ಯುದ್ಧ-ಹೊಡೆದಾಟಗಳನ್ನ ನಾವು ನಿಲ್ಲಿಸೋಕಾಗುತ್ತಾ?
ಇವತ್ತು ಜನ ತುಂಬ ವಿಷ್ಯಗಳಿಗೆ ಹೊಡೆದಾಡ್ತಾರೆ. ಕೆಲವರು ಸರ್ಕಾರಗಳು ಬದಲಾಗಬೇಕಂತ, ಹಣಕಾಸಿನ ಪರಿಸ್ಥಿತಿ ಸುಧಾರಣೆ ಆಗಬೇಕಂತ, ಎಲ್ರಿಗೂ ಸಮಾನ ಹಕ್ಕು ಸಿಗಬೇಕು ಅಂತ ಹೊಡೆದಾಡ್ತಾರೆ. ಇನ್ನೂ ಕೆಲವರು ನೀರು, ನೆಲ ಬೇಕು ಅಂತ ಹೊಡೆದಾಡ್ತಾರೆ. ಇನ್ನೂ ಎಷ್ಟೋ ಹೊಡೆದಾಟಗಳು ಧರ್ಮ ಮತ್ತು ಸಂಸ್ಕೃತಿ ಹೆಸ್ರಲ್ಲಿ ನಡಿಯುತ್ತೆ. ಈ ಹೊಡೆದಾಟಗಳನ್ನೆಲ್ಲಾ ನಿಲ್ಲಿಸೋಕೆ, ಶಾಂತಿ ಸ್ಥಾಪಿಸೋಕೆ ಜನ ಏನಾದ್ರೂ ಪ್ರಯತ್ನ ಮಾಡ್ತಿದ್ದಾರಾ? ಅವ್ರ ಪ್ರಯತ್ನದಿಂದ ನಿಜವಾಗ್ಲೂ ಶಾಂತಿ ಸಿಗುತ್ತಾ?
Drazen_/E+ via Getty Images
ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ
ಇದ್ರ ಗುರಿ ಏನು? ಇವತ್ತು ಹೊಡೆದಾಟಗಳಾಗೋಕೆ ಒಂದು ಮುಖ್ಯ ಕಾರಣ ಹಣ. ಅದಕ್ಕೇ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ತಂದು ಜನ್ರ ಮಧ್ಯೆ ಇರೋ ಶ್ರೀಮಂತರು, ಬಡವರು ಅನ್ನೋ ಭೇದಭಾವನ ತೆಗೆಯೋದು ಅಥವಾ ಸ್ವಲ್ಪಮಟ್ಟಿಗಾದ್ರೂ ಕಮ್ಮಿ ಮಾಡೋದು.
ಇದ್ರಲ್ಲಿರೋ ಸಮಸ್ಯೆ ಏನು? ಸರ್ಕಾರಗಳು ಯಾವುದಕ್ಕೆ ಜಾಸ್ತಿ ಖರ್ಚು ಮಾಡ್ತಿದ್ಯೋ ಅದನ್ನ ಕಮ್ಮಿ ಮಾಡಬೇಕು. ಉದಾಹರಣೆಗೆ, 2022ರಲ್ಲಿ ಇಡೀ ಪ್ರಪಂಚದಲ್ಲಿ ಸುಮಾರು 2 ಲಕ್ಷ 90 ಸಾವಿರ ಕೋಟಿಗಿಂತ ಜಾಸ್ತಿ ಹಣವನ್ನ ಶಾಂತಿ ಸ್ಥಾಪಿಸೋಕೆ ಮತ್ತು ಕಾಪಾಡೋಕೆ ಖರ್ಚು ಮಾಡಿದ್ದಾರೆ. ತುಂಬ ಖರ್ಚು ಮಾಡಿದ್ದಾರೆ ಅಂತ ಅನಿಸುತ್ತಲ್ವಾ? ಆದ್ರೆ ಅದೇ ವರ್ಷ ಮಿಲಿಟರಿಗೆ ಖರ್ಚು ಮಾಡಿರೋ ಹಣಕ್ಕೆ ಹೋಲಿಸಿದ್ರೆ ಇದು 1 ಪರ್ಸೆಂಟ್ ಕೂಡ ಅಲ್ಲ.
“ಯುದ್ಧನ ತಡಿಯೋಕೆ ಮತ್ತು ಶಾಂತಿ ತರೋಕೆ ನಾವು ಖರ್ಚು ಮಾಡ್ತಿರೋದಕ್ಕಿಂತ ಯುದ್ಧದಿಂದ ತೊಂದ್ರೆ ಆದವ್ರಿಗೆ ಸಹಾಯ ಮಾಡೋಕೆ ಖರ್ಚು ಮಾಡ್ತಿರೋದೇ ಜಾಸ್ತಿ.”—ಆ್ಯಂಟೊನಿಯೋ ಗ್ಯುಟೇರ್ಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ.
ಬೈಬಲ್ ಏನು ಹೇಳುತ್ತೆ? ಪ್ರಪಂಚದಲ್ಲಿರೋ ಸರ್ಕಾರಗಳು ಮತ್ತು ಸಂಸ್ಥೆಗಳು ಬಡವ್ರಿಗೆ ಸಹಾಯ ಮಾಡಬಹುದು, ಆದ್ರೆ ಬಡತನನ ಪೂರ್ತಿಯಾಗಿ ತೆಗೆದುಹಾಕೋಕೆ ಅವ್ರಿಂದ ಆಗೋದೇ ಇಲ್ಲ.—ಧರ್ಮೋಪದೇಶಕಾಂಡ 15:11; ಮತ್ತಾಯ 26:11.
ಶಾಂತಿಯ ಒಪ್ಪಂದಗಳು
ಇದ್ರ ಗುರಿ ಏನು? ಹೊಡೆದಾಟಗಳು ಆಗದೇ ಇರೋ ತರ ನೋಡ್ಕೊಳ್ಳೋಕೆ ಅಥವಾ ಸಮಾಧಾನವಾಗಿ ಸಮಸ್ಯೆನ ಬಗೆಹರಿಸೋಕೆ ಎರಡೂ ಕಡೆಯವರು ಮಾತಾಡಿ, ಎರಡೂ ಕಡೆಯವ್ರಿಗೆ ಪ್ರಯೋಜನ ಆಗೋ ತರ ಒಂದು ಒಪ್ಪಂದಕ್ಕೆ ಬರೋದು.
ಇದ್ರಲ್ಲಿರೋ ಸಮಸ್ಯೆ ಏನು? ಒಪ್ಪಂದನ ಕೆಲವೊಮ್ಮೆ ಒಂದು ಕಡೆಯವರು ಒಪ್ಪಿದ್ರೆ ಇನ್ನೊಂದು ಕಡೆಯವರು ಒಪ್ಪಲ್ಲ ಅಥವಾ ಒಂದು ವಿಷ್ಯಕ್ಕೆ ಒಪ್ಪಿದ್ರೆ ಇನ್ನೊಂದು ವಿಷ್ಯಕ್ಕೆ ಒಪ್ಪಲ್ಲ. ಒಂದುವೇಳೆ ಒಪ್ಪಂದಗಳು ಆದ್ರೂ ಅದು ಸುಲಭವಾಗಿ ಮುರಿದು ಹೋಗುತ್ತೆ.
“ಒಪ್ಪಂದ ಆದ ತಕ್ಷಣ ಶಾಂತಿ ಸಿಗುತ್ತೆ ಅಂತ ಹೇಳೋಕಾಗಲ್ಲ. ಯುದ್ಧ ನಿಲ್ಲಿಸೋಕೆ ಮಾಡಿದ ಒಪ್ಪಂದಗಳಲ್ಲೇ ಎಷ್ಟೊಂದು ಕುಂದುಕೊರತೆ ಇರುತ್ತಂದ್ರೆ ಮುಂದೆ ಅದ್ರಿಂದಾನೇ ದೊಡ್ಡದೊಡ್ಡ ಗಲಾಟೆಗಳು ಆಗೋಗುತ್ತೆ.”—ರೇಮಂಡ್ ಎಫ್. ಸ್ಮಿತ್, ಅಮೆರಿಕನ್ ಡಿಪ್ಲಮಸಿ.
ಬೈಬಲ್ ಏನು ಹೇಳುತ್ತೆ? ಜನ್ರು ‘ಶಾಂತಿಯನ್ನ ಹುಡುಕಬೇಕು.’ (ಕೀರ್ತನೆ 34:14) ಆದ್ರೆ ಇವತ್ತು ತುಂಬ ಜನ ‘ನಂಬಿಕೆದ್ರೋಹ ಮಾಡುವವರು, ಯಾವುದಕ್ಕೂ ಒಪ್ಪದವರು, ಮಿತ್ರದ್ರೋಹಿಗಳು’ ಆಗಿದ್ದಾರೆ. (2 ತಿಮೊತಿ 3:1-4) ಜನ್ರಲ್ಲಿ ಇಂಥ ಗುಣಗಳು ಇರೋದ್ರಿಂದಾನೇ, ಒಳ್ಳೇದು ಮಾಡೋಕೆ ಆಸೆ ಇರೋ ರಾಜಕೀಯ ನಾಯಕರಿಗೂ ಈ ಸಮಸ್ಯೆಗಳನ್ನ ಬಗೆಹರಿಸೋಕೆ ಆಗ್ತಿಲ್ಲ.
ಶಸ್ತ್ರಾಸ್ತ್ರಗಳನ್ನ ತೆಗೆದುಹಾಕೋದು
ಇದ್ರ ಗುರಿ ಏನು? ಶಸ್ತ್ರಾಸ್ತ್ರಗಳನ್ನ ಕಮ್ಮಿ ಮಾಡೋದು. ಅದ್ರಲ್ಲೂ ಮುಖ್ಯವಾಗಿ ನ್ಯೂಕ್ಲಿಯರ್, ರಾಸಾಯನಿಕ ಮತ್ತು ಜೈವಿಕ (ಬಯೋಲಾಜಿಕಲ್) ಶಸ್ತ್ರಾಸ್ತ್ರಗಳು ಇಲ್ಲದೇ ಇರೋ ತರ ನೋಡ್ಕೊಳ್ಳೋದು.
ಇದ್ರಲ್ಲಿರೋ ಸಮಸ್ಯೆ ಏನು? ದೇಶಗಳು ಶಸ್ತ್ರಾಸ್ತ್ರಗಳನ್ನ ತೆಗೆದುಹಾಕೋಕೆ ರೆಡಿ ಇಲ್ಲ. ತೆಗೆದುಹಾಕಿದ್ರೆ ಬೇರೆ ದೇಶಗಳು ನಮ್ಮನ್ನ ನೋಡಿ ಭಯಪಡಲ್ಲ, ನಮ್ಮ ಮೇಲೆ ಯುದ್ಧಕ್ಕೆ ಬಂದುಬಿಡುತ್ತೆ ಅಂತ ಅಂದ್ಕೊಳ್ತಾರೆ. ಒಂದುವೇಳೆ ದೇಶಗಳು ಶಸ್ತ್ರಾಸ್ತ್ರಗಳನ್ನ ತೆಗೆದುಹಾಕಿದ್ರೂ ಯುದ್ಧಗಳನ್ನ ನಿಲ್ಲಿಸೋಕೆ ಆಗಲ್ಲ.
“ಶಸ್ತ್ರಾಸ್ತ್ರಗಳನ್ನ ತೆಗೆದುಹಾಕಿದ ತಕ್ಷಣ ಜನ ಯುದ್ಧ ಮಾಡೋದನ್ನ ನಿಲ್ಲಿಸಲ್ಲ. 1991ರ ನಂತರ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದುಹಾಕ್ತೀವಿ ಅಂತ ಮಾತುಕೊಟ್ಟಿದ್ದ ದೇಶಗಳು ಮಾತುಕೊಟ್ಟಂಗೆ ನಡ್ಕೊಳ್ಳಲಿಲ್ಲ. ಅಷ್ಟೇ ಅಲ್ಲ, ಅವರು ‘ನಮ್ಮ ದೇಶದವರು ಬೇರೆ ದೇಶದವ್ರಿಗೆ ತೊಂದ್ರೆ ಕೊಡಲ್ಲ, ಅವ್ರನ್ನ ಭಯಪಡಿಸೋ ಯಾವ ಕೆಲ್ಸನೂ ಮಾಡಲ್ಲ, ಇಡೀ ಪ್ರಪಂಚದಲ್ಲಿ ನಾವು ಸುರಕ್ಷತೆ ತರ್ತೀವಿ’ ಅಂತೆಲ್ಲ ಹೇಳಿದ್ರು, ಇದ್ಯಾವುದೂ ನಡೆದಿಲ್ಲ.”—“ಸೆಕ್ಯೂರಿಂಗ್ ಅವರ್ ಕಾಮನ್ ಫ್ಯುಚರ್: ಆ್ಯನ್ ಅಜೆಂಡ ಫಾರ್ ಡಿಸ್ಆರ್ಮಮೆಂಟ್.”
ಬೈಬಲ್ ಏನು ಹೇಳುತ್ತೆ? ಜನ್ರು ಆಯುಧ ಹಿಡಿಯೋದನ್ನ ಬಿಡಬೇಕು. ‘ತಮ್ಮ ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ ಮಾಡಬೇಕು.’ (ಯೆಶಾಯ 2:4) ಆಯುಧ ಬಿಟ್ರೆ ಮಾತ್ರ ಸಾಕಾಗಲ್ಲ, ಹಿಂಸೆ ಮಾಡ್ಬೇಕು ಅನ್ನೋ ಯೋಚ್ನೆನೇ ಮನಸ್ಸಿಂದ ತೆಗೆದುಹಾಕಬೇಕು.—ಮತ್ತಾಯ 15:19.
ಭದ್ರತೆ ಕೊಡೋಕೆ ಕೈಜೋಡಿಸೋದು
ಇದ್ರ ಗುರಿ ಏನು? ಯಾವುದಾದ್ರೂ ಒಂದು ದೇಶ ಯುದ್ಧ ಮಾಡೋಕೆ ಮುಂದೆ ಬಂದ್ರೆ, ಅವ್ರ ವಿರುದ್ಧ ಬೇರೆ ದೇಶದವ್ರೆಲ್ಲ ಒಟ್ಟಾಗಿ ಸೇರಿ ಯುದ್ಧ ಮಾಡೋದು. ‘ನಾವು ಯುದ್ಧಕ್ಕೆ ಹೋದ್ರೆ ಬೇರೆಲ್ಲ ದೇಶಗಳು ನಮ್ಮ ಮೇಲೆ ಯುದ್ಧಕ್ಕೆ ಬರುತ್ತೆ’ ಅಂತ ಗೊತ್ತಾದ್ರೆ ಯಾವ ದೇಶನೂ ಯುದ್ಧ ಮಾಡೋಕೆ ಧೈರ್ಯ ಮಾಡಲ್ಲ.
ಇದ್ರಲ್ಲಿರೋ ಸಮಸ್ಯೆ ಏನು? ಬೇರೆ ದೇಶದವರು ನಮ್ಮೇಲೆ ಯುದ್ಧಕ್ಕೆ ಬರ್ತಾರೆ ಅನ್ನೋ ಭಯ ಇದ್ದ ತಕ್ಷಣ ಶಾಂತಿ ಸಿಗುತ್ತೆ ಅಂತ ಹೇಳೋಕಾಗಲ್ಲ. ಯಾಕಂದ್ರೆ ಒಟ್ಟಾಗಿ ಸೇರಿ ಯುದ್ಧ ಮಾಡೋಣ ಅಂತ ಮಾತುಕೊಟ್ಟ ದೇಶಗಳು ಯಾವಾಗ್ಲೂ ಮಾತುಕೊಟ್ಟಂಗೆ ನಡ್ಕೊಳ್ಳಲ್ಲ. ಅಷ್ಟೇ ಅಲ್ಲ, ಯುದ್ಧ ಶುರುಮಾಡಿದ ದೇಶದ ವಿರುದ್ಧ ಯಾವಾಗ, ಹೇಗೆ ಯುದ್ಧ ಮಾಡಬೇಕು ಅಂತ ಎಲ್ರೂ ಒಂದೇ ನಿರ್ಧಾರಕ್ಕೆ ಬರಲ್ಲ.
“ದೇಶಗಳ ಮಧ್ಯೆ ಒಪ್ಪಂದ ಮಾಡಿಸಿ ಭದ್ರತೆ ತರೋಕೆ ಜನಾಂಗ ಸಂಘ ಮತ್ತು ವಿಶ್ವಸಂಸ್ಥೆ ತುಂಬ ಪ್ರಯತ್ನ ಮಾಡಿದೆ. ಆದ್ರೆ ಅವ್ರ ಪ್ರಯತ್ನಗಳು ಸೋತು ಹೋಗಿರೋದು ನಮಗೆ ಕಾಣಿಸ್ತಿದೆ.”—“ಎನ್ಸೈಕ್ಲಪೀಡಿಯ ಬ್ರಿಟಾನಿಕ.”
ಬೈಬಲ್ ಏನು ಹೇಳುತ್ತೆ? ಭದ್ರತೆ ಸಿಗಬೇಕಂದ್ರೆ ತುಂಬ ಜನ ಒಗ್ಗಟ್ಟಾಗಿ ಕೆಲ್ಸ ಮಾಡಬೇಕು. (ಪ್ರಸಂಗಿ 4:12) ಆದ್ರೆ ಮನುಷ್ಯರ ಸರ್ಕಾರಗಳು ಮತ್ತು ಸಂಸ್ಥೆಗಳು ಎಷ್ಟೇ ಪ್ರಯತ್ನ ಮಾಡಿದ್ರೂ ಶಾಶ್ವತವಾಗಿ ಶಾಂತಿ ಮತ್ತು ಭದ್ರತೆನ ತರೋಕೆ ಆಗಲ್ಲ. ಅದಕ್ಕೆ ಬೈಬಲ್, “ದೊಡ್ಡದೊಡ್ಡ ಅಧಿಕಾರಿಗಳ ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ, ಅವರು ರಕ್ಷಣೆ ಕೊಡೋಕೆ ಆಗಲ್ಲ. ಮನುಷ್ಯನ ಉಸಿರು ಹೋದಾಗ ಮಣ್ಣಿಗೆ ಸೇರ್ತಾನೆ. ಆ ದಿನಾನೇ ಅವನ ಯೋಚನೆಗಳೆಲ್ಲ ಅಳಿದು ಹೋಗುತ್ತೆ” ಅಂತ ಹೇಳುತ್ತೆ.—ಕೀರ್ತನೆ 146:3, 4.
ಶಾಂತಿ ತರೋಕೆ ದೇಶಗಳು ಎಷ್ಟೇ ಪ್ರಯತ್ನ ಮಾಡಿದ್ರೂ ಯುದ್ಧಗಳನ್ನ ನಿಲ್ಲಿಸೋಕೆ ಆಗ್ತಿಲ್ಲ, ಅದ್ರಿಂದ ನಾವಿನ್ನೂ ನರಳ್ತಾ ಇದ್ದೀವಿ