತು ಅಂದ್ರೆ ಪ್ರವಾದಿ ನಾತಾನ ದಾವೀದನಿಗೆ ಬಡವನ ಕುರಿ ಕದ್ದ ಶ್ರೀಮಂತನ ಕಥೆ ಹೇಳಿದ. ಆಗ ದಾವೀದ “ಜೀವ ಇರೋ ಯೆಹೋವನ ಆಣೆ, ಹಾಗೆ ಮಾಡಿದವನು ಸಾಯ್ಲೇಬೇಕು!” ಅಂತ ಹೇಳಿದ. ಯಾರಾದ್ರೂ ಕುರಿ ಕದ್ದರೆ ಅದರ ನಾಲ್ಕು ಪಟ್ಟು ಪರಿಹಾರವನ್ನ ಕುರಿಯ ಯಜಮಾನನಿಗೆ ಕೊಡಬೇಕು ಅಂತ ಮೋಶೆಯ ನಿಯಮ ಪುಸ್ತಕ ಹೇಳಿತ್ತು. ಇದು ದಾವೀದನಿಗೆ ಚೆನ್ನಾಗಿ ಗೊತ್ತಿತ್ತು. (ವಿಮೋ. 22:1) ಆದ್ರೆ ನಿಯಮ ಪುಸ್ತಕದಲ್ಲಿ ಕುರಿಯನ್ನ ಕದ್ದವನನ್ನು ಸಾಯಿಸಬೇಕು ಅಂತೇನೂ ಹೇಳಿರಲಿಲ್ಲ. ಆದ್ರೆ ದಾವೀದ ತುಂಬ ಕಟ್ಟುನಿಟ್ಟಾಗಿ ತೀರ್ಪು ಹೇಳಿದ. ಆ ಕಥೆಯಲ್ಲಿದ್ದ ಶ್ರೀಮಂತನಿಗಿಂತ ದಾವೀದ ದೊಡ್ಡ ತಪ್ಪು ಮಾಡಿದ್ರೂ ಯೆಹೋವ ಅವನಿಗೆ ಕರುಣೆ ತೋರಿಸಿ ಕ್ಷಮಿಸಿದ್ರು. ಆದ್ರೆ ದಾವೀದ ಆ ಶ್ರೀಮಂತನ ವಿಷಯದಲ್ಲಿ ಕರುಣೆ ತೋರಿಸಲಿಲ್ಲ.—2 ಸಮು. 12:7-13.

ನಾತಾನನ ಕಥೆಯಲ್ಲಿದ್ದ ಶ್ರೀಮಂತನಿಗೆ ದಾವೀದ ಕರುಣೆ ತೋರಿಸಲಿಲ್ಲ (ಪ್ಯಾರ 19-20 ನೋಡಿ)d

20. ದಾವೀದನಿಂದ ನಮಗೇನು ಪಾಠ?

20 ದಾವೀದ ನಾಬಾಲನನ್ನ ಮತ್ತು ಅವನ ಮನೆಯಲ್ಲಿರೋ ಗಂಡಸರನ್ನ ಸಾಯಿಸೋದೇ ಸರಿ ಅಂತ ಯಾಕೆ ಅಂದುಕೊಂಡ? ಅವನಿಗೆ ತುಂಬ ಕೋಪ ಬಂದಿದ್ದರಿಂದ ಹಾಗೆ ಅಂದುಕೊಂಡ. ಆದ್ರೆ ನಾತಾನ ಹೇಳಿದ ಕಥೆಯಲ್ಲಿದ್ದ ಶ್ರೀಮಂತನನ್ನು ಕೊಂದುಬಿಡಬೇಕು ಅಂತ ಯಾಕೆ ಹೇಳಿದ? ಅಷ್ಟೊಂದು ಕರುಣೆ ಇದ್ದ ದಾವೀದ ಯಾಕೆ ಅಂಥ ಕಠಿಣ ತೀರ್ಪು ಕೊಟ್ಟ? ಯಾಕಂದ್ರೆ ಅವನು ಮಾಡಿದ ತಪ್ಪಿನಿಂದಾಗಿ ಮನಸಾಕ್ಷಿ ಚುಚ್ಚುತ್ತಿತ್ತು. ಅವನಿಗೆ ದೇವರ ಜೊತೆ ಒಳ್ಳೆ ಸಂಬಂಧ ಇರಲಿಲ್ಲ. ಇದರರ್ಥ ನಮಗೆ ದೇವರ ಜೊತೆ ಒಳ್ಳೆ ಸಂಬಂಧ ಇಲ್ಲ ಅಂದ್ರೆ ಬೇರೆಯವರ ಜೊತೆ ಒರಟಾಗಿ ನಡಕೊಂಡು ಬಿಡ್ತೀವಿ, ಅವರಿಗೆ ಕರುಣೆ ತೋರಿಸಲ್ಲ. ಅದಕ್ಕೆ ಯೇಸು ತನ್ನ ಶಿಷ್ಯರಿಗೆ “ಬೇರೆಯವ್ರಲ್ಲಿ ತಪ್ಪು ಹುಡುಕೋದನ್ನ ನಿಲ್ಲಿಸಿ, ಯಾಕಂದ್ರೆ ದೇವರು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ. ನೀವು ಬೇರೆಯವ್ರಲ್ಲಿ ತಪ್ಪು ಹುಡುಕಿದ್ರೆ ದೇವರೂ ನಿಮ್ಮಲ್ಲಿ ತಪ್ಪು ಹುಡುಕ್ತಾನೆ” ಅಂತ ಹೇಳಿದ್ರು. (ಮತ್ತಾ. 7:1, 2) ಹಾಗಾಗಿ ನಾವು ಯಾವಾಗಲೂ ಬೇರೆಯವರಲ್ಲಿ ತಪ್ಪನ್ನೇ ಹುಡುಕ್ತಾ ಇರಬಾರದು. ಜಾಸ್ತಿ ಕಟ್ಟುನಿಟ್ಟಾಗಿ ಇರಬಾರದು. ಯೆಹೋವ ದೇವರ ತರ ಕರುಣಾಮಯಿ ಆಗಿರಬೇಕು.

21-22. ನಾವು ಹೇಗೆಲ್ಲಾ ಕರುಣೆ ತೋರಿಸಬಹುದು?

21 ಕರುಣೆ ಅಂದ್ರೆ ಬರೀ ಅಯ್ಯೋ ಪಾಪ ಅನ್ನೋದು ಮಾತ್ರ ಅಲ್ಲ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡೋದು ಸೇರಿದೆ. ಹಾಗಾಗಿ ನಮ್ಮ ಕುಟುಂಬದವರಿಗೆ, ಸಭೆಯಲ್ಲಿ ಇರುವವರಿಗೆ, ಅಕ್ಕಪಕ್ಕದಲ್ಲಿ ಇರುವವರಿಗೆ ಏನಾದ್ರೂ ಸಹಾಯ ಬೇಕಾ ಅಂತ ಯಾವಾಗಲೂ ಯೋಚಿಸುತ್ತಾ ಇರಬೇಕು. ಆಗ ತುಂಬ ಜನರಿಗೆ ಸಹಾಯ ಬೇಕು ಅನ್ನೋದು ನಮಗೆ ಗೊತ್ತಾಗುತ್ತೆ. ಉದಾಹರಣೆಗೆ ನಮ್ಮ ಸಭೆಯಲ್ಲಿರೋ ಯಾರಿಗಾದ್ರೂ ಪ್ರೋತ್ಸಾಹದ ಅಗತ್ಯ ಇದ್ಯಾ? ಊಟಕ್ಕೆ ಏನಾದ್ರು ಕಷ್ಟ ಇದ್ಯಾ? ನಾವು ಅವರಿಗೆ ಏನಾದ್ರೂ ಸಹಾಯ ಮಾಡಬಹುದಾ? ಬಹಿಷ್ಕಾರ ಆಗಿ ಸಭೆಗೆ ಇತ್ತೀಚೆಗೆ ವಾಪಸ್‌ ಬಂದಿರೋ ಸಹೋದರ ಸಹೋದರಿಯರಿಗೆ ನಾವು ಸಹಾಯ ಮಾಡಬಹುದಾ? ಯೆಹೋವ ದೇವರ ಜೊತೆ ಮತ್ತೆ ಒಳ್ಳೆ ಸಂಬಂಧ ಬೆಳೆಸಿಕೊಳ್ಳೋಕೆ ಏನಾದ್ರೂ ಸಹಾಯ ಕೊಡಬಹುದಾ? ಸಿಹಿಸುದ್ದಿಯನ್ನ ಇನ್ನೂ ಜಾಸ್ತಿ ಜನರಿಗೆ ಸಾರಬಹುದಾ? ಹೀಗೆ ಸಾರೋದರಿಂದ ತುಂಬ ಜನರಿಗೆ ಕರುಣೆ ತೋರಿಸೋಕೆ ಆಗುತ್ತೆ.—ಯೋಬ 29:12, 13; ರೋಮ. 10:14, 15; ಯಾಕೋ. 1:27.

22 ಕರುಣೆ ತೋರಿಸೋಕೆ ನಮಗೆ ತುಂಬ ಅವಕಾಶಗಳಿವೆ. ನಾವು ಕರುಣೆ ತೋರಿಸಿದಾಗ ಯೆಹೋವ ದೇವರಿಗೆ ತುಂಬ ಖುಷಿ ಆಗುತ್ತೆ. ಯಾಕಂದ್ರೆ “ದೇವರು ಕರುಣಾಮಯಿ.”

ನಿಮ್ಮ ಉತ್ತರವೇನು?

  • ಯೆಹೋವ ದೇವರು ಯಾಕೆ ಕರುಣೆ ತೋರಿಸ್ತಾರೆ?

  • ಕರುಣೆ ಇರೋದರಿಂದಾನೇ ಬಹಿಷ್ಕಾರ ಮಾಡ್ತಾರೆ ಅಂತ ಹೇಗೆ ಹೇಳಬಹುದು?

  • ನಾವೆಲ್ಲರೂ ಕರುಣೆ ತೋರಿಸೋಕೆ ಯಾವುದು ಸಹಾಯ ಮಾಡುತ್ತೆ?

ಗೀತೆ 13 ಕೃತಜ್ಞತೆಯ ಪ್ರಾರ್ಥನೆ

a ಯೆಹೋವ ದೇವರಲ್ಲಿ ಕರುಣೆ ಅನ್ನೋ ಸುಂದರ ಗುಣ ಇದೆ. ನಾವೂ ಆ ಗುಣ ಬೆಳೆಸಿಕೊಳ್ಳಬೇಕು. ಯೆಹೋವ ದೇವರು ನಮಗೆ ಯಾಕೆ ಕರುಣೆ ತೋರಿಸ್ತಾರೆ? ಅವರು ನಮ್ಮ ಮೇಲೆ ಶಿಸ್ತು ಕ್ರಮ ತಗೊಳ್ಳೋದು ಆ ಕರುಣೆಯಿಂದಾನೇ ಅಂತ ಹೇಗೆ ಹೇಳಬಹುದು? ನಾವು ಹೇಗೆ ಕರುಣೆ ತೋರಿಸಬಹುದು? ಈ ಎಲ್ಲಾ ಪ್ರಶ್ನೆಗಳಿಗೂ ಈ ಲೇಖನದಲ್ಲಿ ಉತ್ತರ ತಿಳಿದುಕೊಳ್ಳೋಣ.

b ಯೆಹೋವನ ಹತ್ರ ವಾಪಸ್‌ ಬಂದವರು ಆತನ ಹತ್ರ ಒಳ್ಳೆ ಸಂಬಂಧ ಬೆಳೆಸಿಕೊಳ್ಳೋಕೆ ಏನು ಮಾಡಬೇಕು? ಅದಕ್ಕೆ ಹಿರಿಯರು ಹೇಗೆ ಸಹಾಯ ಮಾಡಬೇಕು? ಅನ್ನೋದನ್ನ “ಪುನಃ ಯೆಹೋವನ ಫ್ರೆಂಡ್‌ ಆಗಿ” ಅನ್ನೋ ಲೇಖನದಲ್ಲಿ ನೋಡಿ.

c ಚಿತ್ರ ವಿವರಣೆ: ಮನೆಬಿಟ್ಟು ಹೋದ ಮಗ ವಾಪಸ್‌ ಬರುತ್ತಾ ಇರೋದನ್ನ ಮಹಡಿ ಮೇಲೆ ನಿಂತಿರೋ ಅಪ್ಪ ನೋಡ್ತಿದ್ದಾರೆ. ಅವನನ್ನ ಅಪ್ಪಿಕೊಳ್ಳೋಕೆ ಓಡಿಹೋಗ್ತಿದ್ದಾರೆ.

d ಚಿತ್ರ ವಿವರಣೆ: ರಾಜ ದಾವೀದನ ಮನಸ್ಸು ಚುಚ್ಚುತ್ತಾ ಇದ್ದಿದ್ದರಿಂದ ನಾತಾನ ಹೇಳಿದ ಕಥೆಯಲ್ಲಿ ಇದ್ದ ಶ್ರೀಮಂತ ಸಾಯಲೇಬೇಕು ಅಂತ ಕೋಪದಿಂದ ಹೇಳ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ