ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ನವೆಂಬರ್‌ ಪು. 2-7
  • ವಯಸ್ಸಾದಾಗ್ಲೂ ಖುಷಿ ಕಾಪಾಡ್ಕೊಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಯಸ್ಸಾದಾಗ್ಲೂ ಖುಷಿ ಕಾಪಾಡ್ಕೊಳಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಖುಷಿಯಾಗಿರೋಕೆ ಯಾಕೆ ಕಷ್ಟ ಆಗುತ್ತೆ?
  • ಖುಷಿಯಾಗಿರೋಕೆ ಏನು ಮಾಡಬೇಕು?
  • ಬೇರೆಯವರು ಹೇಗೆ ಸಹಾಯ ಮಾಡಬಹುದು
  • ವಯಸ್ಸಾದವರು ದೇವರು ಕೊಟ್ಟ ವರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಯೆಹೋವನು ತನ್ನ ವೃದ್ಧ ಸೇವಕರನ್ನು ಕೋಮಲವಾಗಿ ಪರಾಮರಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ನವೆಂಬರ್‌ ಪು. 2-7

ಅಧ್ಯಯನ ಲೇಖನ 44

ಗೀತೆ 138 ಸುಂದರ ಕಿರೀಟ - ಬೆಳ್ಳಿ ಕೂದಲು

ವಯಸ್ಸಾದಾಗ್ಲೂ ಖುಷಿ ಕಾಪಾಡ್ಕೊಳಿ

“ ಅವರು ಮುದುಕರಾದ್ರೂ ಫಲ ಕೊಡ್ತಾ ಇರ್ತಾರೆ.”—ಕೀರ್ತ. 92:14.

ಈ ಲೇಖನದಲ್ಲಿ ಏನಿದೆ?

ವಯಸ್ಸಾದಾಗ್ಲೂ ಖುಷಿಯಾಗಿರೋದು ಯಾಕೆ ಮುಖ್ಯ, ಹೀಗೆ ಖುಷಿಯಾಗಿರೋಕೆ ಏನು ಮಾಡಬೇಕು ಅಂತ ನೋಡೋಣ.

1-2. ನಿಯತ್ತಾಗಿರೋ ವಯಸ್ಸಾದವ್ರನ್ನ ಯೆಹೋವ ಹೇಗೆ ನೋಡ್ತಾನೆ? (ಕೀರ್ತನೆ 92:12-14; ಚಿತ್ರ ನೋಡಿ.)

ವಯಸ್ಸಾಗೋದ್ರ ಬಗ್ಗೆ ಈ ಲೋಕದಲ್ಲಿ ಒಂದೊಂದು ಕಡೆ ಒಂದೊಂದು ಅಭಿಪ್ರಾಯ ಇದೆ. ಕೆಲವು ಕಡೆ ವಯಸ್ಸಾದ್ರೆ ಜನ ತುಂಬ ಗೌರವ, ಮರ್ಯಾದೆ ಸಿಗುತ್ತೆ ಅಂದ್ಕೊತಾರೆ. ಇನ್ನು ಕೆಲವು ಕಡೆ ಆ ತರ ಅಂದ್ಕೊಳ್ಳಲ್ಲ. ವಯಸ್ಸಾಗೋದ್ರ ಬಗ್ಗೆ ನಿಮಗೆ ಏನನಿಸುತ್ತೆ? ನಿಮಗೆ ಮೊದಮೊದ್ಲು ಬಿಳಿ ಕೂದಲು ಬಂದಿದ್ದು ನೆನಪಿದ್ಯಾ? ಯಾರಿಗೂ ಕಾಣದಂತೆ ಅದನ್ನ ನೀವು ಕಿತ್ತಾಕಿರಬಹುದು. ಆದ್ರೆ ಬಿಳಿ ಕೂದಲು ಕಿತ್ತ ತಕ್ಷಣ ವಯಸ್ಸಾಗೋದನ್ನ ನಾವು ನಿಲ್ಸೋಕೆ ಆಗಲ್ಲ ಅಂತ ಒಪ್ಕೊಳ್ತೀರ ಅಲ್ವಾ? ವಯಸ್ಸಾಗೋದೂ ಸಮಯದ ತರನೇ ಯಾರೂ ಅದನ್ನ ತಡೆದು ನಿಲ್ಲಿಸೋಕೆ ಆಗಲ್ಲ.

2 ಆದ್ರೆ ಯೆಹೋವ ವಯಸ್ಸಾದವ್ರಿಗೆ ತುಂಬ ಬೆಲೆ ಕೊಡ್ತಾನೆ! (ಜ್ಞಾನೋ. 16:31) ಅದಕ್ಕೆ ಬೈಬಲ್‌ ಅವ್ರನ್ನ ‘ಫಲ ಕೊಡೋ ಮರಕ್ಕೆ’ ಹೋಲಿಸುತ್ತೆ. (ಕೀರ್ತನೆ 92:12-14 ಓದಿ.) ಇದ್ರರ್ಥ ಏನು? ತುಂಬ ವರ್ಷದಿಂದ ಇರೋ ಮರದಲ್ಲಿ ತುಂಬ ಎಲೆಗಳಿರುತ್ತೆ, ತುಂಬ ಹೂಗಳಿರುತ್ತೆ ಮತ್ತು ಅದು ನೋಡೋಕೆ ತುಂಬ ಸುಂದರವಾಗಿರುತ್ತೆ. ಜಪಾನಿನಲ್ಲಿ ‘ಫ್ಲವರಿಂಗ್‌ ಚೆರಿ’ ಅನ್ನೋ ಮರಗಳಿವೆ. ಅವು ನೋಡೋಕೆ ತುಂಬ ಸುಂದರವಾಗಿವೆ. ಕಾರಣ ಅವು ಸಾವಿರಾರು ವರ್ಷದಿಂದ ಬೆಳೆದಿದೆ. ಈ ತರ ಚೆನ್ನಾಗಿ ಬೆಳೆದಿರೋ ಹಳೆಯ ಮರಗಳ ತರಾನೇ ತುಂಬ ವರ್ಷದಿಂದ ನಿಯತ್ತಾಗಿ ಸೇವೆ ಮಾಡ್ತಿರೋ ವೃದ್ಧರು ಯೆಹೋವನ ಕಣ್ಣಲ್ಲಿ ಸುಂದರವಾಗಿದ್ದಾರೆ. ಇವರು ಹಣ್ಣಣ್ಣು ಮುದುಕರಾಗಿದ್ರೂ ‘ಇವ್ರಿಂದ ಏನೂ ಪ್ರಯೋಜ್ನ ಇಲ್ಲ’ ಅಂತ ಯೆಹೋವ ಯಾವತ್ತೂ ಅಂದ್ಕೊಳ್ಳಲ್ಲ. ಬದ್ಲಿಗೆ ಅವ್ರಲ್ಲಿರೋ ಒಳ್ಳೆ ಗುಣಗಳನ್ನ ಗಮನಿಸ್ತಾನೆ. ಅವರು ತೋರಿಸೋ ತಾಳ್ಮೆ, ನಿಷ್ಠೆನ ಮೆಚ್ಕೊತಾನೆ. ಅವರು ಇಷ್ಟು ವರ್ಷ ನಿಯತ್ತಿಂದ ಸೇವೆ ಮಾಡಿರೋದನ್ನ ನೋಡಿ ಖುಷಿ ಪಡ್ತಾನೆ.

ವಯಸ್ಸಾಗಿರೋ ದಂಪತಿ ಹೊರಗೆ ಬೆಂಚ್‌ ಮೇಲೆ ಕೂತಿದ್ದಾರೆ, ಅವ್ರ ಸುತ್ತಲೂ ಹೂ ಬಿಟ್ಟಿರೋ ಮರಗಳಿವೆ.

ಸುಮಾರು ವರ್ಷಗಳಿಂದ ಬೆಳೆದಿರೋ ಮರಗಳು ನೋಡೋಕೆ ಸುಂದರವಾಗಿದ್ದು ಹಣ್ಣುಹಂಪಲು ಕೊಡೋ ತರಾನೇ ವೃದ್ಧರು ನಮಗೆ ಚೈತನ್ಯ ಮತ್ತು ಪ್ರೋತ್ಸಾಹ ಕೊಡ್ತಾರೆ (ಪ್ಯಾರ 2 ನೋಡಿ)


3. ತನ್ನ ಇಷ್ಟನ ನೆರವೇರಿಸೋಕೆ ಯೆಹೋವ ವಯಸ್ಸಾದವ್ರನ್ನ ಹೇಗೆ ಬಳಸ್ಕೊಂಡಿದ್ದಾನೆ?

3 ವಯಸ್ಸಾದ ತಕ್ಷಣ ಯೆಹೋವ ಯಾರನ್ನೂ ಪಕ್ಕಕ್ಕಿಡಲ್ಲ.a ಅವ್ರನ್ನ ಬಳಸ್ಕೊಂಡು ತನ್ನ ಇಷ್ಟನ ನೆರವೇರಿಸ್ತಾನೆ. ಉದಾಹರಣೆಗೆ, ಸಾರಳಿಗೆ ತುಂಬ ವಯಸ್ಸಾದಾಗ ಅವಳಿಂದ ಒಂದು ದೊಡ್ಡ ಜನಾಂಗ ಆಗುತ್ತೆ, ಅವಳು ಮೆಸ್ಸೀಯನಿಗೆ ಪೂರ್ವಜಳಾಗ್ತಾಳೆ ಅಂತ ಯೆಹೋವ ಹೇಳಿದನು. (ಆದಿ. 17:15-19) ವಯಸ್ಸಾಗಿದ್ದ ಮೋಶೆಯನ್ನ ಇಸ್ರಾಯೇಲಿನ ನಾಯಕನಾಗಿ ಮಾಡಿ, ಅವ್ರನ್ನ ಈಜಿಪ್ಟಿಂದ ಕರ್ಕೊಂಡು ಬರೋ ನೇಮಕ ಅವನಿಗೆ ಕೊಟ್ಟನು. (ವಿಮೋ. 7:6, 7) ಅಪೊಸ್ತಲ ಯೋಹಾನನಿಗೆ ವಯಸ್ಸಾಗಿದ್ದಾಗ ಅವನ ಕೈಯಲ್ಲಿ ಐದು ಬೈಬಲ್‌ ಪುಸ್ತಕಗಳನ್ನ ಬರೆಸಿದನು.

4. ವಯಸ್ಸಾದವ್ರಿಗೆ ಬರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ? (ಜ್ಞಾನೋಕ್ತಿ 15:15) (ಚಿತ್ರ ನೋಡಿ.)

4 ವಯಸ್ಸಾಗ್ತಾ ಹೋದಂತೆ ನೂರೆಂಟು ಸಮಸ್ಯೆಗಳು ಬರುತ್ತೆ. ಒಬ್ಬ ಸಹೋದರಿ ಒಂದ್ಸಲ ತಮಾಷೆ ಮಾಡ್ತಾ “ಮುದುಕರಾಗೋದು ಮಾಮೂಲಿ ವಿಷ್ಯ ಅಲ್ಲ. ಅದಕ್ಕೂ ತುಂಬ ಧೈರ್ಯ ಇರಬೇಕು” ಅಂತ ಹೇಳಿದ್ರು. ವಯಸ್ಸಾದವ್ರಿಗೆ ತುಂಬ ಕಷ್ಟಗಳಿರುತ್ತೆ ನಿಜ, ಆದ್ರೂ ಅವರು ಖುಷಿಖುಷಿಯಾಗಿ ಇರೋಕೆ ಪ್ರಯತ್ನ ಹಾಕಬೇಕು.b ಆಗ ಇಳಿವಯಸ್ಸಲ್ಲಿ ಬರೋ ಸಮಸ್ಯೆಗಳನ್ನ ಎದುರಿಸೋಕಾಗುತ್ತೆ. (ಜ್ಞಾನೋಕ್ತಿ 15:15 ಓದಿ.) ಈ ಲೇಖನದಲ್ಲಿ ವಯಸ್ಸಾದವರು ಖುಷಿಯಾಗಿರೋಕೆ ಏನು ಮಾಡಬೇಕು? ವಯಸ್ಸಾದವ್ರಿಗೆ ಸಹೋದರ ಸಹೋದರಿಯರು ಹೇಗೆ ಸಹಾಯ ಮಾಡಬಹುದು? ಅಂತ ನೋಡೋಣ. ಆದ್ರೆ ಮೊದಲಿಗೆ ವಯಸ್ಸಾದವ್ರಿಗೆ ಖುಷಿಯಾಗಿರೋಕೆ ಯಾಕೆ ಕಷ್ಟ ಆಗುತ್ತೆ ಅಂತ ಕಲಿಯೋಣ.

ಹಿಂದಿನ ಚಿತ್ರದಲ್ಲಿರೋ ದಂಪತಿ, ಕೈ ಹಿಡ್ಕೊಂಡು ನಗುನಗುತ್ತಾ ಹೂ ಬಿಟ್ಟಿರೋ ಮರದ ಕೆಳಗೆ ನಿಂತಿದ್ದಾರೆ.

ವಯಸ್ಸಾದವ್ರಿಗಿರೋ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಖುಷಿಯ ಮನಸ್ಸು ಸಹಾಯ ಮಾಡುತ್ತೆ (ಪ್ಯಾರ 4 ನೋಡಿ)


ಖುಷಿಯಾಗಿರೋಕೆ ಯಾಕೆ ಕಷ್ಟ ಆಗುತ್ತೆ?

5. ವಯಸ್ಸಾದವರು ಖುಷಿ ಕಳ್ಕೊಳ್ಳೋಕೆ ಏನು ಕಾರಣ?

5 ವಯಸ್ಸಾಗಿರೋರು ಯಾಕೆ ಖುಷಿ ಕಳ್ಕೊತಾರೆ? ‘ಮುಂಚೆ ಮಾಡ್ತಿದ್ದ ಕೆಲಸಗಳನ್ನ ಈಗ ಮಾಡೋಕೆ ಆಗ್ತಿಲ್ಲ’ ಅಂತ ನೆನಸಿ ಅವರು ಬೇಜಾರಾಗ್ತಾರೆ. ‘ಚಿಕ್ಕ ವಯಸ್ಸಲ್ಲೇ ಜೀವನ ಚೆನ್ನಾಗಿತ್ತು, ಆಗ ಮೈಯಲ್ಲಿ ಶಕ್ತಿ ಇತ್ತು, ಆರೋಗ್ಯ ಇತ್ತು’ ಅಂತ ನೊಂದ್ಕೊತಾರೆ. (ಪ್ರಸಂ. 7:10) ಸಹೋದರಿ ರೂಬಿ ಹೀಗೆ ಹೇಳ್ತಾರೆ, “ನನಗೆ ಎದ್ರೆ ಕೂತ್ಕೊಳ್ಳೋಕೆ ಆಗಲ್ಲ, ಕೂತ್ರೆ ಎದ್ದೇಳೋಕೆ ಆಗಲ್ಲ. ಮೈ-ಕೈಯೆಲ್ಲಾ ನೋವು, ಬಟ್ಟೆ ಹಾಕೊಳ್ಳೋಕೂ ಕಷ್ಟ, ಬಗ್ಗಿ ಸಾಕ್ಸ್‌ ಹಾಕೊಳ್ಳೋಕ್ಕಂತೂ ಆಗೋದೇ ಇಲ್ಲ. ನನ್ನ ಕೈಯೆಲ್ಲ ಜೋಮ್‌ ಹಿಡಿದಂತೆ ಇರುತ್ತೆ. ಚಿಕ್ಕ ಪುಟ್ಟ ಕೆಲಸ ಮಾಡೋಕೂ ತುಂಬ ಕಷ್ಟ ಆಗುತ್ತೆ.” ಬೆತೆಲಲ್ಲಿ ಸೇವೆ ಮಾಡ್ತಿದ್ದ ಸಹೋದರ ಹೆರಾಲ್ಡ್‌ ಹೀಗೆ ಹೇಳ್ತಾರೆ, “ಕನ್ನಡಿ ಮುಂದೆ ನಿಂತ್ರೆ, ಇದು ನಾನೇನಾ? ನಾನು ಹೀಗೆ ಇರಲಿಲ್ವಲ್ಲ ಅಂತ ಅನಿಸುತ್ತೆ. ಕೆಲವು ಸಲ ಅಂತೂ ತುಂಬ ಬೇಜಾರಾಗುತ್ತೆ, ಕೋಪ ಬರುತ್ತೆ. ಮುಂಚೆ ನಾನು ಬೇಸ್‌ಬಾಲ್‌ ಆಟನ ತುಂಬ ಚೆನ್ನಾಗಿ ಆಡ್ತಿದ್ದೆ. ಆಗೆಲ್ಲ ಹುಡುಗ್ರು, ‘ಹೆರಾಲ್ಡ್‌ಗೆ ಬಾಲ್‌ ಕೊಡಿ. ಅವನು ಗ್ಯಾರಂಟಿ ನಮ್ಮನ್ನ ವಿನ್‌ ಮಾಡಿಸ್ತಾನೆ’ ಅಂತ ಹೇಳ್ತಿದ್ರು. ಆದ್ರೆ ಈಗ ನನಗೆ ಬಾಲ್‌ ಎಸೆಯೋಕೂ ಆಗಲ್ಲ.”

6. (ಎ) ವಯಸ್ಸಾದವರು ಬೇರೆ ಯಾವ ಕಾರಣಗಳಿಂದ ಖುಷಿನ ಕಳ್ಕೊತ್ತಾರೆ? (ಬಿ) ಗಾಡಿ ಓಡಿಸೋದನ್ನ ನಿಲ್ಲಿಸಬೇಕಾ ಅಂತ ತೀರ್ಮಾನ ಮಾಡೋಕೆ ವಯಸ್ಸಾದವ್ರಿಗೆ ಯಾವುದು ಸಹಾಯ ಮಾಡುತ್ತೆ? (ಈ ಪತ್ರಿಕೆಯಲ್ಲಿರೋ “ನಾನು ಗಾಡಿ ಓಡಿಸೋದನ್ನ ನಿಲ್ಲಿಸಬೇಕಾ?” ಅನ್ನೋ ಲೇಖನವನ್ನ ನೋಡಿ.)

6 ವಯಸ್ಸಾಗ್ತಾ ಆಗ್ತಾ ನೂರಾರು ಆರೋಗ್ಯದ ಸಮಸ್ಯೆಗಳು ಬರುತ್ತೆ. ಸರಿಯಾಗಿ ಕಣ್ಣು ಕಾಣಿಸಲ್ಲ, ನಿಮ್ಮಷ್ಟಕ್ಕೆ ನೀವೇ ಎಲ್ಲಿಗೂ ಹೋಗೋಕೆ ಆಗಲ್ಲ, ಕಾರ್‌ ಓಡ್ಸೋಕೆ ಆಗಲ್ಲ. ಇದನ್ನೆಲ್ಲ ನೆನಸ್ಕೊಂಡಾಗ ನಿಮಗೆ ತುಂಬ ಬೇಜಾರಾಗಬಹುದು. ಅದ್ರಲ್ಲೂ ನಿಮ್ಮನ್ನ ನೋಡ್ಕೊಳ್ಳೋಕೆ ಅಂತಾನೇ ಯಾರಾದ್ರೂ ಒಬ್ರು ಇರಬೇಕಾದಾಗ ಅಥವಾ ನೀವು ಹೋಗಿ ನಿಮ್ಮ ಮಕ್ಕಳ ಮನೆಯಲ್ಲಿ ಜೀವನ ಮಾಡಬೇಕಾದಾಗ ನಿಮಗಿನ್ನೂ ಬೇಜಾರಾಗಬಹುದು. ನಿಮಗೆ ಈ ಪರಿಸ್ಥಿತಿ ಬಂದ ತಕ್ಷಣ ನಿಮ್ಮ ಬೆಲೆ ಕಮ್ಮಿ ಆಗಿದೆ ಅಂತೇನಿಲ್ಲ, ಯಾರೂ ನಿಮ್ಮನ್ನ ತಾತ್ಸಾರ ಮಾಡಲ್ಲ. ಯೆಹೋವನಿಗೆ ಮತ್ತು ಸಹೋದರ ಸಹೋದರಿಯರಿಗೆ ಈಗಲೂ ನೀವು ಅಮೂಲ್ಯ. ಯೆಹೋವ ನಿಮ್ಮ ಭಾವನೆಗಳನ್ನ ತುಂಬ ಚೆನ್ನಾಗಿ ಅರ್ಥ ಮಾಡ್ಕೊಳ್ತಾನೆ. ನೀವು ನೋಡೋಕೆ ಹೇಗಿದ್ದೀರಾ ಅನ್ನೋದಕ್ಕಿಂತ ನೀವು ಹೃದಯದಲ್ಲಿ ಎಂಥವರು ಅಂತ ಯೆಹೋವ ನೋಡ್ತಾನೆ. ನಿಮಗೆ ಚಿನ್ನದಂತ ಮನಸ್ಸಿದೆ, ನೀವು ಸಭೆಯವ್ರನ್ನ ಬೆಟ್ಟದಷ್ಟು ಪ್ರೀತಿಸ್ತೀರ ಅಂತ ಆತನಿಗೆ ಗೊತ್ತು. ಅದಕ್ಕೇ ನಿಮ್ಮನ್ನ ಆತನು ಮೆಚ್ಕೊತಾನೆ.—1 ಸಮು. 16:7.

7. ‘ಅರ್ಮಗೆದೋನ್‌ ಬರೋ ಮುಂಚೆ ಸತ್ತೋಗ್ತಿನೇನೋ’ ಅನ್ನೋ ಕೊರಗು ಇರೋರಿಗೆ ಯಾವ ವಿಷ್ಯ ಸಹಾಯ ಮಾಡುತ್ತೆ?

7 ವಯಸ್ಸಾದವ್ರಿಗೆ ‘ನಾನು ಅರ್ಮಗೆದೋನ್‌ ನೋಡದೆ ಸತ್ತೋಗ್ತಿನೇನೋ’ ಅನ್ನೋ ಇನ್ನೊಂದು ದೊಡ್ಡ ಕೊರಗಿರುತ್ತೆ. ಒಂದುವೇಳೆ ನಿಮಗೂ ಈ ತರ ಅನಿಸ್ತಿದ್ರೆ ಏನು ಮಾಡಬೇಕು? ಯೆಹೋವ ಈ ಲೋಕನ ನಾಶ ಮಾಡೋಕೆ ತಾಳ್ಮೆಯಿಂದ ಕಾಯ್ತಿದ್ದಾನೆ ಅಂತ ನೆನಪಿಡಿ. (ಯೆಶಾ. 30:18) ಹೀಗೆ ಆತನು ತಾಳ್ಮೆ ತೋರಿಸ್ತಿರೋದ್ರಿಂದ ಎಷ್ಟೋ ಜನ್ರು ಸತ್ಯ ಕಲಿತು ಆತನನ್ನ ಆರಾಧನೆ ಮಾಡೋಕಾಗ್ತಿದೆ. (2 ಪೇತ್ರ 3:9) ಅಂತ್ಯ ಯಾಕೆ ತಡ ಆಗ್ತಿದೆ ಅಂತ ನಿಮಗೆ ಅನಿಸ್ದಾಗ, ದೇವರು ಈ ತರ ತಾಳ್ಮೆ ತೋರಿಸ್ತಿರೋದ್ರಿಂದ ನಿಮ್ಮ ಕುಟುಂಬದವ್ರೂ ಮುಂದೆ ಸತ್ಯಕ್ಕೆ ಬರಬಹುದು ಅಂತ ನೆನಪಿಡಿ.

8. ವಯಸ್ಸಾದವರು ಹುಷಾರಿಲ್ಲದಾಗ ಹೇಗೆ ನಡ್ಕೊತಾರೆ?

8 ನಮಗೆ ಎಷ್ಟೇ ವಯಸ್ಸಾಗಿರಲಿ ಹುಷಾರು ತಪ್ಪಿದಾಗ ಕೆಲವೊಂದು ಸಲ ನಾವು ಏನೇನೋ ಮಾತಾಡ್ತೀವಿ, ಆಮೇಲೆ ‘ಆ ತರ ಮಾತಾಡಬಾರದಿತ್ತು’ ಅಂತ ಬೇಜಾರು ಮಾಡ್ಕೋತೀವಿ. (ಪ್ರಸಂ. 7:7; ಯಾಕೋ. 3:2) ಉದಾಹರಣೆಗೆ, ನಂಬಿಗಸ್ತ ಯೋಬ ಕಷ್ಟದಲ್ಲಿದ್ದಾಗ ‘ಹಿಂದೆಮುಂದೆ ಯೋಚ್ನೆ’ ಮಾಡದೆ ಮಾತಾಡಿಬಿಟ್ಟ. (ಯೋಬ 6:1-3) ಅದ್ರಲ್ಲೂ ವಯಸ್ಸಾದವರು ಹುಷಾರಿಲ್ಲದಾಗ ತಮ್ಮ ಕಾಯಿಲೆಯಿಂದಾಗಿ ಕೆಲವರು ತಪ್ಪುತಪ್ಪಾಗಿ ಮಾತಾಡ್ತಾರೆ. ಇದರರ್ಥ ಕಾಯಿಲೆ ಬಂದ ತಕ್ಷಣ ನಾವೇನು ಮಾತಾಡಿದ್ರೂ ತಪ್ಪಿಲ್ಲ ಅಂತಲ್ಲ. ಒಂದುವೇಳೆ ನೀವು ತಪ್ಪಾಗಿ ಮಾತಾಡಿದ್ದೀರ, ನಡ್ಕೊಂಡಿದ್ದೀರ ಅಂತ ನಿಮಗೆ ಗೊತ್ತಾದ್ರೆ ತಕ್ಷಣ ಕ್ಷಮೆ ಕೇಳಿ.—ಮತ್ತಾ. 5:23, 24.

ಖುಷಿಯಾಗಿರೋಕೆ ಏನು ಮಾಡಬೇಕು?

ಹೂ ಬಿಟ್ಟಿರೋ ಮರದ ಕೊಂಬೆ; ವಯಸ್ಸಾಗಿದ್ರೂ ಸಹೋದರ ಸಹೋದರಿಯರು ಬೇರೆಬೇರೆ ರೀತಿಯಲ್ಲಿ ಖುಷಿಯಾಗಿರೋ ಚಿಕ್ಕ ಚಿತ್ರಗಳು. ಈ ಸನ್ನಿವೇಶಗಳನ್ನ ಪ್ಯಾರ 9-13ರಲ್ಲಿ ಮತ್ತೆ ತಿಳಿಸಲಾಗಿದೆ.

ವಯಸ್ಸಾಗಿರೋದ್ರಿಂದ ಕಷ್ಟಗಳಿದ್ರೂ ನೀವು ಹೇಗೆ ಖುಷಿಯಾಗಿ ಇರಬಹುದು? (ಪ್ಯಾರ 9-13 ನೋಡಿ)


9. ನೀವ್ಯಾಕೆ ಬೇರೆಯವ್ರ ಸಹಾಯ ಪಡ್ಕೋಬೇಕು? (ಚಿತ್ರ ನೋಡಿ.)

9 ಬೇರೆಯವ್ರ ಸಹಾಯ ಪಡ್ಕೊಳ್ಳಿ. (ಗಲಾ. 6:2) ಮೊದಮೊದ್ಲು ಬೇರೆಯವ್ರ ಸಹಾಯ ಪಡ್ಕೊಳ್ಳೋಕೆ ಕಷ್ಟ ಆಗಬಹುದು. ಸಹೋದರಿ ಗ್ರೆಟ್‌ ಹೀಗೆ ಹೇಳ್ತಾರೆ, “ಕೆಲವು ಸಲ ನನಗೆ ಬೇರೆಯವ್ರಿಂದ ಸಹಾಯ ಪಡ್ಕೊಳ್ಳೋಕೆ ಕಷ್ಟ ಆಗುತ್ತೆ. ಅವ್ರಿಗೆ ನಾನು ಭಾರ ಆಗ್ತಿನೇನೋ ಅಂತ ಅನಿಸುತ್ತೆ. ಆದ್ರೆ ಈಗ ನಿಧಾನವಾಗಿ ನಾನು ನನ್ನ ಯೋಚ್ನೆನ ಬದಲಾಯಿಸ್ಕೊಂಡಿದ್ದೀನಿ. ಬೇರೆಯವರು ಸಹಾಯ ಮಾಡೋಕೆ ಮುಂದೆ ಬಂದ್ರೆ ದೀನತೆಯಿಂದ ನಾನು ಅದನ್ನ ಪಡ್ಕೊಳ್ತೀನಿ.” ಆಗ ಸಹಾಯ ಮಾಡೋರಿಗೂ ‘ಕೊಡೋದ್ರಲ್ಲಿರೋ ಖುಷಿಯ’ ರುಚಿನ ನೋಡೋಕಾಗುತ್ತೆ. (ಅ. ಕಾ. 20:35) ಪ್ರತಿಯೊಬ್ರೂ ನಿಮ್ಮನ್ನ ಎಷ್ಟು ಪ್ರೀತಿಸ್ತಾರೆ, ಎಷ್ಟು ಕಾಳಜಿ ವಹಿಸ್ತಾರೆ ಅಂತ ನೀವೂ ನಿಮ್ಮ ಕಣ್ಣಾರೆ ನೋಡ್ತೀರ.

ಅಂಗಡಿಯ ಹತ್ರ ವೃದ್ಧ ಸಹೋದರಿ ಯುವ ಸಹೋದರಿಯ ಕೈ ಹಿಡ್ಕೊಂಡಿದ್ದಾರೆ.

(ಪ್ಯಾರ 9 ನೋಡಿ)


10. ಕೃತಜ್ಞತೆ ತೋರಿಸೋದು ಯಾಕೆ ಮುಖ್ಯ? (ಚಿತ್ರ ನೋಡಿ.)

10 ಕೃತಜ್ಞತೆ ಇದೆ ಅಂತ ತೋರಿಸಿ. (ಕೊಲೊ. 3:15; 1 ಥೆಸ. 5:18) ಯಾರಾದ್ರೂ ನಮಗೆ ಸಹಾಯ ಮಾಡಿದಾಗ ತುಂಬ ಖುಷಿ ಆಗುತ್ತೆ. ಆದ್ರೆ ಕೆಲವು ಸಲ ನಾವು ಥ್ಯಾಂಕ್ಸ್‌ ಹೇಳೋಕೆ ಮರೆತು ಹೋಗ್ತೀವಿ. ಆದ್ರೆ ನಾವು ನೆನಪಿಟ್ಟು ಖುಷಿಯಿಂದ ಥ್ಯಾಂಕ್ಸ್‌ ಹೇಳಿದ್ರೆ ಅವ್ರನ್ನ ಮೆಚ್ಕೊಂಡಿದ್ದೀವಿ ಅಂತ ತೋರಿಸ್ತೀವಿ. ಲೇಯ ಅನ್ನೋ ಸಹೋದರಿ ಬೆತೆಲಲ್ಲಿರೋ ವಯಸ್ಸಾದವ್ರನ್ನ ನೋಡ್ಕೊತಾರೆ. ಅವರು ಹೇಳೋದು, “ನಾನು ಒಂದು ಅಜ್ಜಿನ ನೋಡ್ಕೊತೀನಿ, ಅವರು ನನಗೆ ಆಗಾಗ ಥ್ಯಾಂಕ್ಯೂ ಕಾರ್ಡ್‌ನ ಬರೆದು ಕೊಡ್ತಾರೆ. ಅವರು ದೊಡ್ಡದೊಡ್ಡ ಲೆಟರ್‌ ಕೊಡದಿದ್ರೂ ಅವರು ಕೊಡೋ ಆ ಚಿಕ್ಕ ಕಾರ್ಡ್‌ ನನ್ನ ಮನಸ್ಸು ಮುಟ್ಟುತ್ತೆ. ನಾನು ಮಾಡೋ ಕೆಲಸನ ಅವರು ಮೆಚ್ಕೊತಿದ್ದಾರೆ, ನನ್ನನ್ನ ಇಷ್ಟ ಪಡ್ತಿದ್ದಾರೆ ಅಂತ ನನಗೆ ಗೊತ್ತಾಗುತ್ತೆ.”

ವಯಸ್ಸಾಗಿರೋ ಸಹೋದರಿ ಥ್ಯಾಂಕ್ಯೂ ಕಾರ್ಡ್‌ ಬರೀತಿದ್ದಾರೆ.

(ಪ್ಯಾರ 10 ನೋಡಿ)


11. ವಯಸ್ಸಾದವರು ಬೇರೆಯವ್ರಿಗೆ ಹೇಗೆ ಸಹಾಯ ಮಾಡಬಹುದು? (ಚಿತ್ರ ನೋಡಿ.)

11 ನಿಮ್ಮ ಕೈಲಾದ ಸಹಾಯ ಮಾಡಿ. ನೀವು ನಿಮಗಿರೋ ಶಕ್ತಿನ, ಸಮಯನ ಬೇರೆಯವ್ರಿಗೆ ಸಹಾಯ ಮಾಡೋಕೆ ಬಳಸಬೇಕು. ಆಗ ನೀವು ನಿಮ್ಮ ಸಮಸ್ಯೆಗಳ ಬಗ್ಗೆನೇ ಜಾಸ್ತಿ ಯೋಚ್ನೆ ಮಾಡಲ್ಲ. ಆಫ್ರಿಕಾದ ಒಂದು ಗಾದೆ, ವಯಸ್ಸಾದವ್ರಿಗೆ ಇರೋ ವಿವೇಕ ಮತ್ತು ಅನುಭವನ ಒಳ್ಳೊಳ್ಳೆ ಪಾಠ ಕಲಿಸೋ ಪುಸ್ತಕಗಳಿಗೆ ಹೋಲಿಸುತ್ತೆ. ಪುಸ್ತಕಗಳನ್ನ ಬರೀ ಒಂದು ಶೆಲ್ಫಲ್ಲಿ ಇಟ್ರೆ ಅದ್ರಿಂದ ಏನೂ ಕಲಿಯೋಕೆ ಆಗಲ್ಲ. ಅದನ್ನ ತೆರೆದು ಓದಿದ್ರೇನೇ ನಮಗೆ ಪ್ರಯೋಜ್ನ ಆಗೋದು. ಅದೇ ತರ ವಯಸ್ಸಾದವರು ಏನೂ ಮಾತಾಡದೇ ಸುಮ್ಮನಿದ್ರೆ ಯುವಜನ್ರಿಗೆ ನಿಮ್ಮಿಂದ ಪ್ರಯೋಜ್ನ ಆಗಲ್ಲ. ಹಾಗಾಗಿ ನೀವೇ ಮುಂದೆ ಬಂದು ಯುವಜನ್ರ ಜೊತೆ ಮಾತಾಡಿ, ನಿಮಗಿರೋ ಅನುಭವ, ಜ್ಞಾನನ ಅವ್ರ ಹತ್ರ ಹಂಚಿಕೊಳ್ಳಿ. ಅವ್ರಿಗೆ ಚಿಕ್ಕ ಪುಟ್ಟ ಪ್ರಶ್ನೆಗಳನ್ನ ಕೇಳಿ, ಅವರು ಉತ್ರ ಕೊಡ್ವಾಗ ಚೆನ್ನಾಗಿ ಕೇಳಿಸ್ಕೊಳ್ಳಿ. ಅಷ್ಟೇ ಅಲ್ಲ, ಯೆಹೋವ ಇಟ್ಟಿರೋ ನಿಯಮಗಳು ನಮ್ಮ ಒಳ್ಳೆದಕ್ಕೆ, ಅದನ್ನ ಪಾಲಿಸಿದ್ರೆ ನಾವು ಖುಷಿ ಖುಷಿಯಾಗಿರಬಹುದು ಅಂತ ಅವ್ರಿಗೆ ಕಲಿಸಿ. ನೀವು ಈ ತರ ಯುವಜನ್ರ ನಂಬಿಕೆನ ಬಲಪಡಿಸಿದ್ರೆ, ಅವರ ಜೊತೆ ಸಮಯ ಕಳೆದ್ರೆ ಖುಷಿಖುಷಿಯಾಗಿ ಇರ್ತೀರ.—ಕೀರ್ತ. 71:18.

ಯುವ ಸಹೋದರ ಮನ ಬಿಚ್ಚಿ ಮಾತಾಡುವಾಗ ವಯಸ್ಸಾದ ಸಹೋದರ ಕೇಳಿಸ್ಕೊಳ್ತಿದ್ದಾನೆ.

(ಪ್ಯಾರ 11 ನೋಡಿ)


12. ವಯಸ್ಸಾದವ್ರಿಗೆ ಯೆಹೋವ ಏನಂತ ಮಾತು ಕೊಟ್ಟಿದ್ದಾನೆ? (ಯೆಶಾಯ 46:4) (ಚಿತ್ರ ನೋಡಿ.)

12 ಬಲಕ್ಕಾಗಿ ಯೆಹೋವನ ಹತ್ರ ಕೇಳ್ಕೊಳ್ಳಿ. ಕೆಲವೊಂದು ಸಲ ನೀವು ಸುಸ್ತಾಗಿ ಹೋಗಬಹುದು. ಆದ್ರೆ ಯೆಹೋವನು “ಯಾವತ್ತೂ ದಣಿಯಲ್ಲ, ಯಾವತ್ತೂ ಬಳಲಿ ಹೋಗಲ್ಲ.” (ಯೆಶಾ. 40:28) ಯೆಹೋವ ತನಗಿರೋ ಈ ಶಕ್ತಿನ ಯಾವುದಕ್ಕೆ ಬಳಸ್ತಾನೆ? ವಯಸ್ಸಾದ ನಿಮ್ಮನ್ನ ಬಲಪಡಿಸೋಕೂ ಅದನ್ನ ಬಳಸ್ತಾನೆ. (ಯೆಶಾ. 40:29-31) ‘ನಿಮಗೆ ನಿಯತ್ತಾಗಿರೋಕೆ ಬೇಕಿರೋ ಸಹಾಯನ ಮಾಡೇ ಮಾಡ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. (ಯೆಶಾಯ 46:4 ಓದಿ.) ಯೆಹೋವ ಕೊಟ್ಟ ಮಾತನ್ನ ಯಾವತ್ತೂ ತಪ್ಪಲ್ಲ, ಉಳಿಸ್ಕೊತಾನೆ. (ಯೆಹೋ. 23:14; ಯೆಶಾ. 55:10, 11) ಹಾಗಾಗಿ ನೀವು ಆತನಿಗೆ ಪ್ರಾರ್ಥನೆ ಮಾಡಿ. ಆತನಿಗೆ ನಿಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅಂತ ನೋಡಿದಾಗ ನಿಮಗೆ ತುಂಬ ಖುಷಿ ಆಗುತ್ತೆ.

ವಯಸ್ಸಾದ ಸಹೋದರ ಪ್ರಾರ್ಥಿಸ್ತಿದ್ದಾನೆ.

(ಪ್ಯಾರ 12 ನೋಡಿ)


13. ಯಾವ ವಿಷ್ಯನ ನಾವು ನೆನಪಲ್ಲಿಡಬೇಕು? (2 ಕೊರಿಂಥ 4:16-18) (ಚಿತ್ರ ನೋಡಿ.)

13 ಕಷ್ಟಗಳು ಸ್ವಲ್ಪ ದಿನ ಅಷ್ಟೇ ಅಂತ ನೆನಪಿಡಿ. ಇದನ್ನ ನೆನಪಿಟ್ರೆ ತಾಳ್ಕೊಳ್ಳೋಕೆ ಸುಲಭ ಆಗುತ್ತೆ. ವಯಸ್ಸಾಗೋದು, ಕಾಯಿಲೆ ಬೀಳೋದೆಲ್ಲ ಇನ್ನು ಸ್ವಲ್ಪ ದಿನಗಳಲ್ಲಿ ಕೊನೆ ಆಗುತ್ತೆ ಅಂತ ಬೈಬಲ್‌ ನಮಗೆ ಭರವಸೆ ಕೊಡುತ್ತೆ. (ಯೋಬ 33:25; ಯೆಶಾ. 33:24) ವಯಸ್ಸಾಗಿರೋದ್ರಿಂದ ಒಳ್ಳೆ ದಿನಗಳೆಲ್ಲಾ ಕಳೆದೋಯ್ತು ಅಂದ್ಕೋಬೇಡಿ. ನಿಜ ಹೇಳಬೇಕಂದ್ರೆ ಒಳ್ಳೆ ದಿನಗಳು ನಿಮಗೋಸ್ಕರ ಮುಂದೆ ಕಾಯ್ತಿದೆ. (2 ಕೊರಿಂಥ 4:16-18 ಓದಿ.) ಈಗ ನಿಮಗೆ ಸಹಾಯ ಮಾಡೋಕೆ ಬೇರೆಯವರು ಏನು ಮಾಡಬೇಕು ಅಂತ ನೋಡೋಣ.

ವೀಲ್‌ ಚೇರಲ್ಲಿ ಕೂತು ವಯಸ್ಸಾಗಿರೋ ಸಹೋದರಿ ಬೈಬಲ್‌ ಓದುತ್ತಿದ್ದಾರೆ. ಪರದೈಸಲ್ಲಿ ಯುವತಿಯಾಗಿ ತಾನು ವೀಲ್‌ ಚೇರಿಂದ ಎದ್ದು ನಡ್ಕೊಂಡು ಹೋಗ್ತಿರೋ ಹಾಗೆ ಚಿತ್ರಿಸ್ಕೊಳ್ತಿದ್ದಾಳೆ.

(ಪ್ಯಾರ 13 ನೋಡಿ)


ಬೇರೆಯವರು ಹೇಗೆ ಸಹಾಯ ಮಾಡಬಹುದು

14. ವಯಸ್ಸಾದವ್ರನ್ನ ಆಗಾಗ ಭೇಟಿ ಮಾಡೋದು, ಅವ್ರಿಗೆ ಫೋನ್‌ ಮಾಡೋದು ಯಾಕೆ ಮುಖ್ಯ?

14 ವಯಸ್ಸಾದವ್ರನ್ನ ಭೇಟಿ ಮಾಡಿ ಮತ್ತು ಅವ್ರಿಗೆ ಫೋನ್‌ ಮಾಡಿ. (ಇಬ್ರಿ. 13:16) ವಯಸ್ಸಾದವರು ಮನೆಯಲ್ಲೇ ಇರೋದ್ರಿಂದ ಅವ್ರಿಗೆ ತುಂಬ ಸಲ ಬೇಜಾರಾಗುತ್ತೆ. ಕೆಮ್‌ ಅನ್ನೋ ಸಹೋದರ ಹೀಗೆ ಹೇಳ್ತಾರೆ, “ನಾನು ಬೆಳಿಗ್ಗಿಂದ ಸಂಜೆವರೆಗೂ ನಾಲ್ಕು ಗೋಡೆ ಮಧ್ಯನೇ ಇರ್ತೀನಿ, ನಂಗೆ ತುಂಬ ಬೋರ್‌ ಆಗುತ್ತೆ. ನಾನು ಬೋನಲ್ಲಿ ಇಟ್ಟಿರೋ ಮುದಿ ಸಿಂಹದ ತರ ಇದ್ದೀನಿ ಅನಿಸುತ್ತೆ. ನನ್ನ ಕೈಯಲ್ಲಿ ಏನೂ ಮಾಡೋಕಾಗಲ್ಲ. ಕೋಪ ಬರುತ್ತೆ, ತುಂಬ ಬೇಜಾರಾಗುತ್ತೆ.” ಹಾಗಾಗಿ ನಾವು ವಯಸ್ಸಾದವ್ರನ್ನ ಆಗಾಗ ಹೋಗಿ ಭೇಟಿ ಮಾಡಿದ್ರೆ ಅವರು ನಮಗೆ ತುಂಬ ಮುಖ್ಯ, ಅವರನ್ನ ನಾವು ತುಂಬ ಪ್ರೀತಿಸ್ತೀವಿ ಅಂತ ತೋರಿಸಿ ಕೊಟ್ಟಂತೆ ಇರುತ್ತೆ. ನಾವೆಲ್ರೂ ಒಂದಲ್ಲ ಒಂದು ಸಲ, ‘ವಯಸ್ಸಾದವ್ರನ್ನ ಹೋಗಿ ಭೇಟಿ ಮಾಡಬೇಕು, ಅವ್ರ ಜೊತೆ ಸಮಯ ಕಳಿಬೇಕು’ ಅಂತ ಪ್ಲಾನ್‌ ಮಾಡಿರ್ತೀವಿ. ಆದ್ರೆ ಕೆಲವೊಂದು ಸಲ ಮರೆತು ಬಿಡ್ತೀವಿ. ನಿಜ, ನಾವೆಲ್ರೂ ತುಂಬ ಬಿಜ಼ಿ ಆಗಿದ್ದೀವಿ. ಆದ್ರೆ “ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೋಬೇಕು” ಅಂತ ಬೈಬಲ್‌ ಹೇಳುತ್ತೆ. (ಫಿಲಿ. 1:10) ಇಲ್ಲಿ ಹೇಳಿರೋ ಮುಖ್ಯವಾದ ವಿಷ್ಯದಲ್ಲಿ ವಯಸ್ಸಾದವ್ರನ್ನ ಭೇಟಿ ಮಾಡೋದೂ ಸೇರಿದೆ. ಹಾಗಾಗಿ ಇವ್ರನ್ನ ಭೇಟಿ ಮಾಡೋಕೆ ನೀವು ಪ್ಲಾನ್‌ ಮಾಡಬೇಕು. ನಿಮ್ಮ ಸಭೆಯಲ್ಲಿರೋ ವಯಸ್ಸಾದ ಸಹೋದರ ಸಹೋದರಿಯರ ಹೆಸ್ರನ್ನ ಬರೆದಿಡಿ. ಅವ್ರಿಗೆ ಯಾವತ್ತು ಮೆಸೇಜ್‌ ಮಾಡಬೇಕು, ಯಾವತ್ತು ಫೋನ್‌ ಮಾಡಬೇಕು ಅಂತ ನಿಮ್ಮ ಮೊಬೈಲಲ್ಲಿ ಸೆಟ್‌ ಮಾಡಿ. ಹೀಗೆ ಮಾಡಿದ್ರೆ ಅವ್ರನ್ನ ತಪ್ಪದೇ ಪ್ರೋತ್ಸಾಹಿಸ್ತೀರ.

15. ಚಿಕ್ಕವರು ವಯಸ್ಸಾದವ್ರಿಗೆ ಹೇಗೆ ಸಹಾಯ ಮಾಡಬಹುದು?

15 ‘ನಾನು ವಯಸ್ಸಲ್ಲಿ ಚಿಕ್ಕವನು, ದೊಡ್ಡವ್ರ ಹತ್ರ ಏನು ಮಾತಾಡ್ಲಿ’ ಅಂತ ನಿಮಗೆ ಅನಿಸಬಹುದು. ಆದ್ರೆ ಅದ್ರ ಬಗ್ಗೆ ಜಾಸ್ತಿ ಯೋಚ್ನೆ ಮಾಡಬೇಡಿ, ನೀವು ಅವ್ರಿಗೆ ಒಂದು ಒಳ್ಳೆ ಫ್ರೆಂಡ್‌ ಆಗಿರಿ. (ಜ್ಞಾನೋ. 17:17) ಮೀಟಿಂಗ್‌ ಮುಂಚೆ ಮತ್ತು ಮುಗಿದ ಮೇಲೆ ಅವ್ರ ಜೊತೆ ನೀವು ಮಾತಾಡಿ. ‘ನಿಮಗೆ ಇಷ್ಟವಾದ ವಚನ ಯಾವುದು? ನೀವು ಚಿಕ್ಕವ್ರಿದ್ದಾಗ ಆದ ಒಂದು ತಮಾಷೆ ವಿಷ್ಯ ಹೇಳಿ’ ಅಂತ ಕೇಳಿ. JW ಪ್ರಸಾರವನ್ನ ನೀವಿಬ್ರೂ ಒಟ್ಟಿಗೆ ನೋಡೋಕೆ ಕರಿಬಹುದು. ಸಹಾಯ ಮಾಡೋಕೆ ಇನ್ನೂ ಬೇರೆಬೇರೆ ವಿಧಾನಗಳಿವೆ. ಉದಾಹರಣೆಗೆ, ಅವ್ರ ಮೊಬೈಲ್‌ ಅಥವಾ ಟ್ಯಾಬ್‌ನ ಅಪ್ಡೇಟ್‌ ಮಾಡಬಹುದು, ಇತ್ತೀಚಿಗೆ ರಿಲೀಸಾದ ವಿಷ್ಯಗಳನ್ನ ಡೌನ್ಲೋಡ್‌ ಮಾಡಬಹುದು. ಕ್ಯಾರಲ್‌ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನೀವು ಎಂಜಾಯ್‌ ಮಾಡೋ ವಿಷ್ಯಗಳನ್ನೇ ವಯಸ್ಸಾದವ್ರ ಜೊತೆನೂ ಮಾಡಿ. ನನಗೆ ವಯಸ್ಸಾಗಿದ್ರೂ ಈಗಲೂ ನನಗೆ ಖುಷಿ ಖುಷಿಯಾಗಿರೋಕೆ ಇಷ್ಟ. ಶಾಪಿಂಗ್‌ ಹೋಗೋಕೆ, ಹೊರಗಡೆ ಹೋಗಿ ತಿನ್ನೋಕೆ, ಸೃಷ್ಟಿನ ನೋಡೋಕೆ ತುಂಬ ಇಷ್ಟ.” ಮಹಿರ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನನ್ನ ಫ್ರೆಂಡ್ಗೆ ಎಷ್ಟು ವಯಸ್ಸು ಗೊತ್ತಾ? 90 ವರ್ಷ. ನನಗಿಂತ ಅವರು 57 ವರ್ಷ ದೊಡ್ಡವರು, ಆದ್ರೆ ನಾವಿಬ್ರೂ ಜೊತೇಲ್ಲಿದ್ದಾಗ ತುಂಬ ನಗಾಡ್ತೀವಿ, ಫಿಲಂ ನೋಡ್ತೀವಿ, ಖುಷಿಖುಷಿಯಾಗಿ ಇರ್ತೀವಿ. ಇದ್ರಿಂದ ನಮ್ಮ ವಯಸ್ಸನ್ನ ಮರೆತು ಬಿಡ್ತೀವಿ. ಏನಾದ್ರೂ ಸಮಸ್ಯೆ ಬಂದ್ರೂ ಅದನ್ನ ಹೇಗೆ ಸರಿಮಾಡೋದು ಅಂತ ಮಾತಾಡ್ತೀವಿ.”

16. ವಯಸ್ಸಾದವ್ರ ಜೊತೆ ನಾವು ಆಸ್ಪತ್ರೆಗೆ ಹೋಗೋದು ಯಾಕೆ ಮುಖ್ಯ?

16 ಡಾಕ್ಟರ್‌ ಹತ್ರ ಕರ್ಕೊಂಡು ಹೋಗಿ. ವಯಸ್ಸಾದವ್ರನ್ನ ಆಸ್ಪತ್ರೆಗೆ ಡ್ರಾಪ್‌ ಮಾಡುವಾಗ ಸಾಧ್ಯ ಆದ್ರೆ ಒಳಗೆ ಹೋಗಿ ಡಾಕ್ಟರ್‌ ಹತ್ರ ಮಾತಾಡಿ. ಇವ್ರನ್ನ ಡಾಕ್ಟರ್‌ ಚೆನ್ನಾಗಿ ನೋಡ್ಕೊಳ್ತಿದ್ದಾರಾ ಅಂತ ಗಮನಿಸಿ. (ಯೆಶಾ. 1:17) ಡಾಕ್ಟರ್‌ ಏನಾದ್ರೂ ಹೇಳಿದ್ರೆ ಅದನ್ನೆಲ್ಲ ಬರ್ಕೊಂಡು ಅವ್ರಿಗೆ ಅದನ್ನ ಕೊಡಿ. ವಯಸ್ಸಾಗಿರೋ ರೂತ್‌ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ಡಾಕ್ಟರ್‌ ಹತ್ರ ನಾನು ಒಬ್ಬಳೇ ಹೋದ್ರೆ ಅವರು ನನ್ನ ಜೊತೆ ಚೆನ್ನಾಗಿ ಮಾತಾಡೋದೇ ಇಲ್ಲ. ‘ಪ್ರಾಬ್ಲಮ್‌ ನಿಮ್ಮ ದೇಹದಲ್ಲಿ ಇಲ್ಲ, ನಿಮ್ಮ ತಲೆಯಲ್ಲಿದೆ. ಮೊದ್ಲು ತಲೆಯಲ್ಲಿರೋದನ್ನ ತೆಗೆದುಹಾಕಿ’ ಅಂತ ಗದರಿ ಹೇಳ್ತಾರೆ. ಆದ್ರೆ ನಾನು ಯಾರನ್ನಾದ್ರೂ ಕರ್ಕೊಂಡು ಹೋದ್ರೆ ಡಾಕ್ಟರ್‌ ನನ್ನ ಜೊತೆ ಚೆನ್ನಾಗಿ ಮಾತಾಡ್ತಾರೆ, ಚೆನ್ನಾಗಿ ಟ್ರೀಟ್‌ ಮಾಡ್ತಾರೆ. ನನ್ನನ್ನ ಆಸ್ಪತ್ರೆಗೆ ಕರ್ಕೊಂಡು ಹೋಗೋ ಸಹೋದರ ಸಹೋದರಿಯರಿಗೆ ನಾನು ತುಂಬ ಥ್ಯಾಂಕ್ಸ್‌ ಹೇಳ್ತೀನಿ.”

17. ವಯಸ್ಸಾದವ್ರಿಗೆ ಸಿಹಿಸುದ್ದಿ ಸಾರೋಕೆ ನೀವು ಹೇಗೆಲ್ಲ ಸಹಾಯ ಮಾಡಬಹುದು?

17 ಅವ್ರ ಜೊತೆ ಸಿಹಿ ಸುದ್ದಿ ಸಾರಿ. ವಯಸ್ಸಾಗಿರೋ ಕೆಲವ್ರಿಗೆ ತುಂಬ ಶಕ್ತಿ ಇಲ್ಲದೇ ಇರೋದ್ರಿಂದ ಮನೆಮನೆ ಸೇವೆ ಮಾಡೋಕೆ ಸ್ವಲ್ಪ ಕಷ್ಟ ಆಗಬಹುದು. ಹಾಗಾಗಿ ನೀವು ಅವ್ರಿಗೆ ಬೇರೆ ರೀತಿಲಿ ಸಹಾಯ ಮಾಡಬಹುದು. ಉದಾಹರಣೆಗೆ, ವಯಸ್ಸಾಗಿರೋ ಒಬ್ಬ ಸಹೋದರಿನ ನಿಮ್ಮ ಜೊತೆ ತಳ್ಳುಬಂಡಿ ಸಾಕ್ಷಿಕಾರ್ಯಕ್ಕೆ ಕರ್ಕೊಂಡು ಹೋಗಬಹುದು. ಅವರು ಬರೋಕೆ ಒಪ್ಕೊಂಡ್ರೆ ಅವ್ರಿಗಂತ ಒಂದು ಚೇರ್‌ ತಗೊಂಡು ಹೋಗಬಹುದು. ಆಗ ಅವರು ಅಲ್ಲೇ ಪಕ್ಕದಲ್ಲಿ ಕೂರಬಹುದು. ವಯಸ್ಸಾಗಿರೋರ ಜೊತೆ ನೀವು ಬೈಬಲ್‌ ಸ್ಟಡಿಗೆ ಹೋಗಬಹುದು. ಒಂದುವೇಳೆ ನಿಮ್ಮ ವಿದ್ಯಾರ್ಥಿ ಒಪ್ಪಿದ್ರೆ ವಯಸ್ಸಾದವ್ರ ಮನೆಯಲ್ಲೇ ಬೈಬಲ್‌ ಸ್ಟಡಿ ಮಾಡಬಹುದು. ಕ್ಷೇತ್ರಸೇವಾ ಕೂಟನ ಅವ್ರ ಮನೆಯಲ್ಲೇ ನಡೆಸೋ ತರ ಹಿರಿಯರು ಏರ್ಪಾಡು ಮಾಡಬಹುದು. ಈ ತರ ಮಾಡಿದ್ರೆ ಅವರು ಸುಲಭವಾಗಿ ಆ ಕೂಟನ ಅಟೆಂಡ್‌ ಮಾಡೋಕಾಗುತ್ತೆ. ವಯಸ್ಸಾದವ್ರಿಗೆ ಸಹಾಯ ಮಾಡೋಕೆ ಅಂತ ನೀವು ಏನೇ ಮಾಡಿದ್ರೂ ಯೆಹೋವ ಅದನ್ನು ತುಂಬ ಮೆಚ್ಕೊಳ್ತಾನೆ.—ಜ್ಞಾನೋ. 3:27; ರೋಮ. 12:10.

18. (ಎ) ಈ ಲೇಖನದಲ್ಲಿ ಏನು ಕಲಿತ್ವಿ? (ಬಿ) ಮುಂದಿನ ಲೇಖನದಲ್ಲಿ ಏನು ಕಲಿತೀವಿ?

18 ಈ ಲೇಖನದಲ್ಲಿ, ವಯಸ್ಸಾಗಿರೋ ಪ್ರತಿಯೊಬ್ರನ್ನೂ ಯೆಹೋವ ತುಂಬ ಪ್ರೀತಿಸ್ತಾನೆ, ಅಮೂಲ್ಯವಾಗಿ ನೋಡ್ತಾನೆ. ಇಡೀ ಸಭೆ ಕೂಡ ಅವ್ರನ್ನ ತುಂಬ ಪ್ರೀತಿಸುತ್ತೆ ಅಂತ ಕಲಿತ್ವಿ. ಅಷ್ಟೇ ಅಲ್ಲ, ವಯಸ್ಸಾಗ್ತಾ ಆಗ್ತಾ ನಿಜವಾಗ್ಲೂ ಕಷ್ಟ ಆಗುತ್ತೆ. ಆದ್ರೆ ಯೆಹೋವನ ಸಹಾಯ ಇದ್ರೆ ಏನೇ ಕಷ್ಟ ಬಂದ್ರೂ ಅದನ್ನ ಎದುರಿಸಿ ಖುಷಿಖುಷಿಯಾಗಿ ಇರಬಹುದು ಅಂತ ನೋಡಿದ್ವಿ. (ಕೀರ್ತ. 37:25) ‘ಒಳ್ಳೆ ದಿನಗಳೆಲ್ಲ ಕಳೆದೋಯ್ತು’ ಅಂದ್ಕೊಬೇಡಿ. ಮುಂದೆ ಆ ದಿನಗಳು ನಿಮಗೋಸ್ಕರ ಮತ್ತೆ ಕಾಯ್ತಾ ಇವೆ ಅಂತಾನೂ ತಿಳ್ಕೊಂಡ್ವಿ. ಮುಂದಿನ ಲೇಖನದಲ್ಲಿ, ವಯಸ್ಸಾಗಿರೋರನ್ನ, ಕಾಯಿಲೆ ಬಿದ್ದಿರೋ ಮಗುನ ಅಥವಾ ಫ್ರೆಂಡ್‌ನ ಆರೈಕೆ ಮಾಡ್ತಿರೋರ ಬಗ್ಗೆ ನೋಡ್ತೀವಿ. ಈ ತರ ಆರೈಕೆ ಮಾಡ್ತಿರೋರು ಅವ್ರ ಖುಷಿನ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ಕಲಿತೀವಿ.

ನೀವೇನು ಹೇಳ್ತೀರಾ?

  • ವಯಸ್ಸಾದವರು ಯಾವೆಲ್ಲ ಕಾರಣಗಳಿಂದ ತಮ್ಮ ಖುಷಿ ಕಳ್ಕೊತಾರೆ?

  • ವಯಸ್ಸಾದವರು ಖುಷಿಖುಷಿಯಾಗಿ ಇರೋಕೆ ಏನು ಮಾಡಬೇಕು?

  • ವಯಸ್ಸಾದವ್ರಿಗೆ ಸಭೆಯವರು ಹೇಗೆ ಸಹಾಯ ಮಾಡಬಹುದು?

ಗೀತೆ 04 ಯೆಹೋವ ನನ್ನ ಕುರುಬ

a ವೃದ್ಧರೇ—ನೀವು ತುಂಬ ಅಮೂಲ್ಯರು! ಅನ್ನೋ ವಿಡಿಯೋನ jw.org ಅಥವಾ JW ಲೈಬ್ರರಿಯಲ್ಲಿ ನೋಡಿ.

b ಪದ ವಿವರಣೆ: ಖುಷಿ ಅಥವಾ ಆನಂದ ಪವಿತ್ರಶಕ್ತಿಯಿಂದ ಬರೋ ಗುಣ ಆಗಿದೆ. (ಗಲಾ. 5:22) ನಿಜವಾದ ಖುಷಿ ಮತ್ತು ಆನಂದ ಯೆಹೋವನ ಜೊತೆ ಆಪ್ತ ಸಂಬಂಧ ಇದ್ರೆ ಮಾತ್ರ ಬರುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ