ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಆಗಸ್ಟ್‌ ಪು. 14-19
  • ಯೆಹೋವ ನಿಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ನಿಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವ ಕ್ಷಮಿಸಿದ್ದಾನೆ ಅಂತ ನಂಬೋದು ಯಾಕೆ ಮುಖ್ಯ?
  • ಯೆಹೋವ ನಿಜವಾಗ್ಲೂ ನಿಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬೋಕೆ ಯಾವುದು ಸಹಾಯ ಮಾಡುತ್ತೆ?
  • ಯೆಹೋವ ನೆನಪಿಟ್ಟಿರೋದನ್ನ ನೀವು ಮರೀಬೇಡಿ
  • ಮನಸ್ಪೂರ್ತಿ ನಂಬಿ, ಯಾವತ್ತೂ ಸಂಶಯ ಪಡಬೇಡಿ
  • ಯೆಹೋವನ ಕ್ಷಮೆಯಿಂದ ಸಿಗೋ ಪ್ರಯೋಜನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯೆಹೋವನು, ‘ಕ್ಷಮಿಸಲು ಸಿದ್ಧನಾಗಿರುವ’ ದೇವರು
    ಕಾವಲಿನಬುರುಜು—1997
  • ‘ಕ್ಷಮಿಸಲು ಸಿದ್ಧನು’ ಆಗಿರುವ ದೇವರು
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಕ್ಷಮಿಸೋದ್ರಲ್ಲಿ ಯೆಹೋವನಿಗಿರೋ ಅಪೂರ್ವ ಸಾಮರ್ಥ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಆಗಸ್ಟ್‌ ಪು. 14-19

ಅಧ್ಯಯನ ಲೇಖನ 34

ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!

ಯೆಹೋವ ನಿಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬಿ!

“ನೀನು ನನ್ನ ಪಾಪಗಳನ್ನ, ತಪ್ಪುಗಳನ್ನ ಕ್ಷಮಿಸಿದೆ.”—ಕೀರ್ತ. 32:5.

ಈ ಲೇಖನದಲ್ಲಿ ಏನಿದೆ?

ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬೋದು ಯಾಕೆ ಮುಖ್ಯ ಮತ್ತು ಪಶ್ಚಾತ್ತಾಪ ಪಟ್ಟವ್ರನ್ನ ಯೆಹೋವ ನಿಜವಾಗ್ಲೂ ಕ್ಷಮಿಸಿದ್ದಾನೆ ಅಂತ ಬೈಬಲ್‌ ಹೇಗೆ ತೋರಿಸುತ್ತೆ ಅಂತ ನೋಡೋಣ.

1-2. ಯೆಹೋವ ದೇವರು ನಮ್ಮ ತಪ್ಪುಗಳನ್ನ ಕ್ಷಮಿಸಿದ್ದಾನೆ ಅಂತ ಅರ್ಥ ಮಾಡ್ಕೊಂಡಾಗ ನಮಗೆ ಹೇಗೆ ಅನಿಸುತ್ತೆ? (ಚಿತ್ರ ನೋಡಿ.)

ದಾವೀದ ಪಾಪಗಳನ್ನ ಮಾಡಿದ ಮೇಲೆ ಅವನ ಮನಸ್ಸು ತುಂಬಾನೇ ಚುಚ್ತಿತ್ತು. (ಕೀರ್ತ. 40:12; 51:3, ಮೇಲ್ಬರಹ) ಅವನು ಜೀವನದಲ್ಲಿ ಕೆಲವು ದೊಡ್ಡ ದೊಡ್ಡ ತಪ್ಪುಗಳನ್ನ ಮಾಡಿದ. ಆದ್ರೆ ಆಮೇಲೆ ಅದನ್ನ ಅರ್ಥ ಮಾಡ್ಕೊಂಡು ಪಶ್ಚಾತ್ತಾಪ ಪಟ್ಟ. (2 ಸಮು. 12:13) ಆಗ ಯೆಹೋವ ದೇವರು ಅವನನ್ನ ಕ್ಷಮಿಸಿದನು. ತನ್ನ ತಪ್ಪುಗಳನ್ನ ಯೆಹೋವ ಕ್ಷಮಿಸಿದ್ದಾನೆ ಅಂತ ದಾವೀದನಿಗೆ ಅರ್ಥ ಆದಾಗ ಅವನ ಮನಸ್ಸಿಗೆ ತುಂಬ ನಿರಾಳ ಆಯ್ತು.—ಕೀರ್ತ. 32:1.

2 ಯೆಹೋವ ನಮಗೂ ಕರಣೆ ತೋರಿಸ್ತಾನೆ. ನಮ್ಮ ತಪ್ಪುಗಳನ್ನು ಕ್ಷಮಿಸ್ತಾನೆ ಅಂತ ಅರ್ಥ ಮಾಡ್ಕೊಂಡಾಗ ದಾವೀದನಂತೆ ನಮ್ಮ ಮನಸ್ಸೂ ನಿರಾಳ ಆಗುತ್ತೆ. ನಾವು ಗಂಭೀರ ತಪ್ಪನ್ನ ಮಾಡಿದ್ರೂ ಯೆಹೋವ ಅದನ್ನ ಕ್ಷಮಿಸ್ತಾನೆ. ಆದ್ರೆ ನಾವು ಆತನ ಹತ್ರ ಕ್ಷಮೆಗಾಗಿ ಮೊದಲು ಪ್ರಾರ್ಥಿಸಬೇಕು. ಹಿರಿಯರ ಹತ್ರ ತಪ್ಪನ್ನ ಒಪ್ಕೊಬೇಕು, ಪಶ್ಚಾತ್ತಾಪ ಪಡಬೇಕು. ಆಮೇಲೆ ಮತ್ತೆ ಇನ್ಯಾವತ್ತೂ ಆ ತಪ್ಪನ್ನ ಮಾಡೋಕೆ ಹೋಗಬಾರದು. ಆಗ ಯೆಹೋವ ನಮ್ಮನ್ನ ಎಷ್ಟರ ಮಟ್ಟಿಗೆ ಕ್ಷಮಿಸ್ತಾನೆ ಅಂದ್ರೆ, ಇನ್ಯಾವತ್ತೂ ಆ ತಪ್ಪನ್ನ ನೆನಪಿಸ್ಕೊಳ್ಳಲ್ಲ. (ಜ್ಞಾನೋ. 28:13; ಅ. ಕಾ. 26:20; 1 ಯೋಹಾ. 1:9) ನಾವು ಆ ತಪ್ಪನ್ನ ಮಾಡೇ ಇಲ್ವೇನೋ ಅನ್ನೋ ತರ ಯೆಹೋವ ಅದನ್ನ ಮರೆತು ಬಿಡ್ತಾನೆ. ಇದನ್ನೆಲ್ಲಾ ನೋಡಿದಾಗ ನಮಗೆ ಎಷ್ಟು ಸಮಾಧಾನ ಆಗುತ್ತಲ್ವಾ?—ಯೆಹೆ. 33:16.

ರಾಜ ದಾವೀದ ಸಂಗೀತ ನುಡಿಸ್ತಾ ಹಾಡು ಹಾಡ್ತಿದ್ದಾನೆ.

ರಾಜ ದಾವೀದ ಯೆಹೋವನ ಕ್ಷಮಾಗುಣದ ಬಗ್ಗೆ ಎಷ್ಟೋ ಕೀರ್ತನೆಗಳನ್ನ ಬರೆದಿದ್ದಾನೆ (ಪ್ಯಾರ 1-2 ನೋಡಿ)


3-4. (ಎ) ದೀಕ್ಷಾಸ್ನಾನ ಆದ್ಮೇಲೆ ಜೆನಿಫರ್‌ಗೆ ಹೇಗೆ ಅನಿಸ್ತು? (ಬಿ) ಈ ಲೇಖನದಲ್ಲಿ ನಾವೇನು ನೋಡ್ತೀವಿ?

3 ಯೆಹೋವ ದೇವರು ನಿಜವಾಗ್ಲೂ ನನ್ನನ್ನ ಕ್ಷಮಿಸಿದ್ದಾನಾ ಅಂತ ಕೆಲವ್ರಿಗೆ ಅನುಮಾನ ಬರುತ್ತೆ. ಜೆನಿಫರ್‌ಗೂ ಅದೇ ಅನುಮಾನ ಬಂತು. ಚಿಕ್ಕ ವಯಸ್ಸಿಂದಾನೂ ಜೆನಿಫರ್‌ನ ಅವ್ರ ಅಪ್ಪಅಮ್ಮ ಸತ್ಯದಲ್ಲೇ ಬೆಳೆಸಿದ್ರು. ಆದ್ರೆ ಅವಳು ಸ್ವಲ್ಪ ದೊಡ್ಡವಳಾದ ಮೇಲೆ, ಮೀಟಿಂಗ್‌ ಬಂದಾಗ ಒಂಥರ, ಹೊರಗಡೆ ಇದ್ದಾಗ ಒಂಥರ ನಡ್ಕೊಳ್ಳೋಕೆ ಶುರು ಮಾಡಿದ್ಳು. ಕೆಲವು ದೊಡ್ಡ ತಪ್ಪುಗಳನ್ನ ಮಾಡಿದ್ಳು. ಆದ್ರೆ ಸುಮಾರು ವರ್ಷ ಆದ್ಮೇಲೆ ಬದಲಾವಣೆ ಮಾಡ್ಕೊಂಡು ದೀಕ್ಷಸ್ನಾನನೂ ತಗೊಂಡ್ಳು. ಅದ್ರ ಬಗ್ಗೆ ಅವನು ಹೀಗೆ ಹೇಳ್ತಾಳೆ, “ನಾನು ಹಿಂದೆ, ಹಣದ ಹಿಂದೇನೇ ಹೋಗ್ತಿದ್ದೆ, ಲೈಂಗಿಕ ಅನೈತಿಕತೆ ಮಾಡ್ತಿದ್ದೆ, ತುಂಬ ಕುಡಿತಿದ್ದೆ ಮತ್ತು ಮೂಗಿನ ಮೇಲೇನೆ ಕೋಪ ಇರ್ತಿತ್ತು. ಇದೆಲ್ಲ ತಪ್ಪು ಅಂತ ಅರ್ಥ ಮಾಡ್ಕೊಂಡ್ಮೇಲೆ ಯೆಹೋವನ ಹತ್ರ ‘ನನ್ನನ್ನ ಕ್ಷಮಿಸಿ’ ಅಂತ ಬೇಡ್ಕೊಂಡೆ. ಪಶ್ಚಾತ್ತಾಪ ಪಟ್ರೆ ಯೇಸುವಿನ ಬಲಿಯಿಂದ ಯೆಹೋವ ನಮ್ಮನ್ನ ಕ್ಷಮಿಸ್ತಾನೆ ಅಂತ ಬೈಬಲ್‌ನಿಂದ ನಾನು ಓದಿದ್ದೀನಿ. ಆದ್ರೆ ಯೆಹೋವ ನಿಜವಾಗ್ಲೂ ನನ್ನನ್ನ ಕ್ಷಮಿಸಿದ್ದಾನೆ ಅಂತ ನನ್ನ ಮನಸ್ಸು ಒಪ್ತಿಲ್ಲ.”

4 ನಮ್ಮ ಹಿಂದಿನ ತಪ್ಪುಗಳನ್ನ ಯೆಹೋವ ನಿಜವಾಗ್ಲೂ ಕ್ಷಮಿಸಿದ್ದಾನಾ ಅಂತ ಕೆಲವೊಮ್ಮೆ ನಮ್ಮ ಮನಸ್ಸು ಹೇಳುತ್ತೆ. ಆದ್ರೆ ಆತನು ದಾವೀದನಿಗೆ ಕರುಣೆ ತೋರಿಸಿದಂತೆ ನಮಗೂ ತೋರಿಸ್ತಾನೆ ಅಂತ ನಾವು ನಂಬಬೇಕು ಅಂತ ಇಷ್ಟಪಡ್ತಾನೆ. ಅದಕ್ಕೇ ಈ ಲೇಖನದಲ್ಲಿ, ಯೆಹೋವ ನಿಜವಾಗ್ಲೂ ನಮ್ಮನ್ನ ಕ್ಷಮಿಸಿದ್ದಾನೆ ಅಂತ ನಾವು ನಂಬೋದು ಯಾಕೆ ಮುಖ್ಯ ಮತ್ತು ಆ ರೀತಿ ನಂಬೋಕೆ ನಮಗೆ ಯಾವುದು ಸಹಾಯ ಮಾಡುತ್ತೆ ಅಂತ ನೋಡೋಣ.

ಯೆಹೋವ ಕ್ಷಮಿಸಿದ್ದಾನೆ ಅಂತ ನಂಬೋದು ಯಾಕೆ ಮುಖ್ಯ?

5. ನಾವೇನು ನಂಬಬೇಕು ಅಂತ ಸೈತಾನ ಇಷ್ಟಪಡ್ತಾನೆ? ಉದಾಹರಣೆ ಕೊಡಿ.

5 ಯೆಹೋವ ನಮ್ಮನ್ನ ಕ್ಷಮಿಸ್ತಾನೆ ಅಂತ ನಾವು ಅರ್ಥ ಮಾಡ್ಕೊಂಡ್ರೆ ಸೈತಾನನ ಕುತಂತ್ರಕ್ಕೆ ನಾವು ಬಲಿ ಬೀಳಲ್ಲ. ಹೇಗಾದ್ರೂ ಮಾಡಿ ನಾವು ಯೆಹೋವನ ಆರಾಧನೆ ಮಾಡೋದನ್ನ ನಿಲ್ಲಿಸಬೇಕು ಅನ್ನೋದೇ ಅವನ ಗುರಿ. ಅದಕ್ಕೇ ಅವನು, ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸೋದೇ ಇಲ್ಲ ಅಂತ ನಮ್ಮನ್ನ ನಂಬಿಸೋಕೆ ಪ್ರಯತ್ನ ಮಾಡ್ತಾನೆ. ಕೊರಿಂಥದಲ್ಲಿದ್ದ ಒಬ್ಬ ವ್ಯಕ್ತಿ ಲೈಂಗಿಕ ಅನೈತಿಕತೆ ಮಾಡಿದಾಗ ಏನಾಯ್ತು ಅಂತ ನೋಡಿ. (1 ಕೊರಿಂ. 5:1, 5, 13) ಆ ವ್ಯಕ್ತಿ ಪಶ್ಚಾತ್ತಾಪ ಪಟ್ಟು ಸಭೆಗೆ ವಾಪಾಸ್‌ ಬಂದ. ಆದ್ರೆ ಸಭೆಯಲ್ಲಿ ಇರೋರು ಅವನನ್ನ ಕ್ಷಮಿಸಬಾರದು ಅಂತ ಸೈತಾನ ಅಂದ್ಕೊಂಡು ಇರ್ತಾನೆ. ಒಂದುವೇಳೆ ಸಭೆಯಲ್ಲಿರೋರು ಅವನನ್ನ ಕ್ಷಮಿಸಿ ಸೇರಿಸ್ಕೊಳ್ಳದೆ ಇದ್ರೆ ಆ ವ್ಯಕ್ತಿಗೆ ಹೇಗನಿಸಬಹುದು? ‘ಯೆಹೋವನೂ ನನ್ನನ್ನ ಕ್ಷಮಿಸಿಲ್ಲ’ ಅಂತ ಅಂದ್ಕೊಂಡು ದುಃಖದಲ್ಲೇ ಮುಳುಗಿ ಹೋಗಬಹುದು. ಆಗ ಅವನು ಯೆಹೋವನ ಆರಾಧನೆ ಮಾಡೋದನ್ನ ನಿಲ್ಲಿಸಿ ಬಿಡ್ತಾನೆ. ಈ ತರ ಆದ್ರೆ ಚೆನ್ನಾಗಿರುತ್ತೆ ಅಂತ ಸೈತಾನ ಆಸೆ ಪಟ್ಟಿರಬಹುದು. ಸೈತಾನ ಇಂಥ ಕುತಂತ್ರಗಳನ್ನ ಈಗಲೂ ಮಾಡ್ತಿದ್ದಾನೆ. ಅವನು “ಯಾವ್ಯಾವ ಕುತಂತ್ರಗಳನ್ನ ಬಳಸ್ತಾನೆ ಅಂತ ನಮಗೆ ಚೆನ್ನಾಗಿ ಗೊತ್ತು.” ಅದನ್ನ ತಿಳ್ಕೊಂಡು ಅದ್ರ ವಿರುದ್ಧ ಹೋರಾಡೋಕೆ ನಾವು ಕಲ್ತಿದ್ದೀವಿ.—2 ಕೊರಿಂ. 2:5-11.

6. ನಮ್ಮ ಮನಸ್ಸು ಚುಚ್ಚುತ್ತಾ ಆ ನೋವಲ್ಲೇ ನಾವು ಮುಳುಗಿ ಹೋಗಬಾರದು ಅಂದ್ರೆ ಏನು ಮಾಡಬೇಕು?

6 ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ ಅಂತ ನಾವು ಅರ್ಥ ಮಾಡ್ಕೊಂಡ್ರೆ ನಮ್ಮ ಮನಸ್ಸು ನಮ್ಮನ್ನ ಚುಚ್ಚಲ್ಲ. (ಕೀರ್ತ. 51:17) ನಾವು ತಪ್ಪು ಮಾಡಿದಾಗ ಸಾಮಾನ್ಯವಾಗಿ ನಮ್ಮ ಮನಸ್ಸು ಚುಚ್ಚುತ್ತೆ. ಅದು ಒಂಥರ ಒಳ್ಳೇದೇ. ಅದ್ರಿಂದ ನಾವು ನಮ್ಮ ತಪ್ಪನ್ನ ತಿದ್ಕೊಂಡು ಸರಿಯಾಗಿ ಜೀವನ ಮಾಡೋಕೆ ಕಲಿತೀವಿ. (2 ಕೊರಿಂ. 7:10, 11) ಆದ್ರೆ ನಾವು ನಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಬದಲಾದ್ಮೇಲೂ ನಮ್ಮ ಮನಸ್ಸು ಇನ್ನೂ ಚುಚ್ತಾ ಇದ್ರೆ, ಅದು ಸರಿನಾ? ನಾವು ಅದೇ ನೋವಲ್ಲಿ ಮುಳುಗಿ ಹೋಗಿ ಯೆಹೋವನ ಆರಾಧನೆ ಮಾಡೋದನ್ನೇ ನಿಲ್ಲಿಸಿ ಬಿಡ್ತೀವಿ. ಈ ತರ ಆಗಬಾರದಂದ್ರೆ ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ ಅಂತ ನಾವು ನಂಬಬೇಕು. ಆಗ ನಮ್ಮ ಮನಸ್ಸು ನಮ್ಮನ್ನ ಚುಚ್ಚಲ್ಲ. ಯೆಹೋವನನ್ನ ಶುದ್ಧ ಮನಸ್ಸಾಕ್ಷಿಯಿಂದ, ಸಂತೋಷದಿಂದ ಆರಾಧನೆ ಮಾಡೋಕಾಗುತ್ತೆ. (ಕೊಲೊ. 1:10, 11; 2 ತಿಮೊ. 1:3) ಆದ್ರೆ ಯೆಹೋವ ನಿಜವಾಗ್ಲೂ ನಿಮ್ಮನ್ನ ಕ್ಷಮಿಸಿದ್ದಾನಾ ಅಂತ ತಿಳ್ಕೊಳ್ಳೋದು ಹೇಗೆ?

ಯೆಹೋವ ನಿಜವಾಗ್ಲೂ ನಿಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬೋಕೆ ಯಾವುದು ಸಹಾಯ ಮಾಡುತ್ತೆ?

7-8. (ಎ) ಯೆಹೋವ ಮೋಶೆ ಹತ್ರ ತನ್ನ ಬಗ್ಗೆ ಏನಂತ ಹೇಳಿದನು? (ಬಿ) ಆ ಮಾತಿಂದ ನಮಗೆ ಯಾವ ಭರವಸೆ ಸಿಗುತ್ತೆ? (ವಿಮೋಚನಕಾಂಡ 34:6, 7)

7 ಸಿನಾಯಿ ಬೆಟ್ಟದ ಹತ್ರ ಯೆಹೋವ ಮೋಶೆಗೆ ತಾನು ಎಂಥವನು ಅಂತ ಹೇಳಿದನು.a (ವಿಮೋಚನಕಾಂಡ 34:6, 7 ಓದಿ.) ಯೆಹೋವ ತನ್ನಲ್ಲಿರೋ ಎಷ್ಟೋ ಗುಣಗಳ ಬಗ್ಗೆ ಹೇಳಬಹುದಾಗಿತ್ತು, ಆದ್ರೆ ಮೋಶೆ ಹತ್ರ ‘ನಾನು, ಕರುಣೆ ಮತ್ತು ಕನಿಕರ ಇರೋ ದೇವರು’ ಅಂತ ಹೇಳಿದನು. ನೋಡಿದ್ರಾ? ಜನರು ತನ್ನನ್ನ ಈ ಗುಣಗಳಿಂದಾಗಿ ನೆನಪಿಟ್ಕೊಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅಂತ ಇದ್ರಿಂದ ಗೊತ್ತಾಗುತ್ತೆ. ಇಂಥ ಗುಣಗಳಿರೋ ದೇವರು ತನ್ನ ಆರಾಧಕರು ಮನಸಾರೆ ಪಶ್ಚಾತ್ತಾಪಪಟ್ಟಾಗ ಕ್ಷಮಿಸದೆ ಇರ್ತಾನಾ? ಖಂಡಿತ ಕ್ಷಮಿಸ್ತಾನೆ ಅಲ್ವಾ! ಒಂದು ವೇಳೆ ಕ್ಷಮಿಸಲಿಲ್ಲ ಅಂದ್ರೆ ಆತನು ಕ್ರೂರಿ, ಕಲ್ಲು ಹೃದಯದವನು ಅಂತ ಆಗುತ್ತಲ್ವಾ? ನಮ್ಮ ಯೆಹೋವ ಯಾವತ್ತೂ ಈ ಕೆಟ್ಟ ಗುಣಗಳನ್ನ ತೋರಿಸಲ್ಲ.

8 ಯೆಹೋವ ಯಾವಾಗ್ಲೂ ಸತ್ಯನೇ ಹೇಳೋ ದೇವರು. ತನ್ನಲ್ಲಿ ಕರುಣೆ, ಕನಿಕರ ಇದೆ ಅಂತ ಆತನು ಹೇಳ್ತಿದ್ದಾನೆ ಅಂದ್ರೆ ನಿಜವಾಗ್ಲೂ ಆ ಗುಣಗಳು ಆತನಲ್ಲಿ ಇದೆ ಅಂತ ನಾವು ನಂಬಬಹುದು. (ಕೀರ್ತ. 31:5) ಒಂದುವೇಳೆ ಹಿಂದೆ ಮಾಡಿದ ತಪ್ಪುಗಳಿಗಾಗಿ ನಿಮ್ಮ ಮನಸ್ಸು ನಿಮ್ಮನ್ನ ಇನ್ನು ಚುಚ್ತಾ ಇದ್ರೆ ಹೀಗೆ ಕೇಳ್ಕೊಳ್ಳಿ: ‘ಯೆಹೋವನಲ್ಲಿ ನಿಜವಾಗ್ಲೂ ಕರುಣೆ ಮತ್ತು ಕನಿಕರ ಇದೆ ಅಂತ ನಾನು ನಂಬ್ತೀನಾ? ತಪ್ಪು ಮಾಡಿರೋ ಯಾವುದೇ ವ್ಯಕ್ತಿ ಪಶ್ಚಾತ್ತಾಪ ಪಟ್ರೆ ಆತನು ಕ್ಷಮಿಸ್ತಾನೆ ಅಂತ ನಾನು ನಂಬ್ತೀನಾ? ಒಂದುವೇಳೆ ನಾನು ನಂಬೋದಾದ್ರೆ ಯೆಹೋವ ನನ್ನನ್ನೂ ಕ್ಷಮಿಸ್ತಾನೆ ಅಂತ ನಾನು ನಂಬಬೇಕಲ್ವಾ?

9. “ಕ್ಷಮಿಸಿದೆ” ಅಂತ ದಾವೀದ ಬರೆದ ಪದದ ಅರ್ಥ ಏನು? (ಕೀರ್ತನೆ 32:5)

9 ಯೆಹೋವ ನಮ್ಮನ್ನ ಹೇಗೆ ಕ್ಷಮಿಸ್ತಾನೆ ಅಂತ ಬೈಬಲಲ್ಲಿ ಇದೆ, ಅದ್ರ ಬಗ್ಗೆ ಯೋಚಿಸಿ. (ಕೀರ್ತನೆ 32:5 ಓದಿ) ದಾವೀದ ಯೆಹೋವನ ಬಗ್ಗೆ ಹೇಳ್ತಾ, “ನೀನು ನನ್ನ ಪಾಪಗಳನ್ನ ತಪ್ಪುಗಳನ್ನ ಕ್ಷಮಿಸಿದೆ” ಅಂತ ಬರೆದ. ಇಲ್ಲಿ ಬಳಸಿರೋ “ಕ್ಷಮಿಸಿದೆ” ಅನ್ನೋ ಹೀಬ್ರು ಪದಕ್ಕೆ “ಎತ್ಕೊಂಡೆ,” ತೆಗೆದು ಹಾಕಿದೆ” ಅಥವಾ “ಹೊತ್ಕೊಂಡೆ” ಅನ್ನೋ ಅರ್ಥನೂ ಇದೆ. ಅಂದ್ರೆ ಯೆಹೋವ ದಾವೀದನನ್ನ ಕ್ಷಮಿಸಿದಾಗ ಅವನನ್ನ ಚುಚ್ಚುತ್ತಾ ಇದ್ದಂಥ ಮನಸ್ಸಿನ ಭಾರನ ತೆಗೆದು ಹಾಕಿದನು ಅಂತರ್ಥ. ಹಾಗಾಗಿ ದಾವೀದ ಆ ನೋವಲ್ಲೇ ಮುಳುಗಿ ಹೋಗ್ಲಿಲ್ಲ, ಅವನ ಮನಸ್ಸು ನಿರಾಳ ಆಯ್ತು. (ಕೀರ್ತ. 32:2-4) ನಾವು ನಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟಾಗ ಯೆಹೋವ ನಮ್ಮನ್ನೂ ಕ್ಷಮಿಸ್ತಾನೆ. ನಮ್ಮ ಮನಸ್ಸಿನ ಭಾರನ ತೆಗೆದುಹಾಕ್ತಾನೆ. ಹಾಗಾಗಿ ನಾವು ದುಃಖದಲ್ಲಿ ಮುಳುಗಿ ಹೋಗಬೇಕಿಲ್ಲ.

10-11. ಯೆಹೋವ ‘ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಾನೆ’ ಅನ್ನೋದ್ರಿಂದ ಆತನ ಬಗ್ಗೆ ಏನು ಗೊತ್ತಾಗುತ್ತೆ? (ಕೀರ್ತನೆ 86:5)

10 ಕೀರ್ತನೆ 86:5 ಓದಿ. ಯೆಹೋವನು ‘ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಾನೆ’ ಅಂತ ದಾವೀದ ಹೇಳಿದ. ಈ ವಚನವನ್ನ ವಿವರಿಸ್ತಾ ಒಂದು ಬೈಬಲ್‌ ರೆಫರೆನ್ಸ್‌ ಹೀಗೆ ಹೇಳುತ್ತೆ: “ಯೆಹೋವನು ಕ್ಷಮಿಸುವಂಥ ವ್ಯಕ್ತಿ, ಕ್ಷಮಿಸೋದು ಆತನ ಸ್ವಭಾವ.” ಯಾಕೆ ಇದನ್ನ ಆತನ ಸ್ವಭಾವ ಅಂತ ಹೇಳಬಹುದು? ಆ ವಚನದ ಎರಡನೇ ಭಾಗದಲ್ಲಿ ಇದಕ್ಕೆ ಉತ್ರ ಇದೆ. ಅಲ್ಲಿ “ನಿನಗೆ ಮೊರೆಯಿಡೋ ಪ್ರತಿಯೊಬ್ರಿಗೂ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ” ಅಂತಿದೆ. ಹಿಂದಿನ ಲೇಖನದಲ್ಲಿ ಕಲಿತಂತೆ, ತನ್ನನ್ನ ಪ್ರೀತಿಸೋರಿಗೆ ಯೆಹೋವ ಶಾಶ್ವತ ಪ್ರೀತಿ ತೋರಿಸ್ತಾನೆ. ಅವ್ರ ಕೈಯನ್ನ ಆತನು ಯಾವತ್ತೂ ಬಿಡಲ್ಲ. ಆದ್ರಿಂದ ಈ ಶಾಶ್ವತ ಪ್ರೀತಿ ಪಶ್ಚಾತ್ತಾಪ ಪಡೋ ಎಲ್ರನ್ನೂ ‘ಉದಾರವಾಗಿ ಕ್ಷಮಿಸೋ’ ತರ ಯೆಹೋವನನ್ನ ಪ್ರೇರೇಪಿಸುತ್ತೆ. (ಯೆಶಾ. 55:7) ಒಂದುವೇಳೆ ಯೆಹೋವ ನಿಮ್ಮನ್ನ ಕ್ಷಮಿಸಿಲ್ಲ ಅಂತ ನಿಮಗೆ ಅನಿಸ್ತಿದ್ರೆ, ‘ನನ್ನನ್ನ ಕ್ಷಮಿಸಿ, ನನಗೆ ಕರುಣೆ ತೋರಿಸಿ ಅಂತ ಕೇಳೋವ್ರನ್ನೆಲ್ಲ ಯೆಹೋವ ಕ್ಷಮಿಸೋಕೆ ಸಿದ್ಧನಾಗಿರ್ತಾನೆ ಅಂತ ನಾನು ನಂಬ್ತೀನಾ?’ ಅಂತ ಕೇಳ್ಕೊಳ್ಳಿ. ಯೆಹೋವ ಅವ್ರನ್ನ ಕ್ಷಮಿಸಿದ್ದಾನೆ ಅಂದ್ಮೇಲೆ, ‘ನನ್ನ ಕ್ಷಮಿಸಿ, ನನಗೆ ಕರುಣೆ ತೋರಿಸಿ’ ಅಂತ ನೀವು ಹೇಳಿದಾಗ ಯೆಹೋವ ನಿಮ್ಮನ್ನೂ ಕ್ಷಮಿಸಿರ್ತಾನೆ ಅಂತ ನೀವು ನಂಬಬೇಕಲ್ವಾ?

11 ನಮ್ಮಲ್ಲಿ ಪಾಪ ಮಾಡೋ ಸ್ವಭಾವ ಇದೆ ಅಂತ ಯೆಹೋವ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಇದನ್ನ ತಿಳ್ಕೊಂಡಾಗ ನಮಗೆ ಸಮಾಧಾನ ಆಗುತ್ತೆ. (ಕೀರ್ತ. 139:1, 2) ನಾವೀಗ ದಾವೀದ ಬರೆದಿರೋ ಇನ್ನೊಂದು ಕೀರ್ತನೆಯನ್ನ ನೋಡೋಣ. ಅದು ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ ಅಂತ ತಿಳ್ಕೊಳ್ಳೋಕೆ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.

ಯೆಹೋವ ನೆನಪಿಟ್ಟಿರೋದನ್ನ ನೀವು ಮರೀಬೇಡಿ

12-13. (ಎ) ಕೀರ್ತನೆ 103:14ರ ಪ್ರಕಾರ ಯೆಹೋವ ಏನನ್ನ ನೆನಪಿಸ್ಕೊಳ್ತಾನೆ? (ಬಿ) ಅದ್ರಿಂದ ಏನು ಮಾಡ್ತಾನೆ?

12 ಕೀರ್ತನೆ 103:14 ಓದಿ. ‘ನಾವು ಧೂಳಾಗಿದ್ದೀವಿ ಅಂತ ಯೆಹೋವನು ನೆನಪಿಸ್ಕೊಳ್ತಾನೆ’ ಅಂತ ದಾವೀದ ಬರೆದ. ಪಶ್ಚಾತ್ತಾಪ ಪಡೋರನ್ನ ಯೆಹೋವ ಕ್ಷಮಿಸೋಕೆ ಇದೂ ಒಂದು ಕಾರಣ ಅಂತ ದಾವೀದ ಹೇಳಿದ. ನಮ್ಮಲ್ಲಿ ಪಾಪ ಮಾಡೋ ಸ್ವಭಾವ ಇದೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತಿದೆ. ಅದು ಹೇಗೆ ಅಂತ ಅರ್ಥ ಮಾಡ್ಕೊಳ್ಳೋಕೆ ದಾವೀದ ಹೇಳಿದ ಆ ಮಾತುಗಳನ್ನ ಚೆನ್ನಾಗಿ ತಿಳ್ಕೊಳ್ಳೋಣ ಬನ್ನಿ.

13 ‘ನಮ್ಮನ್ನ ರಚಿಸಿರೋದು ಹೇಗೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು’ ಅಂತ ದಾವೀದ ಹೇಳಿದ. ಆದಾಮನನ್ನ ಯೆಹೋವ ದೇವರು “ನೆಲದ ಮಣ್ಣಿಂದ” ಅಥವಾ ಧೂಳಿಂದ ಮಾಡಿದನು. (ಆದಿ. 2:7) ಆದ್ರಿಂದ ಅವರು ಪರಿಪೂರ್ಣರಾಗಿದ್ರೂ ಧೂಳಾಗಿದ್ರು ಅಂದ್ರೆ ಅವ್ರಿಗೆ ಇತಿಮಿತಿ ಇತ್ತು. ಹಾಗಾಗಿ ಅವರು ಬದುಕೋಕೆ ಉಸಿರಾಡಬೇಕಿತ್ತು, ಊಟ ಮತ್ತು ನಿದ್ದೆ ಮಾಡಬೇಕಿತ್ತು. ಆದ್ರೆ ಆದಾಮ ಹವ್ವ ತಪ್ಪು ಮಾಡಿದ ಮೇಲೆ ನಾವು ಇನ್ನೊಂದು ರೀತಿಲೂ ಧೂಳಾದ್ವಿ. ಅವ್ರಿಂದ ನಮ್ಮಲ್ಲಿ ಪಾಪ ಮಾಡೋ ಸ್ವಭಾವ ಬಂತು. ಇದ್ರ ವಿರುದ್ಧ ನಾವು ಹೋರಾಡಬೇಕು. ನಮ್ಮಲ್ಲಿ ಈ ಪಾಪ ಇರೋದ್ರಿಂದ ನಾವು ಆಗಿಂದಾಗ್ಗೆ ತಪ್ಪುಗಳನ್ನ ಮಾಡಿಬಿಡ್ತೀವಿ. ಆದ್ರೆ ನಾವು ಧೂಳಾಗಿರೋದ್ರಿಂದ ಈ ತರ ತಪ್ಪು ಮಾಡ್ತಿದ್ದೀವಿ ಅಂತ ಯೆಹೋವ ನೆನಪಿಸ್ಕೊಳ್ತಾನೆ. ಹಾಗಾಗಿ ನಾವು ಪಶ್ಚಾತ್ತಾಪ ಪಟ್ಟಾಗ ನಮಗೆ ಕರುಣೆ ತೋರಿಸಿ ಕ್ಷಮಿಸ್ತಾನೆ.—ಕೀರ್ತ. 78:38, 39.

14. (ಎ) ಯೆಹೋವ ಎಷ್ಟರ ಮಟ್ಟಿಗೆ ಕ್ಷಮಿಸ್ತಾನೆ ಅಂತ ದಾವೀದ ಹೇಳಿದ? (ಕೀರ್ತನೆ 103:12.) (ಬಿ) ಯೆಹೋವ ಪೂರ್ತಿಯಾಗಿ ಕ್ಷಮಿಸ್ತಾನೆ ಅಂತ ದಾವೀದ ಹೇಳಿದ ಮಾತಿನಿಂದ ನಮಗೆ ಏನು ಗೊತ್ತಾಗುತ್ತೆ? (“ಯೆಹೋವ ತಪ್ಪನ್ನ ಕ್ಷಮಿಸ್ತಾನೆ, ಆ ತಪ್ಪನ್ನ ಮರೀತಾನೆ.” ಅನ್ನೋ ಚೌಕ ನೋಡಿ.)

14 ಯೆಹೋವ ಎಷ್ಟರ ಮಟ್ಟಿಗೆ ನಮ್ಮನ್ನ ಕ್ಷಮಿಸ್ತಾನೆ? (ಕೀರ್ತನೆ 103:12 ಓದಿ.) “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ, ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ” ಅಂತ ದಾವೀದ ಹೇಳಿದ. ಪೂರ್ವ ಪಶ್ಚಿಮ ಒಂದಕ್ಕೊಂದು ತುಂಬಾ ದೂರದಲ್ಲಿದೆ. ಅವೆರಡು ಯಾವತ್ತೂ ಜೊತೆ ಸೇರಲ್ಲ. ಯೆಹೋವ ನಮ್ಮ ತಪ್ಪುಗಳನ್ನ ಅಷ್ಟು ದೂರ ಎಸಿತಾನೆ ಅಂದ್ರೆ ಏನರ್ಥ? “ಅಂದ್ರೆ, ಆ ತಪ್ಪಿನ ಸುಳಿವು, ವಾಸನೆ ಮತ್ತು ಅದ್ರ ನೆನಪನ್ನೂ ಪೂರ್ತಿಯಾಗಿ ಇಲ್ಲದಂತೆ ಮಾಡ್ತಾನೆ” ಅಂತ ಒಂದು ರೆಫರೆನ್ಸ್‌ ಹೇಳುತ್ತೆ. ನಿಮಗೆ ಗೊತ್ತಿರೋ ಹಾಗೆ ಒಂದು ಸುಳಿವು ಅಥವಾ ವಾಸನೆ ಒಂದು ಘಟನೆಯನ್ನ ನಮಗೆ ನೆನಪಿಸುತ್ತೆ. ಆದ್ರೆ ಯೆಹೋವ ಒಂದ್ಸಲ ತಪ್ಪನ್ನ ಕ್ಷಮಿಸಿದ್ದಾನೆ ಅಂದ್ರೆ ಅದ್ರ ಸುಳಿವು ಮತ್ತು ವಾಸನೆನೂ ನೆನಪಿಗೆ ಬರದೆ ಇರೋ ತರ ಅಳಿಸಿ ಹಾಕ್ತಾನೆ ಅಂತ ಇದರರ್ಥ.—ಯೆಹೆ. 18:21, 22; ಅ. ಕಾ. 3:19.

ಚಿತ್ರ: 1. ಬತ್ಷೆಬ ಸ್ನಾನ ಮಾಡೋದನ್ನ ರಾಜ ದಾವೀದ ಮೇಲಿಂದ ನೋಡ್ತಿದ್ದಾನೆ. 2. ಅವನು ಅಂಗಲಾಚಿ ಪ್ರಾರ್ಥಿಸ್ತಿದ್ದಾನೆ. 3. ಬರೆಯುವಾಗ ಅವನು ಯೋಚಿಸ್ತಿದ್ದಾನೆ.

ಯೆಹೋವ ತಪ್ಪನ್ನ ಕ್ಷಮಿಸ್ತಾನೆ, ಆ ತಪ್ಪನ್ನ ಮರೀತಾನೆ

ಯೆಹೋವ ಒಂದ್ಸಲ ಒಂದು ತಪ್ಪನ್ನ ಕ್ಷಮಿಸಿದ್ರೆ ಆ ತಪ್ಪನ್ನ ಪೂರ್ತಿಯಾಗಿ ಮರೆತು ಬಿಡ್ತಾನೆ. ಆ ತಪ್ಪಿಗೆ ಇನ್ಯಾವತ್ತೂ ನಮಗೆ ಶಿಕ್ಷೆ ಕೊಡಲ್ಲ. (ಯೆಶಾ. 43:25) ರಾಜ ದಾವೀದನ ತಪ್ಪನ್ನ ಯೆಹೋವ ಕ್ಷಮಿಸಿದನು. ನಾವು ಮನಸಾರೆ ಪಶ್ಚಾತ್ತಾಪ ಪಟ್ರೆ ನಮ್ಮ ತಪ್ಪನ್ನೂ ಕ್ಷಮಿಸ್ತಾನೆ. ಆತನ ಜೊತೆ ಒಳ್ಳೆ ಫ್ರೆಂಡ್‌ಶಿಪ್‌ ಮಾಡ್ಕೊಳ್ಳೋಕೂ ಸಹಾಯ ಮಾಡ್ತಾನೆ.

ದಾವೀದ ದೊಡ್ಡದೊಡ್ಡ ಪಾಪಗಳನ್ನ ಮಾಡಿದ, ವ್ಯಭಿಚಾರ, ಕೊಲೆ ಮಾಡಿದ. ಆದ್ರೆ ಅದೆಲ್ಲಾ ಎಷ್ಟು ಗಂಭೀರ ತಪ್ಪುಗಳು ಅಂತ ಅರ್ಥ ಮಾಡ್ಕೊಂಡ ಮೇಲೆ ಮನಸಾರೆ ಪಶ್ಚಾತ್ತಾಪ ಪಟ್ಟ. ಆಗ ಯೆಹೋವ ಅವನನ್ನ ಕ್ಷಮಿಸಿದನು. ದಾವೀದ ತನಗೆ ಸಿಕ್ಕ ಶಿಸ್ತನ್ನ ಸ್ವೀಕರಿಸಿದ ಮತ್ತು ಜೀವನದಲ್ಲಿ ಬದಲಾವಣೆಗಳನ್ನ ಮಾಡ್ಕೊಂಡ. ಯೆಹೋವನನ್ನ ಖುಷಿಯಾಗಿ ಆರಾಧನೆ ಮಾಡೋದನ್ನ ಮುಂದುವರೆಸಿದ. ಜೀವನದಲ್ಲಿ ಇನ್ಯಾವತ್ತೂ ಆ ತಪ್ಪುಗಳನ್ನ ಮತ್ತೆ ಮಾಡೋಕೆ ಹೋಗಲಿಲ್ಲ. —2 ಸಮು. 11:1-27; 12:13.

ಯೆಹೋವ ಸೊಲೊಮೋನನ ಹತ್ರ ದಾವೀದನ ಬಗ್ಗೆ ‘ನಿನ್ನ ಅಪ್ಪ ದಾವೀದ ನಡೆದ ಹಾಗೆ ಪೂರ್ಣ ಹೃದಯದಿಂದ ಮತ್ತು ನೀತಿಯಿಂದ ನಡಿ’ ಅಂತ ಪ್ರೋತ್ಸಾಹಿಸಿದನು. (1 ಅರ. 9:4, 5) ನೋಡಿದ್ರಾ? ಯೆಹೋವ ದಾವೀದನ ಒಂದೇ ಒಂದು ತಪ್ಪಿನ ಬಗ್ಗೆ ಕೂಡ ಮಾತೆತ್ತಿಲ್ಲ! ದಾವೀದ ತನ್ನ ಇಡೀ ಜೀವನದಲ್ಲಿ ನಡ್ಕೊಂಡಿದ್ದನ್ನೆಲ್ಲಾ ನೋಡಿ ಅವನು ಪೂರ್ಣ ಹೃದಯದಿಂದ ನೀತಿಯಿಂದ ನಡೆದ ಅಂತ ಯೆಹೋವ ಹೇಳಿದನು. ದಾವೀದ ಈ ತರ ನಿಯತ್ತಿಂದ ನಡೆದಿದ್ರಿಂದ ಯೆಹೋವ ಅವನನ್ನ ‘ತುಂಬಾ ಆಶೀರ್ವದಿಸಿದನು.’—ಕೀರ್ತ. 13:6.

ನಾವೇನು ಕಲಿಬಹುದು? ಯೆಹೋವ ಒಂದ್ಸಲ ಕ್ಷಮಿಸಿದ್ರೆ, ಆ ವ್ಯಕ್ತಿ ಏನು ತಪ್ಪು ಮಾಡಿದ ಅಂತ ಮತ್ತೆ ಇನ್ಯಾವತ್ತೂ ಯೋಚ್ನೆ ಮಾಡೋಕೆ ಹೋಗಲ್ಲ. ಬದಲಿಗೆ ಅವನಲ್ಲಿ ಏನು ಒಳ್ಳೇದಿದೆ, ಅವನನ್ನ ಹೇಗೆ ಆಶೀರ್ವಾದಿಸಬೇಕು ಅಂತ ನೋಡ್ತಾನೆ. (ಇಬ್ರಿ. 11:6) ಆದ್ರಿಂದ ಯೆಹೋವ ಮರೆತಿರೋ ತಪ್ಪುಗಳನ್ನ ನಾವು ಯಾವತ್ತೂ ನೆನಪು ಮಾಡ್ಕೊಳ್ಳೋದು ಬೇಡ.

15. ಹಿಂದೆ ಮಾಡಿರೋ ತಪ್ಪಿಗೆ ನಮ್ಮ ಮನಸ್ಸು ಇನ್ನೂ ಚುಚ್ತಾ ಇದ್ರೆ ಏನು ಮಾಡಬೇಕು?

15 ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬೋಕೆ 103ನೇ ಕೀರ್ತನೆಯಲ್ಲಿ ದಾವೀದ ಹೇಳಿರೋ ಮಾತು ನಮಗೆ ಹೇಗೆ ಸಹಾಯ ಮಾಡುತ್ತೆ. ನಾವು ಹಿಂದೆ ಮಾಡಿರೋ ತಪ್ಪಿಗೆ ಮನಸ್ಸು ಇನ್ನೂ ಚುಚ್ತಾ ಇರೋದಾದ್ರೆ ನಾವು ನಮ್ಮನ್ನೇ ಹೀಗೆ ಕೇಳ್ಕೊಬೇಕು: ‘ನಮ್ಮಲ್ಲಿ ತಪ್ಪು ಮಾಡೋ ಸ್ವಭಾವ ಇದೆ ಅಂತ ಯೆಹೋವನಿಗೆ ಗೊತ್ತಿದೆ ಮತ್ತು ನನ್ನಂಥ ಪಾಪಿನ ಆತನು ಕ್ಷಮಿಸ್ತಾನೆ ಅನ್ನೋದನ್ನ ನಾನು ಮರೀತಿದ್ದೀನಾ? ಯೆಹೋವ ಯಾವ ತಪ್ಪುಗಳನ್ನ ಕ್ಷಮಿಸಿದ್ದಾನೋ, ಯಾವುದನ್ನ ಮತ್ತೆ ನೆನಪು ಮಾಡ್ಕೊಳ್ಳಲ್ಲ ಅಂತ ಹೇಳಿದ್ದಾನೋ ಅದನ್ನ ನಾನು ಇನ್ನು ನೆನಪು ಮಾಡ್ಕೊಳ್ತಿದ್ದೀನಾ?’ ನಾವು ಹಿಂದೆ ಮಾಡಿರೋ ತಪ್ಪುಗಳನ್ನ ಯೆಹೋವ ಯಾವತ್ತೂ ನೆನಪು ಮಾಡ್ಕೊಳಲ್ಲ. ನಾವೂ ಅದನ್ನ ನೆನಪು ಮಾಡ್ಕೊಬಾರದು. (ಕೀರ್ತ. 130:3) ಯೆಹೋವ ನಿಜವಾಗ್ಲೂ ನಮ್ಮ ತಪ್ಪುಗಳನ್ನ ಕ್ಷಮಿಸಿದ್ದಾನೆ ಅಂತ ನಾವು ಒಪ್ಕೊಬೇಕು. ಆಗ ನಮ್ಮ ಮನಸ್ಸು ನಮ್ಮನ್ನ ಚುಚ್ಚಲ್ಲ ಮತ್ತು ನಾವು ಖುಷಿಯಿಂದ ಯೆಹೋವನನ್ನ ಆರಾಧನೆ ಮಾಡ್ತೀವಿ.

16. ಹಿಂದೆ ಮಾಡಿದ ತಪ್ಪಿನ ಬಗ್ಗೆನೇ ಯೋಚ್ನೆ ಮಾಡ್ತಾ ಇದ್ರೆ ಯಾವ ಅಪಾಯ ಇದೆ? ಉದಾಹರಣೆ ಕೊಡಿ. (ಚಿತ್ರ ನೋಡಿ.)

16 ಹಿಂದೆ ಮಾಡಿದ ತಪ್ಪುಗಳ ಬಗ್ಗೆನೇ ಯೋಚ್ನೆ ಮಾಡ್ತಾ ಆ ನೋವಲ್ಲೇ ಮುಳುಗಿ ಹೋಗೋದು ಕನ್ನಡಿ ನೋಡ್ಕೊಂಡು ಗಾಡಿ ಓಡಿಸಿದ ತರ ಇರುತ್ತೆ. ಆಗೊಮ್ಮೆ ಈಗೊಮ್ಮೆ ಕನ್ನಡಿ ನೋಡೋದು ಒಳ್ಳೇದೆ. ಅದು ಹಿಂದೆ ಏನಾದ್ರೂ ಅಪಾಯ ಇದ್ಯಾ ಅಂತ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ. ಆದ್ರೆ ಬರೀ ಆ ಕನ್ನಡಿನೇ ನೋಡ್ಕೊಂಡು ಗಾಡಿ ಓಡ್ಸಿದ್ರೆ ಆಕ್ಸಿಡೆಂಟ್‌ ಆಗಿಬಿಡುತ್ತಲ್ವಾ? ನೀವು ಸುರಕ್ಷಿತವಾಗಿ ಮುಂದೆ ಹೋಗಬೇಕಂದ್ರೆ ಏನು ಮಾಡಬೇಕು? ಮುಂದೆ ರೋಡ್‌ ನೋಡಬೇಕು ತಾನೇ? ಅದೇ ತರಾನೇ ಹಿಂದೆ ಮಾಡಿದ ತಪ್ಪನ್ನ ಕೆಲವೊಮ್ಮೆ ನೆನಸ್ಕೊಳ್ಳೋದ್ರಿಂದ ನೀವು ಪಾಠ ಕಲಿಬಹುದು. ಆ ತಪ್ಪನ್ನ ಮತ್ತೆ ಮಾಡಬಾರದು ಅನ್ನೋ ಛಲನೂ ಜಾಸ್ತಿ ಆಗುತ್ತೆ. ಆದ್ರೆ ಆ ತಪ್ಪುಗಳ ಬಗ್ಗೆನೇ ಯೋಚ್ನೆ ಮಾಡ್ತಾ ಅದ್ರಲ್ಲೇ ಮುಳುಗಿ ಹೋದ್ರೆ ನಿಮ್ಮ ಮನಸ್ಸು ನಿಮ್ಮನ್ನ ಚುಚ್ಚೋದು ಜಾಸ್ತಿ ಆಗುತ್ತೆ. ಯೆಹೋವನ ಸೇವೆನೂ ನೀವು ಖುಷಿಯಾಗಿ ಮಾಡೋಕಾಗಲ್ಲ, ಅದನ್ನ ನಿಲ್ಲಿಸಿ ಬಿಡ್ತೀರ. ಹಾಗಾಗಿ ಯೆಹೋವನ ಸೇವೆಲಿ ಮುಂದೆ ಏನು ಮಾಡಬೇಕು ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. ನಾವೆಲ್ರೂ ಯೆಹೋವ ದೇವರು ಮಾತು ಕೊಟ್ಟಿರೋ ಹೊಸ ಲೋಕಕ್ಕೆ ಹೋಗೋಕೆ ಕಾಯ್ತಾ ಇದ್ದೀವಿ. ಒಂದ್ಸಲ ಅಲ್ಲಿ ಜೀವನ ಶುರು ಮಾಡಿದ್ಮೇಲೆ ನಮಗೆ “ಹಳೇ ಸಂಗತಿಗಳು ನೆನಪಿಗೆ ಬರಲ್ಲ” ಅಂತ ನೆನಪಿಡಿ.—ಯೆಶಾ. 65:17; ಜ್ಞಾನೋ. 4:25.

ಗಾಳಿ ಬೀಸ್ತಿರೋ ರೋಡಲ್ಲಿ ಒಬ್ಬ ವ್ಯಕ್ತಿ ಕನ್ನಡಿ ನೋಡ್ಕೊಂಡು ಕಾರು ಓಡಿಸ್ತಿದ್ದಾನೆ.

ಡ್ರೈವರ್‌ ಕನ್ನಡಿಗಿಂತ ಜಾಸ್ತಿ ಮುಂದೆ ಇರೋ ರೋಡನ್ನ ನೋಡಬೇಕು. ಅದೇ ತರನೇ ನಾವು ಹಿಂದೆ ಮಾಡಿದ ತಪ್ಪುಗಳಿಗಿಂತ ಮುಂದೆ ಸಿಗೋ ಆಶೀರ್ವಾದಗಳ ಬಗ್ಗೆ ಯೋಚಿಸಬೇಕು (ಪ್ಯಾರ 16 ನೋಡಿ)


ಮನಸ್ಪೂರ್ತಿ ನಂಬಿ, ಯಾವತ್ತೂ ಸಂಶಯ ಪಡಬೇಡಿ

17. ಯೆಹೋವ ದೇವರು ನಮ್ಮನ್ನ ಪ್ರೀತಿಸ್ತಿದ್ದಾನೆ, ಕ್ಷಮಿಸಿದ್ದಾನೆ ಅಂತ ನಾವು ಪೂರ್ತಿಯಾಗಿ ನಂಬೋದು ಯಾಕೆ ಮುಖ್ಯ?

17 ಯೆಹೋವನು ನಮ್ಮನ್ನ ಪ್ರೀತಿಸ್ತಿದ್ದಾನೆ, ನಮ್ಮನ್ನ ಕ್ಷಮಿಸಿದ್ದಾನೆ ಅಂತ ನಾವು ಯಾಕೆ ಪೂರ್ತಿ ನಂಬಬೇಕು? (1 ಯೋಹಾ. 3:19) ಯೆಹೋವ ನಮ್ಮನ್ನ ಪ್ರೀತಿಸ್ತಿಲ್ಲ, ನಮ್ಮನ್ನ ಕ್ಷಮಿಸಿಲ್ಲ ಅಂತ ಸೈತಾನ ನಮ್ಮನ್ನ ನಂಬಿಸೋಕೆ ಏನು ಬೇಕಾದ್ರೂ ಮಾಡೋಕೆ ರೆಡಿ ಇದ್ದಾನೆ. ಹೇಗಾದ್ರೂ ಮಾಡಿ ನಾವು ಯೆಹೋವನ ಸೇವೆ ಮಾಡೋದನ್ನ ನಿಲ್ಲಿಸಬೇಕು ಅನ್ನೋದೇ ಅವನ ಗುರಿ. ಅವನಿಗಿರೋ ಸಮಯ ಕಡಿಮೆ ಆಗಿರೋದ್ರಿಂದ ಈ ಪ್ರಯತ್ನನ ಇನ್ನೂ ಜಾಸ್ತಿ ಮಾಡ್ತಿದ್ದಾನೆ. (ಪ್ರಕ. 12:12) ಆದ್ರೆ ಏನೇ ಮಾಡಿದ್ರೂ ಅವನು ಗೆಲ್ಲೋಕೆ ನಾವು ಬಿಡಬಾರದು!

18. ಯೆಹೋವ ದೇವರು ನಿಜವಾಗ್ಲೂ ನಿಮ್ಮನ್ನ ಪ್ರೀತಿಸ್ತಿದ್ದಾನೆ, ಕ್ಷಮಿಸಿದ್ದಾನೆ ಅಂತ ನಂಬೋಕೆ ನೀವೇನು ಮಾಡಬೇಕು?

18 ಯೆಹೋವ ನಿಜವಾಗ್ಲೂ ನಿಮ್ಮನ್ನ ಪ್ರೀತಿಸ್ತಾನೆ ಅಂತ ನಂಬೋಕೆ ಹಿಂದಿನ ಲೇಖನದಲ್ಲಿ ಕಲಿತ ಪಾಠಗಳನ್ನ ಪಾಲಿಸಿ. ಆತನು ನಿಜವಾಗ್ಲೂ ನಿಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬೋಕೆ ಈ ಲೇಖನದಲ್ಲಿ ಕಲಿತ ವಿಷಯಗಳು ನಿಮಗೆ ಸಹಾಯ ಮಾಡುತ್ತೆ. ನಾವು ಏನೆಲ್ಲಾ ಕಲಿತ್ವಿ? ಯೆಹೋವ ತನ್ನಲ್ಲಿ ಯಾವ ಗುಣಗಳಿದೆ ಅಂತ ಮೋಶೆಗೆ ಹೇಳಿದನು ಅನ್ನೋದ್ರ ಬಗ್ಗೆ ಯೋಚಿಸಿ. ಯೆಹೋವ ತಾನು ಹೇಗೆ ಕ್ಷಮಿಸ್ತೀನಿ ಅಂತ ಬೈಬಲಲ್ಲಿ ಬರೆಸಿದ್ದಾನೆ ಅನ್ನೋದ್ರ ಬಗ್ಗೆ ಧ್ಯಾನ ಮಾಡಿ. ಆತನಿಗೆ ನಿಮ್ಮಲ್ಲಿ ಪಾಪ ಮಾಡೋ ಸ್ವಭಾವ ಇದೆ ಅಂತ ಗೊತ್ತಿದೆ ಅಂತ ಅರ್ಥ ಮಾಡ್ಕೊಳ್ಳಿ. ಆತನು ನಿಮಗೆ ಕರುಣೆ ತೋರಿಸ್ತಾನೆ ಅನ್ನೋದನ್ನ ಯಾವತ್ತೂ ಮರೀಬೇಡಿ. ಯೆಹೋವ ಒಂದ್ಸಲ ಕ್ಷಮಿಸಿದ್ರೆ ಸಂಪೂರ್ಣವಾಗಿ ಕ್ಷಮಿಸ್ತಾನೆ ಅನ್ನೋದನ್ನ ನೆನಪಿಡಿ. ಇದನ್ನೆಲ್ಲ ನೀವು ತಿಳ್ಕೊಂಡ್ರೆ ಯೆಹೋವನ ಕರುಣೆ ಬಗ್ಗೆ ದಾವೀದ ಹೇಳಿದಂತೆ ನೀವೂ “ಯೆಹೋವನೇ ನೀನು ನನ್ನ ಪಾಪಗಳನ್ನ, ‘ತಪ್ಪುಗಳನ್ನ ಕ್ಷಮಿಸಿದೆ.’ ನಿಂಗೆ ತುಂಬಾ ಥಾಂಕ್ಸ್‌” ಅಂತ ಹೇಳ್ತೀರ. —ಕೀರ್ತ. 32:5.

ನೀವೇನು ಹೇಳ್ತೀರಾ?

  • ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ ಅಂತ ಒಪ್ಕೊಳ್ಳೋದು ಯಾಕೆ ಮುಖ್ಯ?

  • ಯೆಹೋವ ನಿಜವಾಗ್ಲೂ ನಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬೋಕೆ ಯಾವುದು ಸಹಾಯ ಮಾಡುತ್ತೆ?

  • ಯೆಹೋವ ನಮ್ಮನ್ನ ನಂಬ್ತಿದ್ದಾನೆ, ಕ್ಷಮಿಸಿದ್ದಾನೆ ಅಂತ ನಂಬೋದ್ರಿಂದ ಏನು ಪ್ರಯೋಜನ?

ಗೀತೆ 12 ಅತ್ಯುನ್ನತ ದೇವ - ಯೆಹೋವ!

a ಮೇ 1. 2009ರ ಕಾವಲಿನಬುರುಜುವಿನಲ್ಲಿರೋ “ದೇವರ ಸಮೀಪಕ್ಕೆ ಬನ್ನಿರಿ—ದೇವರ ಗುಣವರ್ಣನೆ” ಅನ್ನೋ ಲೇಖನ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ