ಸದಾ ಎಚ್ಚರವಾಗಿರಿ!
ಕ್ರೈಸ್ತರು ಹೇಗೆ ನಡ್ಕೊಬೇಕು?—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಇವತ್ತು ತುಂಬ ಜನ ‘ನಾನು ಕ್ರಿಶ್ಚಿಯನ್’ ಅಂತ ಹೇಳ್ಕೊತಾರೆ. ಆದ್ರೆ ಅವರು ಬೇರೆಯವ್ರಿಗೆ ನೋವಾಗೋ ತರ ಮಾತಾಡ್ತಾರೆ. ಕೆಲವರು ಸ್ವಾರ್ಥಿಗಳಾಗಿ, ಸುಳ್ಳು ಹೇಳ್ತಾ ದಯೆ ದಾಕ್ಷಿಣ್ಯ ಇಲ್ಲದೇ ನಡ್ಕೊತಾರೆ. ಇನ್ನು ಕೆಲವರು ಮದುವೆ ಮಾಡ್ಕೊಂಡು ಸಂಗಾತಿಗೆ ಮೋಸ ಮಾಡ್ತಾರೆ. ಈ ತರ ನಡ್ಕೊಳೋದನ್ನ ನೋಡಿದಾಗ ಕೆಲವ್ರಿಗೆ ‘ನಿಜವಾಗ್ಲೂ ಕ್ರೈಸ್ತರು ಹೇಗೆ ನಡ್ಕೊಬೇಕು?’ ಅನ್ನೋ ಪ್ರಶ್ನೆ ಬರುತ್ತೆ.
ಕ್ರೈಸ್ತರು ಹೀಗೆ ನಡ್ಕೊಬೇಕು
‘ನಾನು ಕ್ರಿಶ್ಚಿಯನ್’ ಅಂತ ಹೇಳಿದ್ರೆ ಸಾಕಾಗಲ್ಲ, ಅವರು ಆ ತರ ನಡ್ಕೊಬೇಕು. ಕ್ರೈಸ್ತರು ಅಂದ್ರೆ ಯೇಸುವಿನ ಶಿಷ್ಯರು ಅಂತ ಬೈಬಲ್ ಹೇಳುತ್ತೆ. (ಅಪೊಸ್ತಲರ ಕಾರ್ಯ 11:26) ಅವರು ಹೇಗೆ ನಡ್ಕೊಬೇಕು? ಇದಕ್ಕೆ ಯೇಸುನೇ ಉತ್ರ ಕೊಡ್ತಾನೆ, ಆತನು ಹೇಳಿದ್ದು: “ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ ನೀವು ನನ್ನ ನಿಜ ಶಿಷ್ಯರಾಗ್ತೀರ.” (ಯೋಹಾನ 8:31) ಯೇಸು ಹೇಳಿದ ಎಲ್ಲ ವಿಷ್ಯಗಳನ್ನ ನೂರಕ್ಕೆ ನೂರು ಯಾರ ಕೈಯಲ್ಲೂ ಪಾಲಿಸೋಕೆ ಆಗಲ್ಲ ನಿಜ. ಆದ್ರೆ ಪ್ರತಿದಿನ ಯೇಸು ಹೇಳಿದಂತೆ ಜೀವಿಸೋಕೆ ಆತನ ನಿಜ ಶಿಷ್ಯರು ತಮ್ಮ ಕೈಲಾದ ಪ್ರಯತ್ನ ಮಾಡ್ಲೇಬೇಕು. ಅವರು ಹೇಗೆ ನಡ್ಕೊಬೇಕು ಅನ್ನೋದಕ್ಕೆ ಕೆಲವು ಉದಾಹರಣೆ ನೋಡೋಣ.
ಕ್ರೈಸ್ತರು ಸ್ವಾರ್ಥ ಇಲ್ಲದೆ ಪ್ರೀತಿ ತೋರಿಸ್ತಾರೆ
ಯೇಸು ಏನು ಹೇಳಿದನು: “ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು. ಅದೇ ಆ ಆಜ್ಞೆ. ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.”—ಯೋಹಾನ 13:34, 35.
ಯೇಸು ಹೇಗೆ ನಡ್ಕೊಂಡನು: ಯೇಸು ಜನ್ರ ಹಣ, ಆಸ್ತಿ, ಅಧಿಕಾರ ಮತ್ತು ಊರನ್ನ ನೋಡದೆ ಎಲ್ರಿಗೂ ಸಮಾನವಾಗಿ ಪ್ರೀತಿ ತೋರಿಸಿದನು. ಕಾಯಿಲೆ ಬಿದ್ದವ್ರನ್ನ ವಾಸಿ ಮಾಡಿದನು, ಹೊಟ್ಟೆ ಹಸಿದವ್ರಿಗೆ ಊಟ ಕೊಟ್ಟನು. ಅಷ್ಟೇ ಅಲ್ಲ, ನಮ್ಮೆಲ್ರಿಗಾಗಿ ಪ್ರಾಣನೇ ಕೊಟ್ಟುಬಿಟ್ಟನು.—ಮತ್ತಾಯ 14:14-21; 20:28.
ಕೈಸ್ತರು ಹೇಗೆ ನಡ್ಕೊಬೇಕು: ಸ್ವಾರ್ಥ ಇಲ್ಲದೆ ಎಲ್ರಿಗೂ ಪ್ರೀತಿ ತೋರಿಸಬೇಕು. ಬೇಧಭಾವ ಮಾಡಬಾರದು, ತಪ್ಪುಗಳನ್ನ ಕ್ಷಮಿಸಬೇಕು ಮತ್ತು ಉದಾರವಾಗಿ ಸಹಾಯ ಮಾಡಬೇಕು. ಕಷ್ಟದಲ್ಲಿರೋರಿಗೆ ಸಹಾಯ ಮಾಡೋಕೆ ತ್ಯಾಗ ಮಾಡೋಕೂ ರೆಡಿ ಇರಬೇಕು.—1 ಯೋಹಾನ 3:16.
ಕ್ರೈಸ್ತರು ಸುಳ್ಳು ಹೇಳಲ್ಲ
ಯೇಸು ಏನು ಹೇಳಿದನು: ‘ಅದಕ್ಕೆ ಯೇಸು ನಾನೇ ಆ ಸತ್ಯ ಆಗಿದ್ದೀನಿ.’—ಯೋಹಾನ 14:6.
ಯೇಸು ಹೇಗೆ ನಡ್ಕೊಂಡನು: ಒಳಗೊಂದು ಹೊರಗೊಂದು ಅನ್ನೋ ತರ ಯೇಸು ಯಾವತ್ತೂ ನಡ್ಕೊಂಡಿಲ್ಲ. ತನ್ನ ಮಾತಲ್ಲಿ ಯಾರಿಗೂ ಮೋಸ ಮಾಡ್ಲಿಲ್ಲ, ಜನ್ರನ್ನ ದಾರಿ ತಪ್ಪಿಸಲಿಲ್ಲ. ಜನ ಆತನಿಗೆ ಹಿಂಸೆ ಕೊಟ್ಟಾಗ್ಲೂ ನಿಯತ್ತಾಗಿ ನಡ್ಕೊಂಡನು.—ಮತ್ತಾಯ 22:16; 26:63-67.
ಕೈಸ್ತರು ಹೇಗೆ ನಡ್ಕೊಬೇಕು: ಕ್ರೈಸ್ತರು ಸುಳ್ಳು ಹೇಳಲ್ಲ. ಅವರು ತೆರಿಗೆ ಕಟ್ತಾರೆ, ಕಳ್ಳತನ ಮಾಡಲ್ಲ ಮತ್ತು ಟೈಮ್ ವೇಸ್ಟ್ ಮಾಡದೆ ನಿಯತ್ತಾಗಿ ಕೆಲ್ಸ ಮಾಡ್ತಾರೆ. (ರೋಮನ್ನರಿಗೆ 13:5-7; ಎಫೆಸ 4:28) ಅವರು ಯಾರಿಗೂ ಮೋಸ ಮಾಡಲ್ಲ, ಪರೀಕ್ಷೆಲಿ ಕಾಪಿ ಹೊಡೆಯಲ್ಲ ಮತ್ತು ಕೆಲಸ ಗಿಟ್ಟಿಸ್ಕೊಳ್ಳೋಕೆ ಡಾಕ್ಯುಮೆಂಟ್ಗಳಲ್ಲಿ ಸುಳ್ಳು ಹೇಳಲ್ಲ.—ಇಬ್ರಿಯ 13:18.
ಕ್ರೈಸ್ತರು ದಯೆಯಿಂದ ನಡ್ಕೊತಾರೆ
ಯೇಸು ಏನು ಹೇಳಿದನು: “ಕಷ್ಟಪಟ್ಟು ಕೆಲಸ ಮಾಡ್ತಿರೋರೇ, ಹೊರೆ ಹೊತ್ತು ಸುಸ್ತಾಗಿರೋರೇ, ನೀವೆಲ್ಲ ನನ್ನ ಹತ್ರ ಬನ್ನಿ. ನಾನು ನಿಮಗೆ ಹೊಸಬಲ ಕೊಡ್ತೀನಿ. ನನ್ನ ನೊಗ ಹೊತ್ಕೊಂಡು ನನ್ನಿಂದ ಕಲಿರಿ. ಆಗ ನಿಮಗೆ ಹೊಸಬಲ ಸಿಗುತ್ತೆ. ಯಾಕಂದ್ರೆ ನಾನು ಮೃದುಸ್ವಭಾವ, ದೀನಮನಸ್ಸು ಇರುವವನು. ನನ್ನ ನೊಗ ಭಾರ ಇಲ್ಲ, ನಾನು ಕೊಡೋ ಹೊರೆ ಹಗುರ.”—ಮತ್ತಾಯ 11:28-30.
ಯೇಸು ಹೇಗೆ ನಡ್ಕೊಂಡನು: ಯೇಸು ಫ್ರೆಂಡ್ಲಿ ಆಗಿ ಇದ್ದ, ದಯೆಯಿಂದ ನಡ್ಕೊತಿದ್ದನು. ಮಕ್ಕಳ ಹತ್ರನೂ ಖುಷಿಖುಷಿಯಾಗಿ ಇರ್ತಿದ್ದನು. ಬೇಜಾರಲ್ಲಿ ಇರೋರಿಗೆ ಧೈರ್ಯ ಹೇಳ್ತಿದ್ದನು ಮತ್ತು ಎಲ್ರಿಗೂ ಗೌರವ ಕೊಟ್ಟು ಮಾತಾಡಿಸ್ತಿದ್ದನು.—ಮಾರ್ಕ 10:13-15; ಲೂಕ 9:11.
ಕೈಸ್ತರು ಹೇಗೆ ನಡ್ಕೊಬೇಕು: ಕ್ರೈಸ್ತರು ಎಲ್ರ ಜೊತೆ ದಯೆಯಿಂದ ನಡ್ಕೊತಾರೆ. ಅವರು ಮುಖಕ್ಕೆ ಹೊಡೆದಂತೆ ಮಾತಾಡೋದಾಗ್ಲಿ, ಕೆಟ್ಟ ಮಾತು ಆಡೋದಾಗ್ಲಿ ಮಾಡಲ್ಲ. (ಎಫೆಸ 4:29, 31, 32) ಬೇರೆಯವ್ರ ಬಗ್ಗೆ ಕಾಳಜಿ ವಹಿಸ್ತಾರೆ. ಅವ್ರಿಗೆ ಸಹಾಯ ಮಾಡೋಕೆ ಅವಕಾಶ ಹುಡುಕ್ತಾ ಇರ್ತಾರೆ.—ಗಲಾತ್ಯ 6:10.
ಕ್ರೈಸ್ತರು ಮದುವೆ ಸಂಗಾತಿಗೆ ಮೋಸ ಮಾಡಲ್ಲ
ಯೇಸು ಏನು ಹೇಳಿದನು: “ದೇವರು ಒಂದು ಮಾಡಿದ್ದನ್ನ ಯಾವ ಮನುಷ್ಯನೂ ದೂರ ಮಾಡಬಾರದು.”—ಮಾರ್ಕ 10:9.
ಯೇಸು ಹೇಗೆ ನಡ್ಕೊಂಡನು: ಯೇಸು ಮದುವೆ ಆಗ್ಲಿಲ್ಲ. ಆದ್ರೂ ಮದುವೆ ಆದವರು ಒಬ್ರಿಗೊಬ್ರು ನಿಯತ್ತಾಗಿ ಇರಬೇಕು ಅಂತ ಹೇಳಿದನು. (ಮತ್ತಾಯ 19:9) ಮದುವೆಯನ್ನ ಮುರಿಯೋ ತಪ್ಪು ಕೆಲ್ಸಗಳನ್ನ ಮಾಡಬೇಡಿ ಅಂತ ಎಚ್ಚರಿಸಿದನು.—ಮತ್ತಾಯ 5:28.
ಕೈಸ್ತರು ಹೇಗೆ ನಡ್ಕೊಬೇಕು: ಕ್ರೈಸ್ತರು ತಮ್ಮ ಸಂಗಾತಿಗೆ ಗೌರವ ಕೊಡ್ತಾರೆ. ಅವ್ರನ್ನ ಯಾವತ್ತೂ ಕೀಳಾಗಿ ನೋಡಲ್ಲ. (ಇಬ್ರಿಯ 13:4) ಗಂಡ-ಹೆಂಡ್ತಿ ತಮ್ಮ ಮಧ್ಯೆ ಪ್ರೀತಿ ಮತ್ತು ಗೌರವ ಇರೋ ತರ ನೋಡ್ಕೊತಾರೆ.—ಎಫೆಸ 5:28, 33.