ಅಧ್ಯಯನ ಲೇಖನ 17
ಗೀತೆ 99 ಲಕ್ಷಾಂತರ ಸೋದರರು
ನಾವು ಯಾವತ್ತೂ ಒಂಟಿಯಲ್ಲ
“ನಾನು ನಿನಗೆ ಸಹಾಯ ಮಾಡ್ತೀನಿ.”—ಯೆಶಾ. 41:10.
ಈ ಲೇಖನದಲ್ಲಿ ಏನಿದೆ?
ಯೆಹೋವ ನಮ್ಮನ್ನ ಯಾವ ನಾಲ್ಕು ರೀತಿಲಿ ನೋಡ್ಕೊಳ್ತಾನೆ ಅಂತ ಕಲಿಯೋಣ.
1-2. (ಎ) ಏನೇ ಕಷ್ಟ ಬಂದ್ರೂ ನಾವು ಒಂಟಿಯಲ್ಲ ಅಂತ ಹೇಗೆ ಹೇಳಬಹುದು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?
ಕಷ್ಟಗಳು ಬಂದಾಗ ಅಲ್ಲೋಲ ಕಲ್ಲೋಲ ಆದ ಸಮುದ್ರದಲ್ಲಿರೋ ಒಂದು ಚಿಕ್ಕ ದೋಣಿಯಲ್ಲಿ ನಾವಿದ್ದೀವಿ ಅಂತ ನಮಗೆ ಅನಿಸುತ್ತೆ. ನಾವು ಒಂಟಿಯಾಗಿದ್ದೀವಿ, ನಮಗ್ಯಾರೂ ಸಹಾಯ ಮಾಡೋಕಾಗಲ್ಲ ಅಂತ ಅನಿಸುತ್ತೆ. ಆದ್ರೆ ಸ್ವರ್ಗದಲ್ಲಿರೋ ನಮ್ಮಪ್ಪ ಯೆಹೋವ ನಾವು ಪಡ್ತಿರೋ ಕಷ್ಟನೆಲ್ಲ ನೋಡ್ತಿದ್ದಾನೆ. ಬರೀ ನೋಡೋದಷ್ಟೇ ಅಲ್ಲ, “ನಾನು ನಿನಗೆ ಸಹಾಯ ಮಾಡ್ತೀನಿ” ಅಂತನೂ ಮಾತುಕೊಟ್ಟಿದ್ದಾನೆ. ಹಾಗಾಗಿ ನಮಗೆ ಎಂಥ ಕಷ್ಟ ಬಂದ್ರೂ ನಮ್ಮನ್ನ ಪಾರುಮಾಡಿ ದಡ ಸೇರಿಸ್ತಾನೆ.—ಯೆಶಾ. 41:10.
2 ಹಾಗಾದ್ರೆ ಯೆಹೋವ ನಮಗೆ ಹೇಗೆಲ್ಲಾ ಸಹಾಯ ಮಾಡ್ತಾನೆ? (1) ನಮಗೆ ದಾರಿ ತೋರಿಸ್ತಾನೆ, (2) ನಮಗೆ ಬೇಕಾಗಿರೋದನ್ನೆಲ್ಲಾ ಕೊಡ್ತಾನೆ, (3) ನಮ್ಮನ್ನ ಕಾಪಾಡ್ತಾನೆ, (4) ನಮ್ಮನ್ನ ಸಮಾಧಾನ ಮಾಡ್ತಾನೆ. ಇದನ್ನೆಲ್ಲ ಹೇಗೆ ಮಾಡ್ತಾನೆ ಅಂತ ಈ ಲೇಖನದಲ್ಲಿ ನೋಡೋಣ. ಇದನ್ನ ಕಲಿಯುವಾಗ ನಮಗೆಷ್ಟೇ ಕಷ್ಟ ಬಂದ್ರೂ ಯೆಹೋವ ನಮ್ಮನ್ನ ಮರೆಯಲ್ಲ, ನಮ್ಮ ಕೈಬಿಡಲ್ಲ ಅಂತ ಗೊತ್ತಾಗುತ್ತೆ. ಹಾಗಾಗಿ ನಾವು ಯಾವತ್ತೂ ಒಂಟಿಯಲ್ಲ.
ಯೆಹೋವ ನಮಗೆ ದಾರಿ ತೋರಿಸ್ತಾನೆ
3-4. ಯೆಹೋವ ನಮಗೆ ಹೇಗೆ ಸರಿ ದಾರಿ ತೋರಿಸ್ತಾನೆ? (ಕೀರ್ತನೆ 48:14)
3 ಕೀರ್ತನೆ 48:14 ಓದಿ. ಸರಿ ದಾರಿ ಯಾವುದು ಅಂತ ನೀವೇ ಕಂಡುಹಿಡಿರಿ ಅಂತ ಯೆಹೋವ ಬಿಟ್ಟುಬಿಟ್ಟಿಲ್ಲ. ಯಾಕಂದ್ರೆ ಅದು ನಮ್ಮಿಂದ ಆಗಲ್ಲ ಅಂತ ಆತನಿಗೆ ಚೆನ್ನಾಗಿ ಗೊತ್ತು. ಅದಕ್ಕೆ ಆತನೇ ನಮಗೆ ಸರಿ ದಾರಿ ತೋರಿಸ್ತಿದ್ದಾನೆ. ಹೇಗೆ? ಒಂದು, ಬೈಬಲಿಂದ. (ಕೀರ್ತ. 119:105) ಜೀವನದಲ್ಲಿ ನಿರ್ಧಾರಗಳನ್ನ ಮಾಡೋಕೆ, ಒಳ್ಳೊಳ್ಳೆ ಗುಣಗಳನ್ನ ಬೆಳೆಸ್ಕೊಳ್ಳೋಕೆ ಯೆಹೋವ ದೇವರು ನಮಗೆ ಬೈಬಲಿಂದ ಹೇಳ್ಕೊಡ್ತಿದ್ದಾನೆ.a ಉದಾಹರಣೆಗೆ, ನಾವು ಕೋಪನ ಮನಸ್ಸಲ್ಲಿ ಇಟ್ಕೊಳ್ಳದೇ ಬೇರೆಯವ್ರನ್ನ ಕ್ಷಮಿಸಬೇಕು, ಯಾವಾಗ್ಲೂ ಪ್ರಾಮಾಣಿಕರಾಗಿರಬೇಕು, ಜನ್ರನ್ನ ಮನಸಾರೆ ಪ್ರೀತಿಸಬೇಕು ಅಂತ ಹೇಳ್ಕೊಡ್ತಿದ್ದಾನೆ. (ಕೀರ್ತ. 37:8; ಇಬ್ರಿ. 13:18; 1 ಪೇತ್ರ 1:22) ಇಂಥ ಒಳ್ಳೇ ಗುಣಗಳನ್ನ ನಾವು ತೋರಿಸೋದ್ರಿಂದ ಒಳ್ಳೇ ಅಪ್ಪ-ಅಮ್ಮ, ಗಂಡ-ಹೆಂಡ್ತಿ ಆಗ್ತೀವಿ ಮತ್ತು ಒಳ್ಳೇ ಫ್ರೆಂಡ್ಸ್ ಆಗೋಕೂ ಕಲಿತೀವಿ. ಹೀಗೆ ನಾವು ಈಗ್ಲೂ ಖುಷಿಯಾಗಿ ಇರ್ತೀವಿ, ಮುಂದೆ ಶಾಶ್ವತ ಜೀವನೂ ಪಡ್ಕೊಳ್ತೀವಿ.
4 ಯೆಹೋವ ಬೈಬಲಲ್ಲಿ ತನ್ನ ಸೇವಕರ ಬಗ್ಗೆನೂ ಬರೆಸಿಟ್ಟಿದ್ದಾನೆ. ಅವರೂ ನಮ್ಮ ತರ ತುಂಬ ಕಷ್ಟಗಳನ್ನ ಅನುಭವಿಸಿದ್ರು, ನಮ್ಮ ತರನೇ ಅವ್ರಿಗೂ ಅನಿಸ್ತಿತ್ತು. (1 ಕೊರಿಂ. 10:13; ಯಾಕೋ. 5:17) ಅವ್ರ ಬಗ್ಗೆ ಓದಿ, ಅವ್ರಿಂದ ಪಾಠಗಳನ್ನ ಕಲಿತು ಪಾಲಿಸಿದ್ರೆ ನಮಗೆ ತುಂಬ ಪ್ರಯೋಜನ ಆಗುತ್ತೆ. ಒಂದು ಪ್ರಯೋಜನ ಏನಂದ್ರೆ, ಬೇರೆಯವರು ನಮ್ಮ ತರನೇ ಕಷ್ಟ ಅನುಭವಿಸಿ ಅದನ್ನ ಸಹಿಸ್ಕೊಂಡಿದ್ದಾರೆ ಅಂತ ಗೊತ್ತಾದಾಗ ನಾವು ಒಂಟಿಯಲ್ಲ ಅಂತ ಧೈರ್ಯ ಸಿಗುತ್ತೆ. (1 ಪೇತ್ರ 5:9) ಎರಡನೇ ಪ್ರಯೋಜನ ಏನಂದ್ರೆ ನಮಗಿರೋ ಕಷ್ಟಗಳನ್ನ ಹೇಗೆ ಸಹಿಸ್ಕೊಂಡು ಖುಷಿಯಾಗಿರಬಹುದು ಅಂತ ಕಲಿಯೋಕೆ ಆಗುತ್ತೆ.—ರೋಮ. 15:4.
5. ಯೆಹೋವ ಯಾರಿಂದ ನಮಗೆ ಸರಿ ದಾರಿ ತೋರಿಸ್ತಾನೆ?
5 ಯೆಹೋವ ದೇವರು ನಮ್ಮ ಸಹೋದರ ಸಹೋದರಿಯರಿಂದನೂ ನಮಗೆ ಸರಿ ದಾರಿ ತೋರಿಸ್ತಾನೆ.b ಉದಾಹರಣೆಗೆ ಸರ್ಕಿಟ್ ಮೇಲ್ವಿಚಾರಕರು ಸಭೆಗಳನ್ನ ಆಗಾಗ ಭೇಟಿಮಾಡಿ ನಮ್ಮನ್ನ ಪ್ರೋತ್ಸಾಹಿಸ್ತಾರೆ. ಅವರು ಕೊಡೋ ಭಾಷಣಗಳಿಂದ ನಮ್ಮ ನಂಬಿಕೆ ಗಟ್ಟಿ ಆಗುತ್ತೆ, ನಾವು ಒಗ್ಗಟ್ಟಿಂದ ಇರೋಕೂ ಆಗುತ್ತೆ. (ಅ. ಕಾ. 15:40–16:5) ಅವರಷ್ಟೇ ಅಲ್ಲ, ಸಭೆಲಿರೋ ಹಿರಿಯರು ಪ್ರತಿಯೊಬ್ಬ ಪ್ರಚಾರಕನ ಬಗ್ಗೆನೂ ಕಾಳಜಿ ವಹಿಸ್ತಾರೆ. (1 ಪೇತ್ರ 5:2, 3) ಅಪ್ಪ-ಅಮ್ಮಂದಿರು ಮಕ್ಕಳಿಗೆ ಯೆಹೋವನನ್ನ ಪ್ರೀತಿಸೋಕೆ, ಯೋಚಿಸಿ ಸರಿಯಾದ ನಿರ್ಧಾರ ಮಾಡೋದನ್ನ ಕಲಿಯೋಕೆ, ಒಳ್ಳೇ ರೂಢಿಗಳನ್ನ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಾರೆ. (ಜ್ಞಾನೋ. 22:6) ಅನುಭವ ಇರೋ ಸಹೋದರಿಯರು ಯುವ ಸಹೋದರಿಯರಿಗೆ ಒಳ್ಳೇ ಮಾದರಿಯಾಗಿ ಇರ್ತಾರೆ, ಪ್ರೀತಿಯಿಂದ ಬುದ್ಧಿವಾದ ಕೊಡ್ತಾ, ಪ್ರೋತ್ಸಾಹಿಸ್ತಾ ಸಹಾಯ ಮಾಡ್ತಾರೆ.—ತೀತ 2:3-5.
6. ಯೆಹೋವ ತೋರಿಸಿದ ದಾರಿಲಿ ನಡಿಯೋಕೆ ನಾವೇನು ಮಾಡಬೇಕು?
6 ಯೆಹೋವ ದೇವರು ಸರಿ ದಾರಿ ಯಾವುದು ಅಂತ ನಮಗೆ ತೋರಿಸಿದ್ದಾನೆ. ನಾವು ಆ ದಾರಿಲಿ ನಡಿಯೋಕೆ ಏನು ಮಾಡಬೇಕು? ಜ್ಞಾನೋಕ್ತಿ 3:5, 6ರಲ್ಲಿ “ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಡು, ನಿನ್ನ ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ” ಅಂತಿದೆ. ನಾವು ಹೀಗೆ ಮಾಡಿದ್ರೆ ಸಮಸ್ಯೆಗಳಿಂದ ದೂರ ಇರೋಕೆ, ಖುಷಿ-ಖುಷಿಯಾಗಿ ಜೀವನ ಮಾಡೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಹೀಗೆ ಯೆಹೋವ ಪ್ರೀತಿಯಿಂದ, ನಮ್ಮಲ್ಲಿ ಒಬ್ಬೊಬ್ಬರಿಗೂ ಬೇಕಾಗಿರೋ ಸಲಹೆ ಕೊಟ್ಟು ಸರಿ ದಾರಿ ತೋರಿಸ್ತಾ ಇರೋದಕ್ಕೆ ನಾವೆಷ್ಟು ಋಣಿಗಳಾಗಿರಬೇಕಲ್ವಾ?—ಕೀರ್ತ. 32:8.
ಯೆಹೋವ ನಮಗೆ ಬೇಕಾಗಿರೋದನ್ನೆಲ್ಲ ಕೊಡ್ತಾನೆ
7. ನಮ್ಮ ಜೀವನಕ್ಕೆ ಬೇಕಾಗಿರೋ ವಿಷ್ಯಗಳನ್ನ ಯೆಹೋವ ಹೇಗೆ ಕೊಡ್ತಾನೆ? (ಫಿಲಿಪ್ಪಿ 4:19)
7 ಫಿಲಿಪ್ಪಿ 4:19 ಓದಿ. ಯೆಹೋವ ನಮ್ಮ ಜೀವನಕ್ಕೆ ಸರಿ ದಾರಿ ತೋರಿಸೋದು ಮಾತ್ರ ಅಲ್ಲ, ಊಟ, ಬಟ್ಟೆ, ಮನೆಗಾಗಿ ನಾವು ಹಾಕೋ ಪ್ರಯತ್ನನೂ ಆಶೀರ್ವದಿಸ್ತಾನೆ. (ಮತ್ತಾ. 6:33; 2 ಥೆಸ. 3:12) ನಮ್ಮ ಜೀವನಕ್ಕೆ ಬೇಕಾಗಿರೋ ಈ ವಿಷ್ಯಗಳ ಬಗ್ಗೆ ಯೋಚ್ನೆ ಮಾಡೋದು ತಪ್ಪಲ್ಲ. ಆದ್ರೆ ಇಂಥ ವಿಷ್ಯಗಳ ಬಗ್ಗೆ ಅತಿಯಾಗಿ ಚಿಂತೆ ಮಾಡಬೇಡಿ ಅಂತ ಯೆಹೋವ ಹೇಳಿದ್ದಾನೆ. (ಮತ್ತಾ. 6:25) ಯಾಕೆ? ಯಾಕಂದ್ರೆ ನಮಗೆ ಏನು ಬೇಕಂತ ಯೆಹೋವನಿಗೆ ಚೆನ್ನಾಗಿ ಗೊತ್ತಿದೆ ಮತ್ತು ತನ್ನನ್ನ ನಂಬಿರೋ ಸೇವಕರ ಕೈಯನ್ನ ಯಾವತ್ತೂ ಬಿಡಲ್ಲ ಅಂತ ಮಾತುಕೊಟ್ಟಿದ್ದಾನೆ. (ಮತ್ತಾ. 6:8; ಇಬ್ರಿ. 13:5) ಆತನು ಮಾತು ಕೊಟ್ಟಿದ್ದಾನೆ ಅಂದ್ಮೇಲೆ ಹಾಗೆ ನಡ್ಕೊಂಡೇ ನಡ್ಕೊಳ್ತಾನೆ. ಆತನ ಮಾತನ್ನ ನಾವು ಪೂರ್ತಿ ನಂಬಬಹುದು.
8. ಯೆಹೋವ ದಾವೀದನನ್ನ ಹೇಗೆ ನೋಡ್ಕೊಂಡನು?
8 ಯೆಹೋವ ದಾವೀದನಿಗೆ ಹೇಗೆ ಸಹಾಯ ಮಾಡಿದನು ಅಂತ ನೋಡಿ. ರಾಜ ಸೌಲನ ಕೈಯಿಂದ ಅವನು ತಪ್ಪಿಸ್ಕೊಂಡು ಅಲೆಮಾರಿಯಾಗಿ ಜೀವನ ಮಾಡ್ತಿದ್ದಾಗ ಯೆಹೋವ ಅವನಿಗೆ ಮತ್ತು ಅವನ ಕಡೆಯವ್ರಿಗೆ ಬೇಕಾಗಿರೋದನ್ನೆಲ್ಲ ಕೊಟ್ಟನು. ಆ ಕಷ್ಟದ ಸಮಯದಲ್ಲಿ ಯೆಹೋವ ತನ್ನನ್ನ ಹೇಗೆಲ್ಲಾ ನೋಡ್ಕೊಂಡನು ಅನ್ನೋದನ್ನ ನೆನಸ್ಕೊಂಡು ದಾವೀದ ಹೀಗೆ ಬರೆದ: “ನಾನು ಚಿಕ್ಕವನಾಗಿದ್ದೆ, ಈಗ ಮುದುಕನಾಗಿದ್ದೀನಿ. ಆದ್ರೂ ಇಲ್ಲಿ ತನಕ ದೇವರು ನೀತಿವಂತನ ಕೈಬಿಟ್ಟಿರೋದನ್ನಾಗಲಿ, ನೀತಿವಂತನ ಮಕ್ಕಳು ಊಟಕ್ಕಾಗಿ ಭಿಕ್ಷೆ ಬೇಡೋದನ್ನಾಗಲಿ ನಾನು ನೋಡಿಲ್ಲ.” (ಕೀರ್ತ. 37:25) ದಾವೀದನ ತರ ನಿಮಗೂ ಅನಿಸಿರುತ್ತೆ, ಯಾಕಂದ್ರೆ ಯೆಹೋವ ಕಷ್ಟಕಾಲದಲ್ಲಿ ನಿಮಗೆ ಅಥವಾ ನಿಮ್ಮ ಸಹೋದರ ಸಹೋದರಿಯರಿಗೆ ಏನು ಬೇಕೋ ಅದನ್ನ ಕೊಟ್ಟಿರೋದನ್ನ ನೀವು ಕಣ್ಣಾರೆ ನೋಡಿರ್ತೀರ.
9. ವಿಪತ್ತುಗಳಾದಾಗ ತನ್ನ ಜನ್ರಿಗೆ ಬೇಕಾಗಿರೋದನ್ನೆಲ್ಲ ಯೆಹೋವ ಹೇಗೆ ಕೊಡ್ತಾನೆ? (ಚಿತ್ರಗಳನ್ನ ನೋಡಿ.)
9 ವಿಪತ್ತುಗಳು ಆದಾಗ್ಲೂ ಯೆಹೋವ ತನ್ನ ಜನ್ರಿಗೆ ಬೇಕಾಗಿರೋದನ್ನೆಲ್ಲ ಕೊಡ್ತಾನೆ. ಉದಾಹರಣೆಗೆ, ಒಂದನೇ ಶತಮಾನದಲ್ಲಿ ಯೆರೂಸಲೇಮಲ್ಲಿ ಬರ ಬಂದಾಗ ಬೇರೆಬೇರೆ ಕಡೆ ಇದ್ದ ಕ್ರೈಸ್ತರು ಅಲ್ಲಿರೋ ಸಹೋದರ ಸಹೋದರಿಯರಿಗೆ ಬೇಕಾಗಿರೋದನ್ನೆಲ್ಲ ತಲುಪಿಸಿದ್ರು. (ಅ. ಕಾ. 11:27-30; ರೋಮ. 15:25, 26) ಯೆಹೋವನ ಜನ್ರು ಇವತ್ತೂ ಕಷ್ಟದಲ್ಲಿರೋ ಸಹೋದರ ಸಹೋದರಿಯರಿಗೆ ಧಾರಾಳವಾಗಿ ಸಹಾಯ ಮಾಡ್ತಿದ್ದಾರೆ. ವಿಪತ್ತುಗಳಾದಾಗ ಕಷ್ಟದಲ್ಲಿರೋ ಸಹೋದರರಿಗೆ ಊಟ, ನೀರು, ಬಟ್ಟೆ ಮತ್ತು ಔಷಧಿಗಳನ್ನ ಕಳಿಸಿಕೊಡ್ತಾರೆ. ಕಟ್ಟಡ ನಿರ್ಮಾಣದಲ್ಲಿರೋ ಸಹೋದರರು ಹಾಳಾಗಿರೋ ಮನೆಗಳನ್ನ ಮತ್ತು ರಾಜ್ಯ ಸಭಾಗೃಹಗಳನ್ನ ರಿಪೇರಿ ಮಾಡ್ತಾರೆ. ಇದಷ್ಟೇ ಅಲ್ಲ, ವಿಪತ್ತಲ್ಲಿ ತಮ್ಮ ಪ್ರಿಯರನ್ನ, ಮನೆಗಳನ್ನ ಕಳ್ಕೊಂಡಿರೋ ಸಹೋದರರಿಗೆ ಬೈಬಲಲ್ಲಿರೋ ವಚನಗಳನ್ನ ತೋರಿಸಿ ಸಮಾಧಾನ ಮಾಡ್ತಾರೆ, ಧೈರ್ಯ ತುಂಬ್ತಾರೆ.c ಇದನ್ನೆಲ್ಲ ಮಾಡೋಕೆ ಅವ್ರಿಗೆ ಮನಸ್ಸು ಕೊಡ್ತಿರೋದು ಯೆಹೋವನೇ.
ವಿಪತ್ತುಗಳಾದಾಗ ಯೆಹೋವ ನಮ್ಮನ್ನ ಹೇಗೆ ಸಮಾಧಾನ ಮಾಡ್ತಾನೆ? (ಪ್ಯಾರ 9 ನೋಡಿ)e
10-11. ಬೋರಿಸ್ ಅವ್ರ ಅನುಭವದಿಂದ ನೀವೇನು ಕಲಿತ್ರಿ?
10 ಯೆಹೋವ ತನ್ನ ಸೇವಕರಿಗಷ್ಟೇ ಅಲ್ಲ, ತನ್ನನ್ನ ಆರಾಧಿಸದೇ ಇರೋರಿಗೂ ಬೇಕಾಗಿರೋದನ್ನೆಲ್ಲ ಧಾರಾಳವಾಗಿ ಕೊಡ್ತಾನೆ. ಯೆಹೋವನ ತರ ನಾವು ಕೂಡ ಆತನನ್ನ ಆರಾಧಿಸದೇ ಇರೋರಿಗೆ ದಯೆ ತೋರಿಸೋಕೆ ಅವಕಾಶಗಳನ್ನ ಹುಡುಕಬೇಕು. (ಗಲಾ. 6:10) ಆಗ ಅವ್ರಿಗೆ ನಮ್ಮ ಬಗ್ಗೆ, ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ಆಗುತ್ತೆ. ಯುಕ್ರೇನಿನ ಒಂದು ಶಾಲೆಯಲ್ಲಿ ಪ್ರಿನ್ಸಿಪಲ್ ಆಗಿದ್ದ ಬೋರಿಸ್ ಅವ್ರ ಅನುಭವ ನೋಡಿ. ಅವರು ಒಬ್ಬ ಯೆಹೋವನ ಸಾಕ್ಷಿ ಆಗಿಲ್ಲಾಂದ್ರೂ ಅವ್ರ ಶಾಲೆಲಿ ಯೆಹೋವನನ್ನ ಆರಾಧಿಸ್ತಾ ಇದ್ದ ಮಕ್ಕಳ ಜೊತೆ ಪ್ರೀತಿಯಿಂದ ನಡ್ಕೊಳ್ತಾ ಇದ್ರು, ದೇವರಿಗೆ ಇಷ್ಟ ಇಲ್ಲದ ವಿಷ್ಯಗಳನ್ನ ಮಾಡೋಕೆ ಒತ್ತಾಯ ಮಾಡ್ತಿರಲಿಲ್ಲ. ಅವ್ರಿದ್ದ ಜಾಗದಲ್ಲಿ ಯುದ್ಧ ಜಾಸ್ತಿ ಆದಾಗ ಬೋರಿಸ್ ಸುರಕ್ಷಿತವಾದ ಬೇರೆ ಜಾಗಕ್ಕೆ ಹೋಗೋಕೆ ತೀರ್ಮಾನ ಮಾಡಿದ್ರು. ಆಗ ನಮ್ಮ ಸಹೋದರರು ಅವ್ರಿಗೆ ತುಂಬ ಸಹಾಯ ಮಾಡಿದ್ರು. ಇದಾದ ಮೇಲೆ ಬೋರಿಸ್ ಕ್ರಿಸ್ತನ ಸ್ಮರಣೆಗೂ ಹಾಜರಾದ್ರು. ನಮ್ಮ ಸಹೋದರರು ಮಾಡಿದ ಸಹಾಯನ ನೆನಪಿಸ್ಕೊಳ್ತಾ ಅವರು ಹೀಗೆ ಹೇಳ್ತಾರೆ: “ಯೆಹೋವನ ಸಾಕ್ಷಿಗಳು ನನ್ನ ಜೊತೆ ತುಂಬ ದಯೆಯಿಂದ ನಡ್ಕೊಂಡ್ರು, ನನ್ನನ್ನ ಚೆನ್ನಾಗಿ ನೋಡ್ಕೊಂಡ್ರು. ನಾನು ಅವ್ರಿಗೆ ಯಾವಾಗ್ಲೂ ಋಣಿ.”
11 ಜನ ಯೆಹೋವನನ್ನ ಆರಾಧಿಸಲಿ, ಆರಾಧಿಸದೇ ಇರಲಿ ಕರುಣಾಮಯಿ ಆಗಿರೋ ನಮ್ಮಪ್ಪ ಯೆಹೋವನ ತರ ನಾವು ಅವ್ರಿಗೆ ಪ್ರೀತಿ ತೋರಿಸಬೇಕು. (ಲೂಕ 6:31, 36) ನಾವು ಹೀಗೆ ಪ್ರೀತಿ ತೋರಿಸಿದ್ರೆ ಮುಂದೊಂದು ದಿನ ಅವರು ಯೇಸುವಿನ ಶಿಷ್ಯರಾಗಬಹುದು. (1 ಪೇತ್ರ 2:12) ಒಂದುವೇಳೆ ಆಗದಿದ್ರೂ ಕೊಡೋದ್ರಲ್ಲಿರೋ ಖುಷಿಯಂತೂ ನಮಗೆ ಸಿಕ್ಕೇ ಸಿಗುತ್ತೆ.—ಅ. ಕಾ. 20:35.
ಯೆಹೋವ ನಮ್ಮನ್ನ ಕಾಪಾಡ್ತಾನೆ
12. ಯೆಹೋವ ತನ್ನ ಜನ್ರ ಗುಂಪನ್ನ ಹೇಗೆ ಕಾಪಾಡ್ತೀನಿ ಅಂತ ಮಾತುಕೊಟ್ಟಿದ್ದಾನೆ? (ಕೀರ್ತನೆ 91:1, 2, 14)
12 ಕೀರ್ತನೆ 91:1, 2, 14 ಓದಿ. ‘ನನ್ನ ಜೊತೆ ಇರೋ ನಿಮ್ಮ ಸ್ನೇಹನ ಹಾಳಾಗೋಕೆ ಬಿಡಲ್ಲ, ಅದನ್ನ ಕಾಪಾಡ್ತೀನಿ’ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಹಾಗಾಗಿ ಸತ್ಯಾರಾಧನೆಯನ್ನ ಹಾಳುಮಾಡೋಕೆ ಆತನು ಸೈತಾನನಿಗೆ ಯಾವತ್ತೂ ಅವಕಾಶ ಕೊಡೋದೇ ಇಲ್ಲ. (ಯೋಹಾ. 17:15) “ಮಹಾ ಸಂಕಟ” ಬಂದಾಗ್ಲೂ ಆತನು ನಮ್ಮ ನಂಬಿಕೆ ಗಟ್ಟಿಯಾಗಿರೋ ತರ ನೋಡ್ಕೊಳ್ತಾನೆ, ನಮ್ಮನ್ನ ಪಾರುಮಾಡ್ತಾನೆ. ಹೀಗೆ ತಾನು ಕೊಟ್ಟ ಮಾತನ್ನ ಉಳಿಸ್ಕೊಳ್ತಾನೆ ಅಂತ ನಾವು ನಂಬಬಹುದು.—ಪ್ರಕ. 7:9, 14.
13. ಯೆಹೋವ ದೇವರು ನಮ್ಮಲ್ಲಿ ಒಬ್ಬೊಬ್ರನ್ನೂ ಹೇಗೆ ಕಾಪಾಡ್ತಾನೆ?
13 ಯೆಹೋವ ತನ್ನ ಜನ್ರನ್ನ ಗುಂಪಾಗಿ ಅಷ್ಟೇ ಅಲ್ಲ, ಒಬ್ಬೊಬ್ಬರಾಗೂ ಕಾಪಾಡ್ತಾನೆ. ಹೇಗೆ? ಆತನು ನಮಗೆ ಬೈಬಲ್ ಕೊಟ್ಟು ಸರಿ ಯಾವುದು, ತಪ್ಪು ಯಾವುದು ಅಂತ ತೋರಿಸ್ಕೊಟ್ಟಿದ್ದಾನೆ. (ಇಬ್ರಿ. 5:14) ನಾವು ಬೈಬಲಲ್ಲಿ ಇರೋದನ್ನ ಪಾಲಿಸಿದ್ರೆ ಆತನ ಜೊತೆ ಇರೋ ಸ್ನೇಹ ಕಾಪಾಡ್ಕೊಳ್ತೀವಿ. ಅಷ್ಟೇ ಅಲ್ಲ, ಒಳ್ಳೇ ತೀರ್ಮಾನಗಳನ್ನ ಮಾಡ್ತಾ ಖುಷಿಯಾಗೂ ಇರ್ತೀವಿ, ಆರೋಗ್ಯನೂ ಕಾಪಾಡ್ಕೊಳ್ತೀವಿ. (ಕೀರ್ತ. 91:4) ನಮ್ಮ ನಂಬಿಕೆನ ಕಳ್ಕೊಳ್ಳದೇ ಇರೋಕೆ ಯೆಹೋವ ದೇವರು ಸಭೆನೂ ಕೊಟ್ಟಿದ್ದಾನೆ. (ಯೆಶಾ. 32:1, 2) ಅಲ್ಲಿರೋ ಸಹೋದರ ಸಹೋದರಿಯರು ಯೆಹೋವನನ್ನ ತುಂಬ ಪ್ರೀತಿಸ್ತಾರೆ, ಆತನ ಮಾತು ಕೇಳ್ತಾರೆ. ಅವ್ರ ಜೊತೆ ನಾವು ಕೂಟಗಳಲ್ಲಿ, ಸೇವೆಲಿ ಮತ್ತು ಬಿಡುವಿದ್ದಾಗ ಸಮಯ ಕಳೆದ್ರೆ ನಮಗೆ ಪ್ರೋತ್ಸಾಹ ಸಿಗುತ್ತೆ ಮತ್ತು ಕೆಟ್ಟದ್ರಿಂದ ದೂರ ಇದ್ದು ನಮ್ಮನ್ನ ಕಾಪಾಡ್ಕೊಳ್ಳೋಕೆ ಆಗುತ್ತೆ.—ಜ್ಞಾನೋ. 13:20.
14. (ಎ) ನಮಗೆ ಬರೋ ಎಲ್ಲ ಕಷ್ಟಗಳನ್ನ ಯೆಹೋವ ಯಾಕೆ ತೆಗೆದು ಹಾಕಲ್ಲ? (ಬಿ) ಕೀರ್ತನೆ 9:10 ನಮಗೆ ಯಾವ ಭರವಸೆ ಕೊಡುತ್ತೆ? (ಪಾದಟಿಪ್ಪಣಿ ನೋಡಿ.)
14 ಹಿಂದಿನ ಕಾಲದಲ್ಲಿ ಯೆಹೋವ ತನ್ನ ಸೇವಕರನ್ನ ಕೆಲವೊಮ್ಮೆ ಪ್ರಾಣ ಹೋಗೋ ಪರಿಸ್ಥಿತಿಯಿಂದ ಕಾಪಾಡಿದ್ದಾನೆ. ಆದ್ರೆ ಎಲ್ರನ್ನೂ ಹಾಗೆ ಕಾಪಾಡಿಲ್ಲ. ನಮ್ಮ ಜೀವನದಲ್ಲೂ “ಅನಿರೀಕ್ಷಿತ ಘಟನೆಗಳು” ಕೆಲವೊಮ್ಮೆ ನಡೀಬಹುದು. (ಪ್ರಸಂ. 9:11) ಅಷ್ಟೇ ಅಲ್ಲ, ಇತಿಹಾಸದ ಪುಟಗಳನ್ನ ತಿರುಗಿಸಿ ನೋಡಿದ್ರೆ ಸೈತಾನ ಒಬ್ಬ ಸುಳ್ಳುಗಾರ ಅಂತ ನಿರೂಪಿಸೋಕೆ ಯೆಹೋವ ದೇವರು ತನ್ನ ಸೇವಕರನ್ನ ಹಿಂಸೆ ಮತ್ತು ಸಾವು ಅನುಭವಿಸೋಕೂ ಬಿಟ್ಟಿದ್ದಾನೆ. (ಯೋಬ 2:4-6; ಮತ್ತಾ. 23:34) ಹಿಂದಿನ ಕಾಲದಲ್ಲಿ ದೇವಜನರಿಗೆ ಬಂದ ಕಷ್ಟಗಳು ಇವತ್ತು ನಮಗೂ ಬರಬಹುದು. ಯೆಹೋವ ನಮಗೆ ಬರೋ ಎಲ್ಲ ಕಷ್ಟಗಳನ್ನ ತೆಗಿಯಲ್ಲ ನಿಜ. ಆದ್ರೂ ತನ್ನನ್ನ ಪ್ರೀತಿಸೋರ ಕೈಯನ್ನ ಆತನು ಯಾವತ್ತೂ ಬಿಡಲ್ಲ ಅಂತ ನಾವು ನಂಬಬಹುದು.d—ಕೀರ್ತ. 9:10.
ಯೆಹೋವ ನಮ್ಮನ್ನ ಸಮಾಧಾನ ಮಾಡ್ತಾನೆ
15. ಪ್ರಾರ್ಥನೆ, ಬೈಬಲ್ ಮತ್ತು ಕೂಟಗಳಿಂದ ನಮಗೆ ಹೇಗೆ ಸಮಾಧಾನ ಸಿಗುತ್ತೆ? (2 ಕೊರಿಂಥ 1:3, 4)
15 ಎರಡನೇ ಕೊರಿಂಥ 1:3, 4 ಓದಿ. ಕೆಲವೊಮ್ಮೆ ನಮ್ಮ ಜೀವನದಲ್ಲಿ ದುಃಖ, ಚಿಂತೆ, ಕಷ್ಟಗಳು ಬರಬಹುದು. ಒಂದುವೇಳೆ ಈಗ ನೀವು ಅನುಭವಿಸ್ತಿರೋ ಯಾವುದೋ ಕಷ್ಟದಿಂದ ನೀವು ಒಂಟಿಯಾಗಿದ್ದೀರ ಅಂತ ನಿಮಗೆ ಅನಿಸ್ತಿರಬಹುದು. ಹಾಗಾದ್ರೆ ನಿಮ್ಮ ನೋವು ಯಾರಿಗೂ ಅರ್ಥ ಆಗಲ್ವಾ? ಯೆಹೋವನಿಗೆ ಅರ್ಥ ಆಗುತ್ತೆ. ಆತನು ನಮ್ಮ ನೋವನ್ನ ಅರ್ಥ ಮಾಡ್ಕೊಳ್ಳೋದಷ್ಟೇ ಅಲ್ಲ, ನಮಗೆ ಏನೇ ಕಷ್ಟ ಬಂದ್ರೂ ಆತನು ನಮ್ಮನ್ನ ಸಮಾಧಾನ ಮಾಡ್ತಾನೆ. ಹೇಗೆ? ನಾವು ಪ್ರಾರ್ಥನೆ ಮಾಡಿದಾಗ ಆತನು ನಮಗೆ “ತಿಳುವಳಿಕೆಗೂ ಮೀರಿದ ಶಾಂತಿ” ಕೊಡ್ತಾನೆ. (ಫಿಲಿ. 4:6, 7) ಆತನು ನಮ್ಮನ್ನ ತನ್ನ ವಾಕ್ಯವಾದ ಬೈಬಲಿಂದನೂ ಸಮಾಧಾನ ಮಾಡ್ತಾನೆ. ಅದ್ರಲ್ಲಿ ಆತನು ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಬರೆಸಿದ್ದಾನೆ, ಸರಿಯಾಗಿ ಯೋಚ್ನೆ ಮಾಡೋದು ಹೇಗೆ ಅಂತ ಕಲಿಸಿದ್ದಾನೆ, ನಮ್ಮ ಜೀವನಕ್ಕೆ ಒಂದು ನಿರೀಕ್ಷೆನೂ ಕೊಟ್ಟಿದ್ದಾನೆ. ಕ್ರೈಸ್ತ ಕೂಟಗಳಿಂದ ಕೂಡ ನಮಗೆ ಸಮಾಧಾನ ಸಿಗುತ್ತೆ. ಅಲ್ಲಿ ಕಲಿಯೋ ವಿಷ್ಯಗಳಿಂದ ಮತ್ತು ನಮ್ಮನ್ನ ಪ್ರೀತಿಸೋ ಸಹೋದರ ಸಹೋದರಿಯರಿಂದ ನೆಮ್ಮದಿ ಸಿಗುತ್ತೆ.
16. ನೇತನ್ ಮತ್ತು ಪ್ರಿಸಿಲ್ಲ ಅವ್ರ ಅನುಭವದಿಂದ ನೀವೇನು ಕಲಿತ್ರಿ?
16 ಯೆಹೋವ ತನ್ನ ವಾಕ್ಯದಿಂದ ನಮ್ಮನ್ನ ಹೇಗೆ ಸಮಾಧಾನ ಮಾಡ್ತಾನೆ, ನಮಗೆ ಹೇಗೆ ಧೈರ್ಯ ಕೊಡ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಅಮೆರಿಕದಲ್ಲಿರೋ ನೇತನ್ ಮತ್ತು ಪ್ರಿಸಿಲ್ಲ ಅವ್ರ ಅನುಭವ ನೋಡಿ. ಇವರು ಕೆಲವು ವರ್ಷಗಳ ಹಿಂದೆ ಯೆಹೋವನ ಸೇವೆನ ಜಾಸ್ತಿ ಮಾಡೋಕೆ ಅಗತ್ಯ ಇರೋ ಜಾಗಕ್ಕೆ ಹೋದ್ರು. ಆದ್ರೆ ಅವರು ಅಲ್ಲಿಗೆ ಹೋದ್ಮೇಲೆ ದಿಢೀರ್ ಅಂತ ಆರೋಗ್ಯದ ಸಮಸ್ಯೆ ಬಂತು, ಹಣಕಾಸಿಗೂ ತುಂಬ ತೊಂದ್ರೆ ಆಯ್ತು. ಇದ್ರಿಂದ ಅವರು ಮನೆಗೆ ವಾಪಸ್ ಬರಬೇಕಾಯ್ತು. ಬಂದ್ಮೇಲೂ ಅವ್ರ ಕಷ್ಟ ತೀರಲಿಲ್ಲ, ದುಡ್ಡಿಲ್ಲದೇ ಜೀವನ ಮಾಡೋಕೂ ಕಷ್ಟಪಟ್ರು. ಆಗ ನೇತನ್‌ಗೆ ಹೇಗನಿಸ್ತು? “ಯೆಹೋವ ನಮ್ಮ ಪ್ರಯತ್ನನ ಆಶೀರ್ವದಿಸ್ತಾನೆ ಅಂತ ಅಂದ್ಕೊಂಡಿದ್ದೆ. ಆದ್ರೆ ನಾವು ಅಂದ್ಕೊಂಡ ಹಾಗೆ ಆಗ್ಲಿಲ್ಲ. ನಾನೇನಾದ್ರೂ ತಪ್ಪು ಮಾಡಿದ್ನಾ ಅಂತ ಅನಿಸೋಕೆ ಶುರುವಾಯ್ತು” ಅಂತ ನೇತನ್ ಹೇಳಿದ್ರು. ಆದ್ರೆ ಸ್ವಲ್ಪ ಸಮಯ ಆದ್ಮೇಲೆ ನೇತನ್ ಮತ್ತು ಪ್ರಿಸಿಲ್ಲಗೆ ಈ ಕಷ್ಟಕಾಲದಲ್ಲೂ ಯೆಹೋವ ತಮ್ಮ ಕೈ ಬಿಟ್ಟಿರಲಿಲ್ಲ ಅನ್ನೋದು ಅರ್ಥ ಆಯ್ತು. “ನಮ್ಮ ಕಷ್ಟದಲ್ಲಿ ಬೈಬಲ್ ನಮ್ಮನ್ನ ಸಮಾಧಾನ ಮಾಡೋ, ನಮಗೆ ಸರಿ ದಾರಿ ತೋರಿಸೋ ಒಂದು ಫ್ರೆಂಡ್ ತರ ಇತ್ತು. ನಾವು ಬರೀ ಕಷ್ಟಗಳ ಮೇಲೆ ಗಮನ ಕೊಡದೇ ಕಷ್ಟಗಳನ್ನ ತಾಳ್ಕೊಳ್ಳೋಕೆ ಯೆಹೋವ ಹೇಗೆ ಸಹಾಯ ಮಾಡಿದನು ಅನ್ನೋದಕ್ಕೆ ಗಮನಕೊಟ್ವಿ. ಇದು ನಮಗೆ ಮುಂದೆ ಬರೋ ಕಷ್ಟಗಳನ್ನ ತಾಳಿಕೊಳ್ಳೋಕೂ ಆತನು ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಕೊಡ್ತು” ಅಂತ ನೇತನ್ ಹೇಳ್ತಾರೆ.
17. ಸಹೋದರಿ ಹೆಲ್ಗಾ ಅವ್ರಿಗೆ ಹೇಗೆ ಸಮಾಧಾನ ಸಿಕ್ತು? (ಚಿತ್ರಗಳನ್ನ ನೋಡಿ.)
17 ಯೆಹೋವ ದೇವರು ನಮ್ಮ ಸಹೋದರ ಸಹೋದರಿಯರಿಂದ ಹೇಗೆ ಸಮಾಧಾನ ಮಾಡ್ತಾನೆ? ಇದನ್ನ ತಿಳ್ಕೊಳ್ಳೋಕೆ ಸಹೋದರಿ ಹೆಲ್ಗಾ ಅವ್ರ ಅನುಭವ ನೋಡಿ. ಅವರು ಹಂಗೇರಿಯಲ್ಲಿದ್ದಾರೆ. ಹತ್ತಾರು ವರ್ಷಗಳು ಅವರು ಅನುಭವಿಸಿದ ಕಷ್ಟಗಳಿಂದ ತುಂಬ ಕುಗ್ಗಿಹೋಗಿದ್ರು, ನಾನು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅವ್ರಿಗೆ ಅನಿಸ್ತಿತ್ತು. ಆದ್ರೆ ಆಗೆಲ್ಲ ಯೆಹೋವ ಸಹೋದರ ಸಹೋದರಿಯರಿಂದ ಅವ್ರನ್ನ ಹೇಗೆ ಸಮಾಧಾನ ಮಾಡ್ತಿದ್ದನು ಅಂತ ಈಗ ಅವ್ರಿಗೆ ಗೊತ್ತಾಯ್ತು. ಇದ್ರ ಬಗ್ಗೆ ಅವರು ಏನು ಹೇಳ್ತಾರೆ ಅಂತ ಕೇಳಿ: “ನನಗೆ ಕೆಲ್ಸದಲ್ಲಿ ಒತ್ತಡ ಇದ್ದಾಗ, ನನ್ನ ಮಗು ಕಾಯಿಲೆ ಬಿದ್ದಾಗ, ನನಗೆ ಬೇರೆ ಸಮಸ್ಯೆಗಳಿದ್ದಾಗ ನಂಗೆ ಸಾಕಾಗಿ ಹೋಗಿತ್ತು ಅಂತ ಯೆಹೋವ ಅರ್ಥ ಮಾಡ್ಕೊಂಡು ನಂಗೆ ಯಾವಾಗ್ಲೂ ಸಹಾಯ ಮಾಡ್ತಿದ್ದನು. ಕಳೆದ 30 ವರ್ಷಗಳಲ್ಲಿ ಆತನು ಒಂದೊಂದು ದಿನಾನೂ ನನ್ನನ್ನ ಸಮಾಧಾನ ಮಾಡ್ತಾ ತನ್ನ ಮಾತನ್ನ ಉಳಿಸ್ಕೊಂಡಿದ್ದಾನೆ. ನಮ್ಮ ಸಹೋದರ ಸಹೋದರಿಯರು ನನ್ನ ಜೊತೆ ದಯೆಯಿಂದ ಮಾತಾಡ್ತಿದ್ರು, ನನ್ನ ಪರಿಸ್ಥಿತಿನ ಚೆನ್ನಾಗಿ ಅರ್ಥ ಮಾಡ್ಕೊಂಡು ನನ್ನನ್ನ ಹುರಿದುಂಬಿಸ್ತಿದ್ರು. ನಾನು ಯಾವಾಗ ತುಂಬ ಕುಗ್ಗಿ ಹೋಗಿರ್ತಿದ್ನೋ ಅಂತ ಸಮಯದಲ್ಲೇ ಅವರು ನಂಗೆ ಮೆಸೇಜ್ ಕಳಿಸ್ತಿದ್ರು, ಕಾರ್ಡ್ ಬರೀತಿದ್ರು, ನನ್ನನ್ನ ಹೊಗಳ್ತಿದ್ರು. ಹೀಗೆ ಯೆಹೋವ ಅವ್ರಿಂದ ನನ್ನನ್ನ ಸಮಾಧಾನ ಮಾಡ್ತಿದ್ದನು.”
ಯೆಹೋವ ನಿಮ್ಮಿಂದ ಬೇರೆಯವ್ರನ್ನ ಹೇಗೆಲ್ಲ ಸಮಾಧಾನ ಮಾಡಬಹುದು? (ಪ್ಯಾರ 17 ನೋಡಿ)
18. ನಾವು ಹೇಗೆ ಬೇರೆಯವ್ರನ್ನ ಸಮಾಧಾನ ಮಾಡಬಹುದು?
18 ನಮಗೆ ಒಂದು ಸುವರ್ಣ ಅವಕಾಶ ಇದೆ. ಅದೇನಂದ್ರೆ ಯೆಹೋವನ ತರ ನಾವೂ ಬೇರೆಯವ್ರನ್ನ ಸಮಾಧಾನ ಮಾಡಬಹುದು. ಹೇಗೆ? ಅವರು ಮಾತಾಡುವಾಗ ತಾಳ್ಮೆಯಿಂದ ಕೇಳಿಸ್ಕೊಬಹುದು, ಅವ್ರಿಗೆ ಧೈರ್ಯ ತುಂಬೋ ಮಾತುಗಳನ್ನ ಹೇಳಬಹುದು ಮತ್ತು ಬೇಕಾಗಿರೋ ಸಹಾಯನೂ ಮಾಡಬಹುದು. (ಜ್ಞಾನೋ. 3:27) ನಾವು ಎಲ್ರನ್ನೂ ಅಂದ್ರೆ ಯೆಹೋವನನ್ನ ಆರಾಧಿಸದೇ ಇರೋರನ್ನೂ ಸಮಾಧಾನ ಮಾಡ್ತೀವಿ. ನಮ್ಮ ಅಕ್ಕ-ಪಕ್ಕದವ್ರಿಗೆ ದುಃಖ-ಚಿಂತೆ ಕಾಡಿದಾಗ, ಕಾಯಿಲೆ ಬಂದಾಗ ಅವ್ರನ್ನ ನೋಡೋಕೆ ಹೋಗ್ತೀವಿ, ಅವರು ಹೇಳೋದನ್ನ ಕೇಳಿಸ್ಕೊಳ್ತೀವಿ. ಬೈಬಲಿಂದ ಅವ್ರಿಗೆ ಧೈರ್ಯ ತುಂಬೋ ಮಾತುಗಳನ್ನೂ ಹೇಳ್ತೀವಿ. ಹೀಗೆ ‘ಎಲ್ಲ ತರದ ಸಾಂತ್ವನ ಕೊಡೋ ದೇವರಾಗಿರೋ’ ಯೆಹೋವನ ತರ ನಡ್ಕೊಂಡ್ರೆ ಕಷ್ಟ ತಾಳ್ಕೊಳ್ಳೋಕೆ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತೀವಿ. ಅದ್ರ ಜೊತೆಗೆ, ಯೆಹೋವನನ್ನ ಆರಾಧಿಸದೇ ಇರೋ ಜನ್ರಿಗೂ ಆತನ ಬಗ್ಗೆ ಕಲಿಯೋ ಮನಸ್ಸು ಮಾಡೋಕೆ ಸಹಾಯ ಮಾಡ್ತೀವಿ.—ಮತ್ತಾ. 5:16.
ಯೆಹೋವ ಯಾವಾಗ್ಲೂ ನಮ್ಮ ಜೊತೆ ಇರ್ತಾನೆ
19. (ಎ) ಯೆಹೋವ ನಮಗೋಸ್ಕರ ಏನೆಲ್ಲ ಮಾಡ್ತಾನೆ? (ಬಿ) ನಾವು ಆತನ ತರ ಹೇಗೆ ನಡ್ಕೊಬಹುದು?
19 ಯೆಹೋವ ಅಂದ್ರೆ ನಮಗೆ ತುಂಬ ಇಷ್ಟ. ಆತನಿಗೂ ನಮ್ಮ ಮೇಲೆ ತುಂಬ ಕಾಳಜಿ ಇದೆ. ನಾವು ಕಷ್ಟದಲ್ಲಿರುವಾಗ ಆತನು ಯಾವತ್ತೂ ನಮ್ಮ ಕೈಬಿಡಲ್ಲ. ಅಪ್ಪ-ಅಮ್ಮ ಹೇಗೆ ಮಗುನ ಪ್ರೀತಿ-ವಾತ್ಸಲ್ಯದಿಂದ ನೋಡ್ಕೊಳ್ತಾರೋ ಅದೇ ತರ ಯೆಹೋವ ತನ್ನನ್ನ ನಂಬಿರೋ ಆರಾಧಕರನ್ನ ನೋಡ್ಕೊಳ್ತಾನೆ. ಆತನು ನಮಗೆ ಸರಿ ದಾರಿ ತೋರಿಸ್ತಾನೆ, ನಮಗೆ ಬೇಕಾಗಿರೋದನ್ನೆಲ್ಲ ಕೊಡ್ತಾನೆ, ನಮ್ಮನ್ನ ಕಾಪಾಡ್ತಾನೆ ಮತ್ತು ಸಮಾಧಾನ ಮಾಡ್ತಾನೆ. ಬೇರೆಯವರು ಕಷ್ಟದಲ್ಲಿರುವಾಗ ನಾವು ಅವ್ರಿಗೆ ಸಹಾಯ ಮಾಡಿದ್ರೆ, ಧೈರ್ಯ ತುಂಬಿದ್ರೆ ಯೆಹೋವನ ತರ ನಡ್ಕೊಳ್ತೀವಿ. ನಮ್ಮ ಜೀವನದಲ್ಲಿ ಏನೇ ಕಷ್ಟ ಬಂದ್ರೂ ಯೆಹೋವ ನಮ್ಮ ಜೊತೆ ಇರ್ತಾನೆ. ಯಾಕಂದ್ರೆ “ಹೆದರಬೇಡ. ನಾನು ನಿನ್ನ ಜೊತೆ ಇದ್ದೀನಿ” ಅಂತ ಆತನೇ ಮಾತು ಕೊಟ್ಟಿದ್ದಾನೆ. (ಯೆಶಾ. 41:10) ಈ ಮಾತು ಕೇಳಿದಾಗ ನಮಗೆ ಎಷ್ಟು ಧೈರ್ಯ ಸಿಗುತ್ತಲ್ವಾ? ನಿಜವಾಗ್ಲೂ, ನಾವು ಯಾವತ್ತೂ ಒಂಟಿಯಲ್ಲ!
ಗೀತೆ 100 ಅತಿಥಿಸತ್ಕಾರ ಮಾಡೋಣ
a ಏಪ್ರಿಲ್ 15, 2011ರ ಕಾವಲಿನಬುರುಜುನಲ್ಲಿರೋ “ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ” ಅನ್ನೋ ಲೇಖನ ನೋಡಿ.
b ಫೆಬ್ರವರಿ 2024ರ ಕಾವಲಿನಬುರುಜುನಲ್ಲಿರೋ “ಯೆಹೋವ ಕೊಡೋ ನಿರ್ದೇಶನವನ್ನ ಪಾಲಿಸ್ತಾ ಇರಿ” ಅನ್ನೋ ಲೇಖನದ ಪ್ಯಾರ 11-14 ನೋಡಿ.
c ಇತ್ತೀಚಿನ ಅನುಭವಗಳನ್ನ ತಿಳ್ಕೊಳ್ಳೋಕೆ jw.org ವೆಬ್‌ಸೈಟಲ್ಲಿ “ವಿಪತ್ತು ಪರಿಹಾರ” ಅಂತ ಹುಡುಕಿ.
d ಫೆಬ್ರವರಿ 2017ರ ಕಾವಲಿನಬುರುಜುನಲ್ಲಿರೋ “ವಾಚಕರಿಂದ ಪ್ರಶ್ನೆಗಳು” ಅನ್ನೋ ಲೇಖನ ನೋಡಿ.
e ಚಿತ್ರ ವಿವರಣೆ: ಮಲಾವಿಯಲ್ಲಿ ನೈಸರ್ಗಿಕ ವಿಪತ್ತಾದಾಗ ಬೇರೆ ಕಡೆ ಇರೋ ಸಹೋದರರು ಅಲ್ಲಿರೋ ಸಹೋದರರಿಗೆ ಬೇಕಾಗಿರೋ ವಸ್ತುಗಳನ್ನ ತಲುಪಿಸಿದ್ದಾರೆ, ಅವ್ರಿಗೆ ಧೈರ್ಯ ತುಂಬೋ ಮಾತುಗಳನ್ನ ಆಡ್ತಿದ್ದಾರೆ.