ಅಧ್ಯಯನ ಲೇಖನ 47
ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!
“ ನೀನು ತುಂಬ ಅಮೂಲ್ಯ!”
“ ನೀನು ತುಂಬ ಅಮೂಲ್ಯ.”—ದಾನಿ. 9:23.
ಈ ಲೇಖನದಲ್ಲಿ ಏನಿದೆ?
ಕೆಲವ್ರಿಗೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅನ್ನೋ ಭಾವನೆ ಇರುತ್ತೆ. ಆದ್ರೆ ಯೆಹೋವನ ಕಣ್ಣಲ್ಲಿ ಅಂಥವ್ರಿಗೆ ಎಷ್ಟು ಬೆಲೆ ಇದೆ ಅಂತ ಈ ಲೇಖನದಲ್ಲಿ ನೋಡೋಣ.
1-2. ‘ಯೆಹೋವನಿಗೆ ನಾವು ಅಮೂಲ್ಯ’ ಅಂತ ಅರ್ಥ ಮಾಡ್ಕೊಳ್ಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
ಯೆಹೋವನ ಸೇವಕರಲ್ಲಿ ಕೆಲವ್ರಿಗೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅನ್ನೋ ಭಾವನೆ ಇದೆ. ಅವ್ರಿಗೆ ಯಾಕೆ ಹೀಗನಿಸುತ್ತೆ? ಚಿಕ್ಕ ವಯಸ್ಸಿಂದ ಜನ ಅವ್ರನ್ನ ಕೀಳಾಗಿ ನೋಡಿರಬಹುದು. ಆದ್ರೆ ಯೆಹೋವ ನಿಮ್ಮನ್ನ ತುಂಬಾ ಪ್ರೀತಿಸ್ತಾನೆ. ಇದು ನಿಜಾನಾ ಅಂತ ನೋಡೋಣ.
2 ನಾವು ಬೈಬಲಲ್ಲಿರೋ ಕೆಲವು ಘಟನೆಗಳನ್ನ ಓದಿ ಚೆನ್ನಾಗಿ ಯೋಚ್ನೆ ಮಾಡಿದ್ರೆ ಯೆಹೋವ ಜನ್ರನ್ನ ಎಷ್ಟು ಪ್ರೀತಿಸ್ತಿದ್ದ, ಎಷ್ಟು ಕನಿಕರ ತೋರಿಸ್ತಿದ್ದ ಅಂತ ಗೊತ್ತಾಗುತ್ತೆ. ಯೇಸುನೂ ಜನ್ರ ಹತ್ರ ಗೌರವದಿಂದ, ಪ್ರೀತಿಯಿಂದ ಮಾತಾಡ್ತಿದ್ದನು. ಇದನ್ನೆಲ್ಲಾ ನೋಡಿದ್ರೆ ‘ನಾವು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅಂದ್ಕೊಳ್ಳೋರನ್ನ ಯೆಹೋವ ಮತ್ತು ಯೇಸು ತುಂಬಾ ಅಮೂಲ್ಯವಾಗಿ ನೋಡ್ತಾರೆ ಅಂತ ಗೊತ್ತಾಗುತ್ತೆ. (ಯೋಹಾ. 5:19; ಇಬ್ರಿ. 1:3) ಈ ಲೇಖನದಲ್ಲಿ, (1) ನಾವು ಅಮೂಲ್ಯರು ಅಂತ ಅರ್ಥ ಮಾಡ್ಕೊಳ್ಳೋಕೆ ಯೇಸು ಜನ್ರಿಗೆ ಹೇಗೆ ಸಹಾಯ ಮಾಡಿದನು (2) ಯೆಹೋವನ ಕಣ್ಣಲ್ಲಿ ನಾವು ಅಮೂಲ್ಯರಾಗಿ ಇದ್ದೀವಿ ಅಂತ ನಂಬೋಕೆ ಯಾವುದು ಸಹಾಯ ಮಾಡುತ್ತೆ ಅಂತ ನೋಡೋಣ.—ಹಗ್ಗಾ. 2:7.
ಜನರು ಅಮೂಲ್ಯ ಅಂತ ಯೇಸು ತೋರಿಸಿದನು
3. ಸಹಾಯಕ್ಕಾಗಿ ಓಡೋಡಿ ಬಂದ ಗಲಿಲಾಯದ ಜನ್ರ ಜೊತೆ ಯೇಸು ಹೇಗೆ ನಡ್ಕೊಂಡನು?
3 ಯೇಸು ಗಲಿಲಾಯದಲ್ಲಿ ಸಿಹಿಸುದ್ದಿ ಸಾರ್ತಿದ್ದಾಗ ಜನ ಕುರಿಗಳ ತರ ಮಂದೆ-ಮಂದೆಯಾಗಿ ಆತನ ಹತ್ರ ಬಂದು ಕಾಯಿಲೆಗಳನ್ನ ವಾಸಿ ಮಾಡಿಸ್ಕೊಳ್ತಿದ್ರು. ಯೇಸು ಅವ್ರನ್ನ ಗಮನಿಸಿದಾಗ ‘ಅವರು ಕುರುಬನಿಲ್ಲದ ಕುರಿಗಳ ತರ ಇದ್ರು. ಅವ್ರ ಚರ್ಮ ಸುಲಿದು ಹೋಗಿತ್ತು.’ (ಮತ್ತಾ. 9:36, ಪಾದಟಿಪ್ಪಣಿ) ಧರ್ಮಗುರುಗಳು ಈ ಜನ್ರನ್ನ ಲೆಕ್ಕಕ್ಕೆ ತಗೊಳ್ತಾ ಇರ್ಲಿಲ್ಲ. ಅದಕ್ಕೆ ‘ನೀವಂದ್ರೆ ದೇವರಿಗೆ ಇಷ್ಟ ಇಲ್ಲ’ ಅಂತ ಹೇಳ್ತಿದ್ರು. (ಯೋಹಾ. 7:47-49) ಆದ್ರೆ ಯೇಸು ಈ ತರ ನಡ್ಕೊಳ್ಳಲಿಲ್ಲ. ಅವ್ರ ಜೊತೆ ಸಮಯ ಕಳೆದನು, ಕಾಯಿಲೆ ವಾಸಿ ಮಾಡಿದನು ಮತ್ತು ದೇವ್ರ ಬಗ್ಗೆ ಕಲಿಸಿದನು. (ಮತ್ತಾ. 9:35) ಅಷ್ಟೇ ಅಲ್ಲ, ಜನ್ರಿಗೆ ಜಾಸ್ತಿ ಸಹಾಯ ಮಾಡಬೇಕಂತ ಅಪೊಸ್ತಲರನ್ನ ಕರೆದು ಸಿಹಿಸುದ್ದಿ ಸಾರೋಕೆ ತರಬೇತಿ ಕೊಟ್ಟನು. ಕಾಯಿಲೆಗಳನ್ನ ವಾಸಿ ಮಾಡೋ ಅಧಿಕಾರನೂ ಕೊಟ್ಟನು.—ಮತ್ತಾ. 10:5-8.
4. ಯಾರನ್ನ ಕೀಳಾಗಿ ನೋಡ್ತಿದ್ರೋ ಅವ್ರನ್ನ ಯೇಸು ಗೌರವಿಸಿದನು. ಇದ್ರಿಂದ ನಮಗೇನು ಪಾಠ?
4 ಯೇಸು ಆ ಜನ್ರಿಗೆ ಗೌರವ ಕೊಟ್ಟನು ಮತ್ತು ಅವ್ರ ಜೊತೆ ಸಮಯ ಕಳೆದನು. ಈ ಲೋಕ ಕೀಳಾಗಿ ನೋಡೋರನ್ನ ಯೆಹೋವ ಮತ್ತು ಯೇಸು ಅಮೂಲ್ಯವಾಗಿ ನೋಡ್ತಾರೆ. ಯೆಹೋವ, ‘ನಿಮಗೆ ಬೆಲೆ ಕೊಡ್ತಾನಾ, ನಿಮ್ಮನ್ನ ಅಮೂಲ್ಯವಾಗಿ ನೋಡ್ತಾನಾ’ ಅನ್ನೋ ಡೌಟ್ ನಿಮಗಿದ್ರೆ ಯೇಸು ಆ ಜನ್ರನ್ನ ಎಷ್ಟು ಅಮೂಲ್ಯವಾಗಿ ನೋಡಿದನು ಅಂತ ಯೋಚ್ನೆ ಮಾಡಿ. ಹೀಗೆ ಮಾಡಿದ್ರೆ ಯೆಹೋವನು ನಿಮ್ಮನ್ನ ತುಂಬಾ ಅಮೂಲ್ಯವಾಗಿ ನೋಡ್ತಾನೆ ಅಂತ ಅರ್ಥ ಮಾಡ್ಕೊಳ್ತೀರ.
5. ಯೇಸು ಭೇಟಿ ಮಾಡಿದ ಗಲಿಲಾಯದ ಸ್ತ್ರೀ ಪರಿಸ್ಥಿತಿ ಹೇಗಿತ್ತು? ವಿವರಿಸಿ.
5 ಯೇಸು ಜನ್ರ ಗುಂಪುಗಳಿಗೆ ದೇವ್ರ ಬಗ್ಗೆ ಕಲಿಸಿದ್ದಷ್ಟೇ ಅಲ್ಲ, ಅಗತ್ಯ ಇದ್ದ ಒಬ್ಬೊಬ್ರಿಗೂ ಸಹಾಯ ಮಾಡಿದನು. ಉದಾಹರಣೆಗೆ, ಯೇಸು ಗಲಿಲಾಯದಲ್ಲಿ ಸಾರುವಾಗ 12 ವರ್ಷ ರಕ್ತಸ್ರಾವ ರೋಗದಿಂದ ನರಳ್ತಿದ್ದ ಸ್ತ್ರೀಯನ್ನ ಭೇಟಿ ಮಾಡಿದನು. (ಮಾರ್ಕ 5:25) ಮೋಶೆ ನಿಯಮದ ಪ್ರಕಾರ ಅವಳು ಅಶುದ್ಧಳಾಗಿದ್ದಳು. ಯಾರಾದ್ರೂ ಅವಳನ್ನ ಮುಟ್ಟಿದ್ರೆ ಅವರೂ ಅಶುದ್ಧರಾಗ್ತಿದ್ರು. ಆದ್ರಿಂದಾಗಿ ಅವಳು ಜನ್ರ ಮಧ್ಯೆ ಹೋಗದೆ ಒಬ್ಬಂಟಿಯಾಗಿ ಜೀವನ ಮಾಡ್ತಿದ್ದಳು ಅನಿಸುತ್ತೆ. ಅಷ್ಟೇ ಅಲ್ಲ, ಅವಳು ಆಲಯಕ್ಕೆ ಹೋಗೋಕೆ, ಯಾವುದೇ ಹಬ್ಬಗಳನ್ನ ಮಾಡೋಕೆ ಆಗ್ತಿರಲಿಲ್ಲ. (ಯಾಜ. 15:19, 25) ಇದನ್ನೆಲ್ಲ ನೋಡಿದ್ರೆ ಅವಳಿಗೆ ಬರೀ ಕಾಯಿಲೆ ಮಾತ್ರ ಅಲ್ಲ, ‘ನನ್ನನ್ನ ಯಾರೂ ಪ್ರೀತಿಸಲ್ಲ, ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅನ್ನೋ ಭಾವನೆ ಕಿತ್ತು ತಿನ್ನುತ್ತಿತ್ತು ಅಂತ ಅನಿಸುತ್ತೆ.—ಮಾರ್ಕ 5:26.
6. ಆ ಸ್ತ್ರೀ ವಾಸಿ ಆಗೋಕೆ ಏನು ಮಾಡಿದಳು?
6 ಕಾಯಿಲೆಯಿಂದ ನರಳ್ತಿದ್ದ ಆಕೆ ಯೇಸು ತನ್ನನ್ನ ವಾಸಿ ಮಾಡಬೇಕು ಅಂತ ಆಸೆಪಟ್ಟಳು. ಆದ್ರೆ ಆಕೆ ‘ನನ್ನ ವಾಸಿ ಮಾಡು’ ಅಂತ ನೇರವಾಗಿ ಹೋಗಿ ಆತನನ್ನ ಕೇಳಲಿಲ್ಲ. ಯಾಕೆ? ಅವಳ ಪರಿಸ್ಥಿತಿ ನೋಡಿ ಅವಳಿಗೆನೇ ನಾಚಿಕೆ, ಅವಮಾನ ಆಯ್ತು ಅನಿಸುತ್ತೆ. ಅವಳು ಅಶುದ್ಧಳಾಗಿದ್ರಿಂದ ಯೇಸು ಹತ್ರ ಹೋದ್ರೆ ‘ದೂರ ಹೋಗು’ ಅಂತ ಬೈದುಬಿಡ್ತಾನೇನೋ ಅಂತ ಅವಳು ಭಯಪಟ್ಟಿರಬಹುದು. ಅದಕ್ಕೆ ಅವಳು ‘ನಾನು ಯೇಸುವಿನ ಬಟ್ಟೆ ಮುಟ್ಟಿದ್ರೆ ಸಾಕು ವಾಸಿಯಾಗಿ ಬಿಡ್ತೀನಿ’ ಅಂತ ಅಂದ್ಕೊಂಡು ಅವನ ಬಟ್ಟೆ ಮುಟ್ಟಿದಳು. (ಮಾರ್ಕ 5:27, 28) ಅವಳು ತೋರಿಸಿದ ಈ ನಂಬಿಕೆಯಿಂದ ಏನಾಯ್ತು ಗೊತ್ತಾ? ಅವಳ ಕಾಯಿಲೆ ವಾಸಿ ಆಯ್ತು. ಆಗ ಯೇಸು, ‘ನನ್ನನ್ನ ಯಾರು ಮುಟ್ಟಿದ್ದು’ ಅಂತ ಕೇಳಿದನು. ಆಗ ಅವಳು ‘ನಾನೇ ಮುಟ್ಟಿದ್ದು’ ಅಂತ ಒಪ್ಕೊಂಡ್ಳು. ಈಗ ಯೇಸು ಏನು ಮಾಡ್ತಾನೆ?
7. ಭಯದಿಂದ ನಡುಗ್ತಿದ್ದ ಆ ಸ್ತ್ರೀ ಜೊತೆ ಯೇಸು ಹೇಗೆ ನಡ್ಕೊಂಡನು? (ಮಾರ್ಕ 5:34)
7 “ಆ ಸ್ತ್ರೀ ಭಯದಿಂದ ನಡುಗ್ತಾ” ಇರೋದನ್ನ ನೋಡಿ ಯೇಸು ಅವಳ ಹತ್ರ ದಯೆಯಿಂದ, ಗೌರವದಿಂದ ಮಾತಾಡ್ತಾನೆ. ಅವಳ ಭಾವನೆಗಳನ್ನ ಅರ್ಥಮಾಡ್ಕೊಂಡು ಅವಳಿಗೆ ಸಮಾಧಾನ ಮಾಡ್ತಾನೆ. (ಮಾರ್ಕ 5:33) ಅವಳನ್ನ “ಮಗಳೇ” ಅಂತ ಕರಿತಾನೆ. ಎಲ್ರ ಮುಂದೆ ಮೃದುವಾಗಿ ಮಾತಾಡಬೇಕು ಅಂದ್ಕೊಂಡು ಯೇಸು ಅವಳನ್ನ ಈ ತರ ಕರೀಲಿಲ್ಲ. ಬದಲಿಗೆ ಅವಳ ಮೇಲೆ ಪ್ರೀತಿ, ದಯೆ ಇದ್ದಿದ್ರಿಂದ ಆ ತರ ಕರೆದನು. (ಮಾರ್ಕ 5:34 ಓದಿ.) ನಿಮಗೆ ಗೊತ್ತಾ? ಯೇಸು ಒಬ್ಬ ಸ್ತ್ರೀಯನ್ನ ಮಗಳೇ ಅಂತ ಕರೆದಿರೋದ್ರ ಬಗ್ಗೆ ಬೈಬಲಲ್ಲಿ ಇದೊಂದೇ ಸಲ ಇರೋದು. ಮಗಳೇ ಅಂದಾಗ ಆಕೆಗೆ ಎಷ್ಟು ನಿರಾಳ ಆಗಿರಬೇಕಲ್ವಾ? ಒಂದುವೇಳೆ ಯೇಸು ಅವಳನ್ನ ಸಮಾಧಾನ ಮಾಡೋ ತರ ಮಾತಾಡದೆ ಬರೀ ವಾಸಿ ಮಾಡಿ ಕಳಿಸಿಬಿಟ್ಟಿದ್ರೆ ಏನಾಗ್ತಿತ್ತು? ಕಾಯಿಲೆ ಏನೋ ವಾಸಿ ಆಗ್ತಿತ್ತು. ಆದ್ರೆ ಆಕೆ ಮನಸ್ಸಲ್ಲಿ, ‘ನಾನು ತಪ್ಪು ಮಾಡಿದೆ, ಅಲ್ಲಿಗೆ ಹೋಗಬಾರದಿತ್ತು’ ಅನ್ನೋ ಕೊರಗು ಹಾಗೇ ಉಳಿತಿತ್ತು. ಯೇಸು ಅವಳತ್ರ ಸಮಾಧಾನದಿಂದ ಮಾತಾಡಿದ್ರಿಂದ ‘ಯೆಹೋವನ ಕಣ್ಣಲ್ಲಿ ನಾನೂ ಅಮೂಲ್ಯ’ ಅಂತ ಅವಳಿಗೆ ಅರ್ಥ ಆಯ್ತು.
8. ಬ್ರೆಜಿಲ್‌ನಲ್ಲಿರೋ ಸಹೋದರಿ ಏನೆಲ್ಲ ಎದುರಿಸಬೇಕಾಯ್ತು?
8 ಇವತ್ತು ಕೆಲವು ದೇವರ ಆರಾಧಕರು ಕಾಯಿಲೆಯಿಂದ ನರಳ್ತಿದ್ದಾರೆ. ‘ನನ್ನ ಕೈಯಲ್ಲಿ ಏನೂ ಮಾಡೋಕೆ ಆಗಲ್ವಲ್ಲಾ’ ಅನ್ನೋ ನೋವಲ್ಲಿ ಕುಗ್ಗಿ ಹೋಗಿದ್ದಾರೆ. ಬ್ರೆಜಿಲ್‌ನಲ್ಲಿರೋ ಮರಿಯಾa ಅನ್ನೋ ಸಹೋದರಿ ಪಯನೀಯರ್ ಆಗಿ ಸೇವೆ ಮಾಡ್ತಿದ್ದಾಳೆ. ಹುಟ್ಟುವಾಗಲೇ ಅವಳಿಗೆ ಎಡಗೈ ಮತ್ತು ಎರಡು ಕಾಲುಗಳು ಇರಲಿಲ್ಲ. ಅವಳು ಹೇಳೋದು, “ನನ್ನ ಈ ಪರಿಸ್ಥಿತಿ ನೋಡಿ ಸ್ಕೂಲ್‌ನಲ್ಲಿ ಮಕ್ಕಳೆಲ್ಲಾ ಗೇಲಿ ಮಾಡ್ತಿದ್ರು. ನನಗೆ ನೋವಾಗೋ ತರ ಅಡ್ಡ ಹೆಸ್ರಿಟ್ಟು ಕರೀತಿದ್ರು. ಇದನ್ನೆಲ್ಲಾ ಹೇಗೋ ಸಹಿಸ್ಕೊತ್ತಿದ್ದೆ, ಆದ್ರೆ ನನ್ನ ಸ್ವಂತ ಕುಟುಂಬದವ್ರೇ ನನ್ನ ಮನಸ್ಸು ಚುಚ್ಚೋ ತರ ಮಾತಾಡ್ತಿದ್ರು. ನಾನು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸೋ ತರ ಮಾಡ್ತಿದ್ರು.”
9. ತಾನು ಯೆಹೋವನಿಗೆ ಅಮೂಲ್ಯ ಅಂತ ಮರಿಯಾ ಹೇಗೆ ಅರ್ಥ ಮಾಡ್ಕೊಂಡಳು?
9 ಆ ನೋವಿಂದ ಹೊರಗೆ ಬರೋಕೆ ಮರಿಯಾಗೆ ಯಾವುದು ಸಹಾಯ ಮಾಡ್ತು? ಅವಳು ಯೆಹೋವನ ಸಾಕ್ಷಿ ಆದ್ಮೇಲೆ ಸಹೋದರ ಸಹೋದರಿಯರು ಅವಳಿಗೆ ಬೇಕಾದ ಸಾಂತ್ವನ ಕೊಟ್ರು. ‘ಯೆಹೋವ ನಿನ್ನನ್ನ ಅಮೂಲ್ಯವಾಗಿ ನೋಡ್ತಾನೆ ನೀನೂ ನಿನ್ನನ್ನ ಅಮೂಲ್ಯವಾಗಿ ನೋಡಬೇಕು’ ಅಂತ ಅರ್ಥ ಮಾಡಿಸಿದ್ರು. ಮರಿಯಾ ಹೀಗೆ ಹೇಳ್ತಾಳೆ, “ನನಗೆ ಎಷ್ಟೊ ಸಹೋದರ ಸಹೋದರಿಯರು ಸಹಾಯ ಮಾಡಿದ್ದಾರೆ. ಅವ್ರೆಲ್ರ ಹೆಸರು ಬರೆಯೋಣ ಅಂದ್ರೆ ಪುಸ್ತಕದಲ್ಲಿರೋ ಪುಟಗಳು ಸಾಕಾಗಲ್ಲ. ಯೆಹೋವನು ನನಗೆ ಇಂಥ ಅದ್ಭುತವಾದ ಕುಟುಂಬ ಕೊಟ್ಟಿರೋದಕ್ಕೆ ತುಂಬಾ ಥ್ಯಾಂಕ್ಸ್ ಹೇಳ್ತೀನಿ.” ನೀವು ಗಮನಿಸಿದ್ರಾ? ದೇವರ ಕಣ್ಣಲ್ಲಿ ಮರಿಯಾ ಅಮೂಲ್ಯಳಾಗಿದ್ದಾಳೆ ಅನ್ನೋದನ್ನ ಸಹೋದರ ಸಹೋದರಿಯರು ಅವಳಿಗೆ ಅರ್ಥ ಮಾಡಿಸಿದ್ರು.
10. (ಎ) ಮಗ್ದಲದ ಮರಿಯಳ ಪರಿಸ್ಥಿತಿ ಹೇಗಿತ್ತು? (ಬಿ) ಅವಳಿಗೆ ಹೇಗೆ ಅನಿಸಿರಬಹುದು? (ಚಿತ್ರ ನೋಡಿ.)
10 ಯೇಸು ಇನ್ನೊಬ್ಬ ವ್ಯಕ್ತಿಗೂ ಸಹಾಯ ಮಾಡಿದನು. ಅವಳೇ ಮಗ್ದಲದ ಮರಿಯ. ಅವಳ ಒಳಗೆ ಏಳು ಕೆಟ್ಟ ದೇವದೂತರು ಸೇರ್ಕೊಂಡಿದ್ರು. (ಲೂಕ 8:2) ಆದ್ರಿಂದ ಅವಳು ವಿಚಿತ್ರವಾಗಿ ಆಡ್ತಿದ್ಳು. ಅವಳಂದ್ರೆ ಜನ ಭಯ ಪಡ್ತಿದ್ರಿಂದ ಯಾರೂ ಅವಳ ಹತ್ರ ಹೋಗ್ತಿರ್ಲಿಲ್ಲ. ಅವಳು ಇಂಥ ಪರಿಸ್ಥಿತಿಲಿದ್ದಾಗ ತನ್ನ ಪರಿಸ್ಥಿತಿ ನೋಡಿ ಅವಳಿಗೇ ಭಯ ಆಗಿರಬಹುದು. ‘ಯಾರೂ ನನ್ನನ್ನ ಪ್ರೀತಿಸಲ್ಲ, ನನಗೆ ಸಹಾಯ ಮಾಡೋರು ಯಾರೂ ಇಲ್ವಲ್ಲಾ’ ಅಂತ ಅವಳಿಗೆ ನೋವಾಗಿರಬಹುದು. ಆದ್ರೆ ಯೇಸು ಅವಳಲ್ಲಿದ್ದ ಆ ಕೆಟ್ಟ ದೇವದೂತರನ್ನೆಲ್ಲ ಹೊರಗೆ ಓಡಿಸಿದನು. ಆಮೇಲೆ ಅವಳು ಯೇಸುವಿನ ಶಿಷ್ಯಳಾದಳು. ಯೆಹೋವ ಮಗ್ದಲದ ಮರಿಯಳನ್ನ ಅಮೂಲ್ಯವಾಗಿ ನೋಡ್ತಿದ್ದನು. ಇದನ್ನ ಅರ್ಥ ಮಾಡಿಸೋಕೆ ಯೇಸು ಇನ್ನೇನು ಮಾಡಿದನು ಗೊತ್ತಾ?
‘ಯೆಹೋವನ ಕಣ್ಣಲ್ಲಿ ನೀನು ತುಂಬ ಅಮೂಲ್ಯ’ ಅಂತ ಮಗ್ದಲದ ಮರಿಯಳಿಗೆ ಯೇಸು ಹೇಗೆ ತೋರಿಸ್ಕೊಟ್ಟನು? (ಪ್ಯಾರ 10-11 ನೋಡಿ)
11. ದೇವ್ರಿಗೆ ಮಗ್ದಲದ ಮರಿಯಳು ಅಮೂಲ್ಯ ಅಂತ ಯೇಸು ಹೇಗೆ ತೋರಿಸ್ಕೊಟ್ಟನು? (ಚಿತ್ರ ನೋಡಿ.)
11 ಸಿಹಿಸುದ್ದಿ ಸಾರೋಕೆ ತನ್ನ ಮತ್ತು ತನ್ನ ಶಿಷ್ಯರ ಜೊತೆ ಬೇರೆಬೇರೆ ಊರುಗಳಿಗೆ ಹೋಗೋ ಅವಕಾಶನ ಮಗ್ದಲದ ಮರಿಯಳಿಗೆ ಯೇಸು ಕೊಟ್ಟನು.b ಆತನು ಬೇರೆಯವ್ರಿಗೆ ಕಲಿಸುವಾಗ ಹತ್ರ ನಿಂತು ಅದನ್ನೆಲ್ಲಾ ನೋಡೋ ಅವಕಾಶನೂ ಕೊಟ್ಟನು. ಯೇಸು ಸತ್ತು ತಾನು ಮತ್ತೆ ಎದ್ದು ಬಂದಾಗ ಅದೇ ದಿನ ಮರಿಯಳಿಗೆ ಕಾಣಿಸ್ಕೊಂಡನು. ಆತನು ಮೊದಲು ಮಾತಾಡಿದ ಶಿಷ್ಯರಲ್ಲಿ ಇವಳೂ ಒಬ್ಬಳಾಗಿದ್ದಳು. ಅಷ್ಟೇ ಅಲ್ಲ, ತಾನು ಮತ್ತೆ ಎದ್ದು ಬಂದಿರೋ ವಿಷ್ಯನ ಹೋಗಿ ಅಪೊಸ್ತಲರಿಗೆ ಹೇಳೋ ಅವಕಾಶನ ಮರಿಯಳಿಗೆ ಕೊಟ್ಟನು. ಈ ಎಲ್ಲ ವಿಷ್ಯಗಳು ಯೆಹೋವ ಮರಿಯಳನ್ನ ಅಮೂಲ್ಯವಾಗಿ ನೋಡಿದನು ಅಂತ ತೋರಿಸುತ್ತಲ್ವಾ?—ಯೋಹಾ. 20:11-18.
12. ‘ನನ್ನನ್ನ ಯಾರೂ ಪ್ರೀತಿಸಲ್ಲ’ ಅಂತ ಲಿಡಿಯಾಗೆ ಯಾಕೆ ಅನಿಸ್ತು?
12 ಇವತ್ತು ಎಷ್ಟೋ ಜನ್ರ ಪರಿಸ್ಥಿತಿ ಮಗ್ದಲದ ಮರಿಯಳ ತರಾನೇ ಇದೆ. ‘ನನ್ನನ್ನ ಯಾರೂ ಪ್ರೀತಿಸಲ್ಲ, ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅವ್ರಿಗೆ ಅನಿಸುತ್ತೆ. ಸ್ಪೇನ್‌ನಲ್ಲಿರೋ ಲಿಡಿಯಾ ಅನ್ನೋ ಸಹೋದರಿಯ ಅನುಭವ ನೋಡಿ. ಅವಳು ಹೊಟ್ಟೆಯಲ್ಲಿದ್ದಾಗಲೇ ಅವರ ಅಮ್ಮ ಅವಳನ್ನ ತೆಗೆಸಿಬಿಡಬೇಕು ಅಂತ ಅಂದ್ಕೊಂಡಿದ್ರು. ಅವಳು ಚಿಕ್ಕವಳಿದ್ದಾಗ ಅವರ ಅಮ್ಮ ಇವಳನ್ನ ತುಂಬಾ ತಾತ್ಸಾರ ಮಾಡ್ತಿದ್ರು, ಬಾಯಿಗೆ ಬಂದಂಗೆ ಬೈತಿದ್ರು. ಸಹೋದರಿ ಹೀಗೆ ಹೇಳ್ತಾಳೆ, “ನಮ್ಮ ಅಮ್ಮನಿಂದ ಸಿಗಬೇಕಾಗಿರೋ ಪ್ರೀತಿ ನನಗೆ ಸಿಗದಿದ್ದಾಗ, ಬೇರೆಯವ್ರಾದ್ರೂ ನನಗೆ ಆ ಪ್ರೀತಿ ಕೊಡಬೇಕು ಅಂತ ಆಸೆಪಟ್ಟೆ. ಆದ್ರೆ ನಮ್ಮ ಅಮ್ಮ ನನಗೆ ಯಾವಾಗ್ಲೂ ‘ನೀನು ಕೆಟ್ಟವಳು, ಕೆಟ್ಟವಳು’ ಅಂತ ಬೈತಾ ಇದ್ದಿದ್ರಿಂದ ನನ್ನನ್ನ ಯಾರೂ ಪ್ರೀತಿಸಲ್ವೇನೋ ಅಂತ ಭಯ ಆಗ್ತಿತ್ತು.”
13. ತಾನು ಯೆಹೋವನಿಗೆ ಅಮೂಲ್ಯ ಅಂತ ಅರ್ಥ ಮಾಡ್ಕೊಳ್ಳೋಕೆ ಲಿಡಿಯಾಗೆ ಯಾವುದು ಸಹಾಯ ಮಾಡ್ತು?
13 ಲಿಡಿಯಾ ಸತ್ಯ ಕಲಿತಾಗ ಅವಳ ಪರಿಸ್ಥಿತಿ ಬದಲಾಯ್ತು. ಅವಳು ಯೆಹೋವನಿಗೆ ಮಾಡಿದ ಪ್ರಾರ್ಥನೆ, ವೈಯಕ್ತಿಕ ಅಧ್ಯಯನ ಮತ್ತು ಸಹೋದರ ಸಹೋದರಿಯರು ಅವಳ ಜೊತೆ ನಡ್ಕೊಂಡಿದ್ದೆಲ್ಲಾ ನೋಡಿ ‘ಯೆಹೋವನಿಗೆ ನಾನು ತುಂಬಾ ಅಮೂಲ್ಯ’ ಅಂತ ಅರ್ಥಮಾಡ್ಕೊಂಡಳು. ಅವಳು ಹೇಳೋದು, “‘ನಿನ್ನನ್ನ ನಾನು ತುಂಬಾ ಪ್ರೀತಿಸ್ತೀನಿ’ ಅಂತ ನನ್ನ ಗಂಡ ಆಗಾಗ ಹೇಳ್ತಾ ಇರ್ತಾರೆ. ನನ್ನಲ್ಲಿ ಯಾವೆಲ್ಲ ಒಳ್ಳೆ ಗುಣಗಳಿವೆ ಅಂತ ಆಗಾಗ ನೆನಪು ಮಾಡ್ತಿರ್ತಾರೆ. ನನ್ನ ತುಂಬಾ ಪ್ರೀತಿಸೋ ಫ್ರೆಂಡ್ಸ್ ಕೂಡ ಅಷ್ಟೇ. ನನ್ನಲ್ಲಿ ಅವ್ರಿಗೆ ಇಷ್ಟ ಆಗೋ ಗುಣಗಳ ಬಗ್ಗೆ ನನಗೆ ಹೇಳ್ತಿರ್ತಾರೆ.” ನಿಮ್ಮ ಸಭೆಯಲ್ಲೂ ಲಿಡಿಯಾ ಇರೋ ಪರಿಸ್ಥಿತಿಯಲ್ಲೇ ಯಾರಾದ್ರೂ ಇರಬಹುದು. ಅವರು ಯೆಹೋವನಿಗೆ ಅಮೂಲ್ಯವಾಗಿದ್ದಾರೆ ಅಂತ ನೀವೂ ಅವ್ರಿಗೆ ಅರ್ಥ ಮಾಡಿಸಬೇಕಾಗುತ್ತೆ. ಅಂಥವ್ರಿಗೆ ನೀವು ಸಹಾಯ ಮಾಡ್ತೀರಾ?
ನಾವು ಯೆಹೋವನಿಗೆ ಅಮೂಲ್ಯ
14. ಯೆಹೋವನು ಜನ್ರನ್ನ ಹೇಗೆ ನೋಡ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ 1 ಸಮುವೇಲ 16:7 ಹೇಗೆ ಸಹಾಯ ಮಾಡುತ್ತೆ? (“ಯೆಹೋವನು ತನ್ನ ಜನ್ರನ್ನ ಯಾಕೆ ಅಮೂಲ್ಯವಾಗಿ ನೋಡ್ತಾನೆ?” ಅನ್ನೋ ಚೌಕ ನೋಡಿ.)
14 ಮನುಷ್ಯರು ನಮ್ಮನ್ನ ನೋಡೋ ತರ ದೇವರು ನೋಡಲ್ಲ. (1 ಸಮುವೇಲ 16:7 ಓದಿ.) ನೀವು ನೋಡೋಕೆ ಹೇಗಿದ್ದೀರ, ಏನೆಲ್ಲ ಸಂಪಾದಿಸಿದ್ದೀರ, ಎಷ್ಟು ಓದಿದ್ದೀರ ಅಂತ ನೋಡಿ ನಿಮಗೆ ಬೆಲೆ ಕೊಡ್ಬೇಕಾ ಬೇಡ್ವಾ ಅಂತ ದೇವರು ನಿರ್ಧಾರ ಮಾಡಲ್ಲ. (ಯೆಶಾ. 55:8, 9) ಯಾಕಂದ್ರೆ ದೇವರು ಮನುಷ್ಯರು ನೋಡೋ ತರ ನಮ್ಮನ್ನ ನೋಡಲ್ಲ. ಬೈಬಲಲ್ಲಿ ಎಲೀಯ, ನೊವೊಮಿ, ಹನ್ನ ಇವ್ರೆಲ್ರಿಗೂ ಜೀವನದಲ್ಲಿ ಒಂದಲ್ಲ ಒಂದ್ಸಲ ‘ನಾವು ಯಾವುದಕ್ಕೂ ಲಾಯಕ್ಕಿಲ್ಲ, ನಾವು ಅಯೋಗ್ಯರು’ ಅನ್ನೋ ಭಾವನೆ ಇತ್ತು. ಆದ್ರೆ ಯೆಹೋವ ಅವ್ರನ್ನ ಅಮೂಲ್ಯರು ಅಂತ ಕರೆದಿದ್ದಾನೆ. ಇಂಥ ಬೈಬಲ್ ಕಥೆಗಳನ್ನ ನೀವು ಓದಿ, ಧ್ಯಾನ ಮಾಡಬೇಕು. ಅಷ್ಟೇ ಅಲ್ಲ, ನಿಮ್ಮ ಜೀವನದಲ್ಲೂ ಯೆಹೋವ ನಿಮ್ಮನ್ನ ಅಮೂಲ್ಯವಾಗಿ ನೋಡಿ ನಿಮ್ಮನ್ನ ಪ್ರೀತಿಸಿದ ಎಷ್ಟೋ ಅನುಭವಗಳು ನಡೆದಿರುತ್ತೆ. ಅದನ್ನೆಲ್ಲ ನೀವು ಒಂದು ಕಡೆ ಬರೆದಿಡಿ. ಇದೆಲ್ಲದ್ರ ಜೊತೆಗೆ ಸಂಶೋಧನಾ ಸಾಧನದಲ್ಲಿ ‘ಕೀಳರಿಮೆ ಮತ್ತು ಅಯೋಗ್ಯನೆಂಬ ಭಾವನೆ’ ಅನ್ನೋ ಭಾಗಕ್ಕೆ ಹೋಗಿ ಅಲ್ಲಿರೋ ಮಾಹಿತಿನೆಲ್ಲ ಓದಿ ಅರ್ಥ ಮಾಡ್ಕೊಳ್ಳಿ.c
15. ಯೆಹೋವ ದಾನಿಯೇಲನನ್ನ “ನೀನು ತುಂಬಾ ಅಮೂಲ್ಯ” ಅಂತ ಯಾಕೆ ಕರೆದನು? (ದಾನಿಯೇಲ 9:23)
15 ನಾವು ತೋರಿಸೋ ನಂಬಿಕೆನ ಯೆಹೋವ ಅಮೂಲ್ಯವಾಗಿ ನೋಡ್ತಾನೆ ಅಂತ ಅರ್ಥಮಾಡ್ಕೊಳ್ಳಿ. ಒಂದು ಸಲ ಪ್ರವಾದಿ ದಾನಿಯೇಲನಿಗೆ “ತುಂಬ ಸುಸ್ತಾಗಿತ್ತು.” ಅವನು ಕುಗ್ಗಿ ಹೋಗಿದ್ದ. ಆಗ ಅವನಿಗೆ 90ಕ್ಕಿಂತ ಜಾಸ್ತಿ ವಯಸ್ಸಾಗಿತ್ತು ಅಂತ ಅನ್ಸುತ್ತೆ. (ದಾನಿ. 9:20, 21) ಯೆಹೋವ ಅವನನ್ನ ಪ್ರೋತ್ಸಾಹಿಸೋಕೆ ಏನು ಮಾಡಿದನು? ಗಬ್ರಿಯೇಲ ದೇವದೂತನನ್ನ ಕಳಿಸಿದನು. ಅವನು ದಾನಿಯೇಲನಿಗೆ ‘ದೇವ್ರಿಗೆ ನೀನು ತುಂಬ ಅಮೂಲ್ಯ, ನಿನ್ನ ಪ್ರಾರ್ಥನೆಗಳನ್ನ ಆತನು ಕೇಳಿಸ್ಕೊಂಡಿದ್ದಾನೆ’ ಅಂತ ಹೇಳಿದ. (ದಾನಿಯೇಲ 9:23 ಓದಿ.) ಇಷ್ಟಕ್ಕೂ ದಾನಿಯೇಲನನ್ನ ಯೆಹೋವ ಅಮೂಲ್ಯ ಅಂತ ಯಾಕೆ ಕರೆದ? ದಾನಿಯೇಲನಲ್ಲಿ ತುಂಬ ಒಳ್ಳೆ ಗುಣಗಳಿತ್ತು, ಅವನು ನೀತಿವಂತನಾಗಿದ್ದ ಮತ್ತು ನಂಬಿಕೆ ತೋರಿಸಿದ. ಅದಕ್ಕೆ ಯೆಹೋವ ಅವನನ್ನ ಅಮೂಲ್ಯ ಅಂತ ಕರೆದನು. (ಯೆಹೆ. 14:14) ಯೆಹೋವ ದಾನಿಯೇಲನ ಬಗ್ಗೆ ಬೈಬಲಲ್ಲಿ ನಮಗೋಸ್ಕರ ಬರೆಸಿಟ್ಟಿದ್ದಾನೆ. ಅದನ್ನ ಓದಿದ್ರೆ ಯೆಹೋವ ನಮ್ಮನ್ನೂ ಅಮೂಲ್ಯವಾಗಿ ನೋಡ್ತಾನೆ ಅಂತ ಅರ್ಥ ಆಗುತ್ತೆ. (ರೋಮ. 15:4) ಯೆಹೋವ ದಾನಿಯೇಲನ ಪ್ರಾರ್ಥನೆ ಕೇಳಿದಂತೆ ನಮ್ಮ ಪ್ರಾರ್ಥನೆಯನ್ನೂ ಕೇಳ್ತಾನೆ. ಸರಿ ಯಾವುದು, ತಪ್ಪು ಯಾವುದು ಅಂತ ತಿಳ್ಕೊಂಡು ನಾವು ನಿಯತ್ತಾಗಿ ಆತನ ಸೇವೆ ಮಾಡಿದ್ರೆ ಆತನು ನಮ್ಮನ್ನೂ ಅಮೂಲ್ಯವಾಗಿ ನೋಡ್ತಾನೆ.—ಮೀಕ 6:8, ಪಾದಟಿಪ್ಪಣಿ; ಇಬ್ರಿ. 6:10.
16. ಯೆಹೋವನು ನಿಮಗೆ ಒಬ್ಬ ಪ್ರೀತಿಯ ತಂದೆ ತರ ಇದ್ದಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ?
16 ಯೆಹೋವ ನಿಮ್ಮನ್ನ ಒಬ್ಬ ತಂದೆ ತರ ಪ್ರೀತಿಸ್ತಾನೆ. ಆತನು ನಿಮ್ಮಲ್ಲಿ ತಪ್ಪು ಹುಡುಕೋಕಲ್ಲ ನಿಮಗೆ ಸಹಾಯ ಮಾಡಬೇಕು ಅಂತ ಕಾಯ್ತಿರ್ತಾನೆ. (ಕೀರ್ತ. 130:3; ಮತ್ತಾ. 7:11; ಲೂಕ 12:6, 7) ಇದ್ರ ಬಗ್ಗೆ ನೀವು ಚೆನ್ನಾಗಿ ಯೋಚ್ನೆ ಮಾಡೋದಾದ್ರೆ, ನೀವು ಆತನಿಗೆ ಅಮೂಲ್ಯರು ಅಂತ ಅರ್ಥಮಾಡ್ಕೊಳ್ತೀರ. ಉದಾಹರಣೆಗೆ, ಸ್ಪೇನ್‌ನಲ್ಲಿರೋ ಸಹೋದರಿ ಮಿಶೆಲ್ ಅವರ ಅನುಭವ ನೋಡಿ. ಮದುವೆಯಾಗಿ ಸುಮಾರು ವರ್ಷಗಳವರೆಗೆ ಅವ್ರ ಗಂಡ ಇವ್ರನ್ನ ಬಾಯಿಗೆ ಬಂದಂಗೆ ಬೈತಿದ್ರು. ಅದನ್ನೆಲ್ಲಾ ಕೇಳಿ-ಕೇಳಿ ಇವ್ರಿಗೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸಿಬಿಟ್ಟಿತ್ತು. ಅವರು ಹೇಳೋದು, “ನನಗೆ ಈ ತರ ಅನಿಸಿದಾಗೆಲ್ಲಾ ಯೆಹೋವ ದೇವ್ರಿಗೆ ನಾನು ಎಷ್ಟು ಅಮೂಲ್ಯ ಅಂತ ಯೋಚ್ನೆ ಮಾಡ್ತೀನಿ. ಯೆಹೋವನು ನನ್ನನ್ನ ತನ್ನ ತೋಳಲ್ಲಿ ಎತ್ಕೊಂಡು ನನಗೆ ಪ್ರೀತಿ ತೋರಿಸೋ ತರ, ಸಮಾಧಾನ ಮಾಡೋ ತರ ನಾನು ಚಿತ್ರಿಸ್ಕೊಳ್ತೀನಿ.” (ಕೀರ್ತ. 28:9) ದಕ್ಷಿಣ ಆಫ್ರಿಕಾದಲ್ಲಿರೋ ಲಾರೆನ್ ಅನ್ನೋ ಸಹೋದರಿ ಹೀಗೆ ಹೇಳ್ತಾಳೆ, “ಯೆಹೋವ ನನ್ನನ್ನ ಪ್ರೀತಿಯ ಹಗ್ಗಗಳಿಂದ ತನ್ನ ಹತ್ರ ಸೆಳ್ಕೊಂಡಿದ್ದಾನೆ. ಇಷ್ಟು ವರ್ಷ ನನ್ನನ್ನ ಕಾದು ಕಾಪಾಡಿದ್ದಾನೆ. ನನ್ನನ್ನ ಬಳಸಿ ಎಷ್ಟೋ ಜನ್ರಿಗೆ ಸತ್ಯ ಕಲಿಸಿದ್ದಾನೆ ಅಂದ್ಮೇಲೆ ಖಂಡಿತ ಆತನು ನನ್ನನ್ನ ಅಮೂಲ್ಯವಾಗಿ ನೋಡ್ತಾನೆ ಅಂತ ನಾನು ನಂಬಿದ್ದೀನಿ.”—ಹೋಶೇ. 11:4.
17. ಯೆಹೋವನು ನಿಮಗೆ ದಯೆ ತೋರಿಸ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ? (ಕೀರ್ತನೆ 5:12) (ಚಿತ್ರ ನೋಡಿ.)
17 ಯೆಹೋವನು ನಿಮಗೆ ದಯೆ ತೋರಿಸ್ತಾನೆ ಅಂತ ಅರ್ಥ ಮಾಡ್ಕೊಳ್ಳಿ. (ಕೀರ್ತನೆ 5:12 ಓದಿ.) ಯೆಹೋವನು ತೋರಿಸೋ ದಯೆನ ದಾವೀದ ನೀತಿವಂತರನ್ನ ಕಾಪಾಡೋ ‘ದೊಡ್ಡ ಗುರಾಣಿಗೆ’ ಹೋಲಿಸಿದ್ದಾನೆ. ಯೆಹೋವ ನಿಮಗೆ ದಯೆ ತೋರಿಸ್ತಾನೆ ಅಥವಾ ನಿಮ್ಮನ್ನ ಕಾಪಾಡ್ತಾನೆ ಅಂತ ನೀವು ಅರ್ಥ ಮಾಡ್ಕೊಳ್ಳೋದಾದ್ರೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅನ್ನೋ ಭಾವನೆನ ಕಿತ್ತು ಹಾಕ್ತೀರ. ಯೆಹೋವ ನಿಜವಾಗ್ಲೂ ನಿಮಗೆ ದಯೆ ತೋರಿಸ್ತಾನೆ ಅಂತ ನಿಮಗೆ ಹೇಗೆ ಗೊತ್ತಾಗುತ್ತೆ? ಆತನು ಬೈಬಲಲ್ಲಿ ‘ನಾನು ನಿಮಗೆ ದಯೆ ತೋರಿಸ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. ಅದ್ರ ಜೊತೆಗೆ ಹಿರಿಯರು, ನಿಮ್ಮ ಆಪ್ತ ಸ್ನೇಹಿತರು ಮತ್ತು ಬೇರೆಯವರು ‘ನೀವು ಯೆಹೋವನಿಗೆ ತುಂಬ ಅಮೂಲ್ಯರು’ ಅಂತ ನಿಮಗೆ ಆಗಾಗ ಭರವಸೆ ತುಂಬ್ತಾ ಇರ್ತಾರೆ. ಅವರು ನಿಮಗೆ ಇಂಥ ಪ್ರೋತ್ಸಾಹದ ಮಾತುಗಳನ್ನ ಹೇಳಿದಾಗ ನೀವೇನು ಮಾಡಬೇಕು?
ಯೆಹೋವನ ನಮಗೆ ದಯೆ ತೋರಿಸ್ತಾನೆ ಅಂತ ತಿಳ್ಕೊಳ್ಳೋದ್ರಿಂದ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅನ್ನೋ ಭಾವನೆಯಿಂದ ಹೊರಗೆ ಬರೋಕಾಗುತ್ತೆ (ಪ್ಯಾರ 17 ನೋಡಿ)
18. ಬೇರೆಯವರು ನಮ್ಮಲ್ಲಿ ಒಳ್ಳೇದನ್ನ ಗುರುತಿಸಿ ಹೇಳಿದಾಗ ನಾವು ಯಾಕೆ ಅದನ್ನ ಒಪ್ಕೊಬೇಕು?
18 ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತಿರೋರು, ನಿಮ್ಮನ್ನ ಪ್ರೀತಿಸೋರು ನಿಮ್ಮನ್ನ ಹೊಗಳಿದ್ರೆ, ನಿಮ್ಮನ್ನ ಮೆಚ್ಕೊಂಡ್ರೆ ಅವ್ರ ಮಾತನ್ನ ತಳ್ಳಿಹಾಕಬೇಡಿ. ಯಾಕಂದ್ರೆ ಅವ್ರನ್ನ ಬಳಸಿ ನೀವು ಆತನಿಗೆ ಎಷ್ಟು ಇಷ್ಟ ಅಂತ ಯೆಹೋವ ಹೇಳ್ತಿರಬಹುದು. ಈ ಹಿಂದೆ ನೋಡಿದ ಮಿಶೆಲ್ ಹೀಗೆ ಹೇಳ್ತಾರೆ, “ಬೇರೆಯವರು ನನ್ನ ಬಗ್ಗೆ ಒಳ್ಳೆ ವಿಷ್ಯಗಳನ್ನ ಹೇಳಿದಾಗ ಅವ್ರ ಮಾತನ್ನ ಒಪ್ಕೊಳ್ಳೋಕೆ ನನಗೆ ಕಷ್ಟ ಆಗುತ್ತೆ. ಆದ್ರೆ ಈಗೀಗ ಅದನ್ನ ಒಪ್ಕೊಳ್ಳೋಕೆ ಪ್ರಯತ್ನ ಹಾಕ್ತಿದ್ದೀನಿ. ಯಾಕಂದ್ರೆ ಅವರು ಹೇಳ್ತಿರೋ ಮಾತನ್ನ ನಾನು ನಂಬಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅಂತ ನನಗೆ ಗೊತ್ತಿದೆ.” ಯೆಹೋವನು ಪ್ರೀತಿಸ್ತಾನೆ ಅಂತ ಮಿಶೆಲ್ ಅರ್ಥ ಮಾಡ್ಕೊಳ್ಳೋಕೆ ಹಿರಿಯರು ತುಂಬಾ ಸಹಾಯ ಮಾಡಿದ್ದಾರೆ. ಈಗ ಮಿಶೆಲ್ ಒಬ್ಬ ಪಯನೀಯರಾಗಿ ಮತ್ತು ಮನೆಯಿಂದಾನೇ ಬೆತೆಲ್ ಸೇವೆ ಮಾಡ್ತಿದ್ದಾರೆ.
19. ದೇವರು ನಿಮ್ಮನ್ನ ಅಮೂಲ್ಯವಾಗಿ ನೋಡ್ತಾನೆ ಅಂತ ನಿಮಗೆ ಯಾಕೆ ಅನಿಸುತ್ತೆ?
19 ಯೆಹೋವನಿಗೆ ನಾವೆಲ್ರೂ ಅಮೂಲ್ಯ ಅಂತ ತೋರಿಸೋಕೆ ಯೇಸು ಬೈಬಲಲ್ಲಿ ಒಳ್ಳೊಳ್ಳೆ ಉದಾಹರಣೆಗಳನ್ನ ಕೊಟ್ಟಿದ್ದಾನೆ. (ಲೂಕ 12:24) ಹಾಗಾಗಿ ಯೆಹೋವನ ಕಣ್ಣಿಗೆ ನಾವೆಲ್ರೂ ಅಮೂಲ್ಯರು ಅನ್ನೋದನ್ನ ಪೂರ್ತಿಯಾಗಿ ಒಪ್ಕೊಬೇಕು, ಯಾವತ್ತೂ ಅದನ್ನ ನಾವು ಮರಿಬಾರದು. ಅಷ್ಟೇ ಅಲ್ಲ, ಬೇರೆಯವರು ಕೂಡ ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದಾರೆ ಅಂತ ಅವ್ರಿಗೆ ಅರ್ಥ ಮಾಡಿಸೋಕೆ ನಮ್ಮ ಕೈಲಾದ ಎಲ್ಲ ಪ್ರಯತ್ನ ಹಾಕಬೇಕು.
ಗೀತೆ 139 ಕಲ್ಪಿಸಿ ನೋಡು ದೇವರ ರಾಜ್ಯ!
a ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.
b ಯೇಸು ಜೊತೆ ಸಿಹಿಸುದ್ದಿ ಸಾರೋಕೆ ಬೇರೆ-ಬೇರೆ ಊರುಗಳಿಗೆ ಹೋದ ಸ್ತ್ರೀಯರಲ್ಲಿ ಮಗ್ದಲದ ಮರಿಯಳು ಕೂಡ ಇದ್ದಳು. ಈ ಸ್ತ್ರೀಯರು ಅವ್ರ ಹತ್ರ ಇದ್ದ ಸ್ವಂತ ಹಣದಿಂದ ಯೇಸು ಮತ್ತು ಆತನ ಅಪೊಸ್ತಲರಿಗೆ ಬೇಕಾದ ಸಹಾಯ ಮಾಡ್ತಿದ್ರು.—ಮತ್ತಾ. 27:55, 56; ಲೂಕ 8:1-3.
c ಉದಾಹರಣೆಗೆ, ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಅಧ್ಯಾಯ 24ನ್ನ ನೋಡಿ ಮತ್ತು ಬಾಳಿಗೆ ಬೆಳಕಾಗೋ ಬೈಬಲ್ ವಚನಗಳು ಅನ್ನೋ ಪುಸ್ತಕದ “ಸಂದೇಹ” ಅನ್ನೋ ವಿಷ್ಯದ ಕೆಳಗಿರೋ ವಚನಗಳನ್ನ ಮತ್ತು ಬೈಬಲ್ ಉದಾಹರಣೆಗಳನ್ನ ಓದಿ.