ಇಂಡಿಯಾನಾಪೋಲಿಸ್‌ನಲ್ಲಿ ಅಧಿವೇಶನ, ಇಂಡಿಯಾನಾ, 1925
1925—ನೂರು ವರ್ಷಗಳ ಹಿಂದೆ
“ಕ್ರೈಸ್ತರು 1925ರ ವರ್ಷನ ತುಂಬ ನಿರೀಕ್ಷೆಯಿಂದ ಎದುರು ನೋಡ್ತಿದ್ರು” ಅಂತ ಕಾವಲಿನಬುರುಜು ಜನವರಿ 1, 1925 ಹೇಳ್ತು. ಆದ್ರೆ, ಆ ಲೇಖನ ಮುಂದುವರಿಸ್ತಾ: “ಈ ವರ್ಷದಲ್ಲಿ ಏನಾಗಬಹುದು ಅನ್ನೋದ್ರ ಬಗ್ಗೆ ಕ್ರೈಸ್ತರು ತುಂಬ ಚಿಂತಿಸ್ತಾ, ಅವರು ಏನು ಮಾಡಬೇಕು ಅಂತ ದೇವರು ಇಷ್ಟಪಡ್ತಾನೋ ಅದನ್ನ ಅವರು ಮರೆತು ಹೋಗೋ ಹಾಗೆ ಆಗಬಾರದು” ಅಂತ ಹೇಳ್ತು. ಇಷ್ಟಕ್ಕೂ ಬೈಬಲ್ ವಿದ್ಯಾರ್ಥಿಗಳು 1925ರಲ್ಲಿ ಏನಾಗುತ್ತೆ ಅಂತ ಕಾಯ್ತಿದ್ರು? ಅವರು ಅಂದ್ಕೊಂಡಿದ್ದು ಆಗದಿದ್ದಾಗ ಅವರು ಬೇಜಾರಾಗದೆ ಹೇಗೆ ದೇವರ ಕೆಲಸದಲ್ಲಿ ಬಿಜ಼ಿಯಾಗಿದ್ರು?
ಅಂದ್ಕೊಂಡ ಹಾಗೆ ನಡೀಲಿಲ್ಲ!
ಅನೇಕ ಬೈಬಲ್ ವಿದ್ಯಾರ್ಥಿಗಳಿಗೆ, 1925ರಲ್ಲಿ ಭೂಮಿ ಪರದೈಸಾಗುತ್ತೆ ಅನ್ನೋ ನಿರೀಕ್ಷೆ ಇತ್ತು. ಯಾಕೆ? ಇದ್ರ ಬಗ್ಗೆ ಕೆಲವು ವರ್ಷಗಳಾದ ಮೇಲೆ ಆಡಳಿತ ಮಂಡಲಿಯಲ್ಲಿ ಸೇವೆ ಸಲ್ಲಿಸಿದ ಸಹೋದರ ಆಲ್ಬರ್ಟ್ ಶ್ರೋಡರ್ ಹೀಗೆ ಹೇಳಿದ್ರು: “ಆಗ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರಲ್ಲಿ ಉಳಿದವರು ದೇವರ ಆಳ್ವಿಕೆಯ ಭಾಗವಾಗೋಕೆ ಸ್ವರ್ಗಕ್ಕೆ ಹೋಗ್ತಾರೆ. ಅಬ್ರಹಾಮ, ದಾವೀದ ಮತ್ತು ಬೇರೆ ನಂಬಿಗಸ್ತ ಸೇವಕರು ದೇವರ ಆಳ್ವಿಕೆಯ ಭಾಗವಾಗಿರೋ ಭೂಮಿಯ ಸರ್ಕಾರದಲ್ಲಿ ರಾಜರಾಗಿ ಆಳಲು ಮತ್ತೆ ಜೀವ ಪಡೆದು ಎದ್ದು ಬರ್ತಾರೆ ಅಂತ ಅಂದ್ಕೊಂಡಿದ್ರು.” ವರ್ಷಗಳು ಕಳೆದಂತೆ ಹಾಗೂ ಅವರು ಅಂದ್ಕೊಂಡಿದ್ದು ಆಗದೇ ಇದ್ದಾಗ, ಕೆಲವ್ರಿಗೆ ತುಂಬ ಬೇಜಾರಾಯ್ತು.—ಜ್ಞಾನೋ. 13:12.
ಅವ್ರಿಗೆ ತುಂಬ ಬೇಜಾರಾಗಿದ್ರೂ, ಹೆಚ್ಚಿನ ಬೈಬಲ್ ವಿದ್ಯಾರ್ಥಿಗಳು ಸಾರೋ ಕೆಲಸನ ಮುಂದುವರಿಸಿದ್ರು. ಈಗ ಯೆಹೋವ ದೇವ್ರ ಬಗ್ಗೆ ಸಾರೋದೇ ಅವರು ಮಾಡಬೇಕಾಗಿರೋ ಮುಖ್ಯ ಕೆಲಸ ಅಂತ ಅರ್ಥ ಮಾಡ್ಕೊಂಡ್ರು. ಉದಾಹರಣೆಗೆ, ಸತ್ಯವನ್ನ ದೂರದೂರದವರೆಗೂ ತಲುಪಿಸೋಕೆ ರೇಡಿಯೋನ ಹೇಗೆ ಬಳಸಿದ್ರು ಅಂತ ನೋಡೋಣ.
ರೇಡಿಯೋ ಸ್ಟೇಷನ್‌ಗಳನ್ನ ಹೆಚ್ಚು ಮಾಡಿದ್ರು
1924ರಲ್ಲಿ ಅನೇಕ ಜನ್ರು ನಮ್ಮ ರೇಡಿಯೋ ಸ್ಟೇಷನ್ ಡಬ್ಲ್ಯೂಬಿಬಿಆರ್ ಅನ್ನು ಕೇಳಿಸ್ಕೊಳ್ತಿದ್ರು. ಅದಕ್ಕೇ 1925ರಲ್ಲಿ ಬೈಬಲ್ ವಿದ್ಯಾರ್ಥಿಗಳು ಇಲಿನಾಯ್ಸ್‌ನ ಚಿಕಾಗೋ ಹತ್ರ ಇನ್ನೊಂದು ಉತ್ತಮವಾದ ರೇಡಿಯೋ ಸ್ಟೇಷನನ್ನ ಕಟ್ಟಿದ್ರು. ಈ ಹೊಸ ರೇಡಿಯೋ ಸ್ಟೇಷನ್ ಹೆಸರು ‘ವರ್ಡ್’ (WORD). ರೇಡಿಯೋ ಸ್ಟೇಷನ್ ಕಟ್ಟೋ ಕೆಲಸ ಮಾಡಿದ ರೇಡಿಯೋ ಇಂಜಿನಿಯರ್ ರಾಲ್ಫ್ ಲೆಫ್ಲರ್ ಹೇಳಿದ್ದು, “ಚಳಿಗಾಲದ ರಾತ್ರಿಗಳಲ್ಲಿ, ವರ್ಡ್ ದೂರ ದೂರದವರೆಗೆ ಕೇಳಿಸ್ತಿತ್ತು.” ಉದಾಹರಣೆಗೆ, 5,000ಕ್ಕಿಂತ ಹೆಚ್ಚು ಕಿಲೋಮೀಟರ್ ದೂರದಲ್ಲಿರೋ ಅಲಾಸ್ಕಾದ ಪೈಲಟ್ ಸ್ಟೇಷನ್ ನಗರದಲ್ಲಿ ವಾಸಿಸೋ ಒಂದು ಕುಟುಂಬ ಮೊದಲ ಪ್ರಸಾರಗಳಲ್ಲಿ ಒಂದಕ್ಕೆ ಟ್ಯೂನ್ ಮಾಡ್ತು. ಕಾರ್ಯಕ್ರಮ ಕೇಳಿಸ್ಕೊಂಡ ಮೇಲೆ ಆ ಕುಟುಂಬ, ಇಂಥ ಪ್ರೋತ್ಸಾಹ ಕೊಡೋ ಆಧ್ಯಾತ್ಮಿಕ ಕಾರ್ಯಕ್ರಮಕ್ಕಾಗಿ ಧನ್ಯವಾದ ಹೇಳ್ತಾ ಸ್ಟೇಷನ್‌ನಲ್ಲಿ ಕೆಲಸ ಮಾಡೋರಿಗೆ ಪತ್ರ ಬರೀತು.
ಎಡ: ಇಲಿನಾಯ್ಸ್‌ನ ಬಟಾವಿಯಾದಲ್ಲಿ ವರ್ಡ್ (WORD) ಟ್ರಾನ್ಸ್‌ಮಿಶನ್ ಟವರ್‌ಗಳು
ಬಲ: ರಾಲ್ಫ್ ಲೆಫ್ಲರ್ ರೇಡಿಯೋ ಸ್ಟೇಷನ್‌ನಲ್ಲಿ ಕೆಲಸ ಮಾಡ್ತಿರೋದು
ಈ ಸ್ಟೇಷನ್‌ನ ಅದ್ಭುತ ಕವರೇಜನ್ನ ವಿವರಿಸ್ತಾ, ಕಾವಲಿನಬುರುಜು ಡಿಸೆಂಬರ್ 1, 1925 ಹೀಗೆ ಹೇಳ್ತು: “‘ವರ್ಡ್’ 5,000 ವ್ಯಾಟ್‌ಗಳಲ್ಲಿ ಕೆಲಸ ಮಾಡೋ ಅಮೇರಿಕಾದ ಸೂಪರ್ ಸ್ಟೇಷನ್‌ಗಳಲ್ಲಿ ಒಂದಾಗಿದೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರ ತೀರಗಳು ಅಂದ್ರೆ ಅಮೇರಿಕಾದ ಪೂರ್ವ ಹಾಗೂ ಪಶ್ಚಿಮ ಕರಾವಳಿ ಪ್ರದೇಶದಲ್ಲಿರೋರು, ಕ್ಯೂಬಾದಿಂದ ಹಿಡಿದು ಅಲಾಸ್ಕಾದ ಉತ್ತರ ತುದಿಯಲ್ಲಿರೋ ಎಲ್ರೂ ಈ ಸ್ಟೇಷನ್‌ನ ಕೇಳಿಸ್ಕೊಳ್ಳೋಕೆ ಆಗ್ತಿತ್ತು. ಸತ್ಯದ ಬಗ್ಗೆ ಮುಂಚೆ ಕೇಳದೆ ಇದ್ದ ಅನೇಕ ಜನ್ರು ಈ ಸ್ಟೇಷನ್‌ನ ಕೇಳಿದ್ರಿಂದ ಸತ್ಯನ ತಿಳಿಯೋಕೆ ಈಗ ಇಷ್ಟ ಪಡ್ತಿದ್ದಾರೆ.”
ಜಾರ್ಜ್ ನೈಶ್
ಇದೇ ಸಮಯದಲ್ಲಿ, ಬೈಬಲ್ ವಿದ್ಯಾರ್ಥಿಗಳು ಕೆನಡಾದಲ್ಲಿ ಸಿಹಿಸುದ್ದಿ ಸಾರಲು ರೇಡಿಯೋ ಬಳಕೆಯನ್ನ ವಿಸ್ತರಿಸೋಕೆ ಪ್ರಯತ್ನಗಳನ್ನ ಮಾಡ್ತಿದ್ರು. 1924ರಲ್ಲಿ ರೇಡಿಯೋ ಸ್ಟೇಷನ್ CHUC ಅನ್ನು ಕೆನಡದ ಸಾಸ್ಕಾಚವಾನ್ ಪ್ರಾಂತ್ಯದ ಸಾಸ್ಕಾಟೂನ್ ನಗರದಲ್ಲಿ ಕಟ್ಟಿದ್ರು. ಇದು ಕೆನಡದ ಮೊದಲ ಧಾರ್ಮಿಕ ರೇಡಿಯೋ ಸ್ಟೇಷನ್ ಆಗಿದೆ. 1925ರಷ್ಟಕ್ಕೆ ಈ ಚಿಕ್ಕ ಸ್ಟೇಷನ್‌ನ ಸ್ಥಳಾಂತರಿಸೋ ಅಗತ್ಯ ಬಂತು. ಅದಕ್ಕೆ ವಾಚ್ ಟವರ್ ಸೊಸೈಟಿಯು ಸ್ಟೇಷನ್‌ನ ಅಧಿಕಾರ ಪಡ್ಕೊಂಡು, ಬ್ರಾಡ್‌ಕಾಸ್ಟಿಂಗ್ ಸ್ಟುಡಿಯೊಗಳನ್ನ ಸಾಸ್ಕಾಟೂನ್‌ನ ರೀಜೆಂಟ್ ಬಿಲ್ಡಿಂಗ್‌ಗೆ ಸ್ಥಳಾಂತರಿಸ್ತು. ಇದು ಒಂದು ಹಳೆಯ ರಂಗಮಂದಿರ ಆಗಿತ್ತು. ಬ್ರಾಡ್‌ಕಾಸ್ಟಿಂಗ್ ಸ್ಟುಡಿಯೊ ಆಗಿ ಮಾಡಲು ಅದನ್ನ ಖರೀದಿಸಿ ನವೀಕರಿಸಲಾಗಿತ್ತು.
ಈ ಸ್ಟೇಷನ್‌ನಿಂದಾಗಿ ಸಾಸ್ಕಾಚವಾನ್‌ನ ಚಿಕ್ಕಚಿಕ್ಕ ಹಳ್ಳಿಗಳಲ್ಲಿ ವಾಸಿಸೋ ಅನೇಕ ಜನ್ರು ಮೊದಲ ಸಲ ಸಿಹಿಸುದ್ದಿ ಕೇಳಿಸ್ಕೊಂಡ್ರು. ಉದಾಹರಣೆಗೆ, ತುಂಬ ದೂರದಲ್ಲಿರೋ ಪಟ್ಟಣದಲ್ಲಿ ರೇಡಿಯೋ ಪ್ರಸಾರವನ್ನ ಕೇಳಿಸ್ಕೊಂಡ ಮೇಲೆ ಶ್ರೀಮತಿ ಗ್ರಹಾಂ ಬೈಬಲ್ ಸಾಹಿತ್ಯನ ವಿನಂತಿಸಿ ಪತ್ರ ಬರೆದ್ರು. ಅದನ್ನ ಸಹೋದರ ಜಾರ್ಜ್ ನೈಶ್ ನೆನಪಿಸ್ಕೊಂಡು ಹೀಗೆ ಹೇಳ್ತಾರೆ, “‘ನಮಗೆ ಕಲಿಸಿ!’ ಅನ್ನೋ ಆಕೆಯ ಕೂಗು ಎಷ್ಟು ಜೋರಾಗಿತ್ತು ಮತ್ತು ತುರ್ತಿನದ್ದಾಗಿ ಇತ್ತು ಅಂದ್ರೆ ನಾವು ಆಕೆಗೆ ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್‌ನ ಎಲ್ಲ ಪತ್ರಿಕೆಗಳನ್ನ ಕಳಿಸಿದ್ವಿ. ಸ್ವಲ್ಪ ಸಮಯದಲ್ಲೇ, ಶ್ರೀಮತಿ ಗ್ರಹಾಂ ಅವರು ದೇವರ ಆಳ್ವಿಕೆಯ ಸಂದೇಶವನ್ನ ಬೇರೆಯವ್ರಿಗೂ ಹೇಳೋಕೆ ಶುರು ಮಾಡಿದ್ರು.”
ಒಂದು ಮುಖ್ಯ ಸತ್ಯ ಕಲಿತ್ವಿ
ಮಾರ್ಚ್ 1, 1925ರ ಕಾವಲಿನಬುರುಜು ಪತ್ರಿಕೆಯಲ್ಲಿ “ರಾಷ್ಟ್ರದ ಜನನ” ಅನ್ನೋ ಪ್ರಾಮುಖ್ಯವಾದ ಲೇಖನ ಬಂತು. ಈ ಲೇಖನ ಯಾಕೆ ಮುಖ್ಯವಾಗಿತ್ತು? ಸ್ವರ್ಗದಲ್ಲಿರೋ ಕಣ್ಣಿಗೆ ಕಾಣದ ಕೆಟ್ಟ ದೇವದೂತರು ಹಾಗೂ ಭೂಮಿ ಮೇಲಿರೋ ಸುಳ್ಳು ಧರ್ಮಗಳು, ವಾಣಿಜ್ಯ ವ್ಯವಸ್ಥೆ ಮತ್ತು ರಾಜಕೀಯ ವಿಷ್ಯಗಳನ್ನೆಲ್ಲ ಸೇರಿಸ್ಕೊಂಡು ಸೈತಾನ ಒಂದು ಸಂಘಟನೆ ಕಟ್ಕೊಂಡಿದ್ದಾನೆ ಅಂತ ಬೈಬಲ್ ವಿದ್ಯಾರ್ಥಿಗಳು ಅಲ್ಲಿವರೆಗೂ ತಿಳ್ಕೊಂಡಿದ್ರು. ಆದ್ರೆ, ಆಗ ಈ ಲೇಖನದ ಮೂಲಕ, ಯೆಹೋವ ದೇವ್ರಿಗೆ ಸಹ ಒಂದು ಸಂಘಟನೆ ಇದೆ ಅಂತ “ನಂಬಿಗಸ್ತ, ವಿವೇಕಿ ಆದ ಆಳು” ಹೇಳಿತು. ಇದು ಸೈತಾನನ ಸಂಘಟನೆಗಿಂತ ಪೂರ್ತಿಯಾಗಿ ಭಿನ್ನವಾಗಿದ್ದು, ಯೆಹೋವ ದೇವರ ಜೊತೆ ಕೆಲಸ ಮಾಡ್ತಾ ಸೈತಾನನನ್ನ ವಿರೋಧಿಸುತ್ತೆ ಅಂತ ಸಹೋದರ ಸಹೋದರಿಯರಿಗೆ ಅರ್ಥಮಾಡ್ಕೊಳ್ಳೋಕೆ ಸಹಾಯ ಮಾಡ್ತು. (ಮತ್ತಾ. 24:45) ಇದ್ರ ಜೊತೆಗೆ, 1914ರಲ್ಲಿ ದೇವರ ಆಳ್ವಿಕೆ ಆರಂಭ ಆಯ್ತು. ಆ ವರ್ಷದಲ್ಲಿ “ಸ್ವರ್ಗದಲ್ಲಿ ಯುದ್ಧ ಆಯ್ತು” ಇದ್ರಿಂದಾಗಿ ಸೈತಾನ ಮತ್ತು ಕೆಟ್ಟ ದೇವದೂತ್ರನ್ನ ಸ್ವರ್ಗದಿಂದ ಹೊರಹಾಕಲಾಯ್ತು ಮತ್ತು ಸ್ವರ್ಗಕ್ಕೆ ವಾಪಸ್ ಹೋಗದಂತೆ ಭೂಮಿಗೆ ತಳ್ಳಲಾಯ್ತು ಅಂತನೂ ಆಳು ವಿವರಿಸಿತು.—ಪ್ರಕ. 12:7-9.
ಈ ಹೊಸ ತಿಳುವಳಿಕೆನ ಒಪ್ಕೊಳ್ಳೋಕೆ ಕೆಲವ್ರಿಗೆ ಕಷ್ಟ ಆಯ್ತು. ಇದ್ರ ಬಗ್ಗೆ ಆ ಲೇಖನದಲ್ಲಿ ಹೀಗಿತ್ತು: “ಈ ಕಾವಲಿನಬುರುಜು ಓದುವವರು ಇದ್ರಲ್ಲಿ ಬಂದಿರೋ ಹೊಸ ತಿಳುವಳಿಕೆನ ಒಪ್ಕೊಳ್ಳೋಕೆ ಕಷ್ಟ ಆಗೋದಾದ್ರೆ, ತಾಳ್ಮೆಯಿಂದ ಯೆಹೋವನ ಮೇಲೆ ನಂಬಿಕೆ ಇಟ್ಟು ಕಾಯಿರಿ ಹಾಗೂ ನಿಯತ್ತಾಗಿ ಇದ್ದು ಆತನ ಸೇವೆನ ಮುಂದುವರಿಸಿ.”
ಬ್ರಿಟನ್‌ನಲ್ಲಿ ಕಾಲ್ಪೋರ್ಟರ್ (ಈಗ ಪಯನೀಯರ್) ಆಗಿ ಸೇವೆ ಮಾಡ್ತಿದ್ದ ಟಾಮ್ ಐರ್, ಈ ಲೇಖನದ ಬಗ್ಗೆ ಹೆಚ್ಚಿನ ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಅನಿಸ್ತು ಅಂತ ಹೇಳ್ತಾ: “ಪ್ರಕಟನೆ 12ರ ಈ ವಿವರಣೆಯನ್ನ ಕೇಳಿದಾಗ ಸಹೋದರರಿಗೆ ಖುಷಿಯಾಯ್ತು. ದೇವರ ಆಳ್ವಿಕೆ ಸ್ವರ್ಗದಲ್ಲಿ ಆರಂಭವಾಗಿದೆ ಅಂತ ನಾವು ಅರ್ಥ ಮಾಡ್ಕೊಂಡಾಗ, ಈ ಸಿಹಿಸುದ್ದಿಯನ್ನ ಬೇರೆಯವ್ರ ಹತ್ರ ಹಂಚ್ಕೊಳ್ಳೋಕೆ ನಮ್ಮಲ್ಲಿ ಹುರುಪು ಹೆಚ್ಚಾಯ್ತು. ಸಿಹಿಸುದ್ದಿ ಸಾರೋದನ್ನ ಇನ್ನಷ್ಟು ಜಾಸ್ತಿ ಮಾಡಿದ್ವಿ, ಯೆಹೋವ ದೇವರು ತನ್ನ ಜನ್ರನ್ನ ಎಷ್ಟು ಚೆನ್ನಾಗಿ ನಡೆಸ್ತಾನೆ ಅಂತ ತಿಳ್ಕೊಳೋಕೆ ಇದು ನಮಗೆ ಸಹಾಯ ಮಾಡ್ತು” ಅಂದ್ರು.
ಯೆಹೋವನ ಬಗ್ಗೆ ಸಾಕ್ಷಿ ಹೇಳಿದ್ವಿ
ಇವತ್ತು, ಯೆಹೋವನ ಸಾಕ್ಷಿಗಳು ಯೆಶಾಯ 43:10ರ ಮಾತುಗಳನ್ನ ಚೆನ್ನಾಗಿ ಅರ್ಥಮಾಡ್ಕೊಂಡಿದ್ದಾರೆ: “ಯೆಹೋವ ಹೀಗೆ ಹೇಳ್ತಿದ್ದಾನೆ, “ನೀವು ನನ್ನ ಸಾಕ್ಷಿಗಳು. ಹೌದು, ನಾನು ಆರಿಸ್ಕೊಂಡ ನನ್ನ ಸೇವಕ.” ಆದ್ರೆ 1925ಕ್ಕೂ ಮುಂಚೆ ನಮ್ಮ ಪುಸ್ತಕ ಪತ್ರಿಕೆಗಳಲ್ಲಿ ಈ ವಚನವನ್ನ ಅಷ್ಟು ಹೆಚ್ಚಾಗಿ ಬಳಸ್ತಿರಲಿಲ್ಲ. ಆದ್ರೆ ಅದು ಬದಲಾಗೋ ಸಮಯ ಬಂದಿತ್ತು. 1925ರ ಈ ಸಮಯದಲ್ಲಿ, ಕಾವಲಿನಬುರುಜು ಪತ್ರಿಕೆಯ 11 ಸಂಚಿಕೆಗಳಲ್ಲಿ ಯೆಶಾಯ 43:10, 12ರ ವಿಷ್ಯನ ಚರ್ಚಿಸಲಾಯ್ತು!
1925ರ ಆಗಸ್ಟ್ ತಿಂಗಳ ಕೊನೇಲಿ, ಬೈಬಲ್ ವಿದ್ಯಾರ್ಥಿಗಳು ಇಂಡಿಯಾನಾದ, ಇಂಡಿಯಾನಾಪೊಲಿಸ್‌ನಲ್ಲಿ ಒಂದು ಅಧಿವೇಶನಕ್ಕೆ ಸೇರಿ ಬಂದ್ರು. ಆ ಅಧಿವೇಶನದ ಕಾರ್ಯಕ್ರಮದ ಮುಖ ಪುಟದಲ್ಲಿ ಜೋಸೆಫ್ ರಧರ್‌ಫರ್ಡ್ ಎಲ್ರನ್ನೂ ಸ್ವಾಗತಿಸೋಕೆ ಹೇಳಿದ ಮಾತು ಪ್ರಿಂಟ್ ಆಗಿತ್ತು. ಅದು ಹೀಗಿತ್ತು: “ಸಾರೋ ಕೆಲಸನ ಇನ್ನಷ್ಟು ಹುರುಪಿಂದ ಮಾಡೋಕೆ, ದೇವ್ರಿಂದ ಶಕ್ತಿಯನ್ನ ಪಡೆಯೋಕೆ ಹಾಗೂ ಆತನಿಗೆ ಸಾಕ್ಷಿಗಳಾಗಿರೋ ನಮ್ಮ ಆಸೆನ ಇನ್ನೂ ಬಲವಾಗಿಸ್ಕೊಳ್ಳೋಕೆ ನಾವು ಈ ಅಧಿವೇಶನಕ್ಕೆ ಬಂದಿದ್ದೀವಿ.” ಎಂಟು ದಿನಗಳ ಅಧಿವೇಶನದ ಪೂರ್ತಿ, ಹಾಜರಾದ ಎಲ್ರಿಗೂ ಯೆಹೋವನ ಬಗ್ಗೆ ಸಾಕ್ಷಿ ಹೇಳೋಕೆ ಸಿಗೋ ಪ್ರತಿಯೊಂದು ಅವಕಾಶನ ಬಳಸಬೇಕು ಅಂತ ಉತ್ತೇಜಿಸಲಾಯ್ತು.
ಆಗಸ್ಟ್ 29, ಶನಿವಾರದಂದು, ಸಹೋದರ ರಧರ್‌ಫರ್ಡ್, ಸಾರೋ ಕೆಲಸನ ಪ್ರೋತ್ಸಾಹಿಸೋಕೆ “ಅ ಕಾಲ್ ಟು ಆ್ಯಕ್ಷನ್” ಅನ್ನೋ ವಿಷ್ಯದ ಬಗ್ಗೆ ಭಾಷಣ ಕೊಟ್ರು. ಅವ್ರ ಭಾಷಣದಲ್ಲಿ, ಸಾಕ್ಷಿ ನೀಡೋದ್ರ ಪ್ರಾಮುಖ್ಯತೆ ಒತ್ತಿ ಹೇಳಿದ್ರು. “ಯೆಹೋವ ಹೀಗೆ ಹೇಳ್ತಿದ್ದಾನೆ . . . : “ನೀವು ನನ್ನ ಸಾಕ್ಷಿಗಳು ಮತ್ತು ನಾನು ನಿಮ್ಮ ದೇವರು.” ಇದನ್ನ ಹೇಳಿದ ಮೇಲೆ ಅವರು ಜನ್ರನ್ನ ಬಲವಾಗಿ ಉತ್ತೇಜಿಸ್ತಾ ಈ ಮಾತನ್ನ ಹೇಳಿದ್ರು: “ಜನಾಂಗಗಳಿಗಾಗಿ ಧ್ವಜ ಎತ್ತಿ, ಭೂಮಿ ಮೇಲೆ ಯೆಹೋವನಿಗೆ ಸಾಕ್ಷಿಯಾಗೋಕೆ ಸಾಧ್ಯ ಇರೋ ಏಕೈಕ ಜನರು ಆತನ ಪವಿತ್ರ ಶಕ್ತಿಯಿಂದ ಮಾರ್ಗದರ್ಶಿಸಲ್ಪಡೋರೇ ಆಗಿದ್ದಾರೆ, ಯಾಕಂದ್ರೆ ಅವರು ಆತನ ಜನರಾಗಿದ್ದಾರೆ.”—ಯೆಶಾ. 43:12; 62:10.
ಮೆಸೆಜ್ ಆಫ್ ಹೋಪ್ (ನಿರೀಕ್ಷೆಯ ಸಂದೇಶ)
ಸಹೋದರ ರಧರ್‌ಫರ್ಡ್ ಅವ್ರ ಭಾಷಣದ ನಂತರ, ಅವರು “ಮೆಸೆಜ್ ಆಫ್ ಹೋಪ್” (ನಿರೀಕ್ಷೆಯ ಸಂದೇಶ) ಅನ್ನೋ ಡಾಕ್ಯುಮೆಂಟ್ ಓದಿದ್ರು, ಅಧಿವೇಶನಕ್ಕೆ ಹಾಜರಾದ ಎಲ್ರೂ ಈ ಸಂದೇಶನ ಒಪ್ಕೊಂಡ್ರು. ದೇವರ ಆಳ್ವಿಕೆ ಮಾತ್ರ “ಶಾಂತಿ, ಸಮೃದ್ಧಿ, ಆರೋಗ್ಯ, ಸಂತೃಪ್ತಿಯ ಜೀವನ, ಸ್ವಾತಂತ್ರ್ಯ ಮತ್ತು ಶಾಶ್ವತ ಸಂತೋಷದ ಆಶೀರ್ವಾದಗಳನ್ನ ಪಡೆಯೋಕೆ ಇರೋ ಏಕೈಕ ನಿರೀಕ್ಷೆಯಾಗಿದೆ ಅನ್ನೋದೇ ಇದ್ರ ವಿಷ್ಯ ಆಗಿತ್ತು. ಈ ನಿರ್ಣಯನ ಹಾಜರಾದ ಎಲ್ರೂ ಒಪ್ಪಿದ್ರಿಂದ ನಂತರ ಹಲವಾರು ಭಾಷೆಗಳಿಗೆ ಇದನ್ನ ಭಾಷಾಂತರ ಮಾಡಲಾಯ್ತು ಮತ್ತು ಒಂದು ಕರಪತ್ರವಾಗಿ ಮುದ್ರಿಸಲಾಯ್ತು. ಕೊನೆಗೆ ಸುಮಾರು 4 ಕೋಟಿ ಪ್ರತಿಗಳನ್ನ ವಿತರಿಸಲಾಯ್ತು.
ಬೈಬಲ್ ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳು ಅನ್ನೋ ಹೆಸ್ರನ್ನ ಇನ್ನೂ ಅನೇಕ ವರ್ಷಗಳವರೆಗೆ ಬಳಸಲಿಲ್ಲ. ಆದ್ರೂ, ಆತನ ಸಾಕ್ಷಿಗಳಾಗಿ ಜನ್ರಿಗೆ ಸಾರೋ ತಮ್ಮ ಜವಾಬ್ದಾರಿಯು ಎಷ್ಟು ಮುಖ್ಯವಾಗಿದೆ ಅಂತ ಅವರು ಅರ್ಥಮಾಡ್ಕೊಳ್ತಾ ಇದ್ರು.
ಆಸಕ್ತಿ ತೋರಿಸಿದವ್ರನ್ನ ಮತ್ತೆ ಭೇಟಿ ಮಾಡಿದ್ರು
ಭೂಮಿಯ ಎಲ್ಲ ಕಡೆ ಬೈಬಲ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ, ಸಿಹಿಸುದ್ದಿ ಕೇಳಿಸ್ಕೊಂಡು ಆಸಕ್ತಿ ತೋರಿಸಿದವ್ರನ್ನ ಮತ್ತೆ ಭೇಟಿ ಮಾಡೋಕೆ ಪ್ರೋತ್ಸಾಹಿಸಲಾಯ್ತು. “ಮೆಸೆಜ್ ಆಫ್ ಹೋಪ್ “ ಅನ್ನೋ ಕರಪತ್ರನ ವಿತರಿಸೋ ಅಭಿಯಾನದ ನಂತರ, ”ಹಿಂತಿರುಗಿ ಹೋಗಿ ಮೆಸೆಜ್ ಆಫ್ ಹೋಪ್ ಕರಪತ್ರನ ಕೊಟ್ಟಿರೋ ಮನೆಗಳಿಗೆ ಮತ್ತೆ ಭೇಟಿ ಮಾಡೋಕೆ ಏರ್ಪಾಡು ಮಾಡಿ” ಅನ್ನೋ ಸೂಚನೆನ ಆ ಬುಲೆಟಿನ್ a ನೀಡಿತು.
ಜನವರಿ 1925ರ ಆ ಬುಲೆಟಿನ್‌ನಲ್ಲಿ ಟೆಕ್ಸಸ್‌ನ ಪ್ಲಾನೋ ನಗರದಲ್ಲಿರೋ ಒಬ್ಬ ಬೈಬಲ್ ವಿದ್ಯಾರ್ಥಿಯಿಂದ ಬಂದ ವರದಿ ಹೀಗಿತ್ತು: “ಆಶ್ಚರ್ಯ ಆಗೋ ವಿಷ್ಯ ಏನಂದ್ರೆ, ನಾವು ಮೊದಲು ಸಾರಿದ ಕ್ಷೇತ್ರಗಳಿಗೆ ಮತ್ತೆ ಹೋದಾಗ, ಹೊಸ ಕ್ಷೇತ್ರಗಳಲ್ಲಿ ಸಾರುವಾಗ ಸಿಗೋ ಪ್ರತಿಕ್ರಿಯೆಗಿಂತ ಒಳ್ಳೆ ಪ್ರತಿಕ್ರಿಯೆ ಸಿಕ್ತು. ನಮ್ಮ ಟೆರಿಟೊರಿಯಲ್ಲಿರೋ ಒಂದು ಚಿಕ್ಕ ಪಟ್ಟಣದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಐದು ಬಾರಿ ಸಿಹಿಸುದ್ದಿ ಸಾರಲಾಗಿದೆ. ಆದ್ರೆ ಇತ್ತೀಚೆಗೆ, ಸಹೋದರಿ ಹೆಂಡ್ರಿಕ್ಸ್ ಮತ್ತು ನನ್ನ ತಾಯಿ ಅಲ್ಲಿಗೆ ಮತ್ತೆ ಸಾರಲು ಹೋದ್ರು ಮತ್ತು ಮುಂಚೆಗಿಂತ ಹೆಚ್ಚು ಪುಸ್ತಕಗಳನ್ನ ಕೊಟ್ರು.
ಪನಾಮ ದೇಶದಲ್ಲಿ ಒಬ್ಬ ಕಾಲ್ಪೋರ್ಟರ್ (ಈಗ ಪಯನೀಯರ್) ಹೇಳಿದ್ದು: “ಮೊದಲು ನಾನು ಹೇಳೋದನ್ನ ಕೇಳಲು ನಿರಾಕರಿಸಿ ನನ್ನ ವಾಪಸ್ ಕಳಿಸಿದ ಅನೇಕರು, ನಾನು ಎರಡನೇ ಅಥವಾ ಮೂರನೇ ಬಾರಿ ಭೇಟಿ ಮಾಡಿದಾಗ ನನ್ನ ಜೊತೆ ಚೆನ್ನಾಗಿ ಮಾತಾಡಿದ್ರು. ಕಳೆದ ವರ್ಷ ನಾನು ಮುಂಚೆ ಭೇಟಿ ಮಾಡಿದವ್ರನ್ನ ಮತ್ತೆ ಭೇಟಿ ಮಾಡೋ ಮೂಲಕ ನನ್ನ ಹೆಚ್ಚಿನ ಸಮಯನ ಸಾರೋದ್ರಲ್ಲಿ ಕಳೆದಿದ್ದೇನೆ. ಅವ್ರಲ್ಲಿ ಕೆಲವರ ಜೊತೆ ನನಗೆ ಅನೇಕ ಒಳ್ಳೆ ಅನುಭವಗಳು ಸಿಕ್ತು, ಇದು ತುಂಬ ಖುಷಿ ಕೊಡ್ತಿದೆ.”
ಭವಿಷ್ಯದ ಕಡೆಗೆ ನೋಡೋಣ
1925ರ ಕೊನೇಲಿ ಸಹೋದರ ರಧರ್‌ಫರ್ಡ್ ಎಲ್ಲಾ ಕಾಲ್ಪೋರ್ಟರ್‌ಗಳಿಗೆ (ಪಯನೀಯರ್) ಬರೆದ ವಾರ್ಷಿಕ ಪತ್ರದಲ್ಲಿ, ಆ ವರ್ಷ ಸಾರೋ ಕೆಲಸದಲ್ಲಿ ಏನು ಸಾಧಿಸಲಾಯ್ತು ಮತ್ತು ಅವರು ಮುಂದೆ ಏನು ಮಾಡಬೇಕಂತ ವಿವರಿಸಿದ್ರು. ಅವರು ಹೇಳಿದ್ದು: ”ತುಂಬ ಬೇಜಾರಾಗಿದ್ದ ಅನೇಕರಿಗೆ ಕಳೆದ ವರ್ಷದಲ್ಲಿ ಸಾಂತ್ವನ ಕೊಡೋ ಸುಯೋಗ ನಮಗೆ ಸಿಕ್ತು. ಈ ಕೆಲಸವು ನಿಮ್ಮ ಹೃದಯಕ್ಕೆ ಖುಷಿ ಕೊಟ್ಟಿದೆ. ಮುಂದಿನ ವರ್ಷ ಅಂದ್ರೆ 1926ರಲ್ಲಿ ದೇವರು ಮತ್ತು ಆತನ ಆಳ್ವಿಕೆಗೆ ಸಾಕ್ಷಿಗಳಾಗಲು ಮತ್ತು ನಿಜವಾಗಿಯೂ ಆತನ ಆರಾಧಕರು ಯಾರೆಂದು ತೋರಿಸಲು ನಿಮಗೆ ಅನೇಕ ಅವಕಾಶಗಳಿವೆ. . . ಒಟ್ಟಾಗಿ ನಾವು ನಮ್ಮ ಧ್ವನಿ ಎತ್ತಿ ಸಾರೋದನ್ನ ಮುಂದುವರಿಸೋಣ. ನಮ್ಮ ದೇವರು ಮತ್ತು ನಮ್ಮ ರಾಜನಿಗೆ ಸ್ತುತಿ ಹಾಡೋಣ.”
1925ರ ಕೊನೆಯಲ್ಲಿ, ಬ್ರೂಕ್ಲಿನ್‌ನಲ್ಲಿರೋ ಬೆತೆಲ್ ಅನ್ನು ವಿಸ್ತರಿಸಲು ಸಹೋದರರು ಪ್ಲಾನ್ ಮಾಡ್ತಿದ್ರು. 1926ರಲ್ಲಿ ನಮ್ಮ ಸಂಘಟನೆ ಅಲ್ಲಿವರೆಗೆ ಮಾಡದ ಅತಿದೊಡ್ಡ ನಿರ್ಮಾಣ ಯೋಜನೆಯನ್ನ ಆರಂಭಿಸಲಿದ್ರು.
ಆಡಮ್ಸ್ ಸ್ಟ್ರೀಟ್‌ನಲ್ಲಿ ನಿರ್ಮಾಣ ಕೆಲಸ, ಬ್ರೂಕ್ಲಿನ್, ನ್ಯೂಯಾರ್ಕ್, 1926
a ಈಗ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ.