ಅಧ್ಯಯನ ಲೇಖನ 17
ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು
ಆಧ್ಯಾತ್ಮಿಕ ಪರದೈಸನ್ನ ಯಾವತ್ತೂ ಬಿಟ್ಟುಹೋಗಬೇಡಿ
“ನಾನು ಯಾವುದನ್ನ ಸೃಷ್ಟಿಸಲಿದ್ದೀನೋ ಅದ್ರಲ್ಲಿ ಉಲ್ಲಾಸಿಸಿ, ಸದಾಕಾಲಕ್ಕೂ ಹರ್ಷಿಸಿ.”—ಯೆಶಾ. 65:18.
ಈ ಲೇಖನದಲ್ಲಿ ಏನಿದೆ?
ಆಧ್ಯಾತ್ಮಿಕ ಪರದೈಸಲ್ಲಿದ್ರೆ ನಮಗೆ ಏನೆಲ್ಲಾ ಒಳ್ಳೇದಾಗುತ್ತೆ? ಬೇರೆಯವರು ಅಲ್ಲಿಗೆ ತಾವಾಗೇ ಬರಬೇಕಂದ್ರೆ ಏನು ಮಾಡಬೇಕು? ಅಂತ ನೋಡೋಣ.
1. (ಎ) ಆಧ್ಯಾತ್ಮಿಕ ಪರದೈಸ್ ಅಂದ್ರೆ ಏನು? (ಬಿ) ನಾವು ಏನಂತ ತೀರ್ಮಾನ ಮಾಡಿದ್ದೀವಿ?
ಇವತ್ತು ಭೂಮಿ ಮೇಲೆ ಒಂದು ಪರದೈಸ್ ಇದೆ. ಆ ಪರದೈಸಲ್ಲಿ ಲಕ್ಷಾಂತರ ಜನ್ರು ಒಳ್ಳೇ ಕೆಲಸಗಳನ್ನ ಮಾಡ್ತಾ ಖುಷಿಖುಷಿಯಾಗಿದ್ದಾರೆ, ಶಾಂತಿ ನೆಮ್ಮದಿಯಿಂದ ಇದ್ದಾರೆ. ಅಷ್ಟೇ ಅಲ್ಲ, ಅವರು ಆ ಪರದೈಸನ್ನ ಬಿಟ್ಟುಹೋಗಬಾರದು ಅಂತ ತೀರ್ಮಾನ ಮಾಡಿದ್ದಾರೆ. ಬೇರೆಯವರೂ ಅಲ್ಲಿಗೆ ಬರಬೇಕು ಅಂತ ಆಸೆ ಪಡ್ತಿದ್ದಾರೆ. ಹಾಗಿದ್ರೆ ಆ ಪರದೈಸ್ ಯಾವುದು? ಅದೇ ಆಧ್ಯಾತ್ಮಿಕ ಪರದೈಸ್!a
2. ಆಧ್ಯಾತ್ಮಿಕ ಪರದೈಸ್ ಹೇಗಿದೆ?
2 ಸೈತಾನ ಹೊಟ್ಟೆಕಿಚ್ಚು, ದ್ವೇಷ, ತೊಂದ್ರೆಗಳನ್ನ ತಂದು ಈ ಲೋಕನ ಹಾಳುಮಾಡಿದ್ದಾನೆ. (1 ಯೋಹಾ. 5:19; ಪ್ರಕ. 12:12) ಆದ್ರೆ ಯೆಹೋವ ದೇವರು ಇದೇ ಭೂಮಿಯಲ್ಲಿ ಆಧ್ಯಾತ್ಮಿಕ ಪರದೈಸನ್ನ ಸೃಷ್ಟಿಸಿ ಜನ್ರೆಲ್ಲ ಒಗ್ಗಟ್ಟಿಂದ, ಸಂತೋಷದಿಂದ ಇರೋ ತರ ಮಾಡಿದ್ದಾನೆ. ಸೈತಾನ ಮಾಡಿರೋ ಈ ಹಾನಿಯಿಂದ ಜನ್ರಿಗೆ ಎಷ್ಟು ಕಷ್ಟ-ನಷ್ಟಗಳು ಆಗ್ತಿದೆ ಅಂತ ಯೆಹೋವ ನೋಡ್ತಿದ್ದಾನೆ. ಅದಕ್ಕೇ ತನ್ನ ಜನ್ರು ಸುರಕ್ಷಿತವಾಗಿರೋಕೆ ಮತ್ತು ತನ್ನನ್ನ ಖುಷಿಯಾಗಿ ಆರಾಧಿಸೋಕೆ ಬೇಕಾಗಿರೋದನ್ನೆಲ್ಲ ಕೊಟ್ಟಿದ್ದಾನೆ. ಈ ಪರದೈಸ್ ನಮಗೆ “ಆಶ್ರಯ ನೀಡುತ್ತೆ” ಮತ್ತು ಅದು “ಚೆನ್ನಾಗಿ ನೀರು ಹಾಯಿಸಿರೋ ತೋಟದ ತರ” ಇದೆ ಅಂತ ಬೈಬಲ್ ವರ್ಣಿಸುತ್ತೆ. (ಯೆಶಾ. 4:6; 58:11) ಹಾಗಾಗಿ ಈ ಪರದೈಸಲ್ಲಿ ಇರೋರು ಕೊನೇ ದಿನಗಳಲ್ಲೂ ಯೆಹೋವನ ಆಶೀರ್ವಾದದಿಂದ ಖುಷಿಖುಷಿಯಾಗಿ ಸುರಕ್ಷಿತವಾಗಿ ಇದ್ದಾರೆ.—ಯೆಶಾ. 54:14; 2 ತಿಮೊ. 3:1.
3. ಯೆಶಾಯ 65ನೇ ಅಧ್ಯಾಯದಲ್ಲಿರೋ ಭವಿಷ್ಯವಾಣಿ ಇಸ್ರಾಯೇಲ್ಯರ ಕಾಲದಲ್ಲಿ ಹೇಗೆ ನೆರವೇರಿತು?
3 ಆಧ್ಯಾತ್ಮಿಕ ಪರದೈಸಲ್ಲಿ ಇರೋರು ಹೇಗಿರ್ತಾರೆ ಅನ್ನೋದನ್ನ ಯೆಹೋವ ಯೆಶಾಯನಿಂದ ತಿಳಿಸಿದನು. ಅದ್ರ ಬಗ್ಗೆ ಯೆಶಾಯ 65ನೇ ಅಧ್ಯಾಯದಲ್ಲಿದೆ. ಇದು ಮೊದಲನೇ ಸಲ ನೆರವೇರಿದ್ದು ಕ್ರಿಸ್ತಪೂರ್ವ 537ರಲ್ಲಿ. ಆಗ ಯೆಹೂದ್ಯರು ಬಾಬೆಲಿಂದ ಬಿಡುಗಡೆಯಾಗಿ ತಮ್ಮ ತಾಯ್ನಾಡಿಗೆ ಹೋದ್ರು. ಯೆಹೋವ ಅವ್ರನ್ನ ಆಶೀರ್ವದಿಸಿದ್ರಿಂದ ಮತ್ತು ಅವ್ರಿಗೆ ಸಹಾಯ ಮಾಡಿದ್ರಿಂದ ಅವರು ಯೆರೂಸಲೇಮನ್ನ, ಯೆಹೋವನ ಆಲಯವನ್ನ ಮತ್ತೆ ಕಟ್ಟೋಕಾಯ್ತು. ಇದ್ರಿಂದ ಯೆಹೋವನನ್ನ ಆರಾಧಿಸೋಕೆ ಅವ್ರಿಗೆ ಇನ್ನೊಂದು ಅವಕಾಶ ಸಿಕ್ತು.—ಯೆಶಾ. 51:11; ಜೆಕ. 8:3.
4. ಯೆಶಾಯ 65ನೇ ಅಧ್ಯಾಯದಲ್ಲಿರೋ ಭವಿಷ್ಯವಾಣಿ 1919ರಿಂದ ಹೇಗೆ ನೆರವೇರುತ್ತಾ ಇದೆ?
4 ಯೆಶಾಯ ಹೇಳಿದ ಭವಿಷ್ಯವಾಣಿ ಎರಡನೇ ಸಲ ನೆರವೇರಿದ್ದು ಕ್ರಿಸ್ತಶಕ 1919ರಲ್ಲಿ. ಆಗ ಯೆಹೋವನ ಆರಾಧಕರಿಗೆ ಮಹಾ ಬಾಬೆಲಿಂದ ಬಿಡುಗಡೆ ಸಿಕ್ತು. ಅಷ್ಟೇ ಅಲ್ಲ, ಆಧ್ಯಾತ್ಮಿಕ ಪರದೈಸ್ ದೊಡ್ಡದಾಗ್ತಾ ಹೋಯ್ತು. ಎಷ್ಟೋ ಸಹೋದರ ಸಹೋದರಿಯರು ಚೆನ್ನಾಗಿ ಸಿಹಿಸುದ್ದಿ ಸಾರಿದ್ರು. ಇದ್ರಿಂದ ತುಂಬ ಸಭೆಗಳು ಶುರುವಾಯ್ತು. ಈ ಮುಂಚೆ ಕ್ರೂರವಾಗಿ ನಡ್ಕೊಳ್ತಾ ಇದ್ದವರು, ಅನೈತಿಕ ಜೀವನ ಮಾಡ್ತಾ ಇದ್ದವರು ತಮ್ಮ ಕೆಟ್ಟ ಗುಣಗಳನ್ನೆಲ್ಲ ಬಿಟ್ಟು ‘ದೇವರು ತನ್ನ ಇಷ್ಟದ ಪ್ರಕಾರ ಮಾಡಿರೋ ಹೊಸ ವ್ಯಕ್ತಿತ್ವವನ್ನ’ ಹಾಕೊಂಡ್ರು. (ಎಫೆ. 4:24) ಯೆಶಾಯ ಹೇಳಿದ ಭವಿಷ್ಯವಾಣಿ ಪೂರ್ತಿಯಾಗಿ ನಡಿಯೋದು ಹೊಸ ಲೋಕದಲ್ಲೇ. ಆದ್ರೆ ಈಗ್ಲೂ ಕೆಲವು ಆಶೀರ್ವಾದಗಳನ್ನ ನಾವು ಆಧ್ಯಾತ್ಮಿಕ ಪರದೈಸಲ್ಲಿ ಪಡ್ಕೊಳ್ತಿದ್ದೀವಿ. ಆ ಆಶೀರ್ವಾದಗಳು ಯಾವುದು ಅಂತ ಈಗ ನೋಡೋಣ. ಅಷ್ಟೇ ಅಲ್ಲ, ನಾವ್ಯಾಕೆ ಈ ಆಧ್ಯಾತ್ಮಿಕ ಪರದೈಸನ್ನ ಬಿಟ್ಟುಹೋಗಬಾರದು ಅಂತನೂ ತಿಳ್ಕೊಳ್ಳೋಣ.
ಆಧ್ಯಾತ್ಮಿಕ ಪರದೈಸಲ್ಲಿ ಇರೋರು ಹೇಗಿದ್ದಾರೆ?
5. ಯೆಶಾಯ 65:13ರಲ್ಲಿ ಹೇಳಿದ ಹಾಗೆ ಆಧ್ಯಾತ್ಮಿಕ ಪರದೈಸಲ್ಲಿ ಇರೋರಿಗೆ ಏನೆಲ್ಲಾ ಸಿಗ್ತಿದೆ?
5 ಆರೋಗ್ಯವಾಗಿ ಇದ್ದಾರೆ, ಹೊಸಬಲ ಪಡ್ಕೊಳ್ತಿದ್ದಾರೆ. ಆಧ್ಯಾತ್ಮಿಕ ಪರದೈಸಲ್ಲಿ ಇರೋರಿಗೂ, ಹೊರಗಡೆ ಇರೋರಿಗೂ ಏನು ವ್ಯತ್ಯಾಸ ಇದೆ ಅಂತ ಯೆಶಾಯ ಹೇಳಿದ ಭವಿಷ್ಯವಾಣಿಯಲ್ಲಿದೆ. (ಯೆಶಾಯ 65:13 ಓದಿ.) ಅಲ್ಲಿ ಯೆಹೋವನ ಸೇವಕರು “ಊಟ ಮಾಡ್ತಾರೆ . . . ಕುಡಿತಾರೆ . . . ಸಂಭ್ರಮಿಸ್ತಾರೆ” ಅಂತ ಇದೆ. (ಪ್ರಕ. 22:17 ಹೋಲಿಸಿ.) ಅಂದ್ರೆ ತನಗೆ ಹತ್ರ ಆಗೋಕೆ ಯೆಹೋವ ನಮಗೆ ಬೇಕಾಗಿರೋದನ್ನೆಲ್ಲ ಧಾರಾಳವಾಗಿ ಕೊಡ್ತಿದ್ದಾನೆ. ತನ್ನ ಪವಿತ್ರಶಕ್ತಿಯನ್ನ, ತನ್ನ ವಾಕ್ಯವಾದ ಬೈಬಲನ್ನ ಮತ್ತು ಪುಸ್ತಕ-ಪ್ರಕಾಶನಗಳನ್ನ ಕೊಟ್ಟು ಆಧ್ಯಾತ್ಮಿಕವಾಗಿ ನಮ್ಮ ಹೊಟ್ಟೆ ತುಂಬಿಸ್ತಿದ್ದಾನೆ. ಆದ್ರೆ ಹೊರಗಡೆ ಇರೋರಿಗೆ ಏನಾಗುತ್ತೆ? ಅವ್ರಿಗೆ “ಹಸಿವಾಗುತ್ತೆ . . . ಬಾಯಾರಿಕೆ ಆಗುತ್ತೆ . . . ಅವಮಾನ ಆಗುತ್ತೆ.” ಅಂದ್ರೆ ಅವರು ಆಧ್ಯಾತ್ಮಿಕ ಹಸಿವಲ್ಲಿ ಇರ್ತಾರೆ. ಅವ್ರಿಗೆ ಯೆಹೋವನ ಜೊತೆ ಸ್ನೇಹ-ಸಂಬಂಧ ಇರಲ್ಲ.—ಆಮೋ. 8:11.
6. ಯೋವೇಲ 2:21-24ರಲ್ಲಿ ಹೇಳಿರೋ ತರ ಯೆಹೋವ ನಮಗೆ ಏನೆಲ್ಲಾ ಕೊಡ್ತಾನೆ? ಅದ್ರಿಂದ ನಮಗೆ ಯಾವ ಪ್ರಯೋಜನ ಆಗುತ್ತೆ?
6 ಯೆಹೋವ ತನ್ನ ಜನ್ರಿಗೆ ಧಾನ್ಯ, ದ್ರಾಕ್ಷಾಮದ್ಯ ಮತ್ತು ಆಲಿವ್ ಎಣ್ಣೆಯನ್ನ ಧಾರಾಳವಾಗಿ ಕೊಡ್ತಾ ಇದ್ದಾನೆ ಅಂತ ಪ್ರವಾದಿ ಯೋವೇಲ ಹೇಳಿದ. ಅಂದ್ರೆ ಯೆಹೋವ ನಮಗೆ ಬೇಕಾಗಿರೋದನ್ನೆಲ್ಲ ಕೊಡ್ತಾನೆ ಮತ್ತು ನಮ್ಮ ನಂಬಿಕೆಯನ್ನ ಗಟ್ಟಿ ಮಾಡ್ಕೊಳ್ಳೋಕೆ ಸಹಾಯ ಮಾಡ್ತಾನೆ. (ಯೋವೇ. 2:21-24) ಈ ಸಹಾಯನ ಯೆಹೋವ ಬೈಬಲಿಂದ, ಪುಸ್ತಕ-ಪ್ರಕಾಶನಗಳಿಂದ, ವೆಬ್‌ಸೈಟಿಂದ, ಕೂಟಗಳಿಂದ, ಸಮ್ಮೇಳನ ಮತ್ತು ಅಧಿವೇಶನಗಳಿಂದ ಕೊಡ್ತಾ ಇದ್ದಾನೆ. ಯೆಹೋವ ಕೊಡೋ ಈ ಸಹಾಯದಿಂದ ನಾವು ದಿನಾಲೂ ಪ್ರಯೋಜನ ಪಡ್ಕೊಬೇಕು. ಆಗ ನಾವು ಆರೋಗ್ಯವಾಗೂ ಇರ್ತೀವಿ, ಹೊಸಬಲನೂ ಪಡ್ಕೊಳ್ತೀವಿ.
7. ನಮ್ಮ ಮನಸ್ಸು ಯಾಕೆ ಸಂತೋಷವಾಗಿದೆ? (ಯೆಶಾಯ 65:14)
7 ಖುಷಿಯಿಂದ ಮತ್ತು ತೃಪ್ತಿಯಿಂದ ಇದ್ದಾರೆ. ದೇವಜನ್ರು ಯೆಹೋವನಿಗೆ ಋಣಿಗಳಾಗಿರೋದ್ರಿಂದ “ಹರ್ಷಧ್ವನಿಗೈತಾರೆ.” (ಯೆಶಾಯ 65:14 ಓದಿ.) ಬೈಬಲಲ್ಲಿ ನಮ್ಮ ನಂಬಿಕೆ ಕಟ್ಟೋ ಸತ್ಯಗಳಿವೆ, ನಮ್ಮನ್ನ ಸಂತೈಸೋ ಮಾತುಗಳಿವೆ ಮತ್ತು ಯೇಸುವಿನ ಬಿಡುಗಡೆ ಬೆಲೆಯಿಂದ ನಮಗೆ ನಿರೀಕ್ಷೆ ಸಿಕ್ಕಿದೆ. ಇದೆಲ್ಲದ್ರಿಂದ ನಮ್ಮ ‘ಮನಸ್ಸಲ್ಲಿ ತುಂಬ ಸಂತೋಷ’ ಇದೆ. ಈ ಎಲ್ಲಾ ವಿಷ್ಯಗಳ ಬಗ್ಗೆ ನಮ್ಮ ಸಹೋದರ ಸಹೋದರಿಯರ ಹತ್ರ ಮಾತಾಡುವಾಗ ನಮ್ಮ ಖುಷಿ ಇನ್ನೂ ಜಾಸ್ತಿ ಆಗುತ್ತೆ.—ಕೀರ್ತ. 34:8; 133:1-3.
8. ಆಧ್ಯಾತ್ಮಿಕ ಪರದೈಸಲ್ಲಿರೋ ಜನ್ರಲ್ಲಿ ಯಾವ ಎರಡು ಗುಣಗಳು ಎದ್ದುಕಾಣುತ್ತೆ?
8 ಆಧ್ಯಾತ್ಮಿಕ ಪರದೈಸಲ್ಲಿ ಯೆಹೋವನ ಜನ್ರ ಮಧ್ಯ ಪ್ರೀತಿ ಮತ್ತು ಒಗ್ಗಟ್ಟು ಎದ್ದುಕಾಣುತ್ತೆ. “ಎಲ್ರನ್ನೂ ಒಂದು ಮಾಡೋ” ಈ ಪ್ರೀತಿ ಹೊಸ ಲೋಕದಲ್ಲಿ ನಾವು ಹೇಗಿರುತ್ತೀವಿ ಅಂತ ಕಲ್ಪಿಸ್ಕೊಳ್ಳೋಕೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ಈಗ ನಮ್ಮ ಮಧ್ಯ ಇರೋ ಪ್ರೀತಿ, ಒಗ್ಗಟ್ಟು ಆಗ ಇನ್ನೂ ಜಾಸ್ತಿ ಆಗುತ್ತೆ. (ಕೊಲೊ. 3:14) ಒಬ್ಬ ಸಹೋದರಿ ಯೆಹೋವನ ಸಾಕ್ಷಿಗಳನ್ನ ಮೊದಲನೇ ಸಲ ಭೇಟಿಯಾದಾಗ ಅವ್ರಿಗೆ ಹೇಗನಿಸ್ತು ನೋಡಿ: “ಖುಷಿಯಾಗಿ ಇರೋದು ಹೇಗಂತಾನೇ ನನಗೆ ಗೊತ್ತಿರಲಿಲ್ಲ. ಈ ಖುಷಿನ ನಾನು ನಮ್ಮ ಮನೇಲೂ ನೋಡಿರಲಿಲ್ಲ. ಆದ್ರೆ ಮೊದಲನೇ ಸಲ ನನಗೆ ಈ ಖುಷಿ ಸಿಕ್ಕಿದ್ದು ಯೆಹೋವನ ಜನ್ರ ಮಧ್ಯ ಇರೋ ಪ್ರೀತಿ ನೋಡಿ” ಅಂತ ಅವರು ಹೇಳ್ತಾರೆ. ಯಾರೆಲ್ಲಾ ಖುಷಿಯಾಗಿ, ತೃಪ್ತಿಯಾಗಿ ಇರ್ಬೇಕು ಅಂತ ಅಂದ್ಕೊಳ್ತಾರೋ ಅವ್ರೆಲ್ಲ ಈ ಆಧ್ಯಾತ್ಮಿಕ ಪರದೈಸಲ್ಲಿ ಇರ್ಬೇಕು. ಜನ ನಮ್ಮ ಬಗ್ಗೆ ನೂರಾರು ಅಂದ್ಕೊಬಹುದು. ಆದ್ರೆ ಯೆಹೋವ ಮತ್ತು ಆತನ ಜನ್ರ ಹತ್ರ ನಮಗೆ ಒಳ್ಳೇ ಹೆಸ್ರಿದೆ.—ಯೆಶಾ. 65:15.
9. ನಾವು ಪಡ್ತಿರೋ ಕಷ್ಟ-ನೋವಿನ ಬಗ್ಗೆ ಯೆಶಾಯ 65:16, 17 ಏನು ಹೇಳುತ್ತೆ?
9 ಆರಾಮಾಗಿ, ನೆಮ್ಮದಿಯಿಂದ ಇದ್ದಾರೆ. ಯಾರೆಲ್ಲ ಈ ಆಧ್ಯಾತ್ಮಿಕ ಪರದೈಸಲ್ಲಿ ಇರೋಕೆ ಇಷ್ಟಪಡಲ್ವೋ ‘ಅವ್ರ ಹೃದಯದಲ್ಲಿ ದುಃಖ ಇರೋದ್ರಿಂದ ಜೋರಾಗಿ ಅಳ್ತಾರೆ, ಮುರಿದ ಮನಸ್ಸಿಂದಾಗಿ ರೋದಿಸ್ತಾರೆ’ ಅಂತ ಯೆಶಾಯ 65:14 ಹೇಳುತ್ತೆ. ಇವತ್ತು ಯೆಹೋವನ ಜನ್ರೂ ಕಷ್ಟಪಡ್ತಿದ್ದಾರೆ ನಿಜ, ಆದ್ರೆ ಅವರು ಹಿಂದಿನ “ಕಷ್ಟಸಂಕಟಗಳನ್ನ ಮರೆತುಹೋಗ್ತಾರೆ, ಇನ್ನು ಮುಂದೆ [ದೇವರ] ಕಣ್ಣುಗಳು ಅವುಗಳನ್ನ ನೋಡಲ್ಲ” ಅಂತ ಬೈಬಲ್ ಹೇಳುತ್ತೆ. (ಯೆಶಾಯ 65:16, 17 ಓದಿ.) ಅಂದ್ರೆ ಯೆಹೋವ ನಮ್ಮ ಕಷ್ಟ ತೆಗೆದುಹಾಕೋದ್ರ ಜೊತೆಗೆ ಅದ್ರಿಂದ ಆದ ನೋವನ್ನೂ ನಮ್ಮ ನೆನಪಿಗೆ ಬರದ ಹಾಗೆ ಮಾಡ್ತಾನೆ.
10. ನಾವು ಕೂಟಗಳಲ್ಲಿ ಸಹೋದರ ಸಹೋದರಿಯರ ಜೊತೆ ಇರೋದು ಯಾಕೆ ಒಂದು ದೊಡ್ಡ ಆಶೀರ್ವಾದ? (ಚಿತ್ರನೂ ನೋಡಿ.)
10 ಇವತ್ತೂ ನಾವು ಕೂಟಗಳಿಗೆ ಬಂದಾಗ ನಮ್ಮ ಕಷ್ಟ, ಸಮಸ್ಯೆಗಳನ್ನೆಲ್ಲ ಮರೆತು ಆರಾಮಾಗಿ ಇರ್ತೀವಿ. ಅಷ್ಟೇ ಅಲ್ಲ, ಪವಿತ್ರಶಕ್ತಿಯಿಂದ ಬರೋ ಗುಣಗಳಾದ ಪ್ರೀತಿ, ಆನಂದ, ಶಾಂತಿ, ದಯೆ ಮತ್ತು ಸೌಮ್ಯತೆಯನ್ನ ನಾವು ತೋರಿಸಿದ್ರೆ ನಮ್ಮ ಸಹೋದರ ಸಹೋದರಿಯರೂ ನೆಮ್ಮದಿಯಿಂದ ಇರೋಕೆ ನಾವು ಸಹಾಯ ಮಾಡ್ತೀವಿ. (ಗಲಾ. 5:22, 23) ಇಷ್ಟು ಪ್ರೀತಿ ತುಂಬಿರೋ ಯೆಹೋವನ ಸಂಘಟನೆಯಲ್ಲಿ ಇರೋದು ಒಂದು ದೊಡ್ಡ ಆಶೀರ್ವಾದ ಅಲ್ವಾ! ಆದಷ್ಟು ಬೇಗ ಯೆಹೋವ ದೇವರು “ಹೊಸ ಆಕಾಶವನ್ನ, ಹೊಸ ಭೂಮಿಯನ್ನ” ಸೃಷ್ಟಿ ಮಾಡ್ತಾನೆ. ಆಗ ಯಾರೆಲ್ಲಾ ಈ ಆಧ್ಯಾತ್ಮಿಕ ಪರದೈಸಲ್ಲಿ ಇರ್ತಾರೋ ಅವರು ಈ ಆಶೀರ್ವಾದ ನಿಜ ಆಗೋದನ್ನ ಕಣ್ಣಾರೆ ನೋಡ್ತಾರೆ.
ನಾವು ದೇವರ ಕುಟುಂಬದ ಭಾಗವಾಗಿ ಆಧ್ಯಾತ್ಮಿಕ ಪರದೈಸಲ್ಲಿ ಇರೋದು ಒಂದು ದೊಡ್ಡ ಆಶೀರ್ವಾದನೇ (ಪ್ಯಾರ 10 ನೋಡಿ)c
11. ಯೆಹೋವ ದೇವರೇ ಈ ಆಧ್ಯಾತ್ಮಿಕ ಪರದೈಸನ್ನ ಸೃಷ್ಟಿ ಮಾಡಿರೋದ್ರಿಂದ ನಮಗೆ ಹೇಗನಿಸುತ್ತೆ? (ಯೆಶಾಯ 65:18, 19)
11 ಯೆಹೋವನಿಗೆ ಋಣಿಗಳಾಗಿದ್ದಾರೆ, ಮುಂದೆ ಸಿಗೋ ಆಶೀರ್ವಾದಕ್ಕೆ ಕಾಯ್ತಾ ಇದ್ದಾರೆ. ಆಧ್ಯಾತ್ಮಿಕ ಪರದೈಸಲ್ಲಿ ನಾವ್ಯಾಕೆ ‘ಉಲ್ಲಾಸಿಸ್ತಾ, ಹರ್ಷಿಸ್ತಾ’ ಇದ್ದೀವಿ ಅಂತ ಯೆಶಾಯ ಹೇಳಿದ್ದಾನೆ. (ಯೆಶಾಯ 65:18, 19 ಓದಿ.) ಯಾಕಂದ್ರೆ ಈ ಆಧ್ಯಾತ್ಮಿಕ ಪರದೈಸನ್ನ ಸೃಷ್ಟಿ ಮಾಡಿರೋದೇ ಯೆಹೋವ ದೇವರು. ಅಷ್ಟೇ ಅಲ್ಲ, ಬೇರೆಯವರೂ ಈ ಪರದೈಸಿಗೆ ಬರಬೇಕು ಅನ್ನೋದೇ ಯೆಹೋವನ ಆಸೆ. ಯಾಕಂದ್ರೆ ಈ ಲೋಕದಲ್ಲಿ ತುಂಬ ಸಂಘಟನೆಗಳು ದೇವರ ಬಗ್ಗೆ ಸರಿಯಾಗಿ ಕಲಿಸ್ತಿಲ್ಲ. ಅದ್ರಿಂದ ಜನ್ರು ಮೋಸ ಹೋಗಿದ್ದಾರೆ. ಆದ್ರೆ ನಾವು ಹಾಗಿಲ್ಲ. ನಮಗೆ ಸತ್ಯ ಏನು ಅಂತ ಗೊತ್ತಿರೋದ್ರಿಂದ ಯೆಹೋವನಿಂದ ತುಂಬ ಆಶೀರ್ವಾದಗಳನ್ನ ಪಡ್ಕೊಂಡಿದ್ದೀವಿ ಮತ್ತು ಆತನಿಗೆ ಋಣಿಗಳಾಗೂ ಇದ್ದೀವಿ. ಅದಕ್ಕೇ ನಾವು ಈ ಆಶೀರ್ವಾದಗಳ ಬಗ್ಗೆ ಜನ್ರಿಗೆ ಹೇಳೋಕೆ ತುಂಬ ಇಷ್ಟಪಡ್ತೀವಿ.—ಯೆರೆ. 31:12.
12. ಯೆಶಾಯ 65:20-24ರಲ್ಲಿ ಯೆಹೋವ ಕೊಟ್ಟಿರೋ ಮಾತನ್ನ ಕೇಳಿಸ್ಕೊಂಡಾಗ ನಿಮಗೆ ಹೇಗನಿಸ್ತು ಮತ್ತು ಯಾಕೆ?
12 ನಾವು ಆಧ್ಯಾತ್ಮಿಕ ಪರದೈಸಲ್ಲಿ ಇರೋದ್ರಿಂದ ಮುಂದೆ ಸಿಗೋ ಆಶೀರ್ವಾದಗಳಿಗೆ ತುಂಬ ಆಸೆಯಿಂದ ಕಾಯ್ತಾ ಇದ್ದೀವಿ. ಅದಕ್ಕೆ ನಾವು ಯೆಹೋವನಿಗೆ ಋಣಿಗಳಾಗೂ ಇದ್ದೀವಿ. ಹೊಸಲೋಕ ಹೇಗಿರುತ್ತೆ, ನಾವು ಅಲ್ಲಿ ಏನೆಲ್ಲ ಮಾಡ್ತೀವಿ ಅಂತ ಸ್ವಲ್ಪ ಕಲ್ಪಿಸ್ಕೊಳ್ಳಿ. “ಹುಟ್ಟಿ ಕೆಲವೇ ದಿನಗಳಲ್ಲಿ ಸಾಯೋ ಎಳೆಮಗುವಾಗಲಿ, ಆಯಸ್ಸು ಮುಗಿಯದೆ ಸಾಯೋ ಮುದುಕನಾಗಲಿ ಅಲ್ಲಿ ಇರಲ್ಲ.” ನಾವು ‘ಮನೆ ಕಟ್ಕೊಂಡು ವಾಸ ಮಾಡ್ತೀವಿ, ದ್ರಾಕ್ಷಿತೋಟ ಮಾಡಿ ಅದ್ರ ಫಲ ತಿಂತೀವಿ.’ ನಾವು “ಪಡೋ ಶ್ರಮ ವ್ಯರ್ಥವಾಗಲ್ಲ.” ಯಾಕಂದ್ರೆ “ಯೆಹೋವನ ಆಶೀರ್ವಾದ” ನಮ್ಮ ಮೇಲಿರುತ್ತೆ. ಅಲ್ಲಿ ನಾವು ಸುರಕ್ಷಿತವಾಗಿ ಇರ್ತೀವಿ, ನಮ್ಮ ಜೀವನದಲ್ಲಿ ತೃಪ್ತಿ ಇರುತ್ತೆ ಅಂತ ಯೆಹೋವ ಮಾತುಕೊಟ್ಟಿದ್ದಾನೆ. ಅಷ್ಟೇ ಅಲ್ಲ, “ಬೇಡ್ಕೊಳ್ಳೋದಕ್ಕಿಂತ ಮುಂಚೆನೇ” ಪ್ರತಿಯೊಬ್ರಿಗೂ ಏನು ಬೇಕಂತ ಯೆಹೋವನಿಗೆ ಚೆನ್ನಾಗಿ ಗೊತ್ತಿರುತ್ತೆ. ಹಾಗಾಗಿ ಆತನು ‘ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸ್ತಾನೆ.’—ಯೆಶಾ. 65:20-24; ಕೀರ್ತ. 145:16.
13. ಜನ್ರು ಯೆಹೋವನನ್ನ ಆರಾಧಿಸೋಕೆ ಶುರುಮಾಡಿದ ಮೇಲೆ ಯೆಶಾಯ 65:25ರಲ್ಲಿ ಹೇಳಿರೋ ತರ ಯಾವೆಲ್ಲ ಬದಲಾವಣೆಗಳನ್ನ ಮಾಡ್ಕೊಳ್ತಾರೆ?
13 ಶಾಂತಿಯಿಂದ, ಸುರಕ್ಷಿತವಾಗಿ ಇದ್ದಾರೆ. ದೇವರ ಪವಿತ್ರಶಕ್ತಿಯಿಂದ ಎಷ್ಟೋ ಜನ್ರು ಕ್ರೂರತನ ಬಿಟ್ಟು ಜೀವನದಲ್ಲಿ ತುಂಬ ಬದಲಾವಣೆಗಳನ್ನ ಮಾಡ್ಕೊಂಡಿದ್ದಾರೆ. (ಯೆಶಾಯ 65:25 ಓದಿ.) ಅವರು ಆ ಕೆಟ್ಟ ಗುಣಗಳನ್ನ ಬಿಡೋಕೆ ತುಂಬ ಶ್ರಮ ಹಾಕಿದ್ದಾರೆ. (ರೋಮ. 12:2; ಎಫೆ. 4:22-24) ಆದ್ರೆ ಅದ್ರ ಅರ್ಥ ದೇವಜನ್ರು ತಪ್ಪೇ ಮಾಡಲ್ಲ ಅಂತಲ್ಲ, ನಾವೆಲ್ರೂ ಅಪರಿಪೂರ್ಣರಾಗಿ ಇರೋದ್ರಿಂದ ಕೆಲವೊಮ್ಮೆ ನಮ್ಮಿಂದ ತಪ್ಪುಗಳಾಗುತ್ತೆ. ಆದ್ರೂ ನಾವೆಲ್ಲ ಜೊತೆಯಾಗಿ ಇದ್ದೀವಿ. ಯಾಕಂದ್ರೆ ಯೆಹೋವ “ಎಲ್ಲ ತರದ” ಜನ್ರನ್ನ ಒಟ್ಟುಸೇರಿಸಿದ್ದಾನೆ. ನಮ್ಮ ಮಧ್ಯ ನಿಜವಾದ ಪ್ರೀತಿಯನ್ನ ಇಟ್ಟಿದ್ದಾನೆ. (ತೀತ 2:11) ಅದಕ್ಕೇ ನಾವು ಶಾಂತಿ, ಒಗ್ಗಟ್ಟಿಂದ ಇದ್ದೀವಿ. ಈ ತರ ಮಾಡೋಕೆ ಬೇರೆ ಯಾರಿಂದನೂ ಆಗಲ್ಲ, ಯೆಹೋವನಿಂದ ಮಾತ್ರನೇ ಆಗೋದು!
14. ಯೆಶಾಯ 65:25ರಲ್ಲಿ ಹೇಳಿರೋ ಮಾತುಗಳು ಒಬ್ಬ ಸಹೋದರನ ಜೀವನದಲ್ಲಿ ಹೇಗೆ ನಿಜ ಆಯ್ತು?
14 ಕೆಟ್ಟವರು ನಿಜವಾಗ್ಲೂ ಬದಲಾಗ್ತಾರಾ? ಇದಕ್ಕೊಂದು ಉದಾಹರಣೆ ನೋಡಿ. ಒಬ್ಬ ಯುವಕ ಬರೀ 20 ವಯಸ್ಸು ಆಗೋದ್ರ ಒಳಗೆ ತುಂಬ ಸಲ ಜೈಲಿಗೆ ಹೋಗಿದ್ದ. ಅವನು ಅನೈತಿಕ ಜೀವನ ನಡೆಸ್ತಿದ್ದ, ತುಂಬ ಕ್ರೂರಿನೂ ಆಗಿದ್ದ. ಅವನು ಕಾರ್‌ಗಳನ್ನ ಮತ್ತು ಬೇರೆಬೇರೆ ವಸ್ತುಗಳನ್ನ ಕದೀತಿದ್ದ. ದೊಡ್ಡದೊಡ್ಡ ಅಪರಾಧಗಳನ್ನ ಮಾಡ್ತಿದ್ದ. ಅದಕ್ಕೇ ಅವನನ್ನ ಜೈಲಿಗೆ ಹಾಕಿದ್ರು. ಅವನು ಯಾವಾಗ್ಲೂ ಕಾಲ್ ಕೆರ್ಕೊಂಡು ಜಗಳಕ್ಕೆ ಹೋಗ್ತಿದ್ದ. ಆದ್ರೆ ಆಮೇಲೆ ಅವನು ಬೈಬಲ್ ಸತ್ಯ ತಿಳ್ಕೊಂಡ. ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗೋಕೆ ಶುರುಮಾಡಿದ. ಆಗ ಅವನಿಗೆ ಆಧ್ಯಾತ್ಮಿಕ ಪರದೈಸಲ್ಲಿ ಯೆಹೋವನನ್ನ ಆರಾಧಿಸುವಾಗ ನಿಜವಾದ ಖುಷಿ ಸಿಗುತ್ತೆ ಅಂತ ಅರ್ಥ ಆಯ್ತು. ಅವನು ದೀಕ್ಷಾಸ್ನಾನ ತಗೊಂಡ ಮೇಲೆ ಯೆಶಾಯ 65:25ರಲ್ಲಿ ಹೇಳಿರೋ ಮಾತುಗಳು ತನ್ನ ಜೀವನದಲ್ಲಿ ನಿಜ ಆಗಿದ್ದನ್ನ ಆಗಾಗ ನೆನಪಿಸ್ಕೊಳ್ತಿದ್ದ. ಸಿಂಹದ ತರ ಕ್ರೂರಿಯಾಗಿದ್ದವನು ಕುರಿಮರಿ ತರ ಶಾಂತಿಯಿಂದ ಇರೋಕೆ ಕಲಿತ.
15. (ಎ) ಆಧ್ಯಾತ್ಮಿಕ ಪರದೈಸಿಗೆ ಬೇರೆಯವ್ರನ್ನೂ ಕರ್ಕೊಂಡು ಬರೋಕೆ ನಾವ್ಯಾಕೆ ಇಷ್ಟಪಡ್ತೀವಿ? (ಬಿ) ಅದಕ್ಕೆ ನಾವೇನು ಮಾಡಬೇಕು?
15 ಯೆಶಾಯ 65:13 “ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಾನೆ” ಅನ್ನೋ ಮಾತಿಂದ ಶುರು ಆಗುತ್ತೆ. ವಚನ 25 “ಅಂತ ಯೆಹೋವ ಹೇಳ್ತಿದ್ದಾನೆ” ಅನ್ನೋ ಮಾತುಗಳಿಂದ ಕೊನೆ ಆಗುತ್ತೆ. (ಯೆಶಾ. 55:10, 11) ಹಾಗಾಗಿ ಯೆಹೋವ ಒಂದು ಮಾತು ಹೇಳಿದ್ರೆ ಅದು ಖಂಡಿತ ನಿಜ ಆಗುತ್ತೆ. ಈಗಾಗ್ಲೇ ಆ ಮಾತು ನಿಜ ಆಗಿದೆ. ಅದಕ್ಕೇ ಆಧ್ಯಾತ್ಮಿಕ ಪರದೈಸ್ ಈ ಭೂಮಿ ಮೇಲಿದೆ. ಈ ಪರದೈಸಲ್ಲಿ ನಮ್ಮನ್ನ ಪ್ರೀತಿಸೋ ಸಹೋದರ ಸಹೋದರಿಯರು ಇರೋ ತರ ಯೆಹೋವ ಮಾಡಿದ್ದಾನೆ. ಇಂಥ ಪ್ರೀತಿಯನ್ನ ಬೇರೆಲ್ಲೂ ನಾವು ನೋಡೋಕಾಗಲ್ಲ. ಈ ಕೆಟ್ಟ ಲೋಕದಲ್ಲಿ ಶಾಂತಿಯಿಂದ ಮತ್ತು ಸುರಕ್ಷಿತವಾಗಿ ಇರೋಕಾಗೋದು ಈ ಪರದೈಸಲ್ಲಿ ಮಾತ್ರಾನೇ. (ಕೀರ್ತ. 72:7) ಅದಕ್ಕೇ ನಾವು ತುಂಬ ಜನ್ರನ್ನ ಈ ಪರದೈಸಿಗೆ ಕರ್ಕೊಂಡು ಬರಬೇಕು ಅಂತ ಇಷ್ಟಪಡ್ತೀವಿ. ಅದನ್ನ ಮಾಡಬೇಕಂದ್ರೆ ನಾವು ಶಿಷ್ಯರಾಗಿ ಮಾಡೋ ಕೆಲಸದಲ್ಲಿ ಬಿಜ಼ಿಯಾಗಿ ಇರಬೇಕು.—ಮತ್ತಾ. 28:19, 20.
ಆಧ್ಯಾತ್ಮಿಕ ಪರದೈಸಿಗೆ ಜನ್ರು ಅವ್ರಾಗೇ ಬರಬೇಕಂದ್ರೆ ನಾವೇನು ಮಾಡಬೇಕು?
16. ಜನ್ರು ಯಾವಾಗ ಆಧ್ಯಾತ್ಮಿಕ ಪರದೈಸಿಗೆ ಬರ್ತಾರೆ?
16 ಜನ್ರು ಅವ್ರಾಗೇ ಆಧ್ಯಾತ್ಮಿಕ ಪರದೈಸಿಗೆ ಬರಬೇಕಂದ್ರೆ ನಾವು ಯೆಹೋವನ ತರ ನಡ್ಕೊಬೇಕು. ಜನ್ರಿಗೆ ಮನಸ್ಸಿಲ್ಲಾ ಅಂದ್ರೂ ಯೆಹೋವ ಯಾವತ್ತೂ ಅವ್ರನ್ನ ಒತ್ತಾಯ ಮಾಡಿ ತನ್ನ ಕಡೆಗೆ ಎಳ್ಕೊಂಡು ಬರಲ್ಲ. ಬದ್ಲಿಗೆ ಅವ್ರಾಗೇ ತನ್ನ ಹತ್ರ ಬರೋ ತರ ಪ್ರೀತಿಯಿಂದ ಅವ್ರನ್ನ ‘ಸೆಳೀತಾನೆ.’ (ಯೋಹಾ. 6:44; ಯೆರೆ. 31:3) ಒಳ್ಳೇ ಮನಸ್ಸಿರೋ ಜನ್ರು ಯೆಹೋವನ ಗುಣಗಳ ಬಗ್ಗೆ ತಿಳ್ಕೊಂಡಾಗ, ಆತನು ಒಳ್ಳೇ ದೇವರು ಅಂತ ಅರ್ಥ ಮಾಡ್ಕೊಂಡಾಗ ಅವ್ರಿಗೇ ಆತನ ಹತ್ರ ಬರಬೇಕು ಅಂತ ಅನಿಸುತ್ತೆ. ನಾವೂ ಯೆಹೋವನ ತರ ಒಳ್ಳೇ ಗುಣಗಳನ್ನ ತೋರಿಸಿದ್ರೆ, ಆತನ ತರ ನಡ್ಕೊಂಡ್ರೆ ಅವರು ಆಧ್ಯಾತ್ಮಿಕ ಪರದೈಸಿಗೆ ಬರ್ತಾರೆ. ಅದನ್ನ ನಾವು ಹೇಗೆ ಮಾಡೋದು?
17. ಜನ್ರು ಅವ್ರಾಗೇ ಆಧ್ಯಾತ್ಮಿಕ ಪರದೈಸಿಗೆ ಬರಬೇಕಂದ್ರೆ ನಾವೇನು ಮಾಡಬೇಕು?
17 ನಾವು ನಮ್ಮ ಸಹೋದರ ಸಹೋದರಿಯರ ಜೊತೆ ಪ್ರೀತಿ ಮತ್ತು ದಯೆಯಿಂದ ನಡ್ಕೊಬೇಕು. ಆಗ ಏನಾಗುತ್ತೆ? ಹೊಸಬರು ನಮ್ಮ ಸಭೆಗೆ ಬರುವಾಗ ಅದು ಅವ್ರ ಮನಸ್ಸು ಮುಟ್ಟುತ್ತೆ. ಹಿಂದಿನ ಕಾಲದಲ್ಲೂ ಕೊರಿಂಥ ಸಭೆಗೆ ಹೊಸಬರು ಬಂದಾಗ ಅವ್ರಿಗೂ ಹೀಗೇ ಅನಿಸ್ತು. ಅದಕ್ಕೇ ಅವರು “ನಿಜವಾಗ್ಲೂ ದೇವರು ನಿಮ್ಮ ಜೊತೆ ಇದ್ದಾನೆ” ಅಂತ ಹೇಳಿದ್ರು. (1 ಕೊರಿಂ. 14:24, 25; ಜೆಕ. 8:23) ಹಾಗಾಗಿ ನಾವು ನಮ್ಮ ಸಹೋದರ ಸಹೋದರಿಯರ ಜೊತೆ “ಶಾಂತಿಯಿಂದ” ಇರೋಣ. (1 ಥೆಸ. 5:13) ಆಗ ನಮ್ಮ ಸಭೆಗೆ ಬರೋ ಹೊಸಬರೂ ಆ ಕೊರಿಂಥದವ್ರ ತರನೇ ಹೇಳ್ತಾರೆ.
18. ಏನನ್ನ ನೋಡಿ ಜನ ನಮ್ಮ ಸಂಘಟನೆಗೆ ಬರಬಹುದು?
18 ನಮ್ಮ ಸಹೋದರ ಸಹೋದರಿಯರನ್ನ ಯೆಹೋವ ಹೇಗೆ ನೋಡ್ತಾನೋ ನಾವೂ ಹಾಗೇ ನೋಡಬೇಕು. ನಾವು ಅವರು ಮಾಡೋ ತಪ್ಪುಗಳಿಗಲ್ಲ, ಅವ್ರಲ್ಲಿರೋ ಒಳ್ಳೇ ಗುಣಗಳಿಗೆ ಗಮನ ಕೊಡಬೇಕು. ಯಾಕಂದ್ರೆ ಈ ತಪ್ಪು ಮಾಡೋ ಸ್ವಭಾವ ಮತ್ತು ಅಪರಿಪೂರ್ಣತೆ ಮುಂದೆ ಒಂದಿನ ಇಲ್ಲದೇ ಹೋಗಿಬಿಡುತ್ತೆ. ಅಷ್ಟೇ ಅಲ್ಲ, ನಾವು ‘ಒಬ್ರು ಇನ್ನೊಬ್ರಿಗೆ ದಯೆ, ಕೋಮಲ ಕರುಣೆ ತೋರಿಸಬೇಕು, ಉದಾರವಾಗಿ ಕ್ಷಮಿಸಬೇಕು.’ (ಎಫೆ. 4:32) ಆಗ ನಮ್ಮ ಮಧ್ಯ ಏನೇ ಸಮಸ್ಯೆಗಳಾದ್ರೂ ಅದನ್ನ ಪ್ರೀತಿಯಿಂದ ಸರಿ ಮಾಡ್ಕೊಳ್ಳೋಕೆ ಆಗುತ್ತೆ. ಇದನ್ನ ಹೊರಗಿನ ಜನ್ರು ನೋಡಿದಾಗ ಅವ್ರಿಗೂ ನಮ್ಮ ಜೊತೆ ಇರಬೇಕು ಅಂತ ಅನಿಸುತ್ತೆ. ಆಗ ಅವ್ರಾಗೇ ಆಧ್ಯಾತ್ಮಿಕ ಪರದೈಸಿಗೆ ಬರ್ತಾರೆ.b
ಆಧ್ಯಾತ್ಮಿಕ ಪರದೈಸಲ್ಲೇ ಇರಿ!
19. (ಎ) ಆಧ್ಯಾತ್ಮಿಕ ಪರದೈಸಿಗೆ ವಾಪಸ್ ಬಂದವರು ಏನು ಹೇಳಿದ್ರು? (“ಬಿಟ್ಟು ಹೋದವರು ವಾಪಸ್ ಬಂದ್ರು” ಅನ್ನೋ ಚೌಕ ನೋಡಿ.) (ಬಿ) ಹಾಗಾಗಿ ನಾವೇನು ಮಾಡೋಣ? (ಚಿತ್ರನೂ ನೋಡಿ.)
19 ಆಧ್ಯಾತ್ಮಿಕ ಪರದೈಸಿಗೆ ಈಗ ತುಂಬ ಜನ ಬರ್ತಿದ್ದಾರೆ. ಇದು ಮುಂಚೆಗಿಂತ ಈಗ ತುಂಬ ಚೆನ್ನಾಗಿದೆ. ಈ ಪರದೈಸನ್ನ ಕೊಟ್ಟಿರೋದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ. ಯಾರೆಲ್ಲ ಹೊಸಬಲ ಪಡ್ಕೊಳ್ಳೋಕೆ, ಜೀವನದಲ್ಲಿ ತೃಪ್ತಿಯಿಂದ, ಶಾಂತಿಯಿಂದ ಮತ್ತು ಸುರಕ್ಷಿತವಾಗಿ ಇರೋಕೆ ಇಷ್ಟಪಡ್ತಾರೋ ಅವ್ರೆಲ್ಲ ಈ ಆಧ್ಯಾತ್ಮಿಕ ಪರದೈಸಿಗೆ ಬರಬೇಕು. ಇದನ್ನ ಯಾವತ್ತೂ ಬಿಟ್ಟುಹೋಗಬಾರದು! ಆದ್ರೆ ಸೈತಾನ ನಾವು ಇದನ್ನ ಬಿಟ್ಟುಹೋಗೋ ತರ ಮಾಡೋಕೆ ತುಂಬ ಕುತಂತ್ರಗಳನ್ನ ಮಾಡ್ತಾನೆ. (1 ಪೇತ್ರ 5:8; ಪ್ರಕ. 12:9) ಅದಕ್ಕೆ ನಾವು ಅವಕಾಶ ಕೊಡೋದು ಬೇಡ. ಈ ಆಧ್ಯಾತ್ಮಿಕ ಪರದೈಸ್ ಇನ್ನೂ ಸುಂದರವಾಗಿ ಕಾಣೋ ತರ ಮಾಡೋಣ. ಅದು ಯಾವತ್ತೂ ಹಾಳಾಗದೇ ಇರೋ ತರ ನೋಡ್ಕೊಳ್ಳೋಣ. ಅಲ್ಲಿ ಯಾವಾಗ್ಲೂ ಶಾಂತಿ ತುಂಬಿರೋ ಹಾಗೆ ಮಾಡೋಣ.
ಈಗ ಆಧ್ಯಾತ್ಮಿಕ ಪರದೈಸಲ್ಲಿ ಇರೋರು ಮುಂದೆ ಹೊಸಲೋಕದಲ್ಲಿ ಇರ್ತಾರೆ (ಪ್ಯಾರ 19 ನೋಡಿ)
ನೀವೇನು ಹೇಳ್ತೀರಾ?
ಆಧ್ಯಾತ್ಮಿಕ ಪರದೈಸ್ ಅಂದ್ರೆ ಏನು?
ಆಧ್ಯಾತ್ಮಿಕ ಪರದೈಸಲ್ಲಿ ಇದ್ರೆ ಯಾವೆಲ್ಲ ಆಶೀರ್ವಾದ ಸಿಗುತ್ತೆ?
ಜನ್ರು ಅವ್ರಾಗೇ ಆಧ್ಯಾತ್ಮಿಕ ಪರದೈಸಿಗೆ ಬರಬೇಕಂದ್ರೆ ನಾವೇನು ಮಾಡಬೇಕು?
ಗೀತೆ 24 ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!
a ಪದ ವಿವರಣೆ: “ಆಧ್ಯಾತ್ಮಿಕ ಪರದೈಸ್” ಅಂದ್ರೆ ಯೆಹೋವನನ್ನ ಖುಷಿಖುಷಿಯಾಗಿ ಆರಾಧಿಸೋ ಒಂದು ವಾತಾವರಣ ಆಗಿದೆ. ಅಲ್ಲಿ ನಮಗೆ ಯೆಹೋವ ದೇವರ ಜೊತೆ ಒಳ್ಳೇ ಸಂಬಂಧ ಇರುತ್ತೆ. ಸಹೋದರ ಸಹೋದರಿಯರ ಜೊತೆ ಶಾಂತಿ, ಒಗ್ಗಟ್ಟಿಂದ ಇರ್ತೀವಿ.
b jw.orgನಲ್ಲಿ ಅವರು ಈಗ ಹೇಗಿದ್ದಾರೆ? ಅಲೆನಾ ಜಿಟ್ನಿಕೋವಾ: ನನ್ನ ಕನಸು ನನಸಾಯ್ತು! ಅನ್ನೋ ವಿಡಿಯೋ ನೋಡಿ. ಒಬ್ಬ ಸಹೋದರಿಗೆ ಆಧ್ಯಾತ್ಮಿಕ ಪರದೈಸಲ್ಲಿ ಇದ್ದಿದ್ರಿಂದ ಏನೆಲ್ಲಾ ಒಳ್ಳೇದಾಯ್ತು ಅಂತ ಗಮನಿಸಿ.
c ಚಿತ್ರ ವಿವರಣೆ: ಎಲ್ರೂ ಸಹೋದರ ಸಹೋದರಿಯರ ಜೊತೆ ಮಾತಾಡ್ತಾ ಖುಷಿಯಾಗಿದ್ರೆ ಒಬ್ಬ ಸಹೋದರ ಮಾತ್ರ ಅವ್ರಿಂದ ದೂರ ಇದ್ದಾನೆ.