ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ನವೆಂಬರ್‌ ಪು. 26-30
  • ಯೆಹೋವ ನನ್ನ ಕೈಬಿಡಲಿಲ್ಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ನನ್ನ ಕೈಬಿಡಲಿಲ್ಲ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಾನು ಯೆಹೋವನ ಮೇಲೆ ನಂಬಿಕೆ ಇಡೋಕೆ ಕಲಿತೆ
  • ಯೆಹೋವನನ್ನ ನಂಬಿ ಯುದ್ಧ ನಡೆದ ಜಾಗಕ್ಕೂ ಹೋದೆ
  • ನೈಜರ್‌ನಲ್ಲಿ ಹಿಂಸೆ ಬಂತು
  • “ಗಿನಿಯಲ್ಲಿ ಸೇವೆ ಹೇಗಾಗ್ತಿದೆ ಅಂತ ನಮಗಷ್ಟು ಗೊತ್ತಿಲ್ಲ”
  • ನಾನು, ನನ್ನ ಹೆಂಡ್ತಿ ಯೆಹೋವನ ಮೇಲೆ ನಂಬಿಕೆ ಇಟ್ವಿ
  • ಯೆಹೋವ ನಮನ್ನ ಕಾಪಾಡ್ತಾನೆ
  • ಸೇವೆ ಹೆಚ್ಚಿಸಲು ನಮಗಿರುವ ಅವಕಾಶಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ಆಧ್ಯಾತ್ಮಿಕ ವಾತಾವರಣದಲ್ಲಿ ಆಧ್ಯಾತ್ಮಿಕವಾಗಿ ಬೆಳೆದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ದೈವಿಕ ಸಂತೃಪ್ತಿಯು ನನ್ನನ್ನು ಪೋಷಿಸಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಸಹೋದರ ಸಹೋದರಿಯರ ನಂಬಿಕೆನ ನಾನು ನೋಡ್ದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ನವೆಂಬರ್‌ ಪು. 26-30
ಇಸ್ರೇಲ್‌ ಇಟಾಜೋಬಿ.

ಜೀವನ ಕಥೆ

ಯೆಹೋವ ನನ್ನ ಕೈಬಿಡಲಿಲ್ಲ

ಇಸ್ರೇಲ್‌ ಇಟಾಜೋಬಿ ಅವ್ರ ಮಾತಿನಲ್ಲಿ

ನನ್ನ ಜೀವನದ ಬಗ್ಗೆ ಜನ್ರು ಕೇಳಿದಾಗ “ನಾನು ಯೆಹೋವನ ಕೈಯಲ್ಲಿರೋ ಲಗೇಜ್‌” ಅಂತ ಹೇಳ್ತಾ ಇರ್ತೀನಿ. ಅಂದ್ರೆ, ನನ್ನ ಲಗೇಜನ್ನ ನನಗೆ ಬೇಕಾದಲ್ಲಿ ತಗೊಂಡು ಹೋಗೋ ತರನೇ ಯೆಹೋವ ಮತ್ತು ಆತನ ಸಂಘಟನೆ ನನ್ನನ್ನ ಉಪಯೋಗಿಸಬೇಕು ಅಂತ ಇಷ್ಟ ಪಡ್ತೀನಿ. ನನ್ನನ್ನ ಎಲ್ಲಿಗೆ ಕಳಿಸಿದ್ರೂ, ಯಾವಾಗ ಕಳಿಸಿದ್ರೂ ನಾನು ಅಲ್ಲಿಗೆ ಹೋಗೋಕೆ ರೆಡಿ ಇರ್ತೀನಿ. ಕೆಲವು ನೇಮಕಗಳು ಕಷ್ಟ ಇದ್ರೂ, ನನ್ನ ಜೀವಕ್ಕೆ ಅಪಾಯ ಇದ್ರೂ ನಾನು ಅದನ್ನ ಒಪ್ಕೊಂಡೆ. ನನ್ನ ಜೀವನದಲ್ಲಿ ಕಲಿತ ಒಂದು ವಿಷ್ಯ ಏನಂದ್ರೆ ನಾನು ಯೆಹೋವನನ್ನ ನಂಬಿದ್ರೆ ಆತನು ನನ್ನನ್ನ ಕಾಪಾಡ್ತಾನೆ. ಆತನು ಯಾವತ್ತೂ ನನ್ನ ಕೈಬಿಡಲ್ಲ.

ನಾನು ಯೆಹೋವನ ಮೇಲೆ ನಂಬಿಕೆ ಇಡೋಕೆ ಕಲಿತೆ

ನಾನು 1948ರಲ್ಲಿ ನೈಜೀರಿಯಾದ ನೈಋತ್ಯದಲ್ಲಿರೋ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿದೆ. ಆಗ ನಮ್ಮ ಚಿಕ್ಕಪ್ಪ ಮುಸ್ತಫಾ ಮತ್ತು ದೊಡ್ಡಣ್ಣ ವಹಾಬಿ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ತಗೊಂಡ್ರು. ನನಗೆ 9 ವರ್ಷ ಇದ್ದಾಗ ನಮ್ಮಪ್ಪ ತೀರಿಕೊಂಡ್ರು. ಆಗ ನನಗೆ ತುಂಬ ಬೇಜಾರಾಯ್ತು. ಆದ್ರೆ ಅಣ್ಣ ನನ್ನ ಹತ್ರ ಅಪ್ಪನ್ನ ಮತ್ತೆ ನೋಡೋಕಾಗುತ್ತೆ ಅಂತ ಹೇಳಿದಾಗ ಸಮಾಧಾನ ಆಯ್ತು. ಅದಕ್ಕೇ ನಾನು ಬೈಬಲ್‌ ಕಲಿಯೋಕೆ ಶುರು ಮಾಡಿದೆ. 1963ರಲ್ಲಿ ದೀಕ್ಷಾಸ್ನಾನ ತಗೊಂಡೆ. ಆಮೇಲೆ ನನ್ನ ತಮ್ಮ ಮತ್ತು ಇಬ್ರು ಅಣ್ಣಂದಿರು ದೀಕ್ಷಾಸ್ನಾನ ತಗೊಂಡ್ರು.

ನಮ್ಮಣ್ಣ ವಿಲ್ಸನ್‌, ಲಾಗೋಸ್‌ನಲ್ಲಿದ್ರು. 1965ರಲ್ಲಿ ನಾನು ಅಲ್ಲಿಗೆ ಹೋದೆ. ಇಗ್ಬೋಬಿ ಸಭೆಯಲ್ಲಿದ್ದ ಪಯನೀಯರರನ್ನ ಫ್ರೆಂಡ್ಸ್‌ ಮಾಡ್ಕೊಂಡೆ. ಅವರು ಪಯನೀಯರಿಂಗ್‌ ಮಾಡ್ತಾ ಖುಷಿಯಾಗಿ ಇದ್ದಿದ್ದನ್ನ ನೋಡಿದಾಗ ನಾನೂ ಪಯನೀಯರಿಂಗ್‌ ಶುರು ಮಾಡಬೇಕು ಅಂತ ಆಸೆ ಆಯ್ತು. ಅದಕ್ಕೇ ಜನವರಿ 1968ರಲ್ಲಿ ಪಯನೀಯರಿಂಗ್‌ ಶುರು ಮಾಡಿದೆ.

ಬೆತೆಲ್‌ನಲ್ಲಿ ಆಲ್ಬರ್ಟ್‌ ಓಲುಗ್‌ಬೇಬಿ ಅಂತ ಒಬ್ಬ ಸಹೋದರ ಇದ್ರು. ಅವರು ಎಲ್ಲಾ ಯುವ ಜನ್ರನ್ನ ಸೇರಿಸಿ ಒಂದು ಮೀಟಿಂಗ್‌ ಮಾಡಿದ್ರು. ಉತ್ತರ ನೈಜೀರಿಯಾದಲ್ಲಿ ವಿಶೇಷ ಪಯನೀಯರರ ಅಗತ್ಯ ಇದೆ ಅಂತ ಅವರು ಹೇಳಿದ್ರು. ಆ ಸಹೋದರ ಹೇಳಿದ್ದು ನನಗೆ ಈಗ್ಲೂ ನೆನಪಿದೆ. “ನೀವೆಲ್ಲ ಯುವಕರು, ನಿಮಗೆ ಯೆಹೋವನ ಸೇವೆ ಮಾಡೋಕೆ ತುಂಬ ಸಮಯ, ಶಕ್ತಿ ಇದೆ. ನೈಜೀರಿಯದಲ್ಲಿ ಸೇವೆ ಮಾಡೋ ಒಂದು ದೊಡ್ಡ ಅವಕಾಶದ ಬಾಗಿಲೇ ನಿಮ್ಮ ಮುಂದೆ ತೆರೆದಿದೆ” ಅಂತ ಹೇಳಿದ್ರು. ಪ್ರವಾದಿ ಯೆಶಾಯನ ತರ ನಾನೂ ಯೆಹೋವ ಕಳಿಸಿದಲ್ಲೆಲ್ಲ ಹೋಗೋಕೆ ರೆಡಿ ಇರ್ಬೇಕು ಅಂದ್ಕೊಂಡೆ. ಅದಕ್ಕೇ ವಿಶೇಷ ಪಯನೀಯರಿಂಗ್‌ ಅರ್ಜಿ ತುಂಬಿಸಿದೆ.—ಯೆಶಾ. 6:8.

ಮೇ 1968ರಲ್ಲಿ ಉತ್ತರ ನೈಜೀರಿಯದ ಕಾನೋ ಅನ್ನೋ ನಗರದಲ್ಲಿ ನನಗೆ ವಿಶೇಷ ಪಯನೀಯರ್‌ ಆಗಿ ನೇಮಕ ಸಿಕ್ತು. ಆಗ ಅಲ್ಲಿ ಬಿಯಾಫ್ರಾನ್‌ ಯುದ್ಧ ನಡೀತಿತ್ತು (1967-1970). ಈ ಯುದ್ಧದಿಂದ ಎಷ್ಟೋ ಜನ ನರಳಾಡಿ ತೀರಿಹೋದ್ರು. ಆದ್ರೆ ಆ ಯುದ್ಧ ಅಲ್ಲಿಗೇ ನಿಲ್ಲಲಿಲ್ಲ. ಪೂರ್ವ ಭಾಗದಲ್ಲೂ ಶುರುವಾಯ್ತು. ಅಲ್ಲಿ ಪರಿಸ್ಥಿತಿ ಚೆನ್ನಾಗಿ ಇಲ್ಲದೇ ಇದ್ದಿದ್ರಿಂದ ನನಗೆ ಏನಾಗುತ್ತೋ ಅಂತ ಒಬ್ಬ ಸಹೋದರನಿಗೆ ಭಯ ಇತ್ತು. ಅದಕ್ಕೇ ಅವರು ನನ್ನ ಹತ್ರ ಅಲ್ಲಿಗೆ ಹೋಗದೇ ಇದ್ರೆನೇ ಒಳ್ಳೇದು ಅಂತ ಹೇಳಿದ್ರು. ಆಗ ನಾನು ಆ ಸಹೋದರನಿಗೆ “ನೀವು ನನಗೆ ತೋರಿಸ್ತಿರೋ ಕಾಳಜಿಗೆ ತುಂಬ ಥ್ಯಾಂಕ್ಸ್‌ ಬ್ರದರ್‌, ಆದ್ರೆ ಯೆಹೋವನೇ ಅಲ್ಲಿಗೆ ಹೋಗು ಅಂದ್ಮೇಲೆ ನಾನ್ಯಾಕೆ ಹೆದರಬೇಕು? ಆತನು ಯಾವತ್ತೂ ನನ್ನ ಕೈಬಿಡಲ್ಲ. ನನ್ನ ಜೊತೆನೇ ಇರ್ತಾನೆ” ಅಂದೆ.

ದಕ್ಷಿಣ ಆಫ್ರಿಕಾದ ನಕ್ಷೆ. ಅದ್ರಲ್ಲಿ ಇಸ್ರೇಲ್‌ ಇಟಾಜೋಬಿ ಅವರು ಇದ್ದ ಜಾಗ ಮತ್ತು ಸೇವೆ ಮಾಡಿದ ಜಾಗ : ಕೊನಾಕ್ರಿ, ಗಿನಿ, ಸಿಯೆರಾ ಲಿಯೋನ್‌ , ನಿಯಾಮಿ, ನೈಜರ್‌ , ಕಾನೋ, ಆರಿಸುನ್‌ಬಾರೀ, ಲೇಗೊಸ್‌ ಮತ್ತು ನೈಜೀರಿಯ.

ಯೆಹೋವನನ್ನ ನಂಬಿ ಯುದ್ಧ ನಡೆದ ಜಾಗಕ್ಕೂ ಹೋದೆ

ಕಾನೋದಲ್ಲಿ ಯುದ್ಧದಿಂದ ಪರಿಸ್ಥಿತಿ ತುಂಬ ಹಾಳಾಗಿ ಹೋಗಿತ್ತು. ಸೇವೆ ಮಾಡ್ತಾ ದಾರೀಲಿ ಹೋಗುವಾಗ ಅಲ್ಲಿ ಹೆಣಗಳು ಬಿದ್ದಿದ್ದನ್ನ ನೋಡಿ ತುಂಬನೇ ಬೇಜಾರಾಗೋಯ್ತು. ಆ ನಗರದಲ್ಲಿ ತುಂಬ ಸಭೆಗಳಿತ್ತು. ಆದ್ರೆ ಈ ಘಟನೆಯಿಂದ ಎಷ್ಟೋ ಸಹೋದರರು ದಿಕ್ಕಾಪಾಲಾಗಿ ಹೋಗಿದ್ರು. ಅಲ್ಲಿ 15 ಪ್ರಚಾರಕರೂ ಇರ್ಲಿಲ್ಲ. ಅಲ್ಲಿದ್ದವ್ರೆಲ್ಲ ಹೆದರಿಕೊಂಡಿದ್ರು. ಏನು ಮಾಡಬೇಕು ಅಂತ ಗೊತ್ತಾಗದೇ ಬೇಜಾರಲ್ಲಿದ್ರು. ಆದ್ರೆ ನಾವು 6 ಜನ ವಿಶೇಷ ಪಯನೀಯರರು ಅಲ್ಲಿಗೆ ಬಂದಿದ್ದನ್ನ ನೋಡಿದಾಗ ಅವ್ರಿಗೆ ತುಂಬ ಖುಷಿ ಆಯ್ತು. ನಾವು ಅವ್ರಿಗೆ ಪ್ರೋತ್ಸಾಹ ಕೊಟ್ವಿ, ಸಮಾಧಾನ ಮಾಡಿದ್ವಿ. ಆಗ ಅವ್ರಿಗೆ ಸ್ವಲ್ಪ ಧೈರ್ಯ ಬಂತು. ನಾವು ಅವ್ರ ಜೊತೆ ಸೇರ್ಕೊಂಡು ಮೀಟಿಂಗ್‌ ಹೋಗೋಕೆ, ಸಿಹಿಸುದ್ದಿ ಸಾರೋಕೆ ಮತ್ತೆ ಶುರುಮಾಡಿದ್ವಿ. ಬ್ರಾಂಚ್‌ ಆಫೀಸ್‌ಗೆ ಪ್ರಕಾಶನಗಳು ಬೇಕು ಅಂತ ಆರ್ಡರ್‌ ಕಳಿಸಿದ್ವಿ, ಫೀಲ್ಡ್‌ ಸರ್ವಿಸ್‌ ರಿಪೋರ್ಟನ್ನೂ ಕಳಿಸೋಕೆ ಶುರು ಮಾಡಿದ್ವಿ.

ಸ್ಪೆಷಲ್‌ ಪಯನೀಯರರಾಗಿ ಹೋಗಿದ್ದ ನಾವೆಲ್ಲ ಹೌಸಾ ಭಾಷೆಯನ್ನ ಕಲಿತ್ವಿ. ಜನ ತಮ್ಮ ಮಾತೃಭಾಷೆಯಲ್ಲಿ ಸಿಹಿಸುದ್ದಿ ಕೇಳಿಸ್ಕೊಂಡಾಗ ತುಂಬ ಖುಷಿಪಟ್ರು. ಆದ್ರೆ ಧರ್ಮದ ಮೇಲೆ ತುಂಬ ಭಕ್ತಿ ಇದ್ದ ಜನ್ರಿಗೆ ಕೋಪ ಬರ್ತಿತ್ತು. ಹಾಗಾಗಿ ನಾವು ಹುಷಾರಾಗಿ ಸಾರಬೇಕಿತ್ತು. ಒಂದು ಸಲ ನಾನು ಮತ್ತು ಒಬ್ಬ ಬ್ರದರ್‌ ಸಾರ್ತಿದ್ದಾಗ ಒಬ್ಬ ವ್ಯಕ್ತಿ ಚಾಕು ಹಿಡ್ಕೊಂಡು ನಮ್ಮನ್ನ ಅಟ್ಟಿಸ್ಕೊಂಡು ಬಂದ. ನಾವು ಹೇಗೋ ಅಲ್ಲಿಂದ ತಪ್ಪಿಸ್ಕೊಂಡ್ವಿ. ಇಷ್ಟೆಲ್ಲ ಅಪಾಯಗಳಿದ್ರೂ ಯೆಹೋವ ನಮ್ಮನ್ನ ‘ಕಾಪಾಡಿದನು,’ ನಾವು ಮಾಡ್ತಿದ್ದ ಸೇವೆನ ಆಶೀರ್ವದಿಸಿದನು. ಅಲ್ಲಿ ತುಂಬ ಜನ ಪ್ರಚಾರಕರಾದ್ರು. (ಕೀರ್ತ. 4:8) ಈಗ ಕಾನೋದಲ್ಲಿ 500ಕ್ಕಿಂತ ಜಾಸ್ತಿ ಪ್ರಚಾರಕರಿದ್ದಾರೆ ಮತ್ತು 11 ಸಭೆಗಳಿವೆ.

ನೈಜರ್‌ನಲ್ಲಿ ಹಿಂಸೆ ಬಂತು

ನೈಜರಿನ ನಿಯಾಮಿಯಲ್ಲಿ ವಿಶೇಷ ಪಯನೀಯರ್‌ ಸೇವೆ

ನಾವು ಕಾನೋಗೆ ಬಂದು ಸ್ವಲ್ಪ ತಿಂಗಳಾದ್ಮೇಲೆ ಅಂದ್ರೆ ಆಗಸ್ಟ್‌ 1968ರಲ್ಲಿ ನೈಜರ್‌ನ ರಾಜಧಾನಿಯಾದ ನಿಯಾಮಿಗೆ ಕಳಿಸಿದ್ರು. ಆಗ ನನ್ನ ಜೊತೆ ಇನ್ನೂ ಇಬ್ರು ವಿಶೇಷ ಪಯನೀಯರರು ಇದ್ರು. ದಕ್ಷಿಣ ಆಫ್ರಿಕಾದ ಈ ನೈಜರ್‌ನಲ್ಲಿ ತುಂಬ ಬಿಸಿಲಿದೆ ಅಂತ ನಮಗೆ ಆಮೇಲೆ ಗೊತ್ತಾಯ್ತು. ನಾವು ಫ್ರೆಂಚ್‌ ಭಾಷೆನೂ ಕಲಿಬೇಕಿತ್ತು. ಇಷ್ಟೆಲ್ಲ ಕಷ್ಟಗಳಿದ್ರೂ ನಾವು ಯೆಹೋವನ ಮೇಲೆ ನಂಬಿಕೆಯಿಟ್ಟು ಸಿಹಿಸುದ್ದಿ ಸಾರೋಕೆ ಶುರುಮಾಡಿದ್ವಿ. ಅಲ್ಲಿ ಪ್ರಚಾರಕರು ತುಂಬ ಕಮ್ಮಿ ಇದ್ರು. ಅಲ್ಲಿಗೆ ಹೋದ ಸ್ವಲ್ಪದರಲ್ಲೇ ನಿತ್ಯಜೀವಕ್ಕೆ ನಡೆಸುವ ಸತ್ಯವು ಅನ್ನೋ ಪುಸ್ತಕ ಬಂತು. ಓದೋಕೆ ಬರ್ತಿದ್ದವ್ರಿಗೆ ನಾವು ಅದನ್ನ ಕೊಟ್ವಿ. ಇದನ್ನ ಓದೋಕಂತಾನೇ ತುಂಬ ಜನ ನಮ್ಮನ್ನ ಹುಡ್ಕೊಂಡು ಬರ್ತಿದ್ರು.

ಆದ್ರೆ ಅಲ್ಲಿನ ಅಧಿಕಾರಿಗಳಿಗೆ ಯೆಹೋವನ ಸಾಕ್ಷಿಗಳಂದ್ರೆ ಇಷ್ಟ ಇಲ್ಲ ಅಂತ ಆಮೇಲೆ ಗೊತ್ತಾಯ್ತು. ಜುಲೈ 1969ರಲ್ಲಿ ಮೊದಲನೇ ಸಲ ಆ ದೇಶದಲ್ಲಿ ಸರ್ಕಿಟ್‌ ಸಮ್ಮೇಳನ ನಡಿತು. ಅಲ್ಲಿಗೆ ಒಟ್ಟು 20 ಜನ ಬಂದಿದ್ರು. ಇಬ್ರು ಪ್ರಚಾರಕರು ದೀಕ್ಷಾಸ್ನಾನ ತಗೊಳ್ಳೋಕೆ ರೆಡಿ ಇದ್ರು. ಆ ಸಮ್ಮೇಳನದ ಮೊದಲನೇ ದಿನಾನೇ ಪೊಲೀಸರು ಅಲ್ಲಿಗೆ ಬಂದು ಸಮ್ಮೇಳನ ನಿಲ್ಲಿಸಿದ್ರು. ಆಮೇಲೆ ಎಲ್ಲಾ ವಿಶೇಷ ಪಯನೀಯರರನ್ನ ಮತ್ತು ಸರ್ಕಿಟ್‌ ಮೇಲ್ವಿಚಾರಕರನ್ನ ಸ್ಟೇಷನ್‌ಗೆ ಕರ್ಕೊಂಡು ಹೋದ್ರು. ನಮ್ಮನ್ನೆಲ್ಲ ವಿಚಾರಣೆ ಮಾಡಿದ ಮೇಲೆ ಮಾರನೇ ದಿನ ಮತ್ತೆ ಬರೋಕೆ ಹೇಳಿದ್ರು. ಮುಂದೆ ಏನಾದ್ರೂ ತೊಂದ್ರೆ ಆಗುತ್ತೆ ಅಂತ ನಮಗೆ ಗೊತ್ತಾದಾಗ ನಾವು ಒಂದು ಮನೇಲಿ ದೀಕ್ಷಾಸ್ನಾನದ ಭಾಷಣ ಕೊಡೋಕೆ ಏರ್ಪಾಡು ಮಾಡಿದ್ವಿ. ಆಮೇಲೆ ಯಾರಿಗೂ ಗೊತ್ತಾಗದ ಹಾಗೆ ಆ ಪ್ರಚಾರಕರಿಗೆ ಒಂದು ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದ್ವಿ.

ಕೆಲವು ವಾರಗಳಾದ್ಮೇಲೆ ಅಲ್ಲಿನ ಸರ್ಕಾರ ನನಗೆ ಮತ್ತು ನನ್ನ ಜೊತೆ ಇದ್ದ 5 ಪಯನೀಯರರಿಗೆ ಇನ್ನು 48 ಗಂಟೆಯೊಳಗೆ ಈ ದೇಶ ಬಿಟ್ಟುಹೋಗಬೇಕು ಅಂತ ಹೇಳಿದ್ರು. ನಾವು ನಮ್ಮ ಸ್ವಂತ ಖರ್ಚಲ್ಲೇ ಹೋಗಬೇಕಿತ್ತು. ಆದ್ರೂ ನಾವು ಅವ್ರ ಮಾತು ಕೇಳಿದ್ವಿ. ತಕ್ಷಣ ನಾವು ನೈಜೀರಿಯದ ಬ್ರಾಂಚ್‌ ಆಫೀಸಿಗೆ ಹೊರಟ್ವಿ. ಅಲ್ಲಿ ನಮಗೆ ಹೊಸ ನೇಮಕಗಳು ಸಿಕ್ತು.

ನೈಜಿರೀಯದಲ್ಲಿದ್ದ ಆರಿಸುನ್‌ಬಾರಿ ಅನ್ನೋ ಹಳ್ಳಿಗೆ ನನ್ನನ್ನ ಕಳಿಸಿದ್ರು. ಅಲ್ಲಿ ಪ್ರಚಾರಕರ ಒಂದು ಚಿಕ್ಕ ಗುಂಪಿತ್ತು. ಅವ್ರ ಜೊತೆ ನಾನು ಚೆನ್ನಾಗಿ ಸೇವೆ ಮಾಡಿದೆ. ಬೈಬಲ್‌ ಸ್ಟಡಿಗಳೂ ಸಿಕ್ತು. ಆದ್ರೆ 6 ತಿಂಗಳಾದ್ಮೇಲೆ ಬ್ರಾಂಚ್‌ ನನಗೆ ನೈಜರ್‌ಗೆ ಮತ್ತೆ ವಾಪಸ್‌ ಹೋಗೋಕೆ ಹೇಳ್ತು. ಆಗ ನನಗೆ ಭಯ ಆಯ್ತು. ಅಲ್ಲಿ ಹೇಗಪ್ಪಾ ಸೇವೆ ಮಾಡೋದು ಅಂತ ಅನಿಸ್ತು. ಆದ್ರೂ ಅಲ್ಲಿರೋ ಸಹೋದರರನ್ನ ನೋಡಬೇಕು ಅನ್ನೋ ಆಸೆಯಿಂದ ಹೊರಟೆ.

ನಾನು ನಿಯಾಮಿಗೆ ಹೋದ ಮಾರನೇ ದಿನಾನೇ ಒಬ್ಬ ಬಿಸ್‌ನೆಸ್‌ಮ್ಯಾನ್‌ ನನ್ನ ಹತ್ರ ಬಂದು ಮಾತಾಡಿದ. ನಾನು ಯೆಹೋವನ ಸಾಕ್ಷಿ ಅಂತ ಅವನಿಗೆ ಗೊತ್ತಾಯ್ತು. ಅದಕ್ಕೆ ಬೈಬಲ್‌ ಬಗ್ಗೆ ತುಂಬ ಪ್ರಶ್ನೆಗಳನ್ನ ಕೇಳಿದ. ಅವನು ಬೈಬಲ್‌ ಕಲಿಯೋ ಮುಂಚೆ ತುಂಬ ಕುಡೀತಿದ್ದ, ಸಿಗರೇಟ್‌ ಸೇದುತ್ತಿದ್ದ. ಆದ್ರೆ ದೀಕ್ಷಾಸ್ನಾನ ತಗೊಳ್ಳೋಷ್ಟರಲ್ಲಿ ಅದನ್ನೆಲ್ಲ ಬಿಟ್ಟುಬಿಟ್ಟ. ನಾನು ಸಹೋದರ ಸಹೋದರಿಯರ ಜೊತೆ ನೈಜರ್‌ನ ಬೇರೆ ಬೇರೆ ಜಾಗಗಳಿಗೆ ಹೋಗಿ ಸಿಹಿಸುದ್ದಿ ಸಾರಿದೆ. ಮೊದಮೊದಲು ಅಲ್ಲಿ ಜಾಸ್ತಿ ಜನ ಸತ್ಯ ಕಲೀಲಿಲ್ಲ. ಆದ್ರೆ ಹೋಗ್ತಾ ಹೋಗ್ತಾ ತುಂಬ ಜನ ಕಲಿತ್ರು. ನಾನು ಆ ದೇಶಕ್ಕೆ ಹೋದಾಗ ಬರೀ 31 ಜನ ಯೆಹೋವನ ಸಾಕ್ಷಿಗಳಿದ್ರು. ಆದ್ರೆ ಅಲ್ಲಿಂದ ನಾನು ವಾಪಸ್‌ ಬರುವಾಗ 69 ಜನ ಆದ್ರು.

“ಗಿನಿಯಲ್ಲಿ ಸೇವೆ ಹೇಗಾಗ್ತಿದೆ ಅಂತ ನಮಗಷ್ಟು ಗೊತ್ತಿಲ್ಲ”

1977ರ ಡಿಸೆಂಬರ್‌ನಲ್ಲಿ ನಾನು ಒಂದು ತರಬೇತಿಗಾಗಿ ನೈಜೀರಿಯಾಗೆ ವಾಪಸ್‌ ಹೋದೆ. ಆ ಕೋರ್ಸ್‌ ಮೂರು ವಾರ ಇತ್ತು. ಇದು ಮುಗಿದ ಮೇಲೆ ಸಿಯೆರಾ ಲಿಯೋನ್‌ ಬ್ರಾಂಚಿಂದ ಬಂದ ಪತ್ರ ಓದೋಕೆ ನೈಜೀರಿಯ ಬ್ರಾಂಚ್‌ ಕಮಿಟಿಯ ಸಂಯೋಜಕರಾದ ಮಾಲ್ಕಮ್‌ ವಿಗೋ ನಂಗೆ ಕೊಟ್ರು. ಆ ಪತ್ರದಲ್ಲಿ, ಗಿನಿಯಲ್ಲಿ ಸರ್ಕಿಟ್‌ ಮೇಲ್ವಿಚಾರಕರಾಗೋಕೆ ಒಬ್ಬ ಪಯನೀಯರ್‌ ಬ್ರದರ್‌ ಬೇಕು. ಅವ್ರಿಗೆ ಒಳ್ಳೇ ಆರೋಗ್ಯ ಇರ್ಬೇಕು. ಅಷ್ಟೇ ಅಲ್ಲ, ಇಂಗ್ಲಿಷ್‌ ಮತ್ತು ಫ್ರೆಂಚ್‌ ಭಾಷೆ ಗೊತ್ತಿರಬೇಕು ಅಂತಿತ್ತು. ಪತ್ರ ಓದಾದ್ಮೇಲೆ ನನಗೆ ಆ ತರಬೇತಿ ಕೊಟ್ಟಿದ್ದು ಇದಕ್ಕೇ ಆಗಿತ್ತು ಅಂತ ವಿಗೋ ಬ್ರದರ್‌ ಹೇಳಿದ್ರು. ಈ ನೇಮಕ ಅಷ್ಟು ಸುಲಭ ಅಲ್ಲ, ಹಾಗಾಗಿ “ನಿರ್ಧಾರ ಮಾಡೋ ಮುಂಚೆ ಸ್ವಲ್ಪ ಯೋಚ್ನೆ ಮಾಡಿ ನೋಡು” ಅಂತ ಹೇಳಿದ್ರು. ಆಗ ನಾನು ತಕ್ಷಣ “ಯೆಹೋವನೇ ನನ್ನನ್ನ ಕಳಿಸ್ತಿದ್ದಾನೆ ಅಂದ್ಮೇಲೆ ನಾನು ಹೋಗೋಕೆ ರೆಡಿ ಇದ್ದೀನಿ” ಅಂತ ಹೇಳಿಬಿಟ್ಟೆ.

ಆಮೇಲೆ ನಾನು ಸಿಯೆರಾ ಲಿಯೋನ್‌ ಬ್ರಾಂಚಿಗೆ ಹೋದೆ. ಅಲ್ಲಿನ ಬ್ರಾಂಚ್‌ ಕಮಿಟಿಯ ಒಬ್ಬ ಸಹೋದರ ನನ್ನ ಹತ್ರ ಬಂದು “ಗಿನಿಯಲ್ಲಿ ಸೇವೆ ಹೇಗಾಗ್ತಿದೆ ಅಂತ ನಮಗಷ್ಟು ಗೊತ್ತಿಲ್ಲ” ಅಂದ್ರು. ಅಲ್ಲಿ ಸೇವೆ ಹೇಗೆ ನಡಿತಿದೆ ಅಂತ ತಿಳ್ಕೊಳ್ಳೋದು ಬ್ರಾಂಚ್‌ ಜವಾಬ್ದಾರಿನೇ ನಿಜ. ಆದ್ರೆ ಅಲ್ಲಿನ ರಾಜಕೀಯದಲ್ಲಿ ತುಂಬ ಸಮಸ್ಯೆಗಳಿದ್ದಿದ್ರಿಂದ ನಮ್ಮ ಸಹೋದರರಿಗೆ ಅಲ್ಲಿನ ಪ್ರಚಾರಕರನ್ನ ಸಂಪರ್ಕಿಸೋಕೆ ಆಗ್ತಿರಲಿಲ್ಲ. ನಮ್ಮ ಸಹೋದರರನ್ನ ಅಲ್ಲಿಗೆ ಕಳಿಸಬೇಕು ಅಂತ ತುಂಬ ಸಲ ಪ್ರಯತ್ನ ಮಾಡ್ತಿದ್ರು ಆದ್ರೆ ಆಗಿರಲಿಲ್ಲ. ಅದಕ್ಕೇ ಈ ಸಲ ನನ್ನನ್ನ ಗಿನಿಯ ರಾಜಧಾನಿಯಾದ ಕೊನಾಕ್ರಿಗೆ ಹೋಗಿ, ಅಲ್ಲಿ ಉಳ್ಕೊಳ್ಳೋಕೆ ಸರ್ಕಾರದಿಂದ ಅನುಮತಿ ಪಡಿಯೋಕೆ ಹೇಳಿದ್ರು.

“ಯೆಹೋವನೇ ನನ್ನನ್ನ ಕಳಿಸ್ತಿದ್ದಾನೆ ಅಂದ್ಮೇಲೆ ನಾನು ಹೋಗೋಕೆ ರೆಡಿ ಇದ್ದೀನಿ”

ನಾನು ಕೊನಾಕ್ರಿಗೆ ಬಂದಾಗ ನೈಜೀರಿಯಾದ ಅಂಬಾಸಿಡರನ್ನ (ರಾಯಭಾರಿಯನ್ನ) ಭೇಟಿ ಮಾಡಿದೆ. ನಾನು ಗಿನಿಯಲ್ಲಿ ಸಾರಬೇಕು ಅಂತ ಅವ್ರ ಹತ್ರ ಹೇಳಿದೆ. ಆದ್ರೆ ಜನ ನನಗೇನಾದ್ರೂ ತೊಂದ್ರೆ ಮಾಡಬಹುದು ಅಥವಾ ಪೊಲೀಸ್‌ ನನ್ನನ್ನ ಅರೆಸ್ಟ್‌ ಮಾಡಬಹುದು ಅಂದ್ಕೊಂಡು ಅವರು “ನೈಜೀರಿಯಾಗೆ ವಾಪಸ್‌ ಹೋಗಿ ಅಲ್ಲಿ ನೀನು ಸಾರು” ಅಂದ್ರು. ಆದ್ರೆ ನಾನು ಅವ್ರಿಗೆ “ನಾನು ಇಲ್ಲೇ ಸಾರಬೇಕು ಅಂತ ತೀರ್ಮಾನ ಮಾಡಿದ್ದೀನಿ” ಅಂದೆ. ಅದಕ್ಕೇ ಅವರು ಗಿನಿಯದ ಮಂತ್ರಿಗೆ ಪತ್ರ ಬರೆದು ನನಗೆ ಸಹಾಯ ಮಾಡೋಕೆ ಹೇಳಿದ್ರು. ಆ ಮಂತ್ರಿ ನನಗೆ ಅಲ್ಲಿ ಉಳ್ಕೊಳ್ಳೋಕೆ ಸಹಾಯ ಮಾಡಿದ್ರು.

ಸ್ವಲ್ಪ ಹೊತ್ತಾದ್ಮೇಲೆ ನಾನು ಸಿಯೆರಾ ಲಿಯೋನ್‌ ಬ್ರಾಂಚಿಗೆ ಹೋಗಿ ನಡೆದಿದ್ದನ್ನೆಲ್ಲ ಹೇಳಿದೆ. ಆಗ ಸಹೋದರರಿಗೆ ತುಂಬ ಖುಷಿ ಆಯ್ತು. ನಾನು ಹೋಗೋ ಮುಂಚೆನೇ ಯೆಹೋವ ನನ್ನ ದಾರಿನ ಹೇಗೆ ರೆಡಿ ಮಾಡಿ ಇಟ್ಟಿದ್ರು ಅಂತ ಕೇಳಿ ಅವ್ರಿಗೆ ಆಶ್ಚರ್ಯ ಆಯ್ತು.

ಇಸ್ರೇಲ್‌ ಖುಷಿಯಿಂದ ತನ್ನ ಬ್ಯಾಗ್‌ ಹೊತ್ಕೊಂಡು ಹೋಗ್ತಿದ್ದಾರೆ .

ಸಿಯೆರಾ ಲಿಯೋನಿನಲ್ಲಿ ಸರ್ಕಿಟ್‌ ಸೇವೆ

1978ರಿಂದ 1989ರ ತನಕ ಗಿನಿ ಮತ್ತು ಸಿಯೆರಾ ಲಿಯೋನ್‌ನಲ್ಲಿ ಸರ್ಕಿಟ್‌ ಮೇಲ್ವಿಚಾರಕನಾಗಿ ಸೇವೆ ಮಾಡಿದೆ. ಲೈಬೀರಿಯಾದಲ್ಲಿ ಸಹಾಯಕ ಸರ್ಕಿಟ್‌ ಮೇಲ್ವಿಚಾರಕನಾಗಿ ಸೇವೆ ಮಾಡಿದೆ. ಅಲ್ಲಿ ಹೋದ ಹೊಸದ್ರಲ್ಲಿ ನನಗೆ ಆಗಾಗ ಹುಷಾರು ತಪ್ತಿತ್ತು. ಅಲ್ಲಿ ಆಸ್ಪತ್ರೆಗಳು ಕೂಡ ಇರ್ಲಿಲ್ಲ. ಆದ್ರೆ ಸಹೋದರರು ಹೇಗಾದ್ರೂ ಮಾಡಿ ನನ್ನನ್ನ ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ರು.

ಒಂದು ಸಲ ಮಲೇರಿಯದಿಂದ ನನಗೆ ತುಂಬ ಹುಷಾರಿಲ್ಲದ ಹಾಗಾಯ್ತು. ಕರುಳಲ್ಲಿ ಜಂತುಹುಳಗಳಾಯ್ತು. ಆಗ ಸಹೋದರರು ನಾನಿನ್ನು ಬದುಕಲ್ವೇನೋ ಅಂದ್ಕೊಂಡು ನನ್ನನ್ನ ಎಲ್ಲಿ ಮಣ್ಣು ಮಾಡೋದು ಅಂತ ಮಾತಾಡ್ಕೊಳ್ತಿದ್ರಂತೆ. ಆದ್ರೆ ನಾನು ನಿಧಾನವಾಗಿ ಚೇತರಿಸ್ಕೊಂಡೆ. ನನ್ನ ಪ್ರಾಣಕ್ಕೆ ಇಷ್ಟೆಲ್ಲ ಅಪಾಯ ಬಂದ್ರೂ ನೇಮಕ ಬಿಟ್ಟುಹೋಗೋದ್ರ ಬಗ್ಗೆ ಯೋಚ್ನೆನೇ ಮಾಡಲಿಲ್ಲ. ಯಾಕಂದ್ರೆ ಯೆಹೋವ ನನ್ನನ್ನ ಕಾಪಾಡ್ತಾನೆ ಅಂತ ಗೊತ್ತಿತ್ತು. ಒಂದುವೇಳೆ ನಾನು ಸತ್ರೂ ಆತನು ನನ್ನನ್ನ ಎಬ್ಬಿಸ್ತಾನೆ ಅನ್ನೋ ಗ್ಯಾರಂಟಿ ನನಗಿತ್ತು.

ನಾನು, ನನ್ನ ಹೆಂಡ್ತಿ ಯೆಹೋವನ ಮೇಲೆ ನಂಬಿಕೆ ಇಟ್ವಿ

ಇಸ್ರೇಲ್‌ ಮತ್ತು ದೊರ್ಕಾ ಅವರ ಮದುವೆ ದಿನ .

1988ರಲ್ಲಿ ನಾವು ಮದುವೆ ಆದ್ವಿ

ನಾನು 1988ರಲ್ಲಿ ದೊರ್ಕಾನ ನೋಡ್ದೆ. ಅವಳಿಗೆ ತುಂಬ ದೀನತೆ ಇತ್ತು. ಯೆಹೋವ ಅಂದ್ರೆ ತುಂಬ ಇಷ್ಟ ಇತ್ತು. ಅವಳು ಪಯನೀಯರ್‌ ಆಗಿದ್ದಳು. ಆಮೇಲೆ ನಾವು ಮದುವೆ ಆಗಿ ಒಟ್ಟಿಗೆ ಸರ್ಕಿಟ್‌ ಕೆಲಸ ಶುರು ಮಾಡಿದ್ವಿ. ಎಷ್ಟೇ ಕಷ್ಟ ಆದ್ರೂ ಅವಳು ಯೆಹೋವನ ಸೇವೆ ಬಿಡಲಿಲ್ಲ, ತುಂಬ ತ್ಯಾಗ ಮಾಡಿದಳು. ನನಗೆ ಒಳ್ಳೇ ಹೆಂಡತಿ ಆಗಿದ್ದಳು. ನಾವಿಬ್ರೂ ಕೆಲವು ಸಭೆಗಳಿಗೆ ಹೋಗಬೇಕಿದ್ರೆ, 25 ಕಿಲೋಮೀಟಿರ್‌ ಬ್ಯಾಗ್‌ ಹೊತ್ಕೊಂಡು ನಡ್ಕೊಂಡೇ ಹೋಗ್ತಿದ್ವಿ. ಒಂದುವೇಳೆ ಸಭೆಗಳು ಅದಕ್ಕಿಂತ ದೂರ ಇದ್ರೆ ಯಾವುದಾದ್ರೂ ಗಾಡಿ ಹತ್ಕೊಂಡು ಹೋಗ್ತಿದ್ವಿ. ಆ ರೋಡಗಳಲ್ಲಂತೂ ತುಂಬ ಕೆಸರು ಇರ್ತಿತ್ತು, ಗುಂಡಿಗಳೂ ಇರ್ತಿತ್ತು.

ದೊರ್ಕಾಗೆ ತುಂಬ ಧೈರ್ಯ ಇತ್ತು. ನಾವು ಆಗಾಗ ಮೊಸಳೆಗಳಿದ್ದ ನದಿಗಳನ್ನ ದಾಟಿ ಹೋಗಬೇಕಿತ್ತು. ಒಂದಿನ ಏನಾಯ್ತು ಗೊತ್ತಾ? ನಾವು 5 ದಿನ ಪ್ರಯಾಣ ಮಾಡಿ ಒಂದು ಊರಿಗೆ ಹೋಗ್ತಾ ಇದ್ವಿ. ಆಗ ಮೊಸಳೆಗಳು ತುಂಬ್ಕೊಂಡಿದ್ದ ಒಂದು ನದಿಯ ಸೇತುವೆ ಮುರಿದುಹೋಗಿದ್ರಿಂದ ನಾವು ದೋಣಿಯಲ್ಲಿ ಹೋಗಬೇಕಾಯ್ತು. ದೋಣಿಯಿಂದ ಇಳಿಯುವಾಗ ದೊರ್ಕ ನೀರಲ್ಲಿ ಬಿದ್ದುಬಿಟ್ಟಳು. ಆಗ ನನಗೆ ತುಂಬ ಭಯ ಆಯ್ತು. ನಮ್ಮಿಬ್ರಿಗೂ ಈಜು ಬರದೇ ಇದ್ದಿದ್ದಕ್ಕೆ ಅಲ್ಲಿದ್ದ ಕೆಲವು ಗಂಡಸ್ರು ನೀರೊಳಗೆ ಧುಮುಕಿ ಅವಳನ್ನ ಕಾಪಾಡಿದ್ರು. ಇದಾದ್ಮೇಲೆ ನಮ್ಮಿಬ್ರಿಗೂ ಈ ಘಟನೆ ಯಾವಾಗ್ಲೂ ಕನಸಲ್ಲಿ ಬರ್ತಿತ್ತು, ಆವಾಗೆಲ್ಲ ನಾವು ತುಂಬ ಹೆದರಿಕೊಳ್ತಿದ್ವಿ. ಆದ್ರೂ ನಾವು ಯೆಹೋವನ ಸೇವೆ ಮಾತ್ರ ಬಿಡ್ಲಿಲ್ಲ.

ರಾಜ್ಯ ಸಭಾಗೃಹದ ಮುಂದೆ ಮಗಳು ಜಾಗಿಫ್ಟ್‌ ಮತ್ತು ಮಗ ಎರಿಕ್‌

ಜಾಗಿಫ್ಟ್‌ ಮತ್ತು ಎರಿಕ್‌ ಯೆಹೋವ ನಮಗೆ ಕೊಟ್ಟಿರೋ ಗಿಫ್ಟ್‌

1992ರ ಶುರುವಿನಲ್ಲಿ ದೊರ್ಕ ಗರ್ಭಿಣಿಯಾಗಿದ್ದಾಳೆ ಅಂತ ಗೊತ್ತಾಯ್ತು. ಆಗ ನಾವು ವಿಶೇಷ ಪಯನೀಯರ್‌ ಸೇವೆ ಮಾಡಬೇಕಾ, ಬಿಡಬೇಕಾ ಅಂತ ಗೊಂದಲ ಆಯ್ತು. ಆದ್ರೆ “ಮಕ್ಕಳು ಯೆಹೋವ ಕೊಡೋ ಗಿಫ್ಟ್‌” ಅಂತ ಯೋಚಿಸಿದ್ವಿ. ಅದಕ್ಕೇ ನಮ್ಮ ಮಗಳಿಗೆ ಜಾಗಿಫ್ಟ್‌ ಅಂತ ಹೆಸ್ರಿಟ್ವಿ. ಅವಳು ಹುಟ್ಟಿ 4 ವರ್ಷ ಆದ್ಮೇಲೆ ಎರಿಕ್‌ ಹುಟ್ಟಿದ. ನಮ್ಮ ಇಬ್ರೂ ಮಕ್ಕಳು ಯೆಹೋವನಿಂದ ಸಿಕ್ಕಿರೋ ಒಂದು ದೊಡ್ಡ ಗಿಫ್ಟ್‌. ನಮ್ಮ ಮಗಳು ಜಾಗಿಫ್ಟ್‌ ಸ್ವಲ್ಪ ಸಮಯದ ತನಕ ಕೊನಾಕ್ರಿಯಲ್ಲಿದ್ದ ಭಾಷಾಂತರ ಕಛೇರಿಯಲ್ಲಿ ಸೇವೆ ಮಾಡಿದಳು. ನಮ್ಮ ಮಗ ಎರಿಕ್‌ ಈಗ ಸಹಾಯಕ ಸೇವಕ ಆಗಿದ್ದಾನೆ.

ತಮ್ಮ ಮಗ ಎರಿಕ್‌ ಮತ್ತು ಮಗಳು ಜಾಗಿಫ್ಟ್‌ ಜೊತೆ ಇಸ್ರೇಲ್‌ ಮತ್ತು ದೊರ್ಕಾ ರಾಜ್ಯ ಸಭಾಗೃಹದ ಮುಂದೆ ನಿಂತಿದ್ದಾರೆ .

ಮಕ್ಕಳು ಇದ್ದಿದ್ರಿಂದ ದೊರ್ಕ ವಿಶೇಷ ಪಯನೀಯರಿಂಗ್‌ ಸೇವೆನ ನಿಲ್ಲಿಸಬೇಕಾಯ್ತು. ಆದ್ರೆ ರೆಗ್ಯುಲರ್‌ ಪಯನೀಯರಿಂಗ್‌ ಮಾಡ್ತಿದ್ದಳು. ನಾನು ಪೂರ್ಣ ಸಮಯದ ಸೇವೆ ಮುಂದುವರೆಸಿದೆ. ನಮ್ಮ ಮಕ್ಕಳು ದೊಡ್ಡವರಾದ್ಮೇಲೆ ದೊರ್ಕ ಮತ್ತೆ ವಿಶೇಷ ಪಯನೀಯರಿಂಗ್‌ ಸೇವೆ ಶುರುಮಾಡಿದಳು. ಈಗ ನಾವಿಬ್ರೂ ಕೊನಾಕ್ರಿಯಲ್ಲಿ ಮಿಷನರಿಯಾಗಿ ಸೇವೆ ಮಾಡ್ತಿದ್ದೀವಿ.

ಯೆಹೋವ ನಮನ್ನ ಕಾಪಾಡ್ತಾನೆ

ಯೆಹೋವ ಎಲ್ಲೆಲ್ಲಾ ಹೋಗು ಅಂತ ಹೇಳಿದ್ದಾನೋ ಅಲ್ಲೆಲ್ಲಾ ನಾನು ಹೋಗಿದ್ದೀನಿ. ನಾನು, ನನ್ನ ಹೆಂಡತಿ ಯೆಹೋವನ ಆಶೀರ್ವಾದಗಳನ್ನ ನೋಡಿದ್ವಿ. ಆತನು ನಮ್ಮನ್ನ ಕಾಪಾಡಿದ್ದನ್ನ ಕಣ್ಣಾರೆ ನೋಡಿದ್ವಿ. ಹಣ, ಆಸ್ತಿ ಮೇಲೆ ನಂಬಿಕೆ ಇಡೋ ಜನ್ರಿಗಿರೋ ಚಿಂತೆ, ಸಮಸ್ಯೆಗಳು ನಮಗಿಲ್ಲ. ಯಾಕಂದ್ರೆ ನಾವು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ರಿಂದ ನಮ್ಮ ಜೀವನದ ತುಂಬ ಖುಷಿನೇ ನೋಡಿದ್ವಿ. “ನಮ್ಮನ್ನ ರಕ್ಷಿಸೋ ದೇವರೇ” ನಮ್ಮ ಜೊತೆ ಇದ್ದಾನೆ ಅಂದ್ಮೇಲೆ ನಾವು ಯಾವುದಕ್ಕೂ ಭಯ ಪಡಬೇಕಾಗಿಲ್ಲ. (1 ಪೂರ್ವ. 16:35) ನಾವಷ್ಟೇ ಅಲ್ಲ, ಯಾರೆಲ್ಲ ಯೆಹೋವನ ಮೇಲೆ ನಂಬಿಕೆ ಇಡ್ತಾರೋ ಅವ್ರ ಪ್ರಾಣನ “ಯೆಹೋವ ತನ್ನ ಹತ್ರ ಇರೋ ಜೀವದ ಚೀಲದಲ್ಲಿ . . . ಸುರಕ್ಷಿತವಾಗಿ ಸುತ್ತಿಡ್ತಾನೆ” ಅನ್ನೋ ಗ್ಯಾರಂಟಿ ನನಗಿದೆ.—1 ಸಮು. 25:29.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ